ತಾಲ್ಲೂಕು ಸರ್ಕಾರಿ ನೌಕರರ ಭವನದಲ್ಲಿ ಮಂಗಳವಾರ ತಾಲ್ಲೂಕು ವೈದ್ಯಕೀಯ ಗುತ್ತಿಗೆ ಮತ್ತು ಹೊರ ಗುತ್ತಿಗೆ ನೌಕರರ ಸಂಘದ ಪದಾಧಿಕಾರಿಗಳು ಹಾಗೂ ನೌಕರರು ಸಭೆ ಸೇರಿ ಮುಷ್ಕರದ ರೂಪುರೇಶೆಗಳನ್ನು ಚರ್ಚಿಸಿದರು.
ರಾಜ್ಯಮಟ್ಟದಲ್ಲಿ ವೈದ್ಯಕೀಯ ಗುತ್ತಿಗೆ ಮತ್ತು ಹೊರ ಗುತ್ತಿಗೆ ನೌಕರರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅನಿರ್ಧಿಷ್ಟಾವಧಿ ಮುಷ್ಕರ ನಡೆಸುತ್ತಿದ್ದಾರೆ. ಇದರಲ್ಲಿ ಶಿಡ್ಲಘಟ್ಟ ತಾಲ್ಲೂಕಿನ ಸುಮಾರು 120 ಕ್ಕೂ ಹೆಚ್ಚು ನೌಕರರು ಕರ್ತವ್ಯ ಸ್ಥಗಿತಗೊಳಿಸಿ ಮುಷ್ಕರದಲ್ಲಿ ಭಾಗವಹಿಸಿದ್ದಾರೆ.
“ನೌಕರರು 15 ವರ್ಷಗಳಿಂದ ಕಡಿಮೆ ವೇತನಕ್ಕೆ ದುಡಿಯುತ್ತಿದ್ದಾರೆ. ಕೊರೊನದಂತಹ ಮಾರಣಾಂತಿಕ ಸಂದರ್ಭದಲ್ಲೂ ಆರೋಗ್ಯ ಸೇವೆಯನ್ನು ಮಾಡುತ್ತಲೇ ಬಂದಿದ್ದರೂ ಸರ್ಕಾರವು ನಮಗೆ ಕೊಡಬೇಕಾದ ಸೌಲಭ್ಯಗಳನ್ನು ನೀಡಿ ಇರುವುದಿಲ್ಲ. ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ನೌಕರರ ಬದುಕು ಅತಂತ್ರವಾಗಿದೆ. ಈಗಾಗಲೇ ಐದಾರು ದಿನಗಳಿಂದ ಮುಷ್ಕರ ಮಾಡುತ್ತಿದ್ದರೂ ನೌಕರರ ಬೇಡಿಕೆ ಈಡೇರಿಸಲು ಸರ್ಕಾರವು ಹಿಂದೇಟು ಹಾಕುತ್ತಿದೆ. ಸಮಾನ ಕೆಲಸಕ್ಕೆ ಸಮಾನ ವೇತನ, ಸೇವಾ ಭದ್ರತೆ ಬೇಕು. ಹೊರಗುತ್ತಿಗೆ ಪದ್ಧತಿಯನ್ನು ಕೈಬಿಡಬೇಕು. ನಮ್ಮ ವಿವಿಧ 14 ಬೇಡಿಕೆಗಳನ್ನು ಈಡೇರಿಕೆಗೆ ಆಗ್ರಹಿಸಿ ಮುಷ್ಕರ ಮುಂದುವರಿಸಲು ಒಮ್ಮತದಿಂದ ತೀರ್ಮಾನಿಸಿದೆವು” ಎಂದು ಸಂಘದ ಸದಸ್ಯರು ತಿಳಿಸಿದರು.
