Sidlaghatta, Chikkaballapur : ಶಿಡ್ಲಘಟ್ಟ ತಾಲ್ಲೂಕಿನ ಹಂಡಿಗನಾಳದ ಶ್ರೀವೀರಣ್ಣಸ್ವಾಮಿ–ಶ್ರೀಕೆಂಪಣ್ಣಸ್ವಾಮಿ ದೇವಾಲಯದಲ್ಲಿ ಕೆವಿ ಟ್ರಸ್ಟ್ ವತಿಯಿಂದ ಆಯೋಜಿಸಲಾದ ಅಮಾವಾಸ್ಯೆ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಜಸ್ಟಿಸ್ ಗೋಪಾಲಗೌಡರು, ದೇಶದ ಕೃಷಿ ಪರಿಸ್ಥಿತಿ ಮತ್ತು ಸರ್ಕಾರಗಳ ನಿರ್ಲಕ್ಷ್ಯ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ದೇಶದ 60% ಜನರು ಕೃಷಿಯಲ್ಲಿ ನಿರ್ವಹಿಸುತ್ತಿದ್ದಾರೆ, ಸರ್ಕಾರಗಳು ರೈತರಿಗೆ ಕೊಡಬೇಕಾದ ಮಾನ್ಯತೆ, ಆದ್ಯತೆ ಮತ್ತು ರಕ್ಷಣೆಯನ್ನು ನೀಡುವುದಿಲ್ಲ. “ರೈತರು ದೇಶದ ಬೆನ್ನೆಲುಬು ಎನ್ನುವುದು ಕೇವಲ ಮಾತು—ಕಾರ್ಯದಲ್ಲಿ ಕಾಣುವುದಿಲ್ಲ” ಎಂದು ಅವರು ವಿಷಾದ ವ್ಯಕ್ತಪಡಿಸಿದರು.
“ಯುವಕರು ಪ್ರಶ್ನಿಸುವ ಧೈರ್ಯ ಬೆಳೆಸಿಕೊಳ್ಳಬೇಕು”
ನ್ಯಾಯಮೂರ್ತಿಗಳು ಸಮಾಜಕ್ಕೆ ಯುವಕರ ಪಾತ್ರವನ್ನು ಎತ್ತಿ ಹೇಳಿದರು. ಅನ್ಯಾಯ ಎದುರಿಸಿದಾಗ ಪ್ರಶ್ನಿಸುವ ಮನೋಭಾವ ಬೆಳೆಸಬೇಕು ಎಂದು ಸಲಹೆ ನೀಡಿದರು. “ಮಕ್ಕಳನ್ನು ಕಷ್ಟ–ಕಾರ್ಪಣ್ಯಗಳಿಂದ ದೂರ ಇಡುವುದರಿಂದ ಸಮಾಜ ಅರಿವಿಲ್ಲದ ಪೀಳಿಗೆ ಬೆಳೆದು ಬರುತ್ತಿದೆ” ಎಂದರು.
ಮಹಿಳೆಯರು, ರೈತರಿಗೆ ನ್ಯಾಯ ಕೇವಲ ಮಾತಲ್ಲಿ
ಸಮಾಜದಲ್ಲಿ ರೈತರು ಹಾಗೂ ಮಹಿಳೆಯರ ಸಮಸ್ಯೆಗಳು ಮಾತನಾಡುವ ಮಟ್ಟಕ್ಕಷ್ಟೇ ಸೀಮಿತವಾಗಿವೆ, ನಿಜವಾದ ಕಾಳಜಿ ಹಾಗೂ ವ್ಯವಸ್ಥೆಗಳು ಇನ್ನೂ ಬಲವಾಗಿಲ್ಲ ಎಂದು ಅವರು ಗಂಭೀರವಾಗಿ ಪ್ರಶ್ನಿಸಿದರು.
“ಶುದ್ಧ ಕುಡಿಯುವ ನೀರು ಕೂಡ ಸರ್ಕಾರ ನೀಡಿಲ್ಲ…”
ಸ್ವಾತಂತ್ರ್ಯಕ್ಕೆ 75 ವರ್ಷ ಕಳೆದರೂ ನಾಗರಿಕರಿಗೆ ಉಚಿತ ಶುದ್ಧ ಕುಡಿಯುವ ನೀರನ್ನು ನೀಡಲು ಸರ್ಕಾರಗಳು ವಿಫಲವಾಗಿವೆ ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಬೆಂಗಳೂರಿನ ಕುಡಿಯುವ ನೀರು ಹಾಗೂ ಕೋಲಾರ–ಚಿಕ್ಕಬಳ್ಳಾಪುರ ಕೃಷಿ ನೀರಾವರಿಗಾಗಿ ಕೃಷ್ಣಾ ನದಿ ನೀರನ್ನು ಹರಿಸುವ ಮನವಿಗೆ ಆಂಧ್ರ ಸರ್ಕಾರ ತಾತ್ವಿಕವಾಗಿ ಒಪ್ಪಿದೆ ಎಂದು ಗೋಪಾಲಗೌಡರು ತಿಳಿಸಿದರು.
