23.1 C
Sidlaghatta
Friday, March 29, 2024

ಮಲ್ಲಿಶೆಟ್ಟಿಪುರದಲ್ಲಿ ವಾಸವಾಗಿರುವ ಐದು ನೂರು ವರ್ಷಗಳ ಇತಿಹಾಸವಿರುವ ಪಾಳೇಗಾರರ ವಂಶಸ್ಥರು

- Advertisement -
- Advertisement -

ಸುಮಾರು ಐದು ನೂರು ವರ್ಷಗಳ ಇತಿಹಾಸವಿರುವ ಚಿಕ್ಕಬಳ್ಳಾಪುರದ ಪಾಳೇಗಾರರ ವಂಶಸ್ಥರು ತಮ್ಮ ಗತ ಇತಿಹಾಸದ ನೆನಪುಗಳೊಂದಿಗೆ ತಾಲ್ಲೂಕಿನ ಮಲ್ಲಿಶೆಟ್ಟಿಪುರದಲ್ಲಿ ವಾಸಿಸುತ್ತಿದ್ದಾರೆ.

ಶಿಡ್ಲಘಟ್ಟ ತಾಲ್ಲೂಕಿನ ಮಲ್ಲಿಶೆಟ್ಟಿಪುರದಲ್ಲಿ ವಾಸವಾಗಿರುವ ಪಾಳೇಗಾರ ಮನೆತನದ ಮಂಜುನಾಥ ಅವರ ಮನೆಯ ಉಪ್ಪರಿಗೆಯಲ್ಲಿ ಕಟ್ಟಿಟ್ಟಿರುವ ಆಯುಧಗಳಾದ ಈಟಿ, ಭರ್ಜಿ, ಕತ್ತಿ ಮತ್ತು ಬೀಜ ಬಿತ್ತಲು ಬಳಸುವ ಕೆತ್ತನೆಗಳಿರುವ ಹಲುವಿ.
ಶಿಡ್ಲಘಟ್ಟ ತಾಲ್ಲೂಕಿನ ಮಲ್ಲಿಶೆಟ್ಟಿಪುರದಲ್ಲಿ ವಾಸವಾಗಿರುವ ಪಾಳೇಗಾರ ಮನೆತನದ ಮಂಜುನಾಥ ಅವರ ಮನೆಯ ಉಪ್ಪರಿಗೆಯಲ್ಲಿ ಕಟ್ಟಿಟ್ಟಿರುವ ಆಯುಧಗಳಾದ ಈಟಿ, ಭರ್ಜಿ, ಕತ್ತಿ ಮತ್ತು ಬೀಜ ಬಿತ್ತಲು ಬಳಸುವ ಕೆತ್ತನೆಗಳಿರುವ ಹಲುವಿ.

ಪಾಳೇಪಟ್ಟಿನ ನೆನಪಿಗಾಗಿ ಆಯುಧಗಳಾದ ಭರ್ಜಿ, ಕಡ್ಗ, ಈಟಿ ಮತ್ತು ಗುರಾಣಿ, ಕಬ್ಬಿಣದ ಪೆಟ್ಟಿಗೆ, ಲೆಕ್ಕಬರೆಯುವ ಆಸನ, ಹಳೆ ಪಾತ್ರೆ ಪಡಗಗಳು ಮತ್ತು ಕೃಷಿ ಉಪಕರಣಗಳನ್ನು ಉಳಿಸಿಕೊಂಡಿದ್ದಾರೆ. ಕಾಲದ ಹೊಡೆತಕ್ಕೆ ಸಿಕ್ಕ ಹಳೆಯ ಮನೆಯನ್ನು ಕೊಂಚ ಆಧುನೀಕರಿಸಿಕೊಂಡಿದ್ದಾರೆ. ಎಂದಿನ ಕೃಷಿ ಕೆಲಸದಲ್ಲಿ ತೊಡಗಿಕೊಳ್ಳುವ ಇವರಿಗೆ ತಮ್ಮ ಗತ ಇತಿಹಾಸದ ನೆನಪು ಮರುಕಳಿಸುವುದು ವರ್ಷಕ್ಕೊಮ್ಮೆ ಮನೆಯಲ್ಲಿರುವ ಕೆಲವೇ ಆಯುಧಗಳನ್ನು ಪೂಜೆಗೆ ತೆಗೆದಾಗ ಮಾತ್ರ.
ಶಿಡ್ಲಘಟ್ಟ ತಾಲ್ಲೂಕಿನ ಮಲ್ಲಿಶೆಟ್ಟಿಪುರದಲ್ಲಿ ವಾಸವಾಗಿರುವ ಪಾಳೇಗಾರ ಮನೆತನದ ಮಂಜುನಾಥ ಅವರ ಮನೆಯಲ್ಲಿರುವ ಪುರಾತನ ಕಬ್ಬಿಣದ ಪೆಟ್ಟಿಗೆಯ ಮೇಲೆ ಗಂಡುಬೇರುಂಡದ ಲಾಂಚನಗಳಿವೆ.
ಶಿಡ್ಲಘಟ್ಟ ತಾಲ್ಲೂಕಿನ ಮಲ್ಲಿಶೆಟ್ಟಿಪುರದಲ್ಲಿ ವಾಸವಾಗಿರುವ ಪಾಳೇಗಾರ ಮನೆತನದ ಮಂಜುನಾಥ ಅವರ ಮನೆಯಲ್ಲಿರುವ ಪುರಾತನ ಕಬ್ಬಿಣದ ಪೆಟ್ಟಿಗೆಯ ಮೇಲೆ ಗಂಡುಬೇರುಂಡದ ಲಾಂಚನಗಳಿವೆ.

