
ತಾಲ್ಲೂಕಿನ ಮೇಲೂರು ಗ್ರಾಮದ ಮಾತೃಮಡಿಲು ದಿವ್ಯಾಂಗರ ಸೇವಾಮಂದಿರದಲ್ಲಿ ವಿಜಯಪುರದ ಡಾ.ಶ್ರೀ ಶಿವಕುಮಾರಮಹಾಸ್ವಾಮೀಜಿ ಸೇವಾಸಮಿತಿಯ ವತಿಯಿಂದ ಹಮ್ಮಿಕೊಂಡಿದ್ದ ಅಂಬೇಡ್ಕರ್, ಜಗಜೀವನರಾಂ ಜಯಂತಿ, ವಿವಿಧ ಸವಲತ್ತು ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಮೇಲೂರು ಮಂಜುನಾಥ್ ಮಾತನಾಡಿದರು.
ಅಂಬೇಡ್ಕರ್‌ನಂತಹ ವ್ಯಕ್ತಿತ್ವ ದೇಶದಲ್ಲಿ ಜನ್ಮ ತಾಳದಿದ್ದರೆ ದಲಿತರು, ಹಿಂದುಳಿದವರ ಜೀವನ ಇನ್ನಷ್ಟು ನಿಷ್ಕೃಷ್ಟವಾಗಿರುತ್ತಿತ್ತು. ಸಮಾನತೆಯನ್ನು ಮರುಸೃಷ್ಟಿಸಲು ಅಂಬೇಡ್ಕರ್‌ನಂತಹ ವ್ಯಕ್ತಿತ್ವ ಮತ್ತೆ ಹುಟ್ಟಬೇಕಿದೆ. ಸಂವಿಧಾನ ರಚನೆಯಲ್ಲಿ ಅಂಬೇಡ್ಕರ್ ಅವರ ಅಧ್ಯಯನ, ವಿಮರ್ಶೆ, ಸಮಾನತೆಯ ದೃಷ್ಟಿಕೋನವು ಅನುಕರಣೀಯ. ಭಾರತೀಯ ಸಾಂವಿಧಾನಿಕವಾದ ಜಾತ್ಯತೀತ ಸಿದ್ದಾಂತ, ಮಾನವೀಯ ಮೌಲ್ಯಗಳು ಮಹತ್ವದವು ಎಂದು ಅವರು ತಿಳಿಸಿದರು.
ಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ ಮಾತನಾಡಿ, ಬಡತನವನ್ನು ಹೋಗಲಾಡಿಸಿ ಆರ್ಥಿಕ ಸಬಲೀಕರಣ ಅಸ್ತತ್ವಗೊಳಿಸಿ ದಲಿತರ ಉದ್ದಾರಕ್ಕೆ ಶಿಕ್ಷಣವೊಂದು ಉತ್ತಮ ಮಾರ್ಗ. ಅಂಬೇಡ್ಕರ್ ವ್ಯಕ್ತಿತ್ವ, ಆದರ್ಶ, ಸಿದ್ದಾಂತಗಳು ಮಾದರಿಯಾಗಬೇಕಾಗಿದೆ ಎಂದರು.
ಸಮತಾಸೈನಿಕ ದಳದ ರಾಜ್ಯ ಪ್ರಧಾನಕಾರ್ಯದರ್ಶಿ ಬೆಳ್ಳೂಟಿ ಆರ್.ಶ್ರೀರಾಮಣ್ಣ ಮಾತನಾಡಿ, ಕಂದಕಗಳಿಲ್ಲದ ಸರ್ವಸಮಾನತೆಯ ಸಮಾಜವು ರಾಷ್ಟ್ರದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕ. ತಮಗೆ ಬಂದ ಎಲ್ಲ ಕಷ್ಟ-ಕಾರ್ಪಣ್ಯಗಳನ್ನು ಸವಾಲಾಗಿ ಸ್ವೀಕರಿಸಿ ದೇಶದ ಪ್ರಜಾಪ್ರಭುತ್ವದ ಅಡಿಪಾಯದಂತೆ ಸಂವಿಧಾನವನ್ನು ರಚಿಸಿದವರು ಅಂಬೇಡ್ಕರ್, ಹಿಂದುಳಿದವರು, ದೀನ-ದಲಿತರನ್ನು ಮುಖ್ಯ ವಾಹಿನಿಗೆ ತರಲು ಸಂವಿಧಾನ ಸಹಕಾರಿಯಾಗಿದೆ ಎಂದರು.
ದಿವ್ಯಾಂಗರಿಗೆ ಉಚಿತ ವಾಟರ್‌ಬೆಡ್, ದಿವ್ಯಾಂಗ ಮಕ್ಕಳಿಗೆ ನೋಟ್‌ಪುಸ್ತಕ, ಲೇಖನಸಾಮಗ್ರಿಗಳು, ಕ್ರೀಡಾ ಉಪಕರಣಗಳನ್ನು ವಿತರಿಸಲಾಯಿತು.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಕ್ಷಮ ಕಾರ್ಯದರ್ಶಿ ಬಿ.ಎಂ.ಜಗದೀಶ್, ಹಿರಿಯ ಮುಖಂಡ ನಂಜುಂಡಮೂರ್ತಿ, ಅಣ್ಣಯ್ಯಪ್ಪ, ರಾಮಂಜಿನಪ್ಪ, ನಿವೃತ್ತ ಶಿಕ್ಷಕ ಎಂ.ಎನ್.ಮಂಜುನಾಥ್, ಬೆಳ್ಳೂಟಿ ಮುನಿರಾಜು, ಅರುಣ್‌ಕುಮಾರ್, ನಾಗರಾಜು ಹಾಜರಿದ್ದರು.