ಚಿಂತಾಮಣಿ 220/66 ಕೆ.ವಿ. ವಿದ್ಯುತ್ ಸ್ವೀಕರಣಾ ಕೇಂದ್ರದಲ್ಲಿ ಕವಿಪ್ರನಿನಿ ವತಿಯಿಂದ ನಿರ್ವಹಣಾ ಕಾಮಗಾರಿಯನ್ನು ಕೈಗೊಂಡಿರುವ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 14, 2025 ರಂದು ಬೆಳಿಗ್ಗೆ 9.00 ರಿಂದ ಸಂಜೆ 5.00ರವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳ್ಳಲಿದೆ ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.
ಈ ಅವಧಿಯಲ್ಲಿ ಚಿಂತಾಮಣಿ, ಶೆಟ್ಟಿಮಾದಮಂಗಲ, ಮಸ್ತೇನಹಳ್ಳಿ, ತಳಗವಾರ, ಚೀಮಂಗಳ, ವೈ-ಹುಣಸೇನಹಳ್ಳಿ, ಕೆ.ರಾಗುಟ್ಟಹಳ್ಳಿ, ಬೊಮ್ಮೆನಲ್ಲಿ ಕ್ರಾಸ್, ಏನಿಗದಳೆ, ಶಿಡ್ಲಘಟ್ಟ, ಮೇಲೂರು, ನಂದಿಗಾನಹಳ್ಳಿ, ಜಿ.ಕೋಡಿಹಳ್ಳಿ, ಇರಗಂಪಳ್ಳಿ, ಎಮ್.ಗೊಲ್ಲಹಳ್ಳಿ, ಗಂಜಿಗುಂಟೆ, ಬುರುಡುಗುಂಟೆ, ಪಲ್ಲಿಚರ್ಲು ಮತ್ತು ದಿಟ್ಟೂರಹಳ್ಳಿ 66/11 ಕೆ.ವಿ ಉಪ ವಿದ್ಯುತ್ ಕೇಂದ್ರಗಳಿಗೆ ವಿದ್ಯುತ್ ಸರಬರಾಜು ಸ್ಥಗಿತಗೊಳ್ಳಲಿದೆ.
ಇದರ ಪರಿಣಾಮವಾಗಿ ಶಿಡ್ಲಘಟ್ಟ ಪಟ್ಟಣ ಮತ್ತು ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಾದ್ಯಂತ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಸಾರ್ವಜನಿಕರು ಸಹಕರಿಸಬೇಕಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕಂದಾಯ ಅಧಿಕಾರಿ, ಸಿಬ್ಬಂದಿ ನಿಮ್ಮ ಮನೆ ಬಾಗಿಲಿಗೆ ಬರಲಿದ್ದು ಮೃತಪಟ್ಟ ನಿಮ್ಮ ಹಿರಿಯರ ಹೆಸರಿನಲ್ಲೇ ಇರುವ ಆಸ್ತಿಗಳ ದಾಖಲೆಗಳನ್ನು ಕುಟುಂಬದ ವಾರಸುದಾರರ ಹೆಸರಿಗೆ ಮಾಡಿಸಿಕೊಂಡು ನಿಮ್ಮ ಆಸ್ತಿಯನ್ನು ಸುಭದ್ರವಾಗಿಸಿಕೊಳ್ಳಿ, ದಾಖಲೆಗಳನ್ನು ಜೋಪಾನ ಮಾಡಿಕೊಳ್ಳಿ ಎಂದು ತಹಸೀಲ್ದಾರ್ ಗಗನ ಸಿಂಧು ಅವರು ಗ್ರಾಮಸ್ಥರಲ್ಲಿ ಮನವಿ ಮಾಡಿದರು.
ತಾಲ್ಲೂಕಿನ ದೇವರಮಳ್ಳೂರು ಗ್ರಾಮ ಪಂಚಾಯಿತಿಯ ಇದ್ಲೂಡು ಗ್ರಾಮದಲ್ಲಿ ಕಂದಾಯ ಇಲಾಖೆಯಿಂದ ತಾಲ್ಲೂಕಿನಲ್ಲಿ ನಡೆಸುತ್ತಿರುವ ಫವತಿ ಆಂದೋಲನ ಕುರಿತಾಗಿ ಗ್ರಾಮಸ್ಥರಲ್ಲಿ ಅರಿವು ಮೂಡಿಸಿ ಮಾತನಾಡಿದರು.
ತಾಲ್ಲೂಕಿನಲ್ಲಿ ಅನೇಕ ಕುಟುಂಬಗಳಿಗೆ ಸಂಬಂದಿಸಿದ ಆಸ್ತಿಗಳ ದಾಖಲೆಗಳು ಮೃತಪಟ್ಟ ಹಿರಿಯರ ಹೆಸರಿನಲ್ಲೇ ಇವೆ. ಮೃತಪಟ್ಟು ವರ್ಷಗಳೆ ಕಳೆದಿದ್ದರೂ ಆ ಆಸ್ತಿಯ ದಾಖಲೆಗಳನ್ನು ಅವರ ಮಕ್ಕಳು ಮೊಮ್ಮಕ್ಕಳ ಹೆಸರಿಗೆ ಬದಲಾವಣೆ ಆಗಿರುವುದಿಲ್ಲ ಎಂದರು.
