23.1 C
Sidlaghatta
Thursday, December 25, 2025
Home Blog Page 1046

ಪ್ರಸಿದ್ಧವಾದ ಮೇಲೂರಿನ ಮಿಕ್ಸ್‌ಚರ್

0

ಅರವತ್ನಾಲ್ಕು ವಿದ್ಯೆಗಳಲ್ಲಿ ಅಡುಗೆಗೂ ಮಹತ್ವವಿದೆ. ಕೆಲವರ ಕೈರುಚಿ ದೇಶ, ಭಾಷೆಯ ಗಡಿ ಮೀರಿ ಪ್ರಸಿದ್ಧಿಯನ್ನು ಪಡೆದಿರುತ್ತದೆ. ಸಣ್ಣ ಗ್ರಾಮದಲ್ಲಿದ್ದರೂ ಕಲಿತ ವಿದ್ಯೆಯಿಂದಲೇ, ತಮ್ಮ ತಯಾರಿಕಾ ಸಾಧನಗಳಿಂದಲೇ ಕೆಲವರು ದೇಶದ ರಾಯಭಾರಿಗಳಾಗಿರುತ್ತಾರೆ. ತಾಲ್ಲೂಕಿನ ಮೇಲೂರು ಗ್ರಾಮದ ಕಾಮಧೇನು ಸ್ವೀಟ್ಸ್ ಮಾಲೀಕ ಶ್ರೀಧರ್ ಇಂಥಹವರಲ್ಲೊಬ್ಬರು.
ಮೇಲೂರಿನ ಮಿಕ್ಸ್‌ಚರ್ ಎಂದೇ ಪ್ರಸಿದ್ಧವಾದುದು ಇವರು ತಯಾರಿಸುವ ಚೌಚೌ. ಮೇಲೂರಿನ ಗ್ರಾಮದಿಂದ ಇವರ ತಯಾರಿಕೆಯ ಖಾರದ ತಿನಿಸು ತಾಲ್ಲೂಕು ಜಿಲ್ಲೆಯನ್ನೂ ಮೀರಿ ಅಮೆರಿಕೆಯನ್ನೂ ತಲುಪಿದೆ. ಜಿಲ್ಲೆಯ ಇವರ ಗ್ರಾಹಕರು ಅಮೆರಿಕೆಯಲ್ಲಿನ ತಮ್ಮ ಸಂಬಂಧಿಕರು ಬಂದು ವಾಪಸ್ ಹೋಗುವಾಗ ಮೇಲೂರಿನ ಮಿಕ್ಸ್‌ಚರ್ ಕೊಂಡು ಹೋಗುತ್ತಾರೆ.
ಸುಮಾರು ೧೮ ವರ್ಷಗಳಿಂದ ಖಾರ ಸಿಹಿ ತಿಂಡಿ ತಯಾರಿಕೆಯಲ್ಲಿ ತೊಡಗಿಸಿಕೊಂಡಿರುವ ಇವರು ಜಿಲೇಬಿ, ಜಾಂಗೀರು, ಲಾಡು, ಸೋನ್‌ಪಪ್ಪಡಿ ಮುಂತಾದ ತಿಂಡಿಗಳನ್ನೂ ತಯಾರಿಸುತ್ತಾರೆ. ಮೇಲೂರು ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ನಡೆಯುವ ಜಾತ್ರೆ, ಹಬ್ಬ ಮುಂತಾದ ಯಾವುದೇ ಸಂಭ್ರಮಾಚರಣೆಗಳಿಗೆ ಇವರ ಸಿಹಿ ಇರಲೇಬೇಕು.
’ಈ ವಿದ್ಯೆಯನ್ನು ಬಂಗಾರಪೇಟೆಯಲ್ಲಿನ ನನ್ನ ಚಿಕ್ಕಪ್ಪನವರ ಬಳಿ ಕಲಿತೆ. ಗುಣಮಟ್ಟವನ್ನು ಕಮ್ಮಿಯಾಗದಂತೆ ಸದಾ ನೋಡಿಕೊಳ್ಳುತ್ತೇನೆ. ಉತ್ತಮವಾದ ಎಣ್ಣೆ ಬಳಸುವೆ. ಒಳ್ಳೆಯ ನಾಟಿ ಕಡಲೆ ಬೇಳೆಯನ್ನು ನೋಡಿ ಕೊಂಡುತಂದು ಆರಿಸಿ ಒಣಗಿಸಿ ಪುಡಿ ಮಾಡಿಸಿ ಬಳಸುತ್ತೇನೆ. ಈ ಕೆಲಸಕ್ಕೆ ನಾನು ಕೆಲಸದವರನ್ನು ಇಟ್ಟುಕೊಂಡಿಲ್ಲ. ತಿಂಡಿ ತಯಾರಿಕೆ ಹಾಗೂ ಮಾರಾಟಕ್ಕೆ ನನ್ನ ಪತ್ನಿ ಹಾಗೂ ತಮ್ಮ ಸಹಕರಿಸುತ್ತಾರೆ. ಕೆಲಸದವರನ್ನು ನೇಮಿಸಿಕೊಂಡರೆ ಗುಣಮಟ್ಟ ಕೆಡಬಹುದೆಂಬ ಭಯವಿದೆ. ಕೆಲ ಗ್ರಾಹಕರು ಅಮೆರಿಕೆಗೆ ನಮ್ಮ ಮಿಕ್ಸ್‌ಚರ್ ತೆಗೆದುಕೊಂಡು ಹೋಗುತ್ತಾರೆ. ಅವರಿಗಾಗಿ ಅವರಿಗೆ ಬೇಕಾದ ರೀತಿಯಲ್ಲಿ ಖಾರ ಮಾಡಿಕೊಡುತ್ತೇನೆ. ವಿಮಾನದಲ್ಲಿ ಹೆಚ್ಚು ತೆಗೆದುಕೊಂಡು ಹೋಗಲಾಗದೆಂದು ಒಮ್ಮೆಗೆ ನಾಲ್ಕರಿಂದ ಐದು ಕೆಜಿ ತೆಗೆದುಕೊಂಡು ಹೋಗುತ್ತಾರೆ. ತಾಲ್ಲೂಕಿನ ಹಲವಾರು ಮಂದಿ ಗ್ರಾಹಕರು ತಮ್ಮ ಸಂಬಂಧಿಕರ ಮನೆಗಳಿಗೆ ಮತ್ತು ಸ್ನೇಹಿತರಿಗೆ ನೀಡಲು ನನ್ನ ಬಳಿ ಸಿಹಿ ಹಾಗೂ ಖಾರ ಖರೀದಿಸುತ್ತಾರೆ. ಜನರು ಮೆಚ್ಚುವುದು ಗುಣಮಟ್ಟವನ್ನು ಎಂಬ ಎಚ್ಚರಿಕೆ ಸದಾ ನನ್ನದು’ ಎನ್ನುತ್ತಾರೆ ಕಾಮಧೇನು ಸ್ವೀಟ್ಸ್‌ನ ಎನ್.ಶ್ರೀಧರ.

