ಬೇಕಾಗುವ ಸಾಮಾಗ್ರಿ
2 ಬೇಯಿಸಿ ಉಪ್ಪುನೀರಿನಲ್ಲಿ ನೆನೆಸಿಟ್ಟ ಮಾವಿನಕಾಯಿ
1 ದೊಡ್ಡ ಬೆಳ್ಳುಳ್ಳಿ
5 ಹಸಿಮೆಣಸು
ಉಪ್ಪು
1 ಟೀ ಸ್ಪೂನ್ ಬೆಲ್ಲ
ಮಾಡುವ ವಿಧಾನ
ಮಾವಿನಕಾಯಿಯನ್ನು ಗೊರಟೆ ತೆಗೆದು ರಸವನ್ನು ತೆಗೆದಿಟ್ಟುಕೊಳ್ಳಿ. ಸಿಪ್ಪೆ ತೆಗೆದ ಬೆಳ್ಳುಳ್ಳಿ, ಹಸಿಮೆಣಸು ರುಬ್ಬಿಟ್ಟುಕೊಳ್ಳಿ.
ಬಾಣಲೆಯಲ್ಲಿ ಎಣ್ಣೆ ಹಾಕಿ ಸಾಸಿವೆ, ಉದ್ದಿನಬೇಳೆ, ಅರಿಶಿನಪುಡಿಯನ್ನು ಸಿಡಿಸಿ, ನಂತರ ಅದಕ್ಕೆ ರುಬ್ಬಿ ಇಟ್ಟ ಬೆಳ್ಳುಳ್ಳಿ ಮಿಶ್ರಣವನ್ನು ಹಾಕಿ ಚೆನ್ನಾಗಿ ಹುರಿಯಿರಿ, ಅದು ಸ್ವಲ್ಪ ಕೆಂಪಾದ ನಂತರ ಅದಕ್ಕೆ ತೆಗೆದಿಟ್ಟುಕೊಂಡ ಮಾವಿನಕಾಯಿ ರಸವನ್ನು ಹಾಕಿ, ಸ್ವಲ್ಪ ನೀರು ಹಾಕಿ ರುಚಿಗೆ ತಕ್ಕಷ್ಟು ಉಪ್ಪು, ಬೆಲ್ಲ್ಲವನ್ನು ಹಾಕಿ ಚೆನ್ನಾಗಿ ಕುದಿಸಿ. ಇದನ್ನು ಅನ್ನಕ್ಕೆ ಹಾಕಿ ಕಲಸಿಕೊಂಡು ಊಟಮಾಡಿ.
ಹಬ್ಬ ಹರಿದಿನಗಳಲ್ಲಿ ಸಿಹಿ ತಿಂದು ಬಾಯಿರುಚಿ ಕೆಟ್ಟಾಗ ಇದು ಖಾರ ಖಾರ ಹುಳಿ ಹುಳಿಯಾಗಿ ಊಟಮಾಡಲೂ ತುಂಬಾ ರುಚಿಯಾಗಿರುತ್ತದೆ, ಅಲ್ಲದೆ ದಿನಕ್ಕಿಂತ ಒಂದು ತುತ್ತು ಅನ್ನ ಜಾಸ್ತಿ ಸೇರುತ್ತದೆ.
ಕುಚ್ಚುಮಾವಿನಕಾಯಿ ಗೊಜ್ಜು
ವಿದ್ಯಾರ್ಥಿಗಳ ಮೌನ ಪ್ರತಿಭಟನಾ ಮೆರವಣಿಗೆ
ಪಾಕಿಸ್ತಾನದ ಪೆಶಾವರದಲ್ಲಿ ಸೈನಿಕ ಶಾಲೆಯ ವಿದ್ಯಾರ್ಥಿಗಳ ಮೇಲಿನ ಹತ್ಯಾಕಾಂಡ ಖಂಡಿಸಿ ಶುಕ್ರವಾರ ಎಸ್.ಎಫ್.ಐ ಮತ್ತು ಡಿ.ವೈ.ಎಫ್.ಐ ಸಂಘಟನೆಗಳ ನೇತೃತ್ವದಲ್ಲಿ ವಿದ್ಯಾರ್ಥಿಗಳು ಮೌನ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಉಗ್ರಗಾಮಿಗಳು ಪೆಶಾವರದ ಸೈನಿಕ ಶಾಲೆಯಲ್ಲಿ ಅಮಾಯಕ 132 ಮಕ್ಕಳನ್ನು ಕೊಂದಿರುವುದು ಅತ್ಯಂತ ಹೀನಾಯ ಕೃತ್ಯವಾಗಿದೆ. ಇದರಿಂದ ಇಡೀ ವಿಶ್ವವೇ ಬೆಚ್ಚಿ ಬಿದ್ದಿದ್ದು, ಎಲ್ಲಾ ದೇಶಗಳಿಗೂ ಇದು ಆತಂಕಕಾರಿ ಸಂಗತಿಯಾಗಿದೆ. ವಿಕೃತ ಮನಸ್ಸಿನ ಉಗ್ರರದ್ದು ರಾಕ್ಷಸೀ ಕೃತ್ಯವಾಗಿದೆ. ಇದರಿಂದ ಇಡೀ ವಿಶ್ವವೇ ಭಯೋತ್ಪಾದನೆಯ ವಿರುದ್ಧ ಒಗ್ಗಟ್ಟಿನಿಂದ ಹೋರಾಡುವ ಸನ್ನಿವೇಶ ಎದುರಾಗಿದೆ. ಭಯೋತ್ಪಾದನೆ ಮತ್ತು ಧರ್ಮಾಂಧತೆಗೆ ಎಂದೂ ಮಾನವೀಯ ಸಂಬಂಧಗಳು ಮತ್ತು ಮೌಲ್ಯವಿರುವುದಿಲ್ಲ. ಧರ್ಮಾಂಧ ಮೂಲಭೂತವಾದಿಗಳ ವಿರುದ್ಧ ಮತ್ತು ಭಯೋತ್ಪಾದಕರ ವಿರುದ್ಧ ವಿಶ್ವ ಸಂಸ್ಥೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮೃತಪಟ್ಟ ಮಕ್ಕಳ ಆತ್ಮಕ್ಕೆ ಶಾಂತಿ ಕೋರಿ ತಾಲ್ಲೂಕು ಕಚೇರಿಯ ಮುಂದೆ ಒಂದು ನಿಮಿಷ ಮೌನಾಚರಣೆ ನಡೆಸಿದರು.
ಡಿ.ವೈ.ಎಫ್.ಐ ರಾಜ್ಯ ಮುಖಂಡ ಕುಂದಲಗುರ್ಕಿ ಮುನೀಂದ್ರ, ಎಸ್.ಎಫ್.ಐ ನ ನಾಗರಾಜು, ಮಂಜುನಾಥ, ವೆಂಕಟೇಶ್, ಸೌಮ್ಯ, ಮಂಜುಶ್ರೀ, ನೇತ್ರಾ, ಶೋಭಾ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಜಂಗಮಕೋಟೆ ರೇಷ್ಮೆ ಸಹಕಾರ ಸಂಘದ ಆವರಣದಲ್ಲಿ ನಂದಿನಿ ಉತ್ಪನ್ನಗಳ ಮಾರಾಟಮಳಿಗೆ
ಕೋಲಾರ-ಚಿಕ್ಕಬಳ್ಳಾಪುರ ಅವಿಭಾಜ್ಯ ಜಿಲ್ಲೆಗಳಲ್ಲಿನ ಎಲ್ಲಾ ವ್ಯವಸಾಯ ಸೇವಾ ಸಹಕಾರ ಸಂಘಗಳ ಮುಖಾಂತರ ನಂದಿನಿ ಉತ್ಪನ್ನಗಳ ಮಾರಾಟ ಮಳಿಗೆಗಳನ್ನು ಮಾಡಿಸಿ ಸಹಕಾರ ಸಂಘಗಳ ಅಭಿವೃದ್ಧಿಗೆ ಕೋಚಿಮುಲ್ ನಿರ್ದೇಶಕರು ಸಹಕಾರ ನೀಡಬೇಕು ಎಂದು ಕೋಲಾರ ಜಿಲ್ಲಾಡಿ.ಸಿ.ಸಿ.ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದೇಗೌಡ ತಿಳಿಸಿದರು.
ತಾಲ್ಲೂಕಿನ ಜಂಗಮಕೋಟೆ ರೇಷ್ಮೆ ಬೆಳೆಗಾರರ ವ್ಯವಸಾಯ ಸೇವಾ ಸಹಕಾರ ಸಂಘದ ಆವರಣದಲ್ಲಿ ಶುಕ್ರವಾರ ನಂದಿನ ಉತ್ಪನ್ನಗಳ ಮಾರಾಟಮಳಿಗೆಯನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ಸಹಕಾರ ಸೇವಾ ಸಂಘಗಳ ಮುಖಾಂತರ ರೈತರುಗಳಿಗೆ ಬೇಕಾಗಿರುವ ರಸಗೊಬ್ಬರಗಳು, ಕಾಫಿ, ಬೂಸಾ, ಹಿಂಡಿ, ದಿನಸಿ ವಸ್ತುಗಳು, ಇ.ಸ್ಟಾಂಪಿಂಗ್, ಮತ್ತು ರೈತರುಗಳಿಗೆ ಸಾಲಗಳ ವಿತರಣೆಗಳ ಮೂಲಕ ಸಂಘವನ್ನು ನಡೆಸಲಾಗುತ್ತಿತ್ತು, ಈಗ ನಂದಿನಿ ಉತ್ಪನ್ನಗಳ ಮಾರಾಟ ಮಳಿಗೆಯನ್ನು ಸಹಕಾರ ಸಂಘಕ್ಕೆ ನೀಡಿರುವುದರಿಂದ ಮತ್ತಷ್ಟು ಲಾಭಾಂಶವನ್ನು ಪಡೆದುಕೊಂಡು ರೈತರಿಗೆ ಅನುಕೂಲ ಮಾಡಿಕೊಡಲು ಸಹಕಾರಿಯಾಗುತ್ತದೆ, ಇದರಿಂದಾಗಿ ಕೋಚಿಮುಲ್‌ಗೂ ಮಾರುಕಟ್ಟೆಯ ಸೌಲಭ್ಯವೂ ಲಭ್ಯವಾಗುತ್ತದೆ, ನಿರುದ್ಯೋಗಿಗಳಿಗೆ ಉದ್ಯೋಗಾವಕಾಶವನ್ನು ಕಲ್ಪಿಸಿಕೊಟ್ಟಂತಾಗುತ್ತದೆ, ಉತ್ತರ ಕನ್ನಡ, ಉತ್ತರ ಕರ್ನಾಟಕ, ಕೊಡಗು ಜಿಲ್ಲೆಗಳ ಮಾದರಿಯಲ್ಲಿ ಸಹಕಾರ ಸಂಘಗಳ ಅಭಿವೃದ್ದಿಗಾಗಿ ಹೆಚ್ಚಿನ ಪ್ರೋತ್ಸಾಹ ಅಗತ್ಯವಾಗಿದೆ, ರೈತರೂ ಕೂಡಾ ನಮ್ಮ ಡಿ.ಸಿ.ಸಿ,ಬ್ಯಾಂಕುಗಳ ಮುಖಾಂತರ ವಹಿವಾಟುಗಳನ್ನು ನಡೆಸುವ ಮೂಲಕ ಬ್ಯಾಂಕುಗಳನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕು ಎಂದರು.
ಕೋಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ ಮಾತನಾಡಿ, ರೈತರು, ಸಾಮಾನ್ಯ ವರ್ಗದವರೂ ಸೇರಿದಂತೆ ನಾಗರೀಕರು ಹೆಚ್ಚು ನಂದನಿ ಉತ್ಪನ್ನಗಳನ್ನು ಖರೀದಿ ಮಾಡಿ ಜನರ ಆರೋಗ್ಯದ ಬಗ್ಗೆ ಗಮನಹರಿಸುವುದರೊಂದಿಗೆ ಕಡಿಮೆ ಬೆಲೆಗೂ ಜನ ಸಾಮಾನ್ಯರಿಗೂ ಸಿಗುವಂತೆ ತಯಾರಿಸಿರುವ ನಂದಿನಿ ಹಾಲಿನ ಉತ್ಪನ್ನಗಳನ್ನು ಖರೀದಿಸುವುದರಿಂದ ಈ ಭಾಗದ ಹೈನುಗಾರಿಕೆ ಕ್ಷೇತ್ರ ಮತ್ತು ರೈತರನ್ನು ಸಹ ಪ್ರೋತ್ಸಾಹಿಸಿದಂತಾಗುತ್ತದೆ ಎಂದು ಹೇಳಿದರು.
ಕೋಚಿಮುಲ್ ನಿರ್ದೇಶಕರಾದ ಕೆ.ವಿ.ನಾಗರಾಜ್, ಕೆ.ಅಶ್ವತ್ಥರೆಡ್ಡಿ. ಸುನಂದಮ್ಮ,ಡಿ.ಆರ್.ಎಸ್.ಸಿ. ಬಿ.ಜಿ.ಮಂಜುಳಾ, ಮಾಜಿ ಅಧ್ಯಕ್ಷ ಕೆ.ಗುಡಿಯಪ್ಪ, ಮುಖ್ಯಕಾರ್ಯನಿರ್ವಾಹಕ ವ್ಯವಸ್ಥಾಪಕ ಬಾಬುರೆಡ್ಡಿ, ಜಂಗಮಕೋಟೆ ಸಹಕಾರ ಸಂಘದ ಅಧ್ಯಕ್ಷ ಟಿ.ರವಿಕುಮಾರ್, ಜಿಲ್ಲಾ ಯೂನಿಯನ್ ನಿರ್ದೇಶಕ ತಾದೂರು ರಮೇಶ್, ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಎಸ್.ನಾಗರಾಜ್, ಗ್ರಾಮ ಪಂಚಾಯತಿ ಉಪಾಧ್ಯಕ್ಷ ಜೆ.ಎಂ.ವೆಂಕಟೇಶ್, ಮಾಜಿ ಅಧ್ಯಕ್ಷ ನಜೀರ್‌ಸಾಬ್, ಪುರಸಭಾ ಸದಸ್ಯ ಅಪ್ಸರ್‌ಪಾಷಾ, ಎಚ್.ಎಂ.ಮುನಿಯಪ್ಪ, ರತ್ನಮ್ಮ, ಶ್ರೀನಿವಾಸ್ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.
ಜೀವ ವಿಮಾ ಸಪ್ತಾಹ ನೋಂದಣಿ
ಜೀವ ವಿಮಾ ಸಪ್ತಾಹ ನೋಂದಣಿಯನ್ನು ಪ್ರಗತಿಪರ ಕುರಿ ಸಾಕಾಣಿಕೆದಾರರ ಸಹಕಾರ ಸಂಘದ ವತಿಯಿಂದ ಸಂಘದ ಕಚೇರಿಯಲ್ಲಿ ಡಿಸೆಂಬರ್ 23 ರಿಂದ ಒಂದು ವಾರದ ಕಾಲ ನಡೆಸುತ್ತಿರುವುದಾಗಿ ಸಂಘದ ಅಧ್ಯಕ್ಷ ಸಿ.ವಿ.ಲೋಕೇಶ್ ಗೌಡ ತಿಳಿಸಿದರು.
ಪಟ್ಟಣದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಕೇಂದ್ರೀಯ ವೇಡ್ಪಾಲ್ ಭೀಮಾ ಯೋಜನೆಯು ಕುರಿಗಾರರಿಗೆ ಕೇಂದ್ರ ಸರ್ಕಾರದ ನೆರವಿನೊಂದಿಗೆ ಅನುಷ್ಠಾನಗೊಳ್ಳುತ್ತಿದೆ. ಈ ಪಾಲಿಸಿಗೆ ಕಟ್ಟಬೇಕಾದ ಒಟ್ಟು ಮೊತ್ತ 330 ರೂ ಆಗಿದ್ದು, ಅದರಲ್ಲಿ ಕುರಿಗಾರರು 80 ರೂಗಳನ್ನು ನೀಡಿದರೆ, ಎಲ್.ಐ.ಸಿ 100 ರೂಗಳನ್ನು ಮತ್ತು ಕೇಂದ್ರೀಯ ಉಣ್ಣೆ ನಿಗಮ 150 ರೂಗಳನ್ನು ಭರಿಸುತ್ತದೆ. ಈ ವಿಮೆಗೆ ಒಳಪಟ್ಟ ಕುರಿಗಾರರ ಕುಟುಂಬದಲ್ಲಿ ಯಾರಾದರೂ ಸ್ವಾಭಾವಿಕ ಮರಣ ಹೊಂದಿದಲ್ಲಿ ಎಲ್.ಐ.ಸಿ 60 ಸಾವಿರ ರೂಗಳನ್ನು ನೀಡುತ್ತದೆ. ಆಕಸ್ಮಿಕವಾದ ದುರ್ಘಟನೆಯಿಂದ ಒಂದು ಕಣ್ಣು ಅಥವಾ ಕಿವಿ ಅಥವಾ ಕಾಲು ಕಳೆದುಕೊಂಡಲ್ಲಿ 75 ಸಾವಿರ ರೂಗಳನ್ನು, ಅಕಸ್ಮಾತ್ ಎರಡೂ ಕಣ್ಣು ಅಥವಾ ಕಿವಿ ಅಥವಾ ಕಾಲು ಕಳೆದುಕೊಂಡಲ್ಲಿ ಒಂದೂವರೆ ಲಕ್ಷ ಪರಿಹಾರವಾಗಿ ಸಿಗುತ್ತದೆ.
