
Sidlaghatta : ಸಣ್ಣ ವಯಸ್ಸಿನಲ್ಲಿಯೇ ಮಕ್ಕಳಿಗೆ ಸರಿಯಾದ ಸಂಸ್ಕಾರವನ್ನು ನೀಡಿದಲ್ಲಿ ಭವಿಷ್ಯದಲ್ಲಿ ವೃದ್ಧಾಶ್ರಮಗಳ ಸಂಖ್ಯೆ ಕಡಿಮೆಯಾಗಬಹುದು. ಈ ನಿಟ್ಟಿನಲ್ಲಿ ತಾಯಂದಿರ ಪಾತ್ರ ಅತ್ಯಂತ ಮಹತ್ವದ್ದು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಎಂ.ಶೀನಪ್ಪ ತಿಳಿಸಿದರು.
ಶಿಡ್ಲಘಟ್ಟ ನಗರದ ಶ್ರೀ ವಾಸವಿ ವಿದ್ಯಾ ಸಂಸ್ಥೆಯ ಆವರಣದಲ್ಲಿ ಭಾನುವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜ್ಞಾನವಿಕಾಸ ಕಾರ್ಯಕ್ರಮದಡಿ ಹಮ್ಮಿಕೊಂಡಿದ್ದ ಮಹಿಳಾ ವಿಚಾರ ಗೋಷ್ಠಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಈ ಹಿಂದೆ ನಾಲ್ಕು ಗೋಡೆಗಳ ಮದ್ಯೆ ಬಂಧಿಯಾಗಿದ್ದ ಮಹಿಳೆಯರು ಮಾತೃಶ್ರೀ ಹೇಮಾವತಿ ಅಮ್ಮನವರ ಕನಸಿನ ಜ್ಞಾನವಿಕಾಸ ಕಾರ್ಯಕ್ರಮದಲ್ಲಿ ಸೇರಿಕೊಂಡು ಇವತ್ತು ಪುರುಷನಷ್ಟೇ ಸಮಾನಳು ಎಂದು ನಿರೂಪಿಸಿದ್ದಾರೆ. ಪ್ರತಿಯೊಂದಕ್ಕೂ ಪುರುಷನನ್ನು ಅವಲಂಬಿಸದೇ ಸ್ವಾವಲಂಬಿ ಬದುಕನ್ನು ನಡೆಸಲು ಈ ಕಾರ್ಯಕ್ರಮ ನೆರವಾಗಿದ್ದಲ್ಲದೇ ಮಾತೃಶ್ರೀ ಯವರ ಅತ್ಯಂತ ಕಾಳಜಿಯ ದುರ್ಬಲ ವರ್ಗದ ನಿರ್ಗತಿಕ ಕುಟುಂಬಗಳಿಗೆ ಪ್ರತಿ ತಿಂಗಳು ನೀಡುವ ಮಾಶಾಸನ ಮನೆಯೇ ಇಲ್ಲದೇ ಗುಡಿಸಲಿನಲ್ಲಿ ವಾಸ ಮಾಡುವ ಅತ್ಯಂತ ಬಡಕುಟುಂಬಗಳಿಗೆ ಮನೆ ಕಟ್ಟಿ ಕೊಡುವ ವಾತ್ಸಲ್ಯ ಕಾರ್ಯಕ್ರಮಗಳು ಮಾತೃಶ್ರೀ ಅಮ್ಮನವರಿಗೆ ಬಡವರ ಬಗ್ಗೆ ಇರುವ ಕಾಳಜಿಯನ್ನು ಎತ್ತಿ ತೋರಿಸುತ್ತದೆ ಎಂದರು.
ಕರ್ನಾಟಕ ರಾಜ್ಯ ಮಹಿಳಾ ಸಾಂತ್ವನ ಕೇಂದ್ರಗಳ ಒಕ್ಕೂಟದ ರಾಜ್ಯಾಧ್ಯಕ್ಷೆ ಡಾ.ವಿಜಯಾ ಮಾತನಾಡಿ ಈ ಸಮಾಜದಲ್ಲಿ ನೂರಾರು ವರ್ಷಗಳಿಂದ ಶೋಷಣೆಗೆ ಒಳಪಡುತ್ತಿದ್ದರೂ ಇದನ್ನು ಪ್ರಶ್ನಿಸುವ ಧೈರ್ಯ ನಮ್ಮ ಮಹಿಳೆಯರಿಗೆ ಇಲ್ಲದೇ ಇರುವುದು ದುರಂತ. ಇವತ್ತು ಸಾಕಾಷ್ಟು ಮಹಿಳಾ ಸಾಂತ್ವನ ಕೇಂದ್ರಗಳು ಮಹಿಳೆಯರ ಹಕ್ಕಿನ ಬಗ್ಗೆ ತಿಳುವಳಿಕೆ ನೀಡುತ್ತಿದ್ದು ಇದರ ಸದುಪಯೋಗ ಪಡೆಯಬೇಕೆಂದರು.
ಕಾರ್ಯಕ್ರಮದಲ್ಲಿ ಜ್ಞಾನವಿಕಾಸ ಕೇಂದ್ರದ ಸದಸ್ಯರಿಂದ ವಿವಿಧ ಮನರಂಜನಾ ಕಾರ್ಯಕ್ರಮಗಳು ಹಾಗೂ ನೃತ್ಯ ಪ್ರದರ್ಶನ ಏರ್ಪಡಿಸಲಾಗಿತ್ತು.
ಮಹಿಳಾ ಹೋರಾಟಗಾರರಾದ ಸುಷ್ಮಾ ಶ್ರೀನಿವಾಸ್, ಉಷಾ ಆಂಜನೇಯರೆಡ್ಡಿ, ಆಯೇಷಾ ಸುಲ್ತಾನಾ, ವಾಸವಿ ವಿದ್ಯಾ ಸಂಸ್ಥೆಯ ಅಧ್ಯಕ್ಷ ಕೃಷ್ಣಯ್ಯಶೆಟ್ಟಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ನಿರ್ದೇಶಕ ಪ್ರಶಾಂತ್.ಸಿ.ಎಸ್. ಜನಜಾಗೃತಿ ವೇದಿಕೆ ಸದಸ್ಯ ಹಿತ್ತಲಹಳ್ಳಿ ಸುರೇಶ್, ಸಂತೋಷ್, ಯೋಜನಾಧಿಕಾರಿ ಪ್ರಕಾಶ್‌ಕುಮಾರ್, ಜ್ಞಾನವಿಕಾಸ ಸಮನ್ವಯಾಧಿಕಾರಿ ಸುಮಂಗಲಾ, ಮೇಲ್ವಿಚಾರಕರಾದ ದಯಾನಂದ್, ಮಂಜುನಾಥ್, ಭೂತಯ್ಯ, ರಾಜೇಶ್ ಮತ್ತಿತರರು ಹಾಜರಿದ್ದರು.