ವಿವಿಧ ಸಂಘಟನೆಗಳು ಒಗ್ಗೂಡಿ ಐಕ್ಯ ಹೋರಾಟ ಸಮಿತಿ ಅಡಿಯಲ್ಲಿ ಕರೆ ನೀಡಿದ್ದ ರಾಜ್ಯ ಬಂದ್ ಗೆ ತಾಲ್ಲೂಕಿನಲ್ಲಿ ಉತ್ತಮ ಬೆಂಬಲ ವ್ಯಕ್ತವಾಯಿತು. ಅಂಗಡಿಗಳು ತೆರೆದಿರಲಿಲ್ಲ. ವಾಹನ ಸಂಚಾರ ಮಧ್ಯಾಹ್ನದವರೆಗೂ ವಿರಳವಾಗಿದ್ದವು. ಬಂದ್ ಗೆ ಬೆಂಬಲಿಸಿದ್ದ ವಿವಿಧ ರೈತ ಸಂಘಗಳು ಹಾಗೂ ಇನ್ನಿತರ ಸಂಘಟನೆಗಳ ಸದಸ್ಯರು ಬೆಳಗ್ಗೆ ನಗರದ ಕೋಟೆ ವೃತ್ತದಿಂದ ಬಸ್ ನಿಲ್ದಾಣದವರೆಗೂ ಪಂಜಿನ ಮೆರವಣಿಗೆ ನಡೆಸಿದರು. ಬಸ್ ನಿಲ್ದಾಣದ ಬಳಿ ಮಾನವ ಸರಪಣಿ ನಿರ್ಮಿಸಿ ರಾಜ್ಯ ಮತ್ತು ಕೇಂದ್ರಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ರೈತರ ಹೆಸರಿನಲ್ಲಿ ಪ್ರಮಾಣ ಮಾಡಿ ಅಧಿಕಾರ ಹಿಡಿದ ಯಡಿಯೂರಪ್ಪನವರು ಇಂದು ರೈತರ ಎದೆಗೆ ನೇರಾನೇರಾ ಚೂರಿ ಹಾಕಿ ತಾನು ರೈತರ ಪರ ಅಲ್ಲ, ಕಾರ್ಪೊರೇಟ್ ಪರ ಎಂಬುದನ್ನು ರುಜುವಾತು ಪಡಿಸಿಕೊಂಡಿದ್ದಾರೆ ಎಂದು ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು. “ಉಳುವವರಿಗೇ ಭೂಮಿ” ಎಂಬ ಸಮಾಜವಾದಿ ಆಶಯದ ಕೊಲೆಗೈದು “ಉಳ್ಳವರದೇ ಎಲ್ಲಾ ಭೂಮಿ” ಎಂಬ ಬಲಾಢ್ಯ ಹಿತಾಸಕ್ತಿಯನ್ನು ಎತ್ತಿಹಿಡಿದಿದ್ದಾರೆ. ಕಾರ್ಪೋರೇಟ್ ಮತ್ತು ರಿಯಲ್ ಎಸ್ಟೇಟ್ ಲಾಭಿಗೆ ನಮ್ಮ ಬಡಜನರ ಬದುಕನ್ನು ಬಲಿ ಕೊಟ್ಟಿದ್ದಾರೆ ಎಂದು ಪ್ರತಿಭಟನಾ ನಿರತರು ದೂರಿದರು. ರಸ್ತೆಯಲ್ಲಿ ಕುಳಿತು ತಡೆ ನಡೆಸಿದ ಪ್ರತಿಭಟನಾಕಾರರನ್ನು ಪೊಲೀಸರು ಎಬ್ಬಿಸಿ ಕಳುಹಿಸಿದರು. ಈ ಸಂದರ್ಭದಲ್ಲಿ ಪೊಲೀಸರೊಂದಿಗೆ ಪ್ರತಿಭಟನಾಕಾರರು ವಾಗ್ವಾದ ನಡೆಸಿದರು. ನಂತರ ಬೈಕ್ ರ್‍ಯಾಲಿ ನಡೆಸಿದರು. ತಾಲ್ಲೂಕಿನ ಹಲವೆಡೆ ರಸ್ತೆ ತಡೆ ನಡೆಸಲು ಪ್ರಯತ್ನಿಸಿದ ಐಕ್ಯ ಹೋರಾಟ ಸಮಿತಿ ಸದಸ್ಯರನ್ನು ಪೊಲೀಸರು ಬಂಧಿಸಿರುವುದನ್ನು ಖಂಡಿಸಿ ರೈತಸಂಘದ ಸದಸ್ಯರು ಪೊಲೀಸ್ ಠಾಣೆಯ ಮುಂದೆ ಧರಣಿ ಕುಳಿತರು. ಡಿವೈಎಸ್ ಪಿ ಲಕ್ಶ್ಮಯ್ಯ ಆಗಮಿಸಿ ಬಂಧಿಸಿರುವವರನ್ನು ಬಿಡುಗಡೆ ಮಾಡುತ್ತೇವೆ, ಶಾಂತಿಯುತವಾಗಿ ಬಂದ್ ಆಚರಿಸಬೇಕು, ಯಾರೊಬ್ಬರಿಗೂ ಒತ್ತಡ ಹೇರಬಾರದು, ರಸ್ತೆ ತಡೆ ಮಾಡಬಾರದು ಎಂದು ತಿಳಿಸಿ ಧರಣಿ ಕುಳಿತವರನ್ನು ಮನವೊಲಿಸಿ ಕಳುಹಿಸಿದರು.
