Sidlaghatta : ರಾಜ್ಯ ಸರ್ಕಾರ ನಡೆಸುವ ಶೈಕ್ಷಣಿಕ ಸಾಮಾಜಿಕ ಜನಗಣತಿ ವೇಳೆ ವೀರಶೈವ ಲಿಂಗಾಯತರು ಧರ್ಮ ಕಲಂನಲ್ಲಿ ಹಿಂದೂ ಎಂದು, ಜಾತಿ ಕಲಂನಲ್ಲಿ “ವೀರಶೈವ ಲಿಂಗಾಯತ” ಎಂದು ಮಾತ್ರ ಬರೆಸುವಂತೆ ಶ್ರೀಬಸವೇಶ್ವರ ಸೇವಾ ಮತ್ತು ಅಭಿವೃದ್ದಿ ಟ್ರಸ್ಟ್ ನ ಅಧ್ಯಕ್ಷ ಬಿ.ಸಿ.ನಂದೀಶ್ ಕುಲಬಾಂಧವರಲ್ಲಿ ಮನವಿ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ಧರ್ಮದ ಕಲಂನಲ್ಲಿ ಹಿಂದೂ, ಜಾತಿ ಕಲಂನಲ್ಲಿ “ವೀರಶೈವ ಲಿಂಗಾಯತ” ಎಂದು ಮಾತ್ರ ನಮೂದಿಸಿ. ಉಪ ಜಾತಿ ಕಲಂನಲ್ಲಿ ಈ ಭಾಗದಲ್ಲಿ ಕರೆಯುವ ಗೌಡ ಲಿಂಗಾಯತ, ಬಣಜಿಗ ಲಿಂಗಾಯತ, ರೆಡ್ಡಿ ಲಿಂಗಾಯತ ಎಂಬಿತ್ಯಾದಿ ಉಪ ಜಾತಿಗಳನ್ನು ನಮೂದು ಮಾಡಿ ಅಥವಾ ಖಾಲಿ ಬಿಡುವುದು ನಿಮ್ಮ ನಿರ್ಧಾರಕ್ಕೆ ಬಿಟ್ಟಿದ್ದು ಎಂದರು.
ಯಾವುದೆ ರೀತಿಯ ಗೊಂದಲಕ್ಕೆ ಒಳಗಾಗಬೇಡಿ, ಗಣತಿದಾರರು ಕೇಳುವ ಎಲ್ಲ ಮಾಹಿತಿಯನ್ನು ಸ್ಪಷ್ಟವಾಗಿ ನೀಡಿ, ಮುಖ್ಯವಾಗಿ ಧರ್ಮ ಮತ್ತು ಜಾತಿ ಕಲಂನಲ್ಲಿ ಸ್ಪಷ್ಟವಾಗಿ ಬರೆಸಿ ಎಂದು ಮನವಿ ಮಾಡಿದರು.
Sidlaghatta : ರಾಜ್ಯ ಸರ್ಕಾರವು ಕೈಗೊಂಡಿರುವ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಯ ಗಣತಿದಾರರು ತಮ್ಮ ಬಳಿ ಬಂದಾಗ ಧರ್ಮದ ಕಾಲಂನಲ್ಲಿ ಹಿಂದೂ, ಜಾತಿ ಕಾಲಂನಲ್ಲಿ ಕುರುಬ ಎಂದಷ್ಟೆ ಬರೆಸಿ ಎಂದು ಶಿಡ್ಲಘಟ್ಟ ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ಕೆ.ಮಂಜುನಾಥ್ ಸಮುದಾಯದವರಲ್ಲಿ ಮನವಿ ಮಾಡಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಕುರುಬರನ್ನು ಒಂದೊಂದು ಪ್ರದೇಶದಲ್ಲಿ ಒಂದೊಂದು ರೀತಿಯಲ್ಲಿ ಕರೆಯುತ್ತಾರೆ. ಹಾಲು ಮತಸ್ತರು, ಹಳೆ ಕುರುಬ, ಹೊಸ ಕುರುಬ, ಜೇಣು ಕುರುಬ, ಗೊಂಡ, ಕುರುಬ ಗೌಡ್ರು, ಕಾಡು ಕುರುಬ ಎಂಬಿತ್ಯಾದಿ ಹೆಸರುಗಳಲ್ಲಿ ಸಂಬೋಧಿಸುತ್ತಾರೆ.
