25.1 C
Sidlaghatta
Saturday, December 27, 2025
Home Blog Page 1015

ಹಾಲು ಉತ್ಪಾದಕರ ಸಹಕಾರ ಸಂಘದ ಉದ್ಘಾಟನೆ

0

ಜಿಲ್ಲೆಯಲ್ಲಿ ನೀರಿನ ಅಭಾವದಿಂದಾಗಿ ರೇಷ್ಮೆ ಬೆಳೆ ಕುಸಿಯುತ್ತಿದ್ದು ಉಳಿದಿರುವ ಏಕೈಕ ದಾರಿ ಹೈನುಗಾರಿಕೆಯಾಗಿದೆ. ಹಾಗಾಗಿ ಈ ಉದ್ಯಮದಲ್ಲಿ ಇನ್ನಷ್ಟು ತೊಡಗಿಸಿಕೊಳ್ಳುವುದರೊಂದಿಗೆ ರೈತರು ಆರ್ಥಿಕವಾಗಿ ಸಬಲರಾಗಬೇಕು ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ತಾಲ್ಲೂಕಿನ ಮಲ್ಲೇನಹಳ್ಳಿ ಗ್ರಾಮದಲ್ಲಿ ಈಚೆಗೆ ನೂತನ ಹಾಲು ಉತ್ಪಾದಕರ ಸಹಕಾರ ಸಂಘದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ತಾಲ್ಲೂಕಿನ ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳು ಉತ್ತಮವಾಗಿ ನಡೆಯುತ್ತಿದ್ದು ಹಾಲಿನ ಉತ್ಪಾದನೆ ಹಾಗು ಗುಣಮಟ್ಟದ ಬಗ್ಗೆ ಇನ್ನಷ್ಟು ಕಾಳಜಿ ವಹಿಸಬೇಕು. ಈ ಹಿಂದೆ ಸುಮಾರು ೧೦ ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದ್ದು ಇದೀಗ ೮.೯ ಲಕ್ಷ ಲೀಟರ್‌ಗೆ ಇಳಿದಿದೆ. ಜಿಲ್ಲೆಯ ಹಾಲು ಉತ್ಪಾದನೆಯಲ್ಲಿ ಎರಡನೇ ಸ್ಥಾನದಲ್ಲಿರುವ ಶಿಡ್ಲಘಟ್ಟ ತಾಲ್ಲೂಕು ಮುಂಬರುವ ದಿನಗಳಲ್ಲಿ ಒಂದನೇ ಸ್ಥಾನಕ್ಕೆ ಬರಬೇಕು ಎಂದರು.
ಕೋಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ ಮಾತನಾಡಿ ಗುಣಮಟ್ಟದ ಹಾಲು ಉತ್ಪಾದನೆ ಸೇರಿದಂತೆ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಯಾವುದೇ ರಾಜಕೀಯಕ್ಕೆ ಅವಕಾಶ ನೀಡದೆ ಎಲ್ಲರೂ ಒಗ್ಗಟ್ಟಾಗಿ ದುಡಿಯುವುದರೊಂದಿಗೆ ಸಹಕಾರಿ ಸಂಘಗಳ ಅಭಿವೃದ್ಧಿಗೆ ಶ್ರಮಿಸಬೇಕು. ಹಾಲಿನ ಉತ್ಪಾದನೆಯ ಜೊತೆ ಜೊತೆಗೆ ಹಾಲಿನ ಗುಣಮಟ್ಟ ಕಾಪಾಡಲು ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರೂ ಸೇರಿದಂತೆ ಕಾರ್ಯದರ್ಶಿಗಳು ಎಚ್ಚರವಹಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಸಹಕಾರ ಸಂಘಗಳ ನಿರ್ದೇಶಕ ತಾದೂರು ರಮೇಶ್, ಶ್ರೀನಿವಾಸಗೌಡ, ಮಲ್ಲೇನಹಳ್ಳಿ ಸಹಕಾರ ಸಂಘದ ಅಧ್ಯಕ್ಷ ಪ್ರಕಾಶ್, ಒಕ್ಕೂಟದ ಉಪವ್ಯವಸ್ಥಾಪಕ ಡಾ.ಈಶ್ವರಯ್ಯ, ಶ್ರೀನಿವಾಸ್ ಮತ್ತಿತರರು ಹಾಜರಿದ್ದರು.

ಸರ್ಧಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನಾಚರಣೆಯ ಅಂಗವಾಗಿ ಏಕತಾ ಓಟ

0

ರಾಷ್ಟ್ರದ ಏಕತೆ, ಅಖಂಡತೆ, ಮತ್ತು ಸುರಕ್ಷತೆಗಾಗಿ ದೇಶದ ಪ್ರತಿಯೊಬ್ಬ ನಾಗರಿಕರು ತಮ್ಮನ್ನು ತಾವು ಸಂಪೂರ್ಣವಾಗಿ ಸಮರ್ಪಣೆ ಮಾಡಿಕೊಂಡಾಗ ಮಾತ್ರ ದೇಶವು ಸರ್ವತೋಮುಖ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದು ಬಿಜೆಪಿ ತಾಲ್ಲೂಕು ಅಧ್ಯಕ್ಷ ಕಂಬದಹಳ್ಳಿ ಸುರೇಂದ್ರಗೌಡ ಹೇಳಿದರು.
ದೇಶದ ಉಕ್ಕಿನ ಮನುಷ್ಯ ಸರ್ಧಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನಾಚರಣೆಯ ಅಂಗವಾಗಿ ಶುಕ್ರವಾರ ಸಾರ್ವಜನಿಕ ಬಸ್ ನಿಲ್ದಾಣದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಏಕತಾ ದಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ವಲ್ಲಭಭಾಯಿ ಪಟೇಲರ ದೂರದೃಷ್ಟಿ, ದೇಶಕ್ಕಾಗಿ ಅವರು ಮಾಡಿದ ಸೇವೆ, ಇಡೀ ಜನಾಂಗಕ್ಕೆ ಮಾದರಿಯಾಗಬೇಕಾಗಿದೆ. ದೇಶದ ಯುವಜನತೆ ಪಟೇಲರ ತತ್ವ ಆದರ್ಶಗಳನ್ನು ಅಳವಡಿಸಿಕೊಳ್ಳುವುದರೊಂದಿಗೆ ಸುಭದ್ರ ರಾಷ್ಟ್ರ ನಿರ್ಮಾಣ ಮಾಡಲು ಕೈ ಜೋಡಿಸಬೇಕು ಎಂದರು.
ಪಟ್ಟಣದ ಸಾರ್ವಜನಿಕ ಬಸ್ ನಿಲ್ದಾಣದಿಂದ ತಾಲ್ಲೂಕು ಕಚೇರಿವರೆಗೂ ಏಕತಾ ಓಟದಲ್ಲಿ ಪಾಲ್ಗೊಂಡವರಿಗೆ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ತಹಸೀಲ್ದಾರ್ ಜಿ.ಎ.ನಾರಾಯಣಸ್ವಾಮಿ ಪ್ರತಿಜ್ಞಾವಿಧಿ ಬೋಧಿಸಿದರು.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ರಮೇಶ್‌ಬಾಯಿರಿ, ಜಿಲ್ಲಾ ಉಪಾಧ್ಯಕ್ಷ ದಾಮೋದರ್, ಸಿ.ವಿ.ಲೋಕೇಶ್‌ಗೌಡ, ಎ.ಎಂ.ತ್ಯಾಗರಾಜ್, ಸುಜಾತಮ್ಮ, ಮಂಜುಳಮ್ಮ, ರತ್ನಮ್ಮ, ಶಿವಕುಮಾರಗೌಡ, ದ್ಯಾವಪ್ಪನಗುಡಿ ನಾರಾಯಣಸ್ವಾಮಿ, ಅಶ್ವಥ್, ಶ್ರೀರಾಮ್, ನಂದೀಶ್‌ ಮತ್ತಿತರರು ಏಕತಾ ಓಟದಲ್ಲಿ ಪಾಲ್ಗೊಂಡಿದ್ದರು.

