Sidlaghatta : “ಅಸಂಘಟಿತ ಕಾರ್ಮಿಕರ ಬದುಕಿಗೆ ಸಾಮಾಜಿಕ ಭದ್ರತೆ ಒದಗಿಸುವುದು ಸರ್ಕಾರದ ಆದ್ಯತೆಯಾಗಿದೆ. ಇಂತಹ ಶ್ರಮಿಕರಿಗೆ ಸರ್ಕಾರದ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸಿ, ಅವರ ಮನೆಬಾಗಿಲಿಗೆ ಯೋಜನೆಗಳನ್ನು ತಲುಪಿಸುವ ಕಾರ್ಯ ಶ್ಲಾಘನೀಯ,” ಎಂದು ನಗರಸಭೆ ಪೌರಾಯುಕ್ತೆ ಜಿ.ಅಮೃತಾ ತಿಳಿಸಿದರು.
ನಗರದ ಶ್ರೀ ವಾಸವಿ ಕಲ್ಯಾಣ ಮಂಟಪದಲ್ಲಿ ಸ್ವಾಮಿ ವಿವೇಕಾನಂದರ 163ನೇ ಜಯಂತಿ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಅಸಂಘಟಿತ ಕಾರ್ಮಿಕರ ನೋಂದಣಿ, ಆಯುಷ್ಮಾನ್ ಆರೋಗ್ಯ ಕಾರ್ಡ್ ವಿತರಣೆ ಹಾಗೂ ಹಿರಿಯ ಕಾರ್ಮಿಕರ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಮಿಕರ ಮನೆಬಾಗಿಲಿಗೆ ಸೌಲಭ್ಯ: ಬೀದಿ ಬದಿ ವ್ಯಾಪಾರಿಗಳು ಮತ್ತು ಅಸಂಘಟಿತ ವಲಯದ ಕಾರ್ಮಿಕರ ಸೇವೆಯನ್ನು ಗುರುತಿಸಿ ಅವರಿಗೆ ಜೀವ ವಿಮೆ ಹಾಗೂ ಆರೋಗ್ಯ ಭದ್ರತೆ ಒದಗಿಸಲು ನಗರಸಭೆ ಸದಾ ಬದ್ಧವಾಗಿದೆ. ವಿವೇಕಾನಂದರ ಜಯಂತಿಯ ಈ ಶುಭ ಸಂದರ್ಭದಲ್ಲಿ ಶ್ರಮಿಕರನ್ನು ಗೌರವಿಸುತ್ತಿರುವುದು ಅರ್ಥಪೂರ್ಣ ಎಂದು ಅವರು ಬಣ್ಣಿಸಿದರು.
ಸಕಾಲಕ್ಕೆ ತಲುಪಲಿ ಸೌಲಭ್ಯ: ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ ಮಾತನಾಡಿ, “ಕಾರ್ಮಿಕರಿಗೆ ಸಿಗಬೇಕಾದ ಸರ್ಕಾರಿ ಸೌಲಭ್ಯಗಳು ವಿಳಂಬವಿಲ್ಲದೆ ಸಮರ್ಪಕವಾಗಿ ತಲುಪಬೇಕು. ಅವರ ಜೀವಕ್ಕೆ ಭದ್ರತೆ ನೀಡುವ ವಿಮಾ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸುತ್ತಿರುವುದು ಅಭಿನಂದನೀಯ,” ಎಂದರು.
ಕಾರ್ಯಕ್ರಮದಲ್ಲಿ ನೂರಾರು ಕಾರ್ಮಿಕರಿಗೆ ಆಯುಷ್ಮಾನ್ ಆರೋಗ್ಯ ಕಾರ್ಡ್ಗಳನ್ನು ನೋಂದಾಯಿಸಿ ವಿತರಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ದಶಕಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಹಿರಿಯ ಕಾರ್ಮಿಕರನ್ನು ಈ ಸಂದರ್ಭದಲ್ಲಿ ಆತ್ಮೀಯವಾಗಿ ಸನ್ಮಾನಿಸಲಾಯಿತು. ಡಾ.ಡಿ.ಟಿ.ಸತ್ಯನಾರಾಯಣರಾವ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.








