21.5 C
Sidlaghatta
Thursday, July 31, 2025

ನೂತನ ನ್ಯಾಯಾಲಯ ಸಂಕೀರ್ಣ ಉದ್ಘಾಟನೆ

- Advertisement -
- Advertisement -

ನ್ಯಾಯಾಂಗ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಕಾರ್ಯವನ್ನು ಮಾಡುತ್ತಿದೆ. ನ್ಯಾಯವಾದಿಗಳು ಸಾಮಾನ್ಯ ಜನರಿಗೆ ನ್ಯಾಯವನ್ನು ತ್ವರಿತವಾಗಿ ಒದಗಿಸಿ ಅವರ ಗೌರವವನ್ನು ಹೊಂದುವಂತೆ ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರಾದ ವಿ.ಗೋಪಾಲಗೌಡ ಅವರು ತಿಳಿಸಿದರು.
ನಗರದ ಹೊರವಲಯದ ದಿಬ್ಬೂರಹಳ್ಳಿ ರಸ್ತೆಯಲ್ಲಿ 9 ಕೋಟಿ 43 ಲಕ್ಷ ರೂಗಳ ವೆಚ್ಚದಲ್ಲಿ 4 ಎಕರೆ 35 ಗುಂಟೆ ಸ್ಥಳದಲ್ಲಿ ನಿರ್ಮಾಣವಾಗಿರುವ ನೂತನ ನ್ಯಾಯಾಲಯ ಸಂಕೀರ್ಣವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.
7sep2ಭವ್ಯವಾದ ನ್ಯಾಯಾಲಯ ಸಂಕೀರ್ಣವು ಜನರ ಸ್ವತ್ತು. ಇದನ್ನು ಸ್ವಚ್ಛವಾಗಿ, ಸುಂದರವಾಗಿ, ತ್ವರಿತವಾಗಿ ನ್ಯಾಯ ಸಿಗುವ ತಾಣವಾಗಿಸುವ ಕೆಲಸವಾಗಬೇಕು. ನ್ಯಾಯವಾದಿಗಳು ತಂತ್ರಜ್ಞಾನವನ್ನು ಬಳಸಿಕೊಳ್ಳಿ, ಹೆಚ್ಚೆಚ್ಚು ಓದಿ ಬಡವರಿಗೆ ನ್ಯಾಯ ಒದಗಿಸಿ, ಸಮಾಜಕ್ಕೆ ನಿಮ್ಮ ಸೇವೆ ಸಿಗುವಂತಾಗಲಿ. ಹೆಣ್ಣುಮಕ್ಕಳು, ಕಾರ್ಮಿಕರು, ಅವಿದ್ಯಾವಂತರು, ರೈತರು, ಬಡವರು ನ್ಯಾಯವನ್ನರಸಿ ಬರುವ ಸ್ಥಳವಿದು. ಶೋಷಣೆಗೊಳಗಾದವರಿಗೆ ಸಾಂತ್ವನ ಸಿಗಲಿ, ಅನ್ಯಾಯಕ್ಕೊಳಗಾದವರಿಗೆ ನ್ಯಾಯ ಸಿಗಲಿ ಎಂದು ತಿಳಿಸಿದರು.
ಸಂಸದ ಕೆ.ಎಚ್.ಮುನಿಯಪ್ಪ ಮಾತನಾಡಿ, ನೂತನ ನ್ಯಾಯಾಲಯ ಕಟ್ಟಡದ ಗ್ರಂಥಾಲಯಕ್ಕೆ 10 ಲಕ್ಷ ರೂಗಳನ್ನು ಹಾಗೂ ನೀರಿನ ಪೈಪ್ಲೈನ್ಗಾಗಿ 5 ಲಕ್ಷ ರೂಗಳನ್ನು ತಮ್ಮ ಅನುದಾನದಿಂದ ನೀಡುವುದಾಗಿ ಘೋಷಿಸಿದರು.
ರಾಜ್ಯ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾದ ಸುಬ್ರೊ ಕಮಲ್ ಮುಖರ್ಜಿ, ರಾಜ್ಯ ಉಚ್ಛ ನ್ಯಾಯಾಲಯದ ನ್ಯಾಯಾಧೀಶರುಗಳಾದ ಎನ್.ಕುಮಾರ್, ಎನ್.ಕೆ.ಪಾಟಿಲ್, ರಾಘವೇಂದ್ರ ಎಸ್.ಚೌಹಾಣ್, ಜಿಲ್ಲಾ ಸತ್ರ ನ್ಯಾಯಾಧೀಶರಾದ ಎ.ಎಸ್.ಬೆಳ್ಳುಂಕೆ, ಸಿವಿಲ್ ನ್ಯಾಯಾಧಿಶರಾದ ಅನಿತಾ, ಶಾಸಕ ಎಂ.ರಾಜಣ್ಣ, ಜಿಲ್ಲಾಧಿಕಾರಿ ಡಾ.ವೆಂಕಟೇಶ್, ಪೊಲೀಸ್ ಎಸ್.