ಇದರಿಂದ ಸದರಿ ಆಸ್ತಿಯ ವಿಭಾಗ ಮಾಡಿಕೊಳ್ಳುವುದು, ಪಾಲುದಾರಿಕೆ ಮಾಡಿಕೊಳ್ಳಲು, ಮಾರಾಟ ಮಾಡುವುದು, ಬ್ಯಾಂಕ್‌ನಲ್ಲಿ ಅಡ ಇಟ್ಟು ಸಾಲ ಪಡೆಯುವುದು, ಅಸ್ತಿ ದಾಖಲೆಗಳನ್ನು ಭದ್ರಪಡಿಸಿಕೊಳ್ಳುವ ಕೆಲಸ ಆಗುತ್ತಿಲ್ಲ. ಇದರಿಂದ ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸುವಂತಾಗಿದೆ ಎಂದು ಹೇಳಿದರು.
ಇದು ಒಂದೇ ಕುಟುಂಬದ ಅಣ್ಣ ತಮ್ಮಂದಿರು, ಅಕ್ಕ ತಂಗಿಯರ ನಡುವೆ ಕಲಹಗಳಿಗೂ ಕಾರಣವಾಗುತ್ತಿದೆ. ಇದೆಲ್ಲವನ್ನೂ ಗಮನಿಸಿ ಸರಕಾರವು ಫವತಿ ಖಾತೆ ಆಂದೋಲನವನ್ನು ಕಂದಾಯ ಇಲಾಖೆ ಮೂಲಕ ಹಮ್ಮಿಕೊಂಡಿದ್ದು ಕಂದಾಯ ಇಲಾಖೆ ಸಿಬ್ಬಂದಿ ನಿಮ್ಮ ಮನೆ ಬಾಗಿಲಿಗೆ ಬರಲಿದ್ದಾರೆ.
ಅಗತ್ಯ ದಾಖಲೆಗಳನ್ನು ಹಾಜರುಪಡಿಸಿ ಕುಟುಂಬದ ಎಲ್ಲರೂ ಒಮ್ಮತದಿಂದ ನಿರ್ಧಾರ ಮಾಡಿ ಆಸ್ತಿಯ ಫವತಿ ಖಾತೆ ಮಾಡಿಸಿಕೊಳ್ಳಿ. ನಿಮ್ಮ ಆಸ್ತಿಯನ್ನು ಹಾಗೂ ಆಸ್ತಿಯ ದಾಖಲೆಗಳನ್ನು ಭದ್ರಪಡಿಸಿಕೊಳ್ಳಿ. ಇದರಿಂದ ನೀವು ಫವತಿ ಖಾತೆಗಾಗಿ ತಾಲ್ಲೂಕು ಕಚೇರಿ, ನಾಡ ಕಚೇರಿಗೆ ವಿನಾಕಾರಣ ಅಲೆದಾಡುವ ತಾಪತ್ರಯ ತಪ್ಪಲಿದೆ. ಹಣ ಸಮಯ ಉಳಿತಾಯ ಆಗಲಿದೆ ಎಂದರು.
ಗ್ರಾಮದಲ್ಲಿ ಸುತ್ತಾಡಿ ಫವತಿ ಖಾತೆ ಬಗ್ಗೆ ಕಂದಾಯ ಇಲಾಖೆ ಸಿಬ್ಬಂದಿ ಯಾರಾದರೂ ನಿಮಗೆ ಮಾಹಿತಿ ನೀಡಿದ್ದಾರಾ? ಫವತಿ ಖಾತೆ ಎಂದರೆ ಏನು? ಎಂದು ಗ್ರಾಮದ ಹಲವರನ್ನು ಕೇಳಿ ತಿಳಿದುಕೊಂಡರು. ಫವತಿ ಖಾತೆ ಆಂದೋಲನದ ಬಗ್ಗೆ ಕಂದಾಯ ಇಲಾಖೆ ಸಿಬ್ಬಂದಿ ನಮಗೆ ತಿಳಿಸಿದ್ದರು ಎಂದು ಗ್ರಾಮಸ್ಥರು ತಿಳಿಸಿದರು.
ಫವತಿ ಖಾತೆ ಆಂದೋಲನಕ್ಕೆ ಸಂಬಂಸಿದ ಏನಾದರೂ ಅನುಮಾನ ಸಮಸ್ಯೆಗಳು ಇದ್ದಲ್ಲಿ ಹೇಳಿ ಎಂದು ಕೆಲ ಕಾಲ ಗ್ರಾಮಸ್ಥರೊಂದಿಗೆ ಚರ್ಚಿಸಿದರು.
ಫವತಿ ಖಾತೆ ಆಂದೋಲನದ ಬಗ್ಗೆ ಆಟೋದಲ್ಲಿ ಧ್ವನಿ ವರ್ಧಕದ ಮೂಲಕ ಪ್ರಚಾರ ಮಾಡಿ ಗ್ರಾಮಸ್ಥರಲ್ಲಿ ಅರಿವು ಮೂಡಿಸಲಾಯಿತು.
ಫವತಿ ಖಾತೆ ಆಂದೋಲನ ಅರಿವು ಮೂಡಿಸುವುದಕ್ಕಾಗಿ ಇದ್ಲೂಡು ಗ್ರಾಮಕ್ಕೆ ತೆರಳಿದ್ದ ತಹಸೀಲ್ಧಾರ್ ಗಗನ ಸಿಂಧು ಅವರು ಸರಕಾರಿ ಶಾಲೆಗೆ ದಿಢೀರ್ ಭೇಟಿ ನೀಡಿ ಮಕ್ಕಳೊಂದಿಗೆ ಕೆಲ ಕಾಲ ಚರ್ಚಿಸಿದರು. ಮದ್ಯಾಹ್ನದ ಬಿಸಿಯೂಟ, ಆಟದ ಮೈದಾನ, ಪಾಠ ಪ್ರವಚನಗಳ ಬಗ್ಗೆ ಮಾಹಿತಿ ಪಡೆದುಕೊಂಡರು.
