ತಾಲ್ಲೂಕಿನ ಕೊತ್ತನೂರು ಗ್ರಾಮಕ್ಕೆ ಅಂಡರ್‌ಪಾಸ್ ಮುಲಕ ಪ್ರವೇಶಿಸುವಾಗ ರೈಲ್ವೆ ಇಲಾಖೆಯಿಂದ ನಿರ್ಮಾಣ ಮಾಡಲಾಗಿರುವ ಕಬ್ಬಿಣದ ಗರ್ಡರ್ ಒಂದು ಬದಿಯಲ್ಲಿ ಮುರಿದು, ವಾಲಿಕೊಂಡ ಕಾರಣದಿಂದ ಹಾಲು ಸಾಗಿಸುವ ಟ್ಯಾಂಕರ್ ಗ್ರಾಮಕ್ಕೆ ಬರದಂತಾಗಿದೆ.
ಕೊತ್ತನೂರು ಗ್ರಾಮದ ಹಾಲು ಶಿಥಲೀಕರಣ ಕೇಂದ್ರಕ್ಕೆ ಕದಿರಿನಾಯಕನಹಳ್ಳಿ, ಪಿಂಡಿಪಾಪನಹಳ್ಳಿ, ಹಾಗೂ ಕೊತ್ತನೂರು ಗ್ರಾಮಗಳ ಹಾಲು ಉತ್ಪಾದಕರು ಪ್ರತಿದಿನ ಹಾಲನ್ನು ತಂದು ಕೊಡುತ್ತಾರೆ. ಪ್ರತಿದಿನ 3,600 ಲೀಟರ್ ಹಾಲು ಸಂಗ್ರಹವಾಗುವ ಈ ಕೇಂದ್ರದಿಂದ ಹಾಲನ್ನು ಟ್ಯಾಂಕರ್ ಮೂಲಕ ಕೋಲಾರಕ್ಕೆ ಹಾಲನ್ನು ಸಾಗಿಸಲಾಗುತ್ತದೆ.
ಶಿಡ್ಲಘಟ್ಟ ಚಿಂತಾಮಣಿ ರಸ್ತೆಯಿಂದ ಕೊತ್ತನೂರು ಗ್ರಾಮಕ್ಕೆ ಇರುವ ಸಂಪರ್ಕ ರಸ್ತೆಯ ನಡುವೆ ರೈಲ್ವೆ ಹಳಿಯಿರುವುದರಿಂದ ಇಲ್ಲಿ ಅಂಡರ್‌ಪಾಸ್ ನಿರ್ಮಿಸಲಾಗಿದೆ. ಅಂಡರ್‌ಪಾಸ್ ಅಳತೆಗಿಂತ ಎತ್ತರದ ವಾಹನಗಳು ಹೋಗದಂತೆ ಮೊದಲೇ ತಡೆಯಲು ಅಂಡರ್‌ಪಾಸ್‌ನ ಎರಡೂ ಬದಿಯಲ್ಲಿ ಕಬ್ಬಿಣದ ಗರ್ಡರ್‌ಗಳನ್ನು ನಿರ್ಮಿಸಿದ್ದಾರೆ. ಅದರಲ್ಲಿ ಒಂದು ಬದಿಯಲ್ಲಿ ಒಂದು ಕಬ್ಬಿಣದ ರಾಡ್ ಕಳಚಿರುವುದರಿಂದ ಒಂದು ಭಾಗ ವಾಲಿದೆ. ಇದರಿಂದಾಗಿ ಪ್ರತಿ ದಿನ ಗ್ರಾಮಕ್ಕೆ ಬರಬೇಕಾದ ಹಾಲು ಸಾಗಿಸುವ ಟ್ಯಾಂಕರ್ ಬರದಂತಾಗಿದೆ.
ಗ್ರಾಮಕ್ಕೆ ಬಸ್ ಸೌಲಭ್ಯವಿಲ್ಲದಿರುವುದರಿಂದ ಅಪರೂಪಕ್ಕೆ ಮದುವೆ ಮುಂತಾದ ಕಾರ್ಯಕ್ರಮಗಳಿಗೆಂದು ಬರಬೇಕಾದ ಬಸ್ ಕೂಡ ಈಗ ಪ್ರವೇಶಿಸದಂತಾಗಿದೆ. ಹಾಲು ಸಾಗಿಸುವ ಟ್ಯಾಂಕರ್ ಪಿಂಡಿಪಾಪನಹಳ್ಳಿ ಬಳಿ ರೈಲ್ವೆ ಹಳಿ ಪಕ್ಕದಲ್ಲಿ ಹಾದು ಜಮೀನೊಂದರ ಮೂಲಕ ಪ್ರತಿ ದಿನ ಕೊತ್ತನೂರಿಗೆ ಈಗ ಬರುತ್ತಿದ್ದು, ಬೆಳೆ ಇಡಲು ಹೊರಟಿರುವ ಜಮೀನಿನವರ ಪ್ರತಿರೋಧವನ್ನೂ ಎದುರಿಸುತ್ತಿದೆ.
‘ರೈಲ್ವೆ ಅಧಿಕಾರಿಗಳು ತಾವು ನಿರ್ಮಿಸಿರುವ ಅಂಡರ್‌ಪಾಸ್ ಮುಂತಾದವುಗಳ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡಬೇಕು. ನಮ್ಮ ಗ್ರಾಮಕ್ಕೆ ಪ್ರತಿದಿನ ಹಾಲು ಸಾಗಿಸುವ ಟ್ಯಾಂಕರ್ ಬರಲೇ ಬೇಕು. ಈ ಗರ್ಡರ್ ಸರಿಯಾಗಿ ನಿರ್ಮಿಸದ ಕಾರಣ ಮುರಿದು ಬಿದ್ದಿದ್ದು, ನಮಗೆಲ್ಲಾ ತೊಂದರೆಯಾಗಿದೆ. ಈಗೇನೋ ಮಳೆ ಸರಿಯಾಗಿ ಆಗದಿರುವುದರಿಂದ ಪಿಂಡಿಪಾಪನಹಳ್ಳಿಯವರ ಜಮೀನಿನಲ್ಲಿ ಟ್ಯಾಂಕರ್ ಬರುತ್ತಿದೆ. ಅವರು ಈಗ ಬೆಳೆ ಇಡಲು ಹೊರಟಿದ್ದಾರೆ. ಇದಕ್ಕೆ ಪರಿಹಾರವಾಗಿ ರೈಲ್ವೆ ಇಲಾಖೆಯವರು ಶೀಘ್ರವಾಗಿ ಗರ್ಡರ್ ಸರಿಪಡಿಸಿ ನಮಗಾಗಿರುವ ತೊಂದರೆಯನ್ನು ನಿವಾರಿಸಬೇಕು’ ಎಂದು ಕೊತ್ತನೂರು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಗ್ರಾಮವನ್ನು ಪ್ರವೇಶಿಸದ ಹಾಲಿನ ಟ್ಯಾಂಕರ್
ಆನೂರು ಹುಣಸೇನಹಳ್ಳಿ ಗ್ರಾಮದಲ್ಲಿ ಏಳನೇ ಸುತ್ತಿನ ಕಾಲುಬಾಯಿ ಜ್ವರ ಲಸಿಕಾ ಕಾರ್ಯಕ್ರಮ
ಗ್ರಾಮೀಣ ಭಾಗದ ಆರ್ಥಿಕ ಪುನಶ್ಚೇತನಕ್ಕೆ ಕಾರಣವಾದ ಜಾನುವಾರಗಳಿಗೆ ಯಾವುದೇ ತರಹದ ಕಾಯಿಲೆ ಕಂಡುಬಂದಲ್ಲಿ ಕೂಡಲೇ ಪಶುಪಾಲನಾ ಇಲಾಖೆಯ ವೈದ್ಯರಿಗೆ ವರದಿ ಮಾಡಿ ರೋಗ ನಿರೋಧಕ ಲಸಿಕೆ ಹಾಕಿಸುವಂತೆ ಶಾಸಕ ಎಂ.ರಾಜಣ್ಣ ರೈತರಲ್ಲಿ ಮನವಿ ಮಾಡಿದರು.
