Sidlaghatta : ಬರ ಪರಿಸ್ಥಿತಿ, ಹಿಪ್ಪುನೇರಳೆ ಬೆಳೆಗೆ ಬಾಧಿಸುತ್ತಿರುವ ವಿವಿಧ ರೋಗಗಳು ಹಾಗೂ ರೇಷ್ಮೆ ಹುಳು ಸಾಕಾಣಿಕೆಯಲ್ಲಿ ಎದುರಾಗುತ್ತಿರುವ ಸಮಸ್ಯೆಗಳಿಂದ ರೇಷ್ಮೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದು, ಸಮಸ್ಯೆಗಳ ಪರಿಹಾರಕ್ಕಾಗಿ ಅತೀ ಶೀಘ್ರವಾಗಿ ರಾಜ್ಯ ಮಟ್ಟದ ರೇಷ್ಮೆ ಬೆಳೆಗಾರರ ಕುಂದುಕೊರತೆಗಳ ಭಾಗೀದಾರರ ಸಭೆ ಕರೆಯಬೇಕು ಎಂದು ರೇಷ್ಮೆ ಬೆಳೆಗಾರರ ಒಕ್ಕೂಟ ಒತ್ತಾಯಿಸಿದೆ. ಶಿಡ್ಲಘಟ್ಟ ನಗರದ ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಸೋಮವಾರ ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಅಕ್ಮಲ್ ಪಾಷ ಅವರ ಮೂಲಕ ರೇಷ್ಮೆ ಅಭಿವೃದ್ಧಿ ಆಯುಕ್ತರಿಗೆ ರೇಷ್ಮೆ ಬೆಳೆಗಾರರು ಮನವಿ ಸಲ್ಲಿಸಿದರು.
ರೇಷ್ಮೆ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳೇನು?
2026ರಲ್ಲಿ ಮಳೆ ಕೊರತೆಯಿಂದ ಬರ ಪರಿಸ್ಥಿತಿ ನಿರ್ಮಾಣವಾಗಿದ್ದು, ಕೋಲಾರ ಸೇರಿದಂತೆ ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರದೇಶಗಳಲ್ಲಿ ರೇಷ್ಮೆ ಬೆಳೆಗಾರರು ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ಹಿಪ್ಪುನೇರಳೆ ಸೊಪ್ಪಿಗೆ ನುಸಿ, ಎಲೆ ಸುರುಳಿ ಸೇರಿದಂತೆ ವಿವಿಧ ರೋಗಗಳು ಬಾಧಿಸುತ್ತಿರುವುದರಿಂದ ಸೊಪ್ಪಿನ ಇಳುವರಿ ಕುಂಠಿತವಾಗಿದೆ. ರೇಷ್ಮೆ ಹುಳುಗಳಿಗೆ ಸಟ್ಟು, ತೊಂಡೆ ಹಾಲು ತೊಂದರೆ, ಬಿಳಿ ಮಚ್ಚೆ, ಕಪ್ಪು ಕಂಕ ಹಾಗೂ ಫ್ಲಾಚೆರಿ ಮತ್ತಿತರ ರೋಗಗಳು ಕಾಣಿಸಿಕೊಳ್ಳುತ್ತಿದ್ದು, ಗೂಡಿನ ಉತ್ಪಾದನೆಯೂ ಕಡಿಮೆಯಾಗಿದೆ ಎಂದು ರೈತರು ಮನವಿಯಲ್ಲಿ ತಿಳಿಸಿದ್ದಾರೆ.
ರೇಷ್ಮೆ ಉತ್ಪಾದನೆಯಲ್ಲಿ ಉಂಟಾಗಿರುವ ಹಿನ್ನಡೆಯಿಂದಾಗಿ ಕೆಲವು ರೈತರು ಹೂವು, ಟೊಮೆಟೊ, ದಾಳಿಂಬೆ ಸೇರಿದಂತೆ ಇತರ ಬೆಳೆಗಳತ್ತ ಮುಖ ಮಾಡುತ್ತಿದ್ದಾರೆ. ರೇಷ್ಮೆ ಇಲಾಖೆಯಿಂದ ರೈತರಿಗೆ ಅಗತ್ಯ ಮಾಹಿತಿ ಹಾಗೂ ತಾಂತ್ರಿಕ ಮಾರ್ಗದರ್ಶನ ಸಮರ್ಪಕವಾಗಿ ದೊರೆಯದಿರುವುದೂ ಸಮಸ್ಯೆಗೆ ಕಾರಣವಾಗಿದೆ ಎಂದು ಅವರು ತಿಳಿಸಿದ್ದಾರೆ.


ರೈತರ ಬೇಡಿಕೆಗಳೇನು?