ಈ ವಿಮೆಗೆ ಒಳಪಟ್ಟ ಕುರಿಗಾರರ ಮಕ್ಕಳಿಗೆ ಒಂಭತ್ತರಿಂದ ಪಿಯುಸಿ ವರೆಗಿನ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿ ವೇತನ ಸಹ ಸಿಗಲಿದೆ. ಒಂದು ಕುಟುಂಬದ ಇಬ್ಬರು ಮಕ್ಕಳಿಗೆ ತಲಾ 1200 ರೂಗಳು ವಾರ್ಷಿಕವಾಗಿ ನೀಡಲಾಗುತ್ತದೆ. ರಾಜ್ಯ ಸರ್ಕಾರ ಕುರಿಗಳು ಆಕಸ್ಮಿಕವಾಗಿ ಮೃತಪಟ್ಟರೆ ನೀಡುತ್ತಿದ್ದ 3000 ರೂ ಪರಿಹಾರ ಧನವನ್ನು 5 ಸಾವಿರ ರೂಗಳಿಗೆ ಏರಿಸಿದ್ದಾರೆ. ಆದರೆ ಇದು ತಾತ್ಕಾಲಿಕ ಯೋಜನೆಯಾಗಿದೆ. ಒಂದು ವಾರದ ಕಾಲ ನಡೆಯುವ ಈ ನೋಂದಣಿ ಕಾರ್ಯದಲ್ಲಿ ಕುರಿಗಾರರು ಭಾಗವಹಿಸಿ ಸದುಪಯೋಗಪಡಿಸಿಕೊಳ್ಳಬೇಕು. ಜನವರಿ ತಿಂಗಳಿನಲ್ಲಿ ಕುರಿ ಮತ್ತು ಉಣ್ಣೆ ನಿಗಮದ ಅಧ್ಯಕ್ಷರ ಮೂಲಕ ವಿಮೆಯ ಸರ್ಟಿಫಿಕೇಟ್ ವಿತರಿಸಲಾಗುತ್ತದೆ.
ಹರಿಯಾಣದ ಇಸ್ಸಾರಿನ ಕೇಂದ್ರೀಯ ಕುರಿಸಾಕಾಣಿಕಾ ಕೇಂದ್ರಕ್ಕೆ ಫೆಬ್ರುವರಿ ತಿಂಗಳಿನಲ್ಲಿ ನಮ್ಮ ಸಂಘದಿಂದ 25 ಮಂದಿ ಕುರಿಗಾರರನ್ನು ಆರು ದಿನಗಳ ತರಬೇತಿಗೆ ಕಳುಹಿಸಿಕೊಡಲಾಗುತ್ತದೆ. ರಾಣೆಬೆನ್ನೂರಿನ ಉಣ್ಣೆ ಉತ್ಪನ್ನಗಳ ಮಾರಾಟ ಮಂಡಳಿಯು ಸಂಘದ ಆಯ್ದ ಸದಸ್ಯರಿಗೆ ತಿಂಗಳಿಗೆ 3 ಸಾವಿರ ರೂಗಳ ವಿದ್ಯಾರ್ಥಿ ವೇತನದೊಂದಿಗೆ ಆರು ತಿಂಗಳ ಕಾಲ ತರಬೇತಿಯನ್ನು ಉಚಿತವಾಗಿ ನೀಡುತ್ತಿದೆ. ರಾಜಾಸ್ಥಾನದ ಜೋದ್ಪುರಕ್ಕೆ ಇಬ್ಬರನ್ನು ಒಂದು ವಾರದ ಕಾಲ ಉಣ್ಣೆಯ ಕುರಿತಂತೆ ತರಬೇತಿಗೂ ಸಂಘದಿಂದ ಕಳುಹಿಸುವುದಾಗಿ ತಿಳಿಸಿದರು.
ಪ್ರಗತಿಪರ ಕುರಿ ಸಾಕಾಣಿಕೆದಾರರ ಸಹಕಾರ ಸಂಘದ ನಿರ್ದೇಶಕರಾದ ರಾಮಣ್ಣ, ಶಿವಣ್ಣ ಈ ಸಂದರ್ಭದಲ್ಲಿ ಹಾಜರಿದ್ದರು.
ಹಜರತ್ ಗೈಬ್ ಷಾ ವಲೀ ದರ್ಗಾದಲ್ಲಿ ಗಂಧದ ಅಭಿಷೇಕ
ತಾಲ್ಲೂಕಿನ ಬೆಳ್ಳೂಟಿ ಗೇಟ್ ಬಳಿಯಿರುವ ಹಜರತ್ ಗೈಬ್ ಷಾ ವಲೀ ದರ್ಗಾದಲ್ಲಿ ಬುಧವಾರ ರಾತ್ರಿ ಗಂಧದ ಅಭಿಷೇಕ, ಉರುಸ್ ಹಾಗೂ ಖವ್ವಾಲಿಯನ್ನು ಆಯೋಜಿಸಲಾಗಿತ್ತು.
ಹಜರತ್ ಗೈಬ್ ಷಾ ವಲೀ ದರ್ಗಾವನ್ನು ದಿದ್ಯುತ್ ದೀಪಗಳಿಂದ ಮತ್ತು ವಿವಿಧ ಹೂಗಳಿಂದ ಅಲಂಕರಿಸಲಾಗಿದ್ದು, ಹಿಂದೂ ಮುಸ್ಲಿಂ ಬೇಧವಿಲ್ಲದೆ ಎಲ್ಲಾ ಜನಾಂಗದವರೂ ಪೂಜೆ ಸಲ್ಲಿಸಿದರು.
ಬೆಳ್ಳೂಟಿ ಗೇಟ್ ಬಳಿ ಗುಟ್ಟಾಂಜನೇಯಸ್ವಾಮಿ ದೇವಾಲಯ, ಹಜರತ್ ಗೈಬ್ ಷಾ ವಲೀ ದರ್ಗಾ ಮತ್ತು ಚರ್ಚ್ ಅಕ್ಕಪಕ್ಕದಲ್ಲೇ ಇದೆ. ಈ ಸ್ಥಳವು ಎಲ್ಲಾ ಧರ್ಮದ ಭಾವೈಕ್ಯತೆಯ ಪ್ರತೀಕವಾಗಿದೆ.
‘ಸುಮಾರು ಮುನ್ನೂರು ವರ್ಷದ ಇತಿಹಾಸವಿರುವ ಹಜರತ್ ಗೈಬ್ ಷಾ ವಲೀ ದರ್ಗಾಗೆ ಎಲ್ಲಾ ಧರ್ಮೀಯರೂ ಬಂದು ಪೂಜೆ ಸಲ್ಲಿಸುತ್ತಾರೆ. ರಾಜ್ಯದ ಹಲವಾರು ಊರು ಹಾಗೂ ನಗರಗಳಿಂದ ಭಕ್ತರು ಇಲ್ಲಿಗೆ ಬರುತ್ತಾರೆ. ಪ್ರತೀ ವರ್ಷ ಇಲ್ಲಿ ಆಚರಿಸುವ ಉರುಸ್ ಖ್ಯಾತಿಯಾಗಿದೆ. ಹಬ್ಬದ ವಾತಾವರಣ ಇಲ್ಲಿ ಸೃಷ್ಠಿಯಾಗುತ್ತದೆ. ಈ ಸಂದರ್ಭದಲ್ಲಿ ಹಲವಾರು ಅಂಗಡಿಮುಂಗಟ್ಟುಗಳು ತೆರೆಯಲಾಗುತ್ತದೆ. ಮಕ್ಕಳ ಆಟಿಕೆಗಳು, ಸುಗಂಧ, ಸಮೋಸಾ ಮುಂತಾದ ತಿನಿಸುಗಳು ಇಲ್ಲಿ ತಂದು ಮಾರುತ್ತಾರೆ. ಮನೆಗಳಿಂದ ಊಟ ತಂದು ಇಲ್ಲಿ ಪೂಜೆ ಸಲ್ಲಿಸಿ ತಿಂದು, ರಾತ್ರಿಯೆಲ್ಲಾ ಇಲ್ಲಿ ನಡೆಯುವ ಉರುಸ್ ಮತ್ತು ಖವ್ವಾಲಿಯನ್ನು ವೀಕ್ಷಿಸಿ ಬೆಳಗಿನ ಜಾವ ತೆರಳುವ ವಾಡಿಕೆಯಿದೆ’ ಎಂದು ಪುರಸಭಾ ಸದಸ್ಯ ಷಫೀ ತಿಳಿಸಿದರು.
ಪೊಲೀಸರಿಂದ ಅಪರಾಧ ತಡೆ ಮಾಸಾಚರಣೆ
ಪಟ್ಟಣದ ಸರಸ್ವತಿ ಕಾನ್ವೆಂಟ್ ಪ್ರೌಢಶಾಲೆಯಲ್ಲಿ ಅಪರಾಧ ತಡೆ ಮಾಸಾಚರಣೆ ಪ್ರಯುಕ್ತ ಗುರುವಾರ ಪೋಕ್ಸೋ ಕಾಯ್ದೆಯ ಬಗ್ಗೆ ಅರಿವು ಹಾಗೂ ಇನ್ನಿತರ ಉಪಯುಕ್ತ ಕಾನೂನುಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಸರ್ಕಲ್ ಇನ್ಸ್ಪೆಕ್ಟರ್ ಶ್ರೀನಿವಾಸಮೂರ್ತಿ ನೇತೃತ್ವದಲ್ಲಿ ಪುರಠಾಣೆಯ ಸಬ್ ಇನ್ಸ್ಪೆಕ್ಟರ್ ಪುರುಷೋತ್ತಮ್ ಹಾಗೂ ಸಿಬ್ಬಂದಿ ವರ್ಗದವರು ತಿಳಿಸಿಕೊಟ್ಟರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಸಂಶಯಗಳನ್ನು ಪರಿಹರಿಸುತ್ತಾ ಒಳ್ಳೆಯ ಪ್ರಶ್ನೆಗಳನ್ನು ಕೇಳಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಪೂರ್ವಕವಾಗಿ ಬಹುಮಾನರೂಪದಲ್ಲಿ ಕಲಿಕಾಸಾಮಗ್ರಿಗಳನ್ನು ನೀಡಿದರು.
ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ಎನ್. ಶ್ರೀಕಾಂತ್, ಮುಖ್ಯಶಿಕ್ಷಕಿ ವಿ. ಸೀತಾಲಕ್ಷ್ಮಿ, ಶಿಕ್ಷಕರಾದ ದಾಶರಥಿ, ನಾರಾಯಣಸ್ವಾಮಿ, ವೆಂಕಟೇಶಪ್ಪ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಬಾನಲ್ಲಿನ ಇನ್ನೊಂದು ಚಂದ್ರ
ಈಗಿರುವ ನಮ್ಮ ಚಂದ್ರನ ಹೊರತಾಗಿ ಇನ್ನೊಂದು ಚಂದ್ರನೂ ಭೂಮಿಯನ್ನು ಸುತ್ತುತ್ತಿರುವನೆಂದರೆ ನಿಮಗೆ ಆಶ್ಚರ್ಯವಾದೀತು! ಆದರಿದು ನಿಜ. ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಈ ಕೃತಕ ಚಂದ್ರನನ್ನು ಆಕಾಶಕ್ಕೆ ಹಾರಿಬಿಟ್ಟಿದೆ. 2009 ಜುಲೈ ತಿಂಗಳಲ್ಲಿ ಈ ಚಂದ್ರ ಒಂದು ದಶಕದ ಸಾರ್ಥಕ ಸೇವೆಯನ್ನು ಪೂರೈಸಿತೆಂದು ಸಂತೋಷದ ಆಚರಣೆಯೂ ನಾಸಾದಲ್ಲಿ ನಡೆಯಿತು. (ದಾಖಲೆಗಳ ಪ್ರಕಾರ ಗೆಲಿಲಿಯೋ ಎಂಬ ವಿಜ್ಞಾನಿ 1609ರಲ್ಲಿ ಮೊಟ್ಟಮೊದಲಬಾರಿ ದೂರದರ್ಶಕದ ಮೂಲಕ ಬಾಹ್ಯ ಆಕಾಶವನ್ನು ವೀಕ್ಷಿಸಿದ್ದ. ಆದ್ದರಿಂದ 2009 `ಅಂತಾರಾಷ್ಟ್ರೀಯ ಬಾಹ್ಯಾಕಾಶ ಆಚರಣಾ ವರ್ಷ’ ಎಂದು ಆಚರಿಸಲಾಯಿತು. ಭೂಮಿಯ ಮೇಲ್ಮೈನಿಂದ ನೂರು ಕಿ.ಮೀ. ಆಚೆಯ ಆಕಾಶವನ್ನು ಬಾಹ್ಯ ಆಕಾಶ ಎಂದು ಗುರುತಿಸಲಾಗುತ್ತಿದೆ. ಹಾಗಾಗಿ ಬಾಹ್ಯ ಆಕಾಶದ ವೈಚಿತ್ರ್ಯಗಳ ಬಗ್ಗೆ ಹೆಚ್ಚೆಚ್ಚು ಜನರಲ್ಲಿ ಅರಿವು ಮೂಡಿಸುವುದೇ ಈ ಆಚರಣೆಯ ಗುರಿ.)
ಅಂದ ಹಾಗೆ ಇದು ನಮ್ಮ ಅಚ್ಚಕನ್ನಡದ ಚಂದಮಾಮನ ‘ಚಂದ್ರ’ ಹೆಸರಲ್ಲ. ಭಾರತೀಯ ಮೂಲದ ಖ್ಯಾತ ಭೌತ ಶಾಸ್ತ್ರಜ್ಞರಾಗಿದ್ದ ‘ಸುಬ್ರಹ್ಮಣಿಯನ್ ಚಂದ್ರಶೇಖರ’ ಅವರ ನೆನಪಿಗೆ ಈ ಹೆಸರು. 23 ಜುಲೈ 1999 ರಂದು ದೂರದರ್ಶಕವೊಂದನ್ನು ಮಡಿಲಲ್ಲಿಟ್ಟುಕೊಂಡು ಕೊಲಂಬಿಯಾ ಅಂತರಿಕ್ಷ ನೌಕೆಯಲ್ಲಿ ಕುಳಿತು ಬಾನಿಗೆ ಹಾರಿದ ಈ ಚಂದ್ರನನ್ನು ಕೃತಕ ಉಪಗ್ರಹ ಎನ್ನುವುದಕ್ಕಿಂತಲೂ ವೇದÀಶಾಲೆ ಅಥವಾ ಅಂತರಿಕ್ಷ ವೀಕ್ಷಣಾಲಯ ಎಂದು ಕರೆಯುವುದು ಸೂಕ್ತ. ಇದು ಪ್ರತಿ ಅರವತ್ನಾಲ್ಕು ಘಂಟೆಗಳಿಗೊಮ್ಮೆ ಭೂಮಿಯ ಪ್ರದಕ್ಷಿಣೆ ಮಾಡುತ್ತಿದೆ.
ಆಕಾಶಕ್ಕೆ ಹಾರುವ ಉಪಕರಣಗಳೆಂದರೆ ಅತ್ಯುನ್ನತ ತಂತ್ರಜ್ಞಾನ ಬೇಡುವ ಅಥವಾ ಅಪಾರ ಹಣ ನುಂಗುವ ಯೋಜನೆಗಳು. ಬಾಹ್ಯಾಕಾಶ ಸಂಸ್ಥೆಗಳು ಉಪಕರಣಗಳ ವೆಚ್ಚ ಕಡಿತಗೊಳಿಸಲು ಪ್ರಯತ್ನ ಮಾಡುತ್ತಲೇ ಇರಬೇಕಾಗುತ್ತದೆ. ಈ ಕಾರಣಕ್ಕಾಗಿಯೇ ಚಂದ್ರ ವೇದಶಾಲೆಯ ನಿರ್ಮಾಣದ ವೇಳೆಯಲ್ಲಿ ಮೂಲ ನಕ್ಷೆಯಲ್ಲಿದ್ದ ಹನ್ನೆರಡು ಫಲಕಗಳಲ್ಲಿ ನಾಲ್ಕನ್ನು ಹಾಗೂ ಆರು ವೈಜ್ಞಾನಿಕ ಉಪಕರಣಗಳಲ್ಲಿ ಎರಡನ್ನು ಕಡಿಮೆಗೊಳಿಸಲಾಯಿತು. ವೃತ್ತಾಕಾರದ ಬದಲು ಅಂಡಾಕಾರದ ಕಕ್ಷೆಯಲ್ಲಿ ಅದು ಹಾರುವಂತೆ ರಚಿಸಲಾಯಿತು. ಏಕೆಂದರೆ ಈ ಕಕ್ಷೆಯಲ್ಲಿ ಅದು ಭೂಮಿಯ ಹೊರವಲಯದಿಂದ ಸಿಡಿಯುವ ವಿಕಿರಣಗಳಿಂದ ಸುರಕ್ಷಿತವಾಗಿರುತ್ತದೆ. ವೃತ್ತಾಕಾರದ ಕಕ್ಷೆಯಲ್ಲಿ ಹಾರುವಂತಿದ್ದರೆ ಈ ವೇದಶಾಲೆಯ ರಿಪೇರಿಗೆಂದು ಭೂಮಿಯಿಂದ ಅಂತರಿಕ್ಷ ನೌಕೆಗಳು ಹಾರಿ ಹೋಗಬಹುದಿತ್ತು. (ಆದರೆ ವಿಕಿರಣಗಳಿಂದ ರಕ್ಷಣೆ ಪಡೆಯಲು ವಿಶೇಷ ತಗಡುಗಳನ್ನು ಅಳವಡಿಸಬೇಕಾಗಿ ಬರುತ್ತಿತ್ತು). ಅಂಡಾಕಾರದ ಕಕ್ಷೆಯಲ್ಲಿ ಚಂದ್ರ ವೇದಶಾಲೆಯ ರಿಪೇರಿಯೂ ಸಾಧ್ಯವಿಲ್ಲ, ಅದು ಮರಳಿ ಭೂಮಿಗೆ ಬರುವಂತೆ ಮಾಡುವುದೂ ಸಾಧ್ಯವಿಲ್ಲ. ಇಷ್ಟಾದರೂ 22,723 ಕೆಜಿ ತೂಕದ ಮಾನವ ನಿರ್ಮಿತ ಈ ಚಂದ್ರನನ್ನು ಗಗನಯಾನಿಯನ್ನಾಗಿಸಲು ವಿಶೇಷವಾದ ರಾಕೆಟ್ ವ್ಯವಸ್ಥೆ ಬೇಕಾಯಿತು. ಹಾರಿದ ಒಂದು ತಿಂಗಳ ನಂತರ ಚಂದ್ರ ವೇದಶಾಲೆಯಿಂದ ಮಾಹಿತಿ ಬಿತ್ತರವಾಗಲು ಆರಂಭವಾಯಿತು. ಅಂದಿನಿಂದಲೂ ಕೇಂಬ್ರಿಜ್ ನ ‘ಚಂದ್ರ’ ಎಕ್ಸ್ ರೇ ಕೇಂದ್ರ ಅದರ ಮೇಲ್ವಿಚಾರಣೆ ನಡೆಸುತ್ತಿದೆ.