ತಾಲ್ಲೂಕಿನ ಆನೂರು ಹುಣಸೇನಹಳ್ಳಿ ಗ್ರಾಮದಲ್ಲಿ ಸೋಮವಾರ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಹಾಗೂ ಕೋಲಾರ- ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಏಳನೇ ಸುತ್ತಿನ ಕಾಲುಬಾಯಿ ಜ್ವರ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕಾಲುಬಾಯಿ ಜ್ವರವು ಮತ್ತೊಂದು ರೋಗಗ್ರಸ್ಥ ರಾಸುವಿನ ನೇರ ಸಂಪರ್ಕದಿಂದ ಅಥವ ಗಾಳಿಯಿಂದ ಸಾಂಕ್ರಾಮಿಕವಾಗಿ ಹರಡುತ್ತದೆ. ಈ ರೋಗದ ಲಕ್ಷಣಗಳಾದ ಅತಿಯಾದ ಜ್ವರ, ಬಾಯಿಯಲ್ಲಿ ನೀರ ಗುಳ್ಳೆ ಜೊಲ್ಲು ಸುರಿಸುವುದು, ಕಾಲು ಕುಂಟುವುದು ಸೇರಿದಂತೆ ಇನ್ನಿತರ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ಪಶುವೈದ್ಯರಿಗೆ ಮಾಹಿತಿ ನೀಡಿ ರಾಸುವಿಗೆ ಲಸಿಕೆ ಹಾಕಿಸುವುದರೊಂದಿಗೆ ತಪಾಸಣೆಗೊಳಪಡಿಸಬೇಕು ಎಂದರು.
ಬಯಲುಸೀಮೆ ಪ್ರದೇಶವಾದ ಕೋಲಾರ ಚಿಕ್ಕಬಳ್ಳಾಫುರ ಜಿಲ್ಲೆಗಳಲ್ಲಿ ಸಕಾಲಕ್ಕೆ ಮಳೆಗಳಾಗದೇ ಅಂತರ್ಜಲ ಪಾತಾಳಕ್ಕೆ ಇಳಿದಿದ್ದು ೧೨೦೦ ಅಡಿ ಕೊರೆದರೂ ನೀರು ಸಿಗುತ್ತಿಲ್ಲವಾದರೂ ಇಲ್ಲಿನ ಜನರ ಜೀವನಾಡಿಯಾಗಿರುವ ರೇಷ್ಮೆ ಹಾಗೂ ಹೈನುಗಾರಿಕೆಯಲ್ಲಿ ಈ ಭಾಗದ ಜನ ಖ್ಯಾತಿ ಹೊಂದಿದ್ದಾರೆ. ಈ ಭಾಗದ ಜನರು ಹಾಲು ಉತ್ಪಾದನೆಯಲ್ಲಿಯೇ ಜೀವನ ನಡೆಸುತ್ತಿದ್ದು ಅಂತಹ ಹಾಲು ನೀಡುವ ಮೂಕ ರಾಸುಗಳ ಆರೋಗ್ಯದ ಕಡೆಗೂ ರೈತರು ಹೆಚ್ಚಿನ ಗಮನವಹಿಸಬೇಕು ಎಂದರು.
ಕೋಲಾರ- ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ನಿರ್ದೇಶಕ ಬಂಕ್ ಮುನಿಯಪ್ಪ ಮಾತನಾಡಿ ಕಳೆದ ವರ್ಷ ಕಾಲುಬಾಯಿ ಜ್ವರದಿಂದ ತಾಲ್ಲೂಕಿನ ಸುಮಾರು ೨೭೦ ರಾಸುಗಳು ಮೃತಪಟ್ಟಿದ್ದು ಅತಿ ಚಿಕ್ಕ ಗ್ರಾಮಗಳಲ್ಲೊಂದಾದ ಆನೂರು ಹುಣಸೇನಹಳ್ಳಿ ಗ್ರಾಮದಲ್ಲಿಯೂ ಹಲವು ರಾಸುಗಳು ಮೃತಪಟ್ಟಿದ್ದವು. ಇಂತಹ ಪುಟ್ಟ ಗ್ರಾಮದ ಶೇಕಡಾ ೯೦ ರಷ್ಟು ಜನ ಹಾಲಿನ ಉತ್ಪಾದನೆಯಲ್ಲಿಯೇ ಜೀವನ ನಡೆಸುತ್ತಿದ್ದು ಪ್ರತಿನಿತ್ಯ ೮೫೦ ರಿಂದ ೯೦೦ ಲೀ ಹಾಲಿನ ಉತ್ಪಾದನೆ ಮಾಡುತ್ತಿದೆ. ರಾಸುಗಳಿಗೆ ಯಾವುದಾದರೂ ಕಾಯಿಲೆ ಬಂದು ಮೃತಪಟ್ಟರೆ ಇಲ್ಲಿನ ಜನರ ಜೀವನ ನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತದೆಯಾದ್ದರಿಂದ ರಾಸುಗಳಿಗೆ ಸಕಾಲದಲ್ಲಿ ರೋಗ ನಿಯಂತ್ರಕ ಲಸಿಕೆ ಹಾಕಿಸುವುದರೊಂದಿಗೆ ರೋಗ ಹರಡದಂತೆ ನಿಯಂತ್ರಿಸಲು ರೈತ ಸಮುದಾಯ ತಮ್ಮ ಮನೆಯಲ್ಲಿನ ದನ, ಕರುಗಳಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸುವುದು ಮತ್ತು ಪ್ರತಿಯೊಂದು ರಾಸುವಿಗೂ ವಿಮೆ ಮಾಡಿಸುವಂತೆ ಮನವಿ ಮಾಡಿದರು.