ರೈತಸಂಘ ಹಾಗೂ ಪ್ರಗತಿಪರ ಸಂಘಟನೆಗಳಿಂದ ರಾಜ್ಯ ಸರ್ಕಾರದ ವಿರುದ್ಧ ಭೂ ಸುದಾರಣೆ ಕಾಯ್ದೆ ಹಾಗೂ ಎಪಿಎಂಸಿ ಕಾಯ್ದೆಯನ್ನು ವಿರೋಧಿಸಿ ಸೆಪ್ಟೆಂಬರ್ 28 ರ ಸೋಮವಾರ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ತಾಲೂಕಿನಾದ್ಯಂತ ಅಂಗಡಿ ಮುಂಗಟ್ಟುಗಳನ್ನು ಸಂಪೂರ್ಣ ಬಂದ್ ಮಾಡುವಂತೆ ವಿವಿಧ ಸಂಘಟನೆಯ ಮುಖಂಡರು ಮನವಿ ಮಾಡಿದರು.
ನಗರದ ವೇಣುಗೋಪಾಲಸ್ವಾಮಿ ದೇವಸ್ಥಾನದಲ್ಲಿ ಶನಿವಾರ ರೈತಸಂಘ ಹಾಗೂ ಪ್ರಗತಿಪರ ಸಂಘಟನೆಗಳಿಂದ ಗುರುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ತಾಲ್ಲೂಕಿನಲ್ಲಿ ಸಂಪೂರ್ಣ ಬಂದ್ ಮಾಡುವ ಮೂಲಕ ವರ್ತಕರು ಸಹಕರಿಸಬೇಕು ಎಂದು ಮನವಿ ಮಾಡಿದರು.
ರೈತ ಸಂಘದ ತಾಲ್ಲೂಕು ಅಧ್ಯಕ್ಷ ಎಸ್.ಎಂ.ರವಿಪ್ರಕಾಶ್ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಭೂ ಸುದಾರಣೆ ಕಾಯ್ದೆ, ಎಪಿಎಂಸಿ ಕಾಯ್ದೆ, ವಿದ್ಯುತ್ ಖಾಸಗೀಕರಣ, ಮಸೂದೆ ಇವುಗಳನ್ನು ಸುಗ್ರೀವಾಜ್ಞೆ ಮೂಲಕ ಕೃಷಿಕರು ಹಾಗೂ ಕೃಷಿ ಕೂಲಿ ಕೆಲಸಗಾರರ ಮೇಲೆ ಮರಣ ಶಾಸನವನ್ನು ಬರೆಯಲು ಹೊರಟಿದೆ ಎಂದರು.
ಅಲ್ಲದೆ ಸೆಪ್ಟೆಂಬರ್ 28 ರಂದು ಕರ್ನಾಟಕ ರಾಜ್ಯ ರೈತ ಸಂಘ ಸಹಯೋಗದೊಂದಿಗೆ ಕರ್ನಾಟಕ ದಲಿತಪರ ಸಂಘಟನೆಗಳು, ಕೃಷಿ ಕಾರ್ಮಿಕರು, ದಲಿತ ಸಂಘರ್ಷ ಸಮಿತಿ,.ಕರ್ನಾಟಕ ರಕ್ಷಣಾ ವೇದಿಕೆ, ಯೂನಿಟಿ ಸಿಲ್ ಸಿಲಾ, ಸಿ.ಐ.ಟಿ.ಯು ಸೇರಿದಂತೆ ವಿವಿಧ ಸಂಘಟನೆಗಳು ಬೆಂಬಲಿಸಿದ್ದು ಸೋಮವಾರದ ಸಂಪೂರ್ಣ ಬಂದ್ ಗೆ ಎಲ್ಲರೂ ಸಹ ಸಹಕರಿಸಬೇಕು ಎಂದು ಮನವಿ ಮಾಡಿದರು.
