Sidlaghatta : ಇದೇ ಆಗಸ್ಟ್ 16ರ ಶನಿವಾರ ಮದ್ಯಾಹ್ನ 3 ಗಂಟೆಯಿಂದ ಸಂಜೆ 5 ಗಂಟೆಯವರೆಗೂ ನಗರದ ಬೆಸ್ಕಾಂ ಕಚೇರಿ ಸಭಾಂಗಣದಲ್ಲಿ ಗ್ರಾಹಕರ ಸಂವಾದ ಸಭೆ ಮತ್ತು ವಿದ್ಯುತ್ ಸುರಕ್ಷತಾ ಸಭೆಯನ್ನು ಹಮ್ಮಿಕೊಳ್ಳಲಾಗಿದೆ.
ಎಲ್ಲಾ ರೈತರು, ವಿದ್ಯುತ್ ಗ್ರಾಹಕರು, ಜನಪ್ರತಿನಿಗಳು, ಸಂಘ ಸಂಸ್ಥೆಗಳ ಪ್ರತಿನಿಗಳು ಭಾಗವಹಿಸಿ ವಿದ್ಯುತ್ ಪೂರೈಕೆ, ಇನ್ನಿತರೆ ವಿಚಾರಗಳ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕೆಂದು ಸಹಾಯಕ ಕಾರ್ಯನಿವಾರ್ಹಕ ಇಂಜಿನಿಯರ್ ಬಿ.ಪ್ರಭು ಮನವಿ ಮಾಡಿದ್ದಾರೆ.
ನಮ್ಮ ಮಕ್ಕಳಿಗೆ ನಾವು ಶ್ರೀರಾಮಾಯಣ, ಮಹಾಭಾರತದ ಕಥೆಗಳನ್ನು ಹೇಳಿ ಕಥೆಯ ಸಾರಾಂಶವನ್ನು ಅರ್ಥ ಮಾಡಿಸಬೇಕು. ಮಕ್ಕಳಿಗೆ ಉತ್ತಮ ವಿದ್ಯೆ ಜತೆಗೆ ನಮ್ಮ ಧರ್ಮ, ಸಂಸ್ಕøತಿ, ಸಂಪ್ರದಾಯಗಳ ಬಗ್ಗೆಯೂ ಮನವರಿಕೆ ಮಾಡಿಕೊಡಬೇಕು ಎಂದು ಚಿಕ್ಕದಾಸರಹಳ್ಳಿಯ ಲಕ್ಷ್ಮಿ ವಿದ್ಯಾನಿಕೇತನ ಶಾಲೆಯ ಮುಖ್ಯಸ್ಥ ದೇವರಾಜ್ ತಿಳಿಸಿದರು.
ಶಿಡ್ಲಘಟ್ಟ ತಾಲ್ಲೂಕಿನ ಹಂಡಿಗನಾಳದ ಕೆವಿ ಭವನದಲ್ಲಿ ಶ್ರೀರಾಮ ಶೋಭಾಯಾತ್ರೆ ಆಚರಣಾ ಟ್ರಸ್ಟ್‍ನಿಂದ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಶ್ರೀರಾಮಾಯಣ, ಮಹಾಭಾರತ, ಸ್ವಾತಂತ್ರ್ಯ ಹೋರಾಟಗಾರರ ಕುರಿತ ರಸಪ್ರಶ್ನೆ ಕಾರ್ಯಕ್ರಮದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಶಾಲಾ ಕಾಲೇಜುಗಳಲ್ಲಿ ಕೇವಲ ಓದು ಬರಹ, ಅಂಕ ಗಳಿಸಿ ಉತ್ತಮ ಮಾರ್ಕ್ಸ್ ಪಡೆಯಲು ಮಕ್ಕಳನ್ನು ತಯಾರು ಮಾಡುತ್ತಿದ್ದಾರೆಯೆ ಹೊರತು ಮಕ್ಕಳಲ್ಲಿ ಕಿರಿಯರು, ಹಿರಿಯರು ಎನ್ನುವ ಭಕ್ತಿ ಭಾವ, ದೇವರು ಧರ್ಮ ಎನ್ನುವ ಸಂಸ್ಕಾರವನ್ನು ಹೇಳಿಕೊಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಇದರಿಂದ ಮಕ್ಕಳಲ್ಲಿ ನಮ್ಮ ಧರ್ಮ ಸಂಸ್ಕøತಿ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ, ಸಮಯ ಇಲ್ಲದಾಗಿದ್ದು ಇದರಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯವಾ ಎಂದು ಪ್ರಶ್ನಿಸಿದರು.