‘೧೪೭೮ರಲ್ಲಿ ಈ ಮನೆತನದ ಮಲ್ಲಭೈರೇಗೌಡ ತನ್ನ ಮಗ ಮರಿಗೌಡನೊಂದಿಗೆ ಈಗ ಚಿಕ್ಕಬಳ್ಳಾಪುರ ಪಟ್ಟಣವಿರುವ ಸ್ಥಳದಲ್ಲಿ ಹಿಂದೆ ಇದ್ದ ಕೋಡಿಮಂಚಹಳ್ಳಿ ಗ್ರಾಮದಲ್ಲಿ ಕೋಟೆ ಕಟ್ಟಿ ಪೇಟೆಯನ್ನು ಸ್ಥಾಪಿಸಿದರಂತೆ. ಈ ಮನೆತನದವರು ಶಿಡ್ಲಘಟ್ಟವನ್ನು ಖರೀದಿಸುವ ಮೂಲಕ ತಮ್ಮ ಪಾಳೇಪಟ್ಟಿನ ವ್ಯಾಪ್ತಿಯನ್ನು ನಂದಿದುರ್ಗ, ಕಳವಾರದುರ್ಗ, ಗುಡಿಬಂಡೆ ಹಾಗೂ ಇಟ್ಕಲ್ ದುರ್ಗಗಳಲ್ಲಿ ಕೋಟೆಯನ್ನು ಕಟ್ಟುವ ಮೂಲಕ ಪಾಳೇಪಟ್ಟನ್ನು ಭದ್ರಪಡಿಸಿಕೊಂಡರು. ಮರಿಗೌಡ, ದೊಡ್ಡಭೈರೇಗೌಡ, ರಂಗಪ್ಪಗೌಡ, ಜೋಗಿಭೈರೇಗೌಡ ಮುಂತಾದವರು ಆಳ್ವಿಕೆಯನ್ನು ನಡೆಸಿದರು. ಬೈಚೇಗೌಡನ(೧೭೦೫-–೧೭೨೧) ಆಳ್ವಿಕೆಯಲ್ಲಿ ಮೈಸೂರು ಅರಸರ ಮುತ್ತಿಗೆಯನ್ನು ಮರಾಠರ ಸಹಾಯದಿಂದ ಹಿಮ್ಮೆಟ್ಟಿಸಲಾಯಿತು.
ಚಿಕ್ಕಬಳ್ಳಾಪುರ ಪಾಳ್ಳೇಗಾರ್ ಬಚ್ಚಣ್ಣ
ಚಿಕ್ಕಬಳ್ಳಾಪುರ ಪಾಳ್ಳೇಗಾರ್ ಬಚ್ಚಣ್ಣ

