Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳ್ಳೂಟಿ ಗೇಟ್ ಹತ್ತಿರದ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಮಂಗಳವಾರ ತಾಲ್ಲೂಕು ಮಟ್ಟದ ಆರೋಗ್ಯ ಶಿಬಿರ ನಡೆಯಿತು.
ಶಿಬಿರಕ್ಕೆ ಚಾಲನೆ ನೀಡಿದ ಜಿಲ್ಲಾ ಪಂಚಾಯಿತಿ ಸಿಇಒ ಡಾ. ನವೀನ್ ಭಟ್ ಮಾತನಾಡಿ, “ಸ್ವಚ್ಛ ಚಿಕ್ಕಬಳ್ಳಾಪುರ ನಿರ್ಮಾಣದಲ್ಲಿ ಪ್ರತಿಯೊಬ್ಬರ ಸಹಕಾರ ಅಗತ್ಯ. ಕಸ ಸಂಗ್ರಹಣೆ, ಮೂಲದಲ್ಲೇ ವಿಂಗಡಣೆ ಹಾಗೂ ವಿಲೇವಾರಿ ಬಗ್ಗೆ ಗಂಭೀರವಾಗಿ ಗಮನ ಹರಿಸಬೇಕು. ಕಸದಿಂದ ಸಂಪನ್ಮೂಲ ಸೃಷ್ಟಿಸುವ ದಿಶೆಯಲ್ಲಿ ಕೆಲಸ ಮಾಡುವ ಸಮಯ ಬಂದಿದೆ” ಎಂದರು.
ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಅತೀಕ್ ಪಾಷಾ ಅವರು, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಮೂಲಕ ಸ್ವಚ್ಛ ಹಾಗೂ ಸುಂದರ ವಾತಾವರಣವನ್ನು ನಿರ್ಮಿಸಬೇಕು ಎಂದು ಕರೆ ನೀಡಿದರು. “ಪ್ರತಿ ಮನೆಯಿಂದಲೇ ಸ್ವಚ್ಛತಾ ಚಟುವಟಿಕೆ ಆರಂಭಿಸಿದರೆ, ಸ್ವಚ್ಛ ಗ್ರಾಮದಿಂದ ಸ್ವಚ್ಛ ದೇಶದವರೆಗಿನ ಗುರಿ ಸಾಧಿಸಬಹುದು” ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಿಇಒ ಅವರು ಸ್ವಚ್ಛತಾ ಹೀ ಸೇವಾ ಬಗ್ಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.
ಶಿಬಿರದಲ್ಲಿ ತಾಲ್ಲೂಕಿನ 28 ಗ್ರಾಮ ಪಂಚಾಯಿತಿಗಳ ಸ್ವಚ್ಛತಾಗಾರರು ಮತ್ತು ಸಾರ್ವಜನಿಕರು ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಕಣ್ಣು, ಚರ್ಮ, ಕಿವಿ-ಮೂಗು-ಗಂಟಲು ತೊಂದರೆಗಳು, ಮಾನಸಿಕ ಆರೋಗ್ಯ, ನರರೋಗ, ಮಧುಮೇಹ, ರಕ್ತದೊತ್ತಡ, ಥೈರಾಯ್ಡ್ ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಗೆ ಉಚಿತ ತಪಾಸಣೆ ಮತ್ತು ಸಲಹೆಗಳನ್ನು ತಜ್ಞ ವೈದ್ಯರು ನೀಡಿದರು. ಸ್ತ್ರೀರೋಗ ಹಾಗೂ ಪ್ರಸೂತಿ ತಜ್ಞರು ಸಹ ಭಾಗಿಯಾಗಿ ಮಾರ್ಗದರ್ಶನ ಮಾಡಿದರು.