ಮಕ್ಕಳಿಗೆ ಆಟದ ಮೈದಾನ ಹಾಗೂ ಗ್ರಾಮದ ದೇವಾಲಯಕ್ಕೆ ಸೂಕ್ತ ಜಾಗ ಒದಗಿಸಿಕೊಡಲು ಗ್ರಾಮಸ್ಥರು ತಹಸೀಲ್ದಾರ್ ಬಳಿ ಮನವಿ ಮಾಡಿಕೊಂಡರು.
ಉಪ ತಹಸೀಲ್ದಾರ್ ಚೇತನ್, ಕಸಬಾ ಕಂದಾಯ ಅಧಿಕಾರಿ ವೇಣುಗೋಪಾಲ್, ಗ್ರಾಮಸ್ಥರು ಹಾಜರಿದ್ದರು.
Sidlaghatta : ಶಿಡ್ಲಘಟ್ಟ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಗೆ ಗ್ರಹಣ ಹಿಡಿದಿದ್ದು ಸಮಿತಿಯ ಮೊದಲ ಸಭೆಗೆ ಆರಂಭದಲ್ಲಿಯೆ ವಿಘ್ನ ಎದುರಾಗಿದೆ. ತಾಲೂಕು ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಗುರುವಾರ ಬಿಗಿ ಪೊಲೀಸ್ ಬಂದೋಬಸ್ತ್‍ನಲ್ಲಿ ಸಭೆ ಆರಂಭವಾದ ಹತ್ತೇ ಹತ್ತು ನಿಮಿಷಕ್ಕೆ ಸಭೆ ದಿಢೀರ್ ರದ್ದಾಗಿ ಬಂದ ದಾರಿಗೆ ಸುಂಕ ಇಲ್ಲ ಎಂಬಂತೆ ಸಮಿತಿ ಸದಸ್ಯರು ವಾಪಸ್ಸಾದರು.
ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ.ಮುನಿಯಪ್ಪ ಅವರ ಅಧ್ಯಕ್ಷತೆಯಲ್ಲಿ ಆರಂಭವಾದ ಚೊಚ್ಚಲ ಸಭೆಯಲ್ಲಿ ‘ಗೃಹ ಲಕ್ಷ್ಮಿ’ ಯೋಜನೆ ಕುರಿತು ಚರ್ಚೆ ಆರಂಭ ಮಾಡಿದ ಹತ್ತು ನಿಮಿಷಕ್ಕೆ ಸಭೆಯಲ್ಲಿದ್ದ ಸಮಿತಿಯ ಸದಸ್ಯ ಕಾರ್ಯದರ್ಶಿ ಹಾಗೂ ತಾಲೂಕು ಪಂಚಾಯಿತಿ ಇಒ ಆರ್.ಹೇಮಾವತಿ ಅವರು ಜಿಲ್ಲಾಧಿಕಾರಿಗಳ ಸೂಚನೆಯಂತೆ ಸಭೆಯನ್ನು ರದ್ದುಪಡಿಸಿರುವುದಾಗಿ ಹೇಳಿ ಸಭೆಯನ್ನು ರದ್ದುಪಡಿಸಿದರು.
ಸಮಿತಿ ಅಧ್ಯಕ್ಷ ಎಚ್.ಎಂ.ಮುನಿಯಪ್ಪ ಅವರು ಡಿಸಿ, ಸಿಇಒ ಹಾಗೂ ಸಚಿವ ಎಚ್.ಎಂ.ರೇವಣ್ಣ ಅವರನ್ನು ಮೊಬೈಲ್ ಮೂಲಕ ಸಂಪರ್ಕಿಸಿ ‘ಸಭೆ ಆರಂಭವಾಗಿದೆ. ಸಮಿತಿಯ ಎಲ್ಲ ಸದಸ್ಯರು ಆಗಮಿಸಿದ್ದು ಏಕಾ ಏಕಿ ಸಭೆ ರದ್ದುಪಡಿಸಿದರೆ ಹೇಗೆ? ಸಭೆ ಮುಂದುವರೆಸಲು ಅವಕಾಶ ಮಾಡಿಕೊಡಿ’ ಎಂದು ಮನವಿ ಮಾಡುವ ಪ್ರಯತ್ನ ನಡೆಸಿದರೂ ಎಳ್ಳೆಷ್ಟು ಉಪಯೋಗ ಆಗಲಿಲ್ಲ. ಇದರಿಂದಾಗಿ ಬಂದ ದಾರಿಗೆ ಸುಂಕ ಇಲ್ಲ ಎಂಬಂತೆ ಸಮಿತಿ ಅಧ್ಯಕ್ಷ, ಸದಸ್ಯರು ಬರಿಗೈಲಿ ವಾಪಸ್ಸಾಗುವಂತಾಯಿತು.
ಪ್ರತಿಭಟನೆ
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆ ನಡೆಯುವುದು ತಿಳಿದು ಕಾಂಗ್ರೆಸ್ ಮುಖಂಡ ರಾಜೀವ್‍ಗೌಡ ಅವರ ಬೆಂಬಲಿಗರು ತಾಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿ ಜಮಾಯಿಸಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯಲ್ಲಿ ನಿಷ್ಠಾವಂತ ಕಾಂಗ್ರೆಸ್ಸಿಗರಿಲ್ಲ.
