ಚಾಕೋಲೇಟ್‌ನೊಂದಿಗೆ ಬಂದ ರಿಂಗನ್ನು ಎರಡೂವರೆ ವರ್ಷದ ಬಾಲಕನೊಬ್ಬ ನುಂಗಿದ್ದು, ಆ ರಿಂಗ್ ಶ್ವಾಸಕೋಶದಲ್ಲಿ ಸಿಕ್ಕಿಹಾಕಿಂಡಿರುವ ಘಟನೆ ಗುರುವಾರ ಪಟ್ಟಣದಲ್ಲಿ ನಡೆದಿದೆ.
ಪಟ್ಟಣದ ಗಾರ್ಡನ್ ರಸ್ತೆಯ ದರ್ಗಾ ಮೊಹಲ್ಲಾದ ವಾಸಿ ಜಬೀವುಲ್ಲಾ ಅವರ ಮಗ ಶಹಬಾಸ್ ರಿಂಗನ್ನು ನುಂಗಿರುವ ದರ್ದೈವಿ. ‘ಪೇಟುರಾಮ್’ ಎಂಬ ಹೆಸರಿನ 2 ರೂಪಾಯಿಗಳ ಚಾಕೋಲೇಟ್‌ನಲ್ಲಿ ಮಕ್ಕಳ ಆಕರ್ಷಣೆಗಾಗಿ ಚಾಕೋಲೇಟ್‌ನೊಂದಿಗೆ ರಿಂಗು, ದಾರ, ಗೊಂಬೆ ಉಚಿತವಾಗಿ ನೀಡಲಾಗುತ್ತಿದ್ದು ಎಳೆ ಮಕ್ಕಳು ಅರಿಯದೇ ನುಂಗಿ ಅನಾಹುತ ಮಾಡಿಕೊಳ್ಳುವಂತಾಗಿದೆ. ಸಾರ್ವಜನಿಕ ಆಸ್ಪತ್ರೆಯಲ್ಲಿ ಎಕ್ಸ್‌ರೇ ತೆಗೆದ ವೈದ್ಯರು ರಿಂಗನ್ನು ಶಸ್ತ್ರಚಿಕಿತ್ಸೆಯ ಮೂಲಕ ಹೊರತೆಗೆಯಬೇಕೆಂದು ತಿಳಿಸಿದ್ದಾರೆ. ಮಗುವಿನ ಪೋಷಕರು ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದು, ತಮಗೆ ಸಹಾಯ ಮಾಡುವಂತೆ ಹಾಗೂ ಈ ರೀತಿಯ ಅನಾಹುತ ಬೇರೆ ಮಕ್ಕಳಿಗಾಗದಂತೆ ಈ ಚಾಕೋಲೇಟ್ ನಿಷೇಧಿಸಬೇಕು. ಈ ರೀತಿಯಾದ ಚಾಕಲೇಟ್‌ಗಳನ್ನು ತಯಾರಿಸುವ ಕಂಪನಿಯ ಮೇಲೆ ಸೂಕ್ತ ಕ್ರಮ ಜರುಗಿಸಿ ಮುಚ್ಚಿಸಬೇಕು, ಯಾವ ಅಂಗಡಿಗಳಲ್ಲಿ ಮಾರಾಟವಾಗದಂತೆ ಕ್ರಮ ಜರುಗಿಸಬೇಕು ಎಂದು ಮನವಿ ಮಾಡಿದ್ದಾರೆ.
ಮನವಿ ಸ್ವೀಕರಿಸಿದ ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ ಮಾತನಾಡಿ, ಈ ರೀತಿಯ ಚಾಕೋಲೇಟ್ ತಯಾರಿಕಾ ಕಂಪೆನಿ ಹಾಗೂ ಮಾರಾಟಗಾರರ ವಿರುದ್ಧ ಮೇಲಧಿಕಾರಿಗಳಿಗೆ ತಿಳಿಸಿ ಕ್ರಮ ಜರುಗಿಸುವುದಾಗಿ ತಿಳಿಸಿದರು.
‘ಪೇಟುರಾಮ್’ ನ ರಿಂಗ್ ನಿಂದ ಬಾಲಕನಿಗೆ ಅನಾಹುತ
ತಾಲ್ಲೂಕಿನ ವಲ್ಲಪ್ಪನಹಳ್ಳಿ ಗ್ರಾಮದಲ್ಲಿ ರೈತ ಪಾಠಶಾಲೆ ಪ್ರಾರಂಭ
ತಾಲ್ಲೂಕಿನ ವಲ್ಲಪ್ಪನಹಳ್ಳಿ ಗ್ರಾಮದಲ್ಲಿ ಮಂಗಳವಾರ ರೈತಪಾಠಶಾಲೆಯ ಮೂಲಕ ಬಿತ್ತನೆ ಪ್ರಾರಂಭದಿಂದ ವಿವಿಧ ರೈತಾಪಿ ಚಟುವಟಿಕೆಗಳ ಬಗ್ಗೆ ಹಾಗೂ ರೈತರು ಅನುಸರಿಸಬೇಕಾದ ವಿಧಾನಗಳ ವೈಜ್ಞಾನಿಕ ಮಾಹಿತಿಯನ್ನು ರೈತರಿಗೆ ತಿಳಿಸಿಕೊಡಲಾಯಿತು.
ಜಂಗಮಕೋಟೆ ರೈತ ಸಂಪರ್ಕ ಕೇಂದ್ರದ ಕುಂಬಿಗಾನಹಳ್ಳಿ ಗುಚ್ಛ ಗ್ರಾಮವಾದ ವಲ್ಲಪ್ಪನಹಳ್ಳಿಯ ನಾಗರಾಜ್ ಅವರ ತೋಟದಲ್ಲಿ ಭೂಚೇತನ ಯೋಜನೆಯಡಿಯಲ್ಲಿ ರೈತ ಪಾಠಶಾಲೆಯನ್ನು ಪ್ರಾರಂಭಿಸಲಾಯಿತು.