ಮಾನವನ ದೃಷ್ಟಿಗೆ ನಿಲುಕದ ದೂರದ ವಿದ್ಯಮಾನಗಳನ್ನು ಅರಿಯಲು ವಿಜ್ಞಾನಿಗಳು ಬಳಸಿದ ಉಪಕರಣ ದೂರದರ್ಶಕ. ಅಂದರೆ ಬಾಹ್ಯಾಕಾಶ ವಿಜ್ಞಾನಕ್ಕೂ, ದೂರದರ್ಶಕಗಳಿಗೂ ಬಿಡಲಾರದ ನಂಟು. 1608 ರಲ್ಲಿ ಭೂಮಿಯ ಪ್ರಥಮ ದೂರದರ್ಶಕ ನೆದಲ್ರ್ಯಾಂಡಿನ ಕನ್ನಡಕ ತಯಾರಿಸುವ ಮೂವರು ವರ್ತಕರ ಕೈಯ್ಯಲ್ಲಿ ಜನ್ಮ ತಾಳಿತು ಎಂದು ಇತಿಹಾಸ ಹೇಳುತ್ತದೆ. ಬೆಳಕಿನ ವಕ್ರೀಭವನ ಗುಣವನ್ನಾಧರಿಸಿದ ಆ ದರ್ಶಕದ ಸುಧಾರಿತ ಮಾದರಿಯನ್ನು ಗೆಲಿಲಿಯೋ 1609ರಲ್ಲಿ ತನ್ನ ಪ್ರಯೋಗಗಳಲ್ಲಿ ಬಳಸಿದನಂತೆ. ಆದ್ದರಿಂದ 2009ನ್ನು ದೂರದರ್ಶಕಗಳ ಸಾಧನೆಯ ನಾಲ್ಕುನೂರನೆಯ ವರ್ಷ ಎಂದೂ ಆಚರಿಸಬಹುದು.
ಈ ನಾನೂರು ವರ್ಷಗಳಲ್ಲಿ ದೂರದರ್ಶಕ ವಿಜ್ಞಾನ ಬಹಳೇ ಬೆಳೆದಿದೆ. ಮೊದಮೊದಲು ಭೂಮಿಯಲ್ಲಿದ್ದೇ ಆಕಾಶದ ದೂರನೋಟವನ್ನು ಪಡೆಯಲಾಗುತ್ತಿತ್ತು. ಖಗೋಲ ವಿಜ್ಞಾನ ಪ್ರಗತಿ ಹೊಂದಿದ ಹಾಗೆ ಆಕಾಶದಲ್ಲಿ ಹಾರಾಡುತ್ತಲೇ ಮಾಹಿತಿ ಕಲೆಹಾಕುವ ದೂರದರ್ಶಕಗಳು ನಿರ್ಮಾಣಗೊಳ್ಳತೊಡಗಿದವು. ಕಳೆದ ಶತಮಾನದಲ್ಲಿ ಅದರಲ್ಲೂ ಎರಡನೆಯ ಮಹಾಯುದ್ಧ ಮುಗಿದ ನಂತರದ ದಿನಗಳಲ್ಲಿ ಮುಂದುವರೆದ ಅಮೆರಿಕಾ ಮತ್ತು ಬ್ರಿಟನ್ ದೇಶಗಳು ಹಾರಾಡುವ ದೂರದರ್ಶಕಗಳ ಬಗ್ಗೆ ಹೆಚ್ಚು ಆಸ್ಥೆ ವಹಿಸತೊಡಗಿದವು. ಯಶಸ್ಸು ಸುಲಭವಾಗಿ ಎಟಕುವಂತಿರಲಿಲ್ಲ. ಹತ್ತಾರು ವೈಫಲ್ಯಗಳ ನಂತರ ಬಾಹ್ಯಾಕಾಶ ಹಾರಾಟ ತಂತ್ರಜ್ಞಾನ ಉತ್ತಮಗೊಳ್ಳತೊಡಗಿತು. ದೀರ್ಘಾವಧಿ ಬಾಳಿಕೆಯ ದೂರದರ್ಶಕಗಳು, ಅವನ್ನು ಹೊತ್ತೊಯ್ಯುವ ಸುಧಾರಿತ ಅಂತರಿಕ್ಷ ನೌಕೆಗಳು ಬಾಹ್ಯಾಕಾಶದಲ್ಲಿ ಹಾರಲಾರಂಭಿಸಿದವು.
ಇಪ್ಪತ್ತನೆಯ ಶತಮಾನದಲ್ಲಿ ಅತಿ ಹೆಚ್ಚು ಬಗೆಯ ಹಾಗೂ ಅತ್ಯುಚ್ಛ ಮಟ್ಟದ ದೂರದರ್ಶಕಗಳು ತಯಾರಾದವು. ನಾವು ಕರೆಯುವ ‘ಬೆಳಕು’ ವಿದ್ಯುತ್ ಕಾಂತೀಯ ಅಲೆಪಟ್ಟಿಯ ಒಂದಲ್ಪ ಭಾಗ ಎಂಬ ವಿಷಯ ಬಹಿರಂಗವಾದ ಮೇಲಂತೂ ವಿವಿಧ ರೀತಿಯ ಕಿರಣಗಳನ್ನು ಪತ್ತೆ ಹಚ್ಚುವಂಥಹ ದರ್ಶಕಗಳ ಬಗ್ಗೆ ತಜ್ಞರಲ್ಲಿ ಹೆಚ್ಚು ಆಸ್ಥೆ ಬೆಳೆಯತೊಡಗಿತು. ಈಗಂತೂ ರೇಡಿಯೋ ತರಂಗದಿಂದ ಗ್ಯಾಮಾ ತರಂಗದ ವ್ಯಾಪ್ತಿಯವರೆಗೂ ಮಾಹಿತಿಗಳನ್ನು ದಾಖಲಿಸುವ ದರ್ಶಕಗಳನ್ನು ರೂಪಿಸಲಾಗಿದೆ. ಅವು ಭುವಿಯ ಸುತ್ತಲ ಬ್ರಹ್ಮಾಂಡದಲ್ಲಿ ಸಂಭವಿಸುತ್ತಿರುವ ವಿಸ್ಮಯಕಾರಿ, ರಂಗುರಂಗಿನ ಘಟನೆಗಳನ್ನು ವಿಜ್ಞಾನಿಗಳಿಗೆ ಚಿತ್ರಗಳ ಮೂಲಕ ರವಾನಿಸುವ ಕಾಯಕದಲ್ಲಿ ಸದಾ ನಿರತವಾಗಿವೆ.
ಬಾಹ್ಯಾಕಾಶದ ವೇದಶಾಲೆಗಳಲ್ಲಿ ಬಳಸಲಾಗುವ ದೂರದರ್ಶಕಗಳಲ್ಲಿ ನಾನಾ ವಿಧಗಳಿವೆ. ಕಾರಣವೆಂದರೆ ಪ್ರತಿಯೊಂದೂ ಪ್ರತ್ಯೇಕವಾದ ಲಕ್ಷಣಗಳುಳ್ಳ ವಿದ್ಯುತ್ ಕಾಂತೀಯ ಕಿರಣಗಳ ಅಧ್ಯಯನಕ್ಕೆಂದು ರಚಿತವಾಗಿವೆ. ಈ ವಿದ್ಯುತ್ ಕಾಂತೀಯ ಕಿರಣಗಳು ಅಥವಾ ಅಲೆಗಳು ಎಂದರೇನು? ಇವು ಯಾವುದೇ ಮಾಧ್ಯಮದ ಅವಶ್ಯಕತೆ ಇಲ್ಲದೆ ವಿಶ್ವದಲ್ಲಿ ಎಲ್ಲೆಡೆ ಪಸರಿಸಿರುವ, ಪಸರಿಸುತ್ತಿರುವ ಶಕ್ತಿ ಅಲೆಗಳು. ಇವು ಅಲೆಗಳ ರೂಪದಲ್ಲಿ ಹಾಗೂ ಬೆಳಕಿನ ವೇಗದಲ್ಲಿ ಚಲಿಸುತ್ತವೆ. ವಿದ್ಯುತ್ ಮತ್ತು ಆಯಸ್ಕಾಂತ ಕ್ಷೇತ್ರಗಳ ಮಿಳಿತದಲ್ಲಿ ಉದ್ಭವಿಸುವ ಈ ಅಲೆಗಳು ಬಿಸಿಯಾದ, ಶಕ್ತಿ ತುಂಬಿದ ವಸ್ತುಗಳಿಂದ ಹೊರ ಚಿಮ್ಮುತ್ತಿರುತ್ತವೆ. ಇದಕ್ಕೆ ಉದಾಹರಣೆಯೆಂದರೆ, ನಕ್ಷತ್ರಗಳು. ವಸ್ತುಗಳ ಮೂಲರೂಪವೆನಿಸಿರುವ ಪರಮಾಣುಗಳ ಆಂತರಿಕ ಕ್ರಿಯೆಯಿಂದಾಗಿ ಈ ವಿದ್ಯುತ್ ಕಾಂತೀಯ ಶಕ್ತಿ ಉತ್ಪತ್ತಿಯಾಗುತ್ತದೆ. ಈ ಶಕ್ತಿಯ ವಿವಿಧ ಹಂತಗಳೇ ಭಿನ್ನ ಹೆಸರಿನ ಅಲೆಗಳು. ರೇಡಿಯೋ, ಮೈಕ್ರೋವೇವ್, ಅವರೋಹಿತ, ದೃಗ್ಗೋಚರ(ಅಂದರೆ ನಮ್ಮ ಕಣ್ಣಿಗೆ ಕಾಣಿಸುವ ಕೆಂಪಿನಿಂದ ನೇರಳೆ ಬಣ್ಣದವರೆಗಿನ ವರ್ಣಪಂಕ್ತಿ), ಅತಿನೇರಳೆ, ಎಕ್ಸ್ ರೇ ಹಾಗೂ ಗಾಮಾ ಕಿರಣಗಳನ್ನು ಕ್ರಮವಾಗಿ ಒಳಗೊಂಡಿರುವ ವಿದ್ಯುತ್ ಕಾಂತೀಯ ರೋಹಿತಪಟ್ಟಿ. ಈ ರೋಹಿತಪಟ್ಟಿಯಲ್ಲಿ ಬಲದಿಂದ ಎಡಕ್ಕೆ ಅಲೆಗಳ ಶಕ್ತಿ ಏರಿಕೆಯ ಕ್ರಮದಲ್ಲಿದ್ದರೆ, ಎಡದಿಂದ ಬಲಕ್ಕೆ ತರಂಗದೂರ ಏರಿಕೆಯ ಕ್ರಮದಲ್ಲಿರುತ್ತದೆ. ನಾವು ಬೆಳಕು ಎಂದು ಕರೆಯುವ ವರ್ಣಪಂಕ್ತಿ ಈ ವಿದ್ಯುತ್ ಕಾಂತೀಯ ಅಲೆಗಳ ಒಂದು ಅಲ್ಪ ಭಾಗವಷ್ಟೆ. ನಿಸರ್ಗದ ವೈಚಿತ್ರ್ಯ ಹೇಗಿದೆಯೆಂದರೆ ಈ ಅಲೆಗಳು ಬಾಹ್ಯ ಆಕಾಶದಲ್ಲಿ ಸರ್ವವ್ಯಾಪಿಯಾಗಿದ್ದರೂ ಜೀವಿಗಳಿಗೆ ಮಾರಕವಾಗದ ಅಲೆಗಳು ಮಾತ್ರ ಭೂ ವಾತಾವರಣವನ್ನು ನುಗ್ಗಬಲ್ಲವು. ಆದ್ದರಿಂದಲೇ ಶಕ್ತಿಯುತವಾದ ಕ್ಷಕಿರಣಗಳಿಗೆ, ಮೈಕ್ರೋವೇವ್ ಕಿರಣಗಳಿಗೆ ಅಷ್ಟೇಕೆ ಇನ್ಫ್ರಾರೆಡ್ ಅಥವಾ ಅವರೋಹಿತ ಕಿರಣಗಳಿಗೂ ಕೂಡ ಭೂಮಿಯ ವಾತಾವರಣವೆಂಬ ರಕ್ಷಾಕವಚದೊಳಕ್ಕೆ ಪ್ರವೇಶವಿಲ್ಲ.
ಮತ್ತೀಗ ವೇದಶಾಲೆಗಳಲ್ಲಿ ಬಳಸುವ ದೂರದರ್ಶಕಗಳಿಗೆ ಬರೋಣ. ಇವುಗಳಲ್ಲಿ ನಮ್ಮ ದೃಷ್ಟಿಗೋಚರ ಬೆಳಕನ್ನು ಗುರುತಿಸುವ ಆಪ್ಟಿಕಲ್ ಟೆಲಿಸ್ಕೋಪುಗಳು, ರೇಡಿಯೋ ಅಲೆಗಳನ್ನು ಗುರುತಿಸುವ ರೇಡಿಯೋ ಟೆಲಿಸ್ಕೋಪುಗಳು, ಅವರೋಹಿತ ಮತ್ತು ದೃಗ್ಗೋಚರ ಬೆಳಕಿನ ಚಿತ್ರಗಳನ್ನು ಗುರುತಿಸುವ ಹಬ್ಬಲ್, ಗಾಮಾ ರೇ ಹೀರುವ ಕಾಂಪ್ಟನ್, ಅತಿನೇರಳೆ ಕಿರಣಗಳನ್ನು ಗುರುತಿಸುವ ಜೇಮ್ಸ್ ವೆಬ್ ಇತ್ಯಾದಿ ಹಲ ಬಗೆಗಳಿವೆ. ಚಂದ್ರ ವೇದಶಾಲೆ ಮೇಲೆ ವಿವರಿಸಿದ ವಿದ್ಯುತ್ ಕಾಂತೀಯ ಅಲೆಗಳ ಎಕ್ಸ್ ರೇ ಗಳ ಚಿತ್ರಗಳನ್ನು ಮಾತ್ರ ತೆಗೆಯುತ್ತದೆ. ಇವು ಅತ್ಯಂತ ಶಕ್ತಿಕಾರಿಯಾದ ಕಿರಣಗಳು. ಭೂ ವಾತಾವರಣದಲ್ಲಿ ಕಾಣಬರುವುದಿಲ್ಲ. ಆದರೆ ವೈದ್ಯಕೀಯ ಕ್ಷೇತ್ರದಲ್ಲಿ ಇದರ ಸದುಪಯೋಗವನ್ನು ಪಡೆಯಲು ಕೃತಕವಾಗಿ ಉತ್ಪಾದಿಸಲಾಗುತ್ತದೆ. ಎಕ್ಸ್ ರೇಗಳು ಗಾಳಿಯಲ್ಲಿ ಹೆಚ್ಚು ದೂರ ಕ್ರಮಿಸಲಾರವು.
ಮೊಟ್ಟಮೊದಲ ಬಾರಿ ಇದರ ಇರುವಿಕೆಯ ಪತ್ತೆಯಾದಾಗ ಜರ್ಮನ್ ವಿಜ್ಞಾನಿ ಕೊನ್ರಾಡ್ ರಾಯೆಂಟ್ಜೆನ್ ಇದ್ಯಾವುದೋ ಗೊತ್ತಿಲ್ಲದ ಕಿರಣಗಳೆಂದು ಎಕ್ಸ್ ರೇ ಎಂದು ಕರೆದಿದ್ದು ಮುಂದೆ ಅದೇ ಹೆಸರು ಖಾಯಂ ಆಗಿ ಉಳಿಯಿತು. ಅಂತರಿಕ್ಷದಲ್ಲಿ ಲಕ್ಷಲಕ್ಷ ಡಿಗ್ರಿಯಷ್ಟು ಬಿಸಿಯಾದ ವಸ್ತುಗಳಿಂದ ಎಕ್ಸ್ ರೇಗಳು ಹೊರಹೊಮ್ಮುತ್ತವೆ. ಅಂತರಿಕ್ಷದ ನಿರ್ವಾತ ಪ್ರದೇಶದಲ್ಲಿ ಯಾವುದೇ ಅದೇತಡೆ ಇಲ್ಲದೆ ಎಲ್ಲಾ ಕಡೆ ಪಸರಿಸುವ ಆ ಕಿರಣಗಳನ್ನು ಹೀರಿಕೊಂಡು ಚಂದ್ರವೇದಶಾಲೆ ಚಿತ್ರ ತೆಗೆಯುತ್ತದೆ. ತೀಕ್ಷ್ಣವಾದ ಎಕ್ಸ್ ರೇ ಕಿರಣಗಳನ್ನು ಸೆರೆ ಹಿಡಿಯುವ ಚಂದ್ರ ದೂರದರ್ಶಕದ ಫಲಕಗಳನ್ನು ಅತಿ ನುಣುಪಾಗಿಯೂ ಮತ್ತು ಅತ್ಯಂತ ಬಲಿಷ್ಟವಾಗಿಯೂ ರಚಿಸಲಾಗಿದೆ. ಕೃತಕ ಚಂದ್ರನಿಂದ ಬಂದ ಚಿತ್ರಗಳನ್ನು ವಿಶ್ಲೇಷಿಸಿ ಎಕ್ಸ್ ರೇಗಳ ಮೂಲವನ್ನೂ ಮತ್ತು ಆ ಮೂಲದ ಸ್ವರೂಪವನ್ನೂ, ಅದರ ರಚನೆಯನ್ನೂ ಹಾಗೂ ಅದರಿಂದ ಸುತ್ತಲ ಆಕಾಶಕಾಯಗಳ ಮೇಲಾಗುವ ಗಾಢ ಪ್ರಭಾವವನ್ನೂ ವಿಜ್ಞಾನಿಗಳು ಪತ್ತೆ ಹಚ್ಚುತ್ತಾರೆ. ಈ ಚಂದ್ರನಿಂದ ಬಿತ್ತರವಾಗುವ ಚಿತ್ರಗಳ ಅಧ್ಯಯನಕ್ಕೆಂದೇ ನೂರಾರು ಯುವ ವಿಜ್ಞಾನಿಗಳು ಕಾದು ಕುಳಿತಿರುತ್ತಾರೆ.
