33.1 C
Sidlaghatta
Thursday, April 18, 2024

ಕಾಲನ ಸವಾಲನ್ನು ಎದುರಿಸಿ ಮುಂದುವರೆಯುತ್ತಿರುವ ಶೆಟ್ಟಹಳ್ಳಿಯ ನಾರಾಯಣಪ್ಪ

- Advertisement -
- Advertisement -

ಆಧುನಿಕ ತಂತ್ರಜ್ಞಾನದಿಂದಾಗಿ ಹಲವಾರು ಪರಂಪರಾಗತ ಉದ್ದಿಮೆಗಳು ಕಣ್ಮರೆಯಾಗುತ್ತಿವೆ. ಅವುಗಳಲ್ಲಿ ಎಣ್ಣೆ ಗಾಣಗಳೂ ಒಂದು. ಹಿಂದೆ ತಾಲ್ಲೂಕಿನಲ್ಲಿ ಹಲವಾರು ಗ್ರಾಮಗಳಲ್ಲಿದ್ದ ಗಾಣಗಳು ಈಗ ಕೇವಲ ಪಳೆಯುಳಿಕೆಗಳಾಗಿ ಉಳಿದಿವೆ. ಸಂಪ್ರದಾಯಿಕ ಎಣ್ಣೆ ಗಾಣಗಳು ಎಣ್ಣೆ ಕಾರ್ಖಾನೆಯೊಂದಿಗೆ ಯಾವ ತರಹದ ಪೈಪೋಟಿಗಳನ್ನು ನಡೆಸಲಸಾಧ್ಯವಾಗಿವೆ. ಆದರೆ ತಾಲ್ಲೂಕಿನ ಶೆಟ್ಟಹಳ್ಳಿಯಲ್ಲಿ ಇನ್ನೂ ಹಳೆಯ ಗಾಣವನ್ನೇ ನಂಬಿ ಜೀವನ ನಡೆಸುವವರಿರುವುದು ವಿಶೇಷವಾಗಿದೆ. ತಾಲ್ಲೂಕಿನ ಎಲ್ಲ ಗಾಣಗಳೂ ನಿಂತುಹೋಗಿದ್ದರೂ ಶೆಟ್ಟಹಳ್ಳಿಯ ನಾರಾಯಣಪ್ಪ ಅವರದ್ದು ಮಾತ್ರ ಇನ್ನೂ ನಮ್ಮ ಪರಂಪರೆಯ ಪಳೆಯುಳಿಕೆಯಾಗಿ ಕಾಲನ ಸವಾಲನ್ನು ಎದುರಿಸಿ ಮುಂದುವರೆದಿದೆ.
ಗಾಣವೆಂದರೆ, ಒಂದು ವಸ್ತುವನ್ನು ಹಿಂಡಿ, ದ್ರವರೂಪದ ವಸ್ತುವನ್ನು ಪಡೆಯುವಲ್ಲಿ ಉಪಯೋಗಿಸುವ ಸಾಧನ. ಮೂಲತಃ ಕೊಬ್ಬರಿ, ಕಡಲೆ, ಹರಳು, ಹೊನ್ನೆ, ಎಳ್ಳು, ಔಡಲ, ಕುಸುಬಿ ಮುಂತಾದ ಎಣ್ಣೆ ಹಿಂಡುವ ಸಾಧನವಾಗಿದ್ದ ಗಾಣ, ನಂತರದ ದಿನಗಳಲ್ಲಿ ಇದು ಕಬ್ಬನ್ನು ಅರೆಯುವ ಸಾಧನವಾಗಿ ರೂಪುಗೊಂಡು ಆಲೆಮನೆ ಎಂಬ ಹೆಸರು ಪಡೆಯಿತು.
ಗಾಣದ ವಿನ್ಯಾಸವು ಮೊದಲು ಸುಮಾರು ೯ ರಿಂದ ೧೦ ಅಡಿ ವ್ಯಾಸದ ಚಪ್ಪಟೆಯಾದ ಗಟ್ಟಿ ನೆಲ ನಿರ್ಮಿಸುವುದರೊಂದಿಗೆ ಪ್ರಾರಂಭವಾಗುತ್ತದೆ. ಇಲ್ಲಿ ತೈಲ ಬೀಜಗಳನ್ನು ಹಾಕಲು ದೊಡ್ಡ ಒರಳನ್ನು ಇಡಲಾಗುತ್ತದೆ. ಅದಕ್ಕೆ ಗಾಣದ ಮರವನ್ನು ಕಟ್ಟುತ್ತಾರೆ. ಕಬ್ಬಿಣದ ಬಳೆಯ ಅಂಚನ್ನುಳ್ಳ ಮರದ ಒನಕೆಯನ್ನು ಗಾಣದ ಒರಳಿನ ಸೂಕ್ತವಾದ ಆಯಕಟ್ಟಿನ ಸ್ಥಳದಲ್ಲಿ ಸ್ಥಾಪಿಸಿರುತ್ತಾರೆ. ಗಾಣದ ಮರ ಹಾಗೂ ಒರಳಿನ ಕೆಳಭಾಗಕ್ಕೂ ಹೊಂದಿಕೊಂಡಿರುವಂತೆ ಕತ್ತರಿ ಹಲಗೆಯೊಂದನ್ನು ನಿರ್ಮಿಸಿ ಆ ಹಲಗೆಯ ಮೇಲೆ ಭಾರವಾದ ಕಲ್ಲುಗಳನ್ನು ಹೇರಿರುತ್ತಾರೆ.
