Sidlaghatta : ಶಿಡ್ಲಘಟ್ಟ ನಗರದ ಪ್ರಮುಖ ವ್ಯಾಪಾರ ಮತ್ತು ಸಂಚಾರದ ಪ್ರದೇಶವಾಗಿರುವ KSRTC ಬಸ್ ನಿಲ್ದಾಣದ ಬಳಿಯ ಸಲ್ಲಾಪುರಮ್ಮ ದೇವಸ್ಥಾನದ ಪಕ್ಕದಲ್ಲಿ ಬುಧವಾರ ಬೆಳಿಗ್ಗೆ ಅರಳಿಮರದ ಒಂದು ದೊಡ್ಡ ರೆಂಬೆ ಕೆಳಗೆ ಬಿದ್ದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿತು.
ಬೈಕ್ ನಲ್ಲಿ ಹೋಗುತ್ತಿದ್ದ ವ್ಯಕ್ತಿಗೆ ಆ ರೆಂಬೆ ಬಿದ್ದು ಗಾಯವಾಗಿದ್ದು, ಸ್ಥಳೀಯರು ಕೂಡಲೇ ಆತನಿಗೆ ಪ್ರಾಥಮಿಕ ಚಿಕಿತ್ಸೆಯನ್ನು ಒದಗಿಸಿ ಆಸ್ಪತ್ರೆಗೆ ಕರೆದೊಯ್ದರು.
ಸ್ಥಳೀಯರು ಮಾತನಾಡಿ, ಇದು ಬಹುಜನ ಸಂಚಾರದ ಪ್ರದೇಶ. ಇಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣವಿದ್ದು, ಯಾವಾಗಲೂ ಜನ ಸೇರಿರುತ್ತಾರೆ. ಈ ರೀತಿಯಲ್ಲಿ ಮರದ ರೆಂಬೆ ಬಿದ್ದು ಅಪಾಯವಾಗಿರುವುದು ಭಯಹುಟ್ಟಿಸಿದೆ. ನಗರಸಭೆ , ಬೆಸ್ಕಾಂ ಅಧಿಕಾರಿಗಳು ಮರಗಳ ಪರಿಶೀಲನೆ ಮಾಡಿ, ಅವು ಸುರಕ್ಷಿತವಾಗಿಲ್ಲ ಎಂದರೆ ಮುಂಚಿತವಾಗಿ ತೆಗೆದು ಹಾಕಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಘಟನೆಯ ಹಿನ್ನೆಲೆಯಲ್ಲಿ ಸ್ಥಳಕ್ಕೆ ಪೊಲೀಸ್ ಸಿಬ್ಬಂದಿ, ನಗರಸಭೆ ಹಾಗೂ ಬೆಸ್ಕಾಂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿ, ಮುಂದಿನ ಇಂತಹ ಘಟನೆಗಳು ನಡೆಯದ ಹಾಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.