ಕಾಲುಬಾಯಿ ಜ್ವರ ಲಸಿಕಾ ಕಾರ್ಯಕ್ರಮದಡಿ ತಾಲ್ಲೂಕಿನಾಧ್ಯಂತ ೧೫ ದಿನಗಳ ಕಾಲ ರಾಸುಗಳಿಗೆ ಉಚಿತ ಲಸಿಕೆ ನೀಡಲು ೨೦ ವೈದ್ಯರ ತಂಡ ಕರ್ತವ್ಯ ನಿರ್ವಹಿಸುತ್ತಿದ್ದು ತಾಲ್ಲೂಕಿನ ಎಲ್ಲಾ ೫೨ ಸಾವಿರ ರಾಸುಗಳಿಗೂ ಕಾಲುಬಾಯಿ ಜ್ವರ ಲಸಿಕೆ ಹಾಕಲು ರೈತರು ಸಹಕರಿಸಬೇಕು ಎಂದು ಪಶುವೈದ್ಯ ಆಸ್ಪತ್ರೆಯ ಸಹಾಯಕ ನಿರ್ದೇಶಕ ಡಾ.ಮುನಿನಾರಾಯಣರೆಡ್ಡಿ ಹೇಳಿದರು.
ಕೋಚಿಮುಲ್ ಹಾಲು ಒಕ್ಕೂಟದ ಉಪವ್ಯವಸ್ಥಾಪಕ ಡಾ.ಈಶ್ವರಯ್ಯ ಮಾತನಾಡಿ ಕಾಯಿಲೆ ಬರುವ ಮುಂಚೆಯೇ ರಾಸುಗಳಿಗೆ ಲಸಿಕೆ ಹಾಕಿಸಬೇಕೆಂದರು. ಹೀಗೆ ಲಸಿಕೆ ಹಾಕಿಸುವುದರಿಂದ ರಾಸುವೂ ಆರೋಗ್ಯವಾಗಿರುವುದರೊಂದಿಗೆ ಹಾಲಿನ ಗುಣಮಟ್ಟವೂ ಉತ್ತಮವಾಗಿರುತ್ತದೆ. ಶಿಡ್ಲಘಟ್ಟ ತಾಲ್ಲೂಕಿನ ಹಾಲಿನ ಗುಣಮಟ್ಟ ಜಿಲ್ಲೆಯಲ್ಲಿಯೇ ಎರಡನೇ ಸ್ಥಾನದಲ್ಲಿದೆ ಹಾಗಾಗಿ ಹಾಲಿನ ಗುಣಮಟ್ಟ ಇನ್ನಷ್ಟು ಕಾಪಾಡಿಕೊಳ್ಳುವುದರೊಂದಿಗೆ ಜಿಲ್ಲೆಗೆ ಪ್ರಥಮ ಸ್ಥಾನಕ್ಕೆ ಬರಬೇಕು. ಆದ್ದರಿಂದ ತಾಲೂಕಿನ ಎಲ್ಲ ರೈತರು ತಮ್ಮ ತಮ್ಮ ರಾಸುಗಳಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸಿ ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಬಿ.ಕೆ.ಶಿವರಾಂ, ತಾಲ್ಲೂಕು ಪಂಚಾಯಿತಿ ಇಓ ಗಣಪತಿಸಾಕ್ರೆ, ಪಶುವೈದ್ಯ ಆಸ್ಪತ್ರೆಯ ಸಹಾಯಕ ನಿರ್ದೇಶಕ ಡಾ.ಮುನಿನಾರಾಯಣರೆಡ್ಡಿ, ಕೋಚಿಮುಲ್ ಹಾಲು ಒಕ್ಕೂಟದ ಉಪವ್ಯವಸ್ಥಾಪಕ ಡಾ.ಈಶ್ವರಯ್ಯ, ಗೋಪಾಲ್ ರಾವ್ ಮತ್ತಿತರರು ಹಾಜರಿದ್ದರು.
ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಮತ್ತು ಸಹಕಾರ ಬ್ಯಾಂಕ್ ಮುಂದೆ ರೈತರ ಪ್ರತಿಭಟನೆ
ರೈತರು ಸಕಾಲದಲ್ಲಿ ಸಾಲವನ್ನು ಮರುಪಾವತಿಸಿದ್ದರೂ ಪಾವತಿಸಿಲ್ಲವೆಂದು ಹೇಳಿ ಮರುಸಾಲ ನೀಡುತ್ತಿಲ್ಲವೆಂದು ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಮತ್ತು ಸಹಕಾರ ಬ್ಯಾಂಕ್ ಮುಂದೆ ಸೋಮವಾರ ರೈತರು ಪ್ರತಿಭಟಿಸಿದರು.
ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಮತ್ತು ಸಹಕಾರ ಬ್ಯಾಂಕ್ ನಲ್ಲಿ 2012 ರಲ್ಲಿ ಪಡೆದಿದ್ದ ಸಾಲವನ್ನು ರೈತರು ಸಕಾಲದಲ್ಲಿ ಪಾವತಿಸಿದ್ದಾರೆ. ಅದಕ್ಕೆ ದಾಖಲೆಯಾಗಿ ರಸೀದಿಗಳು ಸಹ ಇವೆ. ಬ್ಯಾಂಕಿನಲ್ಲಿ ಸರಿಯಾಗಿ ದಾಖಲಾತಿಗಳನ್ನಿಟ್ಟುಕೊಳ್ಳದೆ, ರೆಮಿಟೆನ್ಸ್ ಮಾಡಿಕೊಳ್ಳದೆ ಹಣ ಕಟ್ಟಿಲ್ಲವೆನ್ನುತ್ತಿದ್ದಾರೆ. ಬ್ಯಾಂಕಿನಲ್ಲಿ ನಡೆದ ಅವ್ಯವಹಾರಕ್ಕೆ ರೈತರನ್ನು ಹೊಣೆ ಮಾಡುತ್ತಿದ್ದಾರೆ. ಸಹಕಾರ ಬ್ಯಾಂಕ್ ನವರ ಬೇಜವಾಬ್ದಾರಿತನದಿಂದ ಸರ್ಕಾರದಿಂದ ಬರಬೇಕಾಗಿದ್ದ 25 ಸಾವಿರ ರೂಗಳ ಸಹಾಯಧನ ರೈತರಿಗೆ ಸಿಗದಂತಾಗಿದೆ. ಸರ್ಕಾರ ಮನ್ನಾ ಮಾಡಿರುವ ಹಣವನ್ನೂ ಕಟ್ಟುವಂತೆ ರೈತರಿಗೆ ಬ್ಯಾಂಕ್‌ನವರು ನೋಟಿಸ್ ನೀಡಿದ್ದಾರೆ. ಬರಗಾಲದ ಈಗಿನ ಪರಿಸ್ಥಿತಿಯಲ್ಲಿ ರೈತರಿಗೆ ಸಾಲ ಕೂಡ ನೀಡದಿರುವುದು ದುರದೃಷ್ಟಕರ. ಸಾಲ ವಾಪಸ್ ಮಾಡಿರುವ ರೈತರಿಗೆ ಕ್ಲಿಯರೆನ್ಸ್ ಸರ್ಟಿಫಿಕೇಟ್ ಕೊಡಬೇಕು. ಸಕಾಲದಲ್ಲಿ ಸಾಲ ಮರುಪಾವತಿಸಿರುವ ರೈತರಿಗೂ ಮರು ಸಾಲ ನೀಡಬೇಕು ಎಂಬ ಬೇಡಿಕೆಯೊಂದಿಗೆ ಪ್ರತಿಭಟಿಸಿರುವುದಾಗಿ ರೈತ ಸಂಘದ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ತಿಳಿಸಿದ್ದಾರೆ.
ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಮತ್ತು ಸಹಕಾರ ಬ್ಯಾಂಕ್ ಅಧ್ಯಕ್ಷ ರಾಮಚಂದ್ರ ಮಾತನಾಡಿ, ‘ಸಹಕಾರ ಬ್ಯಾಂಕ್‌ಗೆ ಕಟ್ಟಿರುವ ಹಣದ ಲೆಕ್ಕವಿದೆ. ಯಾವುದೇ ಅವ್ಯವಹಾರ ನಡೆದಿಲ್ಲ. ಐವತ್ತು ಸಾವಿರ ಹಣ ಸಾಲ ಪಡೆದ ರೈತರು 25 ಸಾವಿರ ರೂಗಳನ್ನು ಕಟ್ಟಿದ್ದಾರೆ. ಕಳೆದ ವರ್ಷ ಸರ್ಕಾರ ಸಾಲ ಮನ್ನಾ ಮಾಡಿದ ಸಂದರ್ಭದಲ್ಲಿ ಅವರು ಹಣ ಕಟ್ಟಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ನಮ್ಮ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಚರ್ಚಿಸಿ ಪರಿಶೀಲಿಸಲಾಗುವುದು. ಬಾಕಿ ಹಣವನ್ನು ಕಟ್ಟಬೇಕೆಂದು ಈಗಾಗಲೇ ರೈತರಿಗೆ ನೋಟಿಸ್ ನೀಡಿದ್ದೇವೆ. ಈಗಿನ ಸರ್ಕಾರ ಬಡ್ಡಿ ರಹಿತ ಸಾಲವನ್ನು ನೀಡುವುದರಿಂದ, ನೀವು ಬಾಕಿ ಹಣವನ್ನು ಕಟ್ಟಿ ಅದರಿಂದ ನಾವು ಜಿಲ್ಲಾ ಸಹಕಾರ ಬ್ಯಾಂಕಿನಿಂದ ಹಣವನ್ನು ತರಲು ಸಾಧ್ಯವೆಂದು ಹೇಳಿದ್ದೇವೆ. ಸಹಕಾರಿ ಬ್ಯಾಂಕ್ ಉಳಿಸಿ ಬೆಳೆಸುವ ಕರ್ತವ್ಯ ರೈತರು ಸೇರಿದಂತೆ ನಮ್ಮೆಲ್ಲರದ್ದೂ ಇದೆ. ರೈತರ ಮನವೊಲಿಸುತ್ತೇವೆ’ ಎಂದು ಹೇಳಿದರು.
ರೈತಸಂಘ ಹಾಗೂ ಹಸಿರುಸೇನೆಯ ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ಮಳಮಾಚನಹಳ್ಳಿ ದೇವರಾಜ್, ಚನ್ನರಾಯಪ್ಪ, ಮುನಿನಂಜಪ್ಪ, ಕೃಷ್ಣಪ್ಪ, ಅಬ್ಲೂಡು ಆರ್.ದೇವರಾಜ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ತಾಲ್ಲೂಕಿನಾದ್ಯಂತ ಶ್ರದ್ಧಾ ಭಕ್ತಿಯಿಂದ ಗಣೇಶನ ಹಬ್ಬ ಆಚರಣೆ
ತಾಲ್ಲೂಕಿನಾದ್ಯಂತ ಗಣೇಶನ ಹಬ್ಬವನ್ನು ವಿಶೇಷ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಮನೆಗಳಲ್ಲಿ ಗಣೇಶ ಮೂರ್ತಿಯನ್ನಿಟ್ಟು ಪೂಜಿಸುವುದಲ್ಲದೆ, ಪ್ರತಿಯೊಂದು ಹಳ್ಳಿಯಲ್ಲಿ, ವಿವಿಧ ಬೀದಿಗಳಲ್ಲಿ, ದೇವಾಲಯಗಳಲ್ಲಿ, ಸಂಘಟನೆಗಳ ಮೂಲಕ, ಸಾರ್ವಜನಿಕವಾಗಿ ಗಣೇಶ ಮೂರ್ತಿಗಳನ್ನಿಟ್ಟು ಪೂಜೆಯನ್ನು ಸಲ್ಲಿಸಲಾಯಿತು. ಕೆಲವೆಡೆ ಪರಿಸರ ಪ್ರೀತಿಯನ್ನು ಮೆರೆದು ಬಣ್ಣಗಳಿಲ್ಲದ ಪರಿಸರ ಗಣಪನನ್ನು ಪ್ರತಿಷ್ಠಾಪಿಸಿದ್ದರೆ, ಕೆಲವರು ಐದು ಅಡಿಗೂ ಎತ್ತರದ ಗಣಪನನ್ನು ಪ್ರತಿಷ್ಠಾಪಿಸಿದ್ದರು. ನಂದಿವಾಹನ ಗಣಪತಿ, ಕೊಳಲು ಊದುವ ಗಣಪತಿ, ಕೈಲಾಸದಲ್ಲಿರುವ ಗಣಪತಿ ಹೀಗೆ ನಾನಾ ರೀತಿಯ ಗಣಪನ ಮೂರ್ತಿಗಳನ್ನು ವಿಶೇಷವಾಗಿ ಮಾಡಿಸಿಕೊಂಡಿದ್ದರು.