’ಬೆಳೆ ಪದ್ಧತಿ, ಮಣ್ಣು ಆರೋಗ್ಯ ಪರೀಕ್ಷೆ, ಪೋಶಕಾಂಶಗಳ ಅವಶ್ಯಕತೆ ಮತ್ತು ಬಳಕೆ, ಮಣ್ಣು ಮತ್ತು ನೀರು ಸಂರಕ್ಷಣೆ, ಬೀಜ ಆರೋಗ್ಯ, ಬೀಜೋಪಚಾರ, ಜೈವಿಕ ಗೊಬ್ಬರ ಬಳಕೆ, ಕೃಷಿ ಬೆಳೆ ವೀಕ್ಷಣೆ, ಸಂಸ್ಕರಣೆ, ಸಮಗ್ರ ಪೋಷಕಾಂಶಗಳ ನಿರ್ವಹಣೆ, ಸಮಗ್ರ ಕೀಟ ನಿರ್ವಹಣೆ, ಸಮಗ್ರ ಪೀಡೆ ನಿರ್ವಹಣೆ, ಮಾರುಕಟ್ಟೆ ಸಂಪರ್ಕ, ಕೊಯ್ಲು ಹಾಗೂ ನಂತರದ ತಾಂತ್ರಿಕತೆ ಹೀಗೆ ನಾನಾ ವಿಷಯಗಳನ್ನಾಗಿ ವಿಂಗಡಿಸಿ ಪ್ರತಿ ವಾರ ರೈತರಿಗೆ ಮಾಹಿತಿ ನೀಡುವುದರೊಂದಿಗೆ ಅವರನ್ನು ಆರ್ಥಿಕ ಸಧೃಡತೆಯತ್ತ ಕರೆದೊಯ್ಯುವುದು ಇದರ ಉದ್ದೇಶ’ ಎಂದು ಅನುವುಗಾರ ಬೂದಾಳ ರಾಮಾಂಜಿನಪ್ಪ ತಿಳಿಸಿದರು.
ಸುಮಾರು 25 ಮಂದಿ ರೈತರು ಭಾಗವಹಿಸಿದ್ದ ರೈತಪಾಠಶಾಲೆಯಲ್ಲಿ ಆತ್ಮಾ ಯೋಜನೆಯ ತಾಂತ್ರಿಕ ಅಧಿಕಾರಿ ಶಿಲ್ಪಾ, ಅನುವುಗಾರರಾದ ವಲ್ಲಪ್ಪನಹಳ್ಳಿ ಚನ್ನರಾಯಪ್ಪ, ಆನೂರು ರಾಮಾಂಜಿನಪ್ಪ ರೈತರಿಗೆ ವಿವಿಧ ಅವಶ್ಯಕ ವಿವರಗಳನ್ನು ಪ್ರಾತ್ಯಕ್ಷಿಕೆಯ ಮೂಲಕ ವಿವರಿಸಿದರು.
ಬಡ ಜನರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿದ ಮಹಾನ್ ನಾಯಕ ದಿವಂಗತ ಡಿ. ದೇವರಾಜ ಅರಸು – ಶಾಸಕ ಎಂ.ರಾಜಣ್ಣ
ಹಿಂದುಳಿದ ವರ್ಗದ ಜನರಿಗಾಗಿ ಭೂಸುಧಾರಣಾ ಕಾಯಿದೆ, ಜೀತದಾಳು ಪದ್ದತಿ ನಿರ್ಮೂಲನೆ, ಉದ್ಯೋಗಕ್ಕಾಗಿ ಮೀಸಲಾತಿ ಸೌಲಭ್ಯ ಹಾಗೂ ಬಡ ವಿದ್ಯಾರ್ಥಿಗಳಿಗೆ ವಿವಿಧ ರೀತಿಯ ಶಿಷ್ಯ ವೇತನ ಸೌಲಭ್ಯವನ್ನು ಕಲ್ಪಿಸುವ ಮೂಲಕ ಬಡ ಜನರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿದ ಮಹಾನ್ ನಾಯಕ ದಿವಂಗತ ಡಿ. ದೇವರಾಜ ಅರಸು ಅವರ ಕಾರ್ಯ ಸ್ಮರಣೀಯವಾಗಿದೆ ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ಪಟ್ಟಣದ ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ಬುಧವಾರ ನಡೆದ ಮಾಜಿ ಮುಖ್ಯಮಂತ್ರಿ ದಿ. ದೇವರಾಜ ಅರಸು ಅವರ 99ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದಿವಂಗತ ಡಿ.ದೇವರಾಜ ಅರಸು ಅವರು ವಿಶಾಲ ದೃಷ್ಟಿಕೋನದೊಂದಿಗೆ ಸಮಾಜದ ಎಲ್ಲಾ ವರ್ಗಗಳ, ಅದರಲ್ಲಿಯೂ ವಿಶೇಷವಾಗಿ ಹಿಂದುಳಿದ ವರ್ಗಗಳ ಜನಾಂಗದ ಅಭಿವೃದ್ಧಿಗಾಗಿ ಶ್ರಮಿಸಿದ ಮಹಾನ್ ವ್ಯಕ್ತಿ. ಬಡ ಜನರ ಅನುಕೂಲಕ್ಕಾಗಿ ಭೂಸುಧಾರಣ ಕಾಯ್ದೆ ಜಾರಿ, ಜೀತದಾಳು ಪದ್ಧತಿ ನಿರ್ಮೂಲನೆ ಮತ್ತು ಶಾಲಾ ವಿದ್ಯಾರ್ಥಿಗಳಿಗೆ ಶಿಷ್ಯವೇತನ, ಉದ್ಯೋಗದಲ್ಲಿ ಮೀಸಲಾತಿ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಸಮಾಜದಲ್ಲಿ ಹಿಂದುಳಿದ ವರ್ಗದ ಜನರನ್ನು ಮೇಲಕ್ಕೆತ್ತುವ ಕಾರ್ಯವನ್ನು ಪರಿಣಾಮ ಕಾರಿಯಾಗಿ ಮಾಡಿದ ಮಹಾನ್ ನಾಯಕರಾಗಿದ್ದಾರೆ ಎಂದರು.
ಸಮಾರಂಭದಲ್ಲಿ ಮಾತನಾಡಿದ ತಹಶಿಲ್ದಾರ್ ಜಿ.ಎ.ನಾರಾಯಣಸ್ವಾಮಿ, ಅರಸು ಅವರು ಶೋಷಿತ ಜನಾಂಗದ ಅಭಿವೃದ್ಧಿಯ ಹರಿಕಾರ ಹಾಗೂ ನೊಂದವರ ನಂದಾ ದೀಪದಂತೆ ಇದ್ದರು. ಮಹಾನ್ ಮಾನವತಾವಾಗಿ ಹಾಗೂ ಸಮಾಜ ಸುಧಾರಕರಾಗಿದ್ದ ಅವರು ಕೃಷಿ, ನೀರಾವರಿ, ವಿದ್ಯುತ್ ಸುಧಾರಣೆ, ಬಡವರ ಮನೆಗೆ ಬೆಳಕು ಎಂಬ ಯೋಜನೆ ಸೇರಿದಂತೆ ಇನ್ನಿತರ ಹಲವಾರು ಬಡವರ ಪರ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಜನರ ಪ್ರೀತಿಗೆ ಪಾತ್ರರಾಗಿದ್ದರು.ಯುವಪೀಳಿಗೆಗೆ ಈ ಮಾಹಾನ್ ವ್ಯಕ್ತಿಗಳ ಸಾಧನೆ ಹಾಗೂ ಆದರ್ಶದ ಪರಿಚಯ ಅತ್ಯಗತ್ಯ ಎಂದು ಹೇಳಿದರು.
ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವತಿಯಿಂದ 2014–15ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ತಾಲ್ಲೂಕಿನಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿರುವ ವಿದ್ಯಾರ್ಥಿಗಳಾದ ಕೆ.ಎಂ.ಮಂಜುನಾಥ್, ಎನ್.ಮುನಿಯಪ್ಪ, ಎಂ.ವಿ.ಗಜೇಂದ್ರ, ಡಿ.ಚಂದ್ರಬಾಬು, ಎಸ್.ಡಿ.ವೇಣುಗೋಪಾಲ್, ಎನ್.ನಯನ, ಸಮ್ರೀನ್ ತಾಜ್, ವಿ.ವರಲಕ್ಷ್ಮಿ ಅವರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ರಾಮಚಂದ್ರಪ್ಪ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಲಕ್ಷ್ಮೀದೇವಮ್ಮ, ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿಸ್ತರಣಾಧಿಕಾರಿ ಡಿ.ಆರ್.ಶಂಕರ್, ತಾಲ್ಲೂಕು ನೌಕರರ ಸಂಘದ ಅಧ್ಯಕ್ಷ ಎನ್.ಕೆ.ಗುರುರಾಜರಾವ್, ನಿಲಯ ಮೇಲ್ವಿಚಾರಕಿ ಎಚ್.ಎಂ.ಲಕ್ಷ್ಮೀದೇವಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಬೆಂಕಿ ಅವಘಡದಲ್ಲಿ ಮರಣ ಹೊಂದಿದ ಕುರಿ ಮಾಲೀಕರಿಗೆ ಪರಿಹಾರಧನ
ತಾಲ್ಲೂಕಿನ ಯರ್ರನಾಗೇನಹಳ್ಳಿ ಗ್ರಾಮದಲ್ಲಿ ಕಳೆದ ತಿಂಗಳು ಬೆಂಕಿ ಅನಾಹುತಕ್ಕೆ ಸಿಕ್ಕು ಮೃತಪಟ್ಟಿದ್ದ ಕುರಿಗಳ ಮಾಲೀಕರಿಗೆ ಪ್ರಗತಿಪರ ಕುರಿ ಸಾಕಾಣಿಕೆದಾರರ ಸಹಕಾರ ಸಂಘದ ಅಧ್ಯಕ್ಷ ಸಿ.ವಿ. ಲೋಕೇಶ್‌ಗೌಡ ಮಂಗಳವಾರ ಒಂದು ಲಕ್ಷದ ಚೆಕ್ ನೀಡಿದರು.
ತಾಲ್ಲೂಕಿನ ದಿಬ್ಬೂರಹಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯ ಎಸ್.ದೇವಗಾನಹಳ್ಳಿ ಗ್ರಾಮ ಪಂಚಾಯಿತಿಯ ಯರ್ರನಾಗೇನಹಳ್ಳಿ ಗ್ರಾಮದಲ್ಲಿ ಕಳೆದ ತಿಂಗಳಲ್ಲಿ ನಾಲ್ಕು ಗುಡಿಸಲುಗಳಿಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು 20 ಕುರಿಗಳು, ಒಂದು ಎತ್ತು ಸ್ಥಳದಲ್ಲೇ ದಹನವಾಗಿ ಮತ್ತೊಂದು ಎತ್ತು ಮತ್ತು ಇಬ್ಬರಿಗೆ ತೀವ್ರ ಗಾಯಗಳಾಗಿದ್ದವು. ಗುಡಿಸಿಲಿನಲ್ಲೆ ಮಲಗಿದ್ದ ವೆಂಕಟರಮಣಪ್ಪ (೬೦) ಮತ್ತು ರಕ್ಷಣೆಗೆ ಬಂದ ಆತನ ಮಗ ಗಣೇಶ್(೩೫) ತೀವ್ರ ಸುಟ್ಟಗಾಯಗಳಿಂದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು.
ಬೆಂಕಿ ಅವಘಡದಲ್ಲಿ ಮರಣ ಹೊಂದಿದ ಕುರಿ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಪ್ರಗತಿಪರ ಕುರಿ ಸಾಕಾಣಿಕೆದಾರರ ಸಹಕಾರ ಸಂಘದ ಅಧ್ಯಕ್ಷ ಸಿ.ವಿ. ಲೋಕೇಶ್‌ಗೌಡ ವೆಂಕಟರಮಣಪ್ಪ ಮತ್ತು ಅವರ ಮಗ ಗಣೇಶ್ ಅವರಿಗೆ ಸಾಂತ್ವನ ಹೇಳಿ, ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ವತಿಯಿಂದ ಮರಣ ಹೊಂದಿದ ಕುರಿಗಳಿಗೆ ಪರಿಹಾರಧನ ವಿತರಣೆಗೆ ಅಗತ್ಯ ಕ್ರಮಕೊಳ್ಳುವುದಾಗಿ ತಿಳಿಸಿದ್ದರು.
‘ಕುರಿಗಳನ್ನು ನಂಬಿ ಜೀವನ ನಡೆಸುತ್ತಿದ್ದ ವೆಂಕಟರಮಣಪ್ಪ ಮತ್ತು ಕುಟುಂಬದವರು ಬೆಂಕಿ ಅನಾಹುತದಿಂದ ಅಪಾರ ನಷ್ಟವನ್ನುಂಟಾಗಿದೆ. ಅದಕ್ಕಾಗಿ ರಾಜ್ಯ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಬಿ. ಮುನಿವೆಂಕಟಪ್ಪ ಅವರನ್ನು ಭೇಟಿ ಮಾಡಿ ವಿಷಯವನ್ನು ಪ್ರಸ್ತಾಪಿಸಿ, ಮೃತಪಟ್ಟ ಒಂದು ಕುರಿಗೆ 5 ಸಾವಿರ ರೂಗಳಂತೆ ಪರಿಹಾರಧನವನ್ನು ಘಟನೆ ನಡೆದ ಕೆಲವೇ ದಿನಗಳಲ್ಲಿ ನೀಡುತ್ತಿದ್ದೇವೆ. ಈ ಹಣವನ್ನು ಕುರಿ ಸಾಕಾಣಿಕೆಗೆ ಬಳಸಿಕೊಂಡು ಆರ್ಥಿಕವಾಗಿ ಸದೃಢರಾಗಬೇಕೆಂಬುದು ನಿಗಮದ ಉದ್ದೇಶವಾಗಿದೆ’ ಎಂದು ಪ್ರಗತಿಪರ ಕುರಿ ಸಾಕಾಣಿಕೆದಾರರ ಸಹಕಾರ ಸಂಘದ ಅಧ್ಯಕ್ಷ ಸಿ.ವಿ. ಲೋಕೇಶ್‌ಗೌಡ ತಿಳಿಸಿದರು.
ನರಸಿಂಹರೆಡ್ಡಿ, ಗಣೇಶ್ ಈ ಸಂದರ್ಭದಲ್ಲಿ ಹಾಜರಿದ್ದರು.
