Sidlaghatta : ನೇಪಾಳದ ಕಠ್ಮಂಡುವಿನಲ್ಲಿ ನಡೆದ ದಕ್ಷಿಣ ಏಷ್ಯಾ ಟಾರ್ಗೆಟ್ ಬಾಲ್ ಚಾಂಪಿಯನ್ ಶಿಪ್ ನಲ್ಲಿ ಭಾರತದ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದ್ದು, ಆ ತಂಡದಲ್ಲಿ ಶಿಡ್ಲಘಟ್ಟದ ಎ.ಪವನ್ ಕುಮಾರ್ ದೇಶವನ್ನು ಪ್ರತಿನಿಧಿಸಿದ್ದಾರೆ.
ಶಿಡ್ಲಘಟ್ಟದ ಅಂಜನಾದ್ರಿ ಬಡಾವಣೆಯ ವಾಸಿ ಆರ್.ಅನಿಲ್ ಕುಮಾರ್ ಮತ್ತು ಮೀನಾಕ್ಷಿ ದಂಪತಿಯ ಮಗ ಎ.ಪವನ್ ಕುಮಾರ್ ರಾಜ್ಯ, ರಾಷ್ಟ್ರಮಟ್ಟದ ಟಾರ್ಗೆಟ್ ಬಾಲ್ ಪಂದ್ಯಾವಳಿಯಲ್ಲಿ ಭಾಗವಹಿಸಿ, ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದರು.
ನೇಪಾಳದ ಕಠ್ಮಂಡುವಿನಲ್ಲಿ ಜುಲೈ 8 ರಿಂದ 11 ರವರೆಗೂ ನಡೆದ ದಕ್ಷಿಣ ಏಷ್ಯಾ ಟಾರ್ಗೆಟ್ ಬಾಲ್ ಚಾಂಪಿಯನ್ ಶಿಪ್ ನಲ್ಲಿ ಭಾರತ ಪ್ರಥಮ ಸ್ಥಾನ ಪಡೆದು ಚಾಂಪಿಯನ್ ಆಗಿದೆ.
ಟಾರ್ಗೆಟ್ ಬಾಲ್ ಆಟ ಬ್ಯಾಸ್ಕೆಟ್ ಮಾಲ್ ಮತ್ತು ಹ್ಯಾಂಡ್ ಬಾಲ್ ಆಟಗಳ ಸಂಕರವಾಗಿದ್ದು, ಈ ಕ್ರೀಡೆಯನ್ನು ಅಕ್ಟೋಬರ್ 8, 2012 ರಂದು ಭಾರತದ ಉತ್ತರಪ್ರದೇಶ ರಾಜ್ಯದ ಮಥುರಾ ಜಿಲ್ಲೆಯ ಡಾ.ಸೋನು ಶರ್ಮಾ ಅವರು ಮೊಟ್ಟಮೊದಲು ಪ್ರಾರಂಭಿಸಿದರು. ಒಂದು ತಂಡದಲ್ಲಿ ಆರು ಮಂದಿ ಕ್ರೀಡಾಪಟುಗಳಿರುವ ಈ ಆಟದಲ್ಲಿ ಟಾರ್ಗೆಟ್ ಬಾಲ್ ಅನ್ನು ಟಾರ್ಗೆಟ್ ರಿಂಗ್ ಗೆ ಎಸೆಯುವುದು ಆಟದಲ್ಲಿನ ಪ್ರಮುಖ ಅಂಶವಾಗಿದೆ.
ಶಿಡ್ಲಘಟ್ಟದ ಎ.ಪವನ್ ಕುಮಾರ್ ಶಾಲಾ ಶಿಕ್ಷಣವನ್ನು ಕ್ರೆಸೆಂಟ್ ವಿದ್ಯಾ ಸಂಸ್ಥೆಯಲ್ಲಿ ಮತ್ತು ಕಾಲೇಜು ಶಿಕ್ಷಣವನ್ನು ಡಾಲ್ಫಿನ್ ವಿದ್ಯಾಸಂಸ್ಥೆಯಲ್ಲಿ ಮಾಡಿದ್ದು, ಪ್ರಸ್ತುತ ರೇವಾ ವಿಶ್ವವಿದ್ಯಾಲಯದಲ್ಲಿ ಎಂ.ಬಿ.ಎ ಪದವಿಯ ವ್ಯಾಸಂಗ ಮಾಡುತ್ತಿದ್ದಾರೆ.
“ನಮ್ಮ ದೇಶವನ್ನು ಪ್ರತಿನಿಧಿಸಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಾಂಪಿಯನ್ ಶಿಪ್ ಗೆದ್ದಿರುವುದು ಹೆಮ್ಮೆ ಎನಿಸಿದೆ. ನಮ್ಮ ಕೋಚ್ ಶ್ರೀಧರ್ ಅವರಿಗೆ ಇದರ ಶ್ರೇಯಸ್ಸು ಸಲ್ಲುತ್ತದೆ” ಎಂದು ಎ.ಪವನ್ ಕುಮಾರ್ ತಿಳಿಸಿದರು.