16.1 C
Sidlaghatta
Saturday, December 27, 2025
Home Blog Page 1019

ತಾಲ್ಲೂಕು ಕೂಲಿ ಸಂಘದ ವತಿಯಿಂದ ಪ್ರತಿಭಟನಾ ಮೆರವಣಿಗೆ

0

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ತಾಲ್ಲೂಕು ಕೂಲಿ ಸಂಘದ ವತಿಯಿಂದ ಶುಕ್ರವಾರ ಪ್ರತಿಭಟನಾ ಮೆರವಣಿಗೆಯನ್ನು ನಡೆಸಿದರು.
ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕಡ್ಡಾಯವಾಗಿ ಗೋಶಾಲೆಗಳನ್ನು ತೆರೆದು ಜಾನುವಾರುಗಳ ರಕ್ಷಣೆ ಮಾಡಬೇಕು. ಮಳೆಯ ವೈಫಲ್ಯದಿಂದ ಬೆಳೆ ನಷ್ಟ ಪರಿಹಾರವನ್ನು ನೀಡಬೇಕು. ಪ್ರತಿ ಗ್ರಾಮಕ್ಕೊಂದು ನ್ಯಾಯಬೆಲೆ ಅಂಗಡಿಯನ್ನು ತೆರೆಯಬೇಕು. ಬಯೋಮೆಟ್ರಿಕ್‌ ವ್ಯವಸ್ಥೆ ಅಳವಡಿಸಬೇಕು. 2013–14ನೇ ಸಾಲಿನ ಪಡಿತರಚೀಟಿಗಾಗಿ ಅರ್ಜಿ ಸಲ್ಲಿಸಿದವರಿಗೆ ಕೂಡಲೇ ಪಡಿತರ ಚೀಟಿ ವಿತರಿಸಬೇಕು. ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಆರಂಭಿಸಬೇಕು. 2011–12 ನೇ ಸಾಲಿನ ತಾಲ್ಲೂಕಿನ ಉದ್ಯೋಗ ಖಾತ್ರಿ ಯೋಜನೆಯ ಬಗ್ಗೆ ಸಮಗ್ರ ತನಿಖೆ ನಡೆಸಿ ನಿಯಮ ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಎಲ್ಲ ಗ್ರಾಮ ಪಂಚಾಯತಿಗಳಲ್ಲಿ ಕಡ್ಡಾಯವಾಗಿ ಪಿ.ಡಿ.ಒ ಮತ್ತು ಕಾರ್ಯದರ್ಶಿಗಳನ್ನು ನೇಮಿಸಬೇಕು ಹಾಗೂ ಅವರು ಕೇಂದ್ರ ಸ್ಥಾನದಲ್ಲಿ ವಾಸವಾಗುವಂತೆ ಆದೇಶಿಸಬೇಕು ಮುಂತಾದ ಬೇಡಿಕೆಗಳನ್ನು ಮುಂದಿಟ್ಟು ಪ್ರತಿಭಟಿಸಿ ಶಿರಸ್ತೆದಾರರಿಗೆ ಮನವಿ ಸಲ್ಲಿಸಿದರು.
ವೆಂಕಟನರಸಪ್ಪ, ವೆಂಕಟರಾಯಪ್ಪ, ಕೆ.ಕೃಷ್ಣಾರೆಡ್ಡಿ, ಅನೀತಾ, ಎಂ.ವೆಂಕಟೇಶ್‌, ಪುಷ್ಪ. ಕಾಂತರಾಜ್‌, ಮುನಿರಾಜ್‌, ನಾಗಾರ್ಜುನ, ನಾರಾಯಣಸ್ವಾಮಿ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ನಮ್ಮ ಕೆರೆಗಳಿಗೆ ನೀರು ಹರಿಯದೇ, ಅಂತರ್ಜಲ ವೃದ್ಧಿಸದಿದ್ದಲ್ಲಿ ನಮಗೆ ಉಳಿಗಾಲವಿಲ್ಲ

