21.1 C
Sidlaghatta
Thursday, July 31, 2025

ಮಳೆಯಿಲ್ಲದಿದ್ದರೂ ಉತ್ತಮ ರಾಗಿ ಬೆಳೆ; ರೈತನ ಸಹಾಯಕ್ಕೆ ಬಂದ ಗುಣಿ ಪದ್ಧತಿ

- Advertisement -
- Advertisement -

ರಾಗಿ ಬೆಳೆಯನ್ನು ಗುಣಿ ಪದ್ಧತಿ ಅಳವಡಿಸಿಕೊಂಡು ಅತಿ ಕಡಿಮೆ ಖರ್ಚಿನಲ್ಲಿ ಹೆಚ್ಚು ಇಳುವರಿ ಪಡೆಯುವ ಕೌಶಲವನ್ನು ತಾಲ್ಲೂಕಿನ ಬೋದಗೂರಿನ ಸಾವಯವ ಕೃಷಿಕ ವೆಂಕಟಸ್ವಾಮಿರೆಡ್ಡಿ ಕಂಡುಕೊಂಡಿದ್ದಾರೆ.
ತಾಲ್ಲೂಕಿನ ಬೋದಗೂರಿನ ಪ್ರಗತಿ ಪರ ರೈತ ವೆಂಕಟಸ್ವಾಮಿರೆಡ್ಡಿ ಕಳೆದ ಕೆಲವು ವರ್ಷಗಳಿಂದ ರಾಗಿ ಬೆಳೆಯನ್ನು ಗುಣಿ ಪದ್ಧತಿ ಅಳವಡಿಸಿಕೊಂಡು ಬೆಳೆಯುತ್ತಿದ್ದು, ಕಡಿಮೆ ವಿಸ್ತೀರ್ಣದ ಭೂಮಿಯಲ್ಲಿ ಅಲ್ಪ ವೆಚ್ಚದಿಂದ ಹೆಚ್ಚು ಇಳುವರಿ ಪಡೆಯುತ್ತಿದ್ದಾರೆ. ಅದನ್ನು ಗಮನಿಸಿದ ಸುತ್ತ-ಮುತ್ತಲ ಗ್ರಾಮಗಳ ರೈತರು ಈ ಬಾರಿ ಗುಣಿ ಪದ್ಧತಿಯನ್ನು ಅಳವಡಿಸಿಕೊಂಡು ಹೆಚ್ಚು ಇಳುವರಿ ಪಡೆಯಲು ಮುಂದಾಗಿದ್ದಾರೆ.
ತಾಲ್ಲೂಕಿನ ರೈತರು ತಮ್ಮ ಕೃಷಿ ಚಟುವಟಿಕೆಗಳಿಗೆ ಮಳೆ ಮತ್ತು ಕೊಳವೆ ಬಾವಿಗಳ ಮೇಲೆ ಆಧಾರವಾಗಿದ್ದಾರೆ. ಇತ್ತೀಚೆಗೆ ರಾಜ್ಯದಾದ್ಯಂತ ಉತ್ತಮ ಮಳೆಯಾಗುತ್ತಿದ್ದರೂ ಬಯಲು ಸೀಮೆಯಲ್ಲಿ ಮಳೆ ಪ್ರಮಾಣ ಕಡಿಮೆಯಾಗುತ್ತಿರುವುದರಿಂದ ರೈತರು ಕಂಗಾಲಾಗಿದ್ದಾರೆ. ಈ ವೇಳೆಗಾಗಲೇ ರಾಗಿ ನಾಟಿ ಮಾಡಬೇಕಾಗಿದ್ದು, ಇಂಥ ಸಂದರ್ಭದಲ್ಲಿ ಗುಣಿಪದ್ಧತಿಯು ರೈತರಲ್ಲಿ ಆಶಾವಾದ ಮೂಡಿಸಿದೆ. ಮಳೆಯಾಶ್ರಿತವಾಗಿಯೇ ಗುಣಿ ಪದ್ಧತಿಯಲ್ಲಿ ರಾಗಿಯನ್ನು ರೈತ ವೆಂಕಟಸ್ವಾಮಿರೆಡ್ಡಿ ಅವರು ಬೆಳೆದಿದ್ದು, ಮಳೆ ಕೈಕೊಟ್ಟರೂ ನಷ್ಟವನ್ನು ಅನುಭವಿಸದಿರುವುದು ಇತರರಿಗೆ ಪ್ರೇರಣೆಯಾಗಿದೆ.