ವರದನಾಯಕನಹಳ್ಳಿ ಪಟಾಲಮ್ಮ ಮತ್ತು ವೀರಸೊಣ್ಣಮ್ಮ ದೇವಿಯವರ 18ನೇ ವರ್ಷದ ರಥೋತ್ಸವ

0

ತಾಲ್ಲೂಕಿನ ವರದನಾಯಕನಹಳ್ಳಿ ಗ್ರಾಮದಲ್ಲಿ ಪಟಾಲಮ್ಮ ಮತ್ತು ವೀರಸೊಣ್ಣಮ್ಮ ದೇವಿಯವರ 18ನೇ ವರ್ಷದ ರಥೋತ್ಸವ ಮತ್ತು ಉಟ್ಲು ಮಹೋತ್ಸವವನ್ನು ಗುರುವಾರ ವಿಜೃಂಭಣೆಯಿಂದ ಆಚರಿಸಲಾಯಿತು.
ಪ್ರಧಾನ ಹೋಮ, ಮಹಾಕುಂಬಾಭಿಷೇಕ, ಪಂಚಾಮೃತ ಅಭಿಷೇಕ, ಮಹಾಮಂಗಳಾರತಿ ಮತ್ತು ತೀರ್ಥಪ್ರಸಾದವನ್ನು ವಿನಿಯೋಗಿಸಲಾಯಿತು. ಗ್ರಾಮದ ಕರಗದ ಮನೆ ಬಳಿಯಿಂದ ರಥೋತ್ಸವ ಪ್ರಾರಂಭವಾಗಿ ದೇವಸ್ಥಾನದವರೆಗೂ ವಿವಿಧ ವಾದ್ಯವೃಂದದ ಸಮೇತ ತರಲಾಯಿತು. ರಥೋತ್ಸವದ ಸಂದರ್ಭದಲ್ಲಿ ವಿವಿಧ ವೇಷಭೂಷಣಗಳಿಂದ ಕೂಡಿದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಕ್ಷೀರ ಉಟ್ಲು ಹಾಗೂ ಕಾಯಿ ಉಟ್ಲು ಮಹೋತ್ಸವವನ್ನು ನಡೆಸಲಾಯಿತು. ಭಕ್ತರಿಗೆ ಅನ್ನಸಂತರ್ಪಣೆಯನ್ನು ಆಯೋಜಿಸಲಾಗಿತ್ತು. ಗ್ರಾಮಸ್ಥರಿಂದ ಪಾನಕ ಹಾಗೂ ಮಜ್ಜಿಗೆ ಬಂಡಿಯನ್ನು ವ್ಯವಸ್ಥೆ ಮಾಡಿದ್ದು ಭಕ್ತರಿಗೆಲ್ಲಾ ವಿತರಿಸಲಾಯಿತು. ಪಂಡರಾಪುರ ಭಜನೆ ಜಾತ್ರೆಯ ವಿಶೇಷ ಆಕರ್ಷಣೆಯಾಗಿ ಜನರನ್ನು ರಂಜಿಸಿತು.
ತಾಲ್ಲೂಕಿನ ಚೀಮನಹಳ್ಳಿ, ಗುಡಿಹಳ್ಳಿ, ಅಬ್ಲೂಡು, ಶೆಟ್ಟಿಹಳ್ಳಿ, ಮಲ್ಲಹಳ್ಳಿ, ಕೋಟಹಳ್ಳಿ, ಕೆಂಪನಹಳ್ಳಿ, ಚಾಗೆ, ತಾತಹಳ್ಳಿ, ದೇವರಮಳ್ಳೂರು, ತಲದುಮ್ಮನಹಳ್ಳಿ, ಸೊಣ್ಣೇನಹಳ್ಳಿ, ಅಮ್ಮನಲ್ಲೂರು, ಬೂದಾಳ, ವೀರಾಪುರ, ಇದ್ಲೂಡು, ಕುತ್ತಾಂಡಹಳ್ಳಿ, ಹನುಮಂತಪುರ, ಹಂಡಿಗನಾಳ, ಎಲ್‌.ಮುತ್ತುಗದಹಳ್ಳಿ, ಪೆಯಿಲಹಳ್ಳಿ, ಎಲ್ಲಹಳ್ಳಿ, ಕೊಂಡೇನಹಳ್ಳಿ, ಪರಸದಿನ್ನೆ, ರಾಮಚಂದ್ರಹೊಸೂರು, ಲಕ್ಕಹಳ್ಳಿ, ಹರಳಹಳ್ಳಿ, ಹಿರೇಬಲ್ಲ, ತಾದೂರು, ಆನೂರು, ತಿಪ್ಪೇನಹಳ್ಳಿ, ತಳಗವಾರ ಮುಂತಾದ ಗ್ರಾಮಗಳಿಂದ ಭಕ್ತರು ಆಗಮಿಸಿ ಪೂಜಾ ಕೈಂಕರ್ಯದಲ್ಲಿ ಭಾಗವಹಿಸಿದ್ದರು.