0

ಫ್ಲೋರೈಡ್ ಅಂಶವಿದೆಯೆಂಬ ಕಾರಣಕ್ಕೆ ನಮ್ಮ ಭಾಗದ ಪ್ರಸಿದ್ಧ ಮಾವು ವಿದೇಶಕ್ಕೆ ರಫ್ತಾಗದಂತೆ ತಿರಸ್ಕಾರಗೊಂಡಿರುವುದು ನಮ್ಮ ಪರಿಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿಯ ಅಧ್ಯಕ್ಷ ಆರ್‌.ಆಂಜನೇಯರೆಡ್ಡಿ ತಿಳಿಸಿದರು.
ಶಾಶ್ವತ ನೀರಾವರಿ ಹೋರಾಟ ಸಮಿತಿ ವತಿಯಿಂದ ಹಮ್ಮಿಕೊಂಡಿರುವ ಜನಜಾಗೃತಿ ಮತ್ತು ಜಲಜಾಗೃತಿ ಪಾದಯಾತ್ರೆಯ ಮೂಲಕ ಚಿಕ್ಕಬಳ್ಳಾಪುರ ಕೋಲಾರ ಜಿಲ್ಲೆಗಳಲ್ಲಿ ಸುಮಾರು 200 ಕಿ.ಮೀ ಕ್ರಮಿಸಿ ಚೀಮಂಗಲಕ್ಕೆ ಆಗಮಿಸಿದ ಅವರು ಜನರನ್ನುದ್ದೇಶಿಸಿ ಮಾತನಾಡಿದರು.
ಎಲ್ಲೆಲ್ಲೂ ಈಗ ವಿಷಯುಕ್ತ ಫ್ಲೋರೈಡ್‌ ಅಂಶ ಕಾಣಿಸಿಕೊಳ್ಳುತ್ತಿದೆ. ಬಯಲುಸೀಮೆಯ ಜನ ಈ ದುರಂತಮ ಸ್ಥಿತಿಯಲ್ಲಿದ್ದರೆ, ಅತ್ತ ಬೆಂಗಳೂರಿನ ಜನಕ್ಕೆ 2050 ರ ಹೊತ್ತಿಗೆ ಎಷ್ಟು ನೀರು ಬೇಕಾಗಬಹುದು, ಅದಕ್ಕಾಗಿ ಏನೇನು ಕ್ರಮ ಕೈಗೊಳ್ಳಬೇಕೆಂದು ವರದಿ ರೂಪಿಸಲು ಸರ್ಕಾರ ತ್ಯಾಗರಾಜನ್‌ ಸಮಿತಿಯನ್ನು ನೇಮಿಸಿದೆ. ಅಲ್ಲಿನ ಜನಕ್ಕೆ ಕುಡಿಯಲು ಬೇಕಾಗುವ 88 ಟಿ.ಎಂ.ಸಿ ನೀರನ್ನೊದಗಿಸಲು ಕ್ರಮ ಕೈಗೊಳ್ಳಲು ಮುಂದಾಗುವ ಸರ್ಕಾರ ನಮ್ಮ ಈಗಿನ ದುಸ್ಥಿತಿ ಕೊಂಚವೂ ತಲೆಕೆಡಿಸಿಕೊಳ್ಳುತ್ತಿಲ್ಲ. ನಗರಗಳಿಗೆ ಹಣ್ಣು, ಹಾಲು, ತರಕಾರಿ ಬೆಳೆದು ಒದಗಿಸಬಲ್ಲ ಫಲವತ್ತಾದ ಭೂಮಿ, ಶಕ್ತ ಜನರು ನೀರಿಲ್ಲದೆ ಗುಳೆ ಹೋಗುವ ಹಾಗೂ ಹತಾಶೆಯಿಂದ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿಯಲ್ಲಿದ್ದೇವೆ. ನಮ್ಮ ಹೋರಾಟವನ್ನು ದಿಕ್ಕುತಪ್ಪಿಸಲೆಂದು ಗುತ್ತಿಗೆದಾರರ ಅನುಕೂಲಕ್ಕಾಗಿ ಎತ್ತಿನಹೊಳೆ ಯೋಜನೆಯನ್ನು ರೂಪಿಸಿ ನಮಗೆ ಸರ್ಕಾರ ಮೋಸ ಮಾಡಿದೆ. ನಮ್ಮ ಕೆರೆಗಳಿಗೆ ನೀರು ಹರಿಯದೇ ಅಂತರ್ಜಲ ವೃದ್ಧಿಸದಿದ್ದಲ್ಲಿ ನಮಗೆ ಉಳಿಗಾಲವಿಲ್ಲ ಎಂದು ಹೇಳಿದರು.
ಶಾಶ್ವತ ನೀರಾವರಿ ಹೋರಾಟ ಸಮಿತಿ ಜಿಲ್ಲಾ ಮುಖಂಡ ಮಳ್ಳೂರು ಹರೀಶ್‌ ಮಾತನಾಡಿ, ಇದುವರೆಗೂ ನಮ್ಮನ್ನಾಳಿದ ಯಾವುದೇ ಸರ್ಕಾರ ಬಯಲು ಸೀಮೆ ಪ್ರದೇಶದ ಬಗ್ಗೆ ಕಾಳಜಿ ವಹಿಸದೆ ನೀರಾವರಿ ಯೊಜನೆಗಳನ್ನು ಮಾಡದ ಕಾರಣ ನಾವೆಲ್ಲಾ ಜಾಗೃತರಾಗುವ ಅಗತ್ಯ ಉಂಟಾಗಿದೆ. ಮುಂದಿನ ದಿನಗಳಲ್ಲಿ ಎಲ್ಲರೂ ಒಗ್ಗೂಡಿ ದೊಡ್ಡ ಮಟ್ಟದ ಹೋರಾಟ ಮಾಡಿ ಸರ್ಕಾರವನ್ನು ಜಾಗೃತಗೊಳಿಸಬೇಕಿದೆ. ನಾವೆಲ್ಲರೂ ಮತ ಹಾಕುತ್ತೇವೆ ಮತ್ತು ತೆರಿಗೆ ಕಟ್ಟುತ್ತೇವೆ. ಆದರೆ ಸರ್ಕಾರಗಳು ಮಾತ್ರ ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಸವರುವ ನೀತಿ ಅನುಸರಿಸುತ್ತಿವೆ. ಉತ್ತರ ಕರ್ನಾಟಕದ ಜನರಿಗಾಗಿ 750 ಟಿ.ಎಂ.ಸಿ ನೀರಿನ ಯೋಜನೆ, ಮೈಸೂರಿನ ಭಾಗದ ಜನರಿಗಾಗಿ 250 ಟಿ.ಎಂ.ಸಿ.ನೀರಿನ ಯೋಜನೆ ರೂಪಿಸಿದ್ದಾರೆ. ಆದರೆ ನಾವು ಬಯಲುಸೀಮೆಯ ಜನ ಯಾವ ಪಾಪವನ್ನು ಮಾಡಿದ್ದೇವೆಂದು ನಮಗಾಗಿ ಯಾವ ಯೋಜನೆಗಳೂ ರೂಪುಗೊಳ್ಳುತ್ತಿಲ್ಲ. ಚುನಾವಣೆಗೆ ಮುಂಚೆ ನೀಡಿದ ಆಶ್ವಾಸನೆಗಳೆಲ್ಲ ಏನಾದವು ಎಂದು ಪ್ರಶ್ನಿಸಿದರು.
ಹಲವು ವರ್ಷಗಳ ಹಿಂದೆ ಕೆರೆಗಳಿಂದ ನೀರನ್ನು ಬಳಸುತ್ತಿದ್ದೆವು. ಆದರೆ ಈಗ ಕೆರೆಗಳೆಲ್ಲ ಒಣಗಿವೆ. ಬಾವಿಗಳನ್ನು ತೋಡಿಸಲು ಹಣ ಖರ್ಚು ಮಾಡಿದೆವು. ಬಾವಿಗಳಲ್ಲಿ ಗರಂಡ ಕಟ್ಟಿದೆವು. ಅದು ಕೂಡ ವ್ಯರ್ಥವಾಯಿತು. ಭೂಮಿಯನ್ನು ಬಗೆದು 250 ರಿಂದ 300 ಅಡಿ ಆಳದವರೆಗೂ ಕೊಳವೆ ಬಾವಿಗಳನ್ನು ತೋಡಿದ್ದು, ವಿದ್ಯುತ್‌ ಅಭಾವದಿಂದ ಕಟ್ಟಿದ ಕಲ್ಲಿನ ತೊಟ್ಟಿಗಳು ಎಲ್ಲ ವ್ಯರ್ಥವಾಗಿ 1000 ದಿಂದ ಸಾವಿರದೈನೂರು ಅಡಿ ಆಳದವರೆಗೂ ಕೊಳವೆ ಬಾವಿಗಳನ್ನು ಕೊರೆದು ಹನಿನೀರಾವರಿಯ ಪೈಪುಗಳನ್ನು ಅಳವಡಿಸಿದ್ದರೂ ನೀರಿಲ್ಲದೆ ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವ ದುಸ್ಥಿತಿ ರೈತರದ್ದಾಗಿದೆ. ನೀರಿಗಾಗಿ ಬಯಲು ಸೀಮೆಯ ಜನರು ಮಾಡಿರುವ ಖರ್ಚಿನಲ್ಲಿ ಎರಡು ನೀರಾವರಿ ಯೋಜನೆಗಳನ್ನು ರೂಪಿಸಬಹುದಾಗಿತ್ತು ಎಂದು ನುಡಿದರು.
ಪ್ರತಿದಿನ 25 ರಿಂದ 30 ಕಿ.ಮೀ ಪಾದಯಾತ್ರೆ ನಡೆಸುತ್ತಾ ಬಯಲು ಸೀಮೆಯ 153 ಗ್ರಾಮ ಪಂಚಾಯತಿಗಳ ವ್ಯಾಪ್ತಿಯ ಗ್ರಾಮಗಳಿಗೆ ತೆರಳಿ ಸುಮಾರು 55 ರಿಂದ 60 ದಿನಗಳ ಕಾಲ ಜಲ ಜಾಗೃತಿ ಮತ್ತು ಜನ ಜಾಗೃತಿಯನ್ನು ಶಾಶ್ವತ ನೀರಾವರಿ ಹೋರಾಟಸಮಿತಿಯ ವತಿಯಿಂದ ಹಮ್ಮಿಕೊಂಡಿದ್ದು, ಪ್ರತಿಯೊಬ್ಬರೂ ಪ್ರಾಮಾಣಿಕವಾಗಿ ನೀರಿಗಾಗಿ ಹೋರಾಟದಲ್ಲಿ ಭಾಗಿಯಾದಾಗ ಮಾತ್ರ ನಮಗೆ ನೀರು ಬರುತ್ತದೆ ಎಂದರು.
ರೈತಸಂಘದ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ಮಾತನಾಡಿ, ಸರ್ಕಾರದ ವರದಿಯ ಪ್ರಕಾರ ಎತ್ತಿನಹೊಳೆ ಯೋಜನೆಯಿಂದ ನಮ್ಮ ಭಾಗಕ್ಕೆ ಬರುವುದು ಕೇವಲ ಎರಡೂವರೆ ಟಿ.ಎಂ.ಸಿ ನೀರು ಮಾತ್ರ. ಜಿಲ್ಲೆಯ 2,15,360 ಹೆಕ್ಟೇರ್‌ ಕೃಷಿ ಭೂಮಿ, ಸಾವಿರಾರು ದನಕರುಗಳು, ಲಕ್ಷಾಂತರ ಜನ, 3,800 ಕೆರೆ ಕುಂಟೆಗಳಿಗೆ ಎಷ್ಟು ನೀರು ಬೇಕೆಂಬ ಮಾಹಿತಿ ಸರ್ಕಾರದ ಬಳಿಯಿಲ್ಲ. ನಾವೀಗ ರಾಜಕಾರಣಿಗಳನ್ನು ನೆಚ್ಚಿ ಕೂರುವಂತಿಲ್ಲ. ಮರಳು ಮಾಫಿಯಾ ತಡೆಯುವಲ್ಲಿ ಪೊಲೀಸ್‌ ಇಲಾಖೆ ಮತ್ತು ಜಿಲ್ಲಾಢಳಿತ ವಿಫಲವಾಗಿದೆ. ಪ್ರತಿ ಕುಟುಂಬದವರೂ ಆಲ, ಬೇವು, ಹಾಗೂ ಹಣ್ಣಿನ ಮರಗಳನ್ನು ಮಕ್ಕಳಂತೆ ಬೆಳೆಸಿ ಪ್ರಕೃತಿ ಮಳೆಯ ರೂಪದಲ್ಲಿ ವರವನ್ನು ನೀಡುತ್ತದೆ. ಗುಂಡು ತೋಪುಗಳನ್ನು ಉಳಿಸಿಕೊಳ್ಳಿ ಎಂದು ಹೇಳಿದರು.
ರಾಜಣ್ಣ, ರಂಗನರಸಿಂಹಯ್ಯ, ನಿವೃತ್ತ ತಹಶಿಲ್ದಾರ್‌ ವೆಂಕಟೇಶ್‌, ಈಶ್ವರ್‌, ತಾಲ್ಲೂಕು ಪಂಚಾಯತಿ ಮಾಜಿ ಸದಸ್ಯ ಮುನಿರಾಜು, ನಾಗಪ್ಪ, ಕೃಷ್ಣಪ್ಪ, ವೆಂಕಟ್‌, ರಾಮಕೃಷ್ಣಪ್ಪ, ಮಂಜುನಾಥ್‌, ವೇಣು, ಛಲಪತಿ, ನಾಗರಾಜ್‌ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಗಂಗಾದೇವಿ ದೇವಾಲಯದಲ್ಲಿ ವಿಮಾನಗೋಪುರದ ಕುಂಭಾಭಿಷೇಕ ಪೂಜಾ ಮಹೋತ್ಸವ