ಮಕ್ಕಳಿಗೆ ಸಹಜ ಬಾಲ್ಯದ ಆನಂದವನ್ನು ಅನುಭವಿಸಲು ಬಿಡುತ್ತಿದ್ದೇವೆಯೇ?

0

“ನಿಮ್ಮ ನಾಲ್ಕು ವರ್ಷದ ಮಗು…
• ನಿಮ್ಮ ಹಾಗೆ ಓದಬಲ್ಲ
• 6ಕ್ಕೂ ಹೆಚ್ಚು ಭಾಷೆ ಮಾತನಾಡಬಲ್ಲ
• ಕಂಪ್ಯೂಟರ್ ಬಳಸಬಲ್ಲ
• ಸಂಗೀತವಾದ್ಯ ನುಡಿಸಬಲ್ಲ
• ಒಂದು ಗಂಟೆ ಧ್ಯಾನಾವಸ್ಥೆಯಲ್ಲಿ ಕೂರಬಲ್ಲ…. ಇತ್ಯಾದಿ”.
ಇದು ಶಾಲೆಯೊಂದು ಪೋಷಕರನ್ನು ಆಕರ್ಷಿಸಲು ನೀಡಿರುವ ಜಾಹಿರಾತಿನ ಸಾಲುಗಳು. ಬಹುಷಃ ಇಂತಹ ಶಾಲೆಗಳಿಗೆ ಜನ ಮುಗಿಬೀಳುವುದರಲ್ಲಿ, ಕೇಳಿದಷ್ಟು ಫೀಸು, ಡೊನೇಷನ್‍ಗಳನ್ನು ಕಕ್ಕುವುದರಲ್ಲಿ ಆಶ್ಚರ್ಯವೇನಿಲ್ಲ.
ಇಂತಹ ಶಾಲೆಗಳಲ್ಲಿ ಕಲಿತ ಮಕ್ಕಳು ಹತ್ತು ಹನ್ನೆರೆಡು ವರ್ಷಕ್ಕೆ ವಯಸ್ಕರರ ಜ್ಞಾನ, ಗುಣ ಸ್ವಭಾವಗಳನ್ನೆಲ್ಲಾ ಬೆಳೆಸಿಕೊಳ್ಳುತ್ತಾರೆಂದುಕೊಳ್ಳೋಣ. ಇದು ಪೋಷಕರಿಗೆ ಅತ್ಯಂತ ಆನಂದ ಮತ್ತು ಹೆಮ್ಮೆ ತರುವ ವಿಚಾರವೇನೋ ನಿಜ, ಆದರೆ ಇದರ ಇನ್ನೊಂದು ಮುಖವನ್ನು ನಾವು ಯೋಚಿಸಿದ್ದೇವೆಯೇ? ಇಂತಹ ಮಕ್ಕಳು ಪೋಷಕರ ಹತ್ತಿರ ಬಂದು, “ಅಪ್ಪಾ ನಾನೀಗ ಮಾನಸಿಕವಾಗಿ, ಭೌದ್ಧಿಕವಾಗಿ ಬೆಳೆದಿದ್ದೇನೆ, ನನಗೊಂದು ಮದುವೆ ಮಾಡು” ಅಂದರೆ ಪೋಷಕರೇನು ಮಾಡಬೇಕು? ಹಾಗೊಮ್ಮೆ ನೇರವಾಗಿ ಕೇಳದಿದ್ದರೂ, ಹದಿವಯಸ್ಸಿನ ಮಕ್ಕಳು ಡೇಟಿಂಗ್ ಹೋಗಲು ಶುರುಮಾಡಿದರೆ, ಸಿಗರೇಟ್, ಗುಟ್ಕಾ, ಮದ್ಯ ಮುಂತಾದವುಗಳನ್ನು ಸೇವಿಸತೊಡಗಿದರೆ, ಹೆಣ್ಣು ಮಕ್ಕಳು ಗರ್ಭಧರಿಸಿದರೆ, ಅದನ್ನೆಲ್ಲಾ ಒಪ್ಪಿಕೊಳ್ಳಲು ಪೋಷಕರು ಸಿದ್ಧರಿದ್ದಾರೆಯೇ? ಇದಕ್ಕೆಲ್ಲಾ ಜೀವಂತ ಉದಾಹರಣೆಗಳು ಪಾಶ್ಚಿಮಾತ್ಯ ದೇಶಗಳಲ್ಲಿ ಹೇರಳವಾಗಿ ಸಿಕ್ಕುತ್ತವೆ. ನಮ್ಮ ಮೆಟ್ರೋಗಳಲ್ಲಿಯೂ ಇತ್ತೀಚೆಗೆ ಇವು ಅಪರೂಪವೇನಲ್ಲ.
ಮಕ್ಕಳು ಕೆಲವೇ ವಿಚಾರದಲ್ಲಿ, ಅದೂ ಪೋಷಕರಿಗೆ ಬೇಕಾದ ವಿಚಾರದಲ್ಲಿ ಮಾತ್ರ ದೊಡ್ಡವರಂತಿರಬೇಕು; ಉಳಿದಂತೆ ಮಕ್ಕಳೇ ಆಗಿರಬೇಕು-ಎಂದು ಬಯಸುವವರಿಗೆ ನಿರಾಸೆ ಕಾದಿರುತ್ತದೆ. ಒಮ್ಮೆ ವಯಸ್ಕರ ಪ್ರಪಂಚದ ಟಿಕೆಟ್ ಮಕ್ಕಳಿಗೆ ಸಿಕ್ಕ ಮೇಲೆ, ಅವರು ಅದನ್ನು ಎಲ್ಲಾ ಕಡೆ ಉಪಯೋಗಿಸುತ್ತಾರೆ. ಇದೆಲ್ಲಾ ವಿತಂಡವಾದ ಎಂದು ಹೊರನೋಟಕ್ಕೆ ಅನ್ನಿಸಿದರೂ, ದುರಾದೃಷ್ಟವಶಾತ್ ಇದು ವಾಸ್ತವ.
ಪ್ರಕೃತಿಯ ಎಲ್ಲಾ ಚಲನೆಗೂ ಒಂದು ವೇಗವನ್ನು ಪ್ರಕೃತಿಯೇ ನಿರ್ಧರಿಸುತ್ತದೆ. ಅದನ್ನು ಅಲ್ಪ ಸ್ವಲ್ಪ ಹೆಚ್ಚು ಅಥವಾ ಕಡಿಮೆ ಮಾಡಬಹುದೇನೋ. ಆದರೆ ಆಧುನಿಕ ಮಾನವ ಮಾಡುತ್ತಿರುವಂತೆ ಆ ಕೆಲಸಗಳ ವೇಗ ಮತ್ತು ನೀತಿನಿಯಮಗಳನ್ನು ತೀವ್ರವಾಗಿ ಹೆಚ್ಚಿಸಲು ಅಥವಾ ಬದಲಾಯಿಸಲು ಪ್ರಯತ್ನಿಸಿದರೆ, ಅದರ ಭಯಂಕರ ಅಡ್ಡಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಇದನ್ನು ಪರಿಸರಕ್ಕೆ ಸಂಬಂಧಿಸಿದ ಹಲವಾರು ವಿಚಾರಗಳಲ್ಲಿ ನಾವು ಈಗಾಗಲೇ ಕಾಣುತ್ತಿದ್ದೇವೆ.
