24.1 C
Sidlaghatta
Saturday, December 27, 2025
Home Blog Page 1014

ಸಾರಿಗೆ ವ್ಯವಸ್ಥೆಗೆ ಒತ್ತಾಯಿಸಿ ಪ್ರತಿಭಟನೆ

0

ಡಿ.ವೈ.ಎಫ್.ಐ. ಸಂಘಟನೆಯ ಕಾರ್ಯಕರ್ತರು ತಾಲ್ಲೂಕಿನ ಗಂಜಿಗುಂಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಂಗಹಳ್ಳಿ ಗ್ರಾಮದ ಬಳಿಯಲ್ಲಿ ಚಿಂತಾಮಣಿ ಬಾಗೇಪಲ್ಲಿ ಕಡೆಗಳಿಂದ ಬರುತ್ತಿದ್ದ ಸಾರಿಗೆ ಬಸ್ಸುಗಳನ್ನು ತಡೆದು ಬುಧವಾರ ಪ್ರತಿಭಟನೆ ನಡೆಸಿದರು.
ಕಳೆದ ಮೂರು ವರ್ಷಗಳಿಂದ ಪ್ರತಿಭಟನೆಗಳನ್ನು ಮಾಡುತ್ತಿದ್ದರೂ ಸಹ ತಾಲ್ಲೂಕಿನ ಗಂಗಹಳ್ಳಿ, ಬಾಳೇಗೌಡನಹಳ್ಳಿ, ಕಾಚಹಳ್ಳಿ, ಸೇರಿದಂತೆ ಹಲವು ಹಳ್ಳಿಗಳಿಗೆ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಲು ಇಲಾಖೆಯ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಆರೋಪಿಸಿದರು.
ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಈ ಭಾಗದಿಂದ ಶಿಡ್ಲಘಟ್ಟ, ಚಿಂತಾಮಣಿ, ಕಡೆಗಳಿಗೆ ಶಾಲಾ ಕಾಲೇಜುಗಳಿಗೆ ವಿಧ್ಯಾಭ್ಯಾಸಕ್ಕಾಗಿ ಹೋಗುವಂತಹ ವಿಧ್ಯಾರ್ಥಿಗಳು ಶಾಲೆಗಳನ್ನು ಬಿಟ್ಟು ಕೂಲಿ ಕೆಲಸಗಳಿಗೆ ಹೋಗುತ್ತಿದ್ದಾರೆ. ಇದಕ್ಕೆಲ್ಲಾ ಇಲಾಖೆಯ ಅಧಿಕಾರಿಗಳೆ ಕಾರಣ. ಈ ಭಾಗದ ಎಲ್ಲಾ ಹಳ್ಳಿಗಳಿಗೂ ಸಾರಿಗೆ ವ್ಯವಸ್ಥೆ ಕಲ್ಪಿಸುವವರೆಗೂ ಬಸ್ಸುಗಳನ್ನು ಬಿಡುವುದಿಲ್ಲ ಎಂದು ಪ್ರತಿಭಟನೆ ನಡೆಸಿದರು.
ಪ್ರತಿಭಟನಾ ಸ್ಥಳಕ್ಕೆ ಚಿಕ್ಕಬಳ್ಳಾಪುರ ಸಾರಿಗೆ ಇಲಾಖೆಯ ವಿಭಾಗೀಯ ನಿಯಂತ್ರಣಾಧಿಕಾರಿ ಶಿವಪ್ರಸಾದ್ ಬೇಟಿ ನೀಡಿ ಪ್ರತಿಭಟನಾ ನಿರತರೊಂದಿಗೆ ಚರ್ಚೆ ನಡೆಸಿದ ನಂತರ ಮುಂದಿನ ಹದಿನೈದು ದಿನಗಳಲ್ಲಿ ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆಯನ್ನು ನೀಡಿದ ಮೇಲೆ ಪ್ರತಿಭಟನೆ ಹಿಂಪಡೆಯಲಾಯಿತು.
ಡಿ.ವೈ.ಎಫ್.ಐ. ಸಂಘಟನೆಯ ಪದಾಧಿಕಾರಿಗಳಾದ ಕುಂದಲಗುರ್ಕಿ ಮುನೀಂದ್ರ, ಲಕ್ಷ್ಮೀದೇವಮ್ಮ, ವೆಂಕಟೇಶ್, ಸದಾನಂದ, ರಾಜೇಂದ್ರ, ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಗಣಿತ ಮತ್ತು ವಿಜ್ಞಾನ ಶಿಕ್ಷಕರಿಗೆ ಕಾರ್ಯಾಗಾರ

0

ಪಟ್ಟಣದ ಸರಸ್ವತಿ ಕಾನ್ವೆಂಟ್ ಪ್ರೌಢಶಾಲೆಯಲ್ಲಿ ಬುಧವಾರ ತಾಲ್ಲೂಕಿನ ಎಲ್ಲಾ ಪ್ರೌಢಶಾಲೆಗಳ ಗಣಿತ ಮತ್ತು ವಿಜ್ಞಾನ ಶಿಕ್ಷಕರಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಸಹಯೋಗದಲ್ಲಿ ನುರಿತ ವಿಷಯ ತಜ್ಞರಿಂದ ಎರಡು ದಿನಗಳ ವಿಶೇಷ ಕಲಿಕಾ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.
ಈ ವಿಶೇಷ ಕಾರ್ಯಾಗಾರದ ಉದ್ಘಾಟನೆ ನೆರವೇರಿಸಿದ ಕ್ಷೇತ್ರಶಿಕ್ಷಣಾಧಿಕಾರಿ ಎಸ್. ರಘುನಾಥರೆಡ್ಡಿರವರು ಎಲ್ಲಾ ಶಿಕ್ಷಕರೂ ತಮ್ಮ ಜವಾಬ್ದಾರಿಗಳನ್ನು ಅರಿತುಕೊಂಡು ತಮ್ಮ ಕರ್ತವ್ಯಗಳಿಗೆ ಯಾವುದೇ ರೀತಿಯಲ್ಲಿಯೂ ಚ್ಯುತಿತರದೆ ಮಕ್ಕಳ ಭವಿಷ್ಯವನ್ನು ರೂಪಿಸುವುದರಲ್ಲಿ ಭಾಗವಹಿಸಬೇಕೆಂದು ಕರೆ ನೀಡಿದರು. ಕಾರ್ಯಾಗಾರದ ಸದುಪಯೋಗಪಡೆದುಕೊಂಡು ವಿದ್ಯಾರ್ಥಿಗಳ ಜ್ಞಾನವಿಕಸನಗೊಳಿಸುವುದರಲ್ಲಿ ಬಳಸಿಕೊಳ್ಳಬೇಕೆಂದು ತಿಳಿಸಿದರು.
ವಿಷಯ ಪರಿವೀಕ್ಷಕರಾದ ಉಸ್ಮಾನ್ ಸಾಬ್, ಸರಸ್ವತಿ ವಿದ್ಯಾಸಂಸ್ಥೆಯ ಅಧ್ಯಕ್ಷ ಎನ್. ವೆಂಕಟಸುಬ್ಬರಾವ್, ಕಾರ್ಯದರ್ಶಿ ಎನ್. ಶ್ರೀಕಾಂತ್, ಮುಖ್ಯಶಿಕ್ಷಕಿ ವಿ. ಸೀತಾಲಕ್ಷ್ಮಿ, ವಿಷಯ ಪರಿಣಿತರಾದ ಪ್ರೊ. ವೇಣುಗೋಪಾಲ್, ಪ್ರೊ. ಅರುಣಾಚಲಂ, ಪ್ರೊ. ಅಶ್ರಫ್ ಅಲಿ, ಪ್ರೊ. ಚಂದ್ರಿಕಾ, ವಿಜ್ಞಾನ ಶಿಕ್ಷಕ ಬಾಲಗಂಗಾಧರ ತಿಲಕ್‌, ಸುಂದರನ್‌, ಶಾಮಣ್ಣ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಸುಮಧುರವಿಲ್ಲದ ಗಾಯಕರ ಬದುಕು