“ಆರೋಗ್ಯವೇ ಮಹಾಭಾಗ್ಯ” ಎಂಬ ಆಶಯದೊಂದಿಗೆ ನಡೆದ ಈ ಶಿಬಿರವನ್ನು ತಾಲ್ಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರ ಸಿಬ್ಬಂದಿ ಸಹಭಾಗಿತ್ವದಲ್ಲಿ ಯಶಸ್ವಿಯಾಗಿ ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಡಾ. ನವೀನ್ ಭಟ್, ಉಪಕಾರ್ಯದರ್ಶಿ ಅತೀಕ್ ಪಾಷಾ, ತಾಲ್ಲೂಕು ಪಂಚಾಯಿತಿ ಇಒ ಹೇಮಾವತಿ, ನರೇಗಾ ಸಹಾಯಕ ನಿರ್ದೇಶಕ ಚಂದ್ರಪ್ಪ, ತಾಲ್ಲೂಕು ಯೋಜನಾಧಿಕಾರಿ ಅನಿಲ್ ಕುಮಾರ್, ಆರೋಗ್ಯಾಧಿಕಾರಿ ಡಾ. ವೆಂಕಟೇಶ್ ಮೂರ್ತಿ, ಆನೂರು ಪಿಡಿಒ ಕಾತ್ಯಾಯಿನಿ, ಸದಸ್ಯ ಆಂಜಿನಪ್ಪ ಹಾಗೂ ಹಲವಾರು ಗ್ರಾಮ ಪಂಚಾಯಿತಿ ಪ್ರತಿನಿಧಿಗಳು ಉಪಸ್ಥಿತರಿದ್ದರು.
Sidlaghatta : ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲಗೌಡ ಅವರ 75ನೇ ಹುಟ್ಟುಹಬ್ಬದ ಅಂಗವಾಗಿ ಲಿಯೋ ಕ್ಲಬ್ ಆಫ್ ಮಾರ್ಗ ಮತ್ತು ಅನಿತಾ ಚಾರಿಟಬಲ್ ಟ್ರಸ್ಟ್ ವತಿಯಿಂದ ಅಕ್ಟೋಬರ್ 6ರಂದು ಬೃಹತ್ ಅಮೃತ ಮಹೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಹಾಗೂ ಜನಪ್ರಿಯ ನಟ ಪವನ್ ಕಲ್ಯಾಣ್ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ ಎಂದು ಲಿಯೋ ಕ್ಲಬ್ ಆಫ್ ಕಿರಣ ಅಧ್ಯಕ್ಷ ಶ್ರೀಕಾಂತ್ ತಿಳಿಸಿದ್ದಾರೆ.
ನಗರದ ಪತ್ರಕರ್ತರ ಭವನದಲ್ಲಿ ಕಾರ್ಯಕ್ರಮದ ಭಿತ್ತಿಪತ್ರ ಬಿಡುಗಡೆ ಮಾಡಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಚಿಂತಾಮಣಿ ತಾಲ್ಲೂಕಿನ ಪೆದ್ದೂರಿನ ಗೋಪಾಲಗೌಡ ಅವರು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ, ಓಡಿಶಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಹಾಗೂ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿ ಸೇವೆ ಸಲ್ಲಿಸಿದ್ದಾರೆ. ಜನಪರ ಹಾಗೂ ನೀರಾವರಿ ಹೋರಾಟಗಳಲ್ಲಿ ಸಕ್ರಿಯ ಪಾತ್ರವಹಿಸಿರುವ ಅವರ 75ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಸಮಾಜಮುಖಿ ಕಾರ್ಯಕ್ರಮಗಳೂ ಹಮ್ಮಿಕೊಳ್ಳಲಾಗಿದೆ” ಎಂದರು.
ಅಮೃತ ಮಹೋತ್ಸವ ಕಾರ್ಯಕ್ರಮ ಚಿಂತಾಮಣಿ ನಗರದ ಹೊರವಲಯದ ಚಿನ್ನಸಂದ್ರ ಗ್ರಾಮದ ಬಳಿ ನಡೆಯಲಿದ್ದು, ಕೇಂದ್ರ ಸಚಿವರು ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಲಾಗಿದ್ದು, ಭಾಗವಹಿಸುವವರು ಕಡ್ಡಾಯವಾಗಿ ಪಾಸ್ ಪಡೆದುಕೊಳ್ಳಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಲಿಯೋ ಕ್ಲಬ್ ಪ್ರಧಾನ ಕಾರ್ಯದರ್ಶಿ ಲಿಯೋ ಲೋಕೇಶ್, ಅಖಿಲ ಕರ್ನಾಟಕ ಚಿರಂಜೀವಿ ಯುವತ ಅಧ್ಯಕ್ಷ ನಾರಾಯಣಸ್ವಾಮಿ ಕೆ, ಪವನ್ ಕಲ್ಯಾಣ್ ಅಭಿಮಾನಿ ಸಂಘದ ಜಿಲ್ಲಾಧ್ಯಕ್ಷ ಬುಜ್ಜಿ ನಾಯಕ್, ದಲಿತ ಮುಖಂಡ ಗೋರ್ಲಪ್ಪ, ಕಸ್ತೂರಿ ಕನ್ನಡ ಪರ ಸಂಘಟನೆಯ ರಾಮಾಂಜಿ, ಸುವರ್ಣ ಕರ್ನಾಟಕ ಜನಶಕ್ತಿ ನಗರಾಧ್ಯಕ್ಷ ಮಧುಸೂಧನ್, ವರದರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.