ಈ ಬಗ್ಗೆ ಆಂಧ್ರದ ಡೆಪ್ಯೂಟಿ ಸಿಎಂ ಪವನ್ ಕಲ್ಯಾಣ್ ಹಾಗೂ ಕೇಂದ್ರ ಸಚಿವ ಸೋಮಣ್ಣ ಮುಖಾಂತರ ಚರ್ಚೆ ನಡೆದಿದ್ದು, ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಒಪ್ಪಿಗೆ ಸೂಚಿಸಿದ್ದಾರೆ ಎಂದು ಅವರು ವಿವರಿಸಿದರು.
“ಶಿಕ್ಷಣ ಮಾತ್ರ ಸಾಲದು… ಸಂಸ್ಕಾರ ಬೇಕು”
ಮಕ್ಕಳಿಗೆ ಉನ್ನತ ಶಿಕ್ಷಣದ ಜೊತೆಗೆ ದೇಶಾಭಿಮಾನ, ಸಂಸ್ಕಾರ, ಸಮಾಜ ಸೇವೆ ಎಂಬ ಮೌಲ್ಯಗಳನ್ನು ಕಲಿಸುವುದು ಪೋಷಕರ ಜವಾಬ್ದಾರಿ ಎಂದು ಹೇಳಿದರು.
ಅಮಾವಾಸ್ಯೆ ಪೂಜೆಯ ನಂತರ ಟ್ರಸ್ಟ್ ವತಿಯಿಂದ ವಿಶೇಷ ದೀಪಾರತಿ ನಡೆಯಿತು. ಹಿರಿಯರಿಗೆ ಹಾಗೂ ಮಾದರಿ ಕೃಷಿ ನಡೆಸುತ್ತಿರುವ ಹಾರೋಹಳ್ಳಿಯ ಸುಷ್ಮಾ–ಚನ್ನಕೇಶವ ದಂಪತಿಗಳಿಗೆ ಸನ್ಮಾನ ಮಾಡಲಾಯಿತು.
Sidlaghatta, Chikkaballapur : ಜಂಗಮಕೋಟೆ ಹೋಬಳಿಯ 13 ಹಳ್ಳಿಗಳಲ್ಲಿ ಭೂಸ್ವಾಧೀನ ವಿಷಯಕ್ಕೆ ಸಂಬಂಧಿಸಿದಂತೆ ತಮ್ಮ ಹಕ್ಕೊತ್ತಾಯಗಳನ್ನು ಈಡೇರಿಸುವಂತೆ ಒತ್ತಾಯಿಸಿ, ನವೆಂಬರ್ 23ರಿಂದ ಜಿಲ್ಲಾಧಿಕಾರಿ ಕಚೇರಿಯ ಮುಂದೆ ಅನಿರ್ದಿಷ್ಟ ಕಾಲದ ಧರಣಿಗೆ ರೈತರು ನಿರ್ಧರಿಸಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಸಾಮೂಹಿಕ ನಾಯಕತ್ವ) ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಪ್ರತೀಶ್ ತಿಳಿಸಿದ್ದಾರೆ.
ನಗರದ ಪತ್ರಕರ್ತರ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2,823 ಎಕರೆ ಜಮೀನು ಕೈಗಾರಿಕಾ ಪ್ರದೇಶಕ್ಕಾಗಿ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದ್ದು, 80% ರೈತರು ಸ್ವಯಂಪ್ರೇರಿತವಾಗಿ ಒಪ್ಪಿಗೆ ನೀಡಿದ್ದಾರೆ. ಆದರೂ ಅಂತಿಮ ಅಧಿಸೂಚನೆ ಹೊರಡಿಸುವಲ್ಲಿ ಸರ್ಕಾರ ವಿಳಂಬ ಮಾಡುತ್ತಿರುವುದರಿಂದ ಧರಣಿಗೆ ನಿರ್ಧರಿಸಲಾಗಿದೆ ಎಂದು ಹೇಳಿದರು.
