18.1 C
Sidlaghatta
Friday, December 26, 2025

ಚಳಿಗಾಲದಲ್ಲಿ ಬೇಕಿದೆ ದ್ರಾಕ್ಷಿ ಬೆಳೆಗೆ ರೋಗ ನಿಯಂತ್ರಣ

- Advertisement -
- Advertisement -

ತಾಲ್ಲೂಕಿನಲ್ಲಿ ಚಳಿಗಾಲ ಪ್ರಾರಂಭವಾಗಿದೆ. ಮುಂಜಾನೆ ಮಂಜು ಮುಸುಕಿರುತ್ತದೆ. ಡಿಸೆಂಬರ್ ತಿಂಗಳಿನಲ್ಲಿ ಆರಂಭವಾಗಿ ಫೆಬ್ರವರಿ ತಿಂಗಳವರೆಗೂ ಮುಂದುವರೆಯುವಂತಹ ಚಳಿಗಾಲದಲ್ಲಿ ವಾಣಿಜ್ಯ ಬೆಳೆಯಾಗಿರುವ ದ್ರಾಕ್ಷಿಗೆ ಬರುವಂತಹ ರೋಗಗಳನ್ನು ನಿಯಂತ್ರಣ ಮಾಡಿಕೊಳ್ಳುವ ಕಡೆಗೆ ರೈತರು ಹೆಚ್ಚು ಗಮನಹರಿಸಬೇಕು ಎಂದು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಮುನೇಗೌಡ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುವಂತಹ ಬೆಂಗಳೂರು ಬ್ಲೂ ದ್ರಾಕ್ಷಿಗೆ ಚಳಿಗಾಲದಲ್ಲಿ ‘ಡೌನಿ ಮಿಲ್ಡ್’ ರೋಗ ಬೀಳುತ್ತದೆ, ಕೆಲ ಕಡೆಗಳಲ್ಲಿ ರೈತರು ಹೆಚ್ಚಿನ ಲಾಭ ಮಾಡಿಕೊಳ್ಳುವ ದೃಷ್ಠಿಯಿಂದ ಬೀಜರಹಿತ ದ್ರಾಕ್ಷಿಯನ್ನು ಬೆಳೆಯುತ್ತಿದ್ದಾರೆ. ಅಂತಹ ದ್ರಾಕ್ಷಿಗೆ ‘ಪೌಡರಿ ಮಿಲ್ಡ್’ (ದ್ರಾಕ್ಷಿ ಎಲೆಗಳ ಹಿಂಭಾಗದಲ್ಲಿ ಪೌಡರ್ ಮಾದರಿಯಲ್ಲಿ ಬೀಳುವ ರೋಗ) ರೋಗ ಕಾಣಿಸಿಕೊಳ್ಳುತ್ತದೆ, ಇದು ಕ್ಲೋರೋಫಿಲ್ ಫಾರ್ಮೇಷನ್ ಗೆ ಹೊಡೆತವಾಗುವುದರಿಂದ ಇಳುವರಿಯಲ್ಲಿ ಏರುಪೇರು ಆಗಲಿದೆ. ಇದು ಫಂಗಸ್ ರೋಗವಾಗಿದ್ದು, ಸುಲಭವಾಗಿ ಹತೋಟಿಗೆ ತರಬಹುದಾಗಿದೆ.
ಮೋಡಮುಸುಕಿದ ವಾತಾವರಣ ಇದ್ದಾಗ, ಮಳೆ ಬರುವ ವಾತಾವರಣದಲ್ಲಿ ಸಿಡ್ ಲೆಸ್ ದ್ರಾಕ್ಷಿಯಲ್ಲಿ ಹೆಚ್ಚು ರೋಗ ಕಾಣಿಸಿಕೊಳ್ಳಲಿದೆ, ಮುಂದಿನ ಬೆಳೆಗಳಾಗಿ ರೈತರು ಎಲೆಗಳನ್ನು ಉಳಿಸಿಕೊಳ್ಳಬೇಕಾಗಿದೆ. ಸಸ್ಯ ಸಂರಕ್ಷಣಾ ಔಷಧಿಗಳನ್ನು ಸಿಂಪಡಣೆ ಮಾಡಿಕೊಳ್ಳಬೇಕಾಗುತ್ತದೆ. ಈ ಕುರಿತು ರೈತರಿಗೆ ಮಾಹಿತಿಗಳನ್ನು ಆಗಿದ್ದಾಗ್ಗೆ ಕೊಡುತ್ತಿದ್ದೇವೆ.