ಈ ನಿಟ್ಟಿನಲ್ಲಿ ನಮ್ಮ ಶ್ರೀರಾಮ ಶೋಭಾಯಾತ್ರೆ ಆಚರಣಾ ಟ್ರಸ್ಟ್‍ನಿಂದ ಪ್ರೌಢಶಾಲಾ ಮಕ್ಕಳಲ್ಲಿ ರಾಮಾಯಣ, ಮಹಾಭಾರತ ಹಾಗೂ ಸ್ವಾತಂತ್ರ್ಯ ಹೋರಾಟ, ಹೋರಾಟಗಾರರ ಬಗ್ಗೆ ಅರಿವು ಮೂಡಿಸಿ ಹೆಮ್ಮೆ ಮೂಡಿಸುವ ಹಾದಿಯಲ್ಲಿ ರಸಪ್ರಶ್ನೆ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.
ತಾಲ್ಲೂಕಿನ 37 ಪ್ರೌಢಶಾಲೆಗಳಿಂದ ತಲಾ ಇಬ್ಬರಂತೆ ಒಟ್ಟು 74 ವಿದ್ಯಾರ್ಥಿಗಳು ರಸಪ್ರಶ್ನೆಯಲ್ಲಿ ಭಾಗವಹಿಸಿದ್ದರು. ಮೊದಲ ಮೂರು ಸುತ್ತು ಲಿಖಿತ ಪರೀಕ್ಷೆ ಹಾಗೂ ಅಂತಿಮವಾಗಿ ರಸಪ್ರಶ್ನೆಯಲ್ಲಿ ಪಂಚಮುಖಿ ಶಾಲೆಯ ವಿದ್ಯಾರ್ಥಿಗಳು ಮೊದಲನೆ ಬಹುಮಾನ 50,000 ರೂ,ನಗದು, ದ್ವಿತೀಯ ಬಹುಮಾನವನ್ನು ಕ್ರೆಸೆಂಟ್ ಶಾಲೆಯ ಸಿಬಿಎಸ್ಸಿ ವಿಭಾಗದ ವಿದ್ಯಾರ್ಥಿಗಳು 30,000 ರೂ,ನಗದು ಹಾಗೂ ಕ್ರೆಸೆಂಟ್ ಶಾಲೆಯ ರಾಜ್ಯ ಪಠ್ಯ ಕ್ರಮದ ವಿದ್ಯಾರ್ಥಿಗಳು 3 ನೇ ಬಹುಮಾನ 20 ಸಾವಿರ ರೂ.ನಗದನ್ನು ಪಡೆದರು.
ನವೋದಯ ಶಾಲೆಯ ವಿದ್ಯಾರ್ಥಿಗಳು 4ನೇ ಸ್ಥಾನ ಪಡೆದು 5000 ರೂ, ಹಾಗೂ ಜಂಗಮಕೋಟೆಯ ಜ್ಞಾನಜೋತಿ ಶಾಲೆ ವಿದ್ಯಾರ್ಥಿಗಳು 5 ನೇ ಸ್ಥಾನ ಪಡೆದು 5000 ರೂ,ನಗದು ಬಹುಮಾನವನ್ನು ತನ್ನದಾಗಿಸಿಕೊಂಡರು.
