ಮಹರ್ಷಿ ವಾಲ್ಮೀಕಿ ಜಯಂತಿ: ಗ್ರಾಮದ ಹೆಬ್ಬಾಗಿಲಲ್ಲಿ ಕಲ್ಲಿನ ಪ್ರತಿಮೆ ಪ್ರತಿಷ್ಠಾಪನೆ

Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಸಾದಲಿ ಹೋಬಳಿಯ ತಳಕಾಯಲಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಿ. ನಕ್ಕಲಹಳ್ಳಿ ಗ್ರಾಮದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಈ ಬಾರಿ ವಿಶೇಷವಾಗಿ ಆಚರಿಸಲಾಯಿತು.
ಪ್ರತಿವರ್ಷದಂತೆ ಗ್ರಾಮಸ್ಥರೆಲ್ಲರೂ ಒಗ್ಗೂಡಿ ಜಯಂತಿಯನ್ನು ಸಂಭ್ರಮದಿಂದ ಆಚರಿಸಿದ್ದು, 2026ರಲ್ಲಿ ಮೊದಲ ಬಾರಿಗೆ ಗ್ರಾಮದ ಹೆಬ್ಬಾಗಿಲಿನ ಮುಂಭಾಗದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿಯವರ ಕಲ್ಲಿನ ಪ್ರತಿಮೆಯನ್ನು ಕೆತ್ತಿಸಿ ಪ್ರತಿಷ್ಠಾಪಿಸಲಾಯಿತು.

ಈ ಸಂದರ್ಭದಲ್ಲಿ ಗ್ರಾಮದ ಮನೆಮನೆಗಳಿಂದ ಕಲಶಗಳನ್ನು ಹೊತ್ತು ತಂದು, ಗ್ರಾಮದ ಆದಿದೇವರಾದ ಶ್ರೀ ರಾಮಸ್ವಾಮಿಯ ಮೆರವಣಿಗೆಯೊಂದಿಗೆ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಪುರೋಹಿತರ ನೇತೃತ್ವದಲ್ಲಿ ವಾಲ್ಮೀಕಿ ಮಹರ್ಷಿಯವರ ಪ್ರತಿಮೆಗೆ ಹಾಲಿನ ಅಭಿಷೇಕ ಮಾಡಲಾಯಿತು. ಬಳಿಕ ಸಿಹಿ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು. ದೇವರ ಮೆರವಣಿಗೆಯೊಂದಿಗೆ ಜಂಬೂ ಸವಾರಿಯನ್ನೂ ವಿಶೇಷವಾಗಿ ಆಯೋಜಿಸಲಾಗಿತ್ತು.
ಪ್ರತಿವರ್ಷ ಹೂವಿನ ಪಲ್ಲಕ್ಕಿ, ಹಲಗೆ, ಡಿ.ಜೆ., ಯುವಕರ ಟಿ-ಶರ್ಟ್‌ಗಳು ಹಾಗೂ ಅನ್ನಸಂತರ್ಪಣೆಯೊಂದಿಗೆ ವಿಜೃಂಭಣೆಯಿಂದ ಜಯಂತಿ ಆಚರಿಸಿಕೊಂಡು ಬರುತ್ತಿರುವ ಗ್ರಾಮಸ್ಥರು, ಈ ಬಾರಿ ಪ್ರತಿಮೆ ಪ್ರತಿಷ್ಠಾಪಿಸುವ ಮೂಲಕ ಹಬ್ಬಕ್ಕೆ ಮತ್ತಷ್ಟು ವಿಶೇಷ ಮೆರುಗು ನೀಡಿದರು.
ತಾಲ್ಲೂಕಿನಲ್ಲಿ ವಾಲ್ಮೀಕಿ ಜಯಂತಿಯನ್ನು ಬೇರೆ ಬೇರೆ ಕಡೆಯೂ ಆಚರಿಸಲಾಗಿದ್ದು, ತಾಲ್ಲೂಕು ಕಚೇರಿಯಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಹಾಗೂ ಡಾಲ್ಫಿನ್ಸ್ ಪಿಯು ಕಾಲೇಜಿನಲ್ಲಿ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಕುರಿತ ವರದಿಗಳನ್ನು ಓದಿ.

For Daily Updates WhatsApp ‘HI’ to 7406303366
Summary in English
Residents of G. Nakkalahalli village, in Talakayalabetta gram panchayat of Sadali hobli, Sidlaghatta taluk, celebrated Maharshi Valmiki Jayanti by installing a carved stone statue of Valmiki in front of the village entrance for the first time in 2026. Households brought kalashas in a procession led by the village deity Sri Ramaswamy, the statue was bathed in milk by priests, and sweets and a community meal followed, along with a special Jambu Savari procession.
Be a reporter
ಊರಿನ ಸುದ್ದಿ, ಫೋಟೋ ಕಳುಹಿಸಿ.
Send news



