Sidlaghatta : ಶಿಡ್ಲಘಟ್ಟ ನಗರದ ಶ್ರೀ ರೇಣುಕಾ ಯಲ್ಲಮ್ಮದೇವಿ ದೇವಾಲಯದಲ್ಲಿ ಶುಕ್ರವಾರ ಶ್ರೀ ರೇಣುಕಾ ಯಲ್ಲಮ್ಮ ಅನ್ನಪೂರ್ಣೇಶ್ವರಿದೇವಿ 13ನೇ ವರ್ಷದ ಅನ್ನದಾನದ ವಾರ್ಷಿಕೋತ್ಸವವನ್ನು ಅತ್ಯಂತ ಭಕ್ತಿ ಸೌರಭದಿಂದ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡು ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಶಿವನಾಪುರ ವಹ್ನಿಕುಲ ಕ್ಷತ್ರಿಯ ಗುರುಪೀಠದ ಶ್ರೀ ಪ್ರಣವಾನಂದ ಮಹಾಸ್ವಾಮೀಜಿ ಅವರು ಭಕ್ತರನ್ನು ಉದ್ದೇಶಿಸಿ ಆಶೀರ್ವಚನ ನೀಡಿದರು.
“ಧರ್ಮ ಎನ್ನುವುದು ಕೇವಲ ಆಚರಣೆಯಲ್ಲ, ಅದು ಮನುಷ್ಯನ ಬದುಕಿನ ದಾರಿ. ದಯೆ, ಸಹನೆ ಮತ್ತು ಎಲ್ಲರನ್ನೂ ಒಳಗೊಳ್ಳುವ ಗುಣವೇ ನಿಜವಾದ ಧರ್ಮವನ್ನು ಪ್ರತಿನಿಧಿಸುತ್ತದೆ. ‘ದಯವೇ ಧರ್ಮದ ಮೂಲ’ ಎಂಬಂತೆ ಸಕಲ ಜೀವರಾಶಿಗಳ ಮೇಲೆ ಕರುಣೆ ತೋರುವುದು ಅಗತ್ಯ. ಆಚಾರ ಮತ್ತು ವಿಚಾರಗಳು ಮನುಷ್ಯನನ್ನು ಸಂಸ್ಕಾರವಂತನನ್ನಾಗಿ ಮಾಡುತ್ತವೆ,” ಎಂದು ಸ್ವಾಮೀಜಿ ತಿಳಿಸಿದರು. ಆಧುನಿಕ ಕಾಲದಲ್ಲಿ ಭೌತಿಕ ಪ್ರಗತಿಯಿಂದ ಕಳೆದುಹೋಗುತ್ತಿರುವ ಮಾನಸಿಕ ನೆಮ್ಮದಿಯನ್ನು ಮರಳಿ ಪಡೆಯಲು ಮಹಾಪುರುಷರ ಆದರ್ಶಗಳು ಯುವಜನತೆಗೆ ದಾರಿದೀಪವಾಗಬೇಕು ಎಂದು ಅವರು ಕಿವಿಮಾತು ಹೇಳಿದರು.
ವಾರ್ಷಿಕೋತ್ಸವದ ಅಂಗವಾಗಿ ದೇವಿಗೆ ವಿಶೇಷ ಹೂವಿನ ಮತ್ತು ಹಣ್ಣಿನ ಅಲಂಕಾರಗಳನ್ನು ಮಾಡಲಾಗಿತ್ತು. ಮುಂಜಾನೆಯಿಂದಲೇ ವಿವಿಧ ಧಾರ್ಮಿಕ ವಿಧಿವಿಧಾನಗಳು ಜರುಗಿದವು. ಮಹಾಮಂಗಳಾರತಿಯ ನಂತರ ಭಕ್ತಾದಿಗಳಿಗೆ ಬೃಹತ್ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಪ್ರಧಾನ ಅರ್ಚಕ ಮಾದವಪ್ಪ ಸ್ವಾಮಿ, ಕರಗದ ಪೂಜಾರಿಗಳಾದ ಮುನಿಕೃಷ್ಣ, ರಮೇಶ್ ಹಾಗೂ ಶ್ರೀ ಧರ್ಮರಾಯಸ್ವಾಮಿ ವಹ್ನಿಕುಲ ಕ್ಷತ್ರಿಯ ಸಂಘದ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಪ್ರದೀಪ್ ದೀಪು ಸೇರಿದಂತೆ ಹಲವಾರು ಮುಖಂಡರು ಮತ್ತು ಭಕ್ತಾದಿಗಳು ಪಾಲ್ಗೊಂಡಿದ್ದರು.