೧೭೬೨ರಲ್ಲಿ ಹೈದರಾಲಿಯು ಚಿಕ್ಕಬಳ್ಳಾಪುರದ ಕೋಟೆಗೆ ಮುತ್ತಿಗೆ ಹಾಕಿ ಮೂರು ತಿಂಗಳ ಕಾಲ ಹರಸಾಹಸ ಮಾಡಿದರೂ ಸ್ವಾಧೀನಪಡಿಸಿಕೊಳ್ಳಲಾಗದೇ ಐದು ಲಕ್ಷ ಪಗೋಡವನ್ನು ಪೊಗದಿಯಾಗಿ ಪಡೆದು ಮುತ್ತಿಗೆಯನ್ನು ಹಿಂಪಡೆಯಲಾಯಿತು. ಹೈದರಾಲಿಯು ಸೈನ್ಯದೊಂದಿಗೆ ತೆರಳಿದೊಡನೆ ಪಾಳೇಗಾರ ಚಿಕ್ಕಪ್ಪಗೌಡ ಸಹಾಯಕ್ಕಾಗಿ ಮರಾಠ ಸೈನ್ಯವನ್ನು ಕರೆಸಿಕೊಂಡ. ಈ ಬೆಳವಣಿಗೆಯನ್ನು ಸಹಿಸದ ಹೈದರಾಲಿ ತಕ್ಷಣವೇ ಮರುಮುತ್ತಿಗೆ ಹಾಕಿ ಕೋಟೆಯನ್ನು ವಶಪಡಿಸಿಕೊಂಡನು. ಅದರ ಬೆನ್ನಲ್ಲೇ ನಂದಿದುರ್ಗ, ಕಳವಾರದುರ್ಗ, ಗುಡಿಬಂಡೆ, ಇಟ್ಕಲ್‌ದುರ್ಗ ಹಾಗೂ ಕೋಟೆಕೊಂಡಗಳನ್ನೂ ಸ್ವಾಧೀನಪಡಿಸಿಕೊಂಡನು. ಚಿಕ್ಕಬಳ್ಳಾಪುರ ಪಾಳೇಗಾರ ಚಿಕ್ಕಪ್ಪಗೌಡ ಮತ್ತವನ ಕುಟುಂಬವನ್ನು ಬಂಧಿಸಿ ಬೆಂಗಳೂರಿನ ಸೆರೆಮನೆಯಲ್ಲಿಡಲಾಯಿತು.
ಸ್ವಲ್ಪಕಾಲ ಗ್ರಹಣಗ್ರಸ್ಥವಾಗಿದ್ದ ಈ ಪಾಳೇಪಟ್ಟಿಗೆ ಲಾರ್ಡ್ ಕಾರ್ನ್‌ವಾಲೀಸನು ನಾರಾಯಣಗೌಡ ಎಂಬುವರನ್ನು ನೇಮಿಸಿ ಜೀವಂತಿಕೆ ನೀಡಿದನು. ಆದರೆ ಇದರಿಂದ ವಿಚಲಿತನಾದ ಟಿಪ್ಪು ಸುಲ್ತಾನ್ ಮುತ್ತಿಗೆ ಹಾಕಿ ಚಿಕ್ಕಬಳ್ಳಾಪುರವನ್ನು ತನ್ನ ಕೈವಶಮಾಡಿಕೊಂಡನು. ೧೭೯೧ರಲ್ಲಿ ಬ್ರಿಟಿಷರು ನಂದಿದುರ್ಗವನ್ನು ವಶಪಡಿಸಿಕೊಂಡ ನಂತರ ಸ್ವಲ್ಪಕಾಲ ಅದರ ನಿಯಂತ್ರಣವನ್ನು ಪಾಳೇಗಾರರು ಹೊಂದಿದ್ದರು. ಆದರೆ ಟಿಪ್ಪು ಮತ್ತು ಬ್ರಿಟಿಷರ ನಡುವೆ ಸಂಧಾನ ಏರ್ಪಟ್ಟಿದ್ದರಿಂದ ಚಿಕ್ಕಬಳ್ಳಾಪುರ ಪಾಳೇಗಾರರು ಅಧಿಕಾರವಿಹೀನರಾದರು. ಇದರೊಂದಿಗೆ ಚಿಕ್ಕಬಳ್ಳಾಪುರ ಪಾಳೇಪಟ್ಟಿನ ಅವಸಾನವಾಯಿತು’ ಎಂದು ಇತಿಹಾಸಕಾರ ಡಾ.ಜಿ.ಶ್ರೀನಿವಾಸಯ್ಯ ತಿಳಿಸಿದರು.
‘ಪಾಳೇಗಾರ ಅಣ್ಣೀಗೌಡ(೧೬೮೭-–೧೭೦೫) ತನ್ನ ಆಳ್ವಿಕೆಯ ಕಾಲದಲ್ಲಿ ಶಿಡ್ಲಘಟ್ಟವನ್ನು ಖರೀದಿಸಿ ಕೋಟೆ ಪೇಟೆಗಳನ್ನು ಕಟ್ಟಿಸಿದ್ದ. ಶಿಡ್ಲಘಟ್ಟ ತಾಲ್ಲೂಕಿನ ಬೂದಾಳದ ಬಳಿಯ ೧೬೩೧ರ ಶಾಸನ ಇಮ್ಮಡಿ ಬೈಚೇಗೌಡನು ದತ್ತಿ ಬಿಟ್ಟ ವಿಚಾರವನ್ನು ತಿಳಿಸಿದರೆ, ತಾಲ್ಲೂಕಿನ ಮಳ್ಳೂರು ಮತ್ತು ಮೇಲೂರಿನ ಶಾಸನಗಳು ೧೬೯೭ರಲ್ಲಿ ಗೋಪಾಲಗೌಡರು ದತ್ತಿ ಬಿಟ್ಟ ಅಂಶವನ್ನು ತಿಳಿಸುತ್ತದೆ’ ಎಂದು ಅವರು ವಿವರಿಸಿದರು.
ಶಿಡ್ಲಘಟ್ಟ ತಾಲ್ಲೂಕಿನ ಮಲ್ಲಿಶೆಟ್ಟಿಪುರದಲ್ಲಿ ವಾಸವಾಗಿರುವ ಪಾಳೇಗಾರ ಮನೆತನದ ಮಂಜುನಾಥ್ ಮತ್ತು ಅವರ ತಂದೆ ವೆಂಕಟಪ್ಪಯ್ಯ.
ಶಿಡ್ಲಘಟ್ಟ ತಾಲ್ಲೂಕಿನ ಮಲ್ಲಿಶೆಟ್ಟಿಪುರದಲ್ಲಿ ವಾಸವಾಗಿರುವ ಪಾಳೇಗಾರ ಮನೆತನದ ಮಂಜುನಾಥ್ ಮತ್ತು ಅವರ ತಂದೆ ವೆಂಕಟಪ್ಪಯ್ಯ.