ಕೋಚಿಮುಲ್‌ನಿಂದ ಹೊಸ ತಂತ್ರಾಂಶ ಅಭಿವೃದ್ಧಿ
ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಹಾಲು ಶೇಖರಣೆಯಾಗುತ್ತಿದ್ದಂತೆ ಹಾಲು ಶೇಖರಣೆಯ ಪ್ರಮಾಣ, ಗುಣಮಟ್ಟ ಇನ್ನಿತರೆ ಎಲ್ಲ ಅಂಶಗಳು ಕೋಚಿಮುಲ್‌ನ ಕೇಂದ್ರ ಕಚೇರಿಗೆ ಲಭ್ಯವಾಗುವಂತಹ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಕೋಚಿಮುಲ್ ಹಾಲು ಒಕ್ಕೂಟದ ಅಧ್ಯಕ್ಷ ಕಾಂತರಾಜು ತಿಳಿಸಿದರು.
ತಾಲ್ಲೂಕಿನ ಬೆಳ್ಳೂಟಿಯ ಗುಟ್ಟಾಂಜನೇಯಸ್ವಾಮಿ ಕಲ್ಯಾಣ ಮಂಟಪದ ಆವರಣದಲ್ಲಿ ಸೋಮವಾರ ನಡೆದ ಹಾಲು ಉತ್ಪಾದಕರ ಸಹಕಾರ ಸಂಘಗಳ ಕಾರ್ಯದರ್ಶಿ ಹಾಗೂ ಅಧ್ಯಕ್ಷರುಗಳ ಪ್ರಾದೇಶಿಕ ಸಭೆಯ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಶೇಖರಣೆಯಾಗುವ ಹಾಲಿಗೂ ಶಿಥಲೀಕರಣ ಕೇಂದ್ರಗಳಿಗೆ ಸರಬರಾಜು ಆಗುವ ಹಾಲಿನ ಪ್ರಮಾಣಕ್ಕೂ ವ್ಯತ್ಯಾಸ ಬರುತ್ತಿದೆ. ಹಾಗಾಗಿ ಪ್ರತಿ ಹಾಲಿನ ಡೇರಿಯಲ್ಲೂ ಹಾಲು ಶೇಖರವಾಗುತ್ತಿದ್ದಂತೆ ಕ್ಷಣಾರ್ಧದಲ್ಲಿಯೆ ಅದಕ್ಕೆ ಸಂಬಂಧಿಸಿದ ಎಲ್ಲ ಮಾಹಿತಿಯೂ ಕೋಚಿಮುಲ್‌ನ ಕೇಂದ್ರ ಕಚೇರಿಯಲ್ಲಿ ಲಭ್ಯವಾಗುವಂತಹ ತಂತ್ರಾಂಶವನ್ನು ರೂಪಿಸಲಾಗುವುದು ಎಂದರು.
ಇದೀಗ ಕಡಿಮೆ ಗುಣಮಟ್ಟದ ಹಾಲು ಉತ್ಪಾದಕರಿಗೂ ಒಂದೇ ಬೆಲೆ ಹಾಗೂ ಉತ್ತಮ ಗುಣಮಟ್ಟದ ಹಾಲು ಪೂರೈಸುವ ರೈತನಿಗೂ ಒಂದೆ ಬೆಲೆ ನೀಡಲಾಗುತ್ತಿದೆ. ಈ ವ್ಯತ್ಯಾಸ ಹೋಗಬೇಕಿದೆ. ಹಾಗಾಗಿ ಗುಣಮಟ್ಟದ ಆಧಾರದ ಮೇಲೆ ಹಾಲಿಗೆ ಬೆಲೆ ನಿಗದಿಪಡಿಸಬೇಕಾಗಿದೆ ಎಂದು ಹೇಳಿದರು.
ಈಗ ಪ್ರತಿ ಲೀಟರ್ ಹಾಲಿಗೆ ೪ ರೂಪಾಯಿಗಳ ಪ್ರೋತ್ಸಾಹ ಧನ ನೀಡುತ್ತಿದ್ದು ಅದನ್ನು ೮ ರೂಪಾಯಿಗಳಿಗೆ ಹೆಚ್ಚಿಸುವಂತೆ ಮುಖ್ಯ ಮಂತ್ರಿಗಳನ್ನು ಒತ್ತಾಯಿಸಲಾಗುವುದು. ಈಗಾಗಲೇ ಈ ಬಗ್ಗೆ ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳ ಎಲ್ಲ ಶಾಸಕರುಗಳೊಂದಿಗೆ ಮಾತುಕತೆ ನಡೆಸಲಾಗಿದೆ. ಶೀಘ್ರದಲ್ಲೇ ಎಲ್ಲ ಶಾಸಕರನ್ನು ಸೇರಿಸಿಕೊಂಡು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ನಮ್ಮ ಬೇಡಿಕೆಯನ್ನು ಮುಂದಿಟ್ಟು ಈಡೇರಿಸುವಂತೆ ಮನವಿ ಮಾಡಿ ಹಾಲು ಉತ್ಪಾದಕರ ಕಷ್ಟಗಳನ್ನು ಮನವರಿಕೆ ಮಾಡಿಕೊಡಲಾಗುವುದು ಎಂದು ಹೇಳಿದರು.
ಕೋಚಿಮುಲ್ ವ್ಯಾಪ್ತಿಯಲ್ಲಿ ಹಾಲಿನ ಗುಣಮಟ್ಟದಲ್ಲಿ ಪ್ರಥಮ ಸ್ಥಾನಕ್ಕಾಗಿ ಚಿಕ್ಕಬಳ್ಳಾಪುರ ಹಾಗೂ ಶಿಡ್ಲಘಟ್ಟದ ನಡುವೆ ಪೈಪೋಟಿ ನಡೆಯುತ್ತಿದೆ. ಕಳೆದ ವರ್ಷ ಶೇಕಡಾ ೬೨ರಷ್ಟು ಇದ್ದ ಹಾಲಿನ ಗುಣಮಟ್ಟ ಇದೀಗ ೮೨ಕ್ಕೆ ಹೆಚ್ಚಿದೆ. ಇದಕ್ಕೆ ಕಾರಣರಾದ ಶಿಡ್ಲಘಟ್ಟ ತಾಲ್ಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ಎಲ್ಲ ಕಾರ್ಯದರ್ಶಿಗಳು ಹಾಗೂ ಅಧ್ಯಕ್ಷರುಗಳನ್ನು ಅಭಿನಂದಿಸುತ್ತೇನೆ ಎಂದರು.