ಯೋಗಿದ್ಯಾವಪ್ಪತಾತನ ಆರಾಧನಾ ಮಹೋತ್ಸವ

0

ಗೋಕಷ್ಟ ನಿವಾರಕ ಎಂದೇ ಪ್ರಸಿದ್ಧಿ ಪಡೆದಿರುವ ಯೋಗಿದ್ಯಾವಪ್ಪತಾತನ ಆರಾಧನಾ ಮಹೋತ್ಸವ ಕಾರ್ಯಕ್ರಮ ತಾಲ್ಲೂಕಿನ ದ್ಯಾವಪ್ಪನಗುಡಿಯಲ್ಲಿ ಶ್ರದ್ಧಾಭಕ್ತಿಯಿಂದ ಆಚರಿಸಲಾಗುತ್ತಿದೆ. ಮಂಗಳವಾರದಿಂದ ಪ್ರಾರಂಭವಾದ ಆರಾಧನಾ ಮಹೋತ್ಸವವು ಏಳುದಿನಗಳ ಕಾಲ ನಡೆದು ಬರುವ ಮಂಗಳವಾರ ಕೊನೆಗೊಳ್ಳಲಿದೆ.
ತಾಲ್ಲೂಕು ಸೇರಿದಂತೆ ಜಿಲ್ಲೆಯ ನಾನಾ ಭಾಗಗಳಿಂದ ಆಗಮಿಸುವ ಸಾವಿರಾರು ಭಕ್ತರು ದ್ಯಾವಪ್ಪನ ತಾತನ ಸಮಾಧಿಗೆ ತೆಂಗಿನ ಕಾಯಿ ಅರ್ಪಿಸಿ, ಪೂಜೆ ಸಲ್ಲಿಸಿ, ತುಪ್ಪದ ದೀಪ ಬೆಳಗಿ, ಉಪ್ಪು ಹಾಗೂ ಕರಿ ಕಂಬಳ ದಾರವನ್ನು ಮಂತ್ರಿಸಿಕೊಂಡು ಮನೆಗೆ ಕೊಂಡೊಯ್ಯುವುದು ರೂಢಿ . ತಾತನ ಸಮಾಧಿಗೆ ಪೂಜೆ ಸಲ್ಲಿಸಿ ಅಲ್ಲಿಂದ ತಂದ ಕುಂಕುಮವನ್ನು ಖಾಯಿಲೆ ಬಿದ್ದ ದನಕರುಗಳ ಹಣೆಗೆ ಇಟ್ಟು ಮಂತ್ರಿಸಿದ ಉಪ್ಪನ್ನು ನೀರಿನಲ್ಲಿ ಬೆರೆಸಿ ದನದ ಹೊಟ್ಟೆಗೆ ಸೇರಿಸಿದರೆ ಸಾಕು ಅದೆಂತಹ ಕಾಯಿಲೆಯಾದರೂ ಸರಿಯೆ ವಾಸಿಯಾಗುತ್ತದೆ ಎಂಬ ನಂಬುಗೆ ಜನಪದರದ್ದು.
ದೇವಸ್ಥಾನದ ಆಸುಪಾಸಿನಲ್ಲಿರುವ ಹತ್ತಾರು ಅಂಗಡಿಗಳಲ್ಲಿ ಉಪ್ಪಿನ ಪ್ಯಾಕೆಟ್, ತೆಂಗಿನ ಕಾಯಿ, ಕರಿ ಕಂಬಳ ದಾರ, ದೃಷ್ಟಿ ಬೊಟ್ಟು ದಾರದ ಭರ್ಜರಿ ವ್ಯಾಪಾರವಹಿವಾಟು ನಡೆಯುತ್ತಿದೆ. ತಮ್ಮ ದನಕರು, ರಾಸುಗಳಿಗೆ ಏನಾದರೂ ತೊಂದರೆ ಕಾಣಿಸಿಕೊಂಡಾಗ ದ್ಯಾವಪ್ಪ ತಾತನಿಗೆ ಹರಕೆ ಮಾಡಿಕೊಂಡಿದ್ದ ರೈತರು ತಾವು ಬೆಳೆದ ರಾಗಿ, ಅಕ್ಕಿ, ಬೇಳೆ, ತರಕಾರಿಗಳನ್ನು ಇಂದು ದ್ಯಾವಪ್ಪತಾತನ ಸನ್ನಿಧಿಗೆ ಅರ್ಪಿಸಿದರು. ಹೀಗೆ ಭಕ್ತರು ಸಮರ್ಪಿಸಿದ ದವಸ ಧಾನ್ಯಗಳಿಂದಲೆ ರಾಗಿ ಮುದ್ದೆ, ಹುಳಿ ಸಾರು ತಯಾರಿಸಿ ಆರಾಧನಾ ಮಹೋತ್ಸವಕ್ಕೆ ಬಂದ ಸಾವಿರಾರು ಮಂದಿಗೆ ಬಡಿಸಲಾಗುತ್ತಿದೆ.
ಆರಾಧನಾ ಮಹೋತ್ಸವದ ಅಂಗವಾಗಿ ಹಾಲು ಉಟ್ಲು ಹಾಗೂ ಕಾಯಿ ಉಟ್ಲು, ಕೋಟಹಳ್ಳಿ ಹಾಗೂ ಸುತ್ತಮುತ್ತಲ ಗ್ರಾಮಸ್ಥರಿಂದ ಪಾನಕ ಬಂಡಿ ಸೇವೆ ನಡೆಯಿತು. ಎತ್ತುಗಳ ಪರಿಷೆಯೂ ನೆರೆದಿದ್ದು ಜಿಲ್ಲೆ ಮಾತ್ರವಲ್ಲದೆ ನೆರೆಯ ಜಿಲ್ಲೆಗಳಿಂದಲೂ ನೂರಾರು ಎತ್ತುಗಳು ಬಂದಿದ್ದು, ದ್ಯಾವಪ್ಪ ತಾತನ ದೇವಾಲಯ ಸಮಿತಿಯಿಂದ ಕುಡಿಯುವ ನೀರು ಇನ್ನಿತರೆ ಎಲ್ಲ ಮೂಲ ಸೌಕರ್ಯಗಳನ್ನು ಒದಗಿಸಲಾಗಿತ್ತು. ರೈತರ ನಿತ್ಯ ಬಳಕೆಯ ವಸ್ತುಗಳಾದ ಕುಡುಗೋಲು, ಕೊಡಲಿ, ಮಚ್ಚು, ವರಾರಿ, ಜರಡಿ ಮುಂತಾದ ಹತ್ತು ಹಲವು ವಸ್ತುಗಳನ್ನು ಮಾರಾಟಕ್ಕೆ ಇಡಲಾಗಿದ್ದು, ಅವನ್ನು ರೈತರು ಕೊಳ್ಳುತ್ತಿದ್ದರು.
ಕಳೆದ ಐದು ದಶಕಗಳಿಂದಲೂ ದ್ಯಾವಪ್ಪತಾತನ ಸಮಾಧಿಗೆ ನಿತ್ಯ ನೂರಾರು ಮಂದಿ ಪೂಜೆ ಸಲ್ಲಿಸುತ್ತಿದ್ದಾರೆ. ಸಾಮಾನ್ಯ ವ್ಯಕ್ತಿಯ ಸಮಾಧಿಗೆ ನಿತ್ಯವೂ ಪೂಜೆ ನಡೆಯುತ್ತಿರುವ ಜಿಲ್ಲೆಯ ಏಕೈಕ ಸ್ಥಳವಾಗಿ ದ್ಯಾವಪ್ಪನಗುಡಿಯ ದ್ಯಾವಪ್ಪನ ಸಮಾಧಿ ಎಲ್ಲರ ಗಮನ ಸೆಳೆದಿದೆ.
ತಾಲ್ಲೂಕಿನ ಕೋಟಹಳ್ಳಿಯ ದಿ.ನಂಜಪ್ಪ ಮತ್ತು ದಿ.ಬಯ್ಯಮ್ಮ ಬಡ ರೈತ ದಂಪತಿಗಳ ಎರಡನೆ ಮಗ ದ್ಯಾವಪ್ಪ ಖಾಯಿಲೆ ಬಿದ್ದ ಜಾನುವಾರುಗಳ ಮೈದಡವಿ ನೇವರಿಸಿ ಒಂದು ನಿಮಿಷ ನಿಂತು ಏನನ್ನೋ ದ್ಯಾನಿಸುತ್ತಿದ್ದಿಂತೆಯೇ ಖಾಯಿಲೆ ಬಿದ್ದಿದ್ದ ಜಾನುವಾರು ಚೇತರಿಸಿಕೊಳ್ಳುತ್ತಿತ್ತು ಎಂದು ದ್ಯಾವಪ್ಪ ತಾತನ ಚಮತ್ಕಾರವನ್ನು ಕಣ್ಣಾರೆ ಕಂಡವರು ನೆನಪಿಸಿಕೊಳ್ಳುತ್ತಾರೆ.
ಖಾಯಿಲೆ ವಾಸಿಯಾದ ಸಂತಸಕ್ಕೆ ರೈತರು ಎಷ್ಟೆ ಹಣ ನೀಡಲು ಬಂದರೂ ಅದನ್ನು ನಿರಾಕರಿಸಿ ಕೇವಲ ನಾಲ್ಕಾಣೆ ಮಾತ್ರ ಪಡೆಯುತ್ತಿದ್ದರಂತೆ. ಹೀಗೆ ಸಂಗ್ರಹಿಸಿದ ಹಣವನ್ನು ಗೋಕುಂಟೆ ನಿರ್ಮಾಣಕ್ಕೆ ಬಳಸುತ್ತಿದ್ದರಂತೆ. ಕೋಟಹಳ್ಳಿ ಸಮೀಪದ ಅಜ್ಜಕದಿರೇನಹಳ್ಳಿ-ಗೊರಮ್ಲಿಲಹಳ್ಳಿ ಗಡಿ ಸಮೀಪ ಈಗಲೂ ಗೋಕುಂಟೆಯೊಂದಿದೆ.
ದ್ಯಾವಪ್ಪ ತಾನು ಸತ್ತ ಮೇಲೆ ತನ್ನ ಸಮಾಧಿಗೆ ಪೂಜೆ ಮಾಡಿ ರಾಸುಗಳ ಸಂಕಷ್ಟಗಳು ಪರಿಹಾರವಾಗುತ್ತೆ ಎಂದು ಜನರಿಗೆ ಹೇಳಿದ್ದರಂತೆ. 1949 ರಲ್ಲಿ ಅವರು ವಿಧಿವಶರಾದಾಗ ಅವರ ಇಚ್ಚೆಯಂತೆ ಜಯಂತಿಗ್ರಾಮದಲ್ಲಿ ಸಮಾಧಿಯನ್ನು ನಿರ್ಮಿಸಿದರು. ಆ ಸಮಾಧಿ ಇರುವ ಜಯಂತಿಗ್ರಾಮ ದ್ಯಾವಪ್ಪನಗುಡಿ ಎಂದೆ ಪ್ರಸಿದ್ದಿಪಡೆದಿದೆ.