0

ವಿಶಿಷ್ಟ ಧ್ವನಿಯ ಹಿನ್ನೆಲೆಗಾಯಕರಾಗಿ ಚಲನಚಿತ್ರಲೋಕದಲ್ಲಿ ಅಜರಾಮರರಾದ ಘಂಟಸಾಲ ಅವರನ್ನು ಅನುಕರಿಸುವವರು ವಿರಳ. ಆದರೆ ಪಟ್ಟಣದಲ್ಲಿ ಮಂಗಳವಾರ ಹಾರ್ಮೋನಿಯಂ ನುಡಿಸುತ್ತಾ ಘಂಟಸಾಲ ಅವರ ಮಧುರ ಗೀತೆಗಳನ್ನು ಹಾಡುತ್ತಾ ಸಾಗಿದ್ದ ವ್ಯಕ್ತಿಯೊಬ್ಬರು ಜನರ ಆಕರ್ಷಣೆಯ ಕೇಂದ್ರವಾಗಿದ್ದರು.
ಮಧುರ ಗೀತೆಗಳ ಸೊಲ್ಲನ್ನು ತಿಳಿದಿದ್ದ ಹಿರಿಯರು ಆ ದನಿಗೆ ಕಿವಿಯಾಗಿ ಇದ್ದ ಕೆಲಸವನ್ನು ಬಿಟ್ಟು ಅವರ ಹತ್ತಿರ ನಿಂತರೆ, ಯುವಕರು ಕೂಡ ಸುಸ್ವರಕ್ಕೆ ಮಾರುಹೋಗಿ ಇವರ ಬಳಿ ಜಮಾಯಿಸಿದ್ದರು.
ಅನಂತಪುರ ಜಿಲ್ಲೆಯ ಕಲ್ಯಾಣದುರ್ಗ ಮಂಡಲ್‌ನ ಕಮ್ಮದೂರಿನ ವೆಂಕಟೇಶ್ವರ ತನ್ನ ಪತ್ನಿ ಲಕ್ಷ್ಮೀದೇವಿಯೊಂದಿಗೆ ತನ್ನ ಹಾಡುವ ಕಲೆಯಿಂದ ಭಿಕ್ಷಾಟನೆ ನಡೆಸುತ್ತಾ ಊರೂರು ಸುತ್ತುತ್ತಾ ಶಿಡ್ಲಘಟ್ಟಕ್ಕೆ ಬಂದಿದ್ದಾರೆ. ಗಂಡನೊಂದಿಗೆ ಹೆಂಡತಿಯೂ ಸುಸ್ವರದಿಂದ ಗತಕಾಲದ ಸುಂದರ ಗೀತೆಗಳನ್ನು ಹಾಡುತ್ತಾ ಘಂಟಸಾಲರನ್ನು ನೆನಪಿಸುತ್ತಿದ್ದಾರೆ. ಪಟ್ಟಣದ ಜನರು ಘಂಟಸಾಲ ಅವರ ಕಂಚು ಕಂಠದ ಎತ್ತರದ ಧ್ವನಿಯ ಮಾಧುರ್ಯದ ಹಾಡುಗಳನ್ನು ಈಗ ಪುನಃ ಸವಿಯುವಂತಾಗಿದೆ.
ಸತ್ಯ ಹರಿಶ್ಚಂದ್ರ ಚಿತ್ರದ ಕ್ಲಿಷ್ಟವಾದ ಹಾಡೆಂದೇ ಪರಿಗಣಿತವಾದ ‘ಹೇ ಚಂದ್ರಚೂಡ ಮದನಾಂತಕ ಶೂಲಪಾಣಿ, ಕಾಣೋ ಗಿರೀಶ ಗಿರಿಜೇಶ ಮಹೇಶ ಶಂಭೋ, ಹೇ ಪಾರ್ವತೀ ಹೃದಯ ವಲ್ಲಭ ಚಂದ್ರಮೌಳೆ..’, ಗೃಹಲಕ್ಷ್ಮಿಯಾದ ಮನೆಯೊಡತಿಯ ಕುರಿತು ಹಾಡಿರುವ ದೇವತಾ ಚಿತ್ರದ ‘ಇಲ್ಲಾಲೇ ಈ ಜಗತಿಕಿ ಜೀವನ ಜ್ಯೋತಿ’, ಜೀವನದುದ್ದಕ್ಕೂ ಬಂಧಗಳನ್ನು ಹೊತ್ತರೂ ಸತ್ತ ನಂತರ ಹೊರುವವರಿರರು ಎಂಬ ವಾಸ್ತವ ಸತ್ಯ ಹೇಳುವ ‘ಈ ಜೀವನ ತರಂಗಾಲಲೊ, ಆ ದೇವುನಿ ಚದುರಂಗಂಲೊ, ಎವರಿಕಿ ಎವರು ಸ್ವಂತಮು, ಎಂಥವರಿಕೀ ಬಂಧಮು’ ಎಂಬ ಸಾರ್ವಕಾಲಿಕ ಗೀತೆಗಳನ್ನು ಹಾಡಿ ಜನರನ್ನು ರಂಜಿಸಿದರು.
ಕಲೆಯ ದೇವತೆ ಬಡವಳು ಎಂಬ ಆಡು ಮಾತಿನಂತೆ ಉತ್ತಮ ಕಂಠ ಹೊಂದಿದ ವೆಂಕಟೇಶ್ವರ ದಂಪತಿಗಳದ್ದು ಕಷ್ಟದ ಬದುಕು. ಇರುವ ಮೂರು ಮಕ್ಕಳಲ್ಲಿ ಒಬ್ಬಳು ಮಾನಸಿಕ ಅಸ್ವಸ್ಥೆಯಾದರೆ ಮತ್ತೊಬ್ಬ ಕಿವುಡ. ‘ನಮ್ಮ ತಾತನ ಕಾಲದಿಂದಲೂ ಕಲೆಯನ್ನೇ ನಂಬಿದ್ದೇವೆ. ಹಿಂದೆ ಹರಿಕಥೆ ನಡೆಸುತ್ತಿದ್ದೆವು, ನಾಟಕಗಳಲ್ಲಿ ಪಾತ್ರಗಳನ್ನು ಮಾಡುತ್ತಿದ್ದೆವು. ಆದರೆ ಈಗ ಅವುಗಳನ್ನು ಆಸ್ವಾದಿಸುವವರು ಪೋಷಿಸುವವರು ಕಡಿಮೆಯಾಗಿದ್ದಾರೆ. ಜಮೀನು ಇಲ್ಲದ ಕಾರಣ ನಾವು ತಿಳಿದ ವಿದ್ಯೆಯನ್ನೇ ಅವಲಂಬಿಸಿ ಭಿಕ್ಷೆಯ ಮೂಲಕ ಬದುಕುವಂತಾಗಿದೆ. ಹಾರ್ಮೋನಿಯೇ ನಮ್ಮ ಆಸ್ತಿ’ ಎನ್ನುತ್ತಾರೆ ವೆಂಕಟೇಶ್ವರ ದಂಪತಿಗಳು.

ಮಲ್ಲಿಶೆಟ್ಟಿಪುರದಲ್ಲಿ ವಾಸವಾಗಿರುವ ಐದು ನೂರು ವರ್ಷಗಳ ಇತಿಹಾಸವಿರುವ ಪಾಳೇಗಾರರ ವಂಶಸ್ಥರು

0

ಸುಮಾರು ಐದು ನೂರು ವರ್ಷಗಳ ಇತಿಹಾಸವಿರುವ ಚಿಕ್ಕಬಳ್ಳಾಪುರದ ಪಾಳೇಗಾರರ ವಂಶಸ್ಥರು ತಮ್ಮ ಗತ ಇತಿಹಾಸದ ನೆನಪುಗಳೊಂದಿಗೆ ತಾಲ್ಲೂಕಿನ ಮಲ್ಲಿಶೆಟ್ಟಿಪುರದಲ್ಲಿ ವಾಸಿಸುತ್ತಿದ್ದಾರೆ.

ಶಿಡ್ಲಘಟ್ಟ ತಾಲ್ಲೂಕಿನ ಮಲ್ಲಿಶೆಟ್ಟಿಪುರದಲ್ಲಿ ವಾಸವಾಗಿರುವ ಪಾಳೇಗಾರ ಮನೆತನದ ಮಂಜುನಾಥ ಅವರ ಮನೆಯ ಉಪ್ಪರಿಗೆಯಲ್ಲಿ ಕಟ್ಟಿಟ್ಟಿರುವ ಆಯುಧಗಳಾದ ಈಟಿ, ಭರ್ಜಿ, ಕತ್ತಿ ಮತ್ತು ಬೀಜ ಬಿತ್ತಲು ಬಳಸುವ ಕೆತ್ತನೆಗಳಿರುವ ಹಲುವಿ.
ಶಿಡ್ಲಘಟ್ಟ ತಾಲ್ಲೂಕಿನ ಮಲ್ಲಿಶೆಟ್ಟಿಪುರದಲ್ಲಿ ವಾಸವಾಗಿರುವ ಪಾಳೇಗಾರ ಮನೆತನದ ಮಂಜುನಾಥ ಅವರ ಮನೆಯ ಉಪ್ಪರಿಗೆಯಲ್ಲಿ ಕಟ್ಟಿಟ್ಟಿರುವ ಆಯುಧಗಳಾದ ಈಟಿ, ಭರ್ಜಿ, ಕತ್ತಿ ಮತ್ತು ಬೀಜ ಬಿತ್ತಲು ಬಳಸುವ ಕೆತ್ತನೆಗಳಿರುವ ಹಲುವಿ.