ಕೋಚಿಮುಲ್ ನಿರ್ದೇಶಕ ಬಂಕ್‌ಮುನಿಯಪ್ಪ ಮಾತನಾಡಿ ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಹಾಲಿನ ಪೌಡರ್ ತಯಾರಿಕಾ ಘಟಕ ಅಥವಾ ಹಾಲಿನ ಪ್ಯಾಕೆಟ್ ತಯಾರಿಕಾ ಘಟಕವನ್ನು ಆರಂಭಿಸುವಂತೆ ಕೋಚಿಮುಲ್‌ನ ಅಧ್ಯಕ್ಷರು ಹಾಗೂ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದ್ದು ಅದಕ್ಕೆ ಅಗತ್ಯವಾದ ೧೫ ಎಕರೆ ಜಮೀನು, ನೀರು ಇನ್ನಿತರೆ ಮೂಲ ಸೌಕರ್ಯಗಳನ್ನು ಒದಗಿಸುವ ಭರವಸೆ ಸಹ ನೀಡಿದ್ದು ಅವರು ಯಾವುದಾದರೂ ಘಟಕವನ್ನು ಆರಂಭಿಸಲು ಎಲ್ಲ ರೀತಿಯ ನೆರವು, ಸಹಕಾರ ನೀಡುವುದಾಗಿ ಹೇಳಿದರು.
ತಾಲ್ಲೂಕಿನಲ್ಲಿಯೆ ಅತಿ ಹೆಚ್ಚು ಹಾಲು ಸಂಗ್ರಹಿಸುವ ಮಳಮಾಚನಹಳ್ಳಿ ಹಾಗೂ ಭಕ್ತರಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು, ಕಾರ್ಯದರ್ಶಿಗಳನ್ನು, ಹಾಲು ಗುಣಮಟ್ಟ ಪರೀಕ್ಷಾ ಯಂತ್ರವನ್ನು ಅಳವಡಿಸಿಕೊಂಡ ಮೊದಲ ಸಂಘವಾದ ಮಳ್ಳೂರು ಸಂಘದ ಅಧ್ಯಕ್ಷ, ಕಾರ್ಯದರ್ಶಿಯವರನ್ನು ಹಾಗೂ ನಿವೃತ್ತರಾದ ಚೌಡಸಂದ್ರದ ಕಾರ್ಯದರ್ಶಿಯವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.
ಕೋಚಿಮುಲ್‌ನ ಪ್ರಧಾನ ವ್ಯವಸ್ಥಾಪಕ ಡಾ.ಹೆಗ್ಗಡೆ, ವ್ಯವಸ್ಥಾಪಕ ನಿರ್ದೇಶಕ ಡಾ.ಗೋಪಾಲ್, ಸ್ಥಳೀಯ ಶಿಬಿರ ಕಚೇರಿಯ ವ್ಯವಸ್ಥಾಪಕ ಡಾ.ಈಶ್ವರಯ್ಯ, ಕೆಬಿಎನ್ ರೆಡ್ಡಿ ಮತ್ತಿತರರು ಹಾಜರಿದ್ದರು.
ಪದಕಗಳನ್ನು ಗಳಿಸಿದ ದಿವ್ಯಭಾರತ್ ಕರಾಟೆ ಡೊ ಅಸೋಸಿಯೇಷನ್ ಕರಾಟೆ ಪಟುಗಳು
ಪಟ್ಟಣದ ದಿವ್ಯಭಾರತ್ ಕರಾಟೆ ಡೊ ಅಸೋಸಿಯೇಷನ್ ಕರಾಟೆ ಪಟುಗಳು ಗೌರಿಬಿದನೂರಿನ ನೇತಾಜಿ ಕ್ರೀಡಾಂಗಣದಲ್ಲಿ ನಡೆದ ಎರಡನೇ ರಾಜ್ಯಮಟ್ಟದ ಕರಾಟೆ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸಿ ಪದಕಗಳನ್ನು ಗಳಿಸಿದ್ದಾರೆ.

ವೈಟ್ ಬೆಲ್ಟ್ ಕತಾ ಸ್ಪರ್ಧೆಯಲ್ಲಿ ಎ ವಿಭಾಗದಲ್ಲಿ ಹೇಮಂತ್(ತೃತೀಯ), ಬಿ ವಿಭಾಗದಲ್ಲಿ ಓಂ ದೇಶಮುದ್ರೆ(ತೃತೀಯ), ಗ್ರೀನ್ ಬೆಲ್ಟ್ ಕತಾ ಸ್ಪರ್ಧೆಯಲ್ಲಿ ಜಯಸಿಂಹ(ದ್ವಿತೀಯ), ಕುಮಿತೆ ಸ್ಪರ್ಧೆಯಲ್ಲಿ 15 ರಿಂದ 20ಕೆಜಿ: ಜಯಸಿಂಹ(ಪ್ರಥಮ), ಹೇಮಂತ್(ದ್ವಿತೀಯ), 25 ರಿಂದ 30 ಕೆಜಿ: ಹರ್ಷನ್(ದ್ವಿತೀಯ), ಪ್ರದೀಪ್, ನವೀನ್, ನರಸಿಂಹಮ ನಂದೀಶ್, ಹರ್ಷಿತ್ ಸಮಾಧಾನಕರ ಬಹುಮಾನ ಪಡೆದಿರುವುದಾಗಿ ಕರಾಟೆ ಶಿಕ್ಷಕ ಅರುಣ್‌ಕುಮಾರ್ ತಿಳಿಸಿದ್ದಾರೆ.
ವಿ.ವೆಂಕೋಬರಾವ್ ಅವರ ಜೊತೆ ಐರಿಫ್ಲೆಕ್ಸ್ ಕಾಲಕ್ಕೊಂದು ಯಾನ
‘ಐರಿಫ್ಲೆಕ್ಸ್’ ಮತ್ತು ‘ಹ್ಯಾಕೋಫ್ಲೆಕ್ಸ್’ ಎಂಬ ಹೆಸರುಗಳನ್ನು ಕೇಳಿದರೆ ಈಗಿನ ಛಾಯಾಗ್ರಾಹಕರು ವಿಚಿತ್ರವಾಗಿ ನೋಡುತ್ತಾರೆ. ಆದರೆ ಅರವತ್ತರ ದಶಕದ ಪ್ರಾರಂಭದಲ್ಲಿ ಶಿಡ್ಲಘಟ್ಟದ ಜನರ ಮಂದಹಾಸಕ್ಕೆ ಬೆಳಕು ಚೆಲ್ಲಿ ನೆಗೆಟೀವ್‌ಗಳಲ್ಲಿ ಸೆರೆಹಿಡಿದು ಕಪ್ಪುಬಿಳುಪು ಚಿತ್ರಗಳನ್ನಾಗಿಸಿದ್ದ ಕ್ಯಾಮೆರಾಗಳಿವು.