ಪಿ. ದಿವ್ಯಾ ಗೋಪಿನಾಥ್, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕಾವೇರಿ, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎಂ.ಪಾಪಿರೆಡ್ಡಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ನೀವು(ಜನಪ್ರತಿನಿಧಿಗಳು) ಕೆಲಸ ಮಾಡದಿದ್ದಲ್ಲಿ ನಾವು(ನ್ಯಾಯಾಧೀಶರು) ಮಾಡಿಸುತ್ತೇವೆ
‘ಅವರು (ನ್ಯಾಯಾಧೀಶರು) ಹೇಳುತ್ತಾರಷ್ಟೆ, ಆದರೆ ಕಾರ್ಯರೂಪಕ್ಕೆ ತರುವವರು ನಾವು(ಜನಪ್ರತಿನಿಧಿಗಳು) ಎಂದು ಸಂಸದ ಕೆ.ಎಚ್.ಮುನಿಯಪ್ಪ ಬೃಹತ್ ನ್ಯಾಯಾಲಯ ಸಂಕೀರ್ಣದ ನಿರ್ಮಾಣದ ಕುರಿತಂತೆ ಹಾಗೂ ಅನುದಾನ ನೀಡುವ ಬಗ್ಗೆ ಹೇಳಿದರು. ಅದಕ್ಕೆ ಉತ್ತರಿಸಿದ ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರಾದ ವಿ.ಗೋಪಾಲಗೌಡ ಅವರು, ‘ನೀವ್ಯಾರು? ನೀವು ಜನಸೇವಕರು. ಯಾರ ಹಣ ನೀವು ನೀಡುತ್ತೀರಿ? ಅದು ಜನರ ತೆರಿಗೆ ಹಣ ಸ್ವಾಮಿ. ಸಂವಿಧಾನಾತ್ಮಕವಾಗಿ ಜನಸೇವೆ ಮಾಡುವುದು ನಿಮ್ಮ ಆದ್ಯ ಕರ್ತವ್ಯ. ನೀವು ಯಾರಿಗೂ ಧರ್ಮ ಮಾಡುತ್ತಿಲ್ಲ. ನೀವು ಕೆಲಸ ಮಾಡದಿದ್ದಲ್ಲಿ ನಾವು(ನ್ಯಾಯಾಧೀಶರು) ಮಾಡಿಸುತ್ತೇವೆ’ ಎಂದು ಹೇಳಿದರು.
ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಾಕಿ
‘ನ್ಯಾಯವಾದಿಗಳೇ ಏನು ಮಾಡುತ್ತಿದ್ದೀರಿ? ಕೈಗಾರಿಕೆಗಳಿಗೆ 16 ಗಂಟೆ ವಿದ್ಯುತ್, ರೈತರಿಗೆ 2 ಗಂಟೆ ವಿದ್ಯುತ್ ನೀಡುತ್ತಿರುವುದು ನಿಮ್ಮ ಗಮನಕ್ಕೆ ಬಂದಿಲ್ಲವೇ. ಸಮಪಾಲು, ಸಮಬಾಳು ಎಂಬುದಿಲ್ಲಿ ಅಕ್ಷರಶಃ ಇಲ್ಲವಾಗಿದೆ. ನೀವು ಕನಿಷ್ಠ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸರ್ಕಾರದ ವಿರುದ್ಧ ಏಕೆ ಹಾಕಿಲ್ಲ’ ಎಂದು ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರಾದ ವಿ.ಗೋಪಾಲಗೌಡ ಅವರು ನ್ಯಾಯವಾದಿಗಳಿಗೆ ಸಲಹೆ ನೀಡಿದರು.
ವಿದ್ಯುತ್ ಉಚಿತವಾಗಿ ರೈತರಿಗೆ ನೀಡಬೇಡಿ. ಹಣ ಪಡೆಯಿರಿ. ಆದರೆ ಸಮರ್ಪಕ ವಿದ್ಯುತ್ ನೀಡಿ. ಮಳೆಯಿಲ್ಲದಿದ್ದರೆ, ಸೋಲಾರ್ನಿಂದ ಗಾಳಿಯಿಂದ ವಿದ್ಯುತ್ ತಯಾರಿಸಿ. ಎಲ್ಲರಿಗೂ ಸಮಾನತೆಯಿರಲಿ ಎಂದು ಅವರು ಹೇಳಿದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!