ಪಾಳೇಪಟ್ಟಿನ ನೆನಪಿಗಾಗಿ ಆಯುಧಗಳಾದ ಭರ್ಜಿ, ಕಡ್ಗ, ಈಟಿ ಮತ್ತು ಗುರಾಣಿ, ಕಬ್ಬಿಣದ ಪೆಟ್ಟಿಗೆ, ಲೆಕ್ಕಬರೆಯುವ ಆಸನ, ಹಳೆ ಪಾತ್ರೆ ಪಡಗಗಳು ಮತ್ತು ಕೃಷಿ ಉಪಕರಣಗಳನ್ನು ಉಳಿಸಿಕೊಂಡಿದ್ದಾರೆ. ಕಾಲದ ಹೊಡೆತಕ್ಕೆ ಸಿಕ್ಕ ಹಳೆಯ ಮನೆಯನ್ನು ಕೊಂಚ ಆಧುನೀಕರಿಸಿಕೊಂಡಿದ್ದಾರೆ. ಎಂದಿನ ಕೃಷಿ ಕೆಲಸದಲ್ಲಿ ತೊಡಗಿಕೊಳ್ಳುವ ಇವರಿಗೆ ತಮ್ಮ ಗತ ಇತಿಹಾಸದ ನೆನಪು ಮರುಕಳಿಸುವುದು ವರ್ಷಕ್ಕೊಮ್ಮೆ ಮನೆಯಲ್ಲಿರುವ ಕೆಲವೇ ಆಯುಧಗಳನ್ನು ಪೂಜೆಗೆ ತೆಗೆದಾಗ ಮಾತ್ರ.
ಶಿಡ್ಲಘಟ್ಟ ತಾಲ್ಲೂಕಿನ ಮಲ್ಲಿಶೆಟ್ಟಿಪುರದಲ್ಲಿ ವಾಸವಾಗಿರುವ ಪಾಳೇಗಾರ ಮನೆತನದ ಮಂಜುನಾಥ ಅವರ ಮನೆಯಲ್ಲಿರುವ ಪುರಾತನ ಕಬ್ಬಿಣದ ಪೆಟ್ಟಿಗೆಯ ಮೇಲೆ ಗಂಡುಬೇರುಂಡದ ಲಾಂಚನಗಳಿವೆ.
ಶಿಡ್ಲಘಟ್ಟ ತಾಲ್ಲೂಕಿನ ಮಲ್ಲಿಶೆಟ್ಟಿಪುರದಲ್ಲಿ ವಾಸವಾಗಿರುವ ಪಾಳೇಗಾರ ಮನೆತನದ ಮಂಜುನಾಥ ಅವರ ಮನೆಯಲ್ಲಿರುವ ಪುರಾತನ ಕಬ್ಬಿಣದ ಪೆಟ್ಟಿಗೆಯ ಮೇಲೆ ಗಂಡುಬೇರುಂಡದ ಲಾಂಚನಗಳಿವೆ.

‘೧೪೭೮ರಲ್ಲಿ ಈ ಮನೆತನದ ಮಲ್ಲಭೈರೇಗೌಡ ತನ್ನ ಮಗ ಮರಿಗೌಡನೊಂದಿಗೆ ಈಗ ಚಿಕ್ಕಬಳ್ಳಾಪುರ ಪಟ್ಟಣವಿರುವ ಸ್ಥಳದಲ್ಲಿ ಹಿಂದೆ ಇದ್ದ ಕೋಡಿಮಂಚಹಳ್ಳಿ ಗ್ರಾಮದಲ್ಲಿ ಕೋಟೆ ಕಟ್ಟಿ ಪೇಟೆಯನ್ನು ಸ್ಥಾಪಿಸಿದರಂತೆ. ಈ ಮನೆತನದವರು ಶಿಡ್ಲಘಟ್ಟವನ್ನು ಖರೀದಿಸುವ ಮೂಲಕ ತಮ್ಮ ಪಾಳೇಪಟ್ಟಿನ ವ್ಯಾಪ್ತಿಯನ್ನು ನಂದಿದುರ್ಗ, ಕಳವಾರದುರ್ಗ, ಗುಡಿಬಂಡೆ ಹಾಗೂ ಇಟ್ಕಲ್ ದುರ್ಗಗಳಲ್ಲಿ ಕೋಟೆಯನ್ನು ಕಟ್ಟುವ ಮೂಲಕ ಪಾಳೇಪಟ್ಟನ್ನು ಭದ್ರಪಡಿಸಿಕೊಂಡರು. ಮರಿಗೌಡ, ದೊಡ್ಡಭೈರೇಗೌಡ, ರಂಗಪ್ಪಗೌಡ, ಜೋಗಿಭೈರೇಗೌಡ ಮುಂತಾದವರು ಆಳ್ವಿಕೆಯನ್ನು ನಡೆಸಿದರು. ಬೈಚೇಗೌಡನ(೧೭೦೫-–೧೭೨೧) ಆಳ್ವಿಕೆಯಲ್ಲಿ ಮೈಸೂರು ಅರಸರ ಮುತ್ತಿಗೆಯನ್ನು ಮರಾಠರ ಸಹಾಯದಿಂದ ಹಿಮ್ಮೆಟ್ಟಿಸಲಾಯಿತು.
ಚಿಕ್ಕಬಳ್ಳಾಪುರ ಪಾಳ್ಳೇಗಾರ್ ಬಚ್ಚಣ್ಣ
ಚಿಕ್ಕಬಳ್ಳಾಪುರ ಪಾಳ್ಳೇಗಾರ್ ಬಚ್ಚಣ್ಣ

೧೭೬೨ರಲ್ಲಿ ಹೈದರಾಲಿಯು ಚಿಕ್ಕಬಳ್ಳಾಪುರದ ಕೋಟೆಗೆ ಮುತ್ತಿಗೆ ಹಾಕಿ ಮೂರು ತಿಂಗಳ ಕಾಲ ಹರಸಾಹಸ ಮಾಡಿದರೂ ಸ್ವಾಧೀನಪಡಿಸಿಕೊಳ್ಳಲಾಗದೇ ಐದು ಲಕ್ಷ ಪಗೋಡವನ್ನು ಪೊಗದಿಯಾಗಿ ಪಡೆದು ಮುತ್ತಿಗೆಯನ್ನು ಹಿಂಪಡೆಯಲಾಯಿತು. ಹೈದರಾಲಿಯು ಸೈನ್ಯದೊಂದಿಗೆ ತೆರಳಿದೊಡನೆ ಪಾಳೇಗಾರ ಚಿಕ್ಕಪ್ಪಗೌಡ ಸಹಾಯಕ್ಕಾಗಿ ಮರಾಠ ಸೈನ್ಯವನ್ನು ಕರೆಸಿಕೊಂಡ. ಈ ಬೆಳವಣಿಗೆಯನ್ನು ಸಹಿಸದ ಹೈದರಾಲಿ ತಕ್ಷಣವೇ ಮರುಮುತ್ತಿಗೆ ಹಾಕಿ ಕೋಟೆಯನ್ನು ವಶಪಡಿಸಿಕೊಂಡನು. ಅದರ ಬೆನ್ನಲ್ಲೇ ನಂದಿದುರ್ಗ, ಕಳವಾರದುರ್ಗ, ಗುಡಿಬಂಡೆ, ಇಟ್ಕಲ್‌ದುರ್ಗ ಹಾಗೂ ಕೋಟೆಕೊಂಡಗಳನ್ನೂ ಸ್ವಾಧೀನಪಡಿಸಿಕೊಂಡನು. ಚಿಕ್ಕಬಳ್ಳಾಪುರ ಪಾಳೇಗಾರ ಚಿಕ್ಕಪ್ಪಗೌಡ ಮತ್ತವನ ಕುಟುಂಬವನ್ನು ಬಂಧಿಸಿ ಬೆಂಗಳೂರಿನ ಸೆರೆಮನೆಯಲ್ಲಿಡಲಾಯಿತು.
ಸ್ವಲ್ಪಕಾಲ ಗ್ರಹಣಗ್ರಸ್ಥವಾಗಿದ್ದ ಈ ಪಾಳೇಪಟ್ಟಿಗೆ ಲಾರ್ಡ್ ಕಾರ್ನ್‌ವಾಲೀಸನು ನಾರಾಯಣಗೌಡ ಎಂಬುವರನ್ನು ನೇಮಿಸಿ ಜೀವಂತಿಕೆ ನೀಡಿದನು. ಆದರೆ ಇದರಿಂದ ವಿಚಲಿತನಾದ ಟಿಪ್ಪು ಸುಲ್ತಾನ್ ಮುತ್ತಿಗೆ ಹಾಕಿ ಚಿಕ್ಕಬಳ್ಳಾಪುರವನ್ನು ತನ್ನ ಕೈವಶಮಾಡಿಕೊಂಡನು. ೧೭೯೧ರಲ್ಲಿ ಬ್ರಿಟಿಷರು ನಂದಿದುರ್ಗವನ್ನು ವಶಪಡಿಸಿಕೊಂಡ ನಂತರ ಸ್ವಲ್ಪಕಾಲ ಅದರ ನಿಯಂತ್ರಣವನ್ನು ಪಾಳೇಗಾರರು ಹೊಂದಿದ್ದರು. ಆದರೆ ಟಿಪ್ಪು ಮತ್ತು ಬ್ರಿಟಿಷರ ನಡುವೆ ಸಂಧಾನ ಏರ್ಪಟ್ಟಿದ್ದರಿಂದ ಚಿಕ್ಕಬಳ್ಳಾಪುರ ಪಾಳೇಗಾರರು ಅಧಿಕಾರವಿಹೀನರಾದರು. ಇದರೊಂದಿಗೆ ಚಿಕ್ಕಬಳ್ಳಾಪುರ ಪಾಳೇಪಟ್ಟಿನ ಅವಸಾನವಾಯಿತು’ ಎಂದು ಇತಿಹಾಸಕಾರ ಡಾ.ಜಿ.ಶ್ರೀನಿವಾಸಯ್ಯ ತಿಳಿಸಿದರು.
‘ಪಾಳೇಗಾರ ಅಣ್ಣೀಗೌಡ(೧೬೮೭-–೧೭೦೫) ತನ್ನ ಆಳ್ವಿಕೆಯ ಕಾಲದಲ್ಲಿ ಶಿಡ್ಲಘಟ್ಟವನ್ನು ಖರೀದಿಸಿ ಕೋಟೆ ಪೇಟೆಗಳನ್ನು ಕಟ್ಟಿಸಿದ್ದ. ಶಿಡ್ಲಘಟ್ಟ ತಾಲ್ಲೂಕಿನ ಬೂದಾಳದ ಬಳಿಯ ೧೬೩೧ರ ಶಾಸನ ಇಮ್ಮಡಿ ಬೈಚೇಗೌಡನು ದತ್ತಿ ಬಿಟ್ಟ ವಿಚಾರವನ್ನು ತಿಳಿಸಿದರೆ, ತಾಲ್ಲೂಕಿನ ಮಳ್ಳೂರು ಮತ್ತು ಮೇಲೂರಿನ ಶಾಸನಗಳು ೧೬೯೭ರಲ್ಲಿ ಗೋಪಾಲಗೌಡರು ದತ್ತಿ ಬಿಟ್ಟ ಅಂಶವನ್ನು ತಿಳಿಸುತ್ತದೆ’ ಎಂದು ಅವರು ವಿವರಿಸಿದರು.
ಶಿಡ್ಲಘಟ್ಟ ತಾಲ್ಲೂಕಿನ ಮಲ್ಲಿಶೆಟ್ಟಿಪುರದಲ್ಲಿ ವಾಸವಾಗಿರುವ ಪಾಳೇಗಾರ ಮನೆತನದ ಮಂಜುನಾಥ್ ಮತ್ತು ಅವರ ತಂದೆ ವೆಂಕಟಪ್ಪಯ್ಯ.
ಶಿಡ್ಲಘಟ್ಟ ತಾಲ್ಲೂಕಿನ ಮಲ್ಲಿಶೆಟ್ಟಿಪುರದಲ್ಲಿ ವಾಸವಾಗಿರುವ ಪಾಳೇಗಾರ ಮನೆತನದ ಮಂಜುನಾಥ್ ಮತ್ತು ಅವರ ತಂದೆ ವೆಂಕಟಪ್ಪಯ್ಯ.