ಆದರೆ ಸಮೀಕ್ಷೆ ಸಮಯದಲ್ಲಿ ಧರ್ಮ ಹಿಂದೂ ಧರ್ಮವೆಂದು, ಜಾತಿ ಕಲಂನದಲ್ಲಿ “ಕುರುಬ” ಎಂದು ಮಾತ್ರ ಬರೆಸಿ, ಉಪ ಜಾತಿ ಕಲಂನಲ್ಲೂ ಕುರುಬ ಎಂದು ಮಾತ್ರವೇ ನಮೂದಿಸಿ. ಕುಲ ಕಸುಬು ಕಲಂನಲ್ಲಿ ಕುರಿ ಮೇಕೆ ಮೇಯಿಸುವುದು ಎಂದು ಬರೆಸಿ ಎಂದು ಮನವಿ ಮಾಡಿದರು.
ಮಿಕ್ಕಂತೆ ನಿಮ್ಮ ಶೈಕ್ಷಣಿಕ ಅರ್ಹತೆ, ಉದ್ಯೋಗ, ಆದಾಯ ಇನ್ನಿತರೆ ವಿಷಯಗಳ ಕಲಂನಲ್ಲಿ ವಾಸ್ತವ ವಿಚಾರವನ್ನು ನಮೂದಿಸಿ ಎಂದು ಮನವಿ ಮಾಡಿದರು.
ಪ್ರಧಾನ ಕಾರ್ಯದರ್ಶಿ ಎಂ.ರಾಮಾಂಜಿನಪ್ಪ, ಉಪಾಧ್ಯಕ್ಷ ವೀರಾಪುರ ರಾಮಣ್ಣ, ಮುತ್ತುಕದಹಳ್ಳಿ ಮುನೇಗೌಡ, ಸುಬ್ರಮಣಿ(ಸುಬ್ಬು), ಮಂಜುನಾಥ್ ಹಾಜರಿದ್ದರು.
Sidlaghatta : ರಾಜ್ಯ ಸರ್ಕಾರ ಹಮ್ಮಿಕೊಂಡಿರುವ ಸಾಮಾಜಿಕ ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಸಾಕಷ್ಟು ನ್ಯೂನತೆಗಳಿದ್ದು ಇವುಗಳನ್ನು ಸರಿಪಡಿಸಿದ ನಂತರವಷ್ಟೇ ಸಮೀಕ್ಷೆ ನಡೆಸಲು ರಾಜ್ಯ ಸರ್ಕಾರ ಮುಂದಾಗಬೇಕು ಎಂದು ತಾಲ್ಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ಎ.ಎಸ್.ರವಿ ಆಗ್ರಹಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.
ಬ್ರಾಹ್ಮಣ ಸಮುದಾಯದಲ್ಲಿ ನಾವು ಈವರೆಗೂ ಕಂಡರಿಯದ ಕ್ರಿಶ್ಚಿಯನ್ ಬ್ರಾಹ್ಮಣ, ವಕ್ಕಲಿಗ ಬ್ರಾಹ್ಮಣ, ಕುರುಬ ಬ್ರಾಹ್ಮಣ ಎಂದು ಸಮೀಕ್ಷೆಯ ಕಾಲಂನಲ್ಲಿ ಸೇರಿಸಿರುವುದು ನಮಗೆಲ್ಲರಿಗೂ ನೋವುಂಟು ಮಾಡಿದೆ. ಹಾಗಾಗಿ ಕೂಡಲೇ ಸಮೀಕ್ಷೆಯ ನಮೂನೆಯಲ್ಲಿ ಈ ಮೇಲ್ಕಂಡ ಉಪಜಾತಿಗಳನ್ನು ತೆಗೆದ ನಂತರವಷ್ಟೇ ಸಮೀಕ್ಷೆ ನಡೆಸಬೇಕು ಎಂದು ಒತ್ತಾಯಿಸಿದರು.
ರಾಜ್ಯಾದ್ಯಂತ ಏಕಕಾಲದಲ್ಲಿ ನಡೆಯುತ್ತಿರುವ ಈ ಸಮೀಕ್ಷೆಯಲ್ಲಿ ಸಮುದಾಯದವರು ಧರ್ಮದ ಕಾಲಂನಲ್ಲಿ “ಹಿಂದೂ” ಎಂದು, ಜಾತಿ ಕಾಲಂನಲ್ಲಿ “ಬ್ರಾಹ್ಮಣ” ಎಂತಲೂ ನಮೂದಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬ್ರಾಹ್ಮಣ ಸಂಘದ ರಾಜ್ಯ ಸಂಘಟನಾ ಸಂಚಾಲಕ ಎಸ್.ವಿ.ನಾಗರಾಜರಾವ್, ರಾಜ್ಯ ಸಮಿತಿ ಸದಸ್ಯ ಎನ್.ಶ್ರೀಕಾಂತ್, ತಾಲ್ಲೂಕು ಸಂಘದ ಉಪಾಧ್ಯಕ್ಷ ಬಿ.ಆರ್.ನಟರಾಜ್, ಖಜಾಂಚಿ ಕೃಷ್ಣಮೂರ್ತಿ, ಜಿಲ್ಲಾ ಬ್ರಾಹ್ಮಣ ಪುರೋಹಿತರ ಮತ್ತು ಆಗಮೀಕರ ಸಂಘದ ಅಧ್ಯಕ್ಷ ರಾಮಮೋಹನಶಾಸ್ತ್ರಿ, ಜಿಲ್ಲಾ ಖಜಾಂಚಿ ಎಸ್.ಸತ್ಯನಾರಾಯಣ ಹಾಜರಿದ್ದರು.