0

ತಾಲ್ಲೂಕಿನ ಮೇಲೂರು ಗ್ರಾಮದ ಪುರಾಣ ಪ್ರಸಿದ್ಧ ಗಂಗಾದೇವಿ ದೇವಾಲಯದಲ್ಲಿ ಬುಧವಾರ ವಿಮಾನಗೋಪುರದ ಕುಂಭಾಭಿಷೇಕ ಪೂಜಾ ಮಹೋತ್ಸವವನ್ನು ಬುಧವಾರ ವಿಜೃಂಭಣೆಯಿಂದ ನೆರವೇರಿಸಲಾಯಿತು.
ತಾಲ್ಲೂಕಿನ ಮೇಲೂರು ಗ್ರಾಮದ ಗಂಗಾದೇವಿ ದೇವಾಲಯದಲ್ಲಿ ನೂತನವಾಗಿ 25 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ವಿಮಾನಗೋಪುರದ ಕುಂಭಾಭಿಷೇಕ ಪೂಜಾ ಮಹೋತ್ಸವ ಅಂಗವಾಗಿ ದೇವಾಲಯದಲ್ಲಿ ಬೆಳಗ್ಗೆ ೪ ಗಂಟೆಯಿಂದಲೇ ವಿಶೇಷ ಕಾರ್ಯಗಳನ್ನು ಆಯೋಜಿಸಲಾಗಿತ್ತು.

ಶಿಡ್ಲಘಟ್ಟ ತಾಲ್ಲೂಕಿನ ಮೇಲೂರು ಗ್ರಾಮದ ಪುರಾಣಪ್ರಸಿದ್ಧ ಗಂಗಾದೇವಿ ದೇವಾಲಯದಲ್ಲಿ ವಿಮಾನಗೋಪುರ ಕುಂಭಾಭಿಷೇಕದ ಅಂಗವಾಗಿ ದೇವಾಲಯದಲ್ಲಿ ವಿಶೇಷ ಅಲಂಕಾರ ಮಾಡಿದ್ದು ಮಹಾ ಚಂಡಿ ಯಾಗವನ್ನು ನಡೆಸಲಾಯಿತು.
ಶಿಡ್ಲಘಟ್ಟ ತಾಲ್ಲೂಕಿನ ಮೇಲೂರು ಗ್ರಾಮದ ಪುರಾಣಪ್ರಸಿದ್ಧ ಗಂಗಾದೇವಿ ದೇವಾಲಯದಲ್ಲಿ ವಿಮಾನಗೋಪುರ ಕುಂಭಾಭಿಷೇಕದ ಅಂಗವಾಗಿ ದೇವಾಲಯದಲ್ಲಿ ವಿಶೇಷ ಅಲಂಕಾರ ಮಾಡಿದ್ದು ಮಹಾ ಚಂಡಿ ಯಾಗವನ್ನು ನಡೆಸಲಾಯಿತು.
ಸ್ವಸ್ತಿವಾಚನ, ಪಂಚಾಮೃತ ಅಭಿಷೇಕ, ಕುಂಭ ಪ್ರದಕ್ಷಿಣೆ, ಕುಂಭಾಭಿಷೇಕ, ಪುಪ್ಪಾಂಲಕಾರ, ಸಹಸ್ರನಾಮ ಪಾರಾಯಣ, ಧೇನುದರ್ಶನ, ಕೂಷಾಂಡ ಬಲಿ, ನಾರಿಕೇಳ ಬಲಿಹರಣ, ಮಹಾನೈವೇಧ್ಯ, ಮಹಾಮಂಗಳಾರತಿ ತೀರ್ಥಪ್ರಸಾದ ವಿನಿಯೋಗ ಕಾರ್ಯಕ್ರಮಗಳು ನೆರವೇರಿದವು. ಅಮ್ಮನವರ ಸನ್ನಿಧಿಯಲ್ಲಿ ದೇವಾಲಯ ನವೀಕರಣ ಸಂಪ್ರೋಕ್ಷಣೆ ಹಾಗೂ ಸುವರ್ಣ ಲೇಪಿತ ಕಳಶ ಸ್ಥಾಪನೆ ಹಾಗೂ ಮಹಾ ಚಂಡಿ ಯಾಗವನ್ನು ನಡೆಸಲಾಯಿತು. ದೇವಾಲಯಕ್ಕೆ ಬಂದಿದ್ದ ಭಕ್ತಾಧಿಗಳಿಗೆ ಅನ್ನ ಸಂತರ್ಪಣೆಯನ್ನು ಆಯೋಜನೆ ಮಾಡಲಾಯಿತು.
ಮೇಲೂರು, ಮಳ್ಳೂರು, ಚೌಡಸಂದ್ರ, ಗಂಗನಹಳ್ಳಿ, ಕಂಬದಹಳ್ಳಿ, ಭಕ್ತರಹಳ್ಳಿ, ಮುತ್ತೂರು, ಕೊಂಡೇನಹಳ್ಳಿ, ಅಪ್ಪೇಗೌಡನಹಳ್ಳಿ, ಕೇಶವಪುರ ಸೇರಿದಂತೆ ಸುತ್ತಲಿನ ಗ್ರಾಮಗಳಿಂದ ಭಕ್ತಾದಿಗಳು ಪೂಜಾ ಕಾರ್ಯಗಳಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಗ್ರಾಮವನ್ನೆಲ್ಲಾ ವಿಶೇಷವಾಗಿ ಅಲಂಕರಿಸಲಾಗಿತ್ತು. ಪ್ರಮುಖ ಬೀದಿಗಳನ್ನು ಹಾಗೂ ದೇವಾಲಯದ ಸುತ್ತಮುತ್ತ ವಿದ್ಯುತ್‌ ದೀಪಗಳಿಂದ ಮತ್ತು ವಿವಿಧ ಹೂಗಳಿಂದ ಅಲಂಕರಿಸಲಾಗಿತ್ತು. ಮಹಿಳೆಯರು ಕಳಶ ಹೊತ್ತು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ದೇವರಿಗೆ ಪೂಜೆ ಸಲ್ಲಿಸಿದರು.
ಚಿಕ್ಕಬಳ್ಳಾಪುರದ ಆದಿಚುಂಚನಗಿರಿ ಮಠದ ಮಂಗಳಾನಂದ ಸ್ವಾಮೀಜಿ, ವಿಜಯಪುರದ ಬಸವಕಲ್ಯಾಣ ಮಠದ ಮಹದೇವಸ್ವಾಮಿ, ಶಾಸಕ ಎಂ.ರಾಜಣ್ಣ, ತಹಶೀಲ್ದಾರ್‌ ಜಿ.ಎ.ನಾರಾಯಣಸ್ವಾಮಿ, ರಾಜ್ಯ ಒಕ್ಕಲಿಗ ಸಂಘದ ನಿರ್ದೇಶಕ ಯಲುವಳ್ಳಿ ರಮೇಶ್‌, ಮಾಜಿ ನಿರ್ದೇಶಕ ಸದಾಶಿವರೆಡ್ಡಿ, ಜಿಲ್ಲಾ ಪಂಚಾಯತಿ ಸದಸ್ಯೆ ಶಿವಲೀಲಾ ರಾಜಣ್ಣ, ದೇವಾಲಯದ ಧರ್ಮದರ್ಶಿ ಜೆ.ಜೆ.ಗೌಡ, ರಾಮಕೃಷ್ಣಪ್ಪ, ಅಶ್ವತ್ಥಪ್ಪ, ಶ್ರೀನಿವಾಸರೆಡ್ಡಿ, ಭೀಮಣ್ಣನವರ ನಾರಾಯಣಸ್ವಾಮಿ, ಸೂರ್ಯನಾರಾಯಣಗೌಡ, ಕೆ.ಮಂಜುನಾಥ್‌, ರವಿಕುಮಾರ್‌, ಉಮೇಶ್‌, ಕೆ.ಎಸ್‌.ಮಂಜುನಾಥ್‌, ಎಚ್‌.ಟಿ.ನಾರಾಯಣಸ್ವಾಮಿ, ಎಂ.ಜೆ.ಶ್ರೀನಿವಾಸ್‌, ಆಗಮೀಕ ನಾಗಪ್ರಸಾದಶರ್ಮ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ತಾಲ್ಲೂಕಿನ ಮೇಲೂರು ಗ್ರಾಮದಲ್ಲಿ ವಾಲ್ಮೀಕಿ ಜಯಂತಿ ಆಚರಣೆ

