ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಗಳಿಗೆ ಶಿಕ್ಷಣ ಸಚಿವರ ಭೇಟಿ

0
222

ಎಸ್ಸೆಸ್ಸೆಲ್ಸಿಯ ಕಳೆದ ಎರಡು ವಿಷಯಗಳ ಪರೀಕ್ಷೆಗಳಲ್ಲಿ ಶೇ 98 ರಷ್ಟು ಹಾಜರಾತಿ ಹೊಂದಿದ್ದಾರೆ. ನಾನು ಭೇಟಿ ಮಾಡಿದ ವಿದ್ಯಾರ್ಥಿಗಳು ಮತ್ತು ಪೋಷಕರು ಪರೀಕ್ಷೆಯ ಬಗ್ಗೆ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಎಲ್ಲೂ ಕೂಡ ತೊಂದರೆ, ಅಡಚಣೆಯಿಲ್ಲದೆ, ಸುರಕ್ಷಿತ ವಾತಾವರಣದಲ್ಲಿ ಪರೀಕ್ಷೆ ನಡೆಯುತ್ತಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದರು.

 ತಾಲ್ಲೂಕಿನ ಡಾಲ್ಫಿನ್ ವಿದ್ಯಾಸಂಸ್ಥೆ, ಬಿ.ಜಿ.ಎಸ್.ವಿದ್ಯಾ ಸಂಸ್ಥೆ, ಸರ್ಕಾರಿ ಪ್ರೌಢಶಾಲೆ ಮತ್ತು ಜಂಗಮಕೋಟೆ ಜ್ಞಾನಜ್ಯೋತಿ ವಿದ್ಯಾಸಂಸ್ಥೆ ಸೇರಿದಂತೆ ಒಟ್ಟು ನಾಲ್ಕು ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಗಳಿಗೆ ಸೋಮವಾರ ಭೇಟಿ ನೀಡಿ ಅವರು ಮಾತನಾಡಿದರು.

 ಲಾಕ್ ಡೌನ್ ಒಂದೇ ಕೊರೊನಾಗೆ ಉತ್ತರವಲ್ಲ. ಜನರು ಕೂಡ ಮಾಸ್ಕ್ ಧರಿಸುವುದು, ಅಂತರ ಕಾಯ್ದುಕೊಳ್ಳುವುದು, ಸ್ಯಾನಿಟೈಸರ್ ಬಳಸುವ ಮಹತ್ವವನ್ನು ಮನಗಾಣಬೇಕು. ನಾವೆಲ್ಲರೂ “ಕ್ವಿಟ್ ಕೊರೊನಾ” ಎನ್ನಬೇಕು. ಅದಕ್ಕಾಗಿ ಜನತೆ ಮನಸ್ಸುಮಾಡಬೇಕಾಗಿದೆ ಎಂದರು.

ಆನ್ ಲೈನ್ ಶಿಕ್ಷಣ

 ನಾವೊಂದು ತಜ್ಞರ ಸಮಿತಿಯೊಂದನ್ನು ರಚಿಸಿದ್ದೇವೆ. ಅವರು ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ನು ಅಧ್ಯಯನ ಮಾಡಿ, ನಮ್ಮ ರಾಜ್ಯದ ಪರಿಸ್ಥಿತಿಗೆ ಅನುಗುಣವಾಗಿ ತಮ್ಮ ಶಿಫಾರಸ್ಸು ಮಾಡಲಿದ್ದಾರೆ. ಮುಖ್ಯವಾಗಿ ನಮ್ಮ ಸರ್ಕಾರಿ ಶಾಲಾ ಮಕ್ಕಳು ಅದರಲ್ಲೂ ಗ್ರಾಮಾಂತರ ಮಕ್ಕಳು ಯಾರೂ ಕೂಡ ತಂತ್ರಜ್ಞಾನದ ಬಳಕೆಯಿಂದ ವಂಚಿತರಾಗಬಾರದು. ಈ ನಿಟ್ಟಿನಲ್ಲಿ ತಜ್ಞರ ಸಮಿತಿ ಗಂಭೀರವಾಗಿ ಚಿಂತನೆ ನಡೆಸುತ್ತಿದೆ. ಬಹಳ ಬೇಗ ಅದಕ್ಕಾಗಿ ಒಂದು ವ್ಯವಸ್ಥೆ ರೂಪಿಸುತ್ತೇವೆ.

