Sidlaghatta, Chikkaballapur District : ಶಿಡ್ಲಘಟ್ಟ ತಾಲ್ಲೂಕಿನ ವೀರಾಪುರ ಗ್ರಾಮದಲ್ಲಿ ಶ್ರೀ ಪಿಳ್ಳೇಕಿ ಮಾರಮ್ಮ ದೇವಿ ದೇವಾಲಯದ ಜೀರ್ಣೋದ್ಧಾರ ಮತ್ತು ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಅಂಗವಾಗಿ ಮಂಗಳವಾರ ಭಕ್ತಿ ಭರಿತವಾಗಿ ತಂಬಿಟ್ಟು ದೀಪೋತ್ಸವ ಹಾಗೂ ಬೊಟ್ಟು ಪೂಜೆ ನೆರವೇರಿಸಲಾಯಿತು.
ಶಿಥಿಲಗೊಂಡಿದ್ದ ದೇವಾಲಯವನ್ನು ಗ್ರಾಮಸ್ಥರ ಸಹಕಾರದಿಂದ ಸಂಪೂರ್ಣವಾಗಿ ಪುನರ್‌ನಿರ್ಮಾಣ ಮಾಡಿ ಪ್ರಾಣ ಪ್ರತಿಷ್ಠಾಪನೆ ಪೂರ್ಣಗೊಳಿಸಲಾಗಿದ್ದು, 48 ದಿನಗಳ ಮಂಡಲ ಪೂಜೆಯ ನಂತರ 50ನೇ ದಿನ ಭಕ್ತಿಪೂರ್ಣವಾಗಿ ಬಲಿ ಪೀಠ ಪೂಜೆ ಮತ್ತು ಬೊಟ್ಟು ಇಡುವ ಆಚರಣೆ ನೆರವೇರಿತು.
ದೇವಿಗೆ ಹೂವಿನ ಅಲಂಕಾರಗಳಿಂದ ಶೃಂಗಾರ ಮಾಡಿ ವಿಶೇಷ ಪೂಜೆ, ಮಹಾ ಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿತರಣೆ ನಡೆಯಿತು. ಗ್ರಾಮಸ್ಥರು ತಮ್ಮ ಮನೆಗಳಲ್ಲಿ ತಯಾರಿಸಿದ ತಂಬಿಟ್ಟು ದೀಪಗಳನ್ನು ದೇವಿಗೆ ಅರ್ಪಿಸಿ, ಬಲಿ ಪೀಠ ಹಾಗೂ ಗೊಡ್ಡು ಕಲ್ಲಿನ ಸುತ್ತ ಪ್ರದಕ್ಷಿಣೆ ಹಾಕಿ, ಇಷ್ಟಾರ್ಥಗಳಿಗಾಗಿ ಪ್ರಾರ್ಥಿಸಿದರು.
ನಂತರ ಶ್ರೀ ಪಿಳ್ಳೇಕಿ ಮಾರಮ್ಮ ದೇವಿಯ ಉತ್ಸವ ಮೂರ್ತಿಯ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಭಕ್ತಿ ಭಾವದಿಂದ ನಡೆಯಿತು. ಮನೆಮನೆಗಳ ಮುಂದೆ ರಂಗೋಲಿ ಹಾಕಿ, ತೆಂಗಿನ ಕಾಯಿ ಒಡೆದು ದೇವಿಯನ್ನು ಸ್ವಾಗತಿಸುವ ಸಂಪ್ರದಾಯಗಳು ವೈಭವದಿಂದ ನಡೆಯಿತು.
ಪೂಜಾ ಕಾರ್ಯಗಳನ್ನು ಅರ್ಚಕ ವೆಂಕಟೇಶ್, ಕೈಯ್ಯಪ್ಪ, ಮತ್ತು ಅಂಗಡಿ ಮುನಿಯಪ್ಪ ನೆರವೇರಿಸಿದರು. ಈ ಸಂದರ್ಭದಲ್ಲಿ ಗ್ರಾಮದ ಮುಖಂಡರು ರಾಮಣ್ಣ, ಮುನಿರೆಡ್ಡಿ, ಪಲ್ಲ ಗಣೇಶ್, ಸಿ.ರಾಮು, ಲಕ್ಷ್ಮೀಪತಿ, ಇ.ಗಣೇಶ್, ಮೇಸ್ತ್ರಿ ದೇವಪ್ಪ, ವೆಂಕಟೇಶ್, ಗಂಗರಾಜ್ ಸೇರಿದಂತೆ ಅನೇಕ ಭಕ್ತರು ಭಾಗವಹಿಸಿ ಧಾರ್ಮಿಕ ವಾತಾವರಣವನ್ನು ಸೃಷ್ಟಿಸಿದರು.