0

ಶಿಡ್ಲಘಟ್ಟ ತಾಲ್ಲೂಕಿನ ಮೇಲೂರು ಗ್ರಾಮದ ಚೆಂಗಲರಾಯರೆಡ್ಡಿ ವೃತ್ತದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಆಚರಣೆ ಮಾಡಲಾಯಿತು.

ಹಂಡಿಗನಾಳ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ವಾಲ್ಮೀಕಿ ಜಯಂತಿ ಆಚರಣೆ

0

ಶಿಡ್ಲಘಟ್ಟ ತಾಲ್ಲೂಕಿನ ಹಂಡಿಗನಾಳ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಬುಧವಾರ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಕೆ.ಪಿ.ಸಿ.ಸಿ.ಉಪಾಧ್ಯಕ್ಷ ವಿ.ಮುನಿಯಪ್ಪ ಪೂಜೆ ಸಲ್ಲಿಸಿದರು. ಗ್ರಾಮ ಪಂಚಾಯತಿ ಅಧ್ಯಕ್ಷೆ ಅಂಬುಜಮ್ಮ, ಉಪಾಧ್ಯಕ್ಷ ಮುನಿನಾರಾಯಣಪ್ಪ, ಮಾಜಿ ಅಧ್ಯಕ್ಷ ಅಶ್ವಥ್ಥಬಾಬು, ಸದಸ್ಯರಾದ ಕಾಂತರಾಜು, ಪಿಳ್ಳಮುನಿಯಪ್ಪ, ಶ್ರೀನಿವಾಸಯ್ಯ, ವೆಂಕಟೇಶಯ್ಯ, ನಾಗಮ್ಮ, ಭಾಗ್ಯಮ್ಮ ಹಾಜರಿದ್ದರು.

ವಾಲ್ಮೀಕಿ ಮಹರ್ಷಿ ಜಯಂತಿ ಮಹೋತ್ಸವ

0

ತಾಲ್ಲೂಕಿನಾದ್ಯಂತ ಬುಧವಾರ ವಾಲ್ಮೀಕಿ ಮಹರ್ಷಿ ಜಯಂತಿ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ತಾಲ್ಲೂಕಿನ ಮಸ್ತಕಾಚಲ, ತಲಕಾಯಲಬೆಟ್ಟ, ತಲೆಕಾಯ್ದಬೆಟ್ಟ, ತಲಕಾಚಿನಕೊಂಡ ಮುಂತಾದ ಹೆಸರಿನಿಂದ ಕರೆಯಲ್ಪಡುವ ತಲಕಾಯಲಬೆಟ್ಟದಲ್ಲಿಯೇ ಪುರಾತನ ಕಾಲದಲ್ಲಿ ರಾಮಾಯಣ ಮಹಾಕಾವ್ಯ ಬರೆದ ವಾಲ್ಮೀಕಿ ಮಹರ್ಷಿ ಜನಿಸಿದ ಹಾಗೂ ಬಾಲ್ಯ ಯೌವನವನ್ನು ಕಳೆದನೆಂಬ ಪ್ರತೀತಿಯಿದೆ. ತಲಕಾಯಲಬೆಟ್ಟದಲ್ಲಿರುವ ವಾಲ್ಮೀಕಿ ಮಹರ್ಷಿಯ ಗುಹೆ ಮತ್ತು ಮೂರ್ತಿಗೆ ಪೂಜೆ ಸಲ್ಲಿಸಿದ ನಂತರ ಪಟ್ಟಣದ ಚಿಂತಾಮಣಿ ರಸ್ತೆಯಲ್ಲಿರುವ ವಾಲ್ಮೀಕಿ ಮಹರ್ಷಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಮೆರವಣಿಗೆಗೆ ಶಾಸಕ ಎಂ.ರಾಜಣ್ಣ ಚಾಲನೆ ನೀಡಿದರು.
‘ಪ್ರಪಂಚವಿರುವವರೆಗೂ ಉಳಿಯುವಂತಹ ಮಹಾಕಾವ್ಯ ರಾಮಾಯಣ. ಮಹರ್ಷಿ ವಾಲ್ಮೀಕಿ ರಚಿಸಿರುವ ಈ ಮಹಾಕಾವ್ಯದಲ್ಲಿರುವ ಆದರ್ಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಶಾಸಕ ಎಂ.ರಾಜಣ್ಣ ಈ ಸಂದರ್ಭದಲ್ಲಿ ತಿಳಿಸಿದರು.
ಮಯೂರ ವೃತ್ತದ ಬಳಿಯಿರುವ ವಾಲ್ಮೀಕಿ ದೇವಾಲಯದಲ್ಲಿ ಪೂಜೆಯನ್ನು ನೆರವೇರಿಸಿದ ನಂತರ ಪ್ರಮುಖ ಬೀದಿಗಳಲ್ಲಿ ಮಹರ್ಷಿ ವಾಲ್ಮೀಕಿಯವರ ಭಾವಚಿತ್ರದೊಂದಿಗೆ ಮೆರವಣಿಗೆಯನ್ನು ನಡೆಸಲಾಯಿತು.
[lightbox thumb=”http://www.sidlaghatta.com/wp-content/uploads/2014/10/8oct2.jpg”]ತಾಲ್ಲೂಕಿನ ನಾನಾ ಗ್ರಾಮಗಳಿಂದ ಆಗಮಿಸಿದ್ದ ಟ್ರಾಕ್ಟರ್ ಮತ್ತು ಟೆಂಪೋಗಳಲ್ಲಿ ಮಹರ್ಷಿ ವಾಲ್ಮೀಕಿ ಭಾವಚಿತ್ರವನ್ನು ಹೂಗಳಿಂದ ಅಲಂಕರಿಸಿ ಪ್ರಮುಖ ಬೀದಿಗಳಲ್ಲಿ ಸಾಗಿದರು. ಮಕ್ಕಳು ಮತ್ತು ದೊಡ್ಡವರು ವಾಲ್ಮೀಕಿ, ಸೀತೆ, ರಾಮ, ಲಕ್ಷ್ಮಣ, ಲವ, ಕುಶ ಮುಂತಾದ ವಿವಿಧ ಪೌರಾಣಿಕ ವೇಷಧಾರಿಗಳಾಗಿ ಎಲ್ಲರನ್ನೂ ಆಕರ್ಷಿಸಿದರು. ಗಾರಡಿ ಬೊಂಬೆಗಳು, ಮಹಿಳಾ ಡೊಳ್ಳು ಕುಣಿತದ ತಂಡ ಮತ್ತಿತರ ವೇಷಧಾರಿಗಳು ಜನರನ್ನು ರಂಜಿಸಿದರು.
ಜಿಲ್ಲಾ ವಾಲ್ಮೀಕಿ ಸಭಾ ಅಧ್ಯಕ್ಷ ಬಂಕ್‌ ಮುನಿಯಪ್ಪ, ತಾಲ್ಲೂಕು ಅಧ್ಯಕ್ಷ ಕೃಷ್ಣಪ್ಪ, ತಹಶೀಲ್ದಾರ್‌ ಜಿ.ಎ.ನಾರಾಯಣಸ್ವಾಮಿ, ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಣಾಧಿಕಾರಿ ಪ್ರಭಾರಿ ಗಣಪತಿ ಸಾಕರೆ, ಸಿ.ಡಿ.ಪಿ.ಒ ಲಕ್ಷ್ಮೀದೇವಮ್ಮ, ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಎನ್‌.ಮುನಿಯಪ್ಪ, ರಾಜೇಂದ್ರ, ಮಂಜುನಾಥ್‌, ಓ.ಟಿ.ಕೃಷ್ಣಪ್ಪ, ನಾರಾಯಣಸ್ವಾಮಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
 