ರೈತರ ಪ್ರಮುಖ ಬೇಡಿಕೆಗಳು
– 2,823 ಎಕರೆಗಳಲ್ಲಿ ನೀರಾವರಿ ಭಾಗವನ್ನು ಕೈಬಿಟ್ಟು ಉಳಿದ ಜಮೀನಿಗೆ ಅಂತಿಮ ಅಧಿಸೂಚನೆ ಹೊರಡಿಸಬೇಕು – ಸ್ವಾಧೀನಗೊಳ್ಳುವ ಜಮೀನಿಗೆ ಪ್ರತಿ ಎಕರೆಗೆ ₹3 ಕೋಟಿ ಪರಿಹಾರ ನೀಡಬೇಕು – PSL ಕಂಪನಿಗೆ ಸೇರಿದ 525 ಎಕರೆ ಭೂಮಿಯಲ್ಲಿ, ಮದ್ಯವರ್ತಿಗಳ ಮೂಲಕ ರೈತರಿಗೆ ಮಾಡಿರುವ ಒಪ್ಪಂದದಿಂದ ಉಂಟಾದ ಮೋಸ ಸರಿಪಡಿಸಿ, ಸರ್ಕಾರದ ಪರಿಹಾರ ಹಣ ಮೂಲ ರೈತರಿಗೆ ನೇರವಾಗಿ ತಲುಪುವಂತೆ ಕ್ರಮ ಕೈಗೊಳ್ಳಬೇಕು – ಮಹಿಳಾ ಸ್ವಸಹಾಯ ಸಂಘಗಳಿಗೆ ನೀಡಿರುವ ಮೈಕ್ರೋಫೈನಾನ್ಸ್ ಸಾಲವನ್ನು ಮನ್ನಾ ಮಾಡಬೇಕು – ಮಹಿಳಾ ಸಂಘಗಳಿಗೆ DCC ಬ್ಯಾಂಕ್ ಮೂಲಕ ಮರುಸಬಲೀಕರಣ ಸಾಲ ನೀಡಬೇಕು – ವಿವಿಧ ಹಳ್ಳಿಗಳಲ್ಲಿ ಬಡ ಕುಟುಂಬಗಳಿಗೆ ನಿವೇಶನ ವಿತರಣೆ ಮಾಡಬೇಕು – ಕುಸಿಯುತ್ತಿರುವ ಮೆಕ್ಕೆಜೋಳಕ್ಕೆ ತಕ್ಷಣ ಬೆಂಬಲ ಬೆಲೆ ಘೋಷಣೆ ಮಾಡಿ, ಖರೀದಿ ಕೇಂದ್ರಗಳನ್ನು ತೆರೆಯಬೇಕು – ಶಿಡ್ಲಘಟ್ಟ ತಾಲ್ಲೂಕಿನ ಎಲ್ಲ ಹಳ್ಳಿಗಳಲ್ಲೂ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಆರಂಭಿಸಿ, ಕೆಟ್ಟು ನಿಂತಿರುವ ಘಟಕಗಳನ್ನು ದುರಸ್ತಿ ಮಾಡಬೇಕು
ಪ್ರತೀಶ್ ಅವರೊಂದಿಗೆ ಕಾರ್ಯದ್ಯಕ್ಷ ಎಚ್.ಎನ್. ಕದೀರೇಗೌಡ, ತಾಲ್ಲೂಕು ಅಧ್ಯಕ್ಷ ಮುನೇಗೌಡ, ಯುವ ಘಟಕ ಜಿಲ್ಲಾಧ್ಯಕ್ಷ ಸುಬ್ರಮಣಿ, ರೈತ ನಾಯಕರಾದ ರಾಮಸ್ವಾಮಿ, ಪ್ರದೀಪ್, ಈರಪ್ಪ, ವೆಂಕಟೇಶ್ ಹಾಗೂ ದಲಿತ ಸಂಘರ್ಷ ಸಮಿತಿಯ ನಾಗವೇಣಿ ಸೇರಿದಂತೆ ಹಲವರು ಹಾಜರಿದ್ದರು.
Melur, Sidlaghatta : ವಿರೋಧ ಪಕ್ಷದ ಶಾಸಕ ಪ್ರತಿನಿಧಿಸುವ ಶಿಡ್ಲಘಟ್ಟ ಕ್ಷೇತ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಮಿಸಿ ₹680 ಕೋಟಿ ರೂಪಾಯಿ ಮೌಲ್ಯದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಭೂಮಿ ಪೂಜೆ ಮತ್ತು ಉದ್ಘಾಟನೆ ಮಾಡುತ್ತಿರುವುದು ಕ್ಷೇತ್ರದ ಇತಿಹಾಸದಲ್ಲಿ ವಿಶೇಷ ದಾಖಲೆಯಾಗಲಿದೆ ಎಂದು ಶಾಸಕ ಬಿ.ಎನ್. ರವಿಕುಮಾರ್ ತಿಳಿಸಿದ್ದಾರೆ.
