
Melur, Sidlaghatta : UPSC ಪರೀಕ್ಷೆಯಲ್ಲಿ ರಾಷ್ಟ್ರ ಮಟ್ಟದಲ್ಲಿ 462ನೇ ಹಾಗೂ ರಾಜ್ಯ ಮಟ್ಟದಲ್ಲಿ 7ನೇ ಶ್ರೇಯಾಂಕ ಪಡೆಯುವ ಮೂಲಕ ವರುಣ್ ಗೌಡ ಅವರು ಅವಳಿ ಜಿಲ್ಲೆಗಳಾದ ಕೋಲಾರ ಮತ್ತು ಚಿಕ್ಕಬಳ್ಳಾಪುರಕ್ಕೆ ದೊಡ್ಡ ಕೀರ್ತಿ ತಂದಿದ್ದಾರೆ ಎಂದು ಶಾಸಕ ಬಿ.ಎನ್.ರವಿಕುಮಾರ್ ಶ್ಲಾಘಿಸಿದರು.
ತಾಲ್ಲೂಕಿನ ಮೇಲೂರಿನ ತಮ್ಮ ಗೃಹಕಚೇರಿಯಲ್ಲಿ ಶನಿವಾರ ಶಾಸಕ ಬಿ.ಎನ್.ರವಿಕುಮಾರ್ ಸಾಧಕ ವರುಣ್ ಗೌಡ ಹಾಗೂ ಅವರ ಪೋಷಕರನ್ನು ಸನ್ಮಾನಿಸಿ ಮಾತನಾಡಿದರು.
ಒಬ್ಬ ಪೊಲೀಸ್ ಅಧಿಕಾರಿಯ ಮಗನಾಗಿ ಹುಟ್ಟಿದ ವರುಣ್ ಗೌಡ ತನ್ನ ಕಠಿಣ ಪರಿಶ್ರಮದಿಂದ ದೇಶದ ಅತ್ಯುನ್ನತ ಪರೀಕ್ಷೆಯಲ್ಲಿ ಸಾಧನೆ ಮಾಡಿರುವುದು ನಮ್ಮ ಮಣ್ಣಿನ ಗುಣವನ್ನು ರಾಷ್ಟ್ರ ಮಟ್ಟದಲ್ಲಿ ಎತ್ತಿ ಹಿಡಿದಂತಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಪೊಲೀಸ್ ಇಲಾಖೆಯಲ್ಲಿ ಸಹಾಯಕ ಉಪನಿರೀಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಪ್ರಕಾಶ್ ಗೌಡ ಮತ್ತು ಪ್ರೇಮ ದಂಪತಿಯ ಮಗ ವರುಣ್‌ಗೌಡ ಮೂಲತಃ ಕೋಲಾರ ಜಿಲ್ಲೆಯವರಾದರೂ ಇವರು ಹುಟ್ಟಿ ಬೆಳೆದಿದ್ದು ಇದೇ ಶಿಡ್ಲಘಟ್ಟದಲ್ಲಿ. ಇಲ್ಲಿಯೇ ತಮ್ಮ ಪ್ರಾಥಮಿಕ ಶಿಕ್ಷಣ ಆರಂಭಿಸಿ ನಂತರ ಮಂಚೇನಹಳ್ಳಿ, ಚಿಂತಾಮಣಿ ಹಾಗೂ ಮೂಡುಬಿದರೆಯಲ್ಲಿ ಪಿಯುಸಿವರೆಗೂ ಶಿಕ್ಷಣ ಪಡೆದರು.
ಕೊಪ್ಪಳದ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿ ಪಡೆದು ಇಂದು ಯು.ಪಿ.ಎಸ್.ಸಿ ಪರೀಕ್ಷೆಯಲ್ಲಿ ಸಾಧನೆ ಹಂತಕ್ಕೆ ತಲುಪಿರುವುದು ಎಲ್ಲರಿಗೂ ಮಾದರಿ ಎಂದರು. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಆದರ್ಶಗಳನ್ನು ಅಳವಡಿಸಿಕೊಂಡು ವರುಣ್ ಗೌಡ ಅವರು ಸಹ ಉತ್ತಮ ಆಡಳಿತಗಾರರಾಗಿ ಹೊರಹೊಮ್ಮಲಿ ಮತ್ತು ರಾಜ್ಯ ಹಾಗೂ ದೇಶಕ್ಕೆ ಒಳ್ಳೆಯ ಹೆಸರು ತರಲಿ ಎಂದು ಹಾರೈಸಿದರು.
ಯು.ಪಿ.ಎಸ್.ಸಿ ಸಾಧಕ ವರುಣ್‌ಗೌಡ ಮಾತನಾಡಿ, “ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಗಳಿಸಲು ಕಠಿಣ ಪರಿಶ್ರಮ ಮತ್ತು ಶ್ರದ್ಧೆ ಅತಿ ಮುಖ್ಯ. ಸೋಲುಗಳು ಎದುರಾದಾಗ ಎದೆಗುಂದದೆ ಗುರಿಯತ್ತ ಸಾಗಿದರೆ ಖಂಡಿತವಾಗಿಯೂ ಗೆಲುವು ನಮ್ಮದಾಗುತ್ತದೆ” ಎಂದರು.
“ಇದು ನನ್ನ ಮೂರನೇ ಪ್ರಯತ್ನವಾಗಿತ್ತು. ಮೊದಲ ಎರಡು ಪ್ರಯತ್ನಗಳಲ್ಲಿ ವಿಫಲನಾದಾಗಲೂ ನನ್ನ ಕುಟುಂಬದವರು ನೀಡಿದ ಬೆಂಬಲ ಮತ್ತು ನನ್ನ ಮೇಲಿದ್ದ ಆತ್ಮವಿಶ್ವಾಸ ನನ್ನನ್ನು ಇಂದು ಈ ಮಟ್ಟಕ್ಕೆ ತಂದು ನಿಲ್ಲಿಸಿದೆ. ಸೋಲು ಎಂಬುದು ಜೀವನದ ಒಂದು ಭಾಗವಷ್ಟೇ, ಅದನ್ನೇ ಅಂತ್ಯ ಎಂದು ಭಾವಿಸಬಾರದು” ಎಂದು ಹೇಳಿದರು.
ತಮ್ಮ ಸಾಧನೆಗೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರೇ ಸ್ಫೂರ್ತಿ ಎಂದ ಅವರು, ದೇವೇಗೌಡರು ಐಎಎಸ್ ಅಧಿಕಾರಿಗಳನ್ನು ಗೌರವಿಸುವ ರೀತಿ ಮತ್ತು ದೇಶಕ್ಕೆ ಅವರು ನೀಡಿದ ಕೊಡುಗೆಗಳು ತಮಗೆ ಮಾದರಿ ಎಂದು ಭಾವುಕರಾದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಎನ್.ಗಗನಸಿಂಧು, ಚಿಮುಲ್ ನಿರ್ದೇಶಕರಾದ ಬಂಕ್ ಮುನಿಯಪ್ಪ, ಹುಜುಗೂರು ರಾಮಯ್ಯ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಕೆ.ಎನ್.ಸುಬ್ಬಾರೆಡ್ಡಿ, ವಕ್ಕಲೇರಿ ರಾಮು, ಬಿ.ನಾರಾಯಣಸ್ವಾಮಿ, ಆರ್.ಎ.ಉಮೇಶ್, ಶ್ರೀನಿವಾಸ್ ಹಾಜರಿದ್ದರು.