ಈ ವರ್ಷವೊಂದರಲ್ಲೇ ಚಂದ್ರ ವೇದಶಾಲೆ ಕಳಿಸಿದ ಚಿತ್ರಗಳ ಆಧಾರದ ಮೇಲೆ ವಿಜ್ಞಾನಿಗಳು ಕಲೆಹಾಕಿದ ಮಾಹಿತಿಗಳು ಬಹಳಷ್ಟು. ಅದರ ಬಗ್ಗೆ ತಿಳಿಯುವುದಕ್ಕಿಂತ ಮೊದಲು ಖಗೋಲಶಾಸ್ತ್ರದಲ್ಲಿ ಬಳಸುವ ಕೆಲವು ಶಬ್ದಗಳನ್ನು ನಾವು ಅರಿತುಕೊಳ್ಳೋಣ.
ಸೂರ್ಯ ಒಂದು ನಕ್ಷತ್ರ ತಾನೆ? ನಕ್ಷತ್ರಗಳ ಗುಂಪನ್ನು ಗೆಲಾಕ್ಸಿ ಎಂದು ಕರೆಯುತ್ತಾರೆ. ಬಾಹ್ಯಾಕಾಶದಲ್ಲಿ ಕೋಟಿಗಟ್ಟಲೆ ಗೆಲಾಕ್ಸಿಗಳಿವೆ. ‘ಮಿಲ್ಕೀವೇ’ ಅಥವಾ ‘ಕ್ಷೀರಪಥ’ ಅಂದರೆ ನಮ್ಮ ಸೂರ್ಯನೂ ಅಂದರೆ ನಾವೂ ಒಂದು ಭಾಗವಾಗಿರುವ ಗೆಲಾಕ್ಸಿ. ಕ್ಷೀರಪಥವೊಂದರಲ್ಲೇ ಇನ್ನೂರರಿಂದ ನಾನೂರು ಶತಕೋಟಿ ನಕ್ಷತ್ರಗಳಿವೆಯೆಂದರೆ ವಿಶ್ವದ ಅಗಾಧತೆಯನ್ನು ನಾವು ಕಲ್ಪಿಸಿಕೊಳ್ಳಬಹುದು. ಗೆಲಾಕ್ಸಿಗಳ ಸದಸ್ಯ ನಕ್ಷತ್ರಗಳ ನಡುವಿನ ಅನಿಲ, ಧೂಳುಗಳಿಂದ ತುಂಬಿ ಮೋಡ ಮುಸುಕಿದಂತೆ ಕಾಣುವ ರಚನೆಯನ್ನು ನೆಬ್ಯುಲಾ ಎನ್ನುತ್ತಾರೆ. ನಕ್ಷತ್ರಗಳು ತಮ್ಮ ಜೀವಿತಾವಧಿಯಲ್ಲಿ ಹಂತಹಂತವಾಗಿ ರೂಪಾಂತರಗೊಳ್ಳುತ್ತವೆ. ‘ಸೂಪರನೋವಾ’ ಎಂಬುದು ತಾರೆಯೊಂದು ಸಿಡಿದು ಹೋಳಾಗುವ ಹಂತ. ಈ ಹಂತದಲ್ಲಿ ಅದು ಬಹು ದೊಡ್ಡ ಆಕಾರ ಪಡೆದು, ಪ್ರಕಾಶಮಾನವಾಗಿ ಉರಿದು, ಆ ನಂತರ ಸಿಡಿದು ಸುತ್ತಲ ಪ್ರದೇಶದಲ್ಲಿ ತಲ್ಲಣವೆಬ್ಬಿಸಿ ಅತಿ ವೇಗವಾಗಿ ತನ್ನ ಶಕ್ತಿಯನ್ನು ಹೊರಹಾಕುತ್ತದೆ. ಕಪ್ಪುಕುಳಿ ಅಥವಾ ಕಪ್ಪುರಂಧ್ರಗಳೆಂದರೆ ಬಳಿ ಬರುವ ವಸ್ತುಗಳೆಲ್ಲವನ್ನೂ (ಬೆಳಕನ್ನೂ ಸಹ)ತನ್ನ ಒಡಲೊಳಗೆ ಸೆಳೆದುಕೊಂಡು ನುಂಗಿ ಹಾಕುವ ಅಂದರೆ ಗರಿಷ್ಟ ಗುರುತ್ವ ಆಕರ್ಷಣೆಯನ್ನು ಹೊಂದಿದ ಪ್ರದೇಶಗಳು. ವೈಟ್ ಡ್ವಾರ್ಫ್ ಅಥವಾ ಬಿಳಿಕುಬ್ಜಗಳೆಂದರೆ ಜೀವಿತಾವಧಿಯ ಅಂತಿಮ ಹಂತವನ್ನು ತಲುಪಿ, ಪ್ರಖರವಾದ ಬೆಳ್ಳಿ ಬೆಳಕನ್ನು ಮಿಂಚಿಸುವ ಪುಟ್ಟ ನಕ್ಷತ್ರಗಳು. ನ್ಯೂಟ್ರಾನ್ ನಕ್ಷತ್ರಗಳೆಂದರೆ ತನ್ನ ಪ್ರಖರತೆಯನ್ನು ಕಳೆದುಕೊಳ್ಳುತ್ತಾ ಕೊನೆಗೊಮ್ಮೆ ಬರೀ ನ್ಯೂಟ್ರಾನ್ ಕಣಗಳನ್ನು ಮಾತ್ರ ಒಡಲೊಳಗೆ ತುಂಬಿಕೊಂಡ ಪುಟ್ಟ ನಕ್ಷತ್ರಗಳು. ಕಪ್ಪುದ್ರವ್ಯವೆಂದರೆ ಮಾನವ ಬರೀ ತಾರ್ಕಿಕ ಬುದ್ಧಿಯಿಂದ ಮಾತ್ರ ಪತ್ತೆ ಹಚ್ಚಿದ ಆದರೆ ಭೌತಿಕವಾಗಿ ಇನ್ನೂ ನಮಗೆಟುಕದ ದ್ರವ್ಯ.
ಇಲ್ಲಿವೆ ಚಂದ್ರ ವೇದಶಾಲೆಯ ಕೆಲವೊಂದು ಅನ್ವೇಷಣೆಗಳು:
• 17 ಸಾವಿರ ಬೆಳಕಿನ ವರ್ಷಗಳಷ್ಟು ಹಳೆಯದಾದ ‘ಪಿ.ಎಸ್.ಆರ್: 1509-58 ‘ ಹೆಸರಿನ ನ್ಯೂಟ್ರಾನ್ ನಕ್ಷತ್ರದ ಚಿತ್ರ ತೆಗೆದ ಮೊದಲ ದೂರದರ್ಶಕ ಚಂದ್ರ. ಇದು ವೇಗವಾಗಿ ಗಿರಕಿ ಹೊಡೆಯುತ್ತ ಶಕ್ತಿಯನ್ನು ಎಕ್ಸ್ ರೇಗಳಾಗಿ ಫೂತ್ಕರಿಸುತ್ತಿದೆ. ಆ ಅಬ್ಬರದಲ್ಲಿ ಕೈ ಆಕಾರದಂತೆ ಕಾಣಿಸುವ ಈ ನಕ್ಷತ್ರವನ್ನು ‘ದೇವರ ಕೈ(ಅಥವಾ ಗಾಡ್ಸ್ ಓನ್ ಹ್ಯಾಂಡ್) ಎನ್ನಲಾಗುತ್ತಿದೆ.
• ನ್ಯೂಟ್ರಾನ್ ನಕ್ಷತ್ರಗಳ ಅತಿ ವೇಗ ಹಾಗೂ ಅದರಿಂದಾಗಿ ಸುತ್ತಲ ಕೋಟಿಗಟ್ಟಲೆ ಮೈಲುಗಳ ಆಕಾಶದಲ್ಲಿ ಅವುಗಳ ಪ್ರಭಾವಲಯ ಇರುವುದೆಂದು ಏಡಿಯ ಆಕಾರದಲ್ಲಿರುವ ಕ್ರಾಬ್ ನೆಬ್ಯುಲಾ ಚಿತ್ರ ತೋರಿಸಿದೆ.
• ಎ1689 ಈವರೆಗೆ ಕಂಡುಹಿಡಿಯಲಾದ ಗೆಲಾಕ್ಸಿಗಳಲ್ಲಿ ಅತಿ ದೊಡ್ಡದು. ಚಂದ್ರ ವೇದಶಾಲೆ ಕಳುಹಿಸಿದ ಚಿತ್ರಗಳಿಂದಾಗಿ ಇಂಥ ದೊಡ್ಡ ಗೆಲಾಕ್ಸಿಗಳು ಚಿಕ್ಕ ಗೆಲಾಕ್ಸಿಗಳಿಂದ ಮಾಡಲ್ಪಟ್ಟಿವೆ ಎಂಬ ವಿಜ್ಞಾನಿಗಳ ಊಹೆಗೆ ಇಂಬು ಕೊಟ್ಟಂತಾಗಿದೆ.
• ಕಪ್ಪುರಂಧ್ರವೊಂದರ ಹೊರವಲಯದ ಬಿರುಸಾದ ವಾತಾವರಣದಲ್ಲಿ ಉದ್ಭವಿಸುತ್ತಿರುವ ಶಬ್ದದ ಅಲೆಗಳನ್ನು ಚಂದ್ರ ಗುರುತಿಸಿದೆ.
• ಕೆಲವು ಗೆಲಾಕ್ಸಿಗಳಲ್ಲಿ ಸದಸ್ಯ ನಕ್ಷತ್ರಗಳ ನಡುವಿನ ಸ್ಥಳ ಬಿಸಿ ಅನಿಲಗಳಿಂದ ತುಂಬಿದ್ದು ಅವು ಎಕ್ಸ್ ರೇಗಳನ್ನು ಉಗುಳುತ್ತಿವೆ ಎಂದು ಚಂದ್ರನ ಚಿತ್ರಗಳು ತೋರಿಸಿವೆ.
ನಮ್ಮ ಇಂದ್ರಿಯಗಳಿಗೆ ನಿಲುಕುವ ಈ ಬ್ರಹ್ಮಾಂಡ ಸುಂದರವಾಗಿದೆ. ಆದರೆ ಎಕ್ಸ್ ರೇಗಳ ಬ್ರಹ್ಮಾಂಡ ಬಲು ತೀಕ್ಷ್ಣ ಹಾಗೂ ಅತಿ ಕ್ರೂರವಾದದ್ದು. ಅಲ್ಲಿ ಸದಾ ತಾರಾ ಸಮರಗಳು, ಬೆಳಕು, ಅನಿಲಗಳ ಫೂತ್ಕಾರಗಳು, ಕಪ್ಪು ಕುಳಿಗಳಿಂದ ಆಕ್ರಮಣಕ್ಕೊಳಗಾಗುವ ತಾರೆಗಳು, ಗೆಲಾಕ್ಸಿಗಳ ನಡುವಿನ ತಿಕ್ಕಾಟ, ನ್ಯೂಟ್ರಾನ್ ನಕ್ಷತ್ರಗಳ ಉದಯ ಹೀಗೆ ಒಂದಿಲ್ಲೊಂದು ಘಟನೆಗಳು ಸಂಭವಿಸುತ್ತಿರುತ್ತವೆ. ಚಂದ್ರ ವೇದಶಾಲೆಯಿಂದಾಗಿ ಅಲ್ಲಿ ನಡೆಯುವ ಶಕ್ತಿ ವಿನಿಮಯದ ಕುರಿತಾದ ಮಾನವನ ಅರಿವಿನ ಹರವು ಹಿಗ್ಗಿ ವಿಸ್ತಾರಗೊಳ್ಳುತ್ತಿದೆ.
ಚಂದ್ರ ವೇದಶಾಲೆ ಬರಿಯ ಐದು ವರ್ಷಗಳು ಮಾತ್ರ ಸಮರ್ಥವಾಗಿ ಕಾರ್ಯವೆಸಗಬಹುದೆಂದು ನಂಬಲಾಗಿತ್ತು. ಈಗ ಐದು ವರ್ಷಗಳ ಹಿಂದೆ ನಾಸಾದ ವಿಜ್ಞಾನಿಗಳು ಅದರ ಆಯುಸ್ಸನ್ನು ಮತ್ತೆ ಹತ್ತು ವರ್ಷಗಳ ಕಾಲ ಮುಂದೂಡಿದ್ದಾರೆ ಮುಂದೊಂದು ದಿನ ಬಾಹ್ಯಾಕಾಶ ಕಸವೆನ್ನಿಸಿಕೊಳ್ಳಲಿರುವ ಈ ಕೃತಕ ಚಂದ್ರ ಈಗಂತೂ ಖಗೋಲ ವಿಜ್ಞಾನಿಗಳ ಬಾಹ್ಯಾಕಾಶ ಎಕ್ಸ್ ರೇ ಕಣ್ಣಾಗಿದ್ದಾನೆ. 2020ರಲ್ಲಿ ಈ ಕೃತಕ ಚಂದ್ರನ ಹೊಣೆಯನ್ನು ವಹಿಸಿಕೊಳ್ಳಲೆಂದು ‘ಅಂತಾರಾಷ್ಟ್ರೀಯ ಎಕ್ಸ್ ರೇ ವೇದಶಾಲೆ’ ಉಡಾವಣೆಗೊಳ್ಳಲಿದೆ.
ಸರೋಜ ಪ್ರಕಾಶ್
ಸರ್ಕಾರಿ ಶಾಲೆಗೆ ಕಂಪೆನಿಯ ಉದ್ಯೋಗಿಗಳ ನೆರವು
ಗ್ರಾಮೀಣ ಪ್ರದೇಶದ ಮಕ್ಕಳಲ್ಲಿನ ಪ್ರತಿಭೆಗಳನ್ನು ಗುರುತಿಸಿ ಉತ್ತಮ ಶಿಕ್ಷಣ ಮತ್ತು ಶೈಕ್ಷಣಿಕ ಪರಿಸರವನ್ನು ಒದಗಿಸಿದಲ್ಲಿ ಅವರು ಉತ್ತಮ ಪ್ರಜೆಗಳಾಗುವಲ್ಲಿ ಸಂಶಯವಿಲ್ಲ ಎಂದು ಬೆಂಗಳೂರಿನ ಇಂಡಿಯನ್ ಡಿಸೈನ್ಸ್ ಎಕ್ಸ್ಪೋರ್ಟ್ ಕಂಪೆನಿಯ ಮಾಲೀಕ ಖಲೀಂ ಉರ್ ರೆಹಮಾನ್ ಅಭಿಪ್ರಾಯಪಟ್ಟರು.
ಶಿಡ್ಲಘಟ್ಟ- ತಾಲ್ಲೂಕಿನ ವೈ.ಹುಣಸೇನಹಳಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ತಮ್ಮ ಕಂಪೆನಿಯಿಂದ ದತ್ತು ತೆಗೆದುಕೊಂಡ ಹಿನ್ನೆಲೆಯಲ್ಲಿ ಮಕ್ಕಳಿಗೆ ಸುಮಾರು ಒಂದು ಲಕ್ಷ ರೂಪಾಯಿ ಮೌಲ್ಯದ ಪರಿಕರಗಳನ್ನು ಕೊಡುಗೆಯಾಗಿ ನೀಡಿ ಮಾತನಾಡಿದರು.
ಪೋಷಕರು ಮಕ್ಕಳನ್ನು ತಪ್ಪದೆ ಶಾಲೆಗೆ ಕಳುಹಿಸಬೇಕು. ಶಾಲಾಭಿವೃದ್ಧಿ ಸಮಿತಿಯವರು ಮತ್ತು ಶಿಕ್ಷಕರು ಸರ್ಕಾರದಿಂದ ಸಿಗುವ ಎಲ್ಲ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಿ. ಅದರೊಂದಿಗೆ ಶಾಲೆಗೆ ಅಗತ್ಯವಿರುವ ಉಳಿದೆಲ್ಲ ಅಂಶಗಳನ್ನೂ ನಮ್ಮ ಕಂಪೆನಿಯಿಂದ ಒದಗಿಸಿಕೊಡುತ್ತೇನೆ ಎಂದು ಭರವಸೆ ನೀಡಿದರು.