ತಾಲ್ಲೂಕಿನ ಮುತ್ತೂರಿನ ವಿ.ವೆಂಕೋಬರಾವ್ ಶಿಡ್ಲಘಟ್ಟದ ಅಶೋಕ ರಸ್ತೆಯಲ್ಲಿ ೧೯೬೪ ರ ಸೆಪ್ಟೆಂಬರ್ ತಿಂಗಳಿನಲ್ಲಿ ಡೀಲಕ್ಸ್ ಫೋಟೋ ಸ್ಟುಡಿಯೋ ಪ್ರಾರಂಭಿಸಿದಾಗ ಬಳಸುತ್ತಿದ್ದ ಕ್ಯಾಮೆರಾಗಳು ‘ಐರಿಫ್ಲೆಕ್ಸ್’ ಮತ್ತು ‘ಹ್ಯಾಕೋಫ್ಲೆಕ್ಸ್’. ಈ ಕ್ಯಾಮೆರಾಗಳ ಬೆಲೆ ಆಗ ೧,೫೦೦ ರೂಗಳು. ಇವುಗಳ ನಂತರ ಯಾಷಿಕಾ ಡಿ ಎಂಬ ೨,೦೦೦ ರೂಗಳ ಕ್ಯಾಮೆರಾ ಹಾಗೂ ಕ್ಯಾನನ್ ಕ್ಯೂ ಎಲ್೧೭ ಎಂಬ ೩,೦೦೦ ರೂಗಳ ಕ್ಯಾಮೆರಾಗಳನ್ನು ಬಳಸುತ್ತಿದ್ದರು.
ಪೋಟೋ ತೆಗೆಯುವವರು ವಿರಳವಾಗಿದ್ದ ಆ ಕಾಲದಲ್ಲಿ ಕ್ಯಾಮೆರಾ, ಫಿಲಂ ಸಂಸ್ಕರಣೆ, ಪ್ರಿಂಟ್ ಹಾಕುವುದನ್ನು ಕಲಿತ ವೆಂಕೋಬರಾವ್ ತಾಲ್ಲೂಕಿನಲ್ಲಿ ಮೊಟ್ಟಮೊದಲ ಸ್ಟುಡಿಯೋ ಸ್ಥಾಪಿಸಿದರು.
‘ನನಗೆ ಫೋಟೋ ಸಂಸ್ಕರಣೆಯನ್ನು ಕಲಿಸಿಕೊಟ್ಟವರು ಆಗ ಪುರಸಭೆಯಲ್ಲಿ ಬಿಲ್ ಕಲೆಕ್ಟರ್ ಆಗಿದ್ದ ನಿರಂಜನ್ ಸಿಂಗ್. ೧೬ ರೂಗಳ ಬಾಡಿಗೆ ನೀಡಿ ೧೨೦ ರೂಗಳ ಬಂಡವಾಳದೊಂದಿಗೆ ೧೯೬೪ರ ಸೆಪ್ಟೆಂಬರ್ ೧೨ರಂದು ಪಟ್ಟಣದ ಅಶೋಕ ರಸ್ತೆಯಲ್ಲಿ ಸ್ಟುಡಿಯೋ ಪ್ರಾರಂಭಿಸಿದೆ. ಆಗ ದಿನವೆಲ್ಲಾ ಕುಳಿತರೂ ೫ ರೂ ವ್ಯಾಪಾರವಾಗುತ್ತಿರಲಿಲ್ಲ. ಕಪ್ಪುಬಿಳುಪಿನ ೩ ಪಾಸ್‌ಪೋರ್ಟ್ ಚಿತ್ರಗಳಿಗೆ ೩ ರೂಗಳು ಪಡೆಯುತ್ತಿದ್ದೆ. ಗ್ರೂಪ್ ಫೋಟೋ ತೆಗೆಯಲೆಂದೇ ೫,೦೦೦ ರೂಗಳ ಫೀಲ್ಡ್ ಕ್ಯಾಮೆರಾ ತಂದಿದ್ದೆ. ದಕ್ಷಿಣ ಭಾರತೀಯ ಛಾಯಾಗ್ರಾಹಕರ ಸಂಘದ ಸದಸ್ಯತ್ವವನ್ನೂ ಹೊಂದಿದ್ದೆ. ಅದರ ಚುನಾವಣೆ ಮತ್ತು ಸಭೆಗೆ ಮದ್ರಾಸಿಗೆ ಹೋಗಿಬರುತ್ತಿದ್ದೆ’ ಎಂದು ೭೪ ವರ್ಷದ ವಿ.ವೆಂಕೋಬರಾವ್ ತಮ್ಮ ಫೋಟೋಗ್ರಫಿ ಪ್ರಾರಂಭದ ದಿನಗಳನ್ನು ನೆನೆಸಿಕೊಳ್ಳುತ್ತಾರೆ.
‘೧೯೮೯ರಲ್ಲಿ ಸ್ಟುಡಿಯೋದ ಬೆಳ್ಳಿಹಬ್ಬವನ್ನು ಆಚರಿಸಿದೆ. ಆಗ ತಹಶೀಲ್ದಾರರಾಗಿದ್ದ ಟಿ.ಎನ್.ರೆಡ್ಡಿ, ಬೆಂಗಳೂರಿನ ಎಂಪೈರ್ ಸ್ಟುಡಿಯೋದ ಗುರ್ರಪ್ಪ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ನನ್ನ ಛಾಯಾಗ್ರಹಣ ಕಲೆಯ ಗುರುಗಳಾದ ನಿರಂಜನ್ ಸಿಂಗ್ ಮತ್ತು ನನ್ನ ಸಹಾಯಕರಾಗಿ ದುಡಿದಿದ್ದ ಪಿ.ವಿ.ರಾಜೇಂದ್ರಪ್ರಸಾದ್ ಅವರನ್ನು ಸನ್ಮಾನಿಸಲಾಗಿತ್ತು. ಆಗ ತಾಲ್ಲೂಕಿಗೇ ಮೊಟ್ಟ ಮೊದಲಬಾರಿಗೆ ೭೫ ಸಾವಿರ ರೂಗಳ ವೀಡಿಯೋ ಕ್ಯಾಮೆರಾ ತಂದಿದ್ದೆ. ಸುಮಾರು ೪೩ ವರ್ಷಗಳ ಕಾಲ ನಡೆಸಿದ್ದ ಸ್ಟುಡಿಯೋ ಇದ್ದ ಕಟ್ಟಡವನ್ನು ರಸ್ತೆ ಅಗಲೀಕರಣದಿಂದ ಕೆಡವಲಾಯಿತು. ಮಕ್ಕಳು ಕೂಡ ತಮ್ಮದೇ ಸ್ಟುಡಿಯೋಗಳನ್ನು ಮಾಡಿಕೊಂಡಿದ್ದರಿಂದ ಈಗ ಮನೆಯಲ್ಲಿಯೇ ಇರುವಂತಾಗಿದೆ’ ಎನ್ನುತ್ತಾರೆ ವೆಂಕೋಬರಾವ್.