ರೇಷ್ಮೆ ಬೆಳೆಗಾರರಿಗೆ ಹುಳು ಸಾಕಾಣಿಕೆ ಮನೆ, ಹನಿ ನೀರಾವರಿ, ಶೇಡ್ ನೆಟ್, ಬೆಡ್ ಕ್ಲೀನ್ ಶೀಟ್ ಹಾಗೂ ಸೋಂಕು ನಿವಾರಕ ಔಷಧ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು. ಟ್ರ್ಯಾಕ್ಟರ್, ಚಾಪರ್ ಕಟರ್, ಟಿಲ್ಲರ್, ಕಳೆನಾಶಕ ಹಾಗೂ ಬ್ಲೀಚಿಂಗ್ ಸ್ಪ್ರೇಯರ್ ಗಳಿಗೆ ನೀಡಲಾಗುತ್ತಿದ್ದ ಸಹಾಯಧನ ಕಡಿಮೆಯಾಗಿರುವುದರಿಂದ ರೈತರಿಗೆ ತೊಂದರೆಯಾಗಿದ್ದು, ಸಬ್ಸಿಡಿ ಪ್ರಮಾಣವನ್ನು ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
ಹಿಪ್ಪುನೇರಳೆ ಸೊಪ್ಪು ಕಟಾವಿಗೆ ಕಾರ್ಮಿಕರ ಕೊರತೆ ಸೇರಿದಂತೆ ಹಲವು ಸಮಸ್ಯೆಗಳಿರುವುದರಿಂದ ಸೊಪ್ಪು ಕಟಾವು ಯಂತ್ರವನ್ನು ಅಭಿವೃದ್ಧಿಪಡಿಸಿ ರೈತರಿಗೆ ಒದಗಿಸಬೇಕು. NREGA ಯೋಜನೆಯಡಿ ರೇಷ್ಮೆ ತೋಟಗಳಲ್ಲಿ ಟ್ರೆಂಚಿಂಗ್ ಕಾಮಗಾರಿ ಕೈಗೊಳ್ಳಬೇಕು. MGNREGA ಯೋಜನೆಯಡಿ ರೇಷ್ಮೆ ಹಾಗೂ ಹಿಪ್ಪುನೇರಳೆ ಬೆಳೆಗಳಿಗೆ ಅಗತ್ಯ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು. ರೇಷ್ಮೆ ಹುಳು ಸಾಕಾಣಿಕೆಯಲ್ಲಿ ಬೆಳೆ ಹಾನಿಯಾದ ಸಂದರ್ಭದಲ್ಲಿ ರೈತರಿಗೆ ವಿಮೆ ಸೌಲಭ್ಯ ಕಲ್ಪಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ರೇಷ್ಮೆಗೂಡಿನ ಹೈಟೆಕ್ ಮಾರುಕಟ್ಟೆ ನಿರ್ಮಾಣವಾಗುತ್ತಿರುವುದು ಸ್ವಾಗತಾರ್ಹ. ಆದರೆ ಇದಕ್ಕೆ ಪೂರಕವಾಗಿ ರೈತರು ಕೇಳುತ್ತಿರುವ ಸೌಲಭ್ಯಗಳನ್ನು ಒದಗಿಸಿ, ರೇಷ್ಮೆ ಬೆಳೆಗಾರರು ಬೇರೆ ಬೆಳೆಗಳತ್ತ ವಲಸೆ ಹೋಗುವುದನ್ನು ತಡೆಯಬೇಕು. ರೇಷ್ಮೆ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇರುವುದರಿಂದ ವಿಸ್ತರಣಾ ಕಾರ್ಯಕ್ಕೆ ಅಗತ್ಯ ಸಿಬ್ಬಂದಿಯನ್ನು ನೇಮಿಸಬೇಕು ಎಂದು ರೈತರು ಒತ್ತಾಯಿಸಿದರು.
ದ್ವಿತಳಿ (ಬೈವೋಲ್ಟೀನ್) ರೇಷ್ಮೆ ಗೂಡು ಉತ್ಪಾದನೆಗೆ ರೈತರನ್ನು ಪ್ರೇರೇಪಿಸುವ ಉದ್ದೇಶದಿಂದ ದ್ವಿತಳಿ ರೇಷ್ಮೆ ಉತ್ಪಾದನೆಯಲ್ಲಿ ಪ್ರಗತಿ ಸಾಧಿಸಿರುವ ತಮಿಳುನಾಡಿಗೆ ರೈತರ ಅಧ್ಯಯನ ಪ್ರವಾಸ ಏರ್ಪಡಿಸಬೇಕು ಎಂದು ಮನವಿ ಮಾಡಿದರು.