ಮೇಲೂರು ಗ್ರಾಮದ ಗೃಹ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಈ ಕಾರ್ಯಕ್ರಮ ಕ್ಷೇತ್ರದ ಅಭಿವೃದ್ಧಿಗೆ ಮಹತ್ವದ ಮೈಲಿಗಲ್ಲು. ನಾವು ಪಕ್ಷಾತೀತವಾಗಿ ಸಿಎಂ, ಡಿಸಿಎಂ, ಸಚಿವರು ಹಾಗೂ ಅಧಿಕಾರಿಗಳನ್ನು ಸ್ವಾಗತಿಸಿ, ಜನರ ಅಗತ್ಯಗಳನ್ನು ಕುರಿತು ಅವರಿಗೆ ಮನವಿ ಸಲ್ಲಿಸುತ್ತೆವೆ,” ಎಂದು ಹೇಳಿದರು.
ಪ್ರಮುಖ ಕಾಮಗಾರಿಗಳಿಗೆ ಚಾಲನೆ
₹200 ಕೋಟಿ ಮೌಲ್ಯದ ಹೊಸ ಹೈಟೆಕ್ ರೇಷ್ಮೆಗೂಡು ಮಾರುಕಟ್ಟೆ
ಅಮರಾವತಿ ಬಳಿಯ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ 2ನೇ ಹಂತದ ಕಾಮಗಾರಿ
ಸಾದಲಿ ರಾಮಸಮುದ್ರ ಕೆರೆಯಿಂದ 12,800 ಮನೆಗಳಿಗೆ ಕುಡಿಯುವ ನೀರಿನ ಯೋಜನೆ
ನಗರದ ಒಳಚರಂಡಿ ಕಾಮಗಾರಿಯ 2ನೇ ಹಂತ
ಎಚ್.ಎನ್. ವ್ಯಾಲಿ ಯೋಜನೆಯ ಮೂರನೇ ಹಂತದಲ್ಲಿ 48 ಕೆರೆಗಳಿಗೆ ನೀರು ಹರಿಸುವ ಯೋಜನೆ
ಸಾದಲಿ ಸಮುದಾಯ ಆರೋಗ್ಯ ಕೇಂದ್ರದ ಉದ್ಘಾಟನೆ
ತಾಲ್ಲೂಕಿನ ಹಲವು ಪ್ರಮುಖ ರಸ್ತೆಗಳ ಡಾಂಬರೀಕರಣ ಮತ್ತು ಸುಧಾರಣೆ
ಒಟ್ಟಾರೆ ಶಿಡ್ಲಘಟ್ಟ ತಾಲ್ಲೂಕಿಗೆ ₹680 ಕೋಟಿ, ಹಾಗೂ ಜಿಲ್ಲಾದ್ಯಂತ ₹1,800 ಕೋಟಿ ರೂ.ಗಳ ಅಭಿವೃದ್ದಿ ಕಾಮಗಾರಿಗಳನ್ನು ಸಿಎಂ ಶುರುಮಾಡಲಿದ್ದಾರೆ.
ಸಿಎಂ ಹೆಲಿಕಾಪ್ಟರ್ ಆಗಮನ – ಸಿದ್ಧತೆ ಜೋರು
ಮುಖ್ಯಮಂತ್ರಿ ಹೆಲಿಕಾಪ್ಟರ್ ಮೂಲಕ ಆಗಮಿಸಲಿದ್ದು, ಹೆಲಿಪ್ಯಾಡ್, ಭದ್ರತೆ ಮತ್ತು ವಾಹನ ನಿಲುಗಡೆ ಸೇರಿದಂತೆ ಎಲ್ಲಾ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದೆ. ಸುಮಾರು 50,000 ಮಂದಿ ಭಾಗವಹಿಸುವ ನಿರೀಕ್ಷೆಯಿದ್ದು, ಊಟ, ಆಸನ ವ್ಯವಸ್ಥೆ ಹಾಗೂ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ.