ಜೆಡಿಎಸ್, ಬಿಜೆಪಿಯಿಂದ ವಲಸೆ ಬಂದವರಿಗೆ ಸಮಿತಿಯಲ್ಲಿ ಅವಕಾಶ ನೀಡಿದ್ದು ನಿಷ್ಠಾವಂತ ಕಾಂಗ್ರೆಸ್ಸಿರನ್ನು ಕಡೆಗಣಿಸಲಾಗಿದೆ. ಈ ವಿಷಯವನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಗಮನಕ್ಕೆ ತಂದಿದ್ದು ಅವರು ಹೊಸ ಸಮಿತಿ ರಚನೆಗೆ ಸಂಬಂಧಿಸಿದ ಸಚಿವರಿಗೆ ಶಿಫಾರಸ್ಸು ಮಾಡಿದ್ದಾರೆ.
ಶೀಘ್ರದಲ್ಲೆ ಹೊಸ ಸಮಿತಿ ರಚನೆಯಾಗಲಿದ್ದು ಅದುವರೆಗೂ ಈ ಸಮಿತಿಯ ಸಭೆ ನಡೆಸಬೇಡಿ ಎಂದು ತಾಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ಸಮಿತಿ ಸಭೆ ನಡೆಸದಂತೆ ಪಟ್ಟು ಹಿಡಿದು ಕುಳಿತರು.
ಪ್ರತಿಭಟನೆ ನಡೆಸಿದ ಐಎನ್‍ಟಿಯುಸಿ ರಾಜ್ಯ ಸಂಘಟನಾ ಕಾರ್ಯದರ್ಶಿ ಕುಂದಲಗುರ್ಕಿ ಮುನೀಂದ್ರ, ಯುವ ಕಾಂಗ್ರೆಸ್ ಅಧ್ಯಕ್ಷ ಜಯ್ಯದ್ ಅಪ್ನಾನ್, ಮುಖಂಡರಾದ ನಾಗನರಸಿಂಹ, ಮುತ್ತೂರುವೆಂಕಟೇಶ್, ಕೆ.ನಾರಾಯಣಸ್ವಾಮಿ, ಆನೂರು ರವಿ, ದೇವರಮಳ್ಳೂರು ರವಿ, ಆನೂರು ಚಲಪತಿ ಇನ್ನಿತರರನ್ನು ಪೊಲೀಸರು ವಶಕ್ಕೆ ಪಡೆದರು.
ನಂತರ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯನ್ನು ಇಒ ಆರ್.ಹೇಮಾವತಿ ಅವರು ಹಿರಿಯ ಅಧಿಕಾರಿಗಳ ಸೂಚನೆಯಂತೆ ಮದ್ಯಾಹ್ನ 12.45ಕ್ಕೆ ಸಭೆ ಆರಂಭಿಸಿದರಾದರೂ ಸಭೆ ಆರಂಭಿಸಿದ 10 ನಿಮಿಷಕ್ಕೆಲ್ಲಾ ಸಭೆಯನ್ನು ರದ್ದುಪಡಿಸಲು ಸೂಚಿಸಿ ಡಿಸಿ ಪಿ.ಎನ್.ರವೀಂದ್ರ ಅವರಿಂದ ಮೊಬೈಲ್ ಕರೆ ಬಂದ ಹಿನ್ನಲೆಯಲ್ಲಿ ಸಭೆಯನ್ನು ದಿಢೀರ್ ರದ್ದುಪಡಿಸಲಾಯಿತು.
Sidlaghatta : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬಡ ಮತ್ತು ಮಧ್ಯಮ ವರ್ಗದ ಜನರನ್ನು ದೃಷ್ಟಿಯಲ್ಲಿಟ್ಟುಕೊಂಡು ಜಿಎಸ್‌ಟಿಯಲ್ಲಿ ಮಹತ್ವದ ಬದಲಾವಣೆಗಳನ್ನು ತಂದಿದ್ದು, ಕೋಟ್ಯಂತರ ಮಂದಿಗೆ ಇದರ ನೇರ ಲಾಭ ಸಿಗಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ ಬುಧವಾರ ಹೇಳಿದರು.
ನಗರದ ಬಿಜೆಪಿ ಸೇವಾ ಸೌಧ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಜನರಿಗೆ ಆಗುತ್ತಿದ್ದ ಆರ್ಥಿಕ ಹೊರೆ ತಗ್ಗಿಸಲು ಎಲ್ಲ ಸ್ಲ್ಯಾಬ್‌ಗಳನ್ನು ರದ್ದು ಮಾಡಿ ಕೇವಲ 5% ಮತ್ತು 18% ಜಿಎಸ್‌ಟಿ ಸ್ಲ್ಯಾಬ್‌ಗಳನ್ನು ಮಾತ್ರ ಉಳಿಸಲಾಗಿದೆ. ಇದರ ಪರಿಣಾಮವಾಗಿ ದಿನನಿತ್ಯದ ಆಹಾರ ಪದಾರ್ಥಗಳು, ಕ್ಯಾನ್ಸರ್ ಸೇರಿದಂತೆ ಅನೇಕ ರೋಗಗಳ ಔಷಧಿಗಳು ಹಾಗೂ ಜೀವ ವಿಮೆ ಮೇಲಿನ ತೆರಿಗೆ ಕಡಿಮೆಯಾಗಲಿದೆ. ಇದು ಬಡ ಮತ್ತು ಮಧ್ಯಮ ವರ್ಗದವರಿಗೆ ದೊಡ್ಡ ಅನುಕೂಲ” ಎಂದು ತಿಳಿಸಿದರು.