ಕಂಪೆನಿಯ ಉದ್ಯೋಗಿ ಜಿ.ಎನ್.ನಂದಕುಮಾರ್ ಮಾತನಾಡಿ, ಶಾಲೆಗೆ ಬರುವ ಮಕ್ಕಳ ಬಗ್ಗೆ ಪೋಷಕರಲ್ಲದೆ ಗ್ರಾಮಸ್ಥರೂ ಗಮನಹರಿಸಬೇಕು. ಶಾಲಾ ಸಮಯದಲ್ಲಿ ಸಮವಸ್ತ್ರ ಧರಿಸಿರುವ ಮಕ್ಕಳು ಹೊರಗೆ ಕಂಡಲ್ಲಿ ವಿಚಾರಿಸಿ ಶಾಲೆಗೆ ಕರೆತರಬೇಕು. ಮುಂದಿನ ದಿನಗಳಲ್ಲಿ ಶಾಲೆಗೆ ಅಬತ್ಯವಿರುವ ಡೆಸ್ಕ್ಗಳು, ಕಂಪ್ಯೂಟರ್ಗಾಗಿ ಬ್ಯಾಟರಿ, ಶಾಲೆಯು ಸೋರದಂತೆ ರಿಪೇರಿ ಮುಂತಾದವುಗಳನ್ನು ಮಾಡಿಕೊಡುವುದಾಗಿ ಹೇಳಿದರು.
ವಾಟರ್ ಫಿಲ್ಟರ್, ಕ್ರಿಕೆಟ್, ವಾಲೀಬಾಲ್, ಹಾಕಿ ಮುಂತಾದ ಆಟದ ಸಾಮಗ್ರಿಗಳು, ಪಾಠೋಪಕರಣಗಳನ್ನು ಸೇರಿದಂತೆ ಕಲಿಕೆ ಹಾಗೂ ಕ್ರೀಡೆಗೆ ಸಹಕಾರಿಯಾಗುವ ಸುಮಾರು ೧ ಲಕ್ಷ ರೂಪಾಯಿ ಮೌಲ್ಯದ ಪರಿಕರಗಳನ್ನು ಶಾಲೆಯ ಮುಖ್ಯ ಶಿಕ್ಷಕರಿಗೆ ಹಸ್ತಾಂತರಿಸಿದರು.
ಕಂಪೆನಿಯ ಅಬ್ದುಲ್ ರಜಾಕ್, ದೇವರಾಜ್, ಅರುಣ್, ಸುಹಾಲ್, ಸತೀಶ್ಕುಮಾರ್, ಶಿವಶಂಕರ್, ಮಣಿ, ವಿಜಿ, ಶಿಕ್ಷಣ ಸಂಯೋಜಕ ಶ್ರೀನಾಥ್, ಮುಖ್ಯ ಶಿಕ್ಷಕಿ ಹಂಸವೇಣಿ, ಸಹಶಿಕ್ಷಕರಾದ ಕುಮುದ, ಮಂಜುಳ, ವಿದ್ಯಾ, ಶ್ರೀನಾಥ್, ಅಕ್ಕಾಯಮ್ಮ, ಎಸ್ಡಿಎಂಸಿ ಅಧ್ಯಕ್ಷ ಮುನೇಗೌಡ, ಗ್ರಾಮ ಪಂಚಾಯತಿ ಸದಸ್ಯ ಮುನಿಯಪ್ಪ, ಜಿ.ಎನ್.ಶ್ಯಾಮಸುಂದರ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ದಿಬ್ಬೂರಹಳ್ಳಿಯ ವೆಂಕಟೇಶ್ವರ ಪ್ರೌಢಶಾಲೆಯಲ್ಲಿ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮ
ಕಾನೂನನ್ನು ಯಾರು ಗೌರವಿಸಿ, ಜೀವನದಲ್ಲಿ ಅಳವಡಿಸಿಕೊಂಡು ಪಾಲಿಸುತ್ತಾರೋ ಅವರು ನೆಮ್ಮದಿಯ ಜೀವನವನ್ನು ನಡೆಸಲು ಸಾಧ್ಯವಾಗುತ್ತದೆ ಎಂದು ಸರ್ಕಲ್ ಇನ್ಸ್ಪೆಕ್ಟರ್ ಬಿ.ಎಲ್.ಶ್ರೀನಿವಾಸಮೂರ್ತಿ ತಿಳಿಸಿದರು.
ತಾಲ್ಲೂಕಿನ ದಿಬ್ಬೂರಹಳ್ಳಿಯ ವೆಂಕಟೇಶ್ವರ ಪ್ರೌಢಶಾಲೆಯಲ್ಲಿ ಈಚೆಗೆ ಪೊಲೀಸ್ ಇಲಾಖೆಯಿಂದ ಹಮ್ಮಿಕೊಂಡಿದ್ದ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾನೂನುಗಳನ್ನು ಇನ್ನೊಬ್ಬರ ಒತ್ತಾಯಕ್ಕಾಗಿ ಆಗಲಿ, ಪೊಲೀಸರಿಗೆ ಭಯ ಪಟ್ಟು ಆಗಲಿ ಪಾಲಿಸುವುದಲ್ಲ. ಅದು ನಿಮ್ಮ ನಮ್ಮ ಒಳ್ಳೆಯದಕ್ಕಾಗಿಯೆ ಕಾನೂನುಗಳಿದ್ದು, ಎಲ್ಲರ ಸುರಕ್ಷತೆಗಾಗಿ ಕಾನೂನನ್ನು ಪಾಲಿಸುವುದು ಸೂಕ್ತ ಎಂದರು.
ವಿಜ್ಞಾನ-ತಂತ್ರಜ್ಞಾನ ಬೆಳೆದಿದ್ದು ಶಾಲಾ ಕಾಲೇಜು ಹಂತದ ಮಕ್ಕಳ ಬೆರಳ ತುದಿಯಲ್ಲೇ ಎಲ್ಲ ಮಾಹಿತಿಗಳೂ ಸಿಗುತ್ತಿದ್ದು, ಇದು ತಮ್ಮ ಜ್ಞಾನದ ಬೆಳವಣಿಗೆಗೆ ಎಷ್ಟು ಸಹಕಾರಿಯೋ ಹಾದಿ ತಪ್ಪಲು ಕೂಡ ಅಷ್ಟೇ ಪರಿಣಾಮಕಾರಿಂಯಾಗಿ ಕಾರಣವಾಗುತ್ತಿದೆ. ವಿಜ್ಞಾನ ತಂತ್ರಜ್ಞಾನವನ್ನು ವಿದ್ಯಾರ್ಜನೆಗೆ ಬಳಸಿಕೊಂಡವರು ಸಮಾಜದಲ್ಲಿ ಉನ್ನತ ಮಟ್ಟಕ್ಕೆ ಏರಿದ್ದರೆ ಅದನ್ನು ದುರ್ಬಳಕೆ ಮಾಡಿಕೊಂಡವರು ತಪ್ಪು ಮಾಡಿ ಕಾನೂನಿನ ಕುಣಿಕೆಗೆ ಸಿಲುಕಿ ನಲಗುತ್ತಿದ್ದಾರೆ ಎಂದು ಹೇಳಿದರು.
ಎಲ್ಲಿಯೆ ಆಗಲಿ ಲೈಂಗಿಕ ದೌರ್ಜನ್ಯಗಳು ನಡೆದ ತಕ್ಷಣ ತಮ್ಮ ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡುವ ಕೆಲಸ ಮೊದಲು ಮಾಡಿ. ಇದರಿಂದ ಸಂತ್ರಸ್ಥರಿಗೆ ನ್ಯಾಯ ಸಿಗುವುದರ ಜತೆಗೆ ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ದಿಬ್ಬೂರಹಳ್ಳಿ ಪೊಲೀಸ್ ಠಾಣೆಯ ಸಬ್ಇನ್ಸ್ಪೆಕ್ಟರ್ ಜಿ.ಕೆ.ರಾಘವೇಂದ್ರ ಮಾತನಾಡಿ, ೧೮ ವರ್ಷದೊಳಗಿನ ಯಾರೇ ಆಗಲಿ ಅಂಗಡಿಗಳಲ್ಲಿ ಬೀಡಿ ಸಿಗರೇಟ್ ಗುಟ್ಕಾದಂತ ವಸ್ತುಗಳನ್ನು ಮಾರಾಟ ಮಾಡುವುದಾಗಲಿ, ಖರೀಸುವುದಾಗಲಿ ಕಾನೂನು ಪ್ರಕಾರ ತಪ್ಪು. ಯಾರೇ ಅಪರಿಚಿತರು ಕರೆದಾಗ ಹೋಗುವುದು, ಅವರೊಂದಿಗೆ ವ್ಯವಹರಿಸುವುದು ತಪ್ಪು. ಎಟಿಎಂ ಬಳಕೆಯನ್ನು ತಿಳಿದುಕೊಳ್ಳುವುದು ಅಗತ್ಯ ಎಂದು ತಿಳಿಸಿದರು.
ಶಾಲೆಯ ಮುಖ್ಯ ಶಿಕ್ಷಕ ಡಿ.ಸಿ.ಗೋಪಿನಾಥ್, ಸಹಶಿಕ್ಷಕರಾದ ಟಿ.ವಿ.ಚಂದ್ರಶೇಖರ್, ಜಯರಾಂ. ತುಳಸಿಮಾತಾ, ಪುಷ್ಪಾವತಿ, ರಾಧ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಮದುವೆಯ ನಂತರ ಸ್ತ್ರೀ ಒಮ್ಮೆ ಮಗುವಾಗಲಾರಳಾ?
ಕೆಲವೊಮ್ಮೆ ಜೀವನದಲ್ಲಿ ನಾವು ನಮ್ಮ ಮನಸ್ಸಿನಂತೆ ನೆಡೆದುಕೊಳ್ಳಲಾಗುವುದಿಲ್ಲ. ಕೆಲವೊಮ್ಮೆ ಏನು ಬಹಳ ಸಾರಿ. ಅದಕ್ಕಾಗಿಯೆ ಒಂದು ಮಾತು ಇದೆ “ಎಲ್ಲರೂ ನಿನ್ನಂತಾಗಲಿಲ್ಲವೆಂದು ಕೋಪಗೊಳ್ಳಬೇಡ ಏಕೆಂದರೆ ನೀನೇ ನೀನು ಯೋಚಿಸಿದಂತೆ ಆಗಲಾರೆ” ಎಂದು. ಅದನ್ನೂ ಮೀರಿ ನೆಡೆದವು ಎಂದರೆ ಮನೆಯಲ್ಲಿ ಯಾರು ಏನು ಹೇಳುತ್ತಾರೋ, ಬೇರೆಯವರು ಏನು ತಿಳಿಯುತ್ತರೋ ಹೀಗೆ ಯೋಚನೆಗಳು ಸಾಗುತ್ತವೆ. ಅದರಲ್ಲೂ ಇಂಥ ಯೋಚನೆಯಲ್ಲಿ ಹೆಣ್ಣು ಮುಂದಿರುತ್ತಾಳೆ.
ನನ್ನ ಮಗಳ ಶಾಲೆಯಲ್ಲಿ ತಂದೆತಾಯಿಯರಿಗಾಗಿ ವರ್ಷಕ್ಕೊಮ್ಮೆ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸುತ್ತಾರೆ. ನಾನು ಭಾಗವಹಿಸಿದರೂ ಯಾವುದರಲ್ಲಿಯೂ ಬರಲಿಲ್ಲ ಆ ಮಾತು ಬೇರೆ! ನಾನು ಹೇಳಹೋಗುತ್ತಿರುವುದು ಇದರಲ್ಲಿ ಯಾರು ಬಹುಮಾನ ಪಡೆಯುತ್ತಾರೆ ಯಾರು ಪಡೆಯುವುದಿಲ್ಲ ಎನ್ನುವುದರ ಬಗ್ಗೆಯಲ್ಲ. ಭಾಗವಹಿಸಬೇಕು ಎನ್ನುವಂತಹ ಮನಸ್ಥಿತಿ ಇದ್ದರೂ ಭಾಗವಹಿಸಲಾಗದಂಥ ಸ್ಥಿತಿಯ ಬಗ್ಗೆ.
ಮಾತೆಯರಿಗಾಗಿ ಓಟದ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ನಮಗೆಲ್ಲರಿಗೂ ಖುಷಿಯೋ ಖುಷಿ, ನಮ್ಮ ನಮ್ಮ ಬಾಲ್ಯದ ದಿನಗಳನ್ನು ನೆನೆಯುತ್ತಾ ಎಲ್ಲರೂ ಸ್ಪರ್ಧೆಯಲ್ಲಿ ಭಾಗವಹಿಸಿದೆವು. ಆ ಮಾತೆಯರಲ್ಲಿ ಹೀಗೆ ತನ್ನ ಬಾಲ್ಯದ ದಿನ ನೆನೆಯುತ್ತಾ ಓಡಿದ ಒಬ್ಬ ತಾಯಿ ಬಿದ್ದು ಕಾಲನ್ನು ತರಚಿಕೊಂಡಳು. ಆಗ ಆಕೆಯ ಮನಸ್ಥಿತಿಯನ್ನು ನೆನೆದು ನನಗೆ ಈಗಲೂ ಸಂಕಟವಾಗುತ್ತದೆ. ಆಕೆಯ ಮನೆಯಲ್ಲಿ ಆಕೆಯ ಪತಿ “ನೀನು ಯಾವುದೇ ಸ್ಪರ್ಧೆಯಲ್ಲಿ ಭಾಗವಹಿಸಬೇಡ” ಎಂದು ಹೇಳಿದ್ದರಂತೆ. ಅದನ್ನು ಮೀರಿ ಮಕ್ಕಳಂತೆ ಓಡಿದ್ದಳು, ಮಾತ್ರವಲ್ಲ ಓಡಿ ಬಿದ್ದಿದ್ದಳು ಕೂಡ. ಆಕೆಗೆ ಆಗ ಓಡಿದ ಖುಷಿ ಪೂರ್ತಿಯಾಗಿ ಹೋಗಿ ಅದರ ಜಾಗದಲ್ಲಿ ಹೆದರಿಕೆ ಮನೆಮಾಡಿತ್ತು. ತನ್ನ ಪತಿ ಬೇಡ ಎಂದು ಹೇಳಿದರೂ ತಾನು ಆಟಕ್ಕೆ ಸೇರಿದೆ, ಅಲ್ಲದೇ ಬಿದ್ದು ಪೆಟ್ಟು ಮಾಡಿಕೊಂಡೆ, ಇನ್ನು ತನ್ನ ಪತಿ ಏನು ಹೇಳುತ್ತಾರೋ, ಬೈಯ್ಯುತ್ತಾರೋ ಎಂದು ತುಂಬಾ ಚಿಂತಿತಳಾಗಿದ್ದಳು. ನಂತರ ಸ್ಪರ್ಧೆಯೆಲ್ಲವೂ ಮುಗಿಯಿತು ಎಲ್ಲರೂ ತಮ್ಮ ತಮ್ಮ ಮನೆಗೆ ಹೋದರು ಆ ಮಾತು ಬೇರೆ.
ಆದರೆ ನನಗೆ ಬಿದ್ದ ಆ ತಾಯಿ ಬಗ್ಗೆ ಯೋಚನೆ ಮಾಡುವಂತಾಯಿತು, ಎಂಥ ವಿಪರ್ಯಾಸ ಜೀವನದಲ್ಲಿ ಸಣ್ಣ ಸಣ್ಣ ಖುಷಿಗಳನ್ನು ಕೂಡ ಕೆಲವೊಮ್ಮೆ ಹೆಣ್ಣು ಅನುಭವಿಸಲಾರಳೇನೋ ಅನ್ನಿಸುತ್ತದೆ. ಹೆಣ್ಣಿಗೆ ಮದುವೆಯೊಂದು ಆದರೆ ಜೀವನ ಸಂಪೂರ್ಣ ಸಮಾಪ್ತಿಯಾ? ಒಮ್ಮೆ ಮಕ್ಕಳಂತೆ ನಗುತ್ತೇನೆ, ಓಡುತ್ತೇನೆ, ಅಳುತ್ತೇನೆ ಯಾವುದೂ ಸಾಧ್ಯವಿಲ್ಲವಾ? ಯೋಚಿಸಬೇಕಾದಂತಹ ವಿಷಯ.
ಈಗಿನ ದಿನಗಳಲ್ಲಿ ಜೀವನದ ದೃಷ್ಟಿಕೋನ, ಜೀವನ ಶೈಲಿ ಎಲ್ಲವೂ ಬದಲಾಗಿದೆ ನಿಜ. ಆದರೆ ಎಲ್ಲಿ ಎನ್ನುವಂತಹ ಪ್ರಶ್ನೆ ಉದ್ಭವಿಸುತ್ತದೆ. ಅದು ಕೇವಲ ದೊಡ್ಡ ದೊಡ್ಡ ಪಟ್ಟಣಗಳಲ್ಲಿ ಮಾತ್ರ ಸ್ವಲ್ಪಮಟ್ಟಿಗೆ ಬದಲಾಗಿದೆ. ಆದರೆ ಭಾರತ ಹಳ್ಳಿಗಳ ದೇಶ ಇನ್ನೂ ಅನೇಕ ಹಳ್ಳಿಗಳಲ್ಲಿ, ಹಿಂದುಳಿದ ಜನಾಂಗಗಳಲ್ಲಿ ಇಂಥ ಸ್ಥಿತಿಯೇ ಇರುವುದು ವಿಷಾದನೀಯ ಸಂಗತಿ.