Sidlaghatta : ಕೇಂದ್ರ ಸರ್ಕಾರ GST ದರ ಇಳಿಕೆ ಮಾಡಿರುವ ಹಿನ್ನೆಲೆಯಲ್ಲಿ ನಗರದಲ್ಲಿ BJP ವತಿಯಿಂದ ಸೋಮವಾರ ಸಂಭ್ರಮಾಚರಣೆ ನಡೆಯಿತು.
ಕೋಟೆ ವೃತ್ತದಲ್ಲಿ ಜಿಲ್ಲಾ ಬಿಜೆಪಿ ಘಟಕದ ವತಿಯಿಂದ “ಜಿ.ಎಸ್.ಟಿ ಇಳಿಕೆಯ ಉಡುಗೊರೆಗೆ ಮೋದಿ ಸರ್ಕಾರಕ್ಕೆ ಧನ್ಯವಾದಗಳು” ಎಂಬ ಘೋಷವಾಕ್ಯದ ಅಡಿಯಲ್ಲಿ ಪರಸ್ಪರ ಸಿಹಿ ಹಂಚಿಕೊಂಡು ಸಂಭ್ರಮ ವ್ಯಕ್ತಪಡಿಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ ಮಾತನಾಡಿ, “ಕೇಂದ್ರ ಸರ್ಕಾರ ಜಿ.ಎಸ್.ಟಿ ಇಳಿಕೆ ಮಾಡಿ ಜನತೆಗೆ ನವರಾತ್ರಿ ಉಡುಗೊರೆ ನೀಡಿದೆ. ದೇಶದ ಇತಿಹಾಸದಲ್ಲಿ ಇಷ್ಟು ದೊಡ್ಡ ಮಟ್ಟದಲ್ಲಿ ಜಿ.ಎಸ್.ಟಿ ಇಳಿಸಿದ ಉದಾಹರಣೆ ಇಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ನಿರ್ಧಾರದಿಂದ ಬಡ ಮತ್ತು ಮಧ್ಯಮ ವರ್ಗದ ಜನತೆಗೆ ಅನುಕೂಲವಾಗಿದೆ” ಎಂದು ಹೇಳಿದರು. ರಾಜ್ಯ ಸರ್ಕಾರದ ಉಚಿತ ಗ್ಯಾರಂಟಿಗಳಿಂದ ಖಜಾನೆ ಖಾಲಿಯಾಗುತ್ತಿದ್ದರೆ, ಕೇಂದ್ರ ಸರ್ಕಾರದ ಈ ಕ್ರಮ ಜನರ ಕೊಳ್ಳುವ ಶಕ್ತಿ ಹಾಗೂ ಆರ್ಥಿಕತೆಗೆ ಬಲ ತುಂಬಿದೆ ಎಂದು ಅಭಿಪ್ರಾಯಪಟ್ಟರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುರಳೀಧರ ಮಾತನಾಡಿ, “ಸ್ವದೇಶಿ ವಸ್ತುಗಳ ಬಳಕೆ ಹೆಚ್ಚಿದಷ್ಟೂ ಬೇರೆ ದೇಶಗಳ ಅವಲಂಬನೆ ಕಡಿಮೆಯಾಗುತ್ತದೆ. ಆರ್ಥಿಕವಾಗಿ ದೇಶ ಬಲಿಷ್ಠವಾಗಲು ಇದು ನೆರವಾಗುತ್ತದೆ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಎಂ. ರಾಜಣ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಧು ಸೂರ್ಯನಾರಾಯಣ, ಚಿಂತಾಮಣಿ ವೇಣುಗೋಪಾಲ್, ಜಿಲ್ಲಾ ಕಾರ್ಯದರ್ಶಿಗಳು ನಂದೀಶ್, ಅಶೋಕ್, ಹಿರಿಯ ಮುಖಂಡ ಲಕ್ಷ್ಮೀನಾರಾಯಣ್ ಗುಪ್ತ, ರಾಜ್ಯ ಮಹಿಳಾ ಮೋರ್ಚಾ ಕಾರ್ಯದರ್ಶಿ ನಿರ್ಮಲಮ್ಮ, ತಾಲ್ಲೂಕು ಅಧ್ಯಕ್ಷ ಸೀಕಲ್ ಆನಂದಗೌಡ, ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷೆ ಚಾತುರ್ಯ ಸೇರಿದಂತೆ ಹಲವರು ಹಾಜರಿದ್ದರು.
