Sidlaghatta : “ವಿದ್ಯಾರ್ಥಿ ಜೀವನದ ಪ್ರತಿ ಕ್ಷಣವೂ ಅಮೂಲ್ಯವಾದುದು. ವಿದ್ಯಾರ್ಥಿಗಳು ಕೇವಲ ಪುಸ್ತಕದ ಓದಿಗೆ ಸೀಮಿತವಾಗದೆ, ಹೆತ್ತವರ ಕೆಲಸ ಕಾರ್ಯಗಳಲ್ಲಿ ಸಹಕರಿಸುವ ಮೂಲಕ ಬದುಕಿನ ಪಾಠಗಳನ್ನು ಕಲಿಯಬೇಕು,” ಎಂದು ಕೆಎಂಎಫ್ ಮಾಜಿ ನಿರ್ದೇಶಕ ಆರ್.ಶ್ರೀನಿವಾಸ್ ತಿಳಿಸಿದರು.
ತಾಲ್ಲೂಕಿನ ಚಿಕ್ಕದಾಸರಹಳ್ಳಿಯಲ್ಲಿರುವ ಶ್ರೀ ಲಕ್ಷ್ಮಿ ವಿದ್ಯಾನಿಕೇತನ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು. ಬದುಕನ್ನು ರೂಪಿಸಿಕೊಳ್ಳಲು ಶಿಕ್ಷಣದ ಜೊತೆಗೆ ಪೂರಕ ಚಟುವಟಿಕೆಗಳು ಹಾಗೂ ಪ್ರಾಯೋಗಿಕ ಜ್ಞಾನ ಅತ್ಯಗತ್ಯ. ಹೆತ್ತವರ ವ್ಯಾಪಾರ ಅಥವಾ ಉದ್ಯೋಗಗಳಲ್ಲಿ ಮಕ್ಕಳು ಭಾಗಿಯಾದಾಗ ಅವರಿಗೆ ಶ್ರಮದ ಬೆಲೆ ತಿಳಿಯುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಸಾಂಸ್ಕೃತಿಕ ವೈಭವ – ‘ಕಾಂತಾರ’ ನೃತ್ಯದ ಮೆರುಗು: ಶಾಲಾ ವಿದ್ಯಾರ್ಥಿಗಳಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರ ಮನ ಗೆದ್ದವು. ವಿಶೇಷವಾಗಿ ‘ಕಾಂತಾರ’ ಚಿತ್ರದ ಹಾಡಿಗೆ ವಿದ್ಯಾರ್ಥಿಗಳು ಪ್ರದರ್ಶಿಸಿದ ನೃತ್ಯವು ಕಾರ್ಯಕ್ರಮದ ಹೈಲೈಟ್ ಆಗಿತ್ತು. ಈ ಸಂದರ್ಭದಲ್ಲಿ ಚಿತ್ರ ನಟ ಅವಿನಾಶ್ ಮತ್ತು ನಟಿ ನಿಸರ್ಗ ನಾಗಪ್ಪ ಅವರು ವಿದ್ಯಾರ್ಥಿಗಳ ಜೊತೆಗೂಡಿ ಹೆಜ್ಜೆ ಹಾಕಿದ್ದು ಸಭಿಕರಲ್ಲಿ ಸಂಭ್ರಮ ಮೂಡಿಸಿತು. ನೆಚ್ಚಿನ ನಟ-ನಟಿಯರ ಜೊತೆಗೆ ಸೆಲ್ಫಿ ತೆಗೆದುಕೊಳ್ಳಲು ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರು ಮುಗಿಬಿದ್ದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಲಕ್ಷ್ಮಿನಾರಾಯಣರೆಡ್ಡಿ, ಬ್ಯಾಟರಾಯಸ್ವಾಮಿ ದೇವಾಲಯ ಅಭಿವೃದ್ಧಿ ಸಮಿತಿ ಅಧ್ಯಕ್ಷ ಬ್ಯಾಟರಾಯಶೆಟ್ಟಿ, ತಾ.ಪಂ. ಮಾಜಿ ಸದಸ್ಯ ಅರಿಕೆರೆ ಮುನಿರಾಜು ಸೇರಿದಂತೆ ಶಾಲೆಯ ಅಧ್ಯಕ್ಷ ದೇವರಾಜ್, ಮುಖ್ಯಸ್ಥೆ ಭಾಗ್ಯಮ್ಮ ಮತ್ತು ಮುಖ್ಯ ಶಿಕ್ಷಕಿ ವನಜಾಕ್ಷಿ ಉಪಸ್ಥಿತರಿದ್ದರು.