– ರಚನ
ಶಿಡ್ಲಘಟ್ಟದ ಕೆರೆಗೆ ಬಂದ ಚಳಿಗಾಲದ ಅತಿಥಿ
ಶಿಡ್ಲಘಟ್ಟಕ್ಕೆ ಸೈಬೀರಿಯಾ, ಹಿಮಾಲಯಾ ಮತ್ತು ಯೂರೋಪ್ ದೇಶಗಳಿಂದ ಅತಿಥಿಗಳ ಆಗಮನವಾಗಿದೆ. ಅತಿಥಿಗಳು ಬಂದಿರುವುದು ಶಿಡ್ಲಘಟ್ಟದ ಹೊರವಲಯದಲ್ಲಿರುವ ಅಮ್ಮನ ಕೆರೆಗೆ. ಅತಿಥಿಗಳಾಗಿ ಬಂದಿರುವುದು ಪುಟ್ಟ ಆಕಾರದ ಹಕ್ಕಿಗಳು.
‘ಲಿಟಲ್ ರಿಂಗ್ಡ್ ಪ್ಲೋವರ್’ ಎಂಬ ಪುಟ್ಟ ಹಕ್ಕಿಯು ಚಳಿಗಾಲದ ಅತಿಥಿಗಳಾಗಿ ಅಮ್ಮನಕೆರೆಯಲ್ಲಿ ಬೀಡು ಬಿಟ್ಟಿದ್ದು, ಕೆಲವು ಜೋಡಿಗಳಲ್ಲಿ ಕಂಡು ಬಂದರೆ, ಮಿಕ್ಕವು ಒಂಟಿಯಾಗಿ ಆಹಾರಕ್ಕೆ ಜಾಲಾಡುತ್ತಿರುತ್ತಿವೆ.
ಕಳೆದ ಬಾರಿ ಮಳೆಯಿಲ್ಲದೆ ಕೆರೆ ಪೂರಾ ಒಣಗಿತ್ತು. ಆದರೆ ಈ ಬಾರಿ ಮಳೆ ಕಡಿಮೆಯಾಗಿ ಅಮ್ಮನಕೆರೆಯಲ್ಲಿ ನೀರು ತುಂಬ ಕಡಿಮೆಯಾಗಿದೆ. ಅಲ್ಲಲ್ಲಿ ನೀರಿನ ಹೊಂಡದಂತೆ ಕಂಡು ಬರುವ ಜಲಸೆಲೆಗಳಲ್ಲಿಯೇ ಈ ವಲಸೆ ಹಕ್ಕಿಗಳು ಆಹಾರಕ್ಕಾಗಿ ಹುಡುಕಾಟ ನಡೆಸಿವೆ.
‘ಲಿಟಲ್ ರಿಂಗ್ಡ್ ಪ್ಲೋವರ್’ ಹಕ್ಕಿಯನ್ನು ಕನ್ನಡದಲ್ಲಿ ಸಣ್ಣ ಕರಿಪಟ್ಟಿ ಗೊರವ ಎನ್ನುತ್ತಾರೆ. ಪುಟ್ಟ ಕೌಜು ಹಕ್ಕಿಯ ಗಾತ್ರವಿದ್ದು, ಬಾಲ, ರೆಕ್ಕೆ, ಬೆನ್ನು, ತಲೆಯ ಭಾಗವೆಲ್ಲಾ ಕಂದುಬಣ್ಣ, ಹಳದಿ ಕಾಲುಗಳು, ಪುಟ್ಟ ಕಪ್ಪು ಕೊಕ್ಕನ್ನು ಈ ಹಕ್ಕಿ ಹೊಂದಿದೆ. ಕುತ್ತಿಗೆಗೆ ಕಪ್ಪು ಬಣ್ಣದ ಪಟ್ಟಿಯನ್ನು ಕಟ್ಟಿಕೊಂಡಂತೆ ಕಾಣುವ ಗುರುತಿದೆ. ಗಡ್ಡಭಾಗ ಹಾಗೂ ಹೊಟ್ಟೆ ಅಚ್ಚ ಬಿಳುಪಿನಿಂದ ಕೂಡಿದೆ.
ಈ ಹಕ್ಕಿಗಳೊಂದಿಗೆ ಓಪನ್ ಬಿಲ್ಡ್ ಸ್ಟಾರ್ಕ್, ಬೆಳ್ಳಕ್ಕಿಗಳು, ಗ್ರೇಟರ್ ಸ್ಯಾಂಡ್ ಪ್ಲೋವರ್, ಲ್ಯಾಪ್ವಿಂಗ್ ಹಕ್ಕಿಗಳು ಕೂಡ ಕೆರೆಯ ಜೌಗಿನಲ್ಲಿ ಕಂಡು ಬಂದಿದ್ದು, ಆಹಾರದ ಅನ್ವೇಷಣೆಯಲ್ಲಿ ತೊಡಗಿವೆ.
‘ಈ ಲಿಟಲ್ ರಿಂಗ್ಡ್ ಪ್ಲೋವರ್ ಹಕ್ಕಿಗಳು ಸಂತಾನಾಭಿವೃದ್ಧಿಯನ್ನು ಮಾರ್ಚ್ನಿಂದ ಮೇ ತಿಂಗಳಿನಲ್ಲಿ ಮಾಡುತ್ತವೆ. ಅವುಗಳು ವಾಸಿಸುವ ಹಿಮಾಲಯ ಮತ್ತು ಯೂರೋಪ್ ದೇಶಗಳಲ್ಲಿ ಚಳಿ ಹೆಚ್ಚಾದಾಗ ಭಾರತ, ಪಾಕಿಸ್ತಾನ, ಶ್ರೀಲಂಕಾ ದೇಶಗಳಿಗೆ ಬರುತ್ತವೆ. ವಾರದ ರಜಾದಿನಗಳಲ್ಲಿ ನಮ್ಮ ಹಂಡಿಗನಾಳ ಗ್ರಾಮಕ್ಕೆ ಬಂದಾಗ ಹತ್ತಿರದ ಅಮ್ಮನಕೆರೆಗೆ ಈ ಚಳಿಗಾಲದಲ್ಲಿ ಹೋಗಿ ಹಕ್ಕಿಗಳನ್ನು ವೀಕ್ಷಿಸುವುದು ರೂಢಿ. ನಮ್ಮಲ್ಲಿನ ಕೆರೆಗಳಿಗೂ ಅಷ್ಟು ದೂರದ ಹಕ್ಕಿಗಳು ಆಗಮಿಸುತ್ತವೆ ಎಂಬುದು ಸಂತಸದ ಸಂಗತಿ. ಕೆರೆಗಳಿಗೆ ಕಸ ಮುಂತಾದ ತ್ಯಾಜ್ಯ ಹಾಕದೇ, ಕಳೆ ಗಿಡಗಳನ್ನು ಬೆಳೆಯಲು ಬಿಡದೆ ಸ್ವಚ್ಛವಾಗಿಟ್ಟುಕೊಂಡಲ್ಲಿ ಇನ್ನಷ್ಟು ಹಕ್ಕಿಗಳನ್ನು ನಾವು ನೋಡಬಹುದು’ ಎಂದು ಡಾ.ಶಶಿಧರ್ ತಿಳಿಸಿದರು.
ಮೌಂಟ್ ಕಾರ್ಮೆಲ್ ಕಾಲೇಜಿನ ವಿದ್ಯಾರ್ಥಿನಿಯರಿಗೆ ಕೃಷಿ ಪಾಠ
ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನ ಸುಮಾರು 50 ಮಂದಿ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯರು ಮಂಗಳವಾರ ತಾಲ್ಲೂಕಿನ ಹಿತ್ತಲಹಳ್ಳಿಗೆ ಭೇಟಿ ನೀಡಿದ್ದರು.
ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಭಾರತೀಯ ಕೃಷಿ ಪದ್ಧತಿ ಮತ್ತು ಅದರ ಆರ್ಥಿಕತೆ ಒಂದು ವಿಷಯವಾಗಿದೆ. ಕಾಲೇಜಿನಲ್ಲಿ ಕಲಿಯುವ ಪಾಠದ ಜೊತೆ ರೈತರ ಅನುಭವ, ಪರಿಶ್ರಮ, ಆರ್ಥಿಕ ಪ್ರಗತಿ, ಸಮಸ್ಯೆಗಳು, ಅದರೊಂದಿಗಿನ ವಾಣಿಜ್ಯ ಸಂಬಂಧಗಳನ್ನು ಅರಿಯಲು ತಾಲ್ಲೂಕಿನ ಹಿತ್ತಲಹಳ್ಳಿಯ ಎಚ್.ಜಿ.ಗೋಪಾಲಗೌಡ ಅವರ ತೋಟಕ್ಕೆ ಭೇಟಿ ನೀಡಿ ಹಿಪ್ಪುನೇರಳೆ ಬೇಸಾಯ, ರೇಷ್ಮೆ ಗೂಡನ್ನು ಉತ್ಪಾದನೆ, ಹನಿನೀರಾವರಿ ಬಳಸಿ ಕಡಿಮೆ ನೀರಿನಲ್ಲಿ ನಡೆಸುವ ಕೃಷಿ ಪದ್ಧತಿ, ಮಳೆಯಾಶ್ರಿತ ಸಮಗ್ರ ಬೇಸಾಯ ಪದ್ಧತಿಗಳನ್ನು ವೀಕ್ಷಿಸಿ ಮಾಹಿತಿ ಪಡೆದರು.
ಸಾವಯವ ಪದ್ಧತಿ ಮತ್ತು ರಾಸಾಯನಿಕ ಪದ್ಧತಿ ಕೃಷಿಗೆ ಸಂಬಂಧಿಸಿದಂತೆ, ರೈತರು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಬಗ್ಗೆ ವಿದ್ಯಾರ್ಥಿನಿಯರು ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದರು. ಜೇನು ಸಾಕಾಣಿಕೆ, ಕೋಳಿ, ಕುರಿ ಸಾಕಾಣಿಕೆ, ಹೈನುಗಾರಿಕೆ, ರೇಷ್ಮೆ ಕೃಷಿ, ಭೂಮಿಯ ಫಲವತ್ತತೆಯನ್ನು ಹೆಚ್ಚಿಸಿಕೊಳ್ಳಲು ಬಳಸುವ ಕ್ರಮಗಳು, ನೀರಿನ ಸದುಪಯೋಗ, ಮನೆಯಲ್ಲಿ ಬಳಸಿರುವ ನೀರನ್ನು ತೋಟಕ್ಕೆ ಹರಿಸುವುದು, ಮಳೆಯಾಶ್ರಿತವಾಗಿ ವಿವಿಧ ಬೆಳೆ ಬೆಳೆಯಲು ತೆಗೆದುಕೊಳ್ಳುವ ಕ್ರಮಗಳ ಬಗ್ಗೆ ರೈತ ಎಚ್.ಜಿ.ಗೋಪಾಲಗೌಡ ವಿವರಿಸಿದರು.
ರೇಷ್ಮೆ ವರ್ಷದಲ್ಲಿ ಎಷ್ಟು ಬೇಳೆ ಬೆಳೆಯುತ್ತೀರಿ, ಮಾರಾಟದ ಅನುಭವ, ರೈತಕೂಟಗಳ ಉಪಯೋಗ, ಅಧಿಕಾರಿಗಳಿಂದ ಸಿಗುವ ಸಹಾಯಧನ ಮುಂತಾದ ವಿಷಯಗಳ ಬಗ್ಗೆ ಮಾಹಿತಿ ಪಡೆದರು.
‘ನಮ್ಮ ಕಾಲೇಜಿನಲ್ಲಿ ರಾಜ್ಯ ಮಟ್ಟದ ಸೆಮಿನಾರ್ ನಡೆಸಿದ್ದೆವು. ಅದರಲ್ಲಿ ಕೃಷಿ ಸಚಿವ ಕೃಷ್ಣ ಬೈರೇಗೌಡ, ಕೃಷಿ ವಿಶ್ವವಿದ್ಯಾಲಯದ ಕುಲಪತಿ ನಾರಾಯಣಗೌಡ ಹಾಗೂ ವಿವಿಧ ವಿಜ್ಞಾನಿಗಳು ಆಗಮಿಸಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿ ಸಂವಾದಿಸಿದ್ದರು. ವಿದ್ಯಾರ್ಥಿಗಳಿಗೆ ಈ ವಿವಿಧ ಕ್ಷೇತ್ರ ಪರಿಣಿತರ ಜ್ಞಾನದೊಂದಿಗೆ ಪ್ರಗತಿಪರ ರೈತರ ಜ್ಞಾನದ ಅಗತ್ಯವೂ ಇದೆ ಅನಿಸಿತ್ತು. ಅದಕ್ಕಾಗಿ ವಿದ್ಯಾರ್ಥಿಗಳನ್ನು ಹಿತ್ತಲಹಳ್ಳಿಗೆ ಕರೆತಂದೆವು. ರೈತ ಹುಟ್ಟುವಾಗಲೇ ಸಾಲದಿಂದ ಹುಟ್ಟಿ ಸಾಯುವಾಗಲೂ ಸಾಲವನ್ನು ಹೊತ್ತೇ ಸಾಯುತ್ತಾನೆ ಎಂದು ಹೇಳುತ್ತಾರೆ. ಅದನ್ನು ಸುಳ್ಳು ಮಾಡಿರುವ ರೈತರ ಬಗ್ಗೆ ವಿದ್ಯಾರ್ಥಿಗಳು ಅರಿಯಬೇಕು. ದೇಶದ ಆರ್ಥಿಕತೆ ರೈತರ ಮೇಲೆ ಹೆಚ್ಚು ಅವಲಂಬಿತವಾಗಿದೆ. ಅವರ ಕಷ್ಟ, ಅದಕ್ಕೆ ಪರಿಹಾರ ಎಲ್ಲವೂ ವಿದ್ಯಾರ್ಥಿಗಳು ತಿಳಿಯಬೇಕು. ದೇಶದ ಬೆನ್ನೆಲುಬಾದ ರೈತರ ಬಗ್ಗೆ ವಿದ್ಯಾರ್ಥಿಗಳಲ್ಲಿ ಅವಗಾಹನೆ ಬೆಳೆಸುವುದು ನಮ್ಮ ಉದ್ದೇಶ’ ಎಂದು ವಾಣಿಜ್ಯ ವಿಭಾಗದ ಮುಖ್ಯಸ್ಥೆ ಶಾಲಿನಿ ಪೂಜಾರಿ ತಿಳಿಸಿದರು.
ವಾಣಿಜ್ಯ ವಿಭಾಗದ ಪ್ರಾಧ್ಯಾಪಕರಾದ ಸುನಂದಾ, ಗೋವಿಂದೇಗೌಡ, ಕೃಷಿ ಅಧಿಕಾರಿ ರಾಮ್ಕುಮಾರ್, ತೋಟಗಾರಿಕಾ ಅಧಿಕಾರಿ ರವಿಕುಮಾರ್, ಸತೀಶ್ಕುಮಾರ್, ರೈತರಾದ ಬೋದಗೂರು ವೆಂಕಟಸ್ವಾಮಿರೆಡ್ಡಿ, ರಾಮಮೂರ್ತಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಆಹಾರ ಸೇವನಾ ಕ್ರಮ ಹಾಗೂ ನಿತ್ಯೋಪಯೋಗಿ ಆಹಾರ ವಸ್ತುಗಳು
ಆಹಾರ, ನಿದ್ರೆ ಹಾಗೂ ಬ್ರಹ್ಮಚರ್ಯ ಪಾಲನೆ ಇವು ಮೂರು ಮನುಷ್ಯನ ಜೀವನದಲ್ಲಿ ಬಹು ಪ್ರಮುಖವಾದ ಅಂಶಗಳು.
“ಆಹಾರ ಸಂಭವಂ ವಸ್ತು ರೋಗಶ್ಚಾಹಾರ ಸಂಭವ:” ಮನುಷ್ಯನ ಶರೀರವು ಆಹಾರದಿಂದ ನಿರ್ಮಿತವಾಗಿದೆ. ಹಾಗೆಯೇ ರೋಗಗಳೂ ಕೂಡ ಆಹಾರದಿಂದಲೇ ಉತ್ಪನ್ನವಾಗುತ್ತವೆ ಎನ್ನುವುದು ಆಯುರ್ವೇದ ಶಾಸ್ತ್ರ ಗ್ರಂಥಗಳ ಅಭಿಪ್ರಾಯ.
ಆಹಾರ ಸ್ವೀಕರಣೆ ಎಂಬುದು ಕೇವಲ ಶರೀರ ಪೋಷಣೆಯ ಅಂಶ ಮಾತ್ರವಾಗಿರುವುದಿಲ್ಲ. “ಆಹಾರ ಶುದ್ಧೌ ಸತ್ವ ಶುದ್ಧಿ:” ಎಂಬ ಉಪನಿಷತ್ ವಾಕ್ಯದಂತೆ ಆಹಾರದಿಂದ ಶುದ್ಧ ಆಲೋಚನೆ ಶುದ್ಧ ಯೋಚನೆಯಿಂದ ಶುದ್ಧ ಕ್ರಿಯೆ, ಶುದ್ಧ ಕ್ರಿಯೆಯಿಂದ ಶುದ್ಧ ಗತಿ ಮತ್ತು ಶುದ್ಧ ಫಲಗಳು ಸಿಗುತ್ತವೆ. “ಅನ್ನಮಿತಿ ಬ್ರಹ್ಮ” ಅಂದರೆ ವೇದಗಳಲ್ಲಿ ಅನ್ನವನ್ನು ಬ್ರಹ್ಮನಿಗೆ ಹೋಲಿಕೆ ಮಾಡಲಾಗಿದೆ. “ಉದರ ನಿಮಿತ್ತಂ ಬಹುಕೃತ ವೇಷಂ” ಎನ್ನುವುದು ಶಂಕರಾಚಾರ್ಯರ ಅಂಬೋಣ, ಅಂದರೆ ವ್ಯಕ್ತಿ ಆಹಾರ ಸಂಗ್ರಹಣೆಗಾಗಿ ಏನೆಲ್ಲ ವೇಷಗಳನ್ನು ಧರಿಸುತ್ತಾನೆ.