ತಾಲ್ಲೂಕಿನ ಅಪ್ಪೇಗೌಡನಹಳ್ಳಿಯಲ್ಲಿ ಪರಿಸರ ಪ್ರೀತಿಯನ್ನು ಮೆರೆದಿರುವ ಗ್ರಾಮಸ್ಥರು ರಾಸಾಯನಿಕ ಬಣ್ಣಗಳನ್ನು ಬಳಸದಿರುವ ಮಣ್ಣಿನ ಗಣಪನನ್ನು ಪೂಜಿಸಿದ್ದರೆ, ವೀರಾಪುರ ಗ್ರಾಮದ ವರಸಿದ್ಧಿ ಗಣೇಶನಿಗೆ ಬೆಣ್ಣೆಯ ಅಲಂಕಾರ ಮತ್ತು ಕರ್ಜೀಕಾಯಿ ಹಾರವನ್ನು ಹಾಕಿ ಪೂಜಿಸಲಾಯಿತು. ಕೆ.ಮುತ್ತುಗದಹಳ್ಳಿಯಲ್ಲಿ ಆರು ಅಡಿ ಎತ್ತರದ ಗಣೇಶನನ್ನು, ಪಟ್ಟಣದ ದೊಂತಿ ಛತ್ರದಲ್ಲಿ ಕೊಳಲೂದುವ ಗಣೇಶ, ನಗರೇಶ್ವರ ಕಲ್ಯಾಣ ಮಂಟಪದಲ್ಲಿ ಸಿಂಹಾಸನಾರೂಢ ಗಣೇಶ, ಗೌಡರಬೀದಿಯ ಕೈಲಾಸ ಗಣಪತಿ, ಮಳ್ಳೂರು ಸಾಯಿಬಾಬಾ ದೇವಾಲಯದ ಅಲಂಕೃತ ಗಣಪತಿ, ದೇಶದಪೇಟೆಯ ಗೌರಿಗಣಪತಿ, ಕೆಕೆ ಪೇಟೆಯ ಶೇಷಶಯನ ಗಣಪತಿ, ಉಲ್ಲೂರುಪೇಟೆ ವೀರಾಂಜನೇಯಸ್ವಾಮಿ ದೇವಾಲಯದ ದೊಡ್ಡಗಣಪ, ದೇಶದಪೇಟೆಯ ಆಂಜನೇಯಸ್ವರೂಪಿಯಾಗಿ ರಾಮ ಲಕ್ಷ್ಮಣರನ್ನು ಹೊತ್ತ ಗಣಪ, ಅಗ್ರಹಾರಬೀದಿಯ ಪೇಟ ಕಟ್ಟಿರುವ ಗಣೇಶ ಹೀಗೆ ನಾನಾ ಗಣಪತಿಗಳು ತಾಲ್ಲೂಕಿನಾದ್ಯಂತ ಅವತರಿಸಿದ್ದಾರೆ.
ಎಲ್ಲೆಡೆ ವಿಶೇಷ ಪೂಜೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ವಿದ್ಯುತ್ ದೀಪಗಳ ಅಲಂಕಾರಗಳು, ಪ್ರಸಾದ ವಿತರಣೆಗಳು ನಡೆಯುತ್ತಿವೆ. ಬಹಳಷ್ಟು ಕಡೆ ಯುವಕರು, ಮಕ್ಕಳು ಹಣ ಸಂಗ್ರಹಿಸಿ ಕೂಡಿಟ್ಟು ತಂದು ಸ್ಥಾಪಿಸಿರುವ ಗಣೇಶನೊಂದಿಗೆ ತಮ್ಮ ಪ್ರತಿಭೆಯನ್ನೂ ಅನಾವರಣಗೊಳಿಸುತ್ತಿದ್ದಾರೆ.
ದಿಬ್ಬೂರಹಳ್ಳಿ ಜನಸ್ಪಂದನಾ ಕಾರ್ಯಕ್ರಮದಲ್ಲಿ ಆದೇಶಪತ್ರಗಳ ವಿತರಣೆ
ಸರ್ಕಾರದಿಂದ ಬರುವಂತಹ ಯಾವುದೇ ಯೋಜನೆಗಳನ್ನು ಪಡೆಯಲು ಸಾರ್ವಜನಿಕರು ಮಧ್ಯವರ್ತಿಗಳ ಮೊರೆಹೋಗಬಾರದು ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ತಾಲ್ಲೂಕಿನ ದಿಬ್ಬೂರಹಳ್ಳಿ ಗ್ರಾಮದಲ್ಲಿ ಶನಿವಾರ ತಾಲ್ಲೂಕು ಆಡಳಿತ ವತಿಯಿಂದ ಆಯೋಜನೆ ಮಾಡಲಾಗಿದ್ದ ಜನಸ್ಪಂದನಾ ಕಾರ್ಯಕ್ರಮದಲ್ಲಿ ಸಂಧ್ಯಾಸುರಕ್ಷಾ, ವಿಧವಾ ವೇತನ, ವೃದ್ಧಾಪ್ಯವೇತನ, ಮನಸ್ವಿನಿ, ಅಂಗವಿಕಲರ ವೇತನ ಸೇರಿದಂತೆ 250 ಆದೇಶಪತ್ರಗಳನ್ನು ವಿತರಿಸಿ ಅವರು ಮಾತನಾಡಿದರು.
ಜನಸ್ಪಂದನಾ ಕಾರ್ಯಕ್ರಮಗಳ ಮುಖಾಂತರ ಎಲ್ಲಾ ಸೌಲಭ್ಯಗಳು ಫಲಾನುಭವಿಗಳಿಗೆ ಲಭಿಸಬೇಕು. ಪ್ರತಿಯೊಂದು ಇಲಾಖೆಯಿಂದ ಸಿಗುವಂತಹ ಸೌಲಭ್ಯಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ನೀಡುವಂತಹ ಮಾಹಿತಿಯನ್ನು ಸಂಗ್ರಹಿಸಿಕೊಂಡು ಸರ್ಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಹೇಳಿದರು.
ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ ಮಾತನಾಡಿ, ಸೆಪ್ಟೆಂಬರ್ ಒಂದರಿಂದ ಖಾತಾ ಮತ್ತು ಪೋಡಿ ಆಂದೋಲನ ತಾಲ್ಲೂಕು ಕಚೇರಿಯಲ್ಲಿ ಏರ್ಪಡಿಸಲಿದ್ದು, ಎಲ್ಲಾ ನಾಗರಿಕರು ಕಾರ್ಯಕ್ರಮವನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ಪಶು ವೈಧ್ಯಕೀಯ ಇಲಾಖೆಯ ಸಹಾಯಕ ನಿರ್ದೆಶಕ ಮುನಿನಾರಾಯಣರೆಡ್ಡಿ ಮಾತನಾಡಿ, ರೈತರು ಇಲಾಖೆಯ ಮುಖಾಂತರ ಲಭ್ಯವಿರುವ ಜಂತು ನಾಶಕಗಳನ್ನು ಮೂರು ತಿಂಗಳಿಗೊಮ್ಮೆ ಹಾಕಿಸಬೇಕು. ಕಾಲುಬಾಯಿಜ್ವರದ ಲಸಿಕೆಯು ಲಭ್ಯವಿದೆ ಎಂದು ಇಲಾಖೆಯಿಂದ ಲಭ್ಯವಿರುವ ಯೋಜನೆಗಳ ವಿವರವನ್ನು ನೀಡಿದರು. ರೇಷ್ಮೆ ವಿಸ್ತರಣಾಧಿಕಾರಿ ನಾರಾಯಣಸ್ವಾಮಿ, ಕೃಷಿ ಸಹಾಯಕ ನಿರ್ದೇಶಕ ರಾಘವೇಂದ್ರ ಹಾಗೂ ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ಕೀರ್ತಿ ತಮ್ಮ ಇಲಾಖೆಗಳಿಂದ ನೀಡಲಾಗುವ ಸವಲತ್ತುಗಳ ಬಗ್ಗೆ ಹೇಳಿದರು.
ದಿಬ್ಬೂರಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಧನಂಜಯರೆಡ್ಡಿ, ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ಶಿವಾರೆಡ್ಡಿ, ಮಾಜಿ ನಿರ್ದೇಶಕ ರಾಮಲಿಂಗಾರೆಡ್ಡಿ, ಶಿವಣ್ಣ, ಗ್ರಾಮ ಪಂಚಾಯತಿ ಸದಸ್ಯರಾದ ಮಂಜುನಾಥ್, ಗೊರ್ಲಪ್ಪ, ವಿಜಯಕುಮಾರ್, ವೇಣುಗೋಪಾಲ್, ಸರ್ಕಲ್ ಇನ್ಸ್‌ಪೆಕ್ಟರ್ ಶ್ರೀನಿವಾಸಮೂರ್ತಿ, ಉಪತಹಶೀಲ್ದಾರ್ ಲಕ್ಷ್ಮೀನಾರಾಯಣ, ರಾಜಸ್ವ ನಿರೀಕ್ಷಕ ಮುನಿನಾರಾಯಣಪ್ಪ, ರಾಮಚಂದ್ರ ಮುಂತಾದವರು ಹಾಜರಿದ್ದರು.
ಹಾಳು ಬಾವಿಯಲ್ಲಿ ಬಿದ್ದಿದ್ದ ಕಾಡುಮೊಲದ ರಕ್ಷಣೆ
ತಾಲ್ಲೂಕಿನ ಕೊತ್ತನೂರು ಗ್ರಾಮದಲ್ಲಿ ಚನ್ನರಾಯಪ್ಪ ಅವರ ತೋಟದಲ್ಲಿರುವ ಹಾಳು ಬಾವಿಯಲ್ಲಿ ಬಿದ್ದಿದ್ದ ಕಾಡುಮೊಲವನ್ನು ಸ್ನೇಕ್ ನಾಗರಾಜ್ ಶನಿವಾರ ರಕ್ಷಿಸಿದ್ದಾರೆ.
ನಾಯಿಗಳು ಅಟ್ಟಿಸಿಕೊಂಡು ಬಂದಾಗ ಕತ್ತಲ್ಲಿ ದಿಕ್ಕುತಪ್ಪಿ ಕಾಡುಮೊಲ ಸುಮಾರು 40 ರಿಂದ 50 ಅಡಿ ಆಳವಿರುವ ಹಾಳುಬಾವಿಯಲ್ಲಿ ಶುಕ್ರವಾರ ರಾತ್ರಿ ಬಿದ್ದಿದೆ. ನಾಯಿಗಳು ಬಾವಿಯ ಬಳಿ ಬೊಗಳುವುದನ್ನು ಕಂಡು ಅದೇ ಗ್ರಾಮದ ಕೇಶವ ಹೋಗಿ ನೋಡಿದ್ದಾರೆ. ಕತ್ತಲಲ್ಲಿ ಯಾವ ಪ್ರಾಣಿ ಎಂದು ತಿಳಿಯದೆ ಸ್ನೇಕ್ ನಾಗರಾಜ್ ಅವರಿಗೆ ತಿಳಿಸಿದ್ದಾರೆ.
ಬೆಳಿಗ್ಗೆ ಬಂದು ನೋಡಿದ ನಾಗರಾಜ್ ಬಾವಿಯಲ್ಲಿ ಬಿದ್ದಿರುವ ಕಾಡುಮೊಲವನ್ನು ಕಂಡು, ಹಗ್ಗ ಮತ್ತು ಚೀಲದೊಂದಿಗೆ ಬಾವಿಯಲ್ಲಿ ಇಳಿದು ಚಾಕಚಕ್ಯತೆಯಿಂದ ಮೊಲವನ್ನು ಚೀಲದಲ್ಲಿ ಹಾಕಿಕೊಂಡು ಮೇಲೆ ತಂದು ರಕ್ಷಿಸಿದ್ದಾರೆ.
‘ಕಾಡುಮೊಲ ಬಲು ಚುರುಕು ಪ್ರಾಣಿ. ಹಾಳು ಬಾವಿಯಲ್ಲಿ ಬಿದ್ದಿರುವ ಅದು ಆಹಾರವಿಲ್ಲದೆ ಸಾಯುತ್ತಿತ್ತು. ಅಥವಾ ಯಾರಾದರೂ ಕೊಂದು ತಿನ್ನುತ್ತಿದ್ದರು. ಅದಕ್ಕಾಗಿ ಬಾವಿಯಲ್ಲಿ ಇಳಿದು ಕಾಡುಮೊಲವನ್ನು ರಕ್ಷಿಸಿದೆ. ಅದರ ಕಿವಿಯಲ್ಲಿ ಪಿಡುಗ ಎಂದು ಕರೆಯುವ ರಕ್ತ ಹೀರುವ ಹುಳುಗಳು ಅದರ ರಕ್ತ ಹೀರುತ್ತಿದ್ದವು. ಆ ಹುಳುಗಳನ್ನು ಕಿತ್ತು ಬಿಸಾಡಿ ಅದನ್ನು ಸ್ವತಂತ್ರವಾಗಿ ಹೋಗಲು ಬಿಟ್ಟೆ’ ಎಂದು ಮೊಲವನ್ನು ರಕ್ಷಿಸಿದ ಸ್ನೇಕ್ ನಾಗರಾಜ್ ತಿಳಿಸಿದರು.