kid2ಇದೇ ರೀತಿ ಮನುಷ್ಯನ ದೈಹಿಕ, ಬೌದ್ಧಿಕ ಮತ್ತು ಮಾನಸಿಕ ಬೆಳವಣಿಗೆ ಕೂಡ ಪ್ರಕೃತಿ ನಿರ್ಧಾರಿತ ವೇಗದಲ್ಲೇ ಮತ್ತು ನಿಯಮಗಳಲ್ಲೇ ಆಗಬೇಕು. ದೇಹದ ಮತ್ತು ಮನಸ್ಸಿನ ಬೆಳವಣಿಗೆಗೆ ಸಾಮರಸ್ಯವಿರಬೇಕು. ಇದನ್ನು ಕಡೆಗಣಿಸಿ ಯಾವುದಾದರೂ ಒಂದರ ಬೆಳವಣಿಗೆಯನ್ನು ತೀವ್ರಗೊಳಿಸಲೆತ್ನಿಸಿದರೆ ಮಕ್ಕಳ ಭಾವೀ ಜೀವನದ ಮೇಲೆ ಕೆಲವು ಅಡ್ಡಪರಿಣಾಮಗಳಾಗಬಹುದು.
ಇದಕ್ಕೆ ನಮ್ಮ ಕಣ್ಣೆದುರೇ ಸಾಕಷ್ಟು ಉದಾಹರಣೆಗಳಿದ್ದರೂ ನಾವು ಒಪ್ಪಿಕೊಳ್ಳುವುದಿಲ್ಲ. ಒಲಂಪಿಕ್ ಕ್ರೀಡೆಗಳಲ್ಲಿ ಮೆಡಲ್ ಗೆಲ್ಲುವುದಕ್ಕಾಗಿಯೇ ಮಕ್ಕಳ ಮೇಲೆ ಎಂತಹ ಒತ್ತಡಗಳನ್ನು ಹೇರಿ ಛಾಂಪಿಯನ್‍ಗಳನ್ನು ಸಿದ್ಧಪಡಿಸುತ್ತಾರೆಂಬುದನ್ನು ಹೆಚ್ಚಿನ ದೇಶಗಳು ಗೌಪ್ಯವಾಗಿಡುತ್ತವೆ. ಮೂಳೆಗಳು, ಮಾಂಸಖಂಡಗಳು, ಅದರ ಜೊತೆಗೆ ಮನಸ್ಸು, ಬುದ್ಧಿ ಯಾವುದೂ ಬೆಳೆಯದ ಮೂರ್ನಾಲ್ಕು ವರ್ಷದ ಹಸುಳೆಗಳ ಮೇಲೆ ಏನೆಲ್ಲಾ ಪ್ರಯೋಗ ಮಾಡುತ್ತಾರೆ ಮತ್ತು ಒತ್ತಡಗಳನ್ನು ಹೇರುತ್ತಾರೆ ಎನ್ನುವುದನ್ನು ಓದಿದರೆ ಇವರೇನು ಮನುಷ್ಯರಾ ಅಥವಾ ಕಟುಕರಾ ಎನ್ನುವ ಅನುಮಾನ ಬರುತ್ತದೆ. ದೇಶಕ್ಕಾಗಿ ಮೆಡಲ್‍ಗಳನ್ನು ಗೆದ್ದ ಮೇಲೆ ಈ ಛಾಂಪಿಯನ್‍ಗಳು ಉಳಿದ ಜೀವಮಾನವನ್ನು ಹೇಗೆ ಕಳೆಯುತ್ತಾರೆ ಎಂಬ ಮಾಹಿತಿ ನಮಗೆಲ್ಲಾ ನಗಣ್ಯವಾಬಿಡುತ್ತದೆ. ಚೈನಾದಂತಹ ದೇಶಗಳಲ್ಲಂತೂ ಎಲ್ಲಾ ಗೌಪ್ಯವಾಗಿಯೇ ನಡೆಯುತ್ತದೆ.
ಮೇಲಿನದು ಮಾನಸಿಕವಾಗಿ ಮತ್ತು ಬೌದ್ಧಿಕವಾಗಿ ಬೆಳವಣಿಗೆಯಾಗಿರದ ಮಕ್ಕಳ ದೈಹಿಕ ಬೆಳವಣಿಗೆಯನ್ನು ಮಾತ್ರ ತೀವ್ರಗೊಳಿಸುವ ಕ್ರೂರ ಕ್ರಿಯೆಯಾದರೆ, ಇವತ್ತಿನ ವಿದ್ಯಾವಂತ ತಂದೆತಾಯಂದಿರು ಮಾಡುತ್ತಿರುವುದು ಇದರ ಇನ್ನೊಂದು ಮುಖ. ಅಂದರೆ ದೇಹ, ಮನಸ್ಸುಗಳ ಬೆಳವಣಿಗೆಯ ವೇಗವನ್ನು ಮೀರಿ ಬುದ್ಧಿ ಮಾತ್ರ ಬೆಳೆವಣಿಗೆ ಆಗಬೇಕೆಂದು ಅಪೇಕ್ಷಿಸುವ ಇವರುಗಳು ತಮ್ಮ ಮಕ್ಕಳ ಮೇಲೆ ಅದೇ ರೀತಿಯ ಅನ್ಯಾಯಗಳನ್ನು ಮಾಡುತ್ತಿರುತ್ತಾರೆ. ತಮ್ಮ ಜೀವನದ ಬಗೆಗೆ ಇನ್ನೂ ಏನೂ ನಿರ್ಧಾರಗಳನ್ನು ತೆಗೆದುಕೊಳ್ಳಲಾರದ ಸ್ಥಿತಿಯಲ್ಲಿರುವ, ಭಾವನಾತ್ಮವಾಗಿ ಮತ್ತು ಆರ್ಥಿಕವಾಗಿ ಪೋಷಕರ ಮೇಲೆ ಅವಲಂಬಿತರಾಗಿರುವ ಮಕ್ಕಳ ಮೇಲೆ ಪೋಷಕರು ನಡೆಸುವ ಈ ರೀತಿಯ ದಬ್ಬಾಳಿಕೆ ಯಾವುದೇ ಕಾನೂನಿನಡಿ ಶಿಕ್ಷೆಗೆ ಒಳಪಡಿಸಲಾರದ್ದು. ಹಾಗಾಗಿಯೇ ಇಂತಹ ದಬ್ಬಾಳಿಕೆಯನ್ನು ಸಹಿಸಲಾರದ ಮಕ್ಕಳಿಗೆ ಉಳಿದಿರುವುದು ಆತ್ಮಹತ್ಯೆಯೊಂದೇ ದಾರಿ. ಒತ್ತಡವನ್ನು ನಿಭಾಯಿಸಲಾರದ ಎಷ್ಟೋ ಮಕ್ಕಳು ಇದರ ಮೊರೆಹೋಗುತ್ತಿದ್ದಾರೆ.