‘ನಾವೀಗ ರೈತರು. ಪಾಳೇಗಾರಿಕೆ ಒಂದು ಇತಿಹಾಸವಷ್ಟೆ. ಮನೆಯಲ್ಲಿ ನಮ್ಮ ಮುತ್ತಾತ ಚಿಕ್ಕಬಳ್ಳಾಪುರ ಪಾಳ್ಳೇಗಾರ್ ಬಚ್ಚಣ್ಣನವರ ಕಪ್ಪು ಬಿಳುಪು ಚಿತ್ರವಿದೆ. ಕೆಲವು ಆಯುಧಗಳಿವೆ. ಅವನ್ನು ವರ್ಷಕ್ಕೊಮ್ಮೆ ಪೂಜಿಸುತ್ತೇವೆ. ಹಳೆಯ ಮನೆಯು ಶಿಥಿಲಗೊಳ್ಳುತ್ತಿದ್ದಂತೆ ದುರಸ್ತಿ ಮಾಡಿದ್ದೇವೆ. ನಮ್ಮ ಸಂಬಂಧಿಕರು ಮಾಗಡಿ ಬಳಿಯ ಹುಳಿಕಲ್‌ನಲ್ಲಿ ವಾಸವಿದ್ದು ಅವರಿನ್ನೂ ಹಳೆಯ ಮನೆಯನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ. ತಾಲ್ಲೂಕಿನ ಎಸ್.ದೇವಗಾನಹಳ್ಳಿಯಲ್ಲೂ ನಮ್ಮ ಸಂಬಂಧಿಕರಿದ್ದಾರೆ. ನಮ್ಮ ನಿತ್ಯ ಬದುಕಿನ ಜಂಜಾಟದಲ್ಲಿ ಹಳೆಯ ಅನೇಕ ವಸ್ತುಗಳನ್ನು ಉಳಿಸಿಕೊಳ್ಳಲಾಗಿಲ್ಲ’ ಎಂದು ಮಲ್ಲಿಶೆಟ್ಟಿಪುರದ ಮಂಜುನಾಥ್ ಹೇಳುತ್ತಾರೆ.
– ಡಿ.ಜಿ.ಮಲ್ಲಿಕಾರ್ಜುನ.