ಅವರು ಕಾಂಗ್ರೆಸ್ ಪಕ್ಷದ ನೀತಿಗಳನ್ನೂ ಟೀಕಿಸಿದರು. “ರಾಜ್ಯದಲ್ಲಿ ಜಾತಿ-ಧರ್ಮಗಳ ನಡುವೆ ಸಾಮರಸ್ಯ ಕದಡುವ ಕೆಲಸವನ್ನು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ಮುಸ್ಲಿಂ ಸಮುದಾಯವನ್ನು ಓಲೈಸಲು ಹಿಂದೂ ಧರ್ಮ ಮತ್ತು ದೇವಾಲಯಗಳನ್ನು ಟಾರ್ಗೆಟ್ ಮಾಡುತ್ತಿದೆ” ಎಂದು ಆರೋಪಿಸಿದರು.
ಕೇಂದ್ರದ ಡಿಜಿಟಲ್ ಅಭಿಯಾನವನ್ನು ಉಲ್ಲೇಖಿಸಿದ ಅವರು, “ದೇಶ ಡಿಜಿಟಲೀಕರಣದ ದಿಕ್ಕಿನಲ್ಲಿ ವೇಗವಾಗಿ ಸಾಗುತ್ತಿರುವಾಗ, ಕಾಂಗ್ರೆಸ್ ಮಾತ್ರ ಮತ್ತೆ ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆಗೆ ಒತ್ತಾಯಿಸುತ್ತಿರುವುದು ಹಾಸ್ಯಾಸ್ಪದ. ಇದು ಜನರಿಗಿಂತ ಪಕ್ಷದ ಹೈಕಮಾಂಡ್‌ನ್ನು ಮೆಚ್ಚಿಸುವ ಪ್ರಯತ್ನ ಮಾತ್ರ” ಎಂದು ವ್ಯಂಗ್ಯವಾಡಿದರು.
ಧಾರ್ಮಿಕ ಸೌಹಾರ್ದತೆಯ ವಿಚಾರದಲ್ಲಿಯೂ ಮಾತನಾಡಿದ ಅವರು, “ಗಣೇಶೋತ್ಸವ ಮೆರವಣಿಗೆಗಳ ಮೇಲೆ ಮಾತ್ರ ಕಲ್ಲು ತೂರಾಟ ನಡೆಯುತ್ತಿದೆ. ಇಂತಹ ಘಟನೆಗಳು ನಡೆಯದಂತೆ ನೋಡಿಕೊಳ್ಳಬೇಕು. ನಮ್ಮ ಹೋರಾಟ ಯಾವ ಧರ್ಮದ ವಿರುದ್ಧವೂ ಅಲ್ಲ, ಆದರೆ ಹಿಂದೂ ಧರ್ಮದ ಮೇಲೆ ದಾಳಿ ನಡೆಯಬಾರದು” ಎಂದು ಅಭಿಪ್ರಾಯಪಟ್ಟರು.
ಮುಸ್ಲಿಂ ಸಮುದಾಯಕ್ಕೆ ಸಂದೇಶ ನೀಡಿದ ಅವರು, “ಕಾಂಗ್ರೆಸ್ ನಿಮ್ಮನ್ನು ಕೇವಲ ಓಟ್ ಬ್ಯಾಂಕ್ ಆಗಿ ಬಳಸುತ್ತಿದೆ. ಮೂಲ ಸೌಕರ್ಯಗಳ ಅಭಿವೃದ್ಧಿ ಇಲ್ಲದಿರುವುದು ಅದರ ಸಾಕ್ಷಿ. ಮೋದಿ ಸರ್ಕಾರ ಎಲ್ಲರನ್ನೂ ಒಂದುಗೂಡಿಸಿಕೊಂಡು ದೇಶದ ಅಭಿವೃದ್ಧಿಯನ್ನಷ್ಟೆ ಗುರಿಯಾಗಿಸಿಕೊಂಡಿದೆ. ಬಿಜೆಪಿಗೆ ಒಮ್ಮೆ ಅವಕಾಶ ಕೊಟ್ಟರೆ ನಿಜವಾದ ಅಭಿವೃದ್ಧಿ ಎಂತಹುದೆಂಬುದನ್ನು ತೋರಿಸುತ್ತೇವೆ” ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಕಾರ್ಯದರ್ಶಿ ವಿನಯ್‌ಬಿದಿರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುರಳೀಧರ್, ಮಾಜಿ ಜಿಲ್ಲಾಧ್ಯಕ್ಷ ರಾಮಲಿಂಗಪ್ಪ, ಮುಖಂಡರಾದ ವೇಣುಗೋಪಾಲ್, ಮಧುಚಂದ್ರ, ಲಕ್ಷ್ಮೀನಾರಾಯಣ್ ಗುಪ್ತ, ಸುರೇಂದ್ರಗೌಡ, ಆನಂದಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Sidlaghatta : ಶಿಡ್ಲಘಟ್ಟ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ಫ್ರೆಷರ್ಸ್ ಡೇ ಕಾರ್ಯಕ್ರಮವನ್ನು ಸಂಭ್ರಮದಿಂದ ಆಚರಿಸಲಾಯಿತು. ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ದೊರೆತು, ಕಾಲೇಜು ಆವರಣವೇ ಹಬ್ಬದ ವಾತಾವರಣ ಪಡೆದುಕೊಂಡಿತು.