ಶಾಲಾದಿನಗಳಲ್ಲಿ ಸರಿಯಾಗಿ ಊಟ, ನಿದ್ದೆ ಮಾಡಲೂ ಆಗದಷ್ಟು ಕಲಿಕೆಯ ಒತ್ತಡ, ರಜ ಬಂತೆಂದರೆ ಬೇಸಿಗೆ ಶಿಬಿರಗಳು, ಅಬಾಕಸ್ ತರಗತಿಗಳು, ನೆನಪಿನ ಶಕ್ತಿ ವೃದ್ಧಿಸುವ ತರಬೇತಿ, ಮುಂದಿನ ತರಗತಿ ಟ್ಯೂಷನ್ ಕ್ಲಾಸ್‍ಗಳು ಮುಂತಾದವು. ಪೋಷಕರೇನು ತಮ್ಮ ಮಕ್ಕಳನ್ನು ಕೀ ಹಾಕಿದೊಡನೆ ಸ್ಟಾರ್ಟ್ ಆಗಿ, ಆಕ್ಸಿಲರೇಟರ್ ಒತ್ತಿದೊಡನೆ ಬೇಕಾದ ವೇಗದಲ್ಲಿ ಓಡುವ ತಮ್ಮ ಐಷಾರಾಮಿ ಕಾರು ಎಂದುಕೊಡಿದ್ದಾರೆಯೇ? ದುರಂತ ಅಂದರೆ ನಿರ್ಜೀವ ಕಾರುಗಳಿಗೆ ಸಿಗುವಷ್ಟು ಉಸಿರಾಟದ ಸಮಯವೂ ನಮ್ಮ ಮಕ್ಕಳಿಗೆ ಸಿಗುತ್ತಿಲ್ಲ.
ಇಂದಿನ ಮಕ್ಕಳು ತಮ್ಮ ಸಹಜವಾದ ತುಂಟಾಟದ, ಚಂಚಲತೆಯ, ಕುತೂಹಲದ, ಹುಡುಕಾಟ-ಪ್ರಯೋಗಶೀಲತೆಯ ಬಾಲ್ಯವನ್ನು ಕಳೆಯುವುದು ಇನ್ನು ಮುಂದೆ ಸಾಧ್ಯವೇ ಇಲ್ಲ ಅನ್ನಿಸುತ್ತದೆ. ಜಗಜಿತ್ ಸಿಂಗ್ ಹಾಡಿದ “ಏ ದೌಲತ್ ಭೀ ಲೇಲೋ, ಏ ಷೊಹರತ್ ಭಿ ಲೇ ಲೋ” ಎನ್ನುವ ಗಜಲ್‍ನ ಹಾಡುಗಳನ್ನು ಎಲ್ಲರೂ ಒಮ್ಮೆ ಕೇಳಲೇಬೇಕು. ಈ ಹಾಡಿನ ಹಿನ್ನೆಲೆಯಲ್ಲಿ ಇಂದಿನ ಮಕ್ಕಳ, ಹೆಚ್ಚಾಗಿ ಪಟ್ಟಣಗಳಲ್ಲಿರುವವರ ಪರಿಸ್ಥಿತಿ ನೋಡಿದರೆ, ಜಗಜಿತ್ ಸಿಂಗ್‍ನ ಧ್ವನಿಯ ವಿಷಾದ ನಮ್ಮನ್ನು ಕಾಡುತ್ತದೆ.
kid3ಬಾಲ್ಯವನ್ನು ಸಂಪೂರ್ಣವಾಗಿ ಅನುಭವಿಸದ ಮಕ್ಕಳು ಮುಂದೆ ಕ್ರೂರಿಗಳೂ, ಸಮಾಜಘಾತುಕರೂ ಆಗುವ ಸಾಧ್ಯತೆಗಳಿವೆಯೆಂದು ಸಮಾಜವಿಜ್ಞಾನಿಗಳು ಹೇಳುತ್ತಾರೆ. ಇದು ಎಲ್ಲಾ ಮಕ್ಕಳಿಗೂ ಅನ್ವಯಿಸುವುದಿಲ್ಲವೆಂದುಕೊಂಡರೂ, ನಾವೀಗ ಮಕ್ಕಳಿಗೆ ಕೊಡುತ್ತಿರುವ ಬಾಲ್ಯದ ಅನುಭವಗಳು ಅವರ ಸಂತೃಪ್ತ ಜೀವನಕ್ಕೆ ಬುನಾದಿಯನ್ನಂತೂ ಹಾಕುವುದು ಸಾಧ್ಯವಿಲ್ಲ. ಇದರಿಂದ ತಾವು ಗಳಿಸಿರುವ ಭರಪೂರ ಹಣದ ಮಧ್ಯೆಯೂ ಅವರು ಅಸುಖಿಗಳಾಗುವುದಷ್ಟೇ ಅಲ್ಲ, ಅದನ್ನು ತಮ್ಮ ಮುಂದಿನ ತಲೆಮಾರಿಗೂ ವರ್ಗಾಯಿಸುತ್ತಾರೆ.
ಈ ಪ್ರಪಂಚದ ಪ್ರತಿಯೊಂದು ಜೀವಿಯೂ ಅನನ್ಯವಾದದ್ದು. ಅದನ್ನು ಸಹಜವಾಗಿ ಬೆಳೆಯಲು ಬಿಟ್ಟರೆ ನಮ್ಮ ಚಿಂತನೆಯ ಮಿತಿಗಳನ್ನು ಮೀರಿ ಅವು ಅರಳುವ ಸಾಧ್ಯತೆಗಳಿರುತ್ತವೆ. ಇದು ನಮ್ಮ ಮಕ್ಕಳಿಗೂ ಅನ್ವಯಿಸುತ್ತದೆ. ಆದ್ದರಿಂದ ಪೋಷಕರೇ ದಯವಿಟ್ಟು ನಿಮ್ಮ ಮಕ್ಕಳನ್ನು ಹಣಗಳಿಸುವ ಭಾವೀ ಯಂತ್ರಗಳಂತೆ ಮಾತ್ರ ನೋಡದೆ, ಅವರಲ್ಲಿ ಒಂದು ಜೀವಂತ ವ್ಯಕ್ತಿಯನ್ನು, ವ್ಯಕ್ತಿತ್ವವನ್ನು, ಅರಳುವ ಪ್ರತಿಭೆಯನ್ನು ಹುಡುಕಿ. ಅವರಿಗೆ ಬಾಲ್ಯದ ಸಹಜ ಆನಂದಗಳನ್ನು ಹೊಂದಲು ಅವಕಾಶಮಾಡಿಕೊಡಿ.
– ವಸಂತ್ ನಡಹಳ್ಳಿ