ಮಲ್ಲೇನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎಚ್.ಎನ್.ಪ್ರಕಾಶ್ ಆಯ್ಕೆ
ಶಿಡ್ಲಘಟ್ಟ ತಾಲ್ಲೂಕಿನ ಮಲ್ಲೇನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎಚ್.ಎನ್.ಪ್ರಕಾಶ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಮುಖಂಡರಾದ ಮೇಲೂರು ರವಿಕುಮಾರ್, ಎನ್.ಸಿ.ಶ್ರೀನಿವಾಸಗೌಡ, ತಾದೂರು ರಮೇಶ್, ಹೊಸಹಳ್ಳಿ ಮಂಜುನಾಥ್, ಚಂದ್ರೇಗೌಡ, ಕೃಷ್ಣಪ್ಪ ಹಾಜರಿದ್ದರು.
ಗ್ರಾಮ ಪಂಚಾಯತಿ ಗ್ರಂಥಪಾಲಕರು ತೆಗೆದುಕೊಂಡು ಹೋಗದೆ ಗೆದ್ದಲು ಪಾಲಾಗುತ್ತಿರುವ ಪುಸ್ತಕಗಳು
ಲಕ್ಷಾಂತರ ರೂಪಾಯಿಗಳ ಬೆಲೆ ಬಾಳುವ ಸಾವಿರಾರು ಪುಸ್ತಕಗಳು ಪಟ್ಟಣದ ಸಾರ್ವಜನಿಕ ಗ್ರಂಥಾಲಯದಲ್ಲಿ ಗೆದ್ದಲು ಹಿಡಿಯುತ್ತಿವೆ.
ತಾಲ್ಲೂಕಿನಾದ್ಯಂತ ಗ್ರಾಮ ಪಂಚಾಯತಿಗಳ ಗ್ರಂಥಾಲಯಗಳಿಗೆ ವಿತರಿಸಲೆಂದು ಸುಮಾರು 45 ಸಾವಿರ ಪುಸ್ತಕಗಳು ಪಟ್ಟಣದ ಸಾರ್ವಜನಿಕ ಗ್ರಂಥಾಲಯಕ್ಕೆ ಬಂದು ಹತ್ತು ತಿಂಗಳುಗಳಾದರೂ ಸಂಬಂಧಪಟ್ಟ ಗ್ರಾಮ ಪಂಚಾಯತಿ ಗ್ರಂಥಪಾಲಕರು ತೆಗೆದುಕೊಂಡು ಹೋಗದ ಕಾರಣ ಪುಸ್ತಕಗಳು ಗೆದ್ದಲುಹುಳುಗಳ ಪಾಲಾಗುತ್ತಿವೆ. ಗ್ರಂಥಾಲಯದ ಮೂಲೆಯಲ್ಲಿ ರಾಶಿರಾಶಿಯಾಗಿ ಸುರಿಯಲಾಗಿರುವ ಪುಸ್ತಕಗಳು, ಸೂಕ್ತ ನಿರ್ವಹಣೆಯಿಲ್ಲದೆ ಕೊಳೆಯುತ್ತಿವೆ.
‘ನಾನು ಬಂದು ಕೇವಲ ಐದು ತಿಂಗಳಾಗಿವೆ. ಅದಕ್ಕೂ ಐದು ತಿಂಗಳ ಮೊದಲೇ ಪುಸ್ತಕಗಳು ಬಂದಿವೆ. ಈಗಾಗಲೇ ಎಲ್ಲಾ ಗ್ರಾಮ ಪಂಚಾಯತಿ ಗ್ರಂಥಪಾಲಕರಿಗೆ ಪುಸ್ತಕ ತೆಗೆದುಕೊಂಡು ಹೋಗಬೇಕೆಂದು ತಿಳಿಸಿದ್ದರೂ ಯಾರೂ ಬಂದಿಲ್ಲ. ಕೇವಲ ಮಳಮಾಚನಹಳ್ಳಿ, ಪಲಿಚೇರ್ಲು ಮತ್ತು ವೈ.ಹುಣಸೇನಹಳ್ಳಿ ಗ್ರಾಮ ಪಂಚಾಯತಿ ಗ್ರಂಥಪಾಲಕರು ಮಾತ್ರ ಪುಸ್ತಕಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಇಲ್ಲಿ ಸ್ಥಳಾವಕಾಶವಿಲ್ಲ. ಜಿಲ್ಲಾ ಗ್ರಂಥಾಲಯ ಅಧಿಕಾರಿಗಳು ಮತ್ತು ಪುಸ್ತಕ ವಿತರಣಾ ವಿಭಾಗದ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕಿದೆ’ ಎನ್ನುತ್ತಾರೆ ಪಟ್ಟಣದ ಸಾರ್ವಜನಿಕ ಗ್ರಂಥಾಲಯದ ಮೇಲ್ವಿಚಾರಕಿ ಶಶಿಕಲಾ.
‘ಪಟ್ಟಣದ ಸಾರ್ವಜನಿಕ ಗ್ರಂಥಾಲಯ ಸೂಕ್ತ ನಿರ್ವಹಣೆಯಿಲ್ಲದೆ ಜನರನ್ನು ತಲುಪಬೇಕಾದ ಪುಸ್ತಕಗಳು ಗೆದ್ದಲ ಪಾಲಾಗುತ್ತಿವೆ. ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಸರ್ಕಾರದಿಂದ ಲಕ್ಷಾಂತರ ರೂಪಾಯಿಗಳ ಬೆಲೆಬಾಳುವ ಪುಸ್ತಕಗಳು ನೀಡುತ್ತಿದ್ದರೂ ಸಹ, ಗ್ರಾಮ ಪಂಚಾಯತಿಯ ಗ್ರಂಥಪಾಲಕರ ಬೇಜವಾಬ್ದಾರಿತನದಿಂದ ಇದನ್ನು ಸದುಪಯೋಗ ಪಡಿಸಿಕೊಳ್ಳದೆ ಪುಸ್ತಕಗಳು ಹಾಳಾಗುತ್ತಿವೆ. ಇದು ಪಂಚಾಯತಿಗಳ ಗ್ರಂಥಾಲಯಗಳ ಕಾರ್ಯ ವೈಖರಿಯನ್ನು ತೋರಿಸಿಕೊಡುತ್ತದೆ’ ಎಂದು ಡಿ.ವೈ.ಎಫ್.ಐ ರಾಜ್ಯ ಸಮಿತಿ ಸದಸ್ಯ ಕುಂದಲಗುರ್ಕಿ ಮುನೀಂದ್ರ ದೂರಿದರು.
