ಒಂದೆಡೆ ಮಳೆಗಾಗಿ ರೈತರು ಕಾಯುತ್ತಿದ್ದರೆ, ಮತ್ತೊಂದೆಡೆ ಏರುತ್ತಿರುವ ತಾಪಮಾನದಿಂದ ಹಣ್ಣುಗಳ ವ್ಯಾಪಾರ ಜೋರಾಗಿ ಸಾಗಿದೆ.
ನವೆಂಬರ್ ಬರುತ್ತಿದ್ದಂತೆ ಚಳಿಯ ಅನುಭವವಾಗಬೇಕು. ಆದರೆ ತಾಲ್ಲೂಕಿನಲ್ಲಿ ಬೇಸಿಗೆಯ ಅನುಭವವಾಗುತ್ತಿದೆ. ಬಿಸಿಲಿನ ಝಳಕ್ಕೆ ತತ್ತರಿಸುತ್ತಾ ಜನರು ನಗರದ ಅಮ್ಮನ ಕೆರೆ ಏರಿಯ ಹಂಡಿಗನಾಳ ಗೇಟ್ ಬಳಿ ಕಲ್ಲಂಗಡಿ ಹಣ್ಣು ಸೇರಿದಂತೆ ವಿವಿಧ ಹಣ್ಣಿನ ಮೊರೆ ಹೋಗುತ್ತಿದ್ದಾರೆ.
ಹಿಂದೆ ಕೇವಲ ಬೇಸಿಗೆಯಲ್ಲಿ ಮಾತ್ರ ಕಂಡು ಬರುತ್ತಿದ್ದ ಕಲ್ಲಂಗಡಿ ಹಣ್ಣುಗಳು ಪ್ರಕೃತಿಯ ವೈಪರೀತ್ಯಗಳಿಂದ ವಿವಿಧ ಕಾಲಮಾನಗಳಲ್ಲೂ ರೈತರು ಬೆಳೆಯುತ್ತಿದ್ದಾರೆ. ಕಲ್ಲಂಗಡಿ, ಬಾಳೆಹಣ್ಣು, ದ್ರಾಕ್ಷಿ, ಸೇಬು, ಪೈನಾಪಲ್, ಪಪಾಯ ಮೊದಲಾದ ಹಣ್ಣುಗಳನ್ನು ಕತ್ತರಿಸಿ ಮಿಶ್ರಣ ಮಾಡಿ ಮಾರುತ್ತಿರುವ ಕಾರಣ ಬಿಸಿಲಿನ ಬೇಗೆಗೆ ತತ್ತರಿಸುವ ಜನರು ಇವುಗಳ ಮೊರೆ ಹೋಗುತ್ತಿದ್ದಾರೆ.
ಶಿಡ್ಲಘಟ್ಟದಿಂದ ಬೆಂಗಳೂರು, ಚಿಕ್ಕಬಳ್ಳಾಪುರಕ್ಕೆ ಹೋಗಬೇಕಾದವರು ಹಂಡಿಗನಾಳ ಗೇಟ್ ಮೂಲಕವೇ ಹಾದು ಹೋಗಬೇಕಿದೆ. ದ್ವಿಚಕ್ರ ವಾಹನ ಸವಾರರು ಬಿಸಿಲಿನ ಬೇಗೆಯಿಂದ ಬಸವಳಿದು ಇಲ್ಲಿಗೆ ಬರುತ್ತಿದ್ದಂತೆಯೇ ಹಣ್ಣನ್ನು ತಿಂದು ದೇಹವನ್ನು ತಂಪು ಮಾಡಿಕೊಳ್ಳುತ್ತಾರೆ.
‘ನಮ್ಮದು ನಾಲ್ಕೆಕರೆ ಹೊಲವಿದೆ. ನೀರಿಲ್ಲ. ಮೂರು ಬಾರಿ ಬೆಳೆಯಿಟ್ಟರೂ ಮಳೆಯಿಲ್ಲದೆ ಹಾಳಾಯಿತು. ಅದಕ್ಕಾಗಿ ಜೀವನೋಪಾಯಕ್ಕಾಗಿ ರಸ್ತೆ ಬದಿಯಲ್ಲಿ ಹಣ್ಣುಗಳನ್ನು ಚಿಕ್ಕದಾಗಿ ಮಾರಲು ಪ್ರಾರಂಭಿಸಿದೆ. ಕಳೆದ ವಾರದಿಂದ ಬಿಸಿಲು ಹೆಚ್ಚಾಗಿದೆ. ಹಾಗಾಗಿ ಜನ ಹೆಚ್ಚೆಚ್ಚು ಬರುತ್ತಾರೆ. ವಿವಿಧ ಹಣ್ಣುಗಳನ್ನು ಕತ್ತರಿಸಿ ಮಿಶ್ರಣ ಮಾಡಿದ್ದಕ್ಕೆ ಬೇಡಿಕೆ ಹೆಚ್ಚು. ಬಿಸಿಲಿನಲ್ಲಿ ಬಂದು ಸಾಕಾಗಿತ್ತು, ಈಗ ಹಣ್ಣು ತಿಂದು ಜೀವ ತಂಪಾಯಿತು ಎಂದು ಜನರು ಹೇಳುತ್ತಾರೆ. ಜೊತೆಯಲ್ಲಿ ನನ್ನ ಹೊಟ್ಟೆ ಪಾಡೂ ಸಾಗುತ್ತದೆ’ ಎನ್ನುತ್ತಾರೆ ಹಣ್ಣು ಮಾರುವ ಹಂಡಿಗನಾಳದ ರಾಮಾಂಜಿನಪ್ಪ.
- Advertisement -
- Advertisement -
For Daily Updates
WhatsApp 'HI' to 7406303366
- Advertisement -
- Advertisement -