ಅಂಗವಿಕಲರಿಗೆ ಟ್ರೈಸಿಕಲ್ ವಿತರಣೆ

0

ಅಂಗವಿಕಲರಿಗೆ ಅನುಕಂಪ ಬೇಕಿಲ್ಲ. ಅವರಿಗೆ ಸಿಗಬೇಕಾದ ಸವಲತ್ತು ಹಾಗೂ ಪ್ರಾಮುಖ್ಯತೆಯನ್ನು ನೀಡಿ ಎಂದು ಅಧಿಕಾರಿಗಳಿಗೆ ಶಾಸಕ ಎಂ.ರಾಜಣ್ಣ ಸೂಚಿಸಿದರು.
ಪಟ್ಟಣದ ತಾಲ್ಲೂಕು ಪಂಚಾಯತಿ ಆವರಣದಲ್ಲಿ ೨೦೧೨–-೧೩ ಹಾಗು ೨೦೧೩-–೧೪ ನೇ ಸಾಲಿನ ನಿರ್ಭಂದಿತ ಹಾಗೂ ೧೩ ನೇ ಹಣಕಾಸಿನ ಯೋಜನೆಯ ಶೇಕಡಾ ೩ ರ ಅನುಧಾನದಡಿ ಅಂಗವಿಕಲರಿಗೆ ಬುಧವಾರ ಟ್ರೈಸಿಕಲ್ ವಿತರಣೆ ಮಾಡಿ ಅವರು ಮಾತನಾಡಿದರು.
ಅಂಗವಿಕಲರು ಯಾವುದೇ ಸರ್ಕಾರಿ ಕಚೇರಿಗೆ ಬಂದರೂ ಅವರಿಗೆ ಪ್ರಥಮ ಆದ್ಯತೆ ನೀಡುವುದರೊಂದಿಗೆ ಅವರಿಗೆ ಸಿಗಬೇಕಾದ ಸವಲತ್ತುಗಳನ್ನು ತ್ವರಿತಗತಿಯಲ್ಲಿ ಮಾಡಿಕೊಡಬೇಕು. ಹಣದ ರೂಪದಲ್ಲಿ ಅನುದಾನವನ್ನು ಇತರ ತಾಲ್ಲೂಕುಗಳಲ್ಲಿ ನೀಡಡಬಹುದಾದರೂ ನಮ್ಮ ತಾಲ್ಲೂಕಿನಲ್ಲಿ ನೀಡುವಂತಿಲ್ಲ. 9 ಲಕ್ಷ 45 ಸಾವಿರ ರೂಪಾಯಿಯಷ್ಟು ಹಣವಿದೆ. ಸಲಕರಣೆ ರೂಪದಲ್ಲಿಯೇ ಅನುದಾನ ವಿತರಿಸಬೇಕಾದ ಅನಿವಾರ್ಯತೆಯಿದೆ ಎಂದು ಹೇಳಿದರು.
ತಾಲ್ಲೂಕು ಪಂಚಾಯಿತಿಯ ಶೇಕಡಾ ೩ ರಷ್ಟು ಅನುದಾನದಲ್ಲಿ ತಾಲ್ಲೂಕಿನ ಒಟ್ಟು ೩೮ ಮಂದಿ ಅಂಗವಿಕಲರಿಗೆ 2 ಲಕ್ಷ 45 ಸಾವಿರ ರೂಪಾಯಿಗಳ ಬೆಲೆಯ ಟ್ರೈಸಿಕಲ್‌ಗಳನ್ನು ವಿತರಿಸಲಾಯಿತು.
ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಡಾ.ಸಿದ್ದರಾಮಯ್ಯ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಆಂಜಿನಮ್ಮ, ಉಪಾಧ್ಯಕ್ಷ ಡಿ.ಎಸ್.ಎನ್.ರಾಜು, ಮಾಜಿ ಅಧ್ಯಕ್ಷರಾದ ಯರ್ರಬಚ್ಚಪ್ಪ, ಬಿ.ಎನ್.ವೇಣುಗೋಪಾಲ್, ತಾಲ್ಲೂಕು ಪಂಚಾಯತಿ ಸದಸ್ಯರಾದ ಶ್ರೀನಾಥ್, ತಹಸೀಲ್ದಾರ್ ಜಿ.ಎ.ನಾರಾಯಣಸ್ವಾಮಿ. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಗಣಪತಿಸಾಕರೆ, ಮಂಜುನಾಥ್‌, ಮುನಿರೆಡ್ಡಿ, ಮುನಿರಾಜು, ಮುನಿವೆಂಕಟಸ್ವಾಮಿ, ದ್ಯಾವಪ್ಪ, ಮಾರಪ್ಪ, ಸಂತೋಷ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಹೊಸದ್ಯಾವರು ಪೂಜಾ ಕಾರ್ಯಕ್ರಮಕ್ಕೆ ತಯಾರಿ

0

ಶಿಡ್ಲಘಟ್ಟ ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಗ್ರಾಮದಲ್ಲಿ ಭಾನುವಾರದ ಹೊಸದ್ಯಾವರು ಪೂಜಾ ಕಾರ್ಯಕ್ರಮಕ್ಕೆ ಹೊಸ ಮಡಿಕೆಗಳನ್ನು ಕೊಳ್ಳುತ್ತಿರುವ ಗ್ರಾಮಸ್ಥರು.