ಶ್ರೀರಾಮ ಶೋಭಾಯಾತ್ರೆ ಆಚರಣಾ ಟ್ರಸ್ಟ್‍ನ ಗೌರವಾಧ್ಯಕ್ಷ ಪ್ರಕಾಶ್, ಅಧ್ಯಕ್ಷ ವೆಂಕಟೇಶ್, ಉಪಾಧ್ಯಕ್ಷ ಮಂಜುನಾಥ್, ಅಜಿತ್, ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ್, ರವಿಚಂದ್ರ, ನಾಗೇಶ್, ಅಶ್ವತ್ಥ್, ದೇವರಾಜ್, ವೆಂಕಟೇಶ್, ಕಿರಣ್, ರಾಮಾಂಜನೇಯ, ನಾಗೇಶ್, ಲಕ್ಷ್ಮೀಕಾಂತ್, ಅನಿಲ್ ಕುಮಾರ್, ಲಕ್ಷ್ಮೀಪತಿ ಇನ್ನಿತರರು ಹಾಜರಿದ್ದರು.
Sidlaghatta : ಸರಕಾರವು ತಾಲೂಕಿನಲ್ಲಿ ದರಕಾಸ್ತು ಸಮಿತಿ ರಚಿಸದ ಕಾರಣ ಭೂಮಿ ಮಂಜೂರಾತಿಗಾಗಿ ರೈತರು ಸಲ್ಲಿಸಿದ ಸಾವಿರಾರು ಅರ್ಜಿಗಳು ಬಾಕಿಯಿದ್ದು ರೈತರಿಗೆ ಸರಕಾರ ಭೂಮಿ ಮಂಜೂರು ಮಾಡದೆ ದ್ರೋಹ ಅನ್ಯಾಯ ಮಾಡುತ್ತಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಮೇಲೂರು ಮಂಜುನಾಥ್ ದೂರಿದರು.
ಶಿಡ್ಲಘಟ್ಟ ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಯಾವ ಕಾರಣಕ್ಕೆ ಸರಕಾರವು ತಾಲೂಕಿನಲ್ಲಿ ದರಕಾಸ್ತು ಸಮಿತಿ ರಚಿಸಿಲ್ಲ ಎಂಬುದು ಗೊತ್ತಿಲ್ಲ. ಇದರಿಂದ ಅನೇಕ ವರ್ಷಗಳಿಂದಲೂ ಭೂಮಿ ಮಂಜೂರಿಗಾಗಿ ಅರ್ಜಿ 50, 51, 53 ಹಾಗೂ 57ನ್ನು ಹಾಕಿಕೊಂಡು ಕಾದಿರುವ ಭೂರಹಿತ ರೈತರಿಗೆ ಮೋಸ ಅನ್ಯಾಯ ಆಗುತ್ತಿರುವುದಂತೂ ಬೇಸರದ ಸಂಗತಿ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಸರಕಾರವಿದ್ದು ಸ್ಥಳೀಯವಾಗಿ ಜೆಡಿಎಸ್ ಪಕ್ಷದ ಶಾಸಕರಿರುವ ಕಾರಣವಾ ಅಥವಾ ಸ್ಥಳೀಯ ಕಾಂಗ್ರೆಸ್‍ನಲ್ಲಿ ಇಬ್ಬರು ನಾಯಕರ ಒಳ ಜಗಳದಿಂದ ದರಕಾಸ್ತು ಸಮಿತಿ ರಚನೆಗೆ ನಾಮ ನಿರ್ದೇಶಕರನ್ನು ಸೂಚಿಸಲು ಒಮ್ಮತ ಮೂಡದೆ ದರಕಾಸ್ತು ಸಮಿತಿ ರಚನೆ ಆಗಿಲ್ಲವಾ ಎಂದು ಪ್ರಶ್ನಿಸಿದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸಮುದಾಯಕ್ಕೆ ಮೀಸಲಾದ ಹಣ ಬೇರೆ ಕೆಲಸ ಕಾರ್ಯಗಳಿಗೆ ಬಳಕೆ ಮಾಡಲಾಗುತ್ತಿದೆ. ಎಸ್‍ಸಿಪಿ, ಎಸ್‍ಟಿಪಿ ಯೋಜನೆಯಲ್ಲಿ ಸಾಕಷ್ಟು ಹಣ ದುರ್ಬಳಕೆ ಆಗುತ್ತಿದೆ. ಗ್ರಾಮ ಪಂಚಾಯಿತಿಗಳಲ್ಲಿ ಎಸ್‍ಸಿ ಹಾಗೂ ಎಸ್‍ಟಿ ವರ್ಗಗಳಿಗೆ ಸಂಬಂಸಿದಂತೆ ಕೈಗೊಂಡ ಕಾಮಗಾರಿ, ಮನ್ರೇಗಾ ಇನ್ನಿತರೆ ಯೋಜನೆಗಳ ಬಗ್ಗೆ ಮಾಹಿತಿ ಕೇಳಿ ಅರ್ಜಿ ಸಲ್ಲಿಸಿದರೆ ಮಾಹಿತಿಯನ್ನು ಕೊಡುತ್ತಿಲ್ಲ ಎಂದು ದೂರಿದರು.
ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳು ಕಳೆದರೂ ಬೇರೆ ಬೇರೆ ರೂಪಗಳಲ್ಲಿ ಅಸ್ಪಶ್ಯತೆ ಇನ್ನೂ ಆಚರಣೆಯಲ್ಲಿದೆ. ಜಾತಿ ತಾರತಮ್ಯ ಹೋಗುವ ಲಕ್ಷಣಗಳೆ ಕಾಣುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಚಂದಗಾನಹಳ್ಳಿಯಲ್ಲಿ ನಿವೇಶನರಹಿತ ದಲಿತರಿಗೆ ಸೀತಹಳ್ಳಿ ಸರ್ವೆ ನಂಬರ್ 29ರಲ್ಲಿ 23 ಗುಂಟೆ ಜಾಗದಲ್ಲಿ ನಿವೇಶನಗಳನ್ನು ನೀಡಬೇಕು, ಗ್ರಾಮಗಳಲ್ಲಿ ಸಾಮಾನ್ಯ ದಿನಸಿ ಅಂಗಡಿ, ಪೆಟ್ಟಿಗೆ ಅಂಗಡಿಗಳಲ್ಲೂ ಮದ್ಯ ಮಾರಾಟವಾಗುತ್ತಿದ್ದು ಯುವಕರು ಕುಡಿತದಿಂದ ಬದುಕನ್ನೆ ಹಾಳು ಮಾಡಿಕೊಳ್ಳುತ್ತಿದ್ದು ಮದ್ಯ ಮಾರಾಟಕ್ಕೆ ತಡೆ ಹಾಕಬೇಕು ಎಂದು ಒತ್ತಾಯಿಸಿದರು.
ಮೇಲೂರು ಗಾಮದಲ್ಲಿ ನಿವೇಶನ ರಹಿತ ದಲಿತರಿಗೆ ನಿವೇಶನಗಳನ್ನು ನೀಡಬೇಕು, ಸಾಕಷ್ಟು ಹಳ್ಳಿಗಳಲ್ಲಿ ದಲಿತರಿಗೆ ಸ್ಮಶಾನ ಇಲ್ಲ. ಸ್ಮಶಾನ ಇದ್ದರೂ ಸರಿಯಾದ ದಾರಿಯಿಲ್ಲ. ಸೂಕ್ತ ಸ್ಮಶಾನದ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ದಲಿತರಿಗೆ ಮಂಜೂರಾದ ಭೂಮಿಯನ್ನು ದಲಿತರು ಮಾರಾಟ ಮಾಡಿದ್ದರೂ ಅದನ್ನು ವಾಪಸ್ ಮಾಡಬೇಕು ಎನ್ನುವ ಕಾನೂನು ಇದ್ದರೂ ಅದಿಕಾರಿಗಳು ಆ ವಿಚಾರದಲ್ಲಿ ಕಾನೂನನ್ನು ಮೀರಿ ಆದೇಶ ಮಾಡುತ್ತಿದ್ದು ಅದನ್ನ ಪ್ರಶ್ನಿಸಿದರೆ ನಾವು ಮಾಡಿರುವ ಆದೇಶ ಸರಿಯಿಲ್ಲ ಎಂದಾದರೆ ಮೇಲ್ಮನವಿ ಸಲ್ಲಿಸಿ ಎಂದು ಹೇಳಿ ಕೈ ತೊಳೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು. ಈ ಎಲ್ಲ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಆಗಷ್ಟ್ 