ಕ್ಷೇತ್ರ ಶಿಕ್ಷಣಾಧಿಕಾರಿಗಳ ಅನುಭವ

“ಹಿಂದಿನ ಪರೀಕ್ಷೆಗೂ ಈಗಿನ ಪರೀಕ್ಷೆಗೂ ಏನು ವ್ಯತ್ಯಾಸ, ಕಳೆದ ಎರಡು ದಿನಗಳ ಪರೀಕ್ಷೆ, ಅದರ ಹಿಂದಿನ ತಯಾರಿ. ಮಕ್ಕಳಿಗೆ ಫೋನ್ ಮಾಡಿಸಿದ್ದು, ಮಕ್ಕಳು ಪರೀಕ್ಷೆಗೆ ಹೇಗೆ ಬರುತ್ತಾರೆ, ವಾಹನ ಸೌಕರ್ಯ ಇತ್ಯಾದಿ… ನಿಮ್ಮ ಅನುಭವ ತಿಳಿಸಿ”, ಎಂದು ಸಚಿವರು ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಶ್ರೀನಿವಾಸ್ ಅವರನ್ನು ಕೇಳಿದರು.

 “ಮಕ್ಕಳೊಂದಿಗೆ ಈ ಬಾರಿಯ ಪರೀಕ್ಷೆ ನಮಗೂ ಒಂದು ಸಾವಾಲಾಗಿದೆ. ಆತ್ಮವಿಶ್ವಾಸ ಮತ್ತು ವಿಶ್ವಾಸ ತುಂಬುವಲ್ಲಿ ನಾವು ಕೈಗೊಂಡ ಕ್ರಮಗಳು ಫಲಪ್ರದವಾಗಿವೆ. ಮಕ್ಕಳು ಹಿಂದಿಗಿಂತ ಹೆಚ್ಚು ಶಿಸ್ತಾಗಿದ್ದಾರೆ. ಇದೊಂದು ನಮ್ಮೆಲ್ಲರ ಬದುಕಿನ ಬಹುದೊಡ್ಡ ಮೈಲಿಗಲ್ಲು” ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಶ್ರೀನಿವಾಸ್ ಉತ್ತರಿಸಿದರು.

ಟ್ರೀಟೆಡ್ ವಾಟರ್

ಮಳೆ ಚೆನ್ನಾಗಿ ಆಗಿದೆಯಾ? ನೀರಿನ ಸಮಸ್ಯೆ ಇಲ್ಲವಾ? ಎಂದು ಸಚಿವರು ತಹಶೀಲ್ದಾರ್ ಕೆ.ಅರುಂಧತಿ ಅವರನ್ನು ವಿಚಾರಿಸಿದರು. ಒಳ್ಳೆ ಮಳೆ ಬಿದ್ದಿದೆ ಎಂದು ಅವರು ಉತ್ತರಿಸಿದರು. ಈ ಸಂದರ್ಭದಲ್ಲಿ ಡಾಲ್ಫಿನ್ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಅಶೋಕ್, “ಎಚ್.ಎನ್.ವ್ಯಾಲಿ ನೀರು ನಮ್ಮ ಕೆರೆಗಳಿಗೆ ಬಂದರೆ ಎಷ್ಟೋ ಅನುಕೂಲವಾಗುತ್ತದೆ” ಅಂದರು.

ಸಚಿವರು ತಕ್ಷಣ, “ಅದು ಟ್ರೀಟೆಡ್ ವಾಟರ್. ಸಿಂಗಾಪುರದಲ್ಲಿ ವಿಶ್ವ ಜಲ ಸಭೆಯಲ್ಲಿ ಪಾಲ್ಗೊಂಡಿದ್ದೆ. ಅಲ್ಲಿನ ಪ್ರಧಾನಿ ಬಂದು ನಮ್ಮೊಳಗೊಬ್ಬರಂತೆ ಕುಳಿತರು. ಅಲ್ಲಿಟ್ಟಿದ್ದ ನೀರನ್ನು ಕುಡಿದರು. ಅದನ್ನು ಅವರು “ನ್ಯೂ ವಾಟರ್” ಎಂದು ಕರೆಯುತ್ತಾರೆ. ಅದೆಲ್ಲಾ ಟ್ರೀಟೆಡ್ ವಾಟರ್. ನಾವೆಲ್ಲರೂ ಅದನ್ನೇ ಕುಡಿದೆವು. ಗೊತ್ತೇ ಆಗದಷ್ಟು ಸ್ವಚ್ಛವಾಗಿತ್ತು” ಎಂದು ವಿವರಿಸಿದರು.