ಎಸ್‌ಸಿಪಿ ಹಾಗೂ ಟಿಎಸ್‌ಪಿ ಯೋಜನೆಯಡಿ ನಡೆದಿರುವ ಅನುದಾನ ದುರುಪಯೋಗದ ಬಗ್ಗೆ ರಾಜ್ಯ ಮಟ್ಟದ ಉನ್ನತ ಅಧಿಕಾರಿಗಳಿಂದ ತನಿಖೆ ನಡೆಸಲು ಜಿಲ್ಲಾಧಿಕಾರಿಗಳು ನೀಡಿರುವ ಆಶ್ವಾಸನೆಯ ಹಿನ್ನಲೆಯಲ್ಲಿ ದಸಂಸ ಜಿಲ್ಲಾ ಘಟಕದ ಸೂಚನೆಯ ಮೇರೆಗೆ ಅನಿರ್ದಿಷ್ಟ ಅವಧಿ ಧರಣಿ ಸತ್ಯಾಗ್ರಹವನ್ನು ತಾತ್ಕಾಲಿಕವಾಗಿ ಹಿಂಪಡೆಯುತ್ತಿದ್ದೇವೆ ಎಂದು ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯ ಹಾಗೂ ದಲಿತ ಮುಖಂಡ ಗಂಜಿಗುಂಟೆ ನರಸಿಂಹಮೂರ್ತಿ ಹೇಳಿದರು.
ನಗರದ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಕಳೆದ ಮೇ 21 ರ ಸೋಮವಾರದಿಂದ ಹಮ್ಮಿಕೊಂಡಿದ್ದ ಅನಿರ್ದಿಷ್ಟ ಅವಧಿ ಧರಣಿ ಸತ್ಯಾಗ್ರಹದ ಆರನೇ ದಿನವಾದ ಶನಿವಾರ ಶಾಸಕರ ಆಪ್ತ ಸಹಾಯಕ ನಾರಾಯಣಗೌಡರ ಮೂಲಕ ಶಾಸಕರಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು.
ಎಸ್‌ಸಿಪಿ ಹಾಗೂ ಟಿಎಸ್‌ಪಿ ಯೋಜನೆಯಡಿ ನಡೆದಿರುವ ಅನುದಾನ ದುರುಪಯೋಗದ ಬಗ್ಗೆ ರಾಜ್ಯ ಮಟ್ಟದ ಉನ್ನತ ಅಧಿಕಾರಿಗಳಿಂದ ತನಿಖೆ ನಡೆಸಬೇಕು. ಅನುದಾನ ದುರ್ಬಳಕೆ ಮಾಡಿಕೊಂಡಿರುವ ಅಧಿಕಾರಿಗಳ ಹಾಗೂ ಗುತ್ತಿಗೆದಾರರ ವಿರುದ್ದ ಕ್ರಮ ಜರುಗಿಸಲು ಈಗಾಗಲೇ ಜಿಲ್ಲಾಧಿಕಾರಿಗಳು ಸಮಿತಿಯೊಂದನ್ನು ರಚಿಸಿದ್ದು ಮುಂಬರುವ ಅಕ್ಟೋಬರ್ 5 ರೊಳಗೆ ನಮ್ಮ ಬೇಡಿಕೆಗಳು ಈಡೇರಿಸುವ ಭರವಸೆ ನೀಡಿದ್ದಾರೆ. ಒಂದು ವೇಳೆ ಅಷ್ಟರೊಳಗೆ ಬೇಡಿಕೆಗಳು ಈಡೇರದಿದ್ದಲ್ಲಿ ಅಕ್ಟೋಬರ್ 10 ರಂದು ಜಿಲ್ಲಾಧಿಕಾರಿಗಳ ಕಚೇರಿಗೆ ಬೀಗಮುದ್ರೆ ಹಾಕುವ ಜೊತೆಗೆ ಜಿಲ್ಲಾದ್ಯಂತ ಉಗ್ರ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡುತ್ತಾ ಶಾಸಕರ ಗೈರು ಹಾಜರಿಯಲ್ಲಿ ಅವರ ಆಪ್ತ ಸಹಾಯಕ ನಾರಾಯಣಗೌಡರ ಮೂಲಕ ಶಾಸಕರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಸಂಘಟನಾ ಸಂಚಾಲಕರಾದ ಟಿ.ಎ.ಚಲಪತಿ, ಎಲ್.ವಿ.ವೆಂಕಟೇಶ್, ಡಿ.ಎಂ.ವೆಂಕಟೇಶ್, ಹುಜಗೂರು ವೆಂಕಟೇಶ್, ನಗರ ಸಂಚಾಲಕ ನರೇಶ್, ಶಿವು, ಚನ್ನಕೇಶವ ಹಾಜರಿದ್ದರು.