ಹಿತ್ತಲಹಳ್ಳಿ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ರಮ

0

ಶಿಡ್ಲಘಟ್ಟ ತಾಲ್ಲೂಕಿನ ಹಿತ್ತಲಹಳ್ಳಿ ಗ್ರಾಮದ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಒಂದು ಲಕ್ಷ ರೂಪಾಯಿ ಸಹಾಯಧನವನ್ನು ನೀಡಿದ್ದು ಬುಧವಾರ ಜಿಲ್ಲೆಯ ನಿರ್ದೇಶಕ ರಾಧಾಕೃಷ್ಣ ಮತ್ತು ತಾಲ್ಲೂಕಿನ ಯೋಜನಾಧಿಕಾರಿ ಬಿ.ಆರ್ ಯೋಗೀಶ್‌ ದೇವಸ್ಥಾನದ ಮುಖ್ಯಸ್ಥರಿಗೆ ಡಿ.ಡಿ ಯನ್ನು ಹಸ್ತಾಂತರಿಸಿದರು. ದೇವಾಲಯದ ಅಧ್ಯಕ್ಷರಾದ ಎಚ್.ಎಂ ಕೃಷ್ಣಪ್ಪ. ಮುಖಂಡರಾದ ಎಚ್.ಸಿ ರಮೇಶ್, ಎಚ್.ಎಂ ಮುನಿರಾಜು, ಎಚ್.ಕೆ.ಸುರೇಶ್, ನಾಗರಾಜು, ಕದಿರಪ್ಪ ಹಾಜರಿದ್ದರು.

ಜಯಂತಿಗ್ರಾಮದ ಮೊದಲ ದೇವಾಲಯ ಪೂಜಾಪ್ರತಿಷ್ಠಾಪನಾ ಕಾರ್ಯಕ್ರಮ

0

ತಾಲ್ಲೂಕಿನ ಅಬ್ಲೂಡು ಗ್ರಾಮ ಪಂಚಾಯತಿಯ ಜಯಂತಿಗ್ರಾಮದಲ್ಲಿ ಏಕೈಕ ಮತ್ತು ಮೊಟ್ಟಮೊದಲ ದೇವಾಲಯವಾದ ಓಂಕಾರ ಮಹಾಗಣಪತಿ ದೇವಾಲಯದ ಪೂಜಾಪ್ರತಿಷ್ಠಾಪನಾ ಕಾರ್ಯಕ್ರಮವನ್ನು ಗುರುವಾರ ನೆರವೇರಿಸಲಾಯಿತು.
ತಾಲ್ಲೂಕಿನ ದ್ಯಾವಪ್ಪನಗುಡಿ ಇತಿಹಾಸ ಪ್ರಸಿದ್ಧವಾಗಿದ್ದು, ದ್ಯಾವಪ್ಪ ತಾತನ ಸೇವೆಗಾಗಿ ತಾಲ್ಲೂಕು, ಜಿಲ್ಲೆ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಿಂದೆಲ್ಲಾ ಭಕ್ತರು ಆಗಮಿಸುತ್ತಾರೆ. ಈ ಪ್ರದೇಶದಲ್ಲಿ ಜನರು ಬಂದು ನೆಲೆಸುತ್ತಾ ಗ್ರಾಮ ಬೆಳೆದು ಜನರ ಬಾಯಲ್ಲಿ ದೇವರಾಜಪುರ ಎಂದು ಕೆರಸಿಕೊಂಡರೂ 1978 ರಲ್ಲಿ ಸರ್ಕಾರಿ ದಾಖಲೆಯಲ್ಲಿ ಜಯಂತಿ ಗ್ರಾಮ ಎಂದು ಹೆಸರಾಯಿತು. ಗ್ರಾಮದಲ್ಲಿನ ದೇವಾಲಯ ಇರದಿರುವುದರಿಂದ ಗ್ರಾಮಸ್ಥರು ಒಗ್ಗೂಡಿ ಓಂಕಾರ ಮಹಾಗಣಪತಿ ದೇವಾಲಯ ನಿರ್ಮಿಸಿಕೊಂಡಿದ್ದು ಪೂಜಾಪ್ರತಿಷ್ಠಾಪನೆ ಹಮ್ಮಿಕೊಂಡಿದ್ದರು. ಈ ಸಂದರ್ಭದಲ್ಲಿ ಹೋಮ, ಹವನ, ಅಭಿಷೇಕ, ದೇವರಿಗೆ ವಿಶೇಷ ಅಲಂಕಾರ, ಪ್ರಸಾದ ವಿನಿಯೋಗ ಹಾಗೂ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ದೊಡ್ಡಚನ್ನೇಗೌಡ, ನಾಗರಾಜ್‌, ದೇವರಾಜ್‌, ಅಶ್ವತ್ಥ, ನಾಗಭೂಷಣ್‌, ಕೇಶವಪ್ಪ, ಬೈರೇಗೌಡ, ಪ್ರಕಾಶ್‌, ಅರ್ಚಕರಾದ ಮಲ್ಲಿಕಾರ್ಜುನ್‌, ವಿಶ್ವನಾಥ್‌ ಹಾಜರಿದ್ದರು.