14ರ ರಾತ್ರಿ ಶಿಡ್ಲಘಟ್ಟ ನಗರದಲ್ಲಿ ಪಂಜಿನ ಮೆರವಣಿಗೆ ಮಾಡಲಾಗುವುದು ಎಂದು ತಿಳಿಸಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿಯ ತಾಲೂಕು ಸಂಚಾಲಕ ದಡಂಘಟ್ಟ ತಿರುಮಲೇಶ್, ತೊಟ್ಲಿಗಾನಹಳ್ಳಿ ದ್ಯಾವಪ್ಪ, ಎ.ಎಲ್.ನಾರಾಯಣಸ್ವಾಮಿ, ದಿಬ್ಬೂರಹಳ್ಳಿ ಗೊರ್ಲಪ್ಪ, ಸೊಣ್ಣಪ್ಪ, ಮುತ್ತಕಪಲ್ಲಿ ನಾರಾಯಣಸ್ವಾಮಿ, ತೋಕಲಹಳ್ಳಿ ಆಂಜಿನಪ್ಪ, ಹೇಮಾರ್ಲಹಳ್ಳಿ ಮುನಿಯಪ್ಪ, ಮಾರಪ್ಪ, ನೇರಳೆಮರದಹಳ್ಳಿ ಮುನಿನಾರಾಯಣಪ್ಪ ಇನ್ನಿತರರು ಹಾಜರಿದ್ದರು.
Kothanur, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಕೊತ್ತನೂರು ಗ್ರಾಮದಲ್ಲಿ ಜಿ ಕೆ ವಿ ಕೆ ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ರೈತರಿಗೆ ಬೀಜೋಪಚಾರ ಮಾಡುವ ವಿಧಾನಗಳು ಹಾಗೂ ಅದರ ಪ್ರಾಮುಖ್ಯತೆ ಕುರಿತು ಗುಂಪು ಚರ್ಚಾ ಸಭೆಯನ್ನು ಹಮ್ಮಿಕೊಂಡಿದ್ದರು.
ಸಭೆಯಲ್ಲಿ ರಾಗಿ, ದ್ವಿದಳ ಧಾನ್ಯಗಳು ಹಾಗೂ ಹೂವಿನ ಸಸಿಗಳಿಗೆ ಬೀಜೋಪಚಾರ ಮಾಡುವ ಮೂಲಕ ಬೆಳೆ ಹೆಚ್ಚಾಗುವುದು, ಬೀಜೋಪಚಾರ ಮಾಡುವುದರಿಂದ ತಡೆಯಬಹುದಾದ ರೋಗಗಳು, ಅದರ ಉಪಯೋಗಗಳ ಕುರಿತು ಮಾಹಿತಿ ನೀಡಿದರು.
ಸೂಕ್ಷ್ಮಾಣು ಜೀವಿಗಳಾದ ಅಜಾಸ್ಪಿರಿಲ್ಲಮ್, ರೈಜೋಬಿಯಂ ಅನ್ನು ಬಳಸುವುದರಿಂದ ಉತ್ತಮ ಗುಣಮಟ್ಟದ ಬೆಳೆಯನ್ನು ಪಡೆಯಬಹುದು ಎಂದು ವಿದ್ಯಾರ್ಥಿಗಳಾದ ಭೂಮಿಕಾ, ಭಕ್ತಿಶ್ರೀ, ಅರ್ಜುನ್ ಹಾಗೂ ಹರಿಪ್ರಸಾದ್ ವಿವರಿಸಿದರು.ಈ ಸಂದರ್ಭದಲ್ಲಿ ರೈತರೂ ತಮಗಿದ್ದ ಸಂದೇಹಗಳನ್ನು ಪರಿಹರಿಸಿಕೊಂಡರು.