ರೇಷ್ಮೆ ಬೆಳೆಗಾರರು ಹಾಗೂ ರೈತಕೂಟಗಳ ಒಕ್ಕೂಟದ ಅಧ್ಯಕ್ಷ ಎಚ್.ಜಿ. ಗೋಪಾಲಗೌಡ, ಸಿರಿ ಸಮೃದ್ಧಿ ರೈತರ ಕೂಟದ ಅಧ್ಯಕ್ಷ ಬೋದಗೂರು ವೆಂಕಟಸ್ವಾಮಿರೆಡ್ಡಿ, ರಾಮಮೂರ್ತಿ, ಮಳ್ಳೂರು ವನಿತಾ, ಕಾಚಹಳ್ಳಿ ಶೈಲಜ, ಸರೋಜಮ್ಮ, ರಾಮಚಂದ್ರಪ್ಪ, ಗೊರಮಡುಗು ಮಂಜು, ಇದ್ಲೂಡು ರಾಮಚಂದ್ರಪ್ಪ, ಮಳಮಾಚನಹಳ್ಳಿ ವೆಂಕಟೇಶ್, ಹರಳಹಳ್ಳಿ ವೆಂಕಟೇಶ್, ಪಾಪಣ್ಣ ಸೇರಿದಂತೆ ರೈತರು ಮನವಿ ಸಲ್ಲಿಸುವ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಹೈಟೆಕ್ ಮಾರುಕಟ್ಟೆ ಕಾಮಗಾರಿ ಕುರಿತು ಹೈಟೆಕ್ ರೇಷ್ಮೆ ಮಾರುಕಟ್ಟೆ ಕಾಮಗಾರಿ ಸ್ಥಳದಲ್ಲಿ ಕಾರ್ಮಿಕರಿಂದ ವಿಶ್ವಕರ್ಮ ಜಯಂತಿ ಆಚರಣೆ ಹಾಗೂ ದ್ವಿತಳಿ ಉತ್ಪಾದನೆ ಕುರಿತು ದ್ವಿತಳಿ ರೇಷ್ಮೆಗೂಡು ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಿ: ರೇಷ್ಮೆ ಇಲಾಖೆ ಉಪ ನಿರ್ದೇಶಕ ಮಾರಪ್ಪ ವರದಿಗಳನ್ನು ಓದಿ. ಇಂದಿನ ದರಕ್ಕಾಗಿ ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ ನೋಡಿ.
In English: The Federation of Silk Growers and Farmers’ Clubs has urged the government to urgently convene a state-level stakeholders’ grievance meeting for silk growers, who are in distress due to drought, diseases affecting mulberry and problems in silkworm rearing. The farmers submitted a memorandum addressed to the Commissioner for Sericulture Development through Assistant Director of Sericulture Akmal Pasha at his office in Sidlaghatta on Monday. They said the 2026 rain deficit has caused water shortages in Kolar and Chikkaballapur districts; mulberry is hit by pests and diseases such as nusi (mites) and leaf curl, silkworms by diseases including flacherie, and cocoon output has fallen, pushing some farmers to switch to flowers, tomato and pomegranate. Their demands include rearing houses, drip irrigation, shade nets, bed-cleaning sheets and disinfectants; higher subsidies for tractors, chaff cutters, tillers, weedicides and sprayers; a mulberry harvesting machine; trenching and sericulture works under MGNREGA (Mahatma Gandhi National Rural Employment Guarantee Act); crop insurance for silkworm rearing losses; more extension staff; and a study tour to Tamil Nadu to promote bivoltine cocoon production. They welcomed the hi-tech cocoon market under construction but said supporting facilities are needed to stop growers from quitting sericulture. Federation president H.G. Gopalagowda was among those who submitted the memorandum.
FAQ
ರೇಷ್ಮೆ ಉತ್ಪಾದನೆ ಕುಸಿಯಲು ಕಾರಣವೇನು?
ಮಳೆ ಕೊರತೆಯಿಂದ ಉಂಟಾದ ಬರ, ಹಿಪ್ಪುನೇರಳೆ ಸೊಪ್ಪಿಗೆ ನುಸಿ ಹಾಗೂ ಎಲೆ ಸುರುಳಿ ರೋಗ, ರೇಷ್ಮೆ ಹುಳುಗಳಿಗೆ ಫ್ಲಾಚೆರಿ ಸೇರಿದಂತೆ ವಿವಿಧ ರೋಗಗಳು ಹಾಗೂ ತಾಂತ್ರಿಕ ಮಾರ್ಗದರ್ಶನದ ಕೊರತೆ ಕಾರಣ ಎಂದು ರೈತರು ಮನವಿಯಲ್ಲಿ ತಿಳಿಸಿದ್ದಾರೆ.
ರೇಷ್ಮೆ ಬೆಳೆಗಾರರ ಪ್ರಮುಖ ಬೇಡಿಕೆಗಳೇನು?
ರಾಜ್ಯ ಮಟ್ಟದ ಕುಂದುಕೊರತೆ ಸಭೆ, ಹುಳು ಸಾಕಾಣಿಕೆ ಮನೆ ಹಾಗೂ ಹನಿ ನೀರಾವರಿ ಸೌಲಭ್ಯ, ಯಂತ್ರೋಪಕರಣಗಳ ಸಬ್ಸಿಡಿ ಹೆಚ್ಚಳ, ಸೊಪ್ಪು ಕಟಾವು ಯಂತ್ರ, NREGA ಅಡಿ ಕಾಮಗಾರಿ, ಬೆಳೆ ವಿಮೆ, ಸಿಬ್ಬಂದಿ ನೇಮಕ ಹಾಗೂ ತಮಿಳುನಾಡಿಗೆ ಅಧ್ಯಯನ ಪ್ರವಾಸ.