ಮೇಲೂರಿನ ಗಂಗಾದೇವಿಯ ಜಾತ್ರಾ ಮಹೋತ್ಸವ

0

ತಾಲ್ಲೂಕಿನ ಮೇಲೂರು ಅತ್ಯಂತ ಪುರಾತನ ಗ್ರಾಮದೇವತೆ ಗಂಗಾದೇವಿಯ ಜಾತ್ರಾ ಮಹೋತ್ಸವವು ಮಂಗಳವಾರ ರಾತ್ರಿ ವಿಜೃಂಭಣೆಯಾಗಿ ಪ್ರಾರಂಭವಾಯಿತು.
ದೇವರಿಗೆ ವಿವಿಧ ಅಲಂಕಾರಗಳೊಂದಿಗೆ ಹಾಗೂ ಪೂಜೆಯೊಂದಿಗೆ ಪ್ರಾರಂಭವಾದ ಜಾತ್ರಾ ಮಹೋತ್ಸವದಲ್ಲಿ ಗಾರ್ಡಿ ಬೊಂಬೆ, ಕೀಲುಕುದುರೆ ಮತ್ತು ವಿವಿಧ ವೇಷಭೂಷಣಗಳು ವಾದ್ಯ ವೃಂದದೊಂದಿಗೆ ಗಮನಸೆಳೆದವು.
ವಾಲ್ಮೀಕಿ ಮತಸ್ಥರಿಂದ ಪ್ರತಿ ವರ್ಷ ನಡೆಸುವ ಸೊಪ್ಪಿನ ವ್ರತಕ್ಕೆ ಹಲವಾರು ಮಂದಿ ಭಕ್ತರು ಸಾಕ್ಷಿಯಾದರು. ಕೋರಿಕೆಗಳ ಬಾಯಿಬೀಗವನ್ನು ಭಕ್ತರಿಂದ ನಡೆಸಲಾಯಿತು.
ಅಮ್ಮನವರ ದೀಪೋತ್ಸವಕ್ಕೆ ಸುತ್ತಮುತ್ತಲಿನ ಗ್ರಾಮಗಳಾದ ಕೇಶವಾರ, ಹಂಡಿಗನಾಳ, ಮಳ್ಳೂರು, ಕಂಬದಹಳ್ಳಿ, ಚೌಡಸಂದ್ರ, ಗಂಗನಹಳ್ಳಿ ಮುಂತಾದೆಡೆಯಿಂದ ನೂರಾರು ಮಂದಿ ಗ್ರಾಮಸ್ಥರು ಆಗಮಿಸಿದ್ದರು.
ಒಂಬತ್ತು ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸವವು ಮಂಗಳವಾರ ವಾಲ್ಮೀಕಿ ಮತಸ್ಥರಿಂದ ಗಂಗಾದೇವಿಗೆ ಬೇವಿನ ಸೊಪ್ಪಿನ ತೇರನ್ನು ರಚಿಸುವುದರ ಮೂಲಕ ಮೊದಲಾಯಿತು. ಬೇವಿನ ಮರದಲ್ಲಿ ಪುಟ್ ರಥವನ್ನು ತಯಾರಿಸಿ ಅದನ್ನು ಬೇವಿನ ಸೊಪ್ಪಿನಿಂದ ಅಲಂಕರಿಸಿ ದೇವಿಗೆ ಮುದ್ದೆ ಮತ್ತು ಸೊಪ್ಪಿನ ಸಾರನ್ನು ಎಡೆಯಾಗಿ ಇರಿಸಿಕೊಂಡು, ರಥವನ್ನೆಲ್ಲಾ ಗ್ರಾಮದಲ್ಲಿ ಮೆರವಣಿಗೆ ಮಾಡುತ್ತಾ ದೇವಾಲಯದ ಬಳಿಗೆ ತರಲಾಯಿತು. ಇದು ಸುಮಾರು ಮುನ್ನೂರು ವರ್ಷಗಳಿಗೂ ಹಿಂದಿನ ಆಚರಣೆಯಾಗಿದ್ದು, ತಪ್ಪದೆ ನಡೆಸಿಕೊಂಡು ಬರುತ್ತಿರುವುದಾಗಿ ಗ್ರಾಮಸ್ಥರು ಹೇಳುತ್ತಾರೆ. ಗ್ರಾಮಸ್ಥರು ಬೇವಿನಸೊಪ್ಪಿನ ತೇರನ್ನು ಗ್ರಾಮದಲ್ಲೆಲ್ಲಾ ಮೆರವಣಿಗೆ ಮಾಡಿದಾಗ ವಾದ್ಯವೃಂದ, ಗಾರಡಿಬೊಂಬೆ ವಿಶೇಷ ಆಕರ್ಷಣೆಯಾಗಿತ್ತು. ರಾತ್ರಿ ನಡೆದ ಪೂಜಾ ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಭಾಗಿಯಾದರು. ನಂತರ ಗ್ರಾಮದಲ್ಲಿ ಏರ್ಪಡಿಸಲಾಗಿದ್ದ ವಾದ್ಯಗೋಷ್ಠಿಯು ಎಲ್ಲರನ್ನೂ ಮನರಂಜಿಸಿತು. ಈ ಸಂದರ್ಭದಲ್ಲಿ ದೇವಾಲಯದಲ್ಲಿ ಗಂಗಾದೇವಿಯನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು.
ಬುಧವಾರ ಬೆಳಗಿನ ಜಾವ ದೀಪಾರತಿಗಳು ನಡೆದವು. ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ್ದ ನೂರಾರು ಮಹಿಳೆಯರು ತಂಬಿಟ್ಟು ದೀಪಗಳನ್ನು ತಂದು ದೇವಿಗೆ ಬೆಳಗಿ ಪೂಜೆ ಸಲ್ಲಿಸಿದರು. ವಿವಿಧ ಗ್ರಾಮಗಳಿಂದ ಆಗಮಿಸಿದ ಭಕ್ತರಿಗೆ ಮೇಲೂರಿನ ಗ್ರಾಮಸ್ಥರು ಸ್ವಾಗತವನ್ನು ಕೋರಿ, ಮಜ್ಜಿಗೆ, ಪಾನಕ ಮತ್ತು ಹೆಸರುಬೇಳೆ ನೀಡಿ ಸತ್ಕರಿಸಿದುದು ಗ್ರಾಮಗಳ ನಡುವಿನ ಭಾವೈಕ್ಯತೆಯನ್ನು ಸಾರಿತು.
‘ನಮ್ಮ ಮೇಲೂರು ಗ್ರಾಮದ ಅಧಿದೇವತೆ ಗಂಗಮ್ಮ ತಾಯಿಯು ಮಳೆ ಬೆಳೆಯನ್ನು ನೀಡಿ ಶಾಂತಿ ನೆಮ್ಮದಿಯನ್ನು ಕರುಣಿಸಲೆಂದು ಪ್ರತಿವರ್ಷ ಜಾತ್ರೆಯನ್ನು ವಿಜೃಂಭಣೆಯಿಂದ ಆಚರಿಸುತ್ತೇವೆ. ಸುತ್ತಲಿನ ಹಲವಾರು ಗ್ರಾಮಗಳಿಂದ ಆಗಮಿಸುವ ಭಕ್ತರು ಪೂಜೆಯಲ್ಲಿ ಪಾಲ್ಗೊಳ್ಳುತ್ತಾರೆ. ಮಂಗಳವಾರ ಬ್ರಹ್ಮರಥೋತ್ಸವವನ್ನು ಆಚರಿಸುತ್ತೇವೆ. ನಮ್ಮ ಗ್ರಾಮಗಳಿಂದ ಬೇರೆ ಊರುಗಳಿಗೆ ಮದುವೆಯಾಗಿ ಹೋಗಿರುವ ಹೆಣ್ಣುಮಕ್ಕಳು ತಮ್ಮ ತವರುಮನೆಗೆ ಬಂದು ಅಮ್ಮನವರ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ’ ಎಂದು ಮೇಲೂರಿನ ಶ್ರೀನಿವಾಸ್ ತಿಳಿಸಿದರು.