ಸಮಾನ ವೇತನ ಮತ್ತು ಸೇವಾ ಭದ್ರತೆ ನೀಡಬೇಕೆಂದು ಸರ್ಕಾರವನ್ನು ಒತ್ತಾಯಿಸಿ ಆರೋಗ್ಯ ಇಲಾಖೆಯ ಹೊರಗುತ್ತಿಗೆ ನೌಕರರು ಕೆಲಸಕ್ಕೆ ಹಾಜರಾಗದೇ ಸಾರ್ವಜನಿಕ ಆಸ್ಪತ್ರೆಯ ಮುಂದೆ ಶನಿವಾರ ಪ್ರತಿಭಟಿಸಿದರು. ಆರೋಗ್ಯ ಇಲಾಖೆಯ ಹೊರಗುತ್ತಿಗೆ ನೌಕರರ ಸಂಘದ ಸದಸ್ಯೆ ಮಂಗಳಾ ಮಾತನಾಡಿ, “2019 ರ ಫೆಬ್ರುವರಿ ತಿಂಗಳಿನಲ್ಲಿ ನಾವುಗಳು ಪ್ರತಿಭಟನೆ ನಡೆಸಿ ನಮ್ಮ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದೆವು. ಆದರೆ ಸರ್ಕಾರ ನಮ್ಮ ಬೇಡಿಕೆಯನ್ನು ಈಡೇರಿಸಲಿಲ್ಲ. ಜೂನ್ ತಿಂಗಳಿನಲ್ಲಿ ನಾವು ಪ್ರತಿಭಟನೆಗೆ ಮುಂದಾದಾಗ, ಸರ್ಕಾರ ಸಮಿತಿಯೊಂದನ್ನು ರಚಿಸುವುದಾಗಿ ಭರವಸೆ ನೀಡಿದ್ದರು. ಮೂರು ತಿಂಗಳಾದರೂ ನಮಗೆ ಸಮಾನ ವೇತನ ಮತ್ತು ಸೇವಾ ಭದ್ರತೆ ನೀಡಿಲ್ಲ. ಅದಕ್ಕಾಗಿ ಸೆಪ್ಟೆಂಬರ್ 24 ರಿಂದ ನಾವುಗಳು ಕೆಲಸಕ್ಕೆ ಹಾಜರಾಗದೇ ಮನೆಯಲ್ಲಿಯೇ ಉಳಿದು ಪ್ರತಿಭಟಿಸುತ್ತಿದ್ದೇವೆ. ಸರ್ಕಾರ ಸ್ಪಂದಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಧರಣಿ ಕೂರುತ್ತೇವೆ” ಎಂದು ಹೇಳಿದರು. ಆರೋಗ್ಯ ಇಲಾಖೆಯ ಹೊರಗುತ್ತಿಗೆ ನೌಕರರಾದ ಶ್ರೀನಿವಾಸ್, ಮಂಜುನಾಥ್, ಮನೋಹರ್, ನಾಗರಾಜ್, ನರಸಿಂಹಮೂರ್ತಿ, ಶಶಿಕುಮಾರ್, ಗಂಗಪ್ಪ, ಶಿವಪ್ಪ, ಬಾಲರಾಜು, ಮುನಿರತ್ನ, ಮಂಗಳಾ, ಪ್ರತಿಭಾ, ವಿಜಯಾ, ಮಮತಾ, ಚೈತ್ರಾ, ಭಾಗ್ಯಮ್ಮ ಹಾಜರಿದ್ದರು.