Sidlaghatta : ಶಿಡ್ಲಘಟ್ಟ ನಗರದ ಡಾಲ್ಫಿನ್ ವಿದ್ಯಾ ಸಂಸ್ಥೆಯ ಕೇಂದ್ರೀಯ ಪಠ್ಯ ಪ್ರೌಢಶಾಲಾ ವಿದ್ಯಾರ್ಥಿಗಳು ನಗರದ ಪ್ರಮುಖ ಬೀದಿಗಳಲ್ಲಿ ಸೋಮವಾರ ತ್ರಿವರ್ಣ ಧ್ವಜ ಹಿಡಿದು “ಹರ್ ಘರ್ ತಿರಂಗ ಜಾಥಾ” ನಡೆಸಿದರು.
ದೇಶಾದ್ಯಂತ ಹರ್ ಘರ್ ತಿರಂಗ ಕಾರ್ಯಕ್ರಮ ನಡೆಯುವ ಹಿನ್ನಲೆಯಲ್ಲಿ ವಿದ್ಯಾರ್ಥಿಗಳು ತ್ರಿವರ್ಣ ಧ್ವಜ ಹಿಡಿದು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸುವ ಮೂಲಕ ದೇಶ ಭಕ್ತಿ, ಧ್ವಜ ಭಕ್ತಿ ಮೆರೆದರು. ಸ್ವಾತಂತ್ರ್ಯಕ್ಕಾಗಿ ಹುತಾತ್ಮರಾದ ರಾಷ್ಟ್ರ ಪ್ರೇಮಿಗಳನ್ನು ದೇಶ ಭಕ್ತರು, ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಿದರು.
ಸರ್ಕಲ್ ಇನ್ಸ್ ಪೆಕ್ಟರ್ ಎಂ.ಶ್ರೀನಿವಾಸ್, ಕ್ಷೇತ್ರ ಶಿಕ್ಷಣಾಧಿಕಾರಿ ನರೇಂದ್ರ ಕುಮಾರ್, ತಾಲ್ಲೂಕು ಆರೋಗ್ಯಾಕಾರಿ ಡಾ.ವೆಂಕಟೇಶ್‌ಮೂರ್ತಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳಿಗೆ ತ್ರಿವರ್ಣಧ್ವಜ ನೀಡಿದರು.
ಈ ವೇಳೆ ಮಾತನಾಡಿದ ಪ್ರಾಂಶುಪಾಲ ಎಲ್.ಮುನಿಕೃಷ್ಣ, ಸ್ವಾತಂತ್ರ್ಯ ಹೋರಾಟ, ಹೋರಾಟಗಾರರ ಬದುಕಿನ ಬಗ್ಗೆ ತಿಳಿಸಿಕೊಡುವ ಮೂಲಕ ವಿದ್ಯಾರ್ಥಿಗಳಲ್ಲಿ ದೇಶ ಪ್ರೇಮ, ದೇಶ ಭಕ್ತಿ ಮತ್ತು ಸ್ವಾತಂತ್ರ್ಯದ ಮಹತ್ವ ಮತ್ತು ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ತಿಳಿಸುಕೊಡುವ ಪ್ರಯತ್ನ ಎಲ್ಲರಿಂದಲೂ ಆಗಬೇಕಿದೆ ಎಂದರು.
ಡಾಲ್ಫಿನ್ ವಿದ್ಯಾಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎನ್.ಅಶೋಕ್, ಎನ್.ಸಿ.ಸಿ ಶಿಕ್ಷಣಾಧಿಕಾರಿ ಭರತ್, ಶಿಕ್ಷಕರಾದ ಎನ್.ರಾಮಾಂಜಿ, ಶ್ರೀನಿವಾಸಯ್ಯ, ರವಿಕುಮಾರ್, ಮಹೇಶ್ ಕುಮಾರ್, ಮುನಿರತ್ನಮ್ಮ, ಎನ್.ಸಿ.ಸಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.