 

ತಾಲ್ಲೂಕಿನಾದ್ಯಂತ ಬಕ್ರೀದ್ ಹಬ್ಬ ಆಚರಣೆ

0

ತ್ಯಾಗ ಬಲಿದಾನಗಳ ಸಂಕೇತವಾಗಿರುವಂತಹ ಬಕ್ರೀದ್ ಹಬ್ಬವನ್ನು ತಾಲ್ಲೂಕಿನಾದ್ಯಂತ ಮುಸ್ಲೀಮರು ಸೋಮವಾರ ಶ್ರದ್ಧಾ ಭಕ್ತಿಯಿಂದ ಆಚರಿಸಿದರು. ಪಟ್ಟಣದ ಪ್ರಮುಖ ರಸ್ತೆಯಲ್ಲಿ ಮುಸ್ಲೀಮರು ಮೆರವಣಿಗೆ ನಡೆಸಿ ಬೈಪಾಸ್ ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ಸೇರಿ ಸಕಲ ಮಾನವ ಕುಲದ ಒಳಿತಿಗಾಗಿ ಅಲ್ಲಾಹುವಿನಲ್ಲಿ ಪ್ರಾರ್ಥಿಸಿದರು.
ಪರಸ್ಪರ ಅಪ್ಪಿಕೊಳ್ಳುವ ಮೂಲಕ ಹಬ್ಬದ ಶಭಾಶಯಗಳನ್ನು ಈ ಸಂದರ್ಭದಲ್ಲಿ ವಿನಿಮಯಿಸಿಕೊಂಡ ಜಮಾತ್ ಬಾಂಧವರು ಜುಲೂಸಿಲ್ಲಿ ನಗರದ ಪ್ರಮುಖ ಬೀದಿಗಳ ಮೂಲಕ ಸಾಗಿ ಈದ್ಗಾ ಮೈದಾನದಲ್ಲಿ ದುವಾ ನೆರವೇರಿಸಿದರು.
ಬಕ್ರೀದ್ ಹಬ್ಬವನ್ನು ಈದ್-ಅಲ್-ಅದಾ ಎಂದೂ ಕರೆಯುತ್ತಾರೆ. ಈದ್-ಅಲ್-ಅದಾ ಹಬ್ಬವನ್ನು ಮುಸ್ಲೀಮರು, ಮುಸ್ಲಿಂ ಮಾಸಿಕವಾದ ಝುಲ್-ಹಿಜ್ಜಾದ ಹತ್ತನೆಯ ದಿನದಂದು ಆಚರಿಸುತ್ತಾರೆ. ಈ ಶುಭದಿನದಂದು ಕುರಿಯನ್ನು ಬಲಿ ನೀಡುತ್ತಾರೆ ಹಾಗೂ ಮಸೀದಿಗಳಲ್ಲಿ ಪ್ರಾರ್ಥಿಸುತ್ತಾರೆ. ಹಸ್ರತ್ ಇಬ್ರಾಹಿಮ್‌ ಅಲ್ಲಾಹನಿಗೆ ಶರಣಾಗುವ ಅಗ್ನಿಪರೀಕ್ಷೆಯ ಸ್ಮರಣಾರ್ಥವಾಗಿ ಈ ಹಬ್ಬವನ್ನು ಆಚರಿಸಲಾಗುತ್ತದೆ.
ಬಲಿಗೊಳ್ಳುವ ಪಶುವಿನ ಮಾಂಸವನ್ನು ಬಳಸಿಕೊಳ್ಳುವುದರ ಕುರಿತು ಇಸ್ಲಾಂ ನಲ್ಲಿ ಕೆಲವು ಮಾರ್ಗದರ್ಶೀ ಸೂತ್ರಗಳಿವೆ. ಬಲಿಪಶುವಿನ ಮಾಂಸವನ್ನು ಮೂರು ಭಾಗಗಳಾಗಿ ವಿಭಾಗಿಸಿ, ದೊಡ್ಡಭಾಗವನ್ನು, ಅಶಕ್ತರಾದ ಅಥವಾ ಆ ದಿನದ ಊಟವನ್ನು ಗಳಿಸಲಾಗದ ಬಡವರಲ್ಲಿ ಹಂಚಬೇಕು. ಮಿಕ್ಕುಳಿದ ಎರಡು ಚಿಕ್ಕ ತುಂಡುಗಳನ್ನು ಗೆಳೆಯರು, ಬಂಧುಗಳು ಮತ್ತು ಕುಟುಂಬದ ಸದಸ್ಯರ ನಡುವೆ ಹಂಚಬೇಕು. ಇದು ಸಂಭ್ರಮದ ಹಾಗೂ ಭೂರಿಭೋಜನದ ಸಂದರ್ಭವಾಗಿದೆ. ಇವೆಲ್ಲಕ್ಕಿಂತಲೂ ಮಿಗಿಲಾಗಿ, ಈ ಹಬ್ಬವು ಏಕತೆ ಹಾಗೂ ಭ್ರಾತೃತ್ವದ ಆಚರಣೆಯಾಗಿದೆ.
ರಾಜಕೀಯ ಮುಖಂಡರೂ ಸೇರಿದಂತೆ ವಿವಿಧ ಜನಾಂಗದವರೂ ಕೂಡಾ ಮುಸ್ಲಿಂ ಭಾಂಧವರಿಗೆ ಶುಭಾಶಯಗಳನ್ನು ಕೋರಿದರು. ಶಾಸಕ ಎಂ.ರಾಜಣ್ಣ, ಮೇಲೂರಿನ ಕೆ.ಸೂರ್ಯನಾರಾಯಣಗೌಡ, ಪುರಸಭೆ ಸದಸ್ಯ ಎನ್.ಲಕ್ಷ್ಮಣ, ಎನ್.ಸುರೇಶ್, ಎ.ವಿ.ಶ್ರೀನಾಥ್, ಎಲ್.ಮಂಜುನಾಥ್, ಎಸ್.ಎಂ.ರಮೇಶ್ ಈದ್ಗಾ ಮೈದಾನಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದ ಮುಸ್ಲೀಮರಿಗೆ ಶುಭಕೋರಿದರು.