Malamachanahalli, sidlaghatta : ಶಿಡ್ಲಘಟ್ಟ ತಾಲ್ಲೂಕಿನ ಮಳಮಾಚನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ಯಾಟರಾಯನಸ್ವಾಮಿ ದೇವಸ್ಥಾನದ ಬಳಿ ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮಕ್ಕೆ ತಾಲ್ಲೂಕು ಪಂಚಾಯಿತಿ ಇಒ ಹೇಮಾವತಿ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಇಒ ಹೇಮಾವತಿ, “ಶ್ರಮದಾನವು ಸಮುದಾಯದ ಕಲ್ಯಾಣಕ್ಕಾಗಿ ನೀಡುವ ದೈಹಿಕ ಕೊಡುಗೆಯಾಗಿದ್ದು, ನೈರ್ಮಲ್ಯ, ಪರಿಸರ ಸಂರಕ್ಷಣೆ ಮತ್ತು ಸಾಮಾಜಿಕ ಏಕತೆಯನ್ನು ಬೆಳೆಸುವ ಮಹತ್ವದ ಕಾರ್ಯವಾಗಿದೆ. ಇದು ನಾಗರಿಕರಲ್ಲಿ ಸರಳತೆ, ಸ್ವಚ್ಛತೆ, ಹಸಿರು ಪರಿಸರ ಮತ್ತು ಒಗ್ಗಟ್ಟಿನ ಭಾವನೆಗೆ ಪ್ರೇರಣೆ ನೀಡುತ್ತದೆ” ಎಂದು ಹೇಳಿದರು. ಸೆಪ್ಟೆಂಬರ್ 17ರಿಂದ ಅಕ್ಟೋಬರ್ 2ರವರೆಗೆ ರಾಜ್ಯದಾದ್ಯಂತ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಸ್ವಚ್ಛತಾ ಸಪ್ತಾಹವನ್ನು ಆಚರಿಸಲು ಸರ್ಕಾರ ಸೂಚನೆ ನೀಡಿರುವುದನ್ನೂ ಅವರು ನೆನಪಿಸಿದರು.
ನರೇಗಾ ಸಹಾಯಕ ನಿರ್ದೇಶಕ ಚಂದ್ರಪ್ಪ ಮಾತನಾಡಿ, “ತಾಲ್ಲೂಕಿನ 28 ಗ್ರಾಮ ಪಂಚಾಯಿತಿಗಳಲ್ಲಿ ಸ್ವಚ್ಛತಾ ಆಂದೋಲನ ಆರಂಭವಾಗಿದೆ. ಒಂದು ದಿನ, ಒಂದು ಗಂಟೆ ಎಲ್ಲರೂ ಸೇರಿ ಶ್ರಮದಾನ ಮಾಡುವ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ” ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಳಮಾಚನಹಳ್ಳಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶೈಲ, ನರೇಗಾ ಸಿಬ್ಬಂದಿ, ಸ್ವ-ಸಹಾಯ ಸಂಘದ ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಗೂ ಗ್ರಾಮಸ್ಥರು ಸಕ್ರಿಯವಾಗಿ ಪಾಲ್ಗೊಂಡರು.