“ಹಿತಭುಕ್, ಮಿತಭುಕ್, ಋತಭುಕ್” ಅಂದರೆ ಹಿತವಾಗಿ, ಮಿತವಾಗಿ ಹಾಗೂ ಋತುವಿಗನುಸಾರವಾಗಿ ಆಹಾರ ಸೇವನೆ ಮಾಡಬೇಕು ಎನ್ನುವುದು ಆಯುರ್ವೇದಾಚಾರ್ಯರ ಮತ.
ನಾವು ಸೇವಿಸುವ ಆಹಾರ ಉದರದಲ್ಲಿ ಸ್ರಾವವಾಗುವ ಕಿಣ್ವಗಳ ಸಹಾಯದಿಂದ ಪಚನಗೊಂಡು (Digestion) ದೇಹದ ಧಾತುಗಳಾಗಿ ಮಾರ್ಪಾಟುಗೊಳ್ಳಲು ಆಹಾರದ ಸೇವನೆ ಹೇಗೆ ಮಾಡಬೇಕು? ಎನ್ನುವುದರ ಬಗ್ಗೆ ಸ್ವಲ್ಪ ಗಮನ ಹರಿಸೋಣ.
ಯಾವ ರೀತಿ ಆಹಾರ ಸೇವನೆ ಮಾಡಬೇಕು?
1. ಶುಚಿಯಾದ ಸ್ಥಳದಲ್ಲಿ ಕುಳಿತು ಆಹಾರ ಸೇವನೆ ಮಾಡಬೇಕು.
2. ಸಮತಟ್ಟಾದ ಪ್ರದೇಶದಲ್ಲಿ ಕುಟುಂಬ ವರ್ಗದವರೊಂದಿಗೆ ಕುಳಿತು ಆಹಾರ ಸೇವನೆ ಉತ್ತಮ.
3. ಬೇರೆ ಬೇರೆ ರೀತಿಯ ಸಂಸ್ಕಾರಗಳನ್ನೊಳಗೊಂಡ (ಉದಾ: ಬೇಯಿಸುವುದು, ಎಣ್ಣೆಯಲ್ಲಿ ಹುರಿಯುವುದು, ಕರಿಯುವುದು ಇತ್ಯಾದಿ) ದೇಹಕ್ಕೆ ಹೊಂದುವಂಥಹ ಆಹಾರ ಸೇವನೆ ಮಾಡಬೇಕು.
4. ಹೆಚ್ಚು ಬಿಸಿಯೂ ಅಲ್ಲದ, ಹೆಚ್ಚು ತಂಪೂ ಅಲ್ಲದ ಆಗ ತಾನೇ ತಯಾರಿಸಿದ ಆಹಾರ ಸೇವನೆ ಉತ್ತಮ.
5. ಹೆಚ್ಚು ವೇಗವಾಗಿಯೂ ಅಲ್ಲದೆ, ಹೆಚ್ಚು ಸಾವಕಾಶವಾಗಿಯೂ ಅಲ್ಲದೆ ಆಹಾರ ಸೇವನೆ ಮಾಡುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ.
6. ಮಾಡಿದ ಆಹಾರ ಸೇವನೆ ಮನಸ್ಸಿಗೆ ಆಹ್ಲಾದವನ್ನುಂಟುಮಾಡುವಂತಿರಬೇಕು.
7. ನಾವು ಸೇವಿಸುವ ಆಹಾರ ಆರೂ ರಸಗಳನ್ನು (ಸಿಹಿ, ಹುಳಿ, ಉಪ್ಪು, ಖಾರ, ಕಹಿ, ಒಗರು) ಒಳಗೊಂಡಿರಬೇಕು.
8. ಮೊದಲು ಸಿಹಿ ರಸ ಪ್ರಧಾನವಾಗಿರುವ ಆಹಾರದ ಸೇವನೆ ಮಾಡಿ ನಂತರ ಉಳಿದ ರಸಗಳ ಸೇವನೆ ಉತ್ತಮ.
9. ಆಹಾರ ಶುಚಿ, ರುಚಿಯಾಗಿರಬೇಕು.
10. ಆಹಾರ ಸೇವನೆಯ ಮೊದಲು ಹಣ್ಣುಗಳ ಸೇವನೆ ಉತ್ತಮ.
11. ಮೊದಲು ದ್ರವ ಪ್ರಧಾನ ಆಹಾರದ ಸೇವನೆ ನಂತರ ಘನ ಪದಾರ್ಥಗಳ ಸೇವನೆ ಮಾಡುವುದು ಉತ್ತಮ.
12. ಗೆಡ್ಡೆ, ಗೆಣಸುಗಳು ಇತ್ಯಾದಿ ಕಂದ ಮೂಲಗಳನ್ನು ಹಾಗೂ ಅವುಗಳಿಂದ ತಯಾರಿಸಿದ ಭಕ್ಷ್ಯಗಳನ್ನು ಪ್ರಾರಂಭದಲ್ಲಿಯೇ ಸೇವಿಸುವುದು ಉತ್ತಮ.
13. “ಕಾಲ ಭೋಜನಂ ಆರೋಗ್ಯಕರಾಣಾಂ” ಅಂದರೆ ಸರಿಯಾದ ಕಾಲದಲ್ಲಿ, ಒಮ್ಮೆ ಸೇವಿಸಿದ ಆಹಾರ ಜೀರ್ಣವಾದ ನಂತರವೇ ಪುನ: ಆಹಾರ ಸೇವನೆ ಒಳಿತು.
14. ನಾವು ಸೇವಿಸುವ ಆಹಾರ ಸುಲಭವಾಗಿ ಜೀರ್ಣವಾಗುವಂತಿರಬೇಕು, ಜೀರ್ಣಕ್ಕೆ ಭಾರವಾದಂಥಹ ಆಹಾರದ ಸೇವನೆ ಮಾಡುವಾಗ ಅರ್ಧ ಹೊಟ್ಟೆತುಂಬುವಷ್ಟು ಮಾತ್ರ ಆಹಾರ ಸೇವನೆ ಮಾಡಬೇಕು. ಒಟ್ಟಿನಲ್ಲಿ ಜೀರ್ಣಶಕ್ತಿಗೆ ಅನುಕೂಲಕರವಾದ ಪ್ರಮಾಣದಲ್ಲಿ ಆಹಾರ ಸೇವನೆ ಹಿತಕರ.
15. ನಿತ್ಯವೂ ಸ್ವಲ್ಪ ಜಿಡ್ಡಿನಾಂಶದಿಂದ ಕೂಡಿದ (ತುಪ್ಪ, ಬೆಣ್ಣೆ, ಎಣ್ಣೆಯಿಂದ) ಸಂಸ್ಕರಿಸಿದ ಆಹಾರ ಪದಾರ್ಥಗಳ ಸೇವನೆ ಉತ್ತಮ. ದಿನಕ್ಕೆ ಒಂದು ಚಮಚದಷ್ಟು ತುಪ್ಪ ಅಥವಾ ಬೆಣ್ಣೆಯನ್ನು ಬಿಸಿಯಾದ ಆಹಾರದೊಂದಿಗೆ ಸೇವಿಸುವುದರಿಂದ ಜೀರ್ಣ ಶಕ್ತಿ ಹೆಚ್ಚುತ್ತದೆ. ಇದು ಕೊಲೆಸ್ಟರಾಲನ್ನು ಹೆಚ್ಚಿಸುವುದಿಲ್ಲ.
16. ನೀರಿನಂಶ ಪ್ರಧಾನವಾಗಿರುವ ಆಹಾರ ಪದಾರ್ಥಗಳ ಸೇವನೆ ಅಗತ್ಯ.
17. ಸ್ಥೂಲ ಶರೀರದವರು ಊಟದ ಮೊದಲು ನೀರನ್ನು ಕುಡಿಯಬೇಕು. ಕೃಶ ಶರೀರದವರು ಊಟದ ನಂತರ ನೀರನ್ನು ಕುಡಿಯಬೇಕು. ಹಾಗೂ ಸಮ ಶರೀರದವರು ಊಟದ ಮಧ್ಯ ನೀರಿನ ಸೇವನೆ ಮಾಡುವುದು ಅನುಕೂಲಕರ.
18. ಊಟದ ಜೋತೆಗೆ ಬಿಸಿ ನೀರಿನ ಸೇವನೆ ಹಿತಕರ. ಇದು ಆಹಾರವು ಸರಿಯಾದ ರೀತಿಯಲ್ಲಿ ಪಚನವಾಗಲು ಸಹಾಯ ಮಾಡುತ್ತದೆ.
19. ಸ್ನಾನ ಮಾಡಿ ಅಥವಾ ಕೈ ಕಾಲುಗಳನ್ನು ತೊಳೆದ ನಂತರವೇ ಆಹಾರದ ಸೇವನೆ ಉತ್ತಮ.
ಯಾವ ರೀತಿ ಆಹಾರ ಸೇವನೆ ಮಾಡಬಾರದು?
1. ಅತಿ ಬಿಸಿಯಾದ ಹಾಗೂ ಅತಿ ತಂಪಾದ ಆಹಾರ ಸೇವನೆ ಅರೋಗ್ಯಕ್ಕೆ ಹಾನಿಕರ.
2. ಅತಿ ವೇಗವಾಗಿ ಹಾಗೂ ಅತಿ ನಿಧಾನವಾಗಿಯೂ ಆಹಾರ ಸೇವನೆ ನಿಷಿದ್ಧ.
3. ಹಳಸಿದ, ದೂಷಿತಗೊಂಡ, ಕಲ್ಲು ಮಣ್ಣು, ಕೂದಲುಗಳಿಂದ ಮಿಶ್ರಣಗೊಂಡ ಆಹಾರ ಸೇವನೆ ನಿಷಿದ್ಧ.
4. ಅತಿಯಾಗಿ ಬೆಂದ, ಅತಿಯಾಗಿ ಸೀದು ಹೋದ ಹಾಗು ಅತಿಯಾಗಿ ಬೇಯದ ಆಹಾರ ಸೇವನೆ ಅಹಿತಕರ.
5. ಸೇವಿಸಿದ ಆಹಾರ ಹೊಟ್ಟೆ ಉಬ್ಬರಿಸುವಂತಿದ್ದು, ಅತಿಯಾಗಿ ಹುಳಿ ಅಂಶವನ್ನು ಹೆಚ್ಚಿಸುವಂತಿದ್ದರೂ ಕೂಡ ಅಂತಹ ಆಹಾರ ಪದಾರ್ಥಗಳನ್ನು ವರ್ಜಿಸುವುದು ಉತ್ತಮ.
6. ದು:ಖ, ಭಯ, ಸಿಟ್ಟು ಇರುವಾಗ ಮಾಡಿದ ಆಹಾರ ಸೇವನೆಯೂ ಕೂಡ ಸರಿಯಾಗಿ ಜೀರ್ಣವಾಗಲಾರದು.
7. ಆಹಾರ ಸೇವನೆಯ ನಂತರ ಸ್ವಲ್ಪ ಸಮಯ ಸುಖವಾದ ಆಸನದಲ್ಲಿ ಕುಳಿತುಕೊಳ್ಳಬೇಕು. ನಂತರ ನೂರು ಹೆಜ್ಜೆಗಳಷ್ಟು ನಡೆದಾಡಿ ಎಡ ಮಗ್ಗುಲಿನಲ್ಲಿ ಮಲಗಿ ಸ್ವಲ್ಪ ಸಮಯ ವಿಶ್ರಾಂತಿ ಪಡೆಯುವುದು ಅಗತ್ಯ.
ಡಿ.ವಿ.ಜಿ. ಯವರು ತಮ್ಮ “ಮಂಕುತಿಮ್ಮನ ಕಗ್ಗ”ದಲ್ಲಿ ಹೀಗೆ ವಿವರಿಸಿದ್ದಾರೆ.
ಆರೋಗ್ಯ ಭಾಗ್ಯವನು ಮನಕೆ ತನುಗೆಂತಂತೆ
ಹಾರಯಿಸುವೊಡೆ ಹಲವು ಸರಳ ನೀತಿಗಳ
ಧಾರಯಿಸು ನೆನಸಿನಲಿ ನಡೆಯಲ್ಲಿ ನುಡಿಯಲ್ಲಿ
ಪಾರಾಗು ಸುಳಿಯಿಂದ ಮಂಕುತಿಮ್ಮ||
ಮನಸ್ಸಿನ ಹಾಗೂ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಲು ಕೆಲವೊಂದು ಸರಳ ನೀತಿ ಸೂತ್ರಗಳನ್ನು ಆಯುರ್ವೇದ ಗ್ರಂಥಗಳಲ್ಲಿ ವಿವರಿಸಿದ್ದಾರೆ. ಅವುಗಳನ್ನು ನಮ್ಮ ನಡೆ ನುಡಿಗಳಲ್ಲಿ ಹಾಗೂ ಜೀವನ ಕ್ರಮಗಳಲ್ಲಿ ಅಳವಡಿಸಿಕೊಳ್ಳುವುದರಿಂದ ರೋಗವೆಂಬ ಸುಳಿಯಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಬಹುದು.
ನಿತ್ಯ ಬಳಕೆಯಲ್ಲಿ ಉಪಯೋಗಿಸಬಹುದಾದ ಆಹಾರ ಪದಾರ್ಥಗಳು
ಕೆಂಪು ಅಕ್ಕಿ, ಷಷ್ಟಿಕ ಶಾಲಿ (60 ದಿನಗಳಲ್ಲಿ ಬೆಳೆದ ಅಕ್ಕಿ), ಗೋಧಿ, ಬಾರ್ಲಿ, ಹರಿವೆಸೊಪ್ಪು, ಎಳೆ ಮೂಲಂಗಿ, ಅಣಲೆಕಾಯಿ, ನೆಲ್ಲಿಕಾಯಿ, ದ್ರಾಕ್ಷಿ, ಪಡುವಲಕಾಯಿ, ಹೆಸರು ಬೇಳೆ, ಸಕ್ಕರೆ, ತುಪ್ಪ, ಹಾಲು, ಆಕಾಶ ಜಲ, ಜೇನುತುಪ್ಪ, ಸೈಂಧವ ಉಪ್ಪು, ದಾಳಿಂಬೆ ಹಣ್ಣು.
ನಿತ್ಯ ಉಪಯೋಗಿ ಅಲ್ಲದ ಆಹಾರ ವಸ್ತುಗಳು
ಉದ್ದು, ಮೊಸರು, ಬೇಕರಿ ತಿನಿಸುಗಳು, ಮೊಳಕೆ ಬರಿಸಿದ ಕಾಳುಗಳು, ಒಣಗಿದ ತರಕಾರಿಗಳು, ತೆಳುಬೆಲ್ಲ, ಒಡೆದ ಹಾಲು ಇತ್ಯಾದಿ.
ಡಾ. ನಾಗಶ್ರೀ ಕೆ.ಎಸ್.
ಸ್ವಚ್ಛ ಭಾರತವೆಂಬ ಸರ್ಕಾರೀ ಪ್ರಹಸನ
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಅಕ್ಟೋಬರ್ 2ರಂದು ಸ್ವಚ್ಛ ಭಾರತವೆಂಬ ಅಭಿಯಾನಕ್ಕೆ ಚಾಲನೆ ಕೊಟ್ಟಿದ್ದಾರೆ. ನಮ್ಮ ಪರಿಸರವನ್ನು ತುರ್ತಾಗಿ ಸ್ವಚ್ಛಗೊಳಿಸುವ ಅಗತ್ಯವಿರುವುದೇನೋ ನಿಜ. ಜೊತೆಗೆ ಈ ಅಭಿಯಾನಕ್ಕೆ ಸಾರ್ವಜನಕರಿಂದ ವ್ಯಕ್ತವಾಗಿರುವ ಪ್ರತಿಕ್ರಿಯೆಯನ್ನು ನೋಡಿದರೆ ನಮ್ಮ ಜನರಲ್ಲಿ ಸ್ವಚ್ಛತೆಯ ಬಗೆಗೆ ಸಾಕಷ್ಟು ಪ್ರಜ್ಞೆಯೂ ಮೂಡಿದೆ ಎನ್ನುವುದರಲ್ಲಿ ಅನುಮಾನವಿಲ್ಲ. ಇಂತಹ ಸಂದರ್ಭದಲ್ಲಿ ಈ ಅಭಿಯಾನದ ಬಗೆಗೆ ಅನುಮಾನಗಳನ್ನು ವ್ಯಕ್ತಪಡಿಸುವುದು ಸಿನಿಕತನವಾದೀತು. ಹಾಗಿದ್ದರೂ ಸರ್ಕಾರ ಹಮ್ಮಿಕೊಂಡಿರುವ ಕಾರ್ಯಕ್ರಮಗಳು ಮತ್ತು ಎಲ್ಲರೂ ಇದರ ಬಗೆಗೆ ಮಾತನಾಡುವ ರೀತಿಯನ್ನು ನೋಡಿದರೆ ಇದೂ ಒಂದು ತಾತ್ಕಾಲಿಕ ಜನಪ್ರಿಯತೆ ಗಿಟ್ಟಿಸುವ ಗಿಮಿಕ್ ಇರಬಹುದೇ ಎನ್ನುವು ಅನುಮಾನಗಳು ಮೂಡುತ್ತದೆ.