ಶ್ರೀ ವೀರಾಂಜನೇಯ ಸ್ವಾಮಿ ದೇವಾಲಯದಲ್ಲಿ 87ನೇ ವರ್ಷದ ಉಟ್ಲು ಪರಿಷೆ

0

ಶ್ರೀ ರಾಮನವಮಿಯ ಪ್ರಯುಕ್ತ ಪಟ್ಟಣದ ಚಿಂತಾಮಣಿ ರಸ್ತೆಯಲ್ಲಿರುವ ಶ್ರೀವೀರಾಂಜನೇಯ ದೇವಾಲಯದಲ್ಲಿ 87ನೇ ವರ್ಷದ ಉಟ್ಲು ಪರಿಷೆ ನಡೆಯಿತು. ಕ್ಷೀರ ಉಟ್ಲು ಮತ್ತು ಮನರಂಜನಾ ಉಟ್ಲುಗಳನ್ನು ವೀರಾಂಜನೇಯಸ್ವಾಮಿ ಬಲಿಜ ಸೇವಾ ಟ್ರಸ್ಟ್ ಮತ್ತು ಮಹಿಳಾ ಮಂಡಳಿಯವರು ಆಯೋಜಿಸಿದ್ದರು. ಮಕ್ಕಳು, ಮಹಿಳೆಯರು ಸೇರಿದಂತೆ ನೂರಾರು ಜನರು ಮನರಂಜನಾ ಉಟ್ಲು ವೀಕ್ಷಿಸಿ ಆನಂದಿಸಿದರು.
ಮೊದಲು ಕ್ಷೀರ ಉಟ್ಲು ಕಾರ್ಯಕ್ರಮದಲ್ಲಿ ಹಾಲನ್ನು ಮಡಿಕೆಯಲ್ಲಿ ಕಟ್ಟಿ ಪೂಜಿಸಿ ಒಡೆದರು. ನಂತರ ನಡೆಯುವ ಮನರಂಜನಾ ಉಟ್ಲು ಜನಾಕರ್ಷಣೆಯ ಕೇಂದ್ರ ಬಿಂದು. ಎತ್ತರದ ಕಂಬದ ಮೇಲೆ ಕಬ್ಬಿಣದಲ್ಲಿ ಮಾಡಿರುವ ತಿರುಗುಮಣೆ ಇರುತ್ತದೆ. ಅದಕ್ಕೆ ನಾಲ್ಕು ಹಗ್ಗಗಳನ್ನು ಕಟ್ಟಿರುತ್ತಾರೆ. ಹಗ್ಗದ ತುದಿಯಲ್ಲಿ ತೆಂಗಿನಕಾಯಿ ಕಟ್ಟಿರುತ್ತಾರೆ. ತಿರುಗುಮಣೆಯಲ್ಲಿ ಇಬ್ಬರು ಕುಳಿತು ತಿರುಗಿಸುತ್ತಿದ್ದಂತೆಯೇ ತೆಂಗಿನಕಾಯಿ ಕಟ್ಟಿರುವ ಹಗ್ಗವೂ ಸುತ್ತತೊಡಗುತ್ತವೆ. ಉದ್ದುದ್ದದ ಕೋಲು ಹಿಡಿದು ಈ ತೆಂಗಿನಕಾಯಿಯನ್ನು ಹೊಡೆಯಲು ಇಬ್ಬರು ನಿಂತಿರುತ್ತಾರೆ. ಅವರು ತೆಂಗಿನಕಾಯಿಗೆ ಹೊಡೆಯದಂತೆ ಅವರೆಡೆಗೆ ಸುತ್ತಲಿಂದ ನೀರನ್ನು ಎರಚುತ್ತಿರುತ್ತಾರೆ. ಈ ಆಟ ನೋಡುವ ಜನ ಹೊಡೆಯಲು ಕೂಗುತ್ತಾ ಹುರಿದುಂಬಿಸುತ್ತಾರೆ. ತೆಂಗಿನ ಕಾಯಿ ಹೊಡೆದ ವೀರನಿಗೆ ಹಾರಹಾಕಿ ದೇವಾಲಯದಲ್ಲಿ ಗೌರವಿಸಿದರು.