‘ಈಗ ನಮ್ಮ ತಾಲ್ಲೂಕಿನಲ್ಲಿ ೪೫ ಸ್ಟುಡಿಯೋಗಳಿವೆ. ಡಿಜಿಟಲ್ ಕಾಲ ಬಂದ ಮೇಲೆ ಅನೇಕರು ಛಾಯಾಗ್ರಾಹಕರಾಗಿದ್ದಾರೆ. ಈಗ ಫೋಟೋ ತೆಗೆಯುವುದು, ಪ್ರಿಂಟ್ ಹಾಕಿಸುವುದು ಸುಲಭವಾಗಿದೆ. ಕಪ್ಪು ಬಿಳುಪು ಚಿತ್ರವನ್ನು ಕ್ಯಾಬಿನೆಟ್ ಆಕಾರದ ಚಿತ್ರವನ್ನು ಕಟ್ಟು ಹಾಕಿಸಿ ಮನೆಗೆ ಬಂದವರೆಲ್ಲರಿಗೂ ಕಾಣುವಂತೆ ನೇತು ಹಾಕಿ ಹೆಮ್ಮೆ ಪಟ್ಟುಕೊಳ್ಳುವ ಕಾಲದಲ್ಲಿ ತಾಲ್ಲೂಕಿನಲ್ಲಿ ಮೊಟ್ಟ ಮೊದಲು ಸ್ಟುಡಿಯೋ ಪ್ರಾರಂಭಿಸಿದ್ದ ವೆಂಕೋಬರಾವ್ ಅವರು ಈ ವೃತ್ತಿಬಾಂಧವರಿಗೆ ಮಾದರಿಯಾಗಿದ್ದಾರೆ’ ಎಂದು ತಾಲ್ಲೂಕು ಛಾಯಾಗ್ರಾಹಕ ಸಂಘದ ಸದಸ್ಯರೊಬ್ಬರು ತಿಳಿಸಿದರು.
–ಡಿ.ಜಿ.ಮಲ್ಲಿಕಾರ್ಜುನ.
ಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ಕೃಷ್ಣ ಮತ್ತು ರಾಧೆ ವೇಷಧಾರಿ ಸ್ಪರ್ಧೆ
ಪೋಷಕರು ಮಕ್ಕಳೊಂದಿಗೆ ಹೆಚ್ಚು ಸಮಯವನ್ನು ಕಳೆಯಬೇಕು ಎಂದು ಬಿ.ಜಿ.ಎಸ್ ವಿದ್ಯಾಸಂಸ್ಥೆಯ ಪ್ರಾಂಶುಪಾಲ ಮಹದೇವಯ್ಯ ತಿಳಿಸಿದರು.
ಪಟ್ಟಣದ ವಾಸವಿ ರಸ್ತೆಯ ಬಳಿಯಿರುವ ಬಿ.ಜಿ.ಎಸ್ ವಿದ್ಯಾಸಂಸ್ಥೆಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ ಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ಕೃಷ್ಣ ವೇಷಧಾರಿ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪೋಷಕರು ಟೀವಿಯಲ್ಲಿ ಧಾರವಾಹಿಗಳ ಮೋಹಕ್ಕೆ ಬಲಿಯಾಗಿ ಈಚೆಗೆ ಮಕ್ಕಳೊಂದಿಗೆ ಹೆಚ್ಚು ಕಳೆಯುತ್ತಿಲ್ಲ. ಅದು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಅಡ್ಡಿಯಾಗುತ್ತದೆ. ಮಕ್ಕಳಿಗೆ ಸಾಂಸ್ಕೃತಿಕ, ಸಾಮಾಜಿಕ, ಪೌರಾಣಿಕ ವಿಷಯಗಳನ್ನು ಕಲಿಸಬೇಕು. ಮಕ್ಕಳ ದೃಷ್ಠಿಯಲ್ಲಿ ಅಮ್ಮ ಅಂದರೆ ಸರ್ವಸ್ವ, ಅಪ್ಪ ಎಂದರೆ ಆಕಾಶ ಎಂದು ಹೇಳಿದರು.
ಪುಟ್ಟ ಮಕ್ಕಳು ಶ್ರೀಕೃಷ್ಣ ಮತ್ತು ರಾಧೆಯ ವೇಷಧಾರಿಗಳಾಗಿ ಎಲ್ಲರ ಮನಸೂರೆಗೊಂಡರು. ಮಕ್ಕಳ ಪೋಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವೇಷಧಾರಿಗಳಾಗಿದ್ದ ಮಕ್ಕಳಿಗೆ ಬಹುಮಾನಗಳನ್ನು ವಿತರಿಸಿ ಸಿಹಿಯನ್ನು ಹಂಚಿದರು.
ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ವತಿಯಿಂದ ಸ್ವಯಂಪ್ರೇರಿತ ರಕ್ತದಾನ ಶಿಬಿರ
ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ವತಿಯಿಂದ ಚಂದ್ರಶೇಖರ್ ಆಜಾದ್ ಅವರ ಜನ್ಮದಿನದ ಸಂಸ್ಮರಣೆ, ಕಾರ್ಗಿಲ್ ವಿಜಯೋತ್ಸವ ಮತ್ತು ಸ್ವಾತಂತ್ರ್ಯೋತ್ಸವದ ಸವಿನೆನಪಿನ ಅಂಗವಾಗಿ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ನಗರೇಶ್ವರ ಕಲ್ಯಾಣ ಮಂಟಪದಲ್ಲಿ ಸೋಮವಾರ ಆಯೋಜಿಸಲಾಗಿತ್ತು.
‘ರಕ್ತದಾನ ಶಿಬಿರದ ಮೂಲಕ ಹಲವಾರು ಮಂದಿಗೆ ಜೀವವನ್ನು ನೀಡುವ ಸತ್ಕಾರ್ಯ ಆಗುತ್ತದೆ. ಈ ದೃಷ್ಟಿಯಿಂದ ಸ್ವಾತಂತ್ರ್ಯ ಹೋರಾಟಗಾರ ಚಂದ್ರಶೇಖರ್ ಆಜಾದ್ ಅವರ ಜನ್ಮದಿನದ ಸಂಸ್ಮರಣೆ, ಕಾರ್ಗಿಲ್‌ನಲ್ಲಿ ಜೀವತೆತ್ತ ಯೋಧರ ಸ್ಮರಣೆ ಮತ್ತು ನಮ್ಮ ದೇಶದ ಸ್ವಾತಂತ್ರ್ಯೋತ್ಸವದ ಸವಿನೆನಪಿಗಾಗಿ ರಕ್ತದಾನ ಶಿಬಿರವನ್ನು ಬಿಜೆಪಿ ಪಕ್ಷದ ವತಿಯಿಂದ ರಾಷ್ಟ್ರೋತ್ಥಾನ ರಕ್ತನಿಧಿಯ ಸಹಯೋಗದೊಂದಿಗೆ ಆಯೋಜಿಸಿದ್ದೇವೆ’ ಎಂದು ಬಿ.ಜೆ.ಪಿ ತಾಲ್ಲೂಕು ಅಧ್ಯಕ್ಷ ಸುರೇಂದ್ರಗೌಡ ತಿಳಿಸಿದರು.
