Sidlaghatta : ಯುವ ಪೀಳಿಗೆಯು ನಮ್ಮ ದೇಶದ ಶ್ರೀಮಂತ ಸಂಸ್ಕೃತಿ, ಆಚಾರ-ವಿಚಾರ ಹಾಗೂ ಸಂಪ್ರದಾಯಗಳನ್ನು ಪಾಲಿಸಬೇಕು. ಆ ಮೂಲಕ ಸುಸಂಸ್ಕೃತ ಬದುಕು ನಮ್ಮದಾಗಬೇಕು ಎಂದು ತಿರುಪತಿಯ ಪಾದಯಾತ್ರಿ ಶ್ರೀಧರಾಚಾರಿ ತಿಳಿಸಿದರು. ಗೌರಿಬಿದನೂರು ತಾಲ್ಲೂಕಿನ ತೊಂಡೆಬಾವಿಯಿಂದ ತಿರುಪತಿಗೆ ಹಮ್ಮಿಕೊಂಡಿರುವ 25ನೇ ವರ್ಷದ ಪಾದಯಾತ್ರೆಯ ನೇತೃತ್ವ ವಹಿಸಿರುವ ಅವರು, ಶಿಡ್ಲಘಟ್ಟ-ಚಿಂತಾಮಣಿ ಮಾರ್ಗದ ವೈ. ಹುಣಸೇನಹಳ್ಳಿಯಲ್ಲಿ ಭಕ್ತರನ್ನು ಉದ್ದೇಶಿಸಿ ಮಾತನಾಡಿದರು.
ಇತ್ತೀಚಿನ ವರ್ಷಗಳಲ್ಲಿ ನಮ್ಮ ಯುವ ಪೀಳಿಗೆಯು ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗುತ್ತಿರುವುದು ವಿಷಾದನೀಯ. ಇದರಿಂದಾಗಿ ನಮ್ಮ ಹಬ್ಬಗಳು ಮತ್ತು ಹಿರಿಯರ ಬಗ್ಗೆ ಗೌರವದ ಮನೋಭಾವ ಕಡಿಮೆಯಾಗುತ್ತಿದೆ. ಸಮಾಜದಲ್ಲಿ ನಡೆಯುತ್ತಿರುವ ಇತ್ತೀಚಿನ ಅಹಿತಕರ ಘಟನೆಗಳೇ ಇದಕ್ಕೆ ಸಾಕ್ಷಿ ಎಂದು ಅವರು ಆತಂಕ ವ್ಯಕ್ತಪಡಿಸಿದರು. ಸಂಪ್ರದಾಯಗಳನ್ನು ಗೌರವಿಸುವ ಮೂಲಕ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ಅವರು ಯುವಕರಿಗೆ ಕಿವಿಮಾತು ಹೇಳಿದರು.
ತೊಂಡೆಬಾವಿಯಿಂದ ಆರಂಭವಾಗಿರುವ ಈ ಪಾದಯಾತ್ರೆಯಲ್ಲಿ ಮಂಚೇನಹಳ್ಳಿ ಮತ್ತು ಸುತ್ತಮುತ್ತಲ ಗ್ರಾಮಗಳ ಸುಮಾರು 150ಕ್ಕೂ ಹೆಚ್ಚು ಭಕ್ತರು ಭಾಗವಹಿಸಿದ್ದಾರೆ. ಡಿ.23 ರಂದು ಈ ತಂಡ ತಿರುಪತಿ ತಲುಪಿ ಶ್ರೀನಿವಾಸನ ದರ್ಶನ ಪಡೆಯಲಿದೆ. ವಿಶೇಷವೆಂದರೆ, ಈ ಬಾರಿ ಪಾದಯಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯ ವೃದ್ಧರು ಭಾಗವಹಿಸುತ್ತಿರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಅಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ. ಈ ಯಾತ್ರೆಯಲ್ಲಿ ಮಾರ್ಕೆಟ್ ಮೋಹನ್, ವಿಜಯ ಶೇಖರ್‌ರೆಡ್ಡಿ, ವೆಂಕಟೇಶ ಬಚ್ಚಹಳ್ಳಿ, ಕೃಷ್ಣಮೂರ್ತಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದಾರೆ.