ಶಾಕಾಂಬರಿಯಾದ ಗಂಗಾದೇವಿ

0

ಪಟ್ಟಣದ ವಾಸವಿ ರಸ್ತೆಯಲ್ಲಿರುವ ಪುರಾತನ ಗಂಗಾದೇವಿ ದೇವಾಲಯದಲ್ಲಿ ದಸರಾ ಹಬ್ಬದ ಪ್ರಯುಕ್ತ ವಿಶೇಷ ತರಕಾರಿ ಅಲಂಕಾರವನ್ನು ಮಾಡಲಾಗಿತ್ತು. ಆಲೂಗಡ್ಡೆ, ಬೀನ್ಸ್‌, ಟೊಮೇಟೋ, ಹೀರೇಕಾಯಿ, ಗೆಡ್ಡೆಕೋಸು, ನಿಂಬೆಹಣ್ಣು, ಕರಿಬೇವು, ಕ್ಯಾರೆಟ್‌, ಬೀಟ್‌ರೂಟ್‌, ಚಪ್ಪರದವರೆ, ದಪ್ಪಮೆಣಸಿನಕಾಯಿ, ಸೋರೆಕಾಯಿ, ಬೆಂಡೆಕಾಯಿ, ಮೂಲಂಗಿ, ಹೂಕೋಸು, ಎಲೆಕೇಸು, ಬದನೆಕಾಯಿ, ಪಡವಲಕಾಯಿ, ಕುಂಬಳ, ತೊಂಡೆಕಾಯಿ, ಹಾಗಲಕಾಯಿ ಮುಂತಾದ ತರಕಾರಿಗಳಿಂದ ದೇವಿಯನ್ನು ಸುಂದರವಾಗಿ ಅಲಂಕೃತಗೊಳಿಸಿದ್ದರು.
ಶಾಕಾಂಬರಿ ಎಂದೇ ಕರೆಯುವ ಈ ತರಕಾರಿ ಅಲಂಕೃತ ದೇವಿಯನ್ನು ನೂರಾರು ಭಕ್ತರು ಆಗಮಿಸಿ ದರ್ಶಿಸಿದರು. ಬೆಳಿಗ್ಗೆಯಿಂದಲೇ ನಡೆಯುತ್ತಿದ್ದ ಪೂಜೆಯಲ್ಲಿ ಭಕ್ತರು ಅದರಲ್ಲೂ ಹೆಚ್ಚಾಗಿ ಮಹಿಳೆಯರು ಪಾಲ್ಗೊಂಡಿದ್ದರು. ನಿಂಬೆಹಣ್ಣಿನ ದೀಪ, ತಂಬಿಟ್ಟಿನ ದೀಪ ಮತ್ತು ಅಚ್ಚುಬೆಲ್ಲದ ದೀಪಗಳನ್ನು ಹಚ್ಚಿ ದೇವಿಯನ್ನು ಪೂಜಿಸಿದರು. ಭಕ್ತರಿಗೆಲ್ಲಾ ಪ್ರಸಾದವನ್ನು ವಿತರಿಸಲಾಯಿತು ಎಂದು ಅರ್ಚಕ ರಾಮು ತಿಳಿಸಿದರು.

ಕೆಂಪೇಗೌಡ ನಗರದ ಮೂರನೇ ವಾರ್ಷಿಕೋತ್ಸವ

0

ಕೆಂಪೇಗೌಡ ಅವರ ದೂರದೃಷ್ಟಿ, ಸಾಮಾಜಿಕ ಕಳಕಳಿಯಿಂದ ಬೆಂಗಳೂರನ್ನು ಅಭಿವೃದ್ಧಿಪಡಿಸಲು ಹೇಗೆ ಸಾಧ್ಯವಾಯಿತೋ ಅದೇ ರೀತಿ ಕೆಂಪೇಗೌಡರ ಹೆಸರಿಟ್ಟುಕೊಂಡ ಬಡಾವಣೆಯಿಂದಲೇ ಪಟ್ಟಣದ ಅಭಿವೃದ್ಧಿ ಪ್ರಾರಂಭವಾಗಲಿ ಎಂದು ತಾಲ್ಲೂಕು ಒಕ್ಕಲಿಗ ಸಂಘದ ನಿರ್ದೇಶಕ ಮುನಿಕೃಷ್ಣಪ್ಪ ತಿಳಿಸಿದರು.
ಪಟ್ಟಣದ ಇದ್ಲೂಡು ರಸ್ತೆಯ ಕೆಂಪೇಗೌಡ ನಗರದಲ್ಲಿ ಶನಿವಾರ ನಡೆದ ಕೆಂಪೇಗೌಡ ನಗರದ ಮೂರನೇ ವಾರ್ಷಿಕೋತ್ಸವ ಹಾಗೂ ಒಕ್ಕಲಿಗರ ಯುವಸೇನೆ ನಗರ ಘಟಕದ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು.
ಕೆಂಪೇಗೌಡ ಅವರು ಬೆಂಗಳೂರು ಮಾರುಕಟ್ಟೆ ಸ್ಥಾಪಿಸಿ ಸುತ್ತಮುತ್ತಲಿನ ನಾನಾ ಗ್ರಾಮಗಳ ಗುಡಿ ಕೈಗಾರಿಕೆ ಮಾಡಿದ್ದ ಸಮುದಾಯಗಳಿಗೆ ನೆರವಾದರು. ಹಂತಹಂತವಾಗಿ ಬೆಂಗಳೂರನ್ನು ಅಭಿವೃದ್ಧಿ ಪಡಿಸಿದರು. ಅವರ ಕನಸಿನಿಂದಾಗಿ ಇಂದು ಬೆಂಗಳೂರು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಅವರ ಹೆಸರನ್ನಿಟ್ಟುಕೊಂಡ ಸಂಘಟನೆಗಳು ಕೇವಲ ಸಂಘಟನೆಗಳಷ್ಟೇ ಆಗಿರಬಾರದು. ಅವರ ಆದರ್ಶದ ಮುಂದುವರಿದ ಭಾಗದಂತಿರಬೇಕು. ಕೆಂಪೇಗೌಡರು ಹೇಗೆ ಎಲ್ಲಾ ಜಾತಿ, ವರ್ಗ, ಕಸುಬುಗಳ ಬಗ್ಗೆಯೂ ವಿಶಾಲ ಮನೋಭಾವದಿಂದ ರಾಷ್ಟ್ರಮಟ್ಟದ ಆಲೋಚನಾಪರರಾಗಿದ್ದರೋ ಅದೇ ರೀತಿ ಸಂಘಟನೆಗಳು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಊರಿನ ಬೆಳವಣಿಗೆಗೆ, ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಬೇಕು ಎಂದು ಹೇಳಿದರು.
ಬಡಾವಣೆಗಳ ಹೆಸರನ್ನು ಸರ್ಕಾರ ಅಧಿಕೃತವಾಗಿ ಘೋಷಿಸಿಲ್ಲ. ಆದರೂ ಜನರು ತಮ್ಮ ವಿಳಾಸಗಳನ್ನು ಎಲ್ಲೆಡೆ ಬರೆಯುವಾಗ ಬಳಸುತ್ತಿದ್ದಲ್ಲಿ ಚಾಲ್ತಿಗೆ ಬರುತ್ತದೆ ಮತ್ತು ಶಾಶ್ವತವಾಗುಳಿಯುತ್ತದೆ. ಪ್ರತಿಭಾವಂತರನ್ನು ಗುರುತಿಸಿ ಕೆಂಪೇಗೌಡರ ಹೆಸರಿನಲ್ಲಿ ಪುರಸ್ಕರಿಸಿ. ಹಿಂದೆ ಕೇವಲ ವ್ಯವಸಾಯದಲ್ಲಿ ತೊಡಗಿಸಿಕೊಂಡಿದ್ದ ಒಕ್ಕಲಿಗರು ಈಗ ವಿವಿಧ ಕ್ಷೇತ್ರದೆಡೆಗೆ ಹೋಗಬೇಕಾದ ಅನಿವಾರ್ಯತೆಯಿದೆ. ಶಿಕ್ಷಣ ಅತ್ಯವಶ್ಯವಿರುವುದರಿಂದ ಬಡ ಪ್ರತಿಭಾವಂತರನ್ನು ಪ್ರೋತ್ಸಾಹಿಸಿ ಎಂದು ನುಡಿದರು.
ಒಕ್ಕಲಿಗ ಸಂಘದ ತಾಲ್ಲೂಕು ಅಧ್ಯಕ್ಷ ಬಿ.ನಾರಾಯಣಸ್ವಾಮಿ, ನಿರ್ದೇಶಕರಾದ ಸಿ.ಆರ್‌.ಶಿವಕುಮಾರ್‌, ಸೊಣ್ಣಪ್ಪ, ಜೆ.ವೆಂಕಟಸ್ವಾಮಿ, ಇ.ನಾರಾಯಣಪ್ಪ, ಬಚ್ಚರೆಡ್ಡಿ, ಒಕ್ಕಲಿಗರ ಯುವಸೇನೆ ನಗರ ಘಟಕ ಅಧ್ಯಕ್ಷ ಆರ್‌.ಪುರುಷೋತ್ತಮ್‌, ಗೌರವಾಧ್ಯಕ್ಷ ಎ.ಚಂದ್ರಶೇಖರ್‌, ಉಪಾಧ್ಯಕ್ಷ ವಿಜಯ್‌, ತಾಲ್ಲೂಕು ಒಕ್ಕಲಿಗರ ಯುವಸೇನೆ ಅಧ್ಯಕ್ಷ ಜೆ.ಎಸ್‌.ವೆಂಕಟಸ್ವಾಮಿ, ಗೌರವಾಧ್ಯಕ್ಷ ಎಚ್‌.ಡಿ.ಶಶಿಕುಮಾರ್‌, ಉಪಾಧ್ಯಕ್ಷ ಎ.ಉಮೇಶ್‌, ಸಿ.ಎ.ಮುನಿರಾಜು ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಕಾಲನ ಸವಾಲನ್ನು ಎದುರಿಸಿ ಮುಂದುವರೆಯುತ್ತಿರುವ ಶೆಟ್ಟಹಳ್ಳಿಯ ನಾರಾಯಣಪ್ಪ