ಕಾಳು ತುಂಬಿರುವ ತೆನೆ
ಕಾಳು ತುಂಬಿರುವ ತೆನೆ

‘ಸಾಮಾನ್ಯವಾಗಿ ಒಂದು ಎಕರೆ ಭೂಮಿಗೆ 10 ರಿಂದ 12 ಕೆ.ಜಿ ರಾಗಿ ಬಿತ್ತನೆ ಮಾಡಲಾಗುತ್ತದೆ. ಆದರೆ ಗುಣಿ ಪದ್ಧತಿಯನ್ನು ಅಳವಡಿಸಿಕೊಂಡು 30 ಗ್ರಾಂ ರಾಗಿಯನ್ನು ಒಂದು ರಾತ್ರಿ ನೆನೆಹಾಕಿ ಬೆಳಿಗ್ಗೆ ನರ್ಸರಿಗೆ ನೀಡಬೇಕು. ನಂತರ ಒಂದು ಕ್ರೇಟ್‌ನಲ್ಲಿ ರಾಗಿ ಕಾಳುಗಳನ್ನು ಬಿತ್ತನೆ ಮಾಡಿ ಪೈರನ್ನು ಬೆಳೆಸಲಾಗುತ್ತದೆ. 20ದಿನ ಪೈರನ್ನು ಪೋಷಿಸಿ ನಂತರ ನಾಟಿ ಮಾಡಲಾಗುತ್ತದೆ. ಒಂದು ಗ್ರಾಂ ರಾಗಿಯಲ್ಲಿ 400 ಕಾಳುಗಳಿರುತ್ತವೆ. ಮುಕ್ಕಾಲು ಎಕರೆಯಲ್ಲಿ 2 ಅಡಿಗೆ 2 ಅಡಿ ಅಂತರದಲ್ಲಿ ಅರ್ಧ ಅಡಿ ಆಳ ಗುಣಿ ತೆಗೆದು ಕೊಟ್ಟಿಗೆ ಗೊಬ್ಬರವನ್ನಷ್ಟೆ ಹಾಕಿ ಎಂಟು ಸಾವಿರ ಪೈರನ್ನು ನಾಟಿ ಮಾಡಿಸಿದೆ’ ಎನ್ನುತ್ತಾರೆ ರೈತ ವೆಂಕಟಸ್ವಾಮಿರೆಡ್ಡಿ.
‘ಪೈರನ್ನು ನಾಟಿ ಮಾಡಿದ 40 ದಿನಗಳ ನಂತರ ಅದನ್ನು ತುಳಿದು ಬಗ್ಗಿಸುವುದರಿಂದ ಒಂದು ಪೈರು ಸುಮಾರು 20 ರಿಂದ 30 ತೆಂಡೆ ಹೊಡೆಯುತ್ತದೆ. ತೆನೆಗಳ ಸಂಖ್ಯೆ ಏರಿಕೆಯಾಗಿ ಇಳುವರಿ ಹೆಚ್ಚಾಗುತ್ತದೆ. ಸಾಮಾನ್ಯವಾಗಿ ಒಂದು ಎಕರೆ ಭೂಮಿಯಲ್ಲಿ ಬಿತ್ತನೆ ಮಾಡಿದ ರಾಗಿಯಿಂದ 10 ರಿಂದ 15 ಕ್ವಿಂಟಲ್ ಇಳುವರಿ ಪಡೆದರೆ, ಗುಣಿ ಪದ್ಧತಿ ಅಳವಡಿಸಿ ಬೆಳೆದ ರಾಗಿಯಲ್ಲಿ ಒಂದು ಎಕರೆ ಭೂಮಿಗೆ 25 ರಿಂದ 30 ಕ್ವಿಂಟಲ್ ರಾಗಿ ಸಿಗಲಿದೆ. ನಮಗೆ ನಾಟಿ ಮಾಡಿದಂದಿನಿಂದ ಮಳೆಯೇ ಬರಲಿಲ್ಲ. ಮೂರು ಬಾರಿ ಟ್ಯಾಂಕರಿನಲ್ಲಿ ನೀರು ಹಾಕಿಸಿದೆ. ಈಗ ಸುಮಾರು 7 ಕ್ವಿಂಟಲ್ ಇಳುವರಿ ಬರಲಿದೆ. ಇಷ್ಟಾದರೂ ರೈತರಿಗೆ ನಷ್ಟವಾಗುವುದಿಲ್ಲ. ರೈತರು ಗುಣಿ ಪದ್ಧತಿಯನ್ನು ಅಳವಡಿಸಿಕೊಂಡು ರಾಗಿ ಬೆಳೆಯುವುದರಿಂದ ಪೋಷಕಾಂಶಗಳು ಅಗತ್ಯಕ್ಕೆ ತಕ್ಕಂತೆ ಸಮರ್ಪಕವಾಗಿ ಸಿಗುತ್ತವೆ. ನೀರು ಕಡಿಮೆಯಾದರೂ ಪೈರುಗಳ ಶಕ್ತಿಗೆ ಕುಂದುಂಟಾಗುವುದಿಲ್ಲ. ಅದರಿಂದ ಹೆಚ್ಚು ಇಳುವರಿ ಸಿಗಲಿದೆ’ ಎಂದು ಅವರು ತಮ್ಮ ಅನುಭವವನ್ನು ತಿಳಿಸಿದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!