‘ನಾವೀಗ ರೈತರು. ಪಾಳೇಗಾರಿಕೆ ಒಂದು ಇತಿಹಾಸವಷ್ಟೆ. ಮನೆಯಲ್ಲಿ ನಮ್ಮ ಮುತ್ತಾತ ಚಿಕ್ಕಬಳ್ಳಾಪುರ ಪಾಳ್ಳೇಗಾರ್ ಬಚ್ಚಣ್ಣನವರ ಕಪ್ಪು ಬಿಳುಪು ಚಿತ್ರವಿದೆ. ಕೆಲವು ಆಯುಧಗಳಿವೆ. ಅವನ್ನು ವರ್ಷಕ್ಕೊಮ್ಮೆ ಪೂಜಿಸುತ್ತೇವೆ. ಹಳೆಯ ಮನೆಯು ಶಿಥಿಲಗೊಳ್ಳುತ್ತಿದ್ದಂತೆ ದುರಸ್ತಿ ಮಾಡಿದ್ದೇವೆ. ನಮ್ಮ ಸಂಬಂಧಿಕರು ಮಾಗಡಿ ಬಳಿಯ ಹುಳಿಕಲ್‌ನಲ್ಲಿ ವಾಸವಿದ್ದು ಅವರಿನ್ನೂ ಹಳೆಯ ಮನೆಯನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ. ತಾಲ್ಲೂಕಿನ ಎಸ್.ದೇವಗಾನಹಳ್ಳಿಯಲ್ಲೂ ನಮ್ಮ ಸಂಬಂಧಿಕರಿದ್ದಾರೆ. ನಮ್ಮ ನಿತ್ಯ ಬದುಕಿನ ಜಂಜಾಟದಲ್ಲಿ ಹಳೆಯ ಅನೇಕ ವಸ್ತುಗಳನ್ನು ಉಳಿಸಿಕೊಳ್ಳಲಾಗಿಲ್ಲ’ ಎಂದು ಮಲ್ಲಿಶೆಟ್ಟಿಪುರದ ಮಂಜುನಾಥ್ ಹೇಳುತ್ತಾರೆ.
– ಡಿ.ಜಿ.ಮಲ್ಲಿಕಾರ್ಜುನ.

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!