ಕಾರ್ಯಕ್ರಮದಲ್ಲಿ ಪಿಯು ಉಪ ನಿರ್ದೇಶಕ ಆದಿಶೇಷರಾವ್ ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಸಂದೇಶ ನೀಡಿ ಮಾತನಾಡಿದರು. “ಪುಸ್ತಕವೇ ನಿಜವಾದ ಸ್ನೇಹಿತ. ಜ್ಞಾನ, ಸಂಸ್ಕೃತಿ, ಭಾವನೆಗಳನ್ನೆಲ್ಲ ಪುಸ್ತಕದಿಂದಲೇ ಪಡೆಯಬಹುದು. ಆದರೆ ಇಂದಿನ ವಿದ್ಯಾರ್ಥಿಗಳು ಮೊಬೈಲ್ ಬಳಕೆಯಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ನಿಜವಾದ ವಿದ್ಯಾವಂತರಾಗಲು ಸಹನೆ, ಶಿಸ್ತು ಮತ್ತು ಸಂಸ್ಕಾರ ಬೆಳೆಸಿಕೊಳ್ಳುವುದು ಮುಖ್ಯ” ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ವೆಂಕಟಶಿವರೆಡ್ಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಾ, “ಗುರಿ ನಿಗದಿಪಡಿಸಿಕೊಂಡು ಅದನ್ನು ಸಾಧಿಸಲು ನಿರಂತರ ಪರಿಶ್ರಮ ಅಗತ್ಯ. ಓದಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿ, ಮೊಬೈಲ್ ಅನ್ನು ಪಾಸಿಟಿವ್ ರೀತಿಯಲ್ಲಿ ಉಪಯೋಗಿಸಬೇಕು. ಪ್ರತಿದಿನ ಕನಿಷ್ಠ ಆರು ಗಂಟೆ ಓದಿದರೆ ಉತ್ತಮ ಫಲಿತಾಂಶವನ್ನು ಸಾಧಿಸಬಹುದು” ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ 2024–25ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗಗಳಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮೂವರು ವಿದ್ಯಾರ್ಥಿನಿಯರಿಗೆ ಸನ್ಮಾನ ಸಲ್ಲಿಸಲಾಯಿತು. ಜೊತೆಗೆ ವಿವಿಧ ಕ್ರೀಡಾಕೂಟಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಹಾಗೂ ಬಹುಮಾನ ವಿತರಿಸಲಾಯಿತು.
ಫ್ರೆಷರ್ಸ್ ಡೇ ಅಂಗವಾಗಿ ವಿದ್ಯಾರ್ಥಿಗಳಿಂದ ನೃತ್ಯ, ನಾಟಕ, ಹಾಡು, ಕಾವ್ಯ ಪಠಣ ಸೇರಿದಂತೆ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಹಿರಿಯರು ಹಾಗೂ ಹೊಸ ವಿದ್ಯಾರ್ಥಿಗಳು ಪರಸ್ಪರ ಪರಿಚಯ ಮಾಡಿಕೊಂಡು ಸ್ನೇಹದ ಬಾಂಧವ್ಯ ಬೆಳೆಸಿಕೊಂಡರು.
ಕಾರ್ಯಕ್ರಮದಲ್ಲಿ ಕಾಲೇಜಿನ ಎನ್‌ಎಸ್‌ಎಸ್ ಅಧಿಕಾರಿ ಎಚ್.ಸಿ. ಮುನಿರಾಜು, ಹಿರಿಯ ಉಪನ್ಯಾಸಕ ಡಿ.ಲಕ್ಷ್ಮಯ್ಯ, ಉಪನ್ಯಾಸಕರಾದ ಶ್ರೀ ಕೃಷ್ಣ ಪರಮಾತ್ಮ, ನರಸಿಂಹರೆಡ್ಡಿ, ಬಾಬಾಜನ್, ಧನುಷ್ ರೆಡ್ಡಿ, ನಾಗಾರ್ಜುನ, ಶ್ರೀಧರ್, ವೈಷ್ಣವಿ, ನಯಿದಾ ಬೇಗಂ, ಶಾಂತ, ನಾಗವೇಣಿ, ನವೀನ್, ರಾಜೇಶ್, ಚಂದ್ರಶೇಖರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Sugaturu, Sidlahgatta : ಗ್ರಹಣ ಎಂಬುದು ಆಗಸದಲ್ಲಿ ಘಟಿಸುವ ಒಂದು ಕೌತುಕ ವಿಸ್ಮಯ. ಚಾರಿತ್ರಿಕವಾಗಿ ಗ್ರಹಣದ ದಿನದಂದು ಅಥವಾ ಮಾರನೆಯ ದಿನದಂದು ದೇವಸ್ಥಾನಗಳಿಗೆ ದಾನ ದತ್ತಿ ನೀಡಿರುವ ವಿಚಾರ ತಾಲ್ಲೂಕಿನ ಕೆಲವು ಶಾಸನಗಳಿಂದ ತಿಳಿದುಬರುತ್ತದೆ.