ಮೂರು ರೈತಕೂಟಗಳ ಉದ್ಘಾಟನೆ
ಕುಟುಂಬದ ಪ್ರತಿಯೊಬ್ಬ ಸದಸ್ಯರೂ ಉಳಿತಾಯ ಖಾತೆಗಳನ್ನು ಹೊಂದಿರಬೇಕು. ಇದರಿಂದ ಸರ್ಕಾರದ ವಿವಿಧ ಸೌಲಭ್ಯಗಳು ಸಿಗುತ್ತವೆ ಎಂದು ಕೆನರಾಬ್ಯಾಂಕ್ ಉಪಮಹಾಪ್ರಬಂಧಕ ಎಂ.ಎಂ.ಚಿನಿವಾರ್ ತಿಳಿಸಿದರು.
ಪಟ್ಟಣದ ಚಿಂತಾಮಣಿ ರಸ್ತೆಯಲ್ಲಿರುವ ಕೆಂಪೇಗೌಡ ಸಭಾಂಗಣದಲ್ಲಿ ಬುಧವಾರ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಹಾಗೂ ಕೆನರಾ ಬ್ಯಾಂಕ್ ಸಂಯುಕ್ತಾಶ್ರಯದಲ್ಲಿ ರೈತಕೂಟಗಳ ಪ್ರಾರಂಭೋತ್ಸವ ಹಾಗೂ ರೈತರಿಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪಡೆದ ಸಾಲವನ್ನು ಸಕಾಲದಲ್ಲಿ ಮರುಪಾವತಿಸಿ ಬ್ಯಾಂಕ್‌ನಿಂದ ಸಿಗುವ ಸೌಲಭ್ಯಗಳ ಸದುಪಯೋಗಪಡಿಸಿಕೊಳ್ಳಬೇಕೆಂದು ಹೇಳಿದರು.
ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಮಹಾಪ್ರಬಂಧಕರಾದ ಜಿ.ಆರ್.ಚಿಂತಲಾ ಮಾತನಾಡಿ ಮಹಿಳಾ ರೈತಕೂಟಗಳಿಗೆ ಸುಮಾರು 50 ರಿಂದ 60 ಸಾವಿರ ರೂಗಳ ಆಹಾರವನ್ನು ಸಂಸ್ಕರಿಸುವ ಉಪಕರಣವನ್ನು ಉಚಿತವಾಗಿ ನೀಡಲಾಗುತ್ತದೆ. ಹೆಚ್ಚಿನ ತಿಳುವಳಿಕೆಗಾಗಿ ಹೊರರಾಜ್ಯಗಳಿಗೆ ಭೇಟಿ ನೀಡಲೂ ಸಹ ಪ್ರತಿ ರೈತಕೂಟಕ್ಕೆ 60 ಸಾವಿರ ರೂಗಳನ್ನು ನೀಡಲಾಗುವುದೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಇಬ್ಬರು ಅಂಗವಿಕಲರಿಗೆ ವೀಲ್ ಚೇರುಗಳನ್ನು, ಆರು ಮಂದಿ ಅಂಧರಿಗೆ ಊರುಗೋಲುಗಳನ್ನು, ಹಿರಿಯ ನಾಗರಿಕರಾದ ವಾಸುದೇವರಾವ್, ಸೊಣ್ಣೇನಹಳ್ಳಿ ರಾಮಚಂದ್ರಾಚಾರ್, ಬೆಳ್ಳೂಟಿ ಮಾರೇಗೌಡ, ಮಳ್ಳೂರು ರಾಮರೆಡ್ಡಿ ಮತ್ತಿತರರಿಗೆ ಗೌರವಿಸಲಾಯಿತು. ವೇಳೆಗೆ ಸರಿಯಾಗಿ ಸಾಲ ತೀರಿಸಿರುವವರಿಗೆ ಉತ್ತೇಜನ ನೀಡಲು ಬಹುಮಾನಗಳನ್ನು ವಿತರಿಸಲಾಯಿತು. ಸ್ವಸಹಾಯ ಗುಂಪುಗಳಿಗೆ 60 ಲಕ್ಷ ರೂಗಳು ಸಾಲ ವಿತರಿಸಲಾಯಿತು. ಬೋದಗೂರು ಸಿರಿ ಸಮೃದ್ಧಿ ರೈತಕೂಟ, ಆನೂರು ವಿವೇಕಾನಂದ ರೈತ ಕೂಟ, ಗಂಗನಹಳ್ಳಿ ಆಂಜನೇಯಸ್ವಾಮಿ ರೈತಕೂಟವನ್ನು ಉದ್ಘಾಟಿಸಲಾಯಿತು.
ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಅಪರ ನಿರ್ದೇಶಕ ಡಾ.ಬಿ.ಮುನಿವೆಂಕಟಪ್ಪ ಕುರಿ ಮತ್ತು ಮೇಕೆ ಸಾಕಾಣಿಕೆ ಬಗ್ಗೆ ವೈಜ್ಞಾನಿಕ ತಿಳುವಳಿಕೆ ನೀಡಿದರು.
ನಬಾರ್ಡ್ ಉಪಮಹಾಪ್ರಬಂಧಕ ಟಿ.ರಮೇಶ್, ಜಿಲ್ಲಾ ಅಭಿವೃದ್ಧಿ ಪ್ರಬಂಧಕ ಸುಪರ್ಣಾ ಟಂಡನ್, ರೇಷ್ಮೆ ಇಲಾಖೆ ಉಪನಿರ್ದೇಶಕ ಬಿ.ಆರ್.ನಾಗಭೂಷಣ್, ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ, ಸಹಾಯಕ ನಿರ್ದೇಶಕರಾದ ರಾಘವೇಂದ್ರ, ಚಂದ್ರಪ್ಪ, ಆನಂದ್, ರೈತಕೂಟಗಳ ಒಕ್ಕೂಟದ ಅಧ್ಯಕ್ಷ ಎಚ್.ಜಿ.ಗೋಪಾಲಗೌಡ, ಶಿವಕುಮಾರಗೌಡ, ಕೆನರಾಬ್ಯಾಂಕ್ ವ್ಯವಸ್ಥಾಪಕ ಗಿರೀಶ್ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಜಂಗಮಕೋಟೆಯ ಸರ್ಕಾರಿ ಶಾಲೆಯಲ್ಲಿ ಪ್ರತಿಭಾ ಕಾರಂಜಿ ಕಾರ್ಯಕ್ರಮ
ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆಯ ಸರ್ಕಾರಿ ಶಾಲೆಯಲ್ಲಿ ಬುಧವಾರ ನಡೆಸಲಾದ ಜಂಗಮಕೋಟೆ ಸಿ.ಆರ್.ಸಿ. ಮಟ್ಟದ ಹಿರಿಯ ಮತ್ತು ಕಿರಿಯ ಪ್ರಾಥಮಿಕ ಶಾಲೆಗಳ ಪ್ರತಿಭಾ ಕಾರಂಜಿಯಲ್ಲಿ ಮಕ್ಕಳು ನೃತ್ಯ ಪ್ರದರ್ಶಿಸಿದರು.