Y Hunasenahalli, Sidlaghatta : ತಮ್ಮೂರು, ಗ್ರಾಮಗಳಲ್ಲಿನ ಸರ್ಕಾರಿ ಶಾಲೆಗಳಲ್ಲಿ ಮೂಲ ಸೌಕರ್ಯಗಳನ್ನು ಒದಗಿಸಲು ಇಲ್ಲಿಯೇ ಓದಿದ ಹಿರಿಯ ವಿದ್ಯಾರ್ಥಿಗಳು, ಆರ್ಥಿಕವಾಗಿ ಸಶಕ್ತವಾಗಿರುವವರು, ಜನಪ್ರತಿನಿಧಿಗಳು ಮುಂದಾಗಬೇಕೆಂದು ಜೆ.ಎಂ.ಎಫ್.ಸಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ಮೊಹಮ್ಮದ್ ರೋಷನ್ ಷಾ ಗ್ರಾಮಸ್ಥರಲ್ಲಿ ಮನವಿ ಮಾಡಿದರು.
ತಾಲ್ಲೂಕಿನ ವೈ.ಹುಣಸೇನಹಳ್ಳಿಯ ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡಿ ಶಾಲೆಯ ಗೋಡೆಗಳು, ಮೇಲ್ಚಾವಣಿ ಹಾಗೂ ನೆಲ ಹಾಸು ಹಾಳಾಗಿರುವುದರೊಂದಿಗೆ ಸುಣ್ಣ ಬಣ್ಣ ಕಳೆದುಕೊಂಡ ಗೋಡೆಗಳು ಶಾಲೆಯ ವಾತಾವರಣವನ್ನೇ ಕೆಡಸಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದರು.
ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರು, ಸದಸ್ಯರು, ಪೋಷಕರಲ್ಲದೆ ಸ್ಥಳದಲ್ಲಿದ್ದ ಗ್ರಾಮಸ್ಥರೊಂದಿಗೆ ಶಾಲೆಯ ಸ್ಥಿತಿ ಗತಿ ಬಗ್ಗೆ ಚರ್ಚಿಸಿದರು. ಶಾಲೆಗೆ ಮೂಲ ಸೌಕರ್ಯಗಳನ್ನು ಕಲ್ಪಿಸಿ ಅಭಿವೃದ್ದಿಪಡಿಸಿ ಕಲಿಕೆಗೆ ಪೂರಕ ವಾತಾವರಣ ನಿರ್ಮಿಸುವುದು ಸರ್ಕಾರದ ಜವಾಬ್ದಾರಿ. ಹಾಗಂತ ಎಲ್ಲದಕ್ಕೂ ಸರ್ಕಾರದ ಮೇಲೆ ಅವಲಂಬನೆ ಸರಿಯಲ್ಲ. ನಾವು ಏನಾದರೂ ಮಾಡಬಹುದಲ್ಲಾ ಎಂದು ಪ್ರಶ್ನಿಸಿದರು.
ಈ ಶಾಲೆಯಲ್ಲಿ ಓದಿದ ಅನೇಕರು ಸಮಾಜದಲ್ಲಿ ಉನ್ನತ ಸ್ಥಾನ ಮಾನದಲ್ಲಿರುತ್ತೀರಿ. ಸರ್ಕಾರಿ ನೌಕರಿ, ಸ್ವಯಂ ಉದ್ಯೋಗ, ಉದ್ದಿಮೆದಾರರಾಗಿರಬಹುದು ಅಥವಾ ರಾಜಕಾರಣಿ, ಸಮಾಜ ಸೇವಕರೂ ಆಗಿರಬಹುದು. ಎಲ್ಲರೂ ಕೈ ಜೋಡಿಸಿದರೆ ಈ ಶಾಲೆಗೆ ಹೊಸ ರೂಪ ನೀಡಬಹುದಲ್ಲವೇ ಎಂದರು. ಸ್ಥಳದಲ್ಲಿದ್ದ ಕೆಲ ಮುಖಂಡರು ಆಯ್ತು ಸ್ವಾಮಿ ಶಾಸಕರ ಗಮನಕ್ಕೆ ತಂದು ಸರಿಪಡಿಸುತ್ತೇವೆ ಎಂದರು.
ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು ಬೇಡ ಎಲ್ಲ ಭಾರವನ್ನೂ ಶಾಸಕರ ಮೇಲೆ ಹಾಕುವುದು ಬೇಡ. ಅವರು ಸರ್ಕಾರದಿಂದ ಬರುವ ಸವಲತ್ತುಗಳನ್ನು ಒದಗಿಸಿಕೊಡುತ್ತಾರೆ. ನೀವು ಸ್ಥಳೀಯರು ಒಬ್ಬೊಬ್ಬರು ಒಂದೊಂದು ಜವಾಬ್ದಾರಿ ತಗೊಳ್ಳಿ. ಒಂದೊಂದು ಕೊಠಡಿಗೆ ಸುಣ್ಣ ಬಣ್ಣದ ಜವಾಬ್ದಾರಿ ಒಬ್ಬೊಬ್ಬರು ತಗೊಳ್ಳಿ, ನೆಲ ಹಾಸು ಹಾಕಿಸಲು ಇನ್ನೊಬ್ಬರು ಹೀಗೆ ನಿಮ್ಮ ಕೈಲಾದಷ್ಟು ನೆರವು ನೀಡಿ ಎಂದು ಮನವಿ ಮಾಡಿದರು.
ನಾವು ನೀವೆಲ್ಲರೂ ಇಂತಹ ಸರ್ಕಾರಿ ಶಾಲೆಯಲ್ಲೇ ಅಲ್ಲವಾ ಓದಿ ಬೆಳೆದಿದ್ದು. ನಾವೀಗ ಇರುವ ಸ್ಥಾನ ಅಲಂಕರಿಸಿದ್ದು. ನಮ್ಮ ಶಾಲೆಗಳನ್ನು ನಾವೇ ಅಭಿವೃದ್ದಿಪಡಿಸೋಣ, ದೇವಾಲಯಗಳು, ಜಾತ್ರೆ ಹಬ್ಬ ಹರಿದಿನ ಅಂತ ಸಾಕಷ್ಟು ಖರ್ಚು ಮಾಡುತ್ತೇವೆ ಅಲ್ಲವೇ ? ಅದರಲ್ಲಿ ಒಂದಷ್ಟು ಭಾಗವನ್ನು ನಮ್ಮ ಮಕ್ಕಳು ಓದುತ್ತಿರುವ ಶಾಲೆಗೆ ಹಾಕೋಣ, ಮಕ್ಕಳು ಓದಿ ನಮ್ಮ ನೆರವನ್ನು ಸ್ಮರಿಸುತ್ತಾರೆ. ಓದಿಗೆ ಪೂರಕ ವಾತಾವರಣವನ್ನು ಕಲ್ಪಿಸಿದರೆ ಅದರಿಂದ ಅವರಿಗೆ ಅನುಕೂಲ ಆಗುತ್ತದೆ ಎಂದು ಗ್ರಾಮಸ್ಥರಲ್ಲಿ ಕೋರಿದರು.
ನ್ಯಾಯಾಧೀಶರ ಮಾತಿಗೆ ಓಗೂಟ್ಟ ಗ್ರಾಮಸ್ಥರು ಆಯ್ತು ಎರಡು ತಿಂಗಳು ಸಮಯ ಕೊಡಿ ಸ್ವಾಮಿ ನೀವು ಹೇಳಿದಂತೆ ನಾವೆಲ್ಲರೂ ಕೂತು ಮಾತನಾಡಿ ಈ ಶಾಲೆಗೆ ಸುಣ್ಣ ಬಣ್ಣ ಬಳಿದು ನೆಲ ಹಾಸು ಸರಿಪಡಿಸುವಂತ ಕಾರ್ಯವನ್ನು ಮಾಡುತ್ತೇವೆಂದು ಭರವಸೆ ನೀಡಿದರು.
ವಕೀಲರ ಸಂಘದ ಅಧ್ಯಕ್ಷ ಎ.ನಾರಾಯಣಸ್ವಾಮಿ, ಸ್ಥಳೀಯ ಮುಖಂಡರಾದ ಬೂಸಾ ನಾರಾಯಣಸ್ವಾಮಿ, ಕದಿರಿನಾಯಕನಹಳ್ಳಿ ರವಿಕುಮಾರ್, ಬಸವನಪರ್ತಿ ವೆಂಕಟೇಶ್, ಬೇಕರಿ ಗೌಡ, ಎಸ್.ಡಿ.ಎಂ.ಸಿ ಅಧ್ಯಕ್ಷೆ ಚೈತ್ರ, ಬಿಆರ್‌ಪಿ ಮಂಜುನಾಥ್, ಶಿಕ್ಷಕಿ ಹಂಸವೇಣಿ ಹಾಜರಿದ್ದರು.