ಶಾಶ್ವತ ನೀರಾವರಿ ಹೋರಾಟಕ್ಕೆ ಅಣ್ಣಾ ಹಜಾರೆ

0

ಬರಪೀಡಿತ ಜಿಲ್ಲೆಗಳ ಶಾಶ್ವತ ನೀರಾವರಿ ಹೋರಾಟದಲ್ಲಿ ಸಾಮಾಜಿಕ ಹೋರಾಟಗಾರ, ಗಾಂಧಿವಾದಿ ಅಣ್ಣಾ ಹಜಾರೆ ಭಾಗಿಯಾಗುವಂತೆ ಒಪ್ಪಿಸುವಲ್ಲಿ ತಾಲ್ಲೂಕಿನ ಮೇಲೂರು ಗಂಗಾದೇವಿ ದ್ರಾಕ್ಷಿ ಬೆಳೆಗಾರರ ರೈತ ಕೂಟದ ಸದಸ್ಯರು ಸಫಲರಾಗಿದ್ದಾರೆ.
ಮೇಲೂರು ಗಂಗಾದೇವಿ ದ್ರಾಕ್ಷಿ ಬೆಳೆಗಾರರ ರೈತ ಕೂಟದ 52 ಮಂದಿ ರೈತರು ತೋಟಗಾರಿಕೆ ಇಲಾಖೆ ಮತ್ತು ನಬಾರ್ಡ್‌ ಬ್ಯಾಂಕ್‌ ನೆರವಿನಿಂದ ಮಹಾರಾಷ್ಟ್ರಕ್ಕೆ ಏಳು ದಿನಗಳ ಕಾಲ ಹೆಚ್ಚಿನ ತಿಳುವಳಿಕೆಗಾಗಿ ಅಧ್ಯಯನ ಪ್ರವಾಸ ಕೈಗೊಂಡಿದ್ದಾಗ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಅವರನ್ನು ಭೇಟಿ ಮಾಡಿದ್ದಾರೆ. ಅಣ್ಣಾ ಹಜಾರೆ ಅವರ ಸ್ವಗ್ರಾಮ ರಾಲೆಗಾವ್‌ ಸಿದ್ದಿಗೆ ಹೋಗಿ ಅವರನ್ನು ಭೇಟಿ ಮಾಡಿದ ರೈತರು, ಚಿಕ್ಕಬಳ್ಳಾಪುರ, ಕೋಲಾರ ಸೇರಿದಂತೆ ಬರಪೀಡಿತ ಆರು ಜಿಲ್ಲೆಗಳ ಜನರ ನೀರಿನ ಬವಣೆಯನ್ನು ವಿವರಿಸಿದ್ದಾರೆ. ಕುಡಿಯಲು ಮತ್ತು ವ್ಯವಸಾಯಕ್ಕೆ 1500 ಅಡಿ ಆಳದ ನೀರನ್ನು ಬಳಸುತ್ತಾ ಫ್ಲೋರೈಡ್‌ ಅಂಶದಿಂದ ಖಾಯಿಲೆಗಳು ಹರಡುತ್ತಿದ್ದು, ಸರ್ಕಾರ ನಮ್ಮ ಹೋರಾಟಕ್ಕೆ ಸ್ಪಂದಿಸುತ್ತಿಲ್ಲ. ಪರಮಶಿವಯ್ಯನವರ ವರದಿ ಆಧಾರಿತ ಯೋಜನೆಗಾಗಿ ನಾವೆಲ್ಲಾ ಹೋರಾಡುತ್ತಿದ್ದು ತಾವು ಕೂಡ ಭಾಗಿಯಾಗಿ ಶಕ್ತಿ ತುಂಬಲು ಮನವಿಯನ್ನು ಸಲ್ಲಿಸಿದರು. ತಕ್ಷಣವೇ ರೈತರ ಮನವಿಗೆ ಸ್ಪಂದಿಸಿದ ಅಣ್ಣಾ ಹಜಾರೆ ಅವರು ನಿಮ್ಮ ಹೋರಾಟದಲ್ಲಿ ಭಾಗಿಯಾಗುವೆ. ದಿನಾಂಕವನ್ನು ನಿಗದಿಪಡಿಸಿ ಎಂದು ತಿಳಿಸಿದ್ದಾರೆ.
ರಾಲೆಗಾವ್‌ಸಿದ್ದಿ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಮಾಡಿರುವ ನೀರಿನ ಸದ್ಬಳಕೆ, ನಿರ್ಮಿಸಿರುವ ಚೆಕ್‌ ಡ್ಯಾಮ್‌ಗಳು, ರೀಸೈಕಲ್‌ ಮಾದರಿ ಪ್ರಯೋಗಗಳಿಂದ ಅಂತರ್ಜಲ ವೃದ್ಧಿಸಿರುವ ಬಗ್ಗೆ ಹಾಗೂ ಶ್ರಮದಾನದ ಮೂಲಕ ಗ್ರಾಮ ನೈರ್ಮಲ್ಯವನ್ನು ಕಾಪಾಡಿಕೊಂಡಿರುವ ಮಾಹಿತಿಗಳನ್ನು ಪಡೆದು ನಿಮ್ಮಲ್ಲಿ ಅಳವಡಿಸಿಕೊಳ್ಳಿ ಎಂದು ರೈತರಿಗೆ ಅಣ್ಣಾ ಹಜಾರೆ ಅವರು ಹೇಳಿದ್ದಾರೆ.
‘ಅಧ್ಯಯನ ಪ್ರವಾಸದಲ್ಲಿ ನಾವು ಅಣ್ಣಾ ಹಜಾರೆ ಅವರನ್ನು ಭೇಟಿ ಮಾಡಿ ಅವರನ್ನು ನೀರಾವರಿ ಹೋರಾಟಕ್ಕೆ ಆಹ್ವಾನಿಸಿದೆವು. ಪೂನಾದ ಎನ್‌.ಆರ್‌.ಸಿ ಸಂಶೋಧನಾ ಕೇಂದ್ರದಲ್ಲಿ ನಮ್ಮ ಪ್ರದೇಶಕ್ಕೆ ಒಗ್ಗುವ 6 ತಳಿಗಳ ಬಗ್ಗೆ ತಿಳಿದುಕೊಂಡೆವು. ನಾಸಿಕ್‌ನಲ್ಲಿ ಪ್ರಗತಿಪರ ರೈತರ ದ್ರಾಕ್ಷಿ ತೋಟಗಳಿಗೆ ಭೇಟಿ ನೀಡಿ ಮಾಹಿತಿ ಪಡೆದೆವು. ಮುರ್ರಾ ತಳಿಯ ಎಮ್ಮೆಗಳ ಸಾಕಾಣಿಕಾ ಕೇಂದ್ರಕ್ಕೂ ಭೇಟಿ ನೀಡಿದ್ದೆವು’ ಎಂದು ಮೇಲೂರು ಗಂಗಾದೇವಿ ದ್ರಾಕ್ಷಿ ಬೆಳೆಗಾರರ ರೈತ ಕೂಟದ ಕಾರ್ಯದರ್ಶಿ ನಾಗೇಂದ್ರಪ್ರಸಾದ್‌ ತಿಳಿಸಿದರು.
ಅಧ್ಯಯನ ಪ್ರವಾಸದಲ್ಲಿ ರೈತಕೂಟಗಳ ಒಕ್ಕೂಟದ ಅಧ್ಯಕ್ಷ ಎಚ್‌.ಜಿ.ಗೋಪಾಲಗೌಡ, ನಾಗರಾಜ್‌, ಶ್ರೀನಿವಾಸ್‌, ಕೆಂಪೇಗೌಡ, ಮುರಳಿ, ಗೋಪಾಲಪ್ಪ, ಪಿಳ್ಳವೆಂಕಟಶಾಮಣ್ಣ, ವೆಂಕಟಸ್ವಾಮಿರೆಡ್ಡಿ, ರಾಮಮೂರ್ತಿ, ಜನಾರ್ಧನರೆಡ್ಡಿ, ಕೃಷ್ಣಮೂರ್ತಿ, ತೋಟಗಾರಿಕಾ ಇಲಾಖೆಯ ಅಧಿಕಾರಿ ರವಿಕುಮಾರ್‌ ಮತ್ತಿತರರು ಭಾಗವಹಿಸಿದ್ದರು.

ಆರೋಗ್ಯಕ್ಕಾಗಿ ಗ್ರಾಮ ಪರಿಸರವನ್ನು ಶುಭ್ರವಾಗಿಟ್ಟುಕೊಳ್ಳಬೇಕು

0

ಕಾನೂನಿನ ಭಯದಿಂದ ಸ್ವಚ್ಛ ಗ್ರಾಮ ನಿರ್ಮಾಣ ಮಾಡಲು ಸಾಧ್ಯವಿಲ್ಲ. ಆರೋಗ್ಯಕ್ಕಾಗಿ, ಗೌರವಕ್ಕಾಗಿ ಮತ್ತು ಮಾದರಿ ಬದುಕಿಗಾಗಿ ಗ್ರಾಮಸ್ಥರೆಲ್ಲಾ ಒಗ್ಗೂಡಿ ಗ್ರಾಮ ಪರಿಸರವನ್ನು ಶುಭ್ರವಾಗಿಟ್ಟುಕೊಳ್ಳಬೇಕೆಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಯೋಗೇಶ್‌ ತಿಳಿಸಿದರು.
ತಾಲ್ಲೂಕಿನ ಗೊರಮಡುಗು ಗ್ರಾಮದಲ್ಲಿ ಸೋಮವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನೂತನ ಸ್ವಸಹಾಯ ಗುಂಪುಗಳ ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ಮಹಿಳಾ ಸ್ವಸಹಾಯ ಗುಂಪುಗಳಿಂದ ಮಹಿಳೆಯರು ಸ್ವಾವಲಂಬಿಗಳಾಗುವುದಲ್ಲದೆ, ಹಲವಾರು ಗ್ರಾಮಾಭಿವೃದ್ಧಿ ಕಾರ್ಯಗಳನ್ನು ನಡೆಸಬಹುದು. ಗ್ರಾಮವನ್ನು ಸ್ವಚ್ಛವಾಗಿಟ್ಟುಕೊಳ್ಳುವುದರಿಂದ ಅಂಟು ರೋಗಗಳು, ಸೋಂಕು ರೋಗಗಳು ಹರಡುವುದು ನಿಲ್ಲುತ್ತವೆ. ಜನರ ಆರೋಗ್ಯ ಉತ್ತಮಗೊಳ್ಳುವುದಲ್ಲದೆ ಹಣವೂ ಉಳಿತಾಯವಾಗುತ್ತದೆ. ಮಹಿಳೆಯರು ಒಂದೆಡೆ ಸೇರಿದಾಗ ಕಷ್ಟ ಸುಖಗಳನ್ನು ಹಂಚಿಕೊಂಡು ಪರಸ್ಪರರಿಗೆ ನೆರವಾಗಬಹುದು. ಆರ್ಥಿಕ ಸಂಬಂಧಿತ ಯೋಜನೆಗಳು ಮತ್ತು ಯೋಚನೆಗಳನ್ನು ಹಂತ ಹಂತವಾಗಿ ಸಾಕಾರಗೊಳಿಸಿಕೊಳ್ಳಬಹುದಾಗಿದೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಸ್ವಸಹಾಯ ಸಂಘಗಳ ನಿರ್ವಹಣೆಗೆ ಅಗತ್ಯದ ದಿನಚರಿ ಕೈಪಿಡಿಗಳನ್ನು ವಿತರಿಸಲಾಯಿತು. ಗ್ರಾಮ ಪಂಚಾಯತಿ ಅಧ್ಯಕ್ಷ ನಾಗೇಶ್‌, ಮುನಿವೀರಪ್ಪ, ರವಿ, ಮುನಿವೆಂಕಟಸ್ವಾಮಿ, ಮಂಜುನಾಥ್‌ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಪಠ್ಯದ ಜ್ಞಾನದೊಂದಿಗೆ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಿ

0

ಪಠ್ಯದ ಜ್ಞಾನದೊಂದಿಗೆ ನಡವಳಿಕೆಯಲ್ಲೂ ಪರಿಣತಿಯನ್ನು ಸಾಧಿಸುವ ತರಬೇತಿಯನ್ನು ಪಡೆಯುವುದು ಅತ್ಯವಶ್ಯ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಎ.ಮುರಿಗೆಪ್ಪ ತಿಳಿಸಿದರು.
ಬಿ.ಎಂ.ವಿ. ಎಜುಕೇಷನ್‌ ಟ್ರಸ್ಟ್‌, ಸಮಾಜವಾದಿ ಅಧ್ಯಯನ ಕೇಂದ್ರ, ಬೆಂಗಳೂರು ರೋಟರಿ ಹೈಗ್ರೌಂಡ್ಸ್‌, ಭಕ್ತರಹಳ್ಳಿ ಗ್ರಾಮ ಪಂಚಾಯತಿ, ಹಾಲು ಉತ್ಪಾದಕರ ಸಹಕಾರ ಸಂಘ ಮತ್ತು ಸ್ಮೈಲ್‌ ಫೌಂಡೇಷನ್‌ ಸಹಯೋಗದಲ್ಲಿ ಬಿ.ಎಂ.ವಿ. ಪ್ರೌಢಶಾಲೆಯ ಆವರಣದಲ್ಲಿ ಪ್ರಾರಂಭಗೊಂಡ ಒಂದು ವಾರದ ರಾಷ್ಟ್ರ ಸೇವಾ ದಳದ ಶಿಬಿರವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.
ಪರೀಕ್ಷೆಯನ್ನು ಬರೆದು ಉತ್ತಮ ಅಂಕಗಳಿರುವ ಅಂಕಪಟ್ಟಿ ಇದ್ದರೆ ಸಾಲದು, ಒಂದು ಸಮುದಾಯದ ಒಳಗೆ ಅಪೇಕ್ಷಿತವಾದ ವ್ಯಕ್ತತ್ವವಾಗಬೇಕಾದರೆ, ನಾನು ಎಂಬ ವ್ಯಕ್ತಿ ಕೇಂದ್ರದಿಂದ ನಾವು ಎಂಬ ಸಮುದಾಯ ಕೇಂದ್ರಿತ ಚಿಂತನೆ ಅಗತ್ಯವಿದೆ. ಗಾಂಧೀಜಿ, ಅಬ್ದುಲ್‌ಕಲಾಂ, ಸರ್‌.ಎಂ.ವಿಶ್ವೇಶ್ವರಯ್ಯ ಅವರಲ್ಲಿದ್ದುದು ಈ ಕಾಳಜಿ. ಸಧೃಡ ಶರೀರಕ್ಕೆ ಬೇಕಾದುದು ಒಳ್ಳೆಯ ಆಹಾರ ಮತ್ತು ವ್ಯಾಯಾಮ. ಸಧೃಡ ಮನಸ್ಸಿಗೆ ಅಗತ್ಯವಾದುದು ಎಲ್ಲರನ್ನೂ ಗೌರವಿಸುವ, ಪ್ರೀತಿಸುವ ಮತ್ತು ಕಾಳಜಿಯುಳ್ಳ ಸಕಾರಾತ್ಮಕ ಆಲೋಚನೆಗಳನ್ನು ವಿದ್ಯಾರ್ಥಿ ಜೀವನದಿಂದಲೇ ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.
ಬಿ.ಎಂ.ವಿ. ಎಜುಕೇಷನ್‌ ಟ್ರಸ್ಟ್‌ ಅಧ್ಯಕ್ಷ ಬಿ.ವಿ.ಮುನೇಗೌಡ, ಕಾರ್ಯದರ್ಶಿ ಎಲ್‌.ಕಾಳಪ್ಪ, ಸಮಾಜವಾದಿ ಅಧ್ಯಯನ ಕೇಂದ್ರದ ಇಂದು ನಾಗರಾಜು, ಬಾಪು ಹೆದ್ದೂರ್‌ ಶೆಟ್ಟಿ, ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಕೋಟೆ ಚನ್ನೇಗೌಡ, ಪ್ರೊ.ಹನುಮಂತ, ಆರ್‌.ಬಸವರಾಜು, ಪ್ರದೀಪ್‌ ರಾಧಾಕೃಷ್ಣ, ಬಾಬಾ ಸಾಹೇಬ್‌ ನದಾಫ್‌ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಗೈರು ಹಾಜರಾದ ಅಧಿಕಾರಿಗಳಿಗೆ ನೋಟಿಸ್‌

0

ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಪಟ್ಟಣದ ಮಿನಿವಿಧಾನಸೌಧದಲ್ಲಿ ಶನಿವಾರ ನಡೆದ 59 ನೇ ಕನ್ನಡ ರಾಜ್ಯೋತ್ಸವ, ಕಾರ್ಯಕ್ರಮಕ್ಕೆ ಗೈರು ಹಾಜರಾದ ಒಂಬತ್ತು ಮಂದಿ ಅಧಿಕಾರಿಗಳಿಗೆ ನೋಟೀಸ್‌ ಜಾರಿಯಾಗುವುದರೊಂದಿಗೆ ಪರ್ಯಾವಸಾನಗೊಂಡಿದೆ.
ಪಟ್ಟಣದ ಪ್ರಮುಖ ಬೀದಿಗಳಲ್ಲಿ ಶಾಲಾ ವಿದ್ಯಾರ್ಥಿಗಳ ಬ್ಯಾಂಡ್‌ ಸೆಟ್‌ ವಾದನದೊಂದಿಗೆ ಭುವನೇಶ್ವರಿಯ ಭಾವಚಿತ್ರದ ಅಲಂಕೃತ ವಾಹನದ ಮೆರವಣಿಗೆ ನಡೆಸಲಾಯಿತು. ಉಲ್ಲೂರುಪೇಟೆಯ ಮಂಜುನಾಥ್‌ ಸೈಕಲ್‌ಗೆ ಕನ್ನಡ ಕಲಾವಿದ, ಸಾಹಿತಿಗಳ ಭಾವಚಿತ್ರಗಳನ್ನೊಳಗೊಂಡ ಸ್ಥಬ್ದಚಿತ್ರವನ್ನು ಅಲಂಕರಿಸಿಕೊಂಡು ಮೆರವಣಿಗೆಯ ಮುಂಚೂಣಿಯಲ್ಲಿ ಗಮನ ಸೆಳೆದರೆ, ಆರೋಗ್ಯ ಇಲಾಖೆಯ ಸ್ಥಬ್ದ ಚಿತ್ರ ನಗು ಮಗುವಿನ ಬಗ್ಗೆ ತಿಳಿಸುತ್ತಿತ್ತು.
ತಾಲ್ಲೂಕು ಕಚೇರಿಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಎಂ.ರಾಜಣ್ಣ, ‘ಕನ್ನಡ ಪುಸ್ತಕಗಳನ್ನು ಕೊಂಡು ಓದಿ. ಮನೆಯಲ್ಲೊಂದು ಪುಟ್ಟ ಗ್ರಂಥಾಲಯವಿರಬೇಕು. ಪುಸ್ತಕವು ಓಡಾಡುವ ಗುಡಿಯಿದ್ದಂತೆ. ಕನ್ನಡದ ಸಾಹಿತ್ಯ ಲೋಕ ಚಿರಂತನ, ನಿತ್ಯನೂತನ ಮತ್ತು ಅಮೃತ ಸಮಾನವಾದದ್ದು. ಕನ್ನಡ ನಾಡು ನುಡಿ ಜಲ ಸಂರಕ್ಷಣೆ ನಮ್ಮ ಜವಾಬ್ದಾರಿ. ನಮ್ಮ ನಾಡಿಗಾಗಿ ದುಡಿದಿರುವ ಮಹನೀಯರ ಬಗ್ಗೆ ನಮ್ಮ ಮುಂದಿನ ತಲೆಮಾರಿಗೂ ತಿಳಿಸಿ ಗೌರವವನ್ನು ಹೆಚ್ಚಿಸಬೇಕು’ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬೆರಳೆಣಿಕೆಯಷ್ಟು ಅಧಿಕಾರಿಗಳು ಹಾಜರಾಗಿದ್ದು, ನಾಡ ಹಬ್ಬಕ್ಕೆ ಹಾಜರಾಗದ ಅಧಿಕಾರಿಗಳಿಗೆ ನೋಟಿಸ್‌ ನೀಡುವಂತೆ ಸೇರಿದ್ದ ಕನ್ನಡಾಭಿಮಾನಿಗಳು ಆಕ್ರೋಷ ವ್ಯಕ್ತಪಡಿಸಿದರು. ಶಾಸಕರು ಮತ್ತು ತಹಶೀಲ್ದಾರ್‌ ಜಿ.ಎ.ನಾರಾಯಣಸ್ವಾಮಿ ಈ ಸಂದರ್ಭದಲ್ಲಿ ಗೈರು ಹಾಜರಾದ ಅಧಿಕಾರಿಗಳಿಗೆ ನೋಟಿಸ್‌ ಜಾರಿ ಮಾಡುವುದಾಗಿ ಸಮಾಧಾನಗೊಳಿಸಿದರು.
ವಿವಿಧ ಶಾಲಾ ವಿದ್ಯಾರ್ಥಿಗಳು ಕನ್ನಡ ನಾಡು ನುಡಿಯನ್ನು ಪ್ರತಿಧ್ವನಿಸುವ ಗೀತೆಗಳಿಗೆ ನೃತ್ಯವನ್ನು ಪ್ರದರ್ಶಿಸಿದರು. ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಕನ್ನಡದಲ್ಲಿ ಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಿದರು.
ಶಾಸಕ ಎಂ.ರಾಜಣ್ಣ, ತಹಶೀಲ್ದಾರ್‌ ಜಿ.ಎ.ನಾರಾಯಣಸ್ವಾಮಿ, ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಣಾಧಿಕಾರಿ ಗಣಪತಿ ಸಾಕರೆ, ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ, ಪಿ.ಎಲ್‌.ಡಿ.ಬ್ಯಾಂಕ್‌ ಅಧ್ಯಕ್ಷ ರಾಮಚಂದ್ರಪ್ಪ, ತಾಲ್ಲೂಕು ಪಂಚಾಯತಿ ಅಧ್ಯಕ್ಷೆ ಆಂಜಿನಮ್ಮ, ಪುರಸಭೆ ಮುಖ್ಯಾಧಿಕಾರಿ ರಾಂಪ್ರಕಾಶ್‌, ಅಧ್ಯಕ್ಷೆ ಮುಷ್ಠರಿ ತನ್ವೀರ್‌, ಉಪಾಧ್ಯಕ್ಷೆ ಸುಮಿತ್ರಾರಮೇಶ್‌, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಗುರುರಾಜ್‌, ಕ.ಸಾ.ಪ ಅಧ್ಯಕ್ಷ ಕೋ.ನಾ.ಶ್ರೀನಿವಾಸ್‌, ಅಮೃತಕುಮಾರ್‌ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಆಟೋ ಚಾಲಕರ ಸಂಘದ ಕನ್ನಡಾಭಿಮಾನ