Sidlaghatta : ಶಿಡ್ಲಘಟ್ಟ ನಗರದ ಮುತ್ತೂರು ಬೀದಿಯ ರಾಘವೇಂದ್ರಸ್ವಾಮಿ ಮಠದಲ್ಲಿ ರಾಯರ 354 ನೇ ಆರಾಧನಾ ಮಹೋತ್ಸವವನ್ನು ಶ್ರದ್ಧಾ ಭಕ್ತಿಯಿಂದ ಸೋಮವಾರ ಆಚರಿಸಲಾಯಿತು.
ಈ ಸಂದರ್ಭದಲ್ಲಿ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಮೂರು ದಿನಗಳ ಕಾಲ ನಡೆಸುವ ಆರಾಧನಾ ಮಹೋತ್ಸವವು ಭಾನುವಾರ ಪ್ರಾರಂಭವಾಯಿತು.
ಸುಪ್ರಭಾತ ಸೇವೆ, ಪಂಚಾಮೃತ ಅಭಿಷೇಕ, ಸಹಸ್ರನಾಮಾರ್ಚನೆ, ಹಸ್ತೋದಕ, ಮಹಾಮಂಗಳಾರತಿ ನಡೆಯಿತು. ರಾಯರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಸುಪ್ರಭಾತ ಸೇವೆ, ಪಂಚಾಮೃತ ಅಭಿಷೇಕ, ಸಹಸ್ರ ನಾಮಾರ್ಚನೆ, ಉತ್ಸವವನ್ನು ನೆರವೇರಿಸಲಾಯಿತು.
ಭಾನುವಾರ ಸಂಜೆ ಶ್ರೀ ಗಾಯಿತ್ರಿ ಮಹಿಳಾ ಮಂಡಳಿಯವರಿಂದ ಭಕ್ತಿಗೀತೆಗಳು ಮತ್ತು ಶ್ರೀಕಾಂತಂ ನಾಗೇಂದ್ರ ಶಾಸ್ತ್ರಿ, ಆನೂರು ಅನಂತಕೃಷ್ಣ ಶರ್ಮ ತಂಡದಿಂದ ಶಾಸ್ತ್ರೀಯ ಸಂಗೀತ ಆಯೋಜಿಸಲಾಗಿತ್ತು.
ಸೋಮವಾರ ನಗರದ ಪ್ರಮುಖ ರಸ್ತೆಗಳಲ್ಲಿ ರಾಯರ ಮೆರವಣಿಗೆಯನ್ನು ಆಯೋಜಿಸಲಾಗಿತ್ತು. ಉತ್ಸವ ಮೂರ್ತಿಗೆ ಭಕ್ತರು ಪೂಜೆ ಸಲ್ಲಿಸಿದರು. ಮೆರವಣಿಗೆ ಹಾದು ಹೋದ ರಸ್ತೆಗಳನ್ನು ಸಾರಿಸಿ ರಂಗವಲ್ಲಿ ಹಾಕಿ ಉತ್ಸವಕ್ಕೆ ಸ್ವಾಗತ ಕೋರಲಾಗಿತ್ತು.
ದೇವಾಲಯದ ಆವರಣದಲ್ಲಿ ರಾಘವೇಂದ್ರ ಸೇವಾ ಟ್ರಸ್ಟ್ ವತಿಯಿಂದ ಸಾಮೂಹಿಕ ಅನ್ನಸಂತರ್ಪಣೆಯನ್ನು ನಡೆಸಲಾಯಿತು.
ಈ ಸಂದರ್ಭದಲ್ಲಿ ರಾಘವೇಂದ್ರ ಸೇವಾ ಟ್ರಸ್ಟ್ ಅಧ್ಯಕ್ಷ ಎಸ್.ವಿ. ನಾಗರಾಜರಾವ್, ಕಾರ್ಯದರ್ಶಿ ಎನ್. ಶ್ರೀಕಾಂತ್, ಖಜಾಂಚಿ ಆರ್. ಮಧುಸೂದನ್, ಟ್ರಸ್ಟೀಗಳಾದ ಎ.ಎಸ್. ರವಿ, ಬಿ.ಕೃಷ್ಣಮೂರ್ತಿ, ಬಿ. ಆರ್. ಸುಧೀಂದ್ರ, ಬಿ. ಆರ್. ರವಿ, ವಿ.ಕೃಷ್ಣ , ಮಧು, ಹರೀಶ್, ವೆಂಕಟೇಶ್, ಬಾಸ್ಕರ್ , ಮಂಜುನಾಥ್ ಹಾಜರಿದ್ದರು.