ಕತ್ತರಿ ಹಲಗೆಯು ತನ್ನೊಂದು ಹಗ್ಗದಿಂದ ಗಾಣದ ಮಧ್ಯಭಾಗವನ್ನು ಆವರಿಸಿಕೊಂಡು ಭದ್ರವಾಗಿರುತ್ತದೆ. ನಂತರ ಒನಕೆಗೆ ಹೊಂದಿಕೊಂಡು ಆಸರೆಯಾಗಿರುವಂತೆಯೂ ಬೀಜಗಳನ್ನು ಅರೆಯುವ ಪ್ರಧಾನ ಕ್ರಿಯೆಯು ಸುಸೂತ್ರವಾಗುವಂತೆ ಮಲ್ಲಗಂಬವೊಂದನ್ನು ಸ್ವಲ್ಪ ಓರೆಯಾಗಿ ನಿಲ್ಲಿಸಲಾಗುತ್ತದೆ. ಹೀಗೆ ಸ್ಥಾನ ಗ್ರಹಣ ಮಾಡಿದ ಈ ಮಲ್ಲಗಂಬವು ಮಧ್ಯದಲ್ಲಿ ಬಲವಾದ ಹಗ್ಗದ ಜೋಡಣೆಯನ್ನು ಹೊಂದಿರುತ್ತದೆ. ಈ ಎಲ್ಲಾ ಸಿದ್ಧತೆಗಳನ್ನು ಒಳಗೊಂಡು ರಚನೆಯಾದ ಎಣ್ಣೆಗಾಣದ ಕ್ರಿಯೆಯಿಂದ ಕೊಬ್ಬರಿ, ಔಡಲ, ಶೇಂಗಾ ಮುಂತಾದ ತೈಲ ಬೀಜಗಳ ಎಣ್ಣೆ ಉತ್ಪಾದನೆಯಾಗುತ್ತದೆ. ಇಂಥಾ ಪ್ರತಿಭಾಪೂರ್ಣವಾದ ಗಾಣದ ಕರಕುಶಲ ಕಲೆಯು ಬಡಿಗನ ಕುಶಾಗ್ರಮತಿಯನ್ನು ಪ್ರತಿನಿಧಿಸುತ್ತದೆ. ನೋಡಲು ಲಿಂಗದ ಆಕಾರದ ಈ ಗಾಣ ತುಂಬಾ ಕಲಾತ್ಮಕತೆಯಿಂದ ಕೂಡಿದುದಾಗಿದೆ.
‘ನಮ್ಮ ಗಾಣದ ಕಲ್ಲು ಎಷ್ಟು ಹಳೆಯದೋ ತಿಳಿಯದು. ನಾನು ಹುಟ್ಟುವ ಮೊದಲಿಂದಲೂ ಇತ್ತು. ವರ್ಷದ ಬಿಸಿಲಿರುವ ಮೂರ್‍ನಾಕು ತಿಂಗಳಿನಲ್ಲಿ ಮಾತ್ರ ಈ ಕಸುಬು ಚೆನ್ನಾಗಿ ನಡೆಯುತ್ತದೆ. ಮೊದಲು ನಮ್ಮ ಹಳ್ಳಿಯಲ್ಲಿ ಎಂಟು ಗಾಣಗಳಿದ್ದವು. ಈಗ ಎಲ್ಲರೂ ನಿಲ್ಲಿಸಿಬಿಟ್ಟಿದ್ದಾರೆ. ಅವರಲ್ಲಿ ಕೆಲವರು ಯಂತ್ರಗಳಿಂದ ತಯಾರಿಸಿದ ಎಣ್ಣೆಯನ್ನು ಮಾರುವುದನ್ನು ಕಸುಬನ್ನಾಗಿಸಿಕೊಂಡಿದ್ದಾರೆ. ಮೊದಲಾದರೆ ಅರಳು, ಕಡಲೆ, ಇಪ್ಪೆ, ಎಳ್ಳು, ಕೊಬ್ಬರಿ ಮೊದಲಾದವುಗಳಿಂದ ಎಣ್ಣೆ ತೆಗೆಯುತ್ತಿದ್ದೆವು. ಆದರೆ ಈಗ ಹೆಚ್ಚಾಗಿ ಹೊಂಗೆಯನ್ನೇ ನಂಬ್ದಿದೇವೆ’ ಎನ್ನುತ್ತಾರೆ ಹಿರಿಯರಾದ ನಾರಾಯಣಪ್ಪ.