ತಾಲ್ಲೂಕಿನ ಸುಗುಟೂರಿನ ಉತ್ತರದಿಕ್ಕಿನ ಹೊಲವೊಂದರಲ್ಲಿ ಸಿಕ್ಕಿರುವ ಶಾಸನದಲ್ಲಿ ಚಂದ್ರಗ್ರಹಣದಂದು ದಾನ ನೀಡಿರುವ ಬಗ್ಗೆ ಮಾಹಿತಿ ಇದೆ. 1522ರ ಸೆಪ್ಟೆಂಬರ್ 5ರಂದು ಘಟಿಸಿದ ಚಂದ್ರಗ್ರಹಣದಂದು ಶ್ರೀಕೃಷ್ಣದೇವರಾಯರಿಗೆ ಒಳ್ಳೆಯದಾಗಲಿ ಎಂದು ನಲ್ಲೂರು ಸೀಮೆಗೆ ಸಲ್ಲುವ ಮಂಡಿಬೆಲೆ ಸ್ಥಳದ ವೊಡಹಳ್ಳಿ ಗ್ರಾಮವನ್ನು ಸುಗುಟೂರಿನ ಚನ್ನಕೇಶವ ದೇವರ ದೀಪಾರಾದನೆ, ಅಂಗಭೋಗ, ರಂಗಭೋಗ, ತಿರುನಾಳ್ ಸೇವೆ ಮುಂತಾದ ಪೂಜಾಕೈಂಕರ್ಯಗಳಿಗೆ ಹೊಸಬನನಾಯಕ ಮತ್ತು ಕೃಷ್ಣನಾಯಕ ಎಂಬುವವರು ದಾನ ನೀಡಿರುವ ವಿವರಗಳು ಈ ಶಾಸನದಿಂದ ತಿಳಿದುಬರುತ್ತದೆ.
“ಗ್ರಹಣದ ಕುರಿತಾಗಿ ನಮ್ಮ ಹಿರಿಯರಿಗೆ ಒಳ್ಳೆಯ ಅಭಿಪ್ರಾಯಗಳಿದ್ದವು. ಗ್ರಹಣದ ದಿನದಂದು ಒಳ್ಳೆಯ ಕೆಲಸ ಮಾಡಿದರೆ ಅದರ ಪುಣ್ಯ ಹೆಚ್ಚು ಎಂಬ ನಂಬಿಕೆಯಿಂದ ದಾನ, ಧರ್ಮ, ದೇವಸ್ಥಾನಗಳಿಗೆ ದತ್ತಿ ನೀಡುವುದು, ಕೆರೆ ಕಟ್ಟಿಸುವ ಸಾಮಾಜಿಕ ಕಾರ್ಯಗಲನ್ನು ನಡೆಸುತ್ತಿದ್ದರು ಎಂಬ ವಿಚಾರಗಳು ನಮಗೆ ಶಾಸನಗಳಿಂದ ತಿಳಿದುಬರುತ್ತದೆ” ಎಂದು ಶಾಸನತಜ್ಞ ಕೆ.ಧನಪಾಲ್ ತಿಳಿಸಿದರು
ಸೂರ್ಯ ಗ್ರಹಣದ ದಿನ ನೀಡಿರುವ ದಾನ :
ತಾಲ್ಲೂಕಿನ ಸೊಣ್ಣೇನಹಳ್ಳಿಯಲ್ಲಿ ಶಿಡ್ಲಘಟ್ಟ ನಗರದ ನಿರ್ಮಾತೃ ಹಲಸೂರಮ್ಮನ ಮಗ ಶಿವನೇಗೌಡ ಹೆಸರಿರುವ ಶಾಸನವನ್ನು ಕ್ರಿ.ಶ. 1590 ರ ಜುಲೈ ತಿಂಗಳ 21 ನೇ ತಾರೀಖಿನ ಮಂಗಳವಾರ ಸೂರ್ಯ ಗ್ರಹಣದ ದಿನ ಬರೆಯಲಾಗಿದೆ. ಗ್ರಹಣದ ದಿನ ದಾನ ಕೊಟ್ಟರೆ ಎಲ್ಲರಿಗೂ ಒಳ್ಳೆಯದಾಗುತ್ತದೆಂಬ ನಂಬಿಕೆ ನಮ್ಮ ಹಿರಿಯರದ್ದು. ಹಾಗಾಗಿ ಜನಾನುರಾಗಿ ಆಡಳಿತಗಾರ ಶಿವನೇಗೌಡರ ನೆನಪಿನಲ್ಲಿ ಒಂದು ಕೆರೆಯನ್ನು ಕಟ್ಟಿಸಿ ದಾನ ಮಾಡಿರುವ ಬಗ್ಗೆ ಶಾಸನದಲ್ಲಿ ಬರೆದಿರುವರು.
ಆಗ ವಿಜಯನಗರ ಸಾಮ್ರಾಜ್ಯವನ್ನು ವೆಂಕಟಪತಿರಾಯರು ಆಳುತ್ತಿದ್ದರು. ಅವರ ಸಾಮಂತರಾಗಿ ಸುಗುಟೂರು ಪ್ರಾಂತ್ಯವನ್ನು ಇಮ್ಮಡಿ ತಮ್ಮಪ್ಪಗೌಡರು ಆಳ್ವಿಕೆ ನಡೆಸುವಾಗ, ಶಿಡ್ಲಘಟ್ಟ ಪ್ರಾಂತ್ಯವನ್ನು ಆಳಿ, ಅಪಾರ ಜನಸೇವೆ ಮಾಡಿ, ಉತ್ತಮ ಆಡಳಿತ ನಡೆಸಿ ದೈವಸನ್ನಿಧಿಗೆ ಸೇರಿರುವ ಶಿವನೇಗೌಡರ ನೆನಪಿನಲ್ಲಿ ಅವರ ಅನುಯಾಯಿಗಳಾದ ನಾಣಪ್ಪಗೌಡರ ಮಗ ಶಿಲೇಗೌಡರು, ಶಿವಸಮುದ್ರ ಎಂಬ ಕೆರೆಯನ್ನು ಜನೋಪಕಾರಕ್ಕಾಗಿ ಕಟ್ಟಿಸಿ ದಾನ ಮಾಡಿರುವ ವಿಷಯವನ್ನು ಈ ಶಾಸನದಲ್ಲಿ ಕೆತ್ತಿರುವರು.