ನಗರದ ದಿಬ್ಬೂರಹಳ್ಳಿ ಮಾರ್ಗಕ್ಕೆ ಡಾಂಬರೀಕರಣ ಅಗತ್ಯ ಎಂದು ಮನವಿ ಮಾಡಿದಾಗ, ಜಿಲ್ಲಾ ಉಸ್ತುವಾರಿ ಮಂತ್ರಿ ಡಾ. ಎಂ.ಸಿ. ಸುಧಾಕರ್ ತಕ್ಷಣವೇ ₹2 ಕೋಟಿ ಬಿಡುಗಡೆ ಮಾಡಿದ್ದು, ಕೆಲಸ ವೇಗವಾಗಿ ಸಾಗುತ್ತಿದೆ ಎಂದು ಶಾಸಕ ರವಿಕುಮಾರ್ ತಿಳಿಸಿದರು.
ಪಕ್ಷಾತೀತವಾಗಿ ಕಾರ್ಯಕ್ರಮ ಯಶಸ್ವಿಗೊಳಿಸಲು ಕರೆ
“ಜೆಡಿಎಸ್ ಸೇರಿದಂತೆ ಎಲ್ಲಾ ಪಕ್ಷದ ಮುಖಂಡರನ್ನು ಆಹ್ವಾನಿಸಲಾಗಿದೆ, ಸಿಎಂ, ಡಿಸಿಎಂ ಮತ್ತು ಸಚಿವರು ಭಾಗವಹಿಸುತ್ತಿರುವುದು ನಮ್ಮ ಕ್ಷೇತ್ರದ ಗೌರವ. ಎಲ್ಲರೂ ಪಕ್ಷಾತೀತವಾಗಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು” ಎಂದು ಶಾಸಕ ಹೇಳಿದರು.
ಕ್ಷೇತ್ರದ ಮುಂದಿನ ಅಭಿವೃದ್ಧಿಗಾಗಿ ವಿಶೇಷ ಅನುದಾನವನ್ನು ಕೇಳುವ ಬಗ್ಗೆ ಅವರು ತಿಳಿಸಿದರು.
ಸಭೆಯಲ್ಲಿ ಸದಸ್ಯ ಮೇಲೂರು ಮಂಜುನಾಥ್, ನಂಜಪ್ಪ, ಎನ್.ಎಸ್. ವೆಂಕಟೇಶ್, ನರಸಿಂಹಮೂರ್ತಿ ಮೊದಲಾದವರು ಉಪಸ್ಥಿತರಿದ್ದರು.
H Cross, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಎಚ್. ಕ್ರಾಸ್ ನಲ್ಲಿ ಬುಧವಾರ ಶ್ರೀ ಸೀತಾ ರಾಮಾಂಜನೇಯ ಸ್ವಾಮಿ ಬ್ರಹ್ಮರಥೋತ್ಸವ ವಿಜೃಂಭಣೆಯಿಂದ ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಕ್ಷೇತ್ರದ ಶಾಸಕ ಬಿ.ಎನ್. ರವಿಕುಮಾರ್ ಮತ್ತು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಹೇಮಾವತಿ ಚಾಲನೆ ನೀಡಿದರು.
ಬೆಳಗ್ಗಿನಂದೇ ಪ್ರಾರಂಭವಾದ ವಿವಿಧ ಪೂಜಾ ವಿಧಾನಗಳಲ್ಲಿ ಸಾವಿರಾರು ಭಕ್ತರು ಭಾಗವಹಿಸಿದ್ದರು. ಧ್ವಜಾರೋಹಣ, ಅಲಂಕಾರ ಸೇವೆ, ಪ್ರಾಕಾರೋತ್ಸವ, ಹನುಮಂತೋತ್ಸವ, ಮಹಾಭಿಷೇಕ, ಪಲ್ಲಕ್ಕಿ ಉತ್ಸವ, ಗರುಡೋತ್ಸವ, ಶಯನೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದು ಭಕ್ತರ ಮನಗಳನ್ನು ಆಕರ್ಷಿಸಿದವು.
ಶಾಸಕ ಬಿ.ಎನ್. ರವಿಕುಮಾರ್ ಮಾತನಾಡಿ, “ರಥೋತ್ಸವದಂತಹ ಧಾರ್ಮಿಕ ಆಚರಣೆ ನಡೆಸುವ ಮೂಲಕ ಗ್ರಾಮೀಣರಲ್ಲಿ ಒಗ್ಗಟ್ಟು ಮೂಡುತ್ತದೆ. ಕಾಲಕಾಲಕ್ಕೆ ಮಳೆ ಬೆಳೆಯಾಗಿ ನಾಡು ಸುಭಿಕ್ಷವಾಗಿರಲೆಂದು ಎಲ್ಲರೂ ಪ್ರಾಥಿಸಿದ್ದೇವೆ” ಎಂದು ಹೇಳಿದರು.
ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ ಭಕ್ತರು ರಥದ ಕಳಸಕ್ಕೆ ಬಾಳೆಹಣ್ಣು ಹಾಗೂ ಇತರ ಪ್ರಸಾದಗಳನ್ನು ಸಮರ್ಪಣೆ ಮಾಡಿ ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವ ಪ್ರಾರ್ಥನೆ ಮಾಡಿದರು. ದೇವರ ಅಲಂಕಾರ ಭಕ್ತರನ್ನು ಮಂತ್ರಮುಗ್ಧರನ್ನಾಗಿಸಿತು.
ಮೇಳದ ಅಂಗವಾಗಿ ಅನೇಕ ಅಂಗಡಿಗಳು ನೆಲೆಯಾಗಿದ್ದು, ಬತ್ತಾಸು, ಬುರುಗು, ಕಡ್ಲೆಬೀಜ ಮುಂತಾದ ತಿನಿಸುಗಳು ಜನರ ಮೆಚ್ಚುಗೆಗೆ ಪಾತ್ರವಾದವು.
ದೇವಾಲಯ ಸಮಿತಿ ಅಧ್ಯಕ್ಷ ಅಯ್ಯಪ್ಪಣ್ಣ, ಕಾಳನಾಯಕನಹಳ್ಳಿ ಭೀಮೇಶ್, ಪ್ರಧಾನ ಅರ್ಚಕ ಪದ್ಮನಾಭಚಾರ್, ರೈತ ಸಂಘದ ಭಕ್ತರಹಳ್ಳಿ ಬೈರೇಗೌಡ, ಚನ್ನರಾಯಪ್ಪ, ಬಾಬು, ರಾಮಕೃಷ್ಣ, ಹಾಗೂ ಸಾವಿರಾರು ಭಕ್ತಾದಿಗಳು ರಥೋತ್ಸವದಲ್ಲಿ ಭಾಗವಹಿಸಿದ್ದರು.
Sidlaghatta, chikkaballapur : ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಸಹಯೋಗದಲ್ಲಿ ಮಂಗಳವಾರ ತಾಲ್ಲೂಕು ಪಂಚಾಯಿತಿ ಮಟ್ಟದ ಗ್ರಾಮೀಣ ಮಕ್ಕಳಿಗಾಗಿ ಚತುರ ಆಟಗಳ ಉತ್ಸವವನ್ನು ನಗರದ ಜೂನಿಯರ್ ಕಾಲೇಜಿನಲ್ಲಿ ಆಯೋಜಿಸಲಾಗಿತ್ತು.
ತಾಲ್ಲೂಕು ಪಂಚಾಯಿತಿ ಇಒ ಹೇಮಾವತಿ ಅವರು ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿ, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಆಯ್ಕೆಯಾದ ವಿಜೇತರುಗಳನ್ನು ತಾಲ್ಲೂಕು ಮಟ್ಟದ ಚತುರ ಆಟಗಳ ಸ್ವರ್ಧೆಗಳಲ್ಲಿ ಭಾಗವಹಿಸಿದ್ದಾರೆ. ತಾಲ್ಲೂಕು ಮಟ್ಟದಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಜಿಲ್ಲಾ ಮಟ್ಟಕ್ಕೆ ಆಯ್ಕೆ ಮಾಡಲಾಗುವುದು ಎಂದರು.
ಚದುರಂಗ ಕ್ರೀಡೆ ಬುದ್ಧಿವಂತಿಕೆಯ ಆಟ. ಏಕಾಗ್ರತೆ, ಗುರಿ ತಲುಪುವ ಚಾಕಚಕ್ಯತೆಯನ್ನು ಚೆಸ್ ನಮಗೆ ಕಲಿಸಿಕೊಡುತ್ತದೆ. ಕ್ರೀಡೆಗಳು ನಮ್ಮ ಜೀವನ ಕೌಶಲ್ಯದ ಒಂದು ಪ್ರಮುಖ ಭಾಗವಾಗಿದೆ. ಇದು ದೈಹಿಕವಾಗಿ ಮತ್ತು ಮಾನಸಿಕವಾಗಿ ನಮ್ಮ ಅಭಿವೃದ್ಧಿಯ ಮೂಲವಾಗಿದೆ. ಯಶಸ್ವಿ ವ್ಯಕ್ತಿಯು ಮಾನಸಿಕವಾಗಿ ಮತ್ತು ದೈಹಿಕವಾಗಿ ಆರೋಗ್ಯವಾಗಿರಲು ಕ್ರೀಡೆಗಳು ಅವಶ್ಯ ಎಂದರು.