Sidlaghatta : ರಾಜ್ಯ ಸರ್ಕಾರ ಹಮ್ಮಿಕೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವೇಳೆ ಸಮುದಾಯದ ಪ್ರತಿಯೊಬ್ಬರೂ ಮನೆಗೆ ಭೇಟಿ ನೀಡುವ ಗಣತಿದಾರರಿಗೆ ಜಾತಿ ಕಾಲಂನಲ್ಲಿ ಕೇವಲ “ಮಡಿವಾಳ” ಎಂದಷ್ಟೇ ನಮೂದಿಸಬೇಕು ಎಂದು ಮಡಿವಾಳ ಸಂಘದ ಅಧ್ಯಕ್ಷ ಕೃಷ್ಣಪ್ಪ ಮನವಿ ಮಾಡಿದ್ದಾರೆ.
ಭಾನುವಾರ ನಗರದಲ್ಲಿನ ಮಡಿವಾಳ ಮಾಚಿದೇವ ಯುವಕರ ಸಂಘದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ದಾಖಲಾತಿಗಳಲ್ಲಿ “ಅಗಸ”, “ಧೋಬಿ” ಮುಂತಾದ ಹಲವು ಹೆಸರುಗಳನ್ನು ಬಳಸಲಾಗುತ್ತಿದ್ದರೂ ಇನ್ನು ಮುಂದೆ ಯಾವುದೇ ಗೊಂದಲ ತಪ್ಪಿಸಲು ಕೇವಲ “ಮಡಿವಾಳ” ಎಂದು ಮಾತ್ರ ನಮೂದಿಸುವುದು ಅತ್ಯಾವಶ್ಯಕ ಎಂದು ತಿಳಿಸಿದರು.
ರಾಜ್ಯಾದ್ಯಂತ ನಡೆಯುತ್ತಿರುವ ಸಮೀಕ್ಷೆಯಲ್ಲಿ ಸಮುದಾಯದವರು ಒಂದೇ ಹೆಸರು ಬಳಸಿದರೆ, ಸರ್ಕಾರದಿಂದ ಸಿಗುವ ಸೌಲಭ್ಯಗಳು ಸಮಗ್ರವಾಗಿ ತಲುಪಲು ಸಹಕಾರಿ ಆಗಲಿದೆ ಎಂದು ಹೇಳಿದರು. ಸಮುದಾಯದ ಪ್ರತಿಯೊಬ್ಬರೂ ಗಣತಿದಾರರಿಗೆ ಸಂಪೂರ್ಣ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಡಿವಾಳ ಮಾಚಿದೇವ ಯುವಕರ ಸಂಘದ ಉಪಾಧ್ಯಕ್ಷ ಹರೀಶ್, ಕಾರ್ಯದರ್ಶಿ ಎಚ್.ಎಂ. ಮುನಿರಾಜು, ನಿಕಟ ಪೂರ್ವ ಅಧ್ಯಕ್ಷ ಕೊರಿಯರ್ ರಾಜು, ಖಜಾಂಚಿ ಎಂ.ದೇವರಾಜು, ನಿರ್ದೇಶಕರಾದ ಎಚ್.ಸಿ. ರಮೇಶ್, ಕೆ.ಶಂಕರಪ್ಪ, ಟ್ರೈಲರ್ ನಾರಾಯಣಸ್ವಾಮಿ, ಕೆ.ಎಂ. ಮುನಿರಾಜು, ಆಂಜಿನಪ್ಪ, ಎಲ್.ಆನಂದ್, ಗಂಗಾಧರ ಮತ್ತು ಚಂದ್ರಪ್ಪ ಹಾಜರಿದ್ದರು.
Jangamakote, sidlaghatta : ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆಯಲ್ಲಿ ಪ್ರಸನ್ನ ಗಂಗಾಧರೇಶ್ವರಸ್ವಾಮಿ ಗೆಳೆಯರ ಬಳಗದ ವತಿಯಿಂದ 20 ಅಡಿ ಎತ್ತರದ ಗಣಪತಿ ಮೂರ್ತಿಯ ಉತ್ಸವ ಹಾಗೂ ಆನೆಯ ಮೇಲೆ ಪಾರ್ವತಾಂಬ ಸಮೇತ ಗಂಗಾಧರೇಶ್ವರಸ್ವಾಮಿಯ ಮೆರವಣಿಗೆ ಭವ್ಯವಾಗಿ ಜರುಗಿತು.