Melur, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಮೇಲೂರು ಪಂಚಾಯಿತಿ ಕಾರ್ಯಾಲಯದಲ್ಲಿ, ಮಾರ್ಗದರ್ಶಿ ಬ್ಯಾಂಕ್ ಹಾಗೂ ಮೇಲೂರು ಗ್ರಾಮ ಪಂಚಾಯಿತಿ ಇವರ ಸಹಯೋಗದಲ್ಲಿ ಕೇಂದ್ರ ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆಗಳ ಕುರಿತು ತರಬೇತಿ ಕಾರ್ಯಾಗಾರವನ್ನು ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ಮೇಲೂರು ವ್ಯಾಪ್ತಿಯ ಮಹಿಳಾ ಸ್ವ-ಸಹಾಯ ಸಂಘಗಳ ಪದಾಧಿಕಾರಿಗಳು ಭಾಗವಹಿಸಿದರು. ಮೇಲೂರು ಕೆನರಾ ಬ್ಯಾಂಕ್ ವ್ಯವಸ್ಥಾಪಕ ಸುಜಯ್ ಮಾತನಾಡಿ, “ಜೀವನ ಭದ್ರತೆ ಪ್ರತಿಯೊಬ್ಬರಿಗೂ ಅವಶ್ಯ. ಪ್ರಧಾನಮಂತ್ರಿ ಜನ್ ಧನ್ ಯೋಜನೆ, ಜೀವನ್ ಜ್ಯೋತಿ ಭೀಮಾ, ಸುರಕ್ಷಾ ಬಿಮಾ ಹಾಗೂ ಅಟಲ್ ಪಿಂಚಣಿ ಯೋಜನೆಗಳನ್ನು ಸದುಪಯೋಗ ಮಾಡಿಕೊಂಡರೆ, ಕಡಿಮೆ ಹೂಡಿಕೆಯಲ್ಲಿ ಹೆಚ್ಚಿನ ಸೌಲಭ್ಯಗಳನ್ನು ಪಡೆಯಬಹುದು” ಎಂದು ತಿಳಿಸಿದರು.
ಅವರು 60 ವರ್ಷಗಳ ನಂತರ ಪಿಂಚಣಿ ಪಡೆಯುವ ಅವಕಾಶ, ಶೂನ್ಯ ಬಾಲೆನ್ಸ್‌ನಲ್ಲಿಯೇ 2 ಲಕ್ಷದ ಅಪಘಾತ ವಿಮೆ, ವಾರ್ಷಿಕ ಕೇವಲ ₹436 ಕ್ಕೆ 2 ಲಕ್ಷದ ಜೀವ ವಿಮೆ ಹಾಗೂ ಕೇವಲ ₹20 ಕ್ಕೆ ಅಪಘಾತ ವಿಮೆ ಸೌಲಭ್ಯ ಲಭ್ಯವಿರುವುದನ್ನು ವಿವರಿಸಿದರು. ಜೊತೆಗೆ, ಪಿಂಚಣಿ ಯೋಜನೆಗೆ ಚಂದಾದಾರರಾಗಲು ಪ್ರೋತ್ಸಾಹಿಸಿದರು.
ಮೇಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಶಿಕಲಾರಮೇಶ್ ಮಾತನಾಡಿ, “ಇಂದಿನ ಸಮಾಜದಲ್ಲಿ ಹಿರಿಯ ಪೋಷಕರನ್ನು ನಿರ್ಲಕ್ಷಿಸುವ ಪರಿಸ್ಥಿತಿ ಹೆಚ್ಚಾಗಿದೆ. ಪ್ರತಿಯೊಬ್ಬರೂ ತಮ್ಮ ಭವಿಷ್ಯದ ಬಗ್ಗೆ ಚಿಂತನೆ ಮಾಡಿ, ಉಳಿತಾಯ ಹಾಗೂ ವಿಮಾ ಯೋಜನೆಗಳನ್ನು ಬಳಸಿಕೊಂಡರೆ, ವೃದ್ಧಾಪ್ಯದಲ್ಲಿ ಅದು ಪೋಷಕವಾಗುತ್ತದೆ” ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಆರ್.ಎ. ಉಮೇಶ್, ಪ್ರಿಯಾಂಕ, ಕಾರ್ಯದರ್ಶಿ ಪಿ.ಎನ್. ಶ್ರೀನಿವಾಸರೆಡ್ಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಕಾರ್ಯದರ್ಶಿ ಸಿ.ಬಿ. ಪ್ರಕಾಶ್ ಅವರು ತಮ್ಮ ಅತ್ಯುತ್ತಮ ಸೇವೆಗೆ ರಾಜ್ಯಪಾಲರಿಂದ ಪ್ರಶಂಸನಾ ಪ್ರಮಾಣ ಪತ್ರ ಹಾಗೂ ಬೆಳ್ಳಿ ಪದಕವನ್ನು ಸ್ವೀಕರಿಸಿದ್ದಾರೆ.