Sidlaghatta : ಹೈನುಗಾರಿಕೆಯಲ್ಲಿ ವಿಶ್ವದಲ್ಲೇ ಮುಂಚೂಣಿಯಲ್ಲಿರುವ ಸ್ವಿಟ್ಜರ್ಲೆಂಡ್ ದೇಶದ ವಿಜ್ಞಾನಿಗಳು ಮತ್ತು ರೈತರ ತಂಡವೊಂದು ಸೋಮವಾರ ರೇಷ್ಮೆ ನಾಡು ಶಿಡ್ಲಘಟ್ಟಕ್ಕೆ ಭೇಟಿ ನೀಡಿ ಇಲ್ಲಿನ ‘ಸಿಲ್ಕ್ ಮತ್ತು ಮಿಲ್ಕ್’ (ರೇಷ್ಮೆ ಮತ್ತು ಹಾಲು) ಸಂಯೋಜನೆಯ ಕೃಷಿ ಪದ್ಧತಿಯನ್ನು ಅಧ್ಯಯನ ಮಾಡಿತು.
ಜಿಕೆವಿಕೆ (GKVK) ರೇಷ್ಮೆ ಕೃಷಿ ವಿಭಾಗದ ವಿಜ್ಞಾನಿ ಡಾ. ಚಂದ್ರಶೇಖರ್ ಅವರ ನೇತೃತ್ವದಲ್ಲಿ ಆಗಮಿಸಿದ 22 ಜನರ ಈ ತಂಡದಲ್ಲಿ ವಿಜ್ಞಾನಿಗಳು, ಉದ್ಯಮಿಗಳು ಮತ್ತು ತಂತ್ರಜ್ಞರಿದ್ದರು.
ಹಂತ ಹಂತವಾಗಿ ಅಧ್ಯಯನ: ತಂಡವು ತಾಲ್ಲೂಕಿನ ಹಿತ್ತಲಹಳ್ಳಿಯ ಪ್ರಗತಿಪರ ರೈತ ಎಚ್.ಜಿ. ಗೋಪಾಲಗೌಡ ಅವರ ತೋಟಕ್ಕೆ ಭೇಟಿ ನೀಡಿ, ಹಿಪ್ಪುನೇರಳೆ ಕೃಷಿ ಮತ್ತು ರೇಷ್ಮೆ ಹುಳು ಸಾಕಾಣಿಕೆಯನ್ನು ವೀಕ್ಷಿಸಿತು. ನಂತರ ರೇಷ್ಮೆ ಗೂಡಿನ ಮಾರುಕಟ್ಟೆ, ನಾರಾಯಣಪ್ಪ ಅವರ ನೂಲು ಬಿಚ್ಚಾಣಿಕೆ ಕೇಂದ್ರ ಮತ್ತು ಮಧು ಅವರ ಸ್ವಯಂಚಾಲಿತ ರೀಲಿಂಗ್ ಘಟಕಗಳಿಗೆ ಭೇಟಿ ನೀಡಿ, ಗೂಡಿನಿಂದ ರೇಷ್ಮೆ ನೂಲು ತಯಾರಾಗುವವರೆಗಿನ ಪ್ರಕ್ರಿಯೆಯನ್ನು ಆಸಕ್ತಿಯಿಂದ ತಿಳಿದುಕೊಂಡರು.
ಸ್ವಿಸ್ ತಂತ್ರಜ್ಞಾನಕ್ಕೆ ಇಲ್ಲಿನ ಮಾದರಿ: ವಿಜ್ಞಾನಿ ಡಾ. ಚಂದ್ರಶೇಖರ್ ಮಾತನಾಡಿ, “ಸ್ವಿಟ್ಜರ್ಲೆಂಡ್ ಹೈನುಗಾರಿಕೆಯಲ್ಲಿ ಶ್ರೀಮಂತವಾಗಿದೆ. ಆದರೆ, ನಮ್ಮ ಭಾಗದ ರೈತರು ಹೈನುಗಾರಿಕೆಯ ಜೊತೆಗೆ ರೇಷ್ಮೆಯನ್ನು ಪೂರಕವಾಗಿ ಬೆಳೆಯುತ್ತಿರುವ ವಿಧಾನ ಅವರಿಗೆ ಆಶ್ಚರ್ಯ ಮೂಡಿಸಿದೆ. ಇಲ್ಲಿನ ಸಾವಯವ ಕೃಷಿ ಮತ್ತು ಮಾರುಕಟ್ಟೆ ವ್ಯವಸ್ಥೆಯನ್ನು ಅವರು ತಮ್ಮ ದೇಶದಲ್ಲಿ ಅಳವಡಿಸಿಕೊಳ್ಳಲು ಉತ್ಸುಕರಾಗಿದ್ದಾರೆ,” ಎಂದರು.
ಪ್ರಗತಿಪರ ಕೃಷಿಕ ಗೋಪಾಲಗೌಡ ಅವರು ವಿದೇಶಿ ಪ್ರತಿನಿಧಿಗಳಿಗೆ ಸಾವಯವ ಕೃಷಿಯ ಮಹತ್ವವನ್ನು ವಿವರಿಸಿದರು. ರೇಷ್ಮೆ ಬೆಳೆಗಾರರಾದ ಬೋದಗೂರು ವೆಂಕಟಸ್ವಾಮಿರೆಡ್ಡಿ, ಎಚ್.ಕೆ. ಸುರೇಶ್ ಸೇರಿದಂತೆ ಹಲವು ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.