ದೇವಾಲಯದಿಂದ ಹೊರಟ ಮೆರವಣಿಗೆಯಲ್ಲಿ ಆನೆಯ ಮೇಲಿನ ಸ್ವಾಮಿಯ ಪ್ರತಿಷ್ಠಾಪನೆ, ಗ್ರಾಮದೇವರ ಪಲ್ಲಕ್ಕಿಗಳು, ತಮಟೆ-ಡೋಳಗಳ ಸದ್ದು, ಕೀಲುಕುದುರೆಗಳ ಮೆರಗು, ಸಾಂಸ್ಕೃತಿಕ ಕಲಾತಂಡಗಳ ಪ್ರದರ್ಶನಗಳು ಹಾಗೂ ಯುವಕರ ನೃತ್ಯ-ಸಂಭ್ರಮ ಗ್ರಾಮದೆಲ್ಲೆಡೆ ಆಕರ್ಷಣೆಯ ಕೇಂದ್ರವಾಗಿತ್ತು. ಹೂವಿನ ಮಳೆ, ಪಟಾಕಿ ಸಿಡಿತದ ನಡುವೆ ಜಂಗಮಕೋಟೆ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಸಾವಿರಾರು ಭಕ್ತರು ಪಾಲ್ಗೊಂಡು ಉತ್ಸವಕ್ಕೆ ವಿಶಿಷ್ಟತೆ ನೀಡಿದರು.
ಹಿಂದೂ-ಮುಸ್ಲಿಂ ಸಮುದಾಯದ ಮುಖಂಡರು ಸಾಮರಸ್ಯದ ಸಂಕೇತವಾಗಿ ಮೆರವಣಿಗೆಯಲ್ಲಿ ಭಾಗವಹಿಸಿದರು. ಜಂಗಮಕೋಟೆಯ ಗಂಗಾಧರೇಶ್ವರಸ್ವಾಮಿ ದೇವಾಲಯದಿಂದ ಜಂಗಮಕೋಟೆ ಕ್ರಾಸ್‌ವರೆಗೆ ಮೆರವಣಿಗೆ ಸಾಗಿತು.
ಬಿಜೆಪಿ ಜಿಲ್ಲಾಧ್ಯಕ್ಷ ರಾಮಚಂದ್ರೇಗೌಡ, ಕಾಂಗ್ರೆಸ್ ಮುಖಂಡ ಪುಟ್ಟು ಆಂಜಿನಪ್ಪ, ಮಾಜಿ ಸಚಿವ ಎಚ್.ಎಂ. ಮುನಿಯಪ್ಪ ಸೇರಿದಂತೆ ಹಲವು ರಾಜಕೀಯ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಮಾತನಾಡಿದ ರಾಮಚಂದ್ರೇಗೌಡ, ಯುವಕರು ಒಗ್ಗಟ್ಟಿನಿಂದ ಗಣೇಶೋತ್ಸವವನ್ನು ಯಶಸ್ವಿಯಾಗಿ ನೆರವೇರಿಸಿರುವುದು ಸಂತಸದ ವಿಚಾರವಾಗಿದ್ದು, ಇಂತಹ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಸಮಾಜದಲ್ಲಿ ಶ್ರೇಷ್ಠ ವ್ಯಕ್ತಿಗಳಾಗಿ ಬೆಳೆವಂತೆ ಕರೆ ನೀಡಿದರು.
ಮೆರವಣಿಗೆಯ ಹಿನ್ನೆಲೆಯಲ್ಲಿ ಸರ್ಕಲ್ ಇನ್ಸ್‌ಪೆಕ್ಟರ್ ಎಂ.ಶ್ರೀನಿವಾಸ್ ಅವರ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಈ ಸಂದರ್ಭದಲ್ಲಿ ಬಿಜೆಪಿ ತಾಲ್ಲೂಕು ಅಧ್ಯಕ್ಷ ಆನಂದಗೌಡ, ಗ್ರಾಮ ಪಂಚಾಯಿತಿ ಸದಸ್ಯ ಚಂದ್ರಮೋಹನ್, ಫಯಾಜ್, ಜೆ.ಎಂ.ಮೂರ್ತಿ, ಎಲ್.ಮುನಿರಾಜು, ಜೆ.ಎಸ್.ಮಂಜುನಾಥ್, ಮೆಡಿಕಲ್ ಮಂಜುನಾಥ್, ಮುನ್ನಾಸೀರ್, ಅಂಬರೀಶ್ ಹಾಗೂ ಅರ್ಚಕ ಸುರೇಂದ್ರಬಾಬು ಹಾಜರಿದ್ದರು.