ಸ್ಕೌಟ್ ಮತ್ತು ಗೈಡ್ಸ್

ಸ್ಕೌಟ್ ಮತ್ತು ಗೈಡ್ಸ್ ಉತ್ತಮ ಸೇವೆ ಸಲ್ಲಿಸುತ್ತಿದ್ದೀರಿ. ನಿಮಗೆಲ್ಲಾ ಧನ್ಯವಾದಗಳು. ಒಂದೊಂದು ಕೇಂದ್ರದಲ್ಲಿ ಎಷ್ಟು ಮಕ್ಕಳನ್ನು ನಿಯೋಜಿಸಲಾಗಿದೆ ಎಂದು ಸ್ಕೌಟ್ ಮತ್ತು ಗೈಡ್ಸ್ ತಾಲ್ಲೂಕು ಕಾರ್ಯದರ್ಶಿ ಸಿ.ಬಿ.ಪ್ರಕಾಶ್ ಅವರಲ್ಲಿ ವಿಚಾರಿಸಿಕೊಂಡರು.

ನ್ಯಾಯಾಲಯ ಸಮುಚ್ಛಯ

ನಾನು ಕಾನೂನು ಸಚಿವನಾಗಿದ್ದಾಗ ಶಿಡ್ಲಘಟ್ಟದಲ್ಲಿ ನ್ಯಾಯಾಲಯ ಕಟ್ಟಡಕ್ಕಾಗಿ ಹಿರಿಯ ವಕೀಲರೊಬ್ಬರು ಬಹಳ ಪ್ರಯತ್ನಿಸಿದ್ದರು. ಅವರ ಒತ್ತಾಯವನ್ನು ಕಂಡು ಇವರಿಗೆ ಒಪ್ಪಿಗೆ ಕೊಡಲೇಬೇಕು ಅನ್ನಿಸಿತ್ತು. ಹೇಗಿದೆ ಕಟ್ಟಡ ಎಂದು ಪ್ರಶ್ನಿಸಿದರು. ಡಾಲ್ಫಿನ್ ಸಂಸ್ಥೆಯ ಅಧ್ಯಕ್ಷ ನಾಗರಾಜ್ ಉತ್ತರಿಸಿ, “ನ್ಯಾಯಾಲಯ ಕಟ್ಟಡ ಸುಂದರವಾಗಿದೆ. ನೀವು ಭೇಟಿ ಕೊಡುವ ಶಾಲೆಯ ಮಾರ್ಗದಲ್ಲಿಯೇ ಇದೆ. ಆ ಹಿರಿಯ ವಕೀಲರು ಎಂ.ಪಾಪಿರೆಡ್ಡಿ” ಎಂದು ಹೇಳಿದರು.

ಆಶಾ ಜ್ಯೋತಿಗಳು

ಆಶಾ ಕಾರ್ಯಕರ್ತೆಯರಿಲ್ಲದಿದ್ದರೆ ನಮ್ಮ ಸಮಾಜ ನಿರಾಶೆಯಲ್ಲಿರುತ್ತಿತ್ತು. ನೀವೇ ನಮ್ಮ ಆಶಾ ಜ್ಯೋತಿಗಳು ಎಂದು ಥರ್ಮಲ್ ಚೆಕ್ ಮಾಡುತ್ತಿದ್ದ ಆಶಾ ಕಾರ್ಯಕರ್ತೆಯರಿಗೆ ಧನ್ಯವಾದ ತಿಳಿಸಿದರು.

ವಿಧಾನಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ, ಎಸ್.ಜಿ.ನಾಗೇಶ್, ಶಿಕ್ಷಣಾಧಿಕಾರಿಗಳಾದ ಶಿವಲಿಂಗಯ್ಯ, ಜಯರಾಮರೆಡ್ಡಿ, ವಿಷಯ ಪರಿವೀಕ್ಷಕರು ಕೃಷ್ಣಕುಮಾರಿ, ಇಸಿಒ ಭಾಸ್ಕರಗೌಡ, ತಹಶಿಲ್ದಾರ್ ಕೆ.ಅರುಂಧತಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ಹಾಜರಿದ್ದರು.