0

ಪಟ್ಟಣದ ಆಟೋ ಚಾಲಕರ ಸಂಘದ ವತಿಯಿಂದ ಕನ್ನಡ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಸುಮಾರು 300 ಕ್ಕೂ ಹೆಚ್ಚು ಆಟೋಗಳಿಗೆ ಕನ್ನಡ ಬಾವುಟಗಳನ್ನು ಕಟ್ಟಿಕೊಂಡು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ ತಮ್ಮ ಸಂಘದ ಒಗ್ಗಟ್ಟು ಮತ್ತು ಕನ್ನಡಾಭಿಮಾನವನ್ನು ಪ್ರದರ್ಶಿಸಿದರು. ಹಲವಾರು ಆಟೋಗಳನ್ನು ಕೆಂಪು ಚೆಂಡು ಹೂ ಮತ್ತು ಹಳದಿ ಶಾಮಂತಿಗೆ ಹೂಗಳಿಂದ ಅಲಂಕರಿಸಿ ನಾಡ ಬಣ್ಣವನ್ನು ಹೂಗಳ ಮೂಲಕ ಪ್ರದರ್ಶಿಸಿರುವುದಲ್ಲದೆ, ನಾಡ ಬಾವುಟಗಳನ್ನೂ ಕಟ್ಟಿಕೊಂಡು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದುದು ವಿಶೇಷವಾಗಿತ್ತು.
ಕೆ.ಎಸ್‌.ಆರ್‌.ಟಿ.ಸಿ ಬಸ್‌ ನಿಲ್ದಾಣದಲ್ಲಿರುವ ಜೈ ಭುವನೇಶ್ವರಿ ಆಟೋ ನಿಲ್ದಾಣದಲ್ಲಿ ನಾಡಧ್ವಜಾರೋಹಣ ಮತ್ತು ಸಂಜೆ ಆರ್ಕೇಸ್ಟ್ರಾ ಆಯೋಜಿಸಿದ್ದರು.

‘ಮೇಲೂರು ವೈಭವ’ ಸಾರುವ ಚಿತ್ರಮಾಲೆ

0

ಪ್ರತಿಯೊಂದು ನಗರ, ಊರು, ಹಳ್ಳಿಗೂ ಇತಿಹಾಸವಿರುತ್ತದೆ. ಸಾಧಕರಿರುತ್ತಾರೆ. ವಿಶೇಷ ಆಚರಣೆ, ಘಟನೆ, ಸ್ಥಳ ಹಾಗೂ ಸವಿನೆನಪುಗಳಿರುತ್ತವೆ. ಇಂಥಹ ಅಪರೂಪದ ಸಂಗತಿಗಳನ್ನು ನೆನಪಿಸಿಕೊಳ್ಳುವವರು ವಿರಳ. ಆದರೆ ತಾಲ್ಲೂಕಿನ ಮೇಲೂರು ಗ್ರಾಮದಲ್ಲಿ ಇಂಥಹ ಸಿಂಹಾವಲೋಕನವನ್ನು ನಡೆಸಲಾಗುತ್ತಿದೆ. ‘ಮೇಲೂರು ವೈಭವ’ ಎಂಬ ಹೆಸರಿನಲ್ಲಿ ಹಳೆಯ ಛಾಯಾಚಿತ್ರಗಳನ್ನು ಪ್ರದರ್ಶಿಸುವ ಮೂಲಕ ಮೇಲೂರಿನ ಎಂ.ಆರ್‌.ಪ್ರಭಾಕರ್‌, ಮೇಲೂರು ಗ್ರಾಮದ ಇತಿಹಾಸ, ಕಲೆ, ಸಾಂಸ್ಕೃತಿಕ ಪರಂಪರೆ, ಮೇಲೂರಿಗೆ ಭೇಟಿ ನೀಡಿರುವ ಗಣ್ಯರು ಮತ್ತು ಮೇಲೂರಿನ ಪ್ರಸಿದ್ಧರ ಕುರಿತಂತೆ ಜನರು ಮೆಲುಕು ಹಾಕುವಂತೆ ಮಾಡಿದ್ದಾರೆ.
ಮೇಲೂರಿನ ಸರ್ಕಾರಿ ಶಾಲಾ ಆವರಣದ ಸಮುದಾಯಭವನದಲ್ಲಿ ಶನಿವಾರ ಮತ್ತು ಭಾನುವಾರ ಎರಡು ದಿನಗಳ ಕಾಲ ಪ್ರದರ್ಶನವನ್ನು ಏರ್ಪಡಿಸಿದ್ದು, ಮೇಲೂರಿನ ಇತಿಹಾಸದ ಇಣುಕು ನೋಟದೊಂದಿಗೆ ತಾಲ್ಲೂಕಿನ ಕಪ್ಪುಬಿಳುಪಿನ ಕಾಲದ ಘಟನಾವಳಿಗಳ ಚಿತ್ರಣವನ್ನು ನೋಡಬಹುದಾಗಿದೆ.
ಮೇಲೂರಿನ ಸಾಂಸ್ಕೃತಿಕ ವೈಭವ, ನಾಟಕ, ಕಲೆ, ಭಕ್ತಿಪಂಥ, ಸಾಧಕರು, ಪ್ರಸಿದ್ಧ ವ್ಯಕ್ತಿಗಳ ಆಗಮನ, ಭಜನೆ, ಹರಿಕಥೆ ಮುಂತಾದ ಹಲವು ವಿಭಾಗಗಳನ್ನಾಗಿಸಿ ಛಾಯಾಚಿತ್ರಗಳನ್ನು ಪ್ರದರ್ಶಿಸಿದ್ದಾರೆ.

ಶಿಡ್ಲಘಟ್ಟ ತಾಲ್ಲೂಕಿನ ಮೇಲೂರಿನ ಸಮುದಾಯಭವನದಲ್ಲಿ ಶನಿವಾರ ಏರ್ಪಡಿಸಿದ್ದ ‘ಮೇಲೂರು ವೈಭವ’ ಎಂಬ ಗ್ರಾಮದ ಕಪ್ಪುಬಿಳುಪಿನ ಕಾಲದ ಘಟನಾವಳಿಗಳ ಚಿತ್ರಪ್ರದರ್ಶನವನ್ನು ಏರ್ಪಡಿಸಿದ್ದ ಮೇಲೂರಿನ ಎಂ.ಆರ್‌.ಪ್ರಭಾಕರ್‌, ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯ ಆಗಮಿಸಿದ್ದಾಗಿನ ಚಿತ್ರದ ಬಗ್ಗೆ ವಿವರಿಸಿದರು.
ಶಿಡ್ಲಘಟ್ಟ ತಾಲ್ಲೂಕಿನ ಮೇಲೂರಿನ ಸಮುದಾಯಭವನದಲ್ಲಿ ಶನಿವಾರ ಏರ್ಪಡಿಸಿದ್ದ ‘ಮೇಲೂರು ವೈಭವ’ ಎಂಬ ಗ್ರಾಮದ ಕಪ್ಪುಬಿಳುಪಿನ ಕಾಲದ ಘಟನಾವಳಿಗಳ ಚಿತ್ರಪ್ರದರ್ಶನವನ್ನು ಏರ್ಪಡಿಸಿದ್ದ ಮೇಲೂರಿನ ಎಂ.ಆರ್‌.ಪ್ರಭಾಕರ್‌, ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯ ಆಗಮಿಸಿದ್ದಾಗಿನ ಚಿತ್ರದ ಬಗ್ಗೆ ವಿವರಿಸಿದರು.