ಶಿಡ್ಲಘಟ್ಟದ ಬಸವೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿ ಶನಿವಾರ ವಚನ ಸಾಹಿತ್ಯ ಪರಿಷತ್ತು, ರೈತ ಸಂಘ, ಬಿಜೆಪಿ, ಕಲಾವಿದರು ಮುಂತಾದವರಿಂದ ಗಾಯಕ ಎಸ್.ಪಿ.ಬಾಲಸುಬ್ರಮಣ್ಯಂ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ನಾರಾಯಣಸ್ವಾಮಿ, ಬಿ.ಸಿ.ನಂದೀಶ್, ಕೃಷ್ಣ, ಮಂಜುನಾಥ್, ರಾಮಕೃಷ್ಣಪ್ಪ ಹಾಜರಿದ್ದರು
ನಗರದ ಬಿಜೆಪಿ ಕಚೇರಿಯಲ್ಲಿ ಹಾಗೂ ಬೆಳ್ಳೂಟಿ ಗೇಟ್ ಬಳಿಯ ನಾರ್ಥ್ ಈಸ್ಟ್ ಸುರೇಶ್ ಅವರ ಕಚೇರಿಯಲ್ಲಿ ಬಿಜೆಪಿ ಪಕ್ಷದ ವತಿಯಿಂದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಬಿಜೆಪಿ ಪಕ್ಷದ ನಗರ ಹಾಗೂ ಗ್ರಾಮೀಣ ಮಂಡಲದಿಂದ ಶುಕ್ರವಾರ ಪಂಡಿತ್ ದೀನ್‌ದಯಾಳ್ ಉಪಾಧ್ಯಾಯರ ಜಯಂತಿ ಅಂಗವಾಗಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಈಚೆಗೆ ನಿಧನರಾದ ಕೇಂದ್ರ ಸಚಿವ ಸುರೇಶ್ ಅಂಗಡಿ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ನಗರ ಮಂಡಲ ಅಧ್ಯಕ್ಷ ಎಸ್.ರಾಘವೇಂದ್ರ, ಗ್ರಾಮಾಂತರ ಮಂಡಲ ಉಪಾಧ್ಯಕ್ಷ ಅರಿಕೆರೆ ಮುನಿರಾಜು ಪಂಡಿತ್ ದೀನ್‌ದಯಾಳ್ ಉಪಾಧ್ಯಾಯರ ಜೀವನ, ಆದರ್ಶ, ಧ್ಯೇಯಗಳ ಕುರಿತಂತೆ ಮಾತನಾಡಿದರು.
ಸರಳ ಜೀವಿಯಾಗಿದ್ದ ಪಂಡಿತ್ ದೀನ್‌ದಯಾಳ್ ಉಪಾಧ್ಯಾಯ ಅವರ ಸಮಾಜ ಸೇವೆ, ಜನಪರ ಕಾಳಜಿ, ಜನರಿಗಾಗಿ ದುಡಿಯುವ ಮೂಲಕ ಉತ್ತಮ ಸೇವೆ ಯನ್ನು ಸಲ್ಲಿಸಿದ್ದು ವಿದ್ಯಾರ್ಥಿಗಳು ಸೇರಿದಂತೆ ನಾಗರೀಕರು ಅವರ ಆದರ್ಶವನ್ನು ನೆನೆಪಿಸಿಕೊಳ್ಳಬೇಕು ಎಂದರು.
ಮಹಿಳಾ ಮೋರ್ಚಾ ಅಧ್ಯಕ್ಷೆ ತ್ರಿವೇಣಿ, ಪ್ರಧಾನ ಕಾರ್ಯದರ್ಶಿ ಅಶ್ವಿನಿ, ಮಂಜುಳ, ಕೆ.ರೇಖಾ, ಲಕ್ಷ್ಮಮ್ಮ, ಮಾಜಿ ಶಾಸಕ ಎಂ.ರಾಜಣ್ಣ, ರಮೇಶ್‌ಬಾಯಿರಿ, ಆಂಜನೇಯಗೌಡ, ನರೇಶ್, ದೇವರಾಜ್, ಮುಖೇಶ್, ಸುಜಾತಮ್ಮ, ನಟರಾಜ್, ದಾಮೋದರ್, ರಾಮಚಂದ್ರ, ನರಸಿಂಹಯ್ಯ, ಅಂಬರೀಶ್, ಲಿಂಗಣ್ಣ ಹಾಜರಿದ್ದರು.