Sidlaghatta : ಶಿಡ್ಲಘಟ್ಟ ಪ್ರಥಮ ದರ್ಜೆ ಕಾಲೇಜಿನಲ್ಲಿ ಎಸ್.ಸಿ.ಐ ನವಜೀವನ ಸೇವಾ ಸಂಘ, ಎಪಿಡಿ ಸಂಸ್ಥೆ ಬೆಂಗಳೂರು ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಯೋಗದಲ್ಲಿ ವಿಶ್ವ ಬೆನ್ನುಹುರಿ ಅಪಘಾತ ವಿಶೇಷ ಚೇತನರ ದಿನಾಚರಣೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಎಸ್.ಸಿ.ಐ ನವಜೀವನ ಸೇವಾ ಸಂಘದ ಅಧ್ಯಕ್ಷ ಮುನಿರಾಜು, ಬೆನ್ನುಹುರಿ ಅಪಘಾತಕ್ಕೆ ಒಳಗಾದ ವಿಶೇಷ ಚೇತನರನ್ನು ರಾಜ್ಯ ಸರ್ಕಾರವು 2016ರ ಕಾಯಿದೆಯ ಅಡಿಯಲ್ಲಿ ಗುರುತಿಸಲಾದ 21 ಅಂಗವಿಕಲತೆಗಳ ಪಟ್ಟಿಗೆ 22ನೇ ಅಂಗವಿಕಲತೆಯಾಗಿ ಸೇರಿಸಬೇಕು ಎಂದು ಒತ್ತಾಯಿಸಿದರು. ಜೊತೆಗೆ ರಾಜ್ಯದ ಎಲ್ಲಾ ವಿಶೇಷ ಚೇತನರ ಮಾಸಿಕ ಪಿಂಚಣಿಯನ್ನು 5 ಸಾವಿರ ರೂಪಾಯಿಗೆ ಹೆಚ್ಚಿಸಬೇಕೆಂದರು. ಅಪಘಾತಕ್ಕೊಳಗಾದವರಿಗೆ ಉಚಿತ ಮೆಡಿಕಲ್ ಕಿಟ್ ಹಾಗೂ ಪುನರ್ವಸತಿ ಕೇಂದ್ರಗಳ ವ್ಯವಸ್ಥೆ ಸರ್ಕಾರದಿಂದಲೇ ಆಗಬೇಕು ಎಂದರು.
ಎಪಿಡಿ ಸಂಸ್ಥೆಯ ಸಂಪನ್ಮೂಲ ವ್ಯಕ್ತಿ ಶ್ರೀಕಾಂತ್, ರಸ್ತೆ ಅಪಘಾತಗಳು, ಎತ್ತರ ಏರುವುದು, ಅತಿಯಾದ ಭಾರ ಹೊರುವುದರಿಂದ ಬೆನ್ನುಹುರಿ ಅಪಘಾತಗಳು ಸಂಭವಿಸುತ್ತವೆ ಎಂದು ಹೇಳಿ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಬೇಕೆಂದರು. ಕಾಲೇಜಿನ ಪ್ರಾಂಶುಪಾಲ ಮುರಳಿಆನಂದ್, ವಿದ್ಯಾರ್ಥಿಗಳು ದ್ವಿಚಕ್ರ ವಾಹನ ಓಡಿಸುವಾಗ ವಿಶೇಷ ಜಾಗ್ರತೆ ವಹಿಸಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಬೆನ್ನುಹುರಿ ಅಪಘಾತಕ್ಕೊಳಗಾದ ಐವರು ವಿಶೇಷ ಚೇತನರನ್ನು ಅವರ ಸಾಧನೆಗಾಗಿ ಸನ್ಮಾನಿಸಲಾಯಿತು. ಔಷಧಿ ಕಿಟ್ ವಿತರಣೆ ಹಾಗೂ ವಿಶೇಷ ಚೇತನ ಮಕ್ಕಳಿಗೆ ವಿದ್ಯಾರ್ಥಿವೇತನ ವಿತರಣೆ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ಜ್ಯೋತಿಲಕ್ಷ್ಮಿ, ವಕೀಲ ಜಗದೀಶ್, ಎಂ.ಆರ್.ಡಬ್ಲ್ಯೂ ರಾಮಚಂದ್ರ, ಸಂಘದ ಕಾರ್ಯದರ್ಶಿ ರವಿ, ಉಪಾಧ್ಯಕ್ಷ ಮಂಜುನಾಥ್, ಸಮರ್ಥನಂ ಸಂಸ್ಥೆಯ ಪವಿತ್ರ, ಎಪಿಡಿ ಸಂಸ್ಥೆಯ ಸುಧಾ ಹಾಗೂ ಗಿರಿಜಾ ಉಪಸ್ಥಿತರಿದ್ದರು.