೧೯೫೨ರಲ್ಲಿ ಕಿಸಾನ್ ಸಿಲ್ಕ್ ಇಂಡಸ್ಟ್ರಿ ಎಂಬ ರೇಷ್ಮೆಯ ಕಾರ್ಖಾನೆಯನ್ನು ಉದ್ಘಾಟಿಸಲು ಆಗಮಿಸಿದ್ದ ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯ, ಮೈಸೂರು ದಿವಾನರಾಗಿದ್ದ ರಾಮಸ್ವಾಮಿ ಮೊದಲಿಯಾರ್‌,ಮಿರ್ಜಾ ಇಸ್ಮಾಯಿಲ್‌, ಕೆಂಗಲ್‌ ಹನುಮಂತಯ್ಯ, ದೇವರಾಜ ಅರಸು, ವೀರೇಂದ್ರ ಹೆಗಡೆ, ಹರಿಕಥಾ ವಿದ್ವಾನ್‌ ಮಾಲೂರು ಸೊಣ್ಣಪ್ಪ, ಮೇಲೂರಿನವರು ಹೋಗಿ ಭೇಟಿ ಮಾಡಿದ್ದ ರಾಷ್ಟ್ರಪತಿಗಳಾದ ಫಕೃದ್ದೀನ್‌ ಅಲಿ ಅಹಮದ್‌, ವಿ.ವಿ.ಗಿರಿ, ರಾಚಯ್ಯ, ಕಪಿಲ್‌ ದೇವ್‌, ಜವಾಹರಲಾಲ್‌ ನೆಹರೂ, ರಾಜೀವ್‌ ಗಾಂಧಿ, ಡಾ.ರಾಜ್‌ಕುಮಾರ್‌, ರಜನಿಕಾಂತ್‌, ದಾಸರಿ ನಾರಾಯಣರಾವ್‌, ರಾಕೇಶ್‌ ಶರ್ಮ, ಸಂತೋಶ್‌ ಹೆಗಡೆ, ಎಂ.ವಿ.ಕೃಷ್ಣಪ್ಪ, ಅಬ್ದುಲ್‌ ಕಲಾಂ ಮುಂತಾದವರೊಂದಿಗಿನ ಗ್ರಾಮಸ್ಥರ ಚಿತ್ರಗಳು ಹತ್ತು ಹಲವು ಸಂಗತಿಗಳನ್ನು ನೆನಪಿಗೆ ತಂದಿಟ್ಟಿದ್ದವು.
ಮೇಲೂರಿಗೆ ಆಗಮಿಸಿದ್ದ ಸಚಿವರುಗಳು ಮತ್ತು ಗಣ್ಯರು ಸಾಮಾನ್ಯರಂತೆ ನೆಲದ ಮೇಲೆ ಕುಳಿತು ಬಾಳೆ ಎಲೆಯ ಮೇಲೆ ಊಟ ಮಾಡುತ್ತಿರುವ ಚಿತ್ರ, ಸಂಸದ ಕೆ.ಎಚ್‌.ಮುನಿಯಪ್ಪ ಶಾಲಾ ಬಾಲಕನಾಗಿದ್ದಾಗಿನ ಶಾಲಾ ಚಿತ್ರ, ನಿಜಲಿಂಗಪ್ಪ, ಫಕೃದ್ದೀನ್‌ ಅಲಿ ಅಹಮದ್‌ ಮುಂತಾದವರ ಅಪರೂಪದ ಚಿತ್ರಗಳು.
ಮೇಲೂರಿಗೆ ಆಗಮಿಸಿದ್ದ ಸಚಿವರುಗಳು ಮತ್ತು ಗಣ್ಯರು ಸಾಮಾನ್ಯರಂತೆ ನೆಲದ ಮೇಲೆ ಕುಳಿತು ಬಾಳೆ ಎಲೆಯ ಮೇಲೆ ಊಟ ಮಾಡುತ್ತಿರುವ ಚಿತ್ರ, ಸಂಸದ ಕೆ.ಎಚ್‌.ಮುನಿಯಪ್ಪ ಶಾಲಾ ಬಾಲಕನಾಗಿದ್ದಾಗಿನ ಶಾಲಾ ಚಿತ್ರ, ನಿಜಲಿಂಗಪ್ಪ, ಫಕೃದ್ದೀನ್‌ ಅಲಿ ಅಹಮದ್‌ ಮುಂತಾದವರ ಅಪರೂಪದ ಚಿತ್ರಗಳು.

ಮೇಲೂರಿವರಾದ ರಾಜ್ಯಸಭಾ ಸದಸ್ಯರಾಗಿದ್ದ ಕೆ.ಎಮ.ನಂಜುಡಪ್ಪ, ಕೆ.ಎಸ್‌.ಚನ್ನಪ್ಪ, ಐ.ಎ.ಎಸ್‌ ಅಧಿಕಾರಿ ವೆಂಕಟರಾಮೇಗೌಡ, ಸ್ವಾತಂತ್ರ್ಯ ಹೋರಾಟಗಾರರಾದ ಸಂಜೀವಪ್ಪ, ಮುನಿಶಾಮಯ್ಯ, ಎಂ.ಎಸ್‌.ವೀರಪ್ಪ , ವಿದೇಶಕ್ಕೆ ಹೋಗಿದ್ದ ಬಿ.ಶ್ರೀರಾಮರೆಡ್ಡಿ, ಗ್ರಾಮದ ಹಳೆಯ ತಲೆಮಾರಿನವರಾದ ಪಟೇಲ್‌ ಪಿಳ್ಳೇಗೌಡರು, ಮಲ್ಲಿಕಾರ್ಜುನಪ್ಪ, ಸೈಕಲ್‌ನಲ್ಲಿ ಕರ್ನಾಟಕವನ್ನು ಸುತ್ತಿಬಂದ ಎಂ.ರಾಮಯ್ಯ ಮತ್ತು ಪ್ರಭಾಕರ್‌, ಮ.ಮು.ಸ್ವಾಮಿ ಅವರ ಗಂಗಾದೇವಿ ನಾಟಕ ಮಂಡಳಿ ಮುಂತಾದವರ ಅಪರೂಪದ ಚಿತ್ರಗಳನ್ನು ಪ್ರದರ್ಶಿಸಲಾಗಿದೆ.
‘ನಾನು ಹುಟ್ಟಿದ ಊರಿನ ಕಲೆ, ಸಂಸ್ಕೃತಿ, ಇತಿಹಾಸ, ಹಳೆ ತಲೆಮಾರಿನ ಜನರ ಚಿತ್ರಗಳನ್ನು ಸಂಗ್ರಹಿಸುತ್ತಾ ಬಂದಂತೆ ಬಹಳ ಹೆಮ್ಮೆ ಎನಿಸುತ್ತಿತ್ತು. ನಮ್ಮ ಮುಂದಿನ ಪೀಳಿಗೆಗೆ ನಮ್ಮ ಜನರ ಸಾಧನೆಗಳ ಬಗ್ಗೆ ಪರಿಚಯ ಮಾಡಿ ಗ್ರಾಮದ ಹಾಗೂ ನಮ್ಮ ಸುತ್ತಲಿನ ಜನರ ಬಗ್ಗೆ ಅವರಲ್ಲಿ ಗೌರವ, ಆದರ, ಪ್ರೀತಿ ಮೂಡಿಸುವುದು ಈ ಪ್ರದರ್ಶನದ ಉದ್ದೇಶ. ಇತಿಹಾಸವನ್ನು ಮರೆತವರಿಗೆ ಉಜ್ವಲ ಭವಿಷ್ಯವಿಲ್ಲ. ನಮ್ಮ ಹಿಂದಿನವರ ಆದರ್ಶ, ಸಾಧನೆ ಮುಂದಿನವರಿಗೆ ಮಾರ್ಗದರ್ಶನವಾಗುತ್ತದೆ. ಒಂದು ಎಚ್ಚರಿಕೆಯ ಕರೆಗಂಟೆಯಾಗುತ್ತದೆ’ ಎಂದು ಎಂ.ಆರ್‌.ಪ್ರಭಾಕರ್‌ ತಿಳಿಸಿದರು.
–ಡಿ.ಜಿ.ಮಲ್ಲಿಕಾರ್ಜುನ.
error: Content is protected !!