Melur, Sidlaghatta : ದೇವಾಲಯಗಳು ಸಾಮರಸ್ಯ ಕೇಂದ್ರಗಳಾಗಿದ್ದು, ಅವುಗಳನ್ನು ಜೀರ್ಣೋದ್ಧಾರಗೊಳಿಸುವುದು ಸೇರಿದಂತೆ ನೂತನ ದೇವಾಲಯಗಳ ನಿರ್ಮಾಣ ಕಾರ್ಯಕ್ಕೆ ಪ್ರತಿಯೊಬ್ಬರೂ ಕೈ ಜೋಡಿಸುವ ಕೆಲಸವಾಗಬೇಕಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಪ್ರಸಾದ್ ಹೇಳಿದರು.
ತಾಲ್ಲೂಕಿನ ಮೇಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಂಗನಹಳ್ಳಿ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಚೌಡೇಶ್ವರಿ ದೇವಾಲಯ ಕಟ್ಟಡ ನಿರ್ಮಾಣಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ೨ ಲಕ್ಷ ಸಹಾಯಧನದ ಚೆಕ್ ವಿತರಿಸಿ ಮಾತನಾಡಿದರು.
ಗ್ರಾಮೀಣ ಭಾಗಗಳಲ್ಲಿ ನಿರ್ಮಾಣವಾಗುವಂತಹ ಇಂತಹ ದೇವಾಲಯಗಳ ನಿರ್ಮಾಣಕ್ಕೆ ಎಲ್ಲರೂ ಕೈ ಜೋಡಿಸಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ಕೇವಲ ಮಹಿಳಾ ಸಬಲೀಕರಣಕ್ಕೆ ಮಾತ್ರವಲ್ಲದೆ, ಹಲವಾರು ಸಾಮಾಜಿಕ ಕಾರ್ಯಕ್ರಮಗಳನ್ನೂ ಕೈಗೊಳ್ಳುತ್ತಿದೆ. ಪಿಂಚಣಿ ಯೋಜನೆ, ದೇವಾಲಯಗಳ ಅಭಿವೃದ್ಧಿ, ಮದ್ಯವರ್ಜನ ಶಿಬಿರಗಳು, ಶೈಕ್ಷಣಿಕ ಬೆಳವಣಿಗೆಗಾಗಿ ಸಹಾಯ ಮಾಡುವುದು, ಸೇರಿದಂತೆ ಹಲವಾರು ಕಾರ್ಯಕ್ರಮಗಳ ಮೂಲಕ ಸಮಾಜದಲ್ಲಿ ಉತ್ತಮ ಕಾರ್ಯಗಳನ್ನು ಮಾಡುತ್ತಿದ್ದು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಸಿ.ಪ್ರಮೀಳಾವೆಂಕಟೇಶ್, ಗ್ರಾ.ಪಂ ಮಾಜಿ ಸದಸ್ಯ ಬಿ.ಸಿ.ವೆಂಕಟೇಶಪ್ಪ, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಜಿ.ವಿ.ಸುರೇಶ್, ಮುಖಂಡರಾದ ಜಿ.ಎನ್.ಅಶ್ವಥಪ್ಪ, ಜಿ.ವಿ.ರಾಜೇಶ್, ವೆಂಕಟರೆಡ್ಡಿ, ಪಾರ್ವತಮ್ಮ, ಪ್ರಭಾವತಿ, ಜಿ.ಎನ್.ನಿರ್ಮಲ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕ ಧನಂಜಯ್, ಸೇವಾ ಪ್ರತಿನಿಧಿ ಮುನಿರತ್ನ ಮತ್ತಿತರರು ಹಾಜರಿದ್ದರು.