ತಾಲ್ಲೂಕಿನಾದ್ಯಂತ ವಿವಿಧ ರಾಮ ದೇವಾಲಯಗಳಲ್ಲಿ ಶ್ರೀ ರಾಮ ನವಮಿ ಆಚರಣೆ

0

ತಾಲ್ಲೂಕಿನಾದ್ಯಂತ ಶ್ರೀರಾಮನವಮಿಯನ್ನು ವಿವಿಧ ರಾಮ ದೇವಾಲಯಗಳಲ್ಲಿ ವಿಶೇಷ ಪೂಜೆಸಲ್ಲಿಸಿ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಜಂಗಮಕೋಟೆ, ನಾಗಮಂಗಲ, ಚೌಡಸಂದ್ರ, ಅಪ್ಪೇಗೌಡನಹಳ್ಳಿ ಗೇಟ್‌, ಸಾದಲಿ, ದಿಬ್ಬೂರಹಳ್ಳಿ,ಮೇಲೂರು, ಹುಣಸೇನಹಳ್ಳಿ ಸ್ಟೇಷನ್‌, ಎಚ್‌.ಕ್ರಾಸ್‌, ಮಳಮಾಚನಹಳ್ಳಿ ಮುಂತಾದೆಡೆ ದೇವಾಲಯಗಳಲ್ಲಿವಿಶೇಷ ಪೂಜೆಗಳನ್ನು ನಡೆಸಿ ಭಕ್ತರಿಗೆ ಸೌತೆಕಾಯಿ ಹೆಸರುಬೇಳೆ ಮತ್ತು ಪಾನಕವನ್ನು ವಿತರಿಸಿದರು.
ಪಟ್ಟಣದ ಕೋಟೆ ವೃತ್ತದ ಶ್ರೀರಾಮ ದೇವಾಲಯ, ಉಲ್ಲೂರುಪೇಟೆಯ ಭಜನೆ ಮಂದಿರ ಹಾಗೂಚಿಂತಾಮಣಿ ರಸ್ತೆಯಲ್ಲಿರುವ ವೀರಾಂಜನೇಯಸ್ವಾಮಿ ದೇವಾಲಯಗಳಲ್ಲಿ ರಾಮನವಮಿಯ ಪ್ರಯುಕ್ತಪೂಜಾಕಾರ್ಯಕ್ರಮಗಳು ನಡೆದವು.
ಚಿಂತಾಮಣಿ ರಸ್ತೆಯಲ್ಲಿರುವ ವೀರಾಂಜನೇಯಸ್ವಾಮಿ ದೇವಾಲಯದಲ್ಲಿ ಸೀತಾ ರಾಮ ಲಕ್ಷ್ಮಣಆಂಜನೇಯಸ್ವಾಮಿ ಮತ್ತು ವೀರಾಂಜನೇಯಸ್ವಾಮಿ ನೂತನ ಉತ್ಸವ ವಿಗ್ರಹಗಳ ಪ್ರಾಣಪ್ರತಿಷ್ಠಾಪಿಸಿ ಕುಂಭಾಭಿಷೇಕವನ್ನು ನಡೆಸಲಾಯಿತು. ವೀರಾಂಜನೇಯಸ್ವಾಮಿಗೆ ಅಭಿಷೇಕ, ಪೂಜೆ, ದ್ರಾಕ್ಷಿ ಗೋಡಂಬಿ ವಿಶೇಷ ಅಲಂಕಾರ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ನಡೆಯಿತು. ಸೀತಾರಾಮ ಕಲ್ಯಾಣೋತ್ಸವಕ್ಕೆ ನೂರಾರು ಜನರು ಸಾಕ್ಷಿಯಾದರು. ಉಟ್ಲು ಕಂಬದ ಪೂಜೆ, ಕ್ಷೀರ ಉಟ್ಲು ಮಹೋತ್ಸವಹಾಗೂ ಮನರಂಜನಾ ಉಟ್ಲೋತ್ಸವವನ್ನು ನಡೆಸಿದರು.


ದೇಶದಪೇಟೆಯ ಶೆಟ್ಟಪ್ಪನವರ ಎಸ್.ರವಿ ಅವರ ಮನೆಯಲ್ಲಿ ಪೈರುಹಬ್ಬ

0

ಯುಗಾದಿಯಾದ ಒಂಬತ್ತನೇ ದಿನ ಆಚರಿಸುವ ರೈತರ ಹಬ್ಬವಾದ ಪೈರುಹಬ್ಬವನ್ನು ಸೋಮವಾರ ಪಟ್ಟಣದ ದೇಶದಪೇಟೆಯಲ್ಲಿರುವ ಶೆಟ್ಟಪ್ಪನವರ ಎಸ್.ರವಿ ಅವರ ಮನೆಯಲ್ಲಿ ಆಚರಿಸಲಾಯಿತು.
ಯುಗಾದಿಯ ದಿನ ದೇವಾಲಯದಲ್ಲಿ ಬೇವು, ಬೆಲ್ಲ ಹಂಚಿ ಬಂದು ಮನೆಯಲ್ಲಿ ಅವರೆ, ಜೋಳ, ರಾಗಿ, ಹುರುಳಿ, ಹಲಸಂದಿ ಇತ್ಯಾದಿ ಧಾನ್ಯಗಳನ್ನು ಮಣ್ಣು ಮತ್ತು ಗೊಬ್ಬರದಲ್ಲಿ ಬೆರೆಸಿ ಇಡುತ್ತಾರೆ. ಜೊತೆಯಲ್ಲಿ ನೇಗಿಲನ್ನು ಇಟ್ಟು ಪೂಜಿಸಲಾಗುತ್ತದೆ. ರೈತರಿಗೆ ನೇಗಿಲು ಪೂಜನೀಯವಾದುದು. ಒಂಬತ್ತು ದಿನಗಳು ಪೂಜಿಸಿದ ಪೈರನ್ನು ಒಂಬತ್ತನೇ ದಿವಸ ಶ್ರೀರಾಮನವಮಿಯಂದು ತಮ್ಮ ಜಮೀನಿನಲ್ಲಿ ನೀರು ಹರಿಯುವೆಡೆ ಬಿಡುತ್ತಾರೆ. ನಂತರ ಈ ನೇಗಿಲಿನಿಂದ ಉಳುತ್ತಾರೆ.
pairu habba‘ಮನೆಯಲ್ಲಿ ಪೈರು ಎಷ್ಟು ಚೆನ್ನಾಗಿ ಬೆಳೆದಿದ್ದರೆ ತಮ್ಮ ಜಮೀನಿನಲ್ಲಿ ಫಸಲು ಅಷ್ಟು ಚೆನ್ನಾಗಿ ಬರುವುದೆಂಬ ನಂಬಿಕೆ ರೈತರದು. ಈಗ ಟ್ರಾಕ್ಟರ್‌ಮತ್ತು ಟಿಲ್ಲರ್‌ಗಳ ಕಾಲ. ಹಾಗಾಗಿ ಈ ಹಬ್ಬವನ್ನು ಆಚರಿಸುವವರೇ ಕಡಿಮೆಯಾಗಿದ್ದಾರೆ. ಮೊದಲು ದೊಡ್ಡ ನೇಗಿಲನ್ನೇ ಪೂಜೆಗೆ ಇಡುತ್ತಿದ್ದವರು ನಂತರ ಸಾಂಕೇತಿಕವಾಗಿ ಜಾಲಿಮರದ ತುಂಡನ್ನು ಇಡಲು ಪ್ರಾಂಭಿಸಿದ್ದಾರೆ. ನಾವು ಮಾತ್ರ ಉತ್ತಮ ಜಾಲಿ ಮರದಲ್ಲಿ ಪ್ರತಿ ವರ್ಷ ಹೊಸ ನೇಗಿಲನ್ನು ಮಾಡಿಸಿ ಪೂಜಿಸಿ ನಂತರ ಉಳುಮೆ ಪ್ರಾರಂಭಿಸುತ್ತೇವೆ. ಆದರೂ ಈಗಲೂ ಹಳ್ಳಿಗಳಲ್ಲಿ ನೇಗಿಲನ್ನೇ ಇಟ್ಟು ಪೂಜಿಸುವರು ಕೂಡ ಇದ್ದಾರೆ’ ಎನ್ನುತ್ತಾರೆ ಶೆಟ್ಟಪ್ಪನವರ ಎಸ್.ರವಿ.