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯಲ್ಲಿ ಸಲ್ಲಿಸುತ್ತಿರುವ ಉತ್ತಮ ಸೇವೆಯನ್ನು ಪರಿಗಣಿಸಿ, ಶುಕ್ರವಾರ ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲ ತಾವರ್ಚಂದ್ ಗೆಹಲೋಟ್ ಅವರು ಪ್ರಕಾಶ್ ಅವರಿಗೆ ಪ್ರಶಂಸನಾ ಪ್ರಮಾಣ ಪತ್ರ ಮತ್ತು ಬೆಳ್ಳಿ ಪದಕವನ್ನು ನೀಡಿದರು. ಈ ಸಂದರ್ಭದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಷ್ಟ್ರೀಯ ಮುಖ್ಯ ಆಯುಕ್ತ ಕೆ.ಕೆ. ಖಂಡೇಲ್ವಾಲ್, ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್. ಸಿಂಧ್ಯಾ, ರಾಜ್ಯ ಆಯುಕ್ತ ಎಂ.ಎ. ಖಾಲಿದ್, ಗೀತಾ ನಟರಾಜ ಹಾಗೂ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತ ತ್ರಿಲೋಕ ಚಂದ್ರ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಡಯಟ್ ಪ್ರಾಂಶುಪಾಲ ಹಾಗೂ ಜಿಲ್ಲಾ ಮುಖ್ಯ ಆಯುಕ್ತ ಎಂ. ಮುನಿಕೆಂಪೇಗೌಡರೊಂದಿಗೆ ಜಿಲ್ಲಾ ಕಾರ್ಯದರ್ಶಿ ಸಿ.ಬಿ. ಪ್ರಕಾಶ್ ಅವರಿಗೆ ಈ ಗೌರವ ಲಭಿಸಿತು.
Nadipinayakanahalli, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ನಡಿಪಿನಾಯಕನಹಳ್ಳಿಯ ಕಪಿಲಮ್ಮ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ (25ರಂದು) ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಿದರು.
ಕಾರ್ಯಕ್ರಮವನ್ನು ಹಳೆಯ ವಿದ್ಯಾರ್ಥಿಗಳಾದ ನವೀನ್ ಎಂ.ಜಿ., ಸಮಾಜಸೇವಕ ರಾಜೇಶ್ ವೈ., ಕೆಎಂಎಫ್ ಪಶುವೈದ್ಯ ಮಾಲಾ ವೈ.ಪಿ., ಅರಣ್ಯ ಸಂರಕ್ಷಣಾಧಿಕಾರಿ, ವಕೀಲ ಭರತ್, ಬಿಪಿಸಿಎಲ್ ಅಧಿಕಾರಿ ವಿನಯ್, ಸಂಸ್ಥಾಪಕ ಅಧ್ಯಕ್ಷ ಎನ್.ಆರ್. ಕೃಷ್ಣಮೂರ್ತಿ, ಕಾರ್ಯದರ್ಶಿಗಳು ವನರಾಜಾ ಲಕ್ಷ್ಮಿ ಮತ್ತು ಸತ್ಯನಾರಾಯಣ, ನವೋದಯ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಕಾಲೇಜಿನ ಪ್ರಾಂಶುಪಾಲ ಸುದರ್ಶನ್ ಅವರಿಂದ ಉದ್ಘಾಟಿಸಲಾಯಿತು.
ವಿಶೇಷ ಅತಿಥಿಗಳಾಗಿ ಹಾಜರಾದ ಹಿರಿಯ ವಿದ್ಯಾರ್ಥಿಗಳು ತಮ್ಮ ಅನುಭವಗಳನ್ನು ಹಂಚಿಕೊಂಡು ಕಿರಿಯ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದರು. ಈ ಸಂದರ್ಭದಲ್ಲಿ ಎನ್.ಆರ್. ಕೃಷ್ಣಮೂರ್ತಿ, ಸತ್ಯನಾರಾಯಣ ಮತ್ತು ಪ್ರಾಂಶುಪಾಲ ಸುದರ್ಶನ್ ಅವರು ಮಾತನಾಡಿ, ಕಾಲೇಜಿನ ಬೆಳವಣಿಗೆ ಹಾಗೂ ವಿದ್ಯಾರ್ಥಿಗಳ ಜವಾಬ್ದಾರಿಗಳನ್ನು ನೆನಪಿಸಿ, ಇಂದಿನ ಪೀಳಿಗೆಯ ಮುಂದೆ ಇರುವ ಸವಾಲುಗಳ ಕುರಿತು ಮಾರ್ಗದರ್ಶನ ನೀಡಿದರು.