ಸಾರಿಗೆ ಬಸ್‌ ನಿಲ್ದಾಣ ಸ್ವಚ್ಛತಾ ಕಾರ್ಯಕ್ರಮವನ್ನು

0

ಸಾರ್ವಜನಿಕ ಸ್ಥಳಗಳಲ್ಲಿ ದೂಮಪಾನ ಮಾಡುವವರಿಗೆ ದಂಡ ವಿಧಿಸಬೇಕೆಂಬ ಕಾನೂನನ್ನು ಅಧಿಕಾರಿಗಳು ಸಮರ್ಪಕವಾಗಿ ಜಾರಿಗೊಳಿಸಿಲ್ಲ ಎಂದು ಜಯ ಕರ್ನಾಟಕ ಜಿಲ್ಲಾ ಘಟಕದ ಅಧ್ಯಕ್ಷ ಎನ್‌.ರಾಘವೇಂದ್ರ ತಿಳಿಸಿದರು.
ಪಟ್ಟಣದ ಸಾರ್ವಜನಿಕ ಬಸ್‌ ನಿಲ್ದಾಣದಲ್ಲಿ ಸಂಘಟನೆಯ ಸದಸ್ಯರೊಂದಿಗೆ ಸೇರಿ ಗುರುವಾರ ಪೊರಕೆಗಳನ್ನಿಡಿದು ಸ್ವಚ್ಛಗೊಳಿಸಿ ಅವರು ಮಾತನಾಡಿದರು. ನಮ್ಮ ಸಂಘಟನೆಯ ತಾಲ್ಲೂಕು ಘಟಕದ ಸದಸ್ಯರ ನೇಮಕ ಮಾಡಲು ಬಂದಾಗ ಬಸ್‌ ನಿಲ್ದಾಣ ಹಾಗೂ ಸುತ್ತ ಮುತ್ತ ಬೀಡಿ, ಸಿಗರೇಟ್‌, ಬಾಟಲ್‌, ಪಾನ್‌ ಪೊಟ್ಟಣಗಳ ತ್ಯಾಜ್ಯಗಳನ್ನು ಕಂಡು ಬೇಸರವಾಯಿತು. ಒಂದೆಡೆ ಜನರಲ್ಲಿ ನಮ್ಮ ಊರು, ನಮ್ಮ ಬಸ್‌ ನಿಲ್ದಾಣ ಎಂಬ ಧೋರಣೆ ಇಲ್ಲದಿರುವುದು ಕಂಡರೆ, ಮತ್ತೊಂದೆಡೆ ಅಧಿಕಾರಿಗಳ ನಿರ್ಲಕ್ಷ್ಯವೂ ಕಾಣಿಸಿತು. ನಮ್ಮ ಸಂಘಟನೆಯ ಸದಸ್ಯರೇ ಈ ದಿನ ಬಸ್‌ ನಿಲ್ದಾಣವನ್ನು ಶುಭ್ರಗೊಳಿಸಿದ್ದೇವೆ. ಅಧಿಕಾರಿಗಳ ನಿರ್ಲಕ್ಷ್ಯ ಮುಂದುವರೆದಲ್ಲಿ ಮುಂದಿನ ದಿನಗಳಲ್ಲಿ ಸಂಘಟನೆಯಿಂದ ಪ್ರತಿಭಟನೆಗಳನ್ನು ನಡೆಸುವುದಾಗಿ ಎಚ್ಚರಿಸಿದರು.
ಜಯ ಕರ್ನಾಟಕ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಮಂಜುನಾಥಗೌಡ, ಪ್ರಧಾನ ಕಾರ್ಯದರ್ಶಿ ರಾಜೇಶ, ಕಾರ್ಯದರ್ಶಿ ಸುಬ್ರಮಣ್ಯಾಚಾರಿ, ತಾಲ್ಲೂಕು ಘಟಕದ ಅಧ್ಯಕ್ಷ ಎನ್‌.ಛಲಪತಿ, ಶಶಿಕುಮಾರ್‌, ನಿಜಾಮ್‌, ಕೃಷ್ಣಾರೆಡ್ಡಿ, ವೆಂಕಟೇಶ, ದೀಪು, ವಿನೋದ್‌್, ನಾಸಿರ್‌, ನವೀನ್‌, ಮಹೇಶ್‌, ಚಂದ್ರು, ಜಗದೀಶ್‌ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಜನಪರ ಕಾರ್ಯಕ್ರಮಗಳ ಬಗ್ಗೆ ಜನರಿಗೆ ತಿಳಿಸಿ

0

ಪ್ರಧಾನಿ ನರೇಂದ್ರಮೋದಿ ಕೈಗೊಂಡಿರುವ ಜನಪರ ಕಾರ್ಯಕ್ರಮಗಳ ಬಗ್ಗೆ ಗ್ರಾಮ ಪಂಚಾಯತಿ ಮಟ್ಟದಲ್ಲಿ ಜನರಿಗೆ ಮನವರಿಕೆ ಮಾಡಿಕೊಡುವುದರೊಂದಿಗೆ ಜನರಿಗೆ ಇನ್ನಷ್ಟು ಹತ್ತಿರವಾಗಬೇಕು ಎಂದು ಬಿ.ಜೆ.ಪಿ ತಾಲ್ಲೂಕು ಅಧ್ಯಕ್ಷ ಕಂಬದಹಳ್ಳಿ ಸುರೇಂದ್ರಗೌಡ ತಿಳಿಸಿದರು.
ಪಟ್ಟಣದ ಚಿಂತಾಮಣಿ ರಸ್ತೆಯಲ್ಲಿರುವ ಬಿ.ಜೆ.ಪಿ ಕಚೇರಿಯಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಗ್ರಾಮ ಪಂಚಾಯತಿ ಮಟ್ಟದ ಮುಖಂಡರ ಸಭೆಯಲ್ಲಿ ಮಾತನಾಡಿದರು.
ಗ್ರಾಮ ಪಂಚಾಯತಿ ಚುನಾವಣೆಗಳು ಸಮೀಪಿಸುತ್ತಿದ್ದು ಈಗಲಿಂದಲೇ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಬಿಜೆಪಿ ಪಕ್ಷ ಮತ್ತು ದೇಶದ ಪ್ರಧಾನಿ ಮೋದಿಯವರು ಕೈಗೊಂಡಿರುವ ಸ್ವಚ್ಛಭಾರತ್, ಜನ್ ಧನ್ ಯೋಜನೆಗಳನ್ನು ಸಾರ್ವಜನಿಕರಿಗೆ ತಲುಪಿಸುವ ಕಾರ್ಯ ಮಾಡುವುದರೊಂದಿಗೆ ಪಕ್ಷವನ್ನು ಇನ್ನಷ್ಟು ಸಂಘಟಿಸಬೇಕು ಎಂದರು.
ಬಿ.ಜೆ.ಪಿ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಶಂಕರನಾರಾಯಣ ಮಾತನಾಡಿ ದೇಶಕ್ಕೆ ಸ್ವಾತಂತ್ರ್ಯ ಬಂದು ೬೫ ವರ್ಷವಾದರೂ ಹಿಂದಿನ ಎಲ್ಲಾ ಸರ್ಕಾರಗಳು ಸಾರ್ವಜನಿಕರಿಗೆ ನೇರವಾಗಿ ತಲುಪುವ ಯಾವುದೇ ಯೋಜನೆ ರೂಪಿಸಲು ವಿಫಲವಾಗಿತ್ತು. ನರೇಂದ್ರ ಮೋದಿ ಪ್ರಧಾನಿಯಾದ ನಂತರವಷ್ಟೇ ಜನಾನುರಾಗಿ ಯೋಜನೆಗಳನ್ನು ಜಾರಿಗೆ ತಂದಿದ್ದು ಈ ಬಗ್ಗೆ ನಾಗರೀಕರಿಗೆ ಮನವರಿಕೆ ಮಾಡಿಕೊಡುವ ಕೆಲಸ ಪಕ್ಷದಿಂದ ಆಗಬೇಕಿದೆ ಎಂದು ಹೇಳಿದರು.
ಬಿ.ಜೆ.ಪಿ ತಾಲ್ಲೂಕು ಉಸ್ತುವಾರಿಯಾದ ಚಂದ್ರಶೇಖರ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮುರಳಿ, ತಾಲ್ಲೂಕು ಕಾರ್ಯದರ್ಶಿ ಶ್ರೀಧರ್, ಶಿವಕುಮಾರ್‌ಗೌಡ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ನೀರು ಬರುವವರೆಗೂ ಹೋರಾಟ ನಿಲ್ಲದು