ಷರಾಫ್‌ ರಸ್ತೆಯ ಪ್ರತಾಪ್ ಸ್ವೀಟ್ಸ್‌

0

ಶಿಡ್ಲಘಟ್ಟದ ಷರಾಫ್‌ ರಸ್ತೆಯ ಅರಳಿಕಟ್ಟೆಯ ಪಕ್ಕದ ‘ಪ್ರತಾಪ್ ಸ್ವೀಟ್ಸ್‌’ ಎಂದೊಡನೆ ಬಾಯಲ್ಲಿ ನೀರೂರುತ್ತದೆ. ಸಂಜೆ 6 ಗಂಟೆಯ ನಂತರವಷ್ಟೆ ತೆರೆಯುವ ಈ ತಿನಿಸಿನ ದುಖಾನಿನಲ್ಲಿ ಸಿಗುವ ಖಾದ್ಯಗಳು ವೈವಿಧ್ಯಮಯ. ತೈರೊಡೆ, ಆಲೂಗಡ್ಡೆಬೋಂಡ, ಕ್ಯಾಪ್ಸಿಕಮ್‌, ಈರುಳ್ಳಿಬೋಂಡ, ಮೆಣಸಿನಕಾಯಿ ಬಜ್ಜಿ, ವಿವಿಧ ರೀತಿಯ ಹಲ್ವಾಗಳು, ಜಾಮೂನ್‌, ಚಮ್‌ಚಮ್‌, ಮಿಕ್ಸ್‌ಚರ್‌ ಇತ್ಯಾದಿ. ಎಲ್ಲಕ್ಕಿಂತ ಮಿಗಿಲಾಗಿ ಗ್ರಾಹಕರನ್ನು ಅತಿಥಿಗಳಂತೆ ಮಾತನಾಡಿಸುವುದು ಪ್ರತಾಪ್‌ ಅವರ ವಿಶೇಷ ಗುಣ.

ಉಲ್ಲೂರುಪೇಟೆಯ ಶ್ರೀರಾಮ ಭಜನೆ ಮಂದಿರದಲ್ಲಿ ಸೀತಾ ರಾಮಚಂದ್ರರ ತಿರುಕಲ್ಯಾಣೋತ್ಸವ

0

ಶಿಡ್ಲಘಟ್ಟದ ಉಲ್ಲೂರುಪೇಟೆಯ ಶ್ರೀರಾಮ ಭಜನೆ ಮಂದಿರದಲ್ಲಿ ಭಾನುವಾರ ಮೂರನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಸೀತಾ ರಾಮಚಂದ್ರರ ತಿರುಕಲ್ಯಾಣೋತ್ಸವವನ್ನು ಶ್ರದ್ಧಾಭಕ್ತಿಯಿಂದ ಆಚರಿಸಿದರು.
ಜಯನಾಮ ಸಂವತ್ಸರ ಚೈತ್ರ ಮಾಸ ಶುದ್ಧ ಸಪ್ತಮಿ ಭಾನುವಾರ ಬೆಳಿಗ್ಗೆ ಸೀತಾ ರಾಮರಿಗೆ ಸುಪ್ರಭಾತ, ದೇವತಾ ಪ್ರಾರ್ಥನೆ, ಭಗವತ್‌ ವಾಸುದೇವ ಪುಣ್ಯಾಹ, ಕಲಶಸ್ಥಾಪನೆ, ಪೂಜೆ, ಅವಭೃತ ಸ್ನಾನ, ಅಲಂಕಾರ, ಮಹೋತ್ಸವ ಹೋಮವನ್ನು ನಡೆಸಲಾಯಿತು. ಮಧ್ಯಾಹ್ನ ನಡೆದ ಸ್ವಾಮಿಯವರ ಕಲ್ಯಾಣ ಮಹೋತ್ಸವದಲ್ಲಿ ಅಷ್ಟೋತ್ತರ, ಅಷ್ಟಾವಧಾನ ಸೇವೆ, ಮಂಗಳರಾಗಾಲಾಪನೆ, ಮಹಾಮಂಗಳಾರತಿ, ತೀರ್ಥಪ್ರಸಾದವನ್ನು ವಿನಿಯೋಗಿಸಲಾಯಿತು.
ಪ್ರಧಾನ ಅರ್ಚಕ ಸತ್ಯಪ್ರಕಾಶ್‌ ಹಾಗೂ ಶ್ರೀರಾಮ ಭಜನೆ ಮಂದಿರದ ಕಾರ್ಯಕಾರಿ ಸಮಿತಿ ಹಾಗೂ ಭಕ್ತಮಂಡಳಿ ನೇತೃತ್ವದಲ್ಲಿ ನಡೆದ ಕಲ್ಯಾಣೋತ್ಸವದಲ್ಲಿ ನೂರಾರು ಮಂದಿ ಭಕ್ತರು ಭಾಗವಹಿಸಿದ್ದರು.