ಚಳಿಗಾಲದಲ್ಲಿ ದ್ರಾಕ್ಷಿಯನ್ನು ಕಾಪಾಡಿಕೊಳ್ಳುವುದು ಸವಾಲಿನ ಕೆಲಸವಾಗಿರುತ್ತದೆ. ಬಿಸಿಲು ಹೆಚ್ಚಾಗಿದ್ದಷ್ಟು ದ್ರಾಕ್ಷಿಗೆ ಉತ್ತಮವಾದ ವಾತಾವರಣವಾಗಿದೆ. ಬೆಳಗಾಂ, ಅಥಣಿ, ಬಿಜಾಪುರ, ಸಾಂಗ್ಲಿ, ಮಹಾರಾಷ್ಟ್ರ ಕಡೆಗಳಲ್ಲಿ ಸಿಡ್ ಲೆಸ್ ದ್ರಾಕ್ಷಿ ಹೆಚ್ಚು ಬೆಳೆಯುತ್ತಾರೆ. ಇಳುವರಿ ಉತ್ತಮವಾಗಿರುತ್ತದೆ. ಈ ಕಡೆಗೆ ಭೇಟಿ ಕೊಡುವ ರೈತರು ಸಿಡ್ ಲೆಸ್ ದ್ರಾಕ್ಷಿಗಳು ಬೆಳೆಯಲು ಮುಂದಾಗಿದ್ದಾರೆ.
ಒಮ್ಮೆ ಬೆಳೆ ನಾಟಿ ಮಾಡಿದರೆ 30 ರಿಂದ 40 ವರ್ಷಗಳು ಇರುತ್ತದೆ. ತಾಲ್ಲೂಕಿನ ಮೇಲೂರು, ಮಳ್ಳೂರು, ಮುತ್ತೂರು, ಅಪ್ಪೇಗೌಡನಹಳ್ಳಿ, ಚೌಡಸಂದ್ರೆ, ಕನ್ನಮಂಗಲ, ಹುಜಗೂರು ಸೇರಿದಂತೆ ಹಲವಾರು ಕಡೆ ಬೆಳೆಯುತ್ತಿದ್ದಾರೆ.
2001 ರಿಂದ ಶೇ 70 ರಷ್ಟು ಮಂದಿ ದಿಲ್ ಕುಶ್, ಅನಾಫಿಶ್ ತಳಿಗಳನ್ನು ಬಿಟ್ಟು ಬೀಜರಹಿತ ದ್ರಾಕ್ಷಿಯನ್ನು ಬೆಳೆಯಲು ಮುಂದಾಗಿದ್ದಾರೆ. ನಮ್ಮ ಹವಾಮಾನಕ್ಕೆ ವಿರುದ್ಧವಾಗಿದ್ದರೂ ಬೆಳೆಯಲು ಮುಂದಾಗಿದ್ದಾರೆ.
ಬಿಜಾಪುರ ಜಿಲ್ಲೆಯಲ್ಲಿ ಬೆಳೆಯುವ ದ್ರಾಕ್ಷಿಗೆ ಹೋಲಿಕೆ ಮಾಡಿದರೆ ನಮ್ಮ ಸುತ್ತಮುತ್ತಲಿನಲ್ಲಿ ಬೆಳೆಯುವ ದ್ರಾಕ್ಷಿಯ ಇಳುವರಿ ಕಡಿಮೆ, ಸಕ್ಕರೆ ಅಂಶ ಕಡಿಮೆಯಾಗುತ್ತದೆ. ಆದ್ದರಿಂದ ಇಲ್ಲಿನ ದ್ರಾಕ್ಷಿಗೆ ಸಿಗುವ ಬೆಲೆ ಕಡಿಮೆಯಾಗುತ್ತದೆ. ಈ ಕಾರಣದಿಂದ ಕೆಲ ರೈತರು ದ್ರಾಕ್ಷಿ ಬೆಳೆಗಳಿಂದ ವಿಮುಖವಾಗಿ ತರಕಾರಿ ಬೆಳೆಗಳು ಬೆಳೆಯಲು ಮುಂದಾಗಿದ್ದಾರೆ.