0

‘ಹರಿಯಲಿ ಹರಿಯಲಿ ಕೆರೆಗೆ ನೀರು ಹರಿಯಲಿ’, ‘ತುಂಬಲಿ ತುಂಬಲಿ ನಮ್ಮ ಕೆರೆ ತುಂಬಲಿ’ ಎಂದು ಘೋಷಣೆಗಳನ್ನು ಕೂಗುತ್ತಾ ‘ನೀರಿಗಾಗಿ ಪರದಾಟ, ಪರಿಹಾರಕ್ಕಾಗಿ ಹೋರಾಟ’ ಎನ್ನುತ್ತಾ ಜನ–ಜಲ ಜಾಗೃತಿ ಪಾದಯಾತ್ರೆ ನಡೆಸುತ್ತಾ ಶಾಶ್ವತ ನೀರಾವರಿ ಹೋರಾಟ ಸಮಿತಿ ಸದಸ್ಯರು ಬುಧವಾರ ತಾಲ್ಲೂಕಿನ ಕುಂದಲಗುರ್ಕಿ ಪಂಚಾಯತಿಯನ್ನು ಪ್ರವೇಶಿಸಿದರು.
ತಮಟೆಗಳ ಸದ್ದಿನೊಂದಿಗೆ ಘೋಷಣೆಗಳನ್ನು ಕೂಗುತ್ತಾ 28ನೇ ದಿನದ ಪಾದಯಾತ್ರೆಯಲ್ಲಿ ಪಾಲ್ಗೊಂಡು ಆಗಮಿಸಿದ ಶಾಶ್ವತ ನೀರಾವರಿ ಹೋರಾಟ ಸಮಿತಿ ಸದಸ್ಯರನ್ನು ಗ್ರಾಮಸ್ಥರು ಪಂಚಾಯತಿ ಮುಂದೆ ಸ್ವಾಗತಿಸಿದರು.
‘ನೀರಿಗೆ ಜಾತಿಯಿಲ್ಲ, ರಾಜಕೀಯ ಪಕ್ಷವಿಲ್ಲ, ಮೇಲು ಕೀಳೆಂಬ ಬೇಧವಿಲ್ಲ, ಬಡವ ಬಲ್ಲಿದನೆಂಬ ತಾರತಮ್ಯವಿಲ್ಲ, ರೈತ ಅಧಿಕಾರಿ ಎಂಬ ವ್ಯತ್ಯಾಸವಿಲ್ಲ. ಬಯಲು ಸೀಮೆಯ ಎಲ್ಲರಿಗೂ ನೀರು ಅತ್ಯವಶ್ಯ. ಶಾಶ್ವತವಾದ ನೀರಿನ ಹರಿವು ಬರದಿದ್ದಲ್ಲಿ ನಮ್ಮ ಭೂಭಾಗ ಬೆಂಗಾಡಾಗಿ ಮರುಭೂಮಿಯಾಗುತ್ತದೆ. ನಮಗಿಲ್ಲಿ ಉತ್ಪಾದನೆಗಳಾಗದೆ, ಜನ ಜಾನುವಾರುಗಳಿಗೆ ನೀರಿಲ್ಲದೆ, ಬೆಳೆ ಬೆಳೆಯಲಾಗದೆ ವಲಸೆ ಪ್ರಕ್ರಿಯೆ ಮೊದಲಾಗುತ್ತಿದೆ. ನಮ್ಮ ನೆಲವನ್ನು ತೊರೆಯುವುದೋ ಅಥವಾ ನೀರಿಗಾಗಿ ಹೋರಾಡುವುದೋ ಜನರು ಶೀಘ್ರವಾಗಿ ತೀರ್ಮಾನಿಸಬೇಕು. ಜನರಲ್ಲಿ ನಮ್ಮ ಕರಾಳ ಭವಿಷ್ಯದ ಬಗ್ಗೆ ತಿಳಿಸುತ್ತಾ ಪರಿಹಾರಕ್ಕಾಗಿ ಹೋರಾಟ ಮನೋಭೂಮಿಕೆಯನ್ನು ಸಿದ್ಧಪಡಿಸುತ್ತಾ ಶಾಶ್ವತ ನೀರಾವರಿ ಹೋರಾಟ ಸಮಿತಿ ಸದಸ್ಯರು ನೂರಕ್ಕೂ ಹೆಚ್ಚು ಗ್ರಾಮ ಪಂಚಾಯತಿಗಳಲ್ಲಿ ಕಳೆದ ಒಂದು ತಿಂಗಳಿನಿಂದ ಪಾದಯಾತ್ರೆ ನಡೆಸಿದ್ದಾರೆ. ಎಲ್ಲರೂ ಕೈಜೋಡಿಸಿ ಒಗ್ಗೂಡಿ ಸರ್ಕಾರದ ಕಣ್ಣು ತೆರೆಸೋಣ’ ಎಂದು ಗ್ರಾಮ ಪಂಚಾಯತಿ ಅಧ್ಯಕ್ಷ ಕೆಂ.ಎಂ.ವೆಂಕಟೇಶ್‌ ತಿಳಿಸಿದರು.
ತಾಲ್ಲೂಕಿನ ಕುಂದಲಗುರ್ಕಿ, ಪಲಿಚೆರ್ಲು, ದೊಡ್ಡತೇಕಹಳ್ಳಿ ಮತ್ತು ಬಶೆಟ್ಟಹಳ್ಳಿ ಗ್ರಾಮ ಪಂಚಾಯತಿಗಳಲ್ಲಿ ಬುಧವಾರ ಶಾಶ್ವತ ನೀರಾವರಿ ಹೋರಾಟ ಸಮಿತಿ ಸದಸ್ಯರು ನಡೆಸಿದ ಪಾದಯಾತ್ರೆಯಲ್ಲಿ ಜನರು ಬೆಂಬಲಿಸಿದ್ದಲ್ಲದೆ, ತಮ್ಮ ಪಂಚಾಯತಿ ಮತ್ತು ಹಾಲು ಉತ್ಪಾದಕರ ಸಹಕಾರ ಸೊಸೈಟಿಗಳಿಂದ ಬೆಂಬಲ ಸೂಚಿಸುವ ಪತ್ರಗಳನ್ನೂ ನೀಡಿದರು.
ಡಿ.ಸಿ.ಸಿ.ಬ್ಯಾಂಕ್‌ ನಿರ್ದೇಶಕ ಶಿವಾರೆಡ್ಡಿ, ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆಂಜನೇಯರೆಡ್ಡಿ, ಮಳ್ಳೂರು ಹರೀಶ್‌, ದೊಣ್ಣಹಳ್ಳಿ ರಾಮಣ್ಣ, ತಾದೂರು ಮಂಜುನಾಥ್‌ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

error: Content is protected !!