ಚಂದ್ರಗ್ರಹಣದ ಬಗ್ಗೆ ಟಿವಿ ಜ್ಯೋತಿಷಿಗಳು ಜನರನ್ನು ಭಯಭೀತರನ್ನಾಗಿಸುತ್ತಿರುವ ಸಮಯದಲ್ಲಿ ಚರಿತ್ರೆಗೆ ಸಂಬಂಧಿಸಿದ ವಿಷಯವನ್ನು ಹೇಳಬೇಕಿದೆ. ನಾನು ಗಮನಿಸಿದಂತೆ ನಮ್ಮ ನಂದಿ ಸೀಮೆಯ ಹಲವಾರು ಶಿಲಾಶಾಸನಗಳನ್ನು ರಾಜಮಹಾರಾಜರು ಹಾಕಿಸಿರುವುದೇ ಚಂದ್ರಗ್ರಹಣದ ಸಮಯದಲ್ಲಿ. ದಾನ ಧರ್ಮಗಳಿಗೆ ಅದೊಂದು ಪ್ರಶಸ್ತ ಸಮಯ ಮತ್ತು ದಾನದ ಫಲ ದಕ್ಕಲು ಅದು ಸೂಕ್ತ ಸಮಯ ಎಂಬುದು ಇದರಿಂದ ತಿಳಿದುಬರುತ್ತದೆ
Kothanur, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಕೊತ್ತನೂರು ಗ್ರಾಮದಲ್ಲಿ ಜಿಕೆವಿಕೆ ಕೃಷಿ ವಿಜ್ಞಾನ ಪದವಿ ವಿದ್ಯಾರ್ಥಿಗಳ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದಡಿ ಭಾನುವಾರ “ಗ್ರಾಮೀಣ ಆರೋಗ್ಯ ಜಾಗೃತಿ ಕಾರ್ಯಕ್ರಮ” ಆಯೋಜಿಸಲಾಯಿತು. ಈ ಕಾರ್ಯಕ್ರಮವನ್ನು ವಿವಿಧ ಇಲಾಖೆ ಹಾಗೂ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಕೊತ್ತನೂರು ಗ್ರಾಮ ಪಂಚಾಯಿತಿ ಪಿಡಿಒ ಪವಿತ್ರ ಅವರು, “ಗ್ರಾಮೀಣ ಭಾಗದವರು ತಮ್ಮ ದೈನಂದಿನ ಕೆಲಸಗಳಲ್ಲಿ ತೊಡಗಿಸಿಕೊಂಡು ಆರೋಗ್ಯದ ಕಡೆ ಹೆಚ್ಚಿನ ಗಮನಕೊಡುವುದಿಲ್ಲ. ವಿಶೇಷವಾಗಿ ಮಹಿಳೆಯರು ತಮ್ಮ ಸಮಸ್ಯೆಗಳನ್ನು ಮುಚ್ಚಿಟ್ಟುಕೊಳ್ಳುವುದರಿಂದ ಭವಿಷ್ಯದಲ್ಲಿ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ಆರೋಗ್ಯ ಸಮಸ್ಯೆಗಳನ್ನು ಆರಂಭದಲ್ಲಿಯೇ ಪತ್ತೆ ಹಚ್ಚಿ ಚಿಕಿತ್ಸೆ ಪಡೆಯುವುದು ಅಗತ್ಯ,” ಎಂದು ಹೇಳಿದರು.
ಅವರು ಮುಂದುವರೆದು, ಸರ್ಕಾರವು ಆರೋಗ್ಯ ಮಟ್ಟ ಸುಧಾರಣೆಗೆ ಅನೇಕ ಯೋಜನೆಗಳನ್ನು ಜಾರಿಗೊಳಿಸಿರುವುದರಿಂದ ಗ್ರಾಮೀಣರು ಅವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಶಿಬಿರದಲ್ಲಿ 150 ಕ್ಕೂ ಹೆಚ್ಚು ಮಂದಿಗೆ ರಕ್ತದೊತ್ತಡ, ಮಧುಮೇಹ ಹಾಗೂ ಇತರ ಆರೋಗ್ಯ ತಪಾಸಣೆ ನಡೆಸಿ ಔಷಧಿ ವಿತರಿಸಲಾಯಿತು. ಜೊತೆಗೆ ಸಮತೋಲನ ಆಹಾರದ ಮಹತ್ವ ಹಾಗೂ ಆರೋಗ್ಯ ಕಾಪಾಡಿಕೊಳ್ಳುವ ಮಾರ್ಗಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಕೆವಿಕೆಯ ಡಾ. ಗಣೇಶ್, ಡಾ. ಸವಿತಾ, ಡಾ. ವಿಜಯಲಕ್ಷ್ಮಿ, ವೈ. ಹುಣಸೇನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ. ನಳಿನ, ಡಾ. ರಾಜೇಶ್ವರಿ, ಡಾ. ವಾಣಿ, ಡಾ. ನವಾಜ್ ಸೇರಿದಂತೆ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.