ಎಲ್ಲಾ ದಾನಗಳಿಗಿಂತ ಶ್ರೇಷ್ಠವಾದದ್ದು ರಕ್ತದಾನ. ಬೇರೊಂದು ಜೀವವನ್ನು ಉಳಿಸುವ ಶಕ್ತಿಯಿರುವುದ್ದರಿಂದ ರಕ್ತದಾನವನ್ನು ಎಲ್ಲರೂ ಶ್ರೇಷ್ಠವೆಂದು ಪರಿಗಣಿಸುತ್ತಾರೆ. ಆರೋಗ್ಯವಂತರು ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತದಾನವನ್ನು ಮಾಡಬಹುದೆಂದು ವೈದ್ಯರು ಹೇಳುತ್ತಾರೆ. ಆದ್ದರಿಂದ ಯುವಕರು ಈ ರೀತಿಯ ರಕ್ತದಾನ ಶಿಬಿರಗಳಲ್ಲಿ ಭಾಗವಹಿಸಿ ಅಮೂಲ್ಯ ಜೀವವನ್ನು ಉಳಿಸುವ ಸಾರ್ಥಕ ಸಮಾಜಸೇವೆಯಲ್ಲಿ ತೊಡಗಿಸಿಕೊಳ್ಳುವಂತೆ ಬಿ.ಜೆ.ಪಿ ಮುಖಂಡ ಸಿ.ವಿ.ಲೋಕೇಶ್‌ಗೌಡ ಹೇಳಿದರು.
ಒಟ್ಟು 82 ಯೂನಿಟ್ ರಕ್ತ ಸಂಗ್ರಹವಾಯಿತು. ರಾಷ್ಟ್ರೋತ್ಥಾನ ರಕ್ತನಿಧಿಯ ಸುಂದರ್‌ಜಿ, ಡಾ.ಸೋಮಶೇಖರ್, ಡಾ.ಸುಮಿತ್ರಾ, ಡಾ.ಶಿವರಾಜ್, ಬಿ.ಜೆ.ಪಿ ಜಿಲ್ಲಾಧ್ಯಕ್ಷ ರವಿನಾರಾಯಣರೆಡ್ಡಿ, ಶಿವಕುಮಾರಗೌಡ, ರಾಮರೆಡ್ಡಿ, ಸಿ.ವಿ.ಲೋಕೇಶ್‌ಗೌಡ, ಖಂಡೇರಾವ್, ದಾಮೋದರ್, ರಾಘವೇಂದ್ರ, ಶ್ರೀಧರ್, ಕೆ.ಆರ್.ರವಿಚಂದ್ರ, ನರೇಶ್, ಮಂಜುಳಮ್ಮ, ಸುಜಾತಮ್ಮ, ಮುನಿರತ್ನಮ್ಮ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ಬಾಲಕೃಷ್ಣನ ಲೀಲೆಗಳನ್ನು ತಿಳಿಸುವ ಅಲಂಕಾರ

ಪುತಿನ ಅವರು “ಗೋಕುಲ ನಿರ್ಗಮನ” ನಾಟಕದಲ್ಲಿ, ಕೃಷ್ಣನಿಲ್ಲದ ಗೋಕುಲ ಆತನ ನೆನಪನ್ನೇ ಮಿಡಿಯುತ್ತಿರುವ ಸನ್ನಿವೇಶವನ್ನು ‘ಇದ್ದುದು ದಿಟ, ಅವನೊಲಿದುದು ದಿಟ, ನಾವು ನಲಿದುದು ದಿಟ, ಬಹ ನೆಚ್ಚು ದಿಟ’ ಎಂಬ ವರ್ಣನೆಯಂತೆ ಎಂದೆಂದೂ ಮುಗಿಯದ ವಸಂತಕ್ಕಾಗಿ ನಿರೀಕ್ಷಿಸುತ್ತಲೇ ಕೃಷ್ಣನನ್ನು ಬೀಳ್ಕೊಟ್ಟ ಗೋಕುಲ, ಅದರೊಳಗೆ ಬದುಕಿದ್ದ ರಾಧೆ, ಅವಳ ಗೆಳತಿಯರು -ಇವರೆಲ್ಲರನ್ನೂ ಸಚಿತ್ರವಾಗಿ ರೂಪಿಸಲಾಗಿತ್ತು.
ಗೋಕುಲದ ನದಿ, ಮರ ಗಿಡ, ಕೃಷ್ಣನ ಪ್ರೀತಿಯ ಬೆಣ್ಣೆ ಮತ್ತು ಸಿಹಿತಿನಿಸುಗಳೊಂದಿಗೆ ನೂರೆಂಟು ವಿಧದ ತಿನಿಸುಗಳನ್ನಿಟ್ಟು ಪೂಜಿಸಲಾಯಿತು. ಸುತ್ತಮುತ್ತಲಿನ ಮನೆಗಳವರು, ಮಕ್ಕಳು ಬಂದು ಭಾಗವತದ ಪ್ರಮುಖ ಘಟ್ಟ ಹಾಗೂ ಬಾಲಕೃಷ್ಣನ ಬಾಲ ಲೀಲೆಗಳನ್ನು ಕಂಡು ಪ್ರಸಾದವನ್ನು ಪಡೆದರು.
‘ಸುಮಾರು ಹದಿನೈದು ವರ್ಷಗಳಿಂದ ಕೃಷ್ಣ ಜನ್ಮಾಷ್ಠಮಿಯನ್ನು ವಿಶೇಷವಾಗಿ ಆಚರಿಸಿಕೊಂಡು ಬರುತ್ತಿದ್ದು, ಒಂದೊಂದು ವರ್ಷ ಒಂದೊಂದು ಕೃಷ್ಣ ಮಹಿಮೆಯನ್ನು ವ್ಯಕ್ತವಾಗುವಂತೆ ಅಲಂಕಾರ ಮಾಡುತ್ತೇವೆ. ಈ ಬಾರಿ ಕೃಷ್ಣನು ಗೋಕುಲದಲ್ಲಿ ಗೋಪಿಕಾ ಸ್ತ್ರೀಯರನ್ನು ಗೋಳು ಹೊಯ್ದುಕೊಳ್ಳುತ್ತಾ ಅವರೆಲ್ಲರ ಪ್ರೀತಿಪಾತ್ರನಾಗುವುದನ್ನು ಪ್ರದರ್ಶಿಸಿದ್ದೇವೆ. ಮಕ್ಕಳಿಗೆ ಈ ರೀತಿಯ ಪ್ರತಿಕೃತಿಗಳ ಮೂಲಕ ಶ್ರೀಕೃಷ್ಣನ ಲೀಲೆಗಳು ಹಾಗೂ ಭಾಗವತದ ಕಥೆಯನ್ನು ತಿಳಿಸುವ ಪ್ರಯತ್ನವನ್ನು ಮಾಡಿದ್ದೇವೆ’ ಎಂದು ಗೌಡರಬೀದಿಯ ಮಂಜುನಾಥ್ ತಿಳಿಸಿದರು.