ನ್ಯಾಯಾಧೀಶರಾಗಿ ಆಯ್ಕೆಯಾದ ಬಿ.ಎನ್.ರಮೇಶ್‌ಬಾಬುರವರಿಗೆ ಸನ್ಮಾನ

0

ಶಿಡ್ಲಘಟ್ಟದ ಜೆಎಂಎಫ್‌ಸಿ ನ್ಯಾಯಾಲಯದ ಸಭಾಂಗಣದಲ್ಲಿ ಶನಿವಾರ ನ್ಯಾಯಾಧೀಶರಾಗಿ ಆಯ್ಕೆಯಾದ ಬಿ.ಎನ್.ರಮೇಶ್‌ಬಾಬುರವರನ್ನು ತಾಲ್ಲೂಕು ವಕೀಲರ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಎಸ್.ಮಹೇಶ್‌, ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶರಾದ ವಿಜಯದೇವರಾಜ ಅರಸ್‌, ಹಿರಿಯ ಶ್ರೇಣಿ ನ್ಯಾಯಾಧೀಶರಾದ ಎನ್‌.ಶೀಲಾ, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎಂ.ಪಾಪಿರೆಡ್ಡಿ ಹಾಜರಿದ್ದು ರಮೇಶ್‌ಬಾಬುರವರು ವಕೀಲರಾಗಿ ಕಾರ್ಯನಿರ್ವಹಿಸುತ್ತಿದ್ದಾಗ ಅವರ ಸ್ವಭಾವ, ಕಾರ್ಯವೈಖರಿ, ಸ್ನೇಹಶೀಲತೆ ಹಾಗೂ ವೃತ್ತಿಪರತೆಯನ್ನು ಕೊಂಡಾಡಿದರು. ಗ್ರಾಮಾಂತರ ಪ್ರದೇಶವಾದ ತಾಲ್ಲೂಕಿನ ಬಚ್ಚಹಳ್ಳಿ ಮೂಲದವರಾಗಿದ್ದು, ತಾಲ್ಲೂಕಿನಲ್ಲಿ ನ್ಯಾಯಾಲಯ ಪ್ರಾರಂಭವಾದಾಗಿನಿಂದ ನ್ಯಾಯಾಧೀಶರಾಗಿ ಆಯ್ಕೆಯಾದ ಪ್ರಪ್ರಥಮ ವ್ಯಕ್ತಿಯಾಗಿ ದಾಖಲೆ ನಿರ್ಮಿಸಿ ಮಾದರಿಯಾಗಿದ್ದಾರೆಂದು ಪ್ರಶಂಸಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಬಿ.ಎನ್.ರಮೇಶ್‌ಬಾಬು, ನ್ಯಾಯಾಧೀಶನಾಗಿ ಆಯ್ಕೆಯಾದ ಕೀರ್ತಿ ನನ್ನೊಬ್ಬನಿಗೆ ಸಲ್ಲುವುದಿಲ್ಲ. ಅದು ನಮ್ಮ ಹೆತ್ತವರು, ನನ್ನ ಸಹಪಾಠಿಗಳು, ಹಿರಿಯ ವಕೀಲರು ಹಾಗೂ ಸ್ಥಳೀಯ ನ್ಯಾಯಾಲಯದ ನ್ಯಾಯಾಧೀಶರು, ಸಿಬ್ಬಂದಿ ಸೇರಿದಂತೆ ನನಗೆ ಸಹಕರಿಸಿದ ಪ್ರೋತ್ಸಾಹಿಸಿದ ಹಾಗೂ ಮಾರ್ಗದರ್ಶನ ಮಾಡಿದ ಎಲ್ಲರಿಗೂ ಸಲ್ಲುತ್ತದೆ. ಅವರು ನ್ಯಾಯಾಧೀಶರ ಪರೀಕ್ಷೆಯನ್ನು ತೆಗೆದುಕೊಂಡು ಹೆಚ್ಚಿನ ಅಂಕಗಳಿಸಿ ಆಯ್ಕೆಯಾಗುವ ಪ್ರತಿ ಹಂತದಲ್ಲೂ ಸಹಕಾರ ನೀಡಿ, ಪ್ರೋತ್ಸಾಹಿಸಿದ ಎಲ್ಲರನ್ನೂ ನೆನಪಿಸಿಕೊಂಡರು.
ಈ ಸಮಾಜದಲ್ಲಿ ಜನರು ದೇವಾಲಯದಲ್ಲಿ ಹಾಗೂ ನ್ಯಾಯಾಲಯದಲ್ಲಿ ಮಾತ್ರವೇ ಕೈ ಮುಗಿದು ನಿಲ್ಲುತ್ತಾರೆ. ಅಂತಹ ಪವಿತ್ರವಾದ ನ್ಯಾಯಾಲಯದಲ್ಲಿ ನ್ಯಾಯದಾನ ನೀಡುವಂತ ಪವಿತ್ರ ಸ್ಥಾನ ನಿಮ್ಮದೆನ್ನುವ ಅರಿವು ಸದಾ ಜಾಗೃತರಾಗಿರಲಿ. ಹಿರಿಯರಿಗೆ ಗೌರವ ಕೊಡಿ, ಸಿಬ್ಬಂದಿಗೂ ಮರ್ಯಾದೆ ನೀಡಿ, ಮಹಿಳಾ ಸಿಬ್ಬಂದಿಯನ್ನು ಮಾನವೀಯತೆಯ ನೆಲಗಟ್ಟಿನಲ್ಲಿ ನೋಡಿ. ಆದರೆ ನ್ಯಾಯದಾನ ಮಾಡುವಾಗ ಮಾತ್ರ ನ್ಯಾಯ ಧರ್ಮವನ್ನಷ್ಟೆ ಪಾಲಿಸಿ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಎಸ್.ಮಹೇಶ್‌ ಈ ಸಂದರ್ಭದಲ್ಲಿ ಕಿವಿ ಮಾತು ಹೇಳಿದರು.
ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶರಾದ ವಿಜಯದೇವರಾಜ ಅರಸ್‌, ಹಿರಿಯ ಶ್ರೇಣಿ ನ್ಯಾಯಾಧೀಶರಾದ ಎನ್‌.ಶೀಲಾ, ತಾಲ್ಲೂಕು ವಕೀಲರ ಸಂಘದ ಕಾರ್ಯದರ್ಶಿ ಬೈರಾರೆಡ್ಡಿ, ವಕೀಲರಾದ ಶ್ರೀನಾಥ್‌, ಸತ್ಯನಾರಾಯಣ ಬಾಬು, ಅಶೋಕ್‌, ಈ.ನಾರಾಯಣಪ್ಪ, ಕೆ.ಮಂಜುನಾಥ್‌, ಎಂ.ಬಿ.ಲೋಕೇಶ್‌, ಬಿ.ಕೆ.ವೆಂಕಟೇಶ್‌, ವಿ.ಸುಬ್ರಮಣ್ಯಪ್ಪ, ಲಕ್ಷ್ಮಿ, ವೀಣಾ, ನಾಗಮಣಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

error: Content is protected !!