Varadanayakanahalli, sidlaghatta : ಶಿಡ್ಲಘಟ್ಟ ತಾಲ್ಲೂಕಿನ ಅಬ್ಲೂಡು ಗ್ರಾಮ ಪಂಚಾಯಿತಿಯ ವರದನಾಯಕನಹಳ್ಳಿ ಗ್ರಾಮದಲ್ಲಿ ನೆಲೆಸಿರುವ ಶ್ರೀಪಟಾಲಮ್ಮದೇವಿ ಮತ್ತು ಶ್ರೀವೀರಸೊಣ್ಣಮ್ಮ ದೇವಿಯವರ 30ನೇ ವರ್ಷದ ರಥೋತ್ಸವ ಮತ್ತು ಕಾಯಿ ಉಟ್ಲು ಮಹೋತ್ಸವವು ಭಾನುವಾರ ವಿಜೃಂಭಣೆಯಿಂದ, ಶ್ರದ್ಧಾ ಭಕ್ತಿಯಿಂದಲೂ ನಡೆಯಿತು.
ಶ್ರೀ ಪಟಾಲಮ್ಮದೇವಿ ಮತ್ತು ಶ್ರೀವೀರಸೊಣ್ಣಮ್ಮ ದೇವಿಯ ವಿಗ್ರಹಗಳಿಗೆ ವಿಶೇಷ ಹೂವಿನ ಅಲಂಕಾರ ಮಾಡಿ ಮಹಾ ಮಂಗಳಾರತಿ ನೆರವೇರಿಸಿ ಆಗಮಿಸಿದ್ದ ಭಕ್ತರಿಗೆ ತೀರ್ಥ ಪ್ರಸಾದವನ್ನು ವಿನಿಯೋಗಿಸಲಾಯಿತು.
ಅಲಂಕೃತ ತೇರಿನಲ್ಲಿ ಉತ್ಸವ ಮೂರ್ತಿಗಳನ್ನು ಕೂರಿಸಿ ಪೂಜೆ ನೆರವೇರಿಸಿ ನಾದಸ್ವರ ಮಂಗಳವಾದ್ಯಗಳೊಂದಿಗೆ ದೇವಾಲಯದ ಸುತ್ತಲೂ ಪ್ರದಕ್ಷಿಣೆ ಹಾಕಲಾಯಿತು. ಗ್ರಾಮಸ್ಥರು, ಮಕ್ಕಳು, ಹಿರಿಯರು, ಕಿರಿಯರು ಎಂಬ ಭೇದವಿಲ್ಲದೆ ಎಲ್ಲಲರೂ ತೇರನ್ನು ಎಳೆದರು.
ದವನ ಚುಚ್ಚಿದ ಬಾಳೆ ಹಣ್ಣನ್ನು ತೇರಿನ ತುತ್ತ ತುದಿಯಲ್ಲಿನ ಕಳಶಕ್ಕೆ ತಾಗುವಂತೆ ಎಸೆದು ಕೈ ಮುಗಿದು ಇಷ್ಟಾರ್ಥಗಳು ಈಡೇರಲೆಂದು ತಾಯಿಯಲ್ಲಿ ಪ್ರಾರ್ಥಿಸಿದರು.
ಗ್ರಾಮದ ಮುಖ್ಯ ರಸ್ತೆಯಲ್ಲಿ ಸಾಗಿ ರಥವು ದೇವಾಲಯದ ಬಳಿಗೆ ಸಾಗಿತು. ಕೀಲುಕುದುರೆ, ಗಾರುಡಿ ಗೊಂಬೆ, ಮರದ ಕಾಲು ಕಟ್ಟಿಕೊಂಡು ನಡೆಯುವ ವೇಷಧಾರಿಗಳು ಇನ್ನಿತರ ಜನಪದ ಕಲಾತಂಡಗಳು ರಥೋತ್ಸವಕ್ಕೆ ಇನ್ನಷ್ಟು ಕಳೆ ಕಟ್ಟಿದ್ದವು.
ಪರಿಷೆ ಅಂಗವಾಗಿ ದೇವಾಲಯದ ಬಳಿ ಬತ್ತಾಸು, ಬುರುಗು, ಮಕ್ಕಳ ಆಟಿಕೆ, ಹೆಂಗೆಳೆಯರ ಸೌಂಧರ್ಯ ವರ್ಧಕಗಳ ಅಂಗಡಿಗಳು ತಲೆ ಎತ್ತಿದ್ದವು, ಐಸ್ ಕ್ರೀಂ, ಎಳ ನೀರು, ಕಲ್ಲಂಗಡಿ ಹಣ್ಣು, ತಂಪುಪಾನೀಯಗಳ ವ್ಯಪಾರವೂ ಜೋರಾಗಿತ್ತು.
ದೇವಾಲಯದಲ್ಲಿ ಪ್ರಸಾದ ವಿನಿಯೋಗ ಹಾಗೂ ದೇವಾಲಯದ ಆವರಣದಲ್ಲಿ ಉಚಿತ ಅನ್ನಸಂತರ್ಪಣೆ ವ್ಯವಸ್ಥೆ ಮಾಡಿದ್ದರು. ಸುತ್ತಮುತ್ತಲಿನ ಗ್ರಾಮಗಳಿಂದ ನೂರಾರು ಜನರು ಆಗಮಿಸಿದ್ದರು. ಭಕ್ತರು ಎತ್ತಿನ ಬಂಡಿಗಳಲ್ಲಿ ಪಾನಕ ಮಜ್ಜಿಗೆ ಹೆಸರು ಬೇಳೆಯನ್ನು ತಂದು ಪ್ರಸಾದವಾಗಿ ವಿತರಿಸಿದರು.
ಸಂಜೆ ಅಮ್ಮನವರ ಕ್ಷೀರ ಉಟ್ಲು ಮತ್ತು ಕಾಯಿ ಉಟ್ಲು ಮಹೋತ್ಸವ ನಡೆಯಿತು. ಶ್ರೀ ಪಟಾಲಮ್ಮದೇವಿ ಮತ್ತು ಶ್ರೀ ವೀರಸೊಣ್ಣಮ್ಮದೇವಿ ದೇವಸ್ಥಾನದ ಅಭಿವೃದ್ಧಿ ಸಮಿತಿಯ ಸದಸ್ಯರು ವಿವಿಧ ಗ್ರಾಮಗಳ ಮುಖಂಡರು ಹಾಜರಿದ್ದರು.