ತಾಲ್ಲೂಕು ಮಟ್ಟದ ಗ್ರಾಮೀಣ ಮಕ್ಕಳಿಗಾಗಿ ನಡೆದ ಚತುರ ಆಟಗಳ ಉತ್ಸವದಲ್ಲಿ ಚೆಸ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ತಿಮ್ಮನಾಯಕನಹಳ್ಳಿ ಗ್ರಾಮ ಪಂಚಾಯಿತಿಯ ಕುದುಪಕುಂಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಶಾಂಕ್, ದ್ವಿತೀಯ ಸ್ಥಾನ ನಾಗಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಡಿಪಿನಾಯಕನಹಳ್ಳಿ ಗ್ರಾಮದ ನವೋದಯ ವಿದ್ಯಾಲಯದ ಶ್ರೀನಿವಾಸ್, ತೃತೀಯ ಸ್ಥಾನ ನಡಿಪಿನಾಯಕನಹಳ್ಳಿ ಗ್ರಾಮದ ನವೋದಯ ವಿದ್ಯಾಲಯದ ಹರ್ಷವರ್ಧನ್ ಪಡೆದರು.
ಕೇರಂ ಸ್ಪರ್ಧೆಯಲ್ಲಿ ಕೊತ್ತನೂರು ಗ್ರಾಮ ಪಂಚಾಯಿತಿ ನಿಖಿಲ್ ಪ್ರಥಮ ಸ್ಥಾನ, ಜಂಗಮಕೋಟೆ ಗ್ರಾಮ ಪಂಚಾಯಿತಿಯ ರಿಷಿ ದ್ವಿತೀಯ ಸ್ಥಾನ, ಚೀಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಹೇಶ್ ಕುಮಾರ್ ತೃತೀಯ ಸ್ಥಾನ ಪಡೆದರು. ಗ್ರಾಮೀಣ ಮಕ್ಕಳಿಗಾಗಿ ಚತುರ ಆಟಗಳ ಸ್ವರ್ಧೆಗಳಲ್ಲಿ ವಿಜೇತರಿಗೆ ನರೇಗಾ ಸಹಾಯಕ ನಿರ್ದೇಶಕ ಚಂದ್ರಪ್ಪ ಬಹುಮಾನ ಮತ್ತು ಪ್ರಮಾಣ ಪತ್ರವನ್ನು ವಿತರಿಸಿದರು.
ತಾಲ್ಲೂಕು ಪಂಚಾಯಿತಿ ಇಒ ಹೇಮಾವತಿ, ನರೇಗಾ ಸಹಾಯಕ ನಿರ್ದೇಶಕ ಚಂದ್ರಪ್ಪ, ತಾಲ್ಲೂಕು ವ್ಯವಸ್ಥಾಪಕ ತನ್ವೀರ್ ಅಹಮದ್, ತಾಲ್ಲೂಕು ದೈಹಿಕ ಪರಿವೀಕ್ಷಕ ದೇವೇಂದ್ರ, ತಾಲ್ಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಪ್ರಕಾಶ್ ಬಾಬು ಕೆ.ವಿ, ಸರ್ಕಾರಿ ಪ್ರೌಢಶಾಲಾ ದೈಹಿಕ ಶಿಕ್ಷಕಿ ಅನ್ನಪೂರ್ಣ, ಶಿಕ್ಷಕರಾದ ಚಂದ್ರಕಲಾ, ಮಂಜುಳಾ, ವೆಂಕಟಸ್ವಾಮಿ, ಮಂಜುನಾಥ, ದೇವಮ್ಮ, ಅಮರನಾಥ್, ತಾಲ್ಲೂಕು ಪಂಚಾಯಿತಿ ಸಿಬ್ಬಂದಿ, ಸರ್ಕಾರಿ ಶಾಲಾ ಮಕ್ಕಳು, ಗ್ರಂಥಪಾಲಕರು ಹಾಜರಿದ್ದರು.
Sidlaghatta, chikkaballapur : ರಾಜ್ಯದ 21 ಜಿಲ್ಲಾ ಕೇಂದ್ರ ಸಹಕಾರಿ (DCC) ಬ್ಯಾಂಕ್‌ಗಳಿಂದ ಈ ಬಾರಿ ಸಕಾಲಕ್ಕೆ ರೈತರಿಗೆ ಬೆಳೆಸಾಲ ಮತ್ತು ಮಹಿಳಾ ಸ್ವಸಹಾಯ ಸಂಘಗಳಿಗೆ ಸಾಲ ವಿತರಣೆಯಾಗದೆ, ಸಾವಿರಾರು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿರುವುದಾಗಿ ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್.ವಿ. ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದರು.