ಸಿಡ್ ಲೆಸ್ ದ್ರಾಕ್ಷಿಗೆ ಬೀಳುವ ರೋಗಗಳನ್ನು ತಡೆಗಟ್ಟಲು ವಿಪರೀತವಾದ ರಾಸಾಯನಿಕಗಳನ್ನು ಬಳಕೆ ಮಾಡುತ್ತಾರೆ. ಈಗೀಗ ಬಹಳಷ್ಟು ಮಂದಿಗೆ ಜಾಗೃತಿ ಮೂಡಿದೆ. ದ್ರಾಕ್ಷಿಯಲ್ಲಿ ವಿಷಕಾರಕ ವಸ್ತುಗಳನ್ನು ತೆಗೆಯಲು ಸಾಧ್ಯವಾಗುವುದಿಲ್ಲ. ಇದು ಆರೋಗ್ಯದ ಕೆಟ್ಟ ಪರಿಣಾಮ ಬೀರುವುದರಲ್ಲಿ ಅನುಮಾನವಿಲ್ಲ. ಇದರಿಂದ ನಮ್ಮ ಸುತ್ತಮುತ್ತಲಿನಲ್ಲಿ ಬೆಳೆಯುವ ದ್ರಾಕ್ಷಿಗೆ ಬೇಡಿಕೆ ಕಡಿಮೆಯಾಗುತ್ತಿದೆ.
ವಿಜಯಪುರ (ಬಿಜಾಪುರ) ದ ಕಡೆಗಳಲ್ಲಿ ಬೇಸಿಗೆಕಾಲದಲ್ಲಿ ಒಂದು ಪ್ರೂನಿಂಗ್, ಚಳಿಗಾಲದಲ್ಲಿ ಒಂದು ಪ್ರೂನಿಂಗ್ ಮಾಡ್ತಾರೆ, ಆದ್ದರಿಂದ ಉತ್ತಮ ಇಳುವರಿ ಪಡೆಯುತ್ತಾರೆ.
ನಮ್ಮ ರೈತರು ಚಳಿಗಾಲದ ಅಕ್ಟೋಬರ್ ಮೊದಲ ವಾರದ ಒಳಗೆ ಪ್ರೂನಿಂಗ್ ಮುಗಿಸಿಕೊಳ್ಳುವಂತೆ ಜಾಗೃತಿ ಮೂಡಿಸಿದರೂ ರೈತರು ಮುಂದೂಡುತ್ತಾರೆ. ಬೆಂಗಳೂರು ಬ್ಲೂ, ದಿಲ್ ಕುಶ್ ಗೆ ಸಮಸ್ಯೆಯಾಗುವುದಿಲ್ಲ. ಕೆಲವು ರೈತರು ಈಗ ಪ್ರೂನಿಂಗ್ ಮಾಡುತ್ತಿದ್ದಾರೆ. ಫೆಬ್ರವರಿಯಲ್ಲಿ ಬೆಳೆ ತೆಗೆದರೆ ಉತ್ತಮ ಇಳುವರಿ ಮತ್ತು ಬೆಲೆ ಪಡೆಯಲು ಸಾಧ್ಯವಾಗುತ್ತದೆ. ಏಪ್ರೀಲ್, ಮೇ ತಿಂಗಳಿನಲ್ಲಿ ಬೆಳೆಗಳು ಬರುವಂತೆ ರೈತರು ನೋಡಿಕೊಳ್ಳುತ್ತಾರೆ ಈ ವೇಳೆ ಅಕಾಲಿಕ ಮಳೆಗಳಿಂದ ಲಕ್ಷಾಂತರ ರೂಗಳ ಬೆಳೆಗಳು ಹಾಳಾಗುತ್ತಿವೆ. ಬೆಳೆಗಳು ನಷ್ಟವಾದಾಗ ಪರಿಹಾರ ರೈತರಿಗೆ ಸಿಗುವುದಿಲ್ಲ, ವಿಮೆ ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ.
ಆದ್ದರಿಂದ ರೈತರು ಈ ಬಗ್ಗೆ ಜಾಗೃತರಾಗಬೇಕು. ಇಲಾಖೆಯಿಂದ ನೀಡುವಂತಹ ನಿರ್ದೇಶನಗಳನ್ನು ಪಾಲನೆ ಮಾಡಬೇಕು ಎಂದು ಮನವಿ ಮಾಡಿದರು.

For Daily Updates

WhatsApp 'HI' to 7406303366

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!