0

ಆಧುನಿಕ ತಂತ್ರಜ್ಞಾನದಿಂದಾಗಿ ಹಲವಾರು ಪರಂಪರಾಗತ ಉದ್ದಿಮೆಗಳು ಕಣ್ಮರೆಯಾಗುತ್ತಿವೆ. ಅವುಗಳಲ್ಲಿ ಎಣ್ಣೆ ಗಾಣಗಳೂ ಒಂದು. ಹಿಂದೆ ತಾಲ್ಲೂಕಿನಲ್ಲಿ ಹಲವಾರು ಗ್ರಾಮಗಳಲ್ಲಿದ್ದ ಗಾಣಗಳು ಈಗ ಕೇವಲ ಪಳೆಯುಳಿಕೆಗಳಾಗಿ ಉಳಿದಿವೆ. ಸಂಪ್ರದಾಯಿಕ ಎಣ್ಣೆ ಗಾಣಗಳು ಎಣ್ಣೆ ಕಾರ್ಖಾನೆಯೊಂದಿಗೆ ಯಾವ ತರಹದ ಪೈಪೋಟಿಗಳನ್ನು ನಡೆಸಲಸಾಧ್ಯವಾಗಿವೆ. ಆದರೆ ತಾಲ್ಲೂಕಿನ ಶೆಟ್ಟಹಳ್ಳಿಯಲ್ಲಿ ಇನ್ನೂ ಹಳೆಯ ಗಾಣವನ್ನೇ ನಂಬಿ ಜೀವನ ನಡೆಸುವವರಿರುವುದು ವಿಶೇಷವಾಗಿದೆ. ತಾಲ್ಲೂಕಿನ ಎಲ್ಲ ಗಾಣಗಳೂ ನಿಂತುಹೋಗಿದ್ದರೂ ಶೆಟ್ಟಹಳ್ಳಿಯ ನಾರಾಯಣಪ್ಪ ಅವರದ್ದು ಮಾತ್ರ ಇನ್ನೂ ನಮ್ಮ ಪರಂಪರೆಯ ಪಳೆಯುಳಿಕೆಯಾಗಿ ಕಾಲನ ಸವಾಲನ್ನು ಎದುರಿಸಿ ಮುಂದುವರೆದಿದೆ.
ಗಾಣವೆಂದರೆ, ಒಂದು ವಸ್ತುವನ್ನು ಹಿಂಡಿ, ದ್ರವರೂಪದ ವಸ್ತುವನ್ನು ಪಡೆಯುವಲ್ಲಿ ಉಪಯೋಗಿಸುವ ಸಾಧನ. ಮೂಲತಃ ಕೊಬ್ಬರಿ, ಕಡಲೆ, ಹರಳು, ಹೊನ್ನೆ, ಎಳ್ಳು, ಔಡಲ, ಕುಸುಬಿ ಮುಂತಾದ ಎಣ್ಣೆ ಹಿಂಡುವ ಸಾಧನವಾಗಿದ್ದ ಗಾಣ, ನಂತರದ ದಿನಗಳಲ್ಲಿ ಇದು ಕಬ್ಬನ್ನು ಅರೆಯುವ ಸಾಧನವಾಗಿ ರೂಪುಗೊಂಡು ಆಲೆಮನೆ ಎಂಬ ಹೆಸರು ಪಡೆಯಿತು.
ಗಾಣದ ವಿನ್ಯಾಸವು ಮೊದಲು ಸುಮಾರು ೯ ರಿಂದ ೧೦ ಅಡಿ ವ್ಯಾಸದ ಚಪ್ಪಟೆಯಾದ ಗಟ್ಟಿ ನೆಲ ನಿರ್ಮಿಸುವುದರೊಂದಿಗೆ ಪ್ರಾರಂಭವಾಗುತ್ತದೆ. ಇಲ್ಲಿ ತೈಲ ಬೀಜಗಳನ್ನು ಹಾಕಲು ದೊಡ್ಡ ಒರಳನ್ನು ಇಡಲಾಗುತ್ತದೆ. ಅದಕ್ಕೆ ಗಾಣದ ಮರವನ್ನು ಕಟ್ಟುತ್ತಾರೆ. ಕಬ್ಬಿಣದ ಬಳೆಯ ಅಂಚನ್ನುಳ್ಳ ಮರದ ಒನಕೆಯನ್ನು ಗಾಣದ ಒರಳಿನ ಸೂಕ್ತವಾದ ಆಯಕಟ್ಟಿನ ಸ್ಥಳದಲ್ಲಿ ಸ್ಥಾಪಿಸಿರುತ್ತಾರೆ. ಗಾಣದ ಮರ ಹಾಗೂ ಒರಳಿನ ಕೆಳಭಾಗಕ್ಕೂ ಹೊಂದಿಕೊಂಡಿರುವಂತೆ ಕತ್ತರಿ ಹಲಗೆಯೊಂದನ್ನು ನಿರ್ಮಿಸಿ ಆ ಹಲಗೆಯ ಮೇಲೆ ಭಾರವಾದ ಕಲ್ಲುಗಳನ್ನು ಹೇರಿರುತ್ತಾರೆ.
ಕತ್ತರಿ ಹಲಗೆಯು ತನ್ನೊಂದು ಹಗ್ಗದಿಂದ ಗಾಣದ ಮಧ್ಯಭಾಗವನ್ನು ಆವರಿಸಿಕೊಂಡು ಭದ್ರವಾಗಿರುತ್ತದೆ. ನಂತರ ಒನಕೆಗೆ ಹೊಂದಿಕೊಂಡು ಆಸರೆಯಾಗಿರುವಂತೆಯೂ ಬೀಜಗಳನ್ನು ಅರೆಯುವ ಪ್ರಧಾನ ಕ್ರಿಯೆಯು ಸುಸೂತ್ರವಾಗುವಂತೆ ಮಲ್ಲಗಂಬವೊಂದನ್ನು ಸ್ವಲ್ಪ ಓರೆಯಾಗಿ ನಿಲ್ಲಿಸಲಾಗುತ್ತದೆ. ಹೀಗೆ ಸ್ಥಾನ ಗ್ರಹಣ ಮಾಡಿದ ಈ ಮಲ್ಲಗಂಬವು ಮಧ್ಯದಲ್ಲಿ ಬಲವಾದ ಹಗ್ಗದ ಜೋಡಣೆಯನ್ನು ಹೊಂದಿರುತ್ತದೆ. ಈ ಎಲ್ಲಾ ಸಿದ್ಧತೆಗಳನ್ನು ಒಳಗೊಂಡು ರಚನೆಯಾದ ಎಣ್ಣೆಗಾಣದ ಕ್ರಿಯೆಯಿಂದ ಕೊಬ್ಬರಿ, ಔಡಲ, ಶೇಂಗಾ ಮುಂತಾದ ತೈಲ ಬೀಜಗಳ ಎಣ್ಣೆ ಉತ್ಪಾದನೆಯಾಗುತ್ತದೆ. ಇಂಥಾ ಪ್ರತಿಭಾಪೂರ್ಣವಾದ ಗಾಣದ ಕರಕುಶಲ ಕಲೆಯು ಬಡಿಗನ ಕುಶಾಗ್ರಮತಿಯನ್ನು ಪ್ರತಿನಿಧಿಸುತ್ತದೆ. ನೋಡಲು ಲಿಂಗದ ಆಕಾರದ ಈ ಗಾಣ ತುಂಬಾ ಕಲಾತ್ಮಕತೆಯಿಂದ ಕೂಡಿದುದಾಗಿದೆ.
