23.8 C
Sidlaghatta
Sunday, July 6, 2025

ಗ್ರಾಮದ ಸಾಕ್ಷರತೆಗೆ ಕಾರಣವಾದ ಸರ್ಕಾರಿ ಪ್ರಾಥಮಿಕ ಶಾಲೆ

- Advertisement -
- Advertisement -

ನಿಲುವರಾತಹಳ್ಳಿ ಶಿಡ್ಲಘಟ್ಟ ತಾಲ್ಲೂಕಿನ ಸಾದಲಿ ಪಂಚಾಯಿತಿಯ ಪುಟ್ಟ ಗ್ರಾಮ. ಜನಸಂಖ್ಯೆ ಕೇವಲ 250. ಇಲ್ಲಿನ ವಿಶೇಷವೆಂದರೆ ಹೊಸ ತಲೆಮಾರಿನವರು ಶೇ.95 ರಷ್ಟು ಮಂದಿ ಪಿಯುಸಿ ಪಾಸಾಗಿದ್ದಾರೆ. ಶೇ.100 ರಷ್ಟು ಎಸ್‌ಎಸ್‌ಎಲ್‌ಸಿ ಪೂರೈಸಿದ್ದಾರೆ. ಇಬ್ಬರು ಎಂಜಿನಿಯರಿಂಗ್‌ ಓದುತ್ತಿದ್ದರೆ, ಇಬ್ಬರು ಸ್ನಾತಕೋತ್ತರ ಪದವಿಯಲ್ಲಿದ್ದಾರೆ, ಕೆ.ಐ.ಎಸ್‌.ಎಫ್‌ ನಲ್ಲಿ ಒಬ್ಬರು, ಸಿ.ಐ.ಎಸ್‌.ಎಫ್‌ ನಲ್ಲಿ ಇಬ್ಬರಿದ್ದಾರೆ. ವಕೀಲರು, ಶಿಕ್ಷಕರು ಒಂದಿಬ್ಬರಿದ್ದಾರೆ. ಇದಕ್ಕೆ ಕಾರಣವಾಗಿರುವುದು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ.
‘ಸುಮಾರು 1994 ರಲ್ಲಿ ಈ ಗ್ರಾಮದಲ್ಲಿ ಸರ್ಕಾರಿ ಶಾಲೆಯನ್ನು ಪ್ರಾರಂಭಿಸಲಾಯಿತು. ಒಂದರಿಂದ ನಾಲ್ಕನೇ ತರಗತಿಯವರೆಗೆ ಶಾಲೆ ಪ್ರಾರಂಭವಾಯಿತು. ಮೊದಲು ರೆಡ್ಡಪ್ಪರೆಡ್ಡಿ ಶಿಕ್ಷಕರಾಗಿದ್ದರು. ಆಗ ಶಾಲೆಯ ಮುಂದೆ ಚರಂಡಿ ನೀರು ಹರಿದು ಹೋಗುತ್ತಿತ್ತು. ಶಾಲೆಗೆ ಹೋಗಲಿ ಇದ್ದದ್ದೇ ಒಂದು ಕಾಲುದಾರಿ. ಆ ದಾರಿಯ ಅಕ್ಕಪಕ್ಕ ತಿಪ್ಪೆ ಗುಂಡಿಗಳು, ಕಳ್ಳಿ, ಪೊದೆಗಳು ಆವರಿಸಿದ್ದವು’ ಎಂದು ಹಿಂದೆ ಇದ್ದ ಪರಿಸ್ಥಿತಿಯನ್ನು ನೆನಪಿಸಿಕೊಳ್ಳುತ್ತಾರೆ ಶಿಕ್ಷಕ ಪ್ರಭಾಕರ್‌.
ಶಿಕ್ಷಕರಾದ ಛಲಪತಿಗೌಡ ಮತ್ತು ಪ್ರಭಾಕರ್‌ 2002 ರಲ್ಲಿ ನಿಲುವರಾತಹಳ್ಳಿ ಶಾಲೆಗೆ ಬಂದು ಸುಮಾರು ಹತ್ತು ವರ್ಷಗಳಲ್ಲಿ ಶಾಲೆಯ ಸ್ವರೂಪವನ್ನೇ ಬದಲಿಸಿದರು. ಶಾಲೆಯ ಮುಂದಿದ್ದ ಗ್ರಾಮಠಾಣೆಗೆ ಸೇರಿದ 2 ಎಕರೆ ಸ್ಥಳವನ್ನು ಗ್ರಾಮಸ್ಥರ ಮತ್ತು ಪಂಚಾಯಿತಿಯವರ ಮನವೊಲಿಸಿ ಶಾಲೆಯ ಹೆಸರಿಗೆ ಮಾಡಿಸಿದರು. ಹಿಂದೆ ಹಳೆಯ ಊರಿದ್ದ ಆ ಸ್ಥಳದಲ್ಲಿ ನೆಲವು ಬಲು ಗಟ್ಟಿಯಾಗಿ, ಕಲ್ಲುಗಳಿಂದ ಕೂಡಿತ್ತು. ಅದನ್ನೆಲ್ಲಾ ಸ್ವಚ್ಛಗೊಳಿಸಿ, ಪ್ರತಿ ಮನೆಯವರೂ ಹತ್ತು ಗುಂಡಿ ತೆಗೆದು ಹತ್ತು ಗಿಡಗಳನ್ನು ನೆಡಲು ಪ್ರೇರೇಪಿಸಿದರು. ಅರಣ್ಯ ಇಲಾಖೆಯವರ ಸಹಕಾರದಿಂದ ಗಿಡ ಪಡೆದರು. ನೀರಿನ ಪೈಪ್‌ಲೈನ್‌, ಟ್ಯಾಂಕನ್ನು ಮಾಡಿಸಿಕೊಂಡರು. ಮನೆ ಮನೆಗೂ ಹೋಗಿ ಶಾಲೆಗೆ ಮಕ್ಕಳನ್ನು ಕರೆತಂದರು. ಈಗ ಶಾಲೆಯಲ್ಲಿ ಓದಿದ ಮಕ್ಕಳು ವಿದ್ಯಾವಂತರಾಗಿದ್ದರೆ, ಶಾಲಾ ಆವರಣದ ಗಿಡಗಳು ಇಪ್ಪತ್ತು ಅಡಿಗೂ ಹೆಚ್ಚು ಎತ್ತರವಾಗಿ ಬೆಳೆದಿವೆ. ಇವರ ಶ್ರಮದ ಫಲವಾಗಿ ಶಿಕ್ಷಕ ಛಲಪತಿಗೌಡ ಅವರಿಗೆ ಶಿಕ್ಷಣ ಇಲಾಖೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಿದೆ.
ಶಾಲಾ ಆವರಣದಲ್ಲಿ ಸಿಲ್ವರ್‌, ಅಶೋಕ, ಮಹಾಗನಿ, ಬಸವನಪಾದ, ಹೊಂಗೆ, ನೇರಳೆ, ಹಲಸು, ಟಕೋಮ, ಬೇವು, ಜತ್ರೋಪ, ಬಿಲ್ವಪತ್ರೆ, ಶ್ರೀಗಂಧ ಮೊದಲಾದ ಮರಗಳಿವೆ. ವಿಶೇಷವೆಂದರೆ ಈ ಶಾಲೆಗೆ ಕಾಂಪೋಂಡ್‌ ಇಲ್ಲ. ಆದರೂ ವನರಾಶಿಯನ್ನು ಮತ್ತು ಶಾಲಾ ಆವರಣವನ್ನು ಯಾರೂ ಹಾಳು ಮಾಡುವುದಿಲ್ಲ. ಶಾಲಾ ಆವರಣದಲ್ಲಿ ಗಣೇಶನ ಗುಡಿ, ನೇತಾಜಿ ಚಿಣ್ಣರ ವೇದಿಕೆ ಮತ್ತು ಧ್ವಜಸ್ತಂಭವನ್ನು ನಿರ್ಮಿಸಿಕೊಂಡಿದ್ದಾರೆ. ಪ್ರತಿ ದಿನ ಶಾಲೆಗೆ ಕನ್ನಡ ದಿನಪತ್ರಿಕೆಯನ್ನು ತರಿಸುತ್ತಾರೆ. ಮಕ್ಕಳು ವಿಶೇಷ ವಿಷಯಗಳನ್ನು ಕತ್ತರಿಸಿ ಅಂಟಿಸಿಡುವ ರೂಢಿಯಿದೆ.
‘ರಾಯಚೂರಿನ ಲಿಂಗಸೂರು ತಾಲ್ಲೂಕಿನ ಗೌಡೂರು ಕಡೆಯಿಂದ ಕೆಲ ಕುಟುಂಬಗಳು ಇಲ್ಲೇ ಪಕ್ಕದ ಎಸ್ಟೇಟಿಗೆ ಕೆಲಸಕ್ಕೆಂದು ಬಂದಿದ್ದರು. ಅವರು ಯಾರೂ ಶಾಲೆಯ ಮುಖವನ್ನೇ ನೋಡಿದವರಲ್ಲ. ಅವರ ಮನವೊಲಿಸಿ ಅವರ ಮಕ್ಕಳನ್ನು ಶಾಲೆಗೆ ಸೇರಿಸಿಕೊಂಡೆವು. ಅವರಲ್ಲಿ ಈಗ ಒಬ್ಬ ಸೋಮೇನಹಳ್ಳಿಯಲ್ಲಿ ಎಸ್‌ಎಸ್‌ಎಲ್‌ಸಿ ಓದುತ್ತಿದ್ದರೆ, ಒಬ್ಬಳು ಒಂಭತ್ತನೇ ತರಗತಿಯಲ್ಲಿದ್ದಾಳೆ. ಇಬ್ಬರು ಎಂಟನೇ ತರಗತಿಯಲ್ಲಿದ್ದಾರೆ. ಈಗಲೂ ಒಂದು ಗಂಡು ಮತ್ತು ಒಂದು ಹೆಣ್ಣು ಮಕ್ಕಳು ಒಂದನೇ ತರಗತಿಯಲ್ಲಿದ್ದಾರೆ. 16 ಮಕ್ಕಳು ನಮ್ಮಲ್ಲಿ ಈಗ ಇದ್ದಾರೆ. ಶಾಲೆಯ ಅಭಿವೃದ್ಧಿಗೆ ಗ್ರಾಮಸ್ಥರು ಸದಾ ನೆರವು ನೀಡುತ್ತಾರೆ. ಗಿಡ ಮತ್ತು ಮಕ್ಕಳಲ್ಲಿ ನಮಗೆ ವ್ಯತ್ಯಾಸವಿಲ್ಲ. ನಮ್ಮ ಆರೈಕೆಯಿಂದ ಅವರು ಮುಂದೆ ಇತರರಿಗೆ ನೆರಳಾಗುತ್ತಾರೆ’ ಎನ್ನುತ್ತಾರೆ ಶಿಕ್ಷಕ ಪ್ರಭಾಕರ್‌.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!