ಕೋಲಾರ–ಚಿಕ್ಕಬಳ್ಳಾಪುರ ಕೋಚಿಮುಲ್ ಶಿಬಿರ ಕಚೇರಿಯಲ್ಲಿ ಸೋಮವಾರ ನಡೆದ 72ನೇ ಅಖಿಲ ಭಾರತ ಸಹಕಾರ ಸಪ್ತಾಹ–2025 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, “ಹಿಂದೆ ಸರ್ಕಾರ NABARD ಮೂಲಕ 60% ಸಾಲದ ಮೊತ್ತ ನೀಡುತ್ತಿತ್ತು, ಉಳಿದ 40% ಬ್ಯಾಂಕ್ ಹೊತ್ತಿತ್ತು. ಆದರೆ ಈಗ ಬ್ಯಾಂಕ್‌ಗಳಿಗೆ ಕೇವಲ 40% ಮಾತ್ರ ಸಿಗುವಂತಾಗಿದೆ. ಇದರಿಂದ ಡಿಸಿಸಿ ಬ್ಯಾಂಕ್‌ಗಳ ಸಾಲ ವಿತರಣಾ ವ್ಯವಸ್ಥೆ ಕುಸಿದಿದೆ” ಎಂದು ವಿವರಿಸಿದರು.
ಸಹಕಾರ ಸಂಘಗಳು ಉತ್ತಮವಾಗಿ ಕಾರ್ಯನಿರ್ವಹಿಸಿದಾಗಲೇ ಕೃಷಿಕರಿಗೆ ಲಾಭವಾಗುತ್ತದೆ. ಜಾತಿ–ಧರ್ಮ–ಪಕ್ಷಭೇದವಿಲ್ಲದೆ ಕಾರ್ಯ ನಿರ್ವಹಿಸುವಂತೆ ನಾಗರಾಜ್ ಮನವಿ ಮಾಡಿದರು.
ಸಹಕಾರ ಕ್ಷೇತ್ರದಲ್ಲಿ ರಾಜಕೀಯ ಹಸ್ತಕ್ಷೇಪ ಹೆಚ್ಚಾಗಿದೆ
ಡಿಸಿಸಿ ಬ್ಯಾಂಕ್ ನಿರ್ದೇಶಕ ಡಾಲ್ಫಿನ್ ನಾಗರಾಜ್ ಮಾತನಾಡುತ್ತಾ, “ಸಹಕಾರ ಸಂಘಗಳಲ್ಲಿ ರಾಜಕೀಯ ಬೆರೆಯಬಾರದು ಎಂದು ಹೇಳುವವರು ತಾವೇ ಪಾಲಿಸುವುದಿಲ್ಲ. ಇದರ ಪರಿಣಾಮವಾಗಿ ಸಾಲ ವಿತರಣೆ ವಿಳಂಬವಾಗುತ್ತಿದೆ” ಎಂದು ಬೇಸರ ವ್ಯಕ್ತಪಡಿಸಿದರು.
ಹಾಪ್‌ಕಾಮ್ಸ್ ನಿರ್ದೇಶಕ ಮುತ್ತೂರು ಚಂದ್ರೇಗೌಡ ಕೂಡ ಇದೇ ಆತಂಕ ಹಂಚಿಕೊಂಡು, “ಸಾಲ ಮರುಪಾವತಿಸಿದರೂ ಹೊಸ ಸಾಲ ನೀಡದೆ ಬ್ಯಾಂಕ್ ರೈತರನ್ನು ಕಂಗಾಲಾಗಿಸಿದೆ. ಪರಿಹಾರ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ಹೆಚ್ಚಿನ ಠೇವಣಿ ಇಟ್ಟ ಸದಸ್ಯರು, ಉತ್ತಮ ಪತ್ತಿನ ಸಹಕಾರ ಸಂಘಗಳು, ಹಾಲು ಉತ್ಪಾದನಾ ಸಂಘಗಳ ಪ್ರತಿನಿಧಿಗಳಿಗೆ ಸನ್ಮಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಕೆ.ಗುಡಿಯಪ್ಪ, ಬಂಕ್ ಮುನಿಯಪ್ಪ, ಹುಜಗೂರು ರಾಮಯ್ಯ, ಮೇಲೂರು ಮುರಳಿ ಸೇರಿದಂತೆ ಅನೇಕರು ಭಾಗವಹಿಸಿದರು.