‘ನಮ್ಮ ಗಾಣದ ಕಲ್ಲು ಎಷ್ಟು ಹಳೆಯದೋ ತಿಳಿಯದು. ನಾನು ಹುಟ್ಟುವ ಮೊದಲಿಂದಲೂ ಇತ್ತು. ವರ್ಷದ ಬಿಸಿಲಿರುವ ಮೂರ್‍ನಾಕು ತಿಂಗಳಿನಲ್ಲಿ ಮಾತ್ರ ಈ ಕಸುಬು ಚೆನ್ನಾಗಿ ನಡೆಯುತ್ತದೆ. ಮೊದಲು ನಮ್ಮ ಹಳ್ಳಿಯಲ್ಲಿ ಎಂಟು ಗಾಣಗಳಿದ್ದವು. ಈಗ ಎಲ್ಲರೂ ನಿಲ್ಲಿಸಿಬಿಟ್ಟಿದ್ದಾರೆ. ಅವರಲ್ಲಿ ಕೆಲವರು ಯಂತ್ರಗಳಿಂದ ತಯಾರಿಸಿದ ಎಣ್ಣೆಯನ್ನು ಮಾರುವುದನ್ನು ಕಸುಬನ್ನಾಗಿಸಿಕೊಂಡಿದ್ದಾರೆ. ಮೊದಲಾದರೆ ಅರಳು, ಕಡಲೆ, ಇಪ್ಪೆ, ಎಳ್ಳು, ಕೊಬ್ಬರಿ ಮೊದಲಾದವುಗಳಿಂದ ಎಣ್ಣೆ ತೆಗೆಯುತ್ತಿದ್ದೆವು. ಆದರೆ ಈಗ ಹೆಚ್ಚಾಗಿ ಹೊಂಗೆಯನ್ನೇ ನಂಬ್ದಿದೇವೆ’ ಎನ್ನುತ್ತಾರೆ ಹಿರಿಯರಾದ ನಾರಾಯಣಪ್ಪ.
‘ಒಣಗಿದ ಎಣ್ಣೆ ಕಾಳುಗಳನ್ನು ಬೆಳಗಿನ ಅವಧಿಯಲ್ಲಿ ಗಾಣಕ್ಕೆ ಹಾಕಿ ಪುಡಿ ಮಾಡಿ ಜರಡಿ ಹಿಡಿಯುತ್ತೇವೆ. ನಂತರ ಪುಡಿಗೆ ಸ್ವಲ್ಪ ನೀರು ಹಾಕಿ ಹದವಾಗಿ ಉಂಡೆ ಮಾಡಿಟ್ಟು ಅವನ್ನು ಸಂಜೆ ವೇಳೆಗೆ ಗಾಣಕ್ಕೆ ಹಾಕಿ ಎಣ್ಣೆ ತೆಗೆಯುತ್ತೇವೆ. ೫೦ ಕೆಜಿ ಬೀಜದಿಂದ ೧೦ ಕೆಜಿ ಎಣ್ಣೆ ತಯಾರಾಗುತ್ತದೆ ಮತ್ತು ೩೦ ಕೆಜಿ ಹಿಂಡಿ ಸಿಗುತ್ತದೆ. ಹಿಂಡಿ ತೋಟಗಳಿಗೆ ಒಳ್ಳೆಯ ಗೊಬ್ಬರ. ಒಂದು ಕೆಜಿ ಎಣ್ಣೆ ೬೫ ರಿಂದ ೭೦ ರೂಗೆ ಮಾರಾಟವಾದರೆ, ಹಿಂಡಿ ಒಂದು ಕೆಜಿಯನ್ನು ೧೬ ರೂಗಳಂತೆ ಮಾರುತ್ತೇವೆ. ಹೊಂಗೆ ಬೀಜವನ್ನು ನಾವು ರೈತರಿಂದ ಒಂದು ಸೇರಿಗೆ ೨೦೦ ಗ್ರಾಂ ಎಣ್ಣೆ ನೀಡಿ ಪಡೆಯುತ್ತೇವೆ. ಅದರಿಂದ ಸಿಗುವ ಚಕ್ಕೆ ಅಥವಾ ಹಿಂಡಿಯೇ ನಮಗೆ ಲಾಭ. ಯಂತ್ರದಿಂದ ತಯಾರಾದ ಎಣ್ಣೆಗಿಂತ ಗಾಣದಲ್ಲಿ ತೆಗೆಯುವ ಎಣ್ಣೆ ಗುಣಮಟ್ಟದಲ್ಲಿ ಚೆನ್ನಾಗಿರುತ್ತದೆಂದು ಕೆಲವರು ನಮ್ಮಲ್ಲೇ ಕೊಳ್ಳುತ್ತಾರೆ. ಗಾಣಕ್ಕೆ ಕೆಲಸವಿರದ ಸಮಯದಲ್ಲಿ ನಾವು ವ್ಯವಸಾಯ ಮತ್ತು ಪಶುಪಾಲನೆಯಲ್ಲಿ ತೊಡಗುತ್ತೇವೆ’ ಎಂದು ಅವರು ಹೇಳಿದರು.
‘ಗುಂಡು ತೋಪುಗಳು ಕರಗುತ್ತಿವೆ. ಅವುಗಳಲ್ಲಿ ಬೆಳೆಯುತ್ತಿದ್ದ ಹೊಂಗೆ ಇಪ್ಪೆ, ಬೇವು ಮೊದಲಾದ ಮರಗಳಿಂದ ಸಿಗುತ್ತಿದ್ದ ಎಣ್ಣೆ ಬೀಜಗಳ ಲಭ್ಯತೆ ಕಡಿಮೆಯಾಗುತ್ತಿದೆ. ಅಕಸ್ಮಾತ್ ಎಣ್ಣೆ ಬೀಜಗಳು ಸಿಕ್ಕರೂ ಕೊಂಡು ಶೇಖರಿಸುವಷ್ಟು ಹಣ ಗಾಣದವರ ಬಳಿ ಇರುವುದಿಲ್ಲ. ಹೀಗಾಗಿ ಗಣಿಗಳು ಸ್ಥಗಿತಗೊಂಡು, ದುಡಿಯುವ ಸಂಪತ್ತು ವ್ಯರ್ಥವಾಗಿದೆ. ಸರ್ಕಾರ ಎಣ್ಣೆ ಬೀಜಗಳನ್ನು ಒದಗಿಸುವುದರಿಂದ ಈ ಪಾರಂಪರಿಕ ವೃತ್ತಿಯ ಅವಸಾನವನ್ನು ತಡೆಯಲು ಪ್ರಯತ್ನಿಸಬೇಕು’ ಎಂದು ಗ್ರಾಮದ ಹಿರಿಯರೊಬ್ಬರು ತಿಳಿಸಿದರು.
 
[images cols=”three”]
[image link=”#” image=”1873″]
[image link=”#” image=”1874″]
[image link=”#” image=”1875″]
[/images]

error: Content is protected !!