‘ಒಣಗಿದ ಎಣ್ಣೆ ಕಾಳುಗಳನ್ನು ಬೆಳಗಿನ ಅವಧಿಯಲ್ಲಿ ಗಾಣಕ್ಕೆ ಹಾಕಿ ಪುಡಿ ಮಾಡಿ ಜರಡಿ ಹಿಡಿಯುತ್ತೇವೆ. ನಂತರ ಪುಡಿಗೆ ಸ್ವಲ್ಪ ನೀರು ಹಾಕಿ ಹದವಾಗಿ ಉಂಡೆ ಮಾಡಿಟ್ಟು ಅವನ್ನು ಸಂಜೆ ವೇಳೆಗೆ ಗಾಣಕ್ಕೆ ಹಾಕಿ ಎಣ್ಣೆ ತೆಗೆಯುತ್ತೇವೆ. ೫೦ ಕೆಜಿ ಬೀಜದಿಂದ ೧೦ ಕೆಜಿ ಎಣ್ಣೆ ತಯಾರಾಗುತ್ತದೆ ಮತ್ತು ೩೦ ಕೆಜಿ ಹಿಂಡಿ ಸಿಗುತ್ತದೆ. ಹಿಂಡಿ ತೋಟಗಳಿಗೆ ಒಳ್ಳೆಯ ಗೊಬ್ಬರ. ಒಂದು ಕೆಜಿ ಎಣ್ಣೆ ೬೫ ರಿಂದ ೭೦ ರೂಗೆ ಮಾರಾಟವಾದರೆ, ಹಿಂಡಿ ಒಂದು ಕೆಜಿಯನ್ನು ೧೬ ರೂಗಳಂತೆ ಮಾರುತ್ತೇವೆ. ಹೊಂಗೆ ಬೀಜವನ್ನು ನಾವು ರೈತರಿಂದ ಒಂದು ಸೇರಿಗೆ ೨೦೦ ಗ್ರಾಂ ಎಣ್ಣೆ ನೀಡಿ ಪಡೆಯುತ್ತೇವೆ. ಅದರಿಂದ ಸಿಗುವ ಚಕ್ಕೆ ಅಥವಾ ಹಿಂಡಿಯೇ ನಮಗೆ ಲಾಭ. ಯಂತ್ರದಿಂದ ತಯಾರಾದ ಎಣ್ಣೆಗಿಂತ ಗಾಣದಲ್ಲಿ ತೆಗೆಯುವ ಎಣ್ಣೆ ಗುಣಮಟ್ಟದಲ್ಲಿ ಚೆನ್ನಾಗಿರುತ್ತದೆಂದು ಕೆಲವರು ನಮ್ಮಲ್ಲೇ ಕೊಳ್ಳುತ್ತಾರೆ. ಗಾಣಕ್ಕೆ ಕೆಲಸವಿರದ ಸಮಯದಲ್ಲಿ ನಾವು ವ್ಯವಸಾಯ ಮತ್ತು ಪಶುಪಾಲನೆಯಲ್ಲಿ ತೊಡಗುತ್ತೇವೆ’ ಎಂದು ಅವರು ಹೇಳಿದರು.
‘ಗುಂಡು ತೋಪುಗಳು ಕರಗುತ್ತಿವೆ. ಅವುಗಳಲ್ಲಿ ಬೆಳೆಯುತ್ತಿದ್ದ ಹೊಂಗೆ ಇಪ್ಪೆ, ಬೇವು ಮೊದಲಾದ ಮರಗಳಿಂದ ಸಿಗುತ್ತಿದ್ದ ಎಣ್ಣೆ ಬೀಜಗಳ ಲಭ್ಯತೆ ಕಡಿಮೆಯಾಗುತ್ತಿದೆ. ಅಕಸ್ಮಾತ್ ಎಣ್ಣೆ ಬೀಜಗಳು ಸಿಕ್ಕರೂ ಕೊಂಡು ಶೇಖರಿಸುವಷ್ಟು ಹಣ ಗಾಣದವರ ಬಳಿ ಇರುವುದಿಲ್ಲ. ಹೀಗಾಗಿ ಗಣಿಗಳು ಸ್ಥಗಿತಗೊಂಡು, ದುಡಿಯುವ ಸಂಪತ್ತು ವ್ಯರ್ಥವಾಗಿದೆ. ಸರ್ಕಾರ ಎಣ್ಣೆ ಬೀಜಗಳನ್ನು ಒದಗಿಸುವುದರಿಂದ ಈ ಪಾರಂಪರಿಕ ವೃತ್ತಿಯ ಅವಸಾನವನ್ನು ತಡೆಯಲು ಪ್ರಯತ್ನಿಸಬೇಕು’ ಎಂದು ಗ್ರಾಮದ ಹಿರಿಯರೊಬ್ಬರು ತಿಳಿಸಿದರು.
 
[images cols=”three”]
[image link=”#” image=”1873″]
[image link=”#” image=”1874″]
[image link=”#” image=”1875″]
[/images]

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!