ಮೊದಲನೆಯದಾಗಿ ಸ್ವಚ್ಛತೆ ಎಂದರೆ ಏನು ಎನ್ನುವುದರ ಬಗೆಗೆ ಸರ್ಕಾರಕ್ಕಾಗಲೀ ಮತ್ತು ಸಾರ್ವಜನಿಕರಿಗಾಗಲೀ ಸ್ಪಷ್ಟತೆ ಇದೆಯೇ ಎನ್ನುವ ಅಂಶದಿಂದಲೇ ನನ್ನ ಅನುಮಾನಗಳು ಶುರುವಾಗುತ್ತವೆ. ನಮ್ಮ ಮನೆ ಮತ್ತು ಸಾರ್ವಜನಿಕ ಸ್ಥಳಗಳನ್ನು ಕಸಮುಕ್ತವನ್ನಾಗಿ ಮಾಡುವುದಷ್ಟೇ ಸ್ವಚ್ಛತೆ ಎಂದು ನಾವೆಲ್ಲಾ ಅಂದುಕೊಂಡಂತೆ ಕಾಣುತ್ತದೆ. ಹಾಗಿದ್ದರೆ ಹೀಗೆ ಒಟ್ಟುಮಾಡಿದ ಕಸವನ್ನು ಎಲ್ಲಿ ವಿಲೇವಾರಿ ಮಾಡುವುದು? ಕಳೆದ ಹಲವಾರು ವರ್ಷಗಳಿಂದ ಎಲ್ಲಾ ಮಹಾನಗರಗಳಲ್ಲಷ್ಟೇ ಅಲ್ಲ, ಜಿಲ್ಲಾ ಕೇಂದ್ರಗಳಲ್ಲಿಯೂ ಕೂಡ ಕಸ ವಿಲೇವಾರಿ ಒಂದು ದೊಡ್ಡ ಸಮಸ್ಯೆಯಾಗಿದೆ. ನಗರಗಳ ತುಂಬೆಲ್ಲಾ ಇನ್ನೂ ಕಸ ತುಂಬಿರುವಾಗಲೇ ಸಂಗ್ರಹಿಸಿರುವುದರ ವಿಲೇವಾರಿ ಇಷ್ಟು ದೊಡ್ಡ ಸಮಸ್ಯೆಯಾಗಿರುವಾಗ ಇನ್ನು ಇಲ್ಲಿನ ಪೂರ್ಣ ಕಸವನ್ನು ಒಟ್ಟು ಮಾಡಿದರೆ ಪರಿಸ್ಥಿತಿ ಹೇಗಿರಬಹುದು ಎನ್ನುವುದನ್ನು ನೆನಪಿಸಿಕೊಂಡರೇ ಭಯವಾಗುತ್ತದೆ. ನಗರವಾಸಿಗಳೆಲ್ಲಾ ತಮ್ಮ ಉಚ್ಚಿಷ್ಟವನ್ನು ಸುತ್ತಮುತ್ತಲಿನ ಹಳ್ಳಿಯ ಜನರ ಜಮೀನಿನಲ್ಲಿ ಸುರಿಯುತ್ತಾ ಹೋದರೆ ಅವರೇನು ಹಂದಿಗಳಂತೆ ಬದುಕುವುದು ಸಾಧ್ಯವೇ? ಹೀಗೆ ಹಳ್ಳಿಗಳ ಪರಿಸರವನ್ನು ಕಲುಷಿತಗೊಳಿಸುವುದನ್ನಾದರೂ ಎಲ್ಲಿಯವರೆಗೆ ಮಾಡಲು ಸಾಧ್ಯ? ಈಗಾಗಲೇ ಈ ವಿಷಯದಲ್ಲಿ ಎಲ್ಲಾ ಕಡೆ ಹಳ್ಳಿಗರಿಂದ ತೀವ್ರ ಪ್ರತಿರೋಧಗಳು ಬರುತ್ತಿರುವುದನ್ನು ನೋಡಿದ ಮೇಲೆ ನಾವು ಕಲಿತಿರುವುದಾದರೂ ಏನು? ದಬ್ಬಾಳಿಕೆ, ಆಮಿಷಗಳ ಮೂಲಕ ಹಳ್ಳಿಗರ ಮನವೊಲಿಸಿ, ಆಗಾಗ ಜಾಗಗಳನ್ನು ಬದಲಾಯಿಸುತ್ತಾ ನಗರಗಳ ಕಸವನ್ನು ಅಲ್ಲಿ ಗುಡ್ಡೆಹಾಕುವುದನ್ನು ಬಿಟ್ಟರೆ ಇನ್ನೇನು ಮಾಡಲಾಗಿದೆ?
ನಮ್ಮ ಮೂಲಭೂತ ತೊಂದರೆ ಇರುವುದು ಸ್ವಾತಂತ್ರಾ ನಂತರ ನಾವು ಪಾಶ್ಚಿಮಾತ್ಯ ದೇಶಗಳ ಮಾದರಿಯನ್ನು ಕಣ್ಣುಮುಚ್ಚಿ ಅನುಸರಿಸುತ್ತಿರುವುದರಲ್ಲಿ. ಆ ದೇಶಗಳ ಬಳಿ ಇರುವ ಸ್ಥಳಾವಕಾಶ, ಸಂಪನ್ಮೂಲಗÀಳು, ಅವರ ಜೀವನ ಶೈಲಿ ಮತ್ತು ಜನಸಂಖ್ಯೆಗೆ ಅವರ ಮಾದರಿ ಸೂಕ್ತವಿರಬಹುದು. ನಮ್ಮ ಪರಿಸ್ಥಿತಿಗೆ ಹೊಂದಿಕೆಯಾಗಬಹುದಾದ್ದನ್ನು ನಾವೇಕೆ ಹುಡುಕಿಕೊಂಡಿಲ್ಲ? ಅಂತಹ ದೇಶಗಳೂ ಕೂಡ ವಿಷಯುಕ್ತ ಕಸವನ್ನು ಸಮುದ್ರಗಳಲ್ಲಿ ಸುರಿದು ವಿಶ್ವಪರಿಸರಕ್ಕೆ ಭಾರೀ ಅಪಾಯವನ್ನೊಡ್ಡುವುದಕ್ಕೆ ಮುನ್ನುಡಿ ಹಾಡುತ್ತಿವೆ. ಅಮೇರಿಕಾ ಮತ್ತು ಜಪಾನ್‍ಗಳ ಪ್ಲಾಸ್ಟಿಕ್ ಕಸದಿಂದ ಶಾಂತಸಾಗರದಲ್ಲಿ “ಗ್ರೇಟ್ ಪ್ಯಾಸಿಪಿಕ್ ಗಾರ್ಬೇಜ್ ಪ್ಯಾಚ್” ಎಂದು ಕುಪ್ರಸಿದ್ಧವಾಗಿರುವ ಸ್ಥಳವೊಂದು ನಿರ್ಮಾಣವಾಗಿದೆ ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ. ಮುಂದಾಗಬಹುದಾದ ಅನಾಹುತಗಳನ್ನು ತಪ್ಪಿಸಬೇಕೆಂದಿದ್ದರೆ ಎಲ್ಲಾ ದೇಶಗಳಿಗೂ ಈಗ ಉಳಿದಿರುವುದು ಎರಡೇ ಮಾರ್ಗಗಳು. ಒಂದು, ಪ್ರಕೃತಿಯಲ್ಲಿ ಸಹಜವಾಗಿ ಹಾಗೂ ತ್ವರಿತವಾಗಿ ಲೀನವಾಗದಂತಹ (ಪ್ರಮುಖವಾಗಿ ಪ್ಲಾಸ್ಟಿಕ್) ಮತ್ತು ಪ್ರಕೃತಿಗೆ ಅಪಾಯವನ್ನೊಡ್ಡುವ (ಪ್ರಮುಖವಾಗಿ ರಾಸಯನಿಕ) ಕಸದ ಉತ್ಪಾದನೆಯನ್ನು ತಕ್ಷಣದಿಂದ ಗಣನೀಯವಾಗಿ ಕಡಿಮೆ ಮಾಡುವುದು. ಎರಡು, ಪ್ರಕೃತಿಯಲ್ಲಿ ಲೀನವಾಗುವ ಕಸ ವಿಲೇವಾರಿಗೆ ಕೇಂದ್ರೀಕೃತ ವ್ಯವಸ್ಥೆಯನ್ನು ಮಾಡದೆ ಅದನ್ನು ಪ್ರಾದೇಶಿಕ ಮಟ್ಟದಲ್ಲಿ ಮರುಬಳಕೆ ಮಾಡುವುದು. ನಮ್ಮ ಸರ್ಕಾರೀ ಕಾರ್ಯಕ್ರಮದಲ್ಲಿ ಇಂತಹ ದೂರಗಾಮೀ ಚಿಂತನೆಗಳು ಎಲ್ಲಿದೆ?
ಎರಡನೆಯದಾಗಿ, ಸರ್ಕಾರೀ ಕಾರ್ಯಕ್ರಮ ಅಂದರೆ ನಮ್ಮ ರಾಜಕಾರಣಿಗಳಿಗೆ ಮತ್ತು ಅಧಿಕಾರಿಗಳಿಗೆ ಲೂಟಿಹೊಡೆಯುವ ಯೋಜನೆ ಎನ್ನುವುದು ಭಾರತದಲ್ಲಿ ಒಪ್ಪಿಕೊಂಡ ಮಾದರಿ. ಎಲ್ಲಿಯವರೆಗೆ ಸ್ವಚ್ಛತೆ ಆಯಾಯ ಪ್ರದೇಶದ ಜನರ ಜವಾಬ್ದಾರಿಯಾಗಿರುವುದಿಲ್ಲವೋ ಅಲ್ಲಿಯವರೆಗೆ “ಸ್ವಚ್ಛ ಭಾರತ” ಎನ್ನುವುದೂ ಕೂಡ “ಗರೀಬೀ ಹಟಾವೋ”ನಂತೆ ಮತ್ತೊಂದು ಗಿಮಿಕ್ ಆಗಿ ಉಳಿಯುವುದರಲ್ಲಿ ಸಂದೇಹವೇ ಇಲ್ಲ. ಸರ್ಕಾರ ಶೌಚಾಲಯಗಳಿಗಾಗಿ ಮೀಸಲಿಟ್ಟರುವ ಎರಡು ಲಕ್ಷ ಕೋಟಿಯಲ್ಲಿ ಕನಿಷ್ಠ ಅರ್ಧದಷ್ಟನ್ನಾದರೂ ನಮ್ಮ ಅಸ್ವಚ್ಛ ಕೈಗಳ ಸರ್ಕಾರೀ ವ್ಯವಸ್ಥೆ, ತನ್ನದೇ ಆದ ರೀತಿಯಲ್ಲಿ ಸ್ವಚ್ಛ ಮಾಡಿರುತ್ತದೆ! ನಮ್ಮ ಜನರೂ ಕೂಡ ಯಾವುದೇ ಜವಾಬ್ದಾರಿಯನ್ನು ಹೊತ್ತುಕೊಳ್ಳದೆ ಹೀಗೆ ಸರ್ಕಾರದಿಂದ ಬರುವ ಹಣದಲ್ಲಿ ತಮ್ಮ ಪಾಲನ್ನು ಗಿಟ್ಟಿಸುವುದರಲ್ಲಿ ನಿರತರಾಗಿರುತ್ತಾರೆ.
ಮೂರನೆಯದು, ಶೌಚಾಲಯ ನಿರ್ಮಾಣವನ್ನು ಸರ್ಕಾರೀ ಕಾರ್ಯಕ್ರಮವನ್ನಾಗಿಸುವುದು ಅಪ್ರಬುದ್ಧವಾಗಿ ಯೋಚಿಸುವ ಭಾರತದ ರಾಜಕಾರಣಿಗಳಿಗೆ ಮಾತ್ರ ಸಾಧ್ಯ. ಶೌಚಾಲಯಗಳಿಲ್ಲದಿದ್ದಾಗ ಸ್ತ್ರೀಯರಿಗೆ ಬಹಳ ಅನಾನುಕೂಲವಾಗುವುದು ನಿಜ. ಹಾಗಂತ ಸರ್ಕಾರ ಏಕೆ ಶೌಚಾಲಯಗಳನ್ನು ನಿರ್ಮಿಸಿಕೊಡಬೇಕು? ನಮ್ಮ ಜನತೆಗೆ ಇದರ ಜವಾಬ್ದಾರಿ ಇರಬೇಕಲ್ಲವೇ? ಶೌಚಾಲಯ ಇಲ್ಲದ ಮನೆಗಳನ್ನು ಒಂದು ವರ್ಷದ ನಂತರ ಕೆಡವಲಾಗುತ್ತದೆ ಮತ್ತು ಇನ್ನು ಮುಂದೆ ಅಂತಹ ಮನೆಗಳನ್ನು ಕಟ್ಟುವಂತಿಲ್ಲ ಎಂದು ಕಾನೂನನ್ನು ಏಕೆ ರೂಪಿಸಬಾರದು? ಇದರಿಂದ ಆಗಬಹುದಾದ ಒಂದೇ ತೊಂದರೆ ಎಂದರೆ ನಮ್ಮ ರಾಜಕೀಯ ಪಕ್ಷಗಳ ಓಟ್‍ಬ್ಯಾಂಕ್‍ಗೆ ಭಾರೀ ಕನ್ನ ಬೀಳುವುದು ಮಾತ್ರ.
ಇಷ್ಟೇ ಅಲ್ಲ, ಇರುವ ಶೌಚಾಲಯಗಳನ್ನು ಶುದ್ಧೀಕರಿಸಲು ನಾವು ಅನುಸರಿಸುತ್ತಿರುವ ಮಾರ್ಗವಾದರೂ ಎಂತಹದು? ದಲಿತರ ತಲೆಗಳ ಮೇಲೆ ಮಲವನ್ನು ಹೊರಿಸಿ ಊರ ಹೊರಗೆ ಸಾಗಿಸುವುದು, ಒಳಚರಂಡಿಗಳ ಮೂಲಕ ಊರಿನ ಪಕ್ಕದಲ್ಲಿ ಹರಿಯುತ್ತಿರುವ ನದಿಗಳಿಗೆ ಅದನ್ನು ಸೇರಿಸುವುದು ಮುಂತಾದವು ಅಲ್ಲವೇ? ಇದು ಯಾವ ನಾಗರಿಕ ಮಾದರಿ ಅಂದ ಸರ್ಕಾರಿ ಯೋಚಿಸಿದಂತಿಲ್ಲ.
ನಮ್ಮ ದೇಶದ ಎಷ್ಟೋ ಹಳ್ಳಿಗಳಲ್ಲಿ ಕುಡಿಯುವ ನೀರು ಸಿಗುವುದೇ ದುರ್ಭರವಾಗಿದೆ. ಇನ್ನು ಶೌಚಾಲಯಗಳ ಉಪಯೋಗಕ್ಕೆ ಸರ್ಕಾರ ನೀರನ್ನು ಎಲ್ಲಿಂದ ಸರಬರಾಜು ಮಾಡುತ್ತದೆ? ಬಯಲು ಪ್ರದೇಶಗಳಲ್ಲಿ ಮಲ ವಿಸರ್ಜಿಸುವ ಹಳ್ಳಿಗರು ಅಲ್ಲೇ ಇರುವ ಎಲೆಗಳಿಂದ ಒರೆಸಿಕೊಂಡು ಬರುವುದು 21 ಶತಮಾನದ ಭಾರತದಲ್ಲಿ ಅಪರೂಪವಲ್ಲ. ಇದು ಟಿಶ್ಯೂ ಪೇಪರ್‍ನ ಪ್ರಾದೇಶಿಕ ಮಾದರಿ ಅಂದುಕೊಳ್ಳಬಹುದು ಬಿಡಿ! ಇಂತಹ ಪರಿಸ್ಥಿತಿಯಲ್ಲಿ ನನ್ನ ಕುತೂಹಲವೆಂದರೆ ಕಟ್ಟಿಸಿರುವ ಶೌಚಾಲಯಗಳ ಸ್ವಚ್ಛತೆಯ ಜವಾಬ್ದಾರಿಯನ್ನೂ ಸರ್ಕಾರವೇ ಹೊತ್ತುಕೊಳ್ಳುವುದೋ ಹೇಗೆ ಎನ್ನುವುದು. ಶೌಚಾಲಯಗಳು ಗಬ್ಬೆದ್ದು ಹೋದಾಗ ನಿಧಾನವಾಗಿ ಜನ ಮತ್ತೆ “ಬಯಲು ಕಡೆಗೆ” ಅಥವಾ “ಬೆಟ್ಟದ ಕಡೆಗೆ” ಹೋಗುವ ತಮ್ಮ ಅಭ್ಯಾಸವನ್ನು ಮುಂದುವರೆಸುತ್ತಾರೆ. ಸ್ವಚ್ಛವಿರದ ಶೌಚಾಲಯಗಳಿಗಿಂತ ಬಯಲು ಪ್ರದೇಶ ಆರೋಗ್ಯದ ದೃಷ್ಟಿಯಿಂದ ಹೆಚ್ಚು ಸುರಕ್ಷಿತ ಎಂದು ನಮ್ಮ ಜನ ಶತಶತಮಾನಗಳ ಅನುಭವದಿಂದ ಕಂಡುಕೊಂಡಿದ್ದಾರೆ.
ಕಸವಿಲೇವಾರಿಗಿಂತ ನಮಗೆ ಕೂಡಲೇ ಬೇಕಾಗಿರುವುದು ನಮ್ಮ ನೀರು ಗಾಳಿಗಳ ಶುದ್ಧತೆ. ಯಾರ ಕಣ್ಣಿಗೂ ಬೀಳದಂತೆ ಇವುಗಳಿಗೆ ಅಪಾಯಕಾರೀ ರೀತಿಯಲ್ಲಿ ನಾವು ವಿಷ ತುಂಬುತ್ತಿದ್ದೇವೆ. ಕಸದಂತೆ ಇದು ನಮ್ಮ ಕಣ್ಣೆದುರಿಗೆ ರಾಚುವುದಿಲ್ಲ. ಹಾಗಾಗಿ ಜನಸಾಮಾನ್ಯರಿಗೆ ಇದರ ಅಪಾಯಗಳ ಅರಿವೂ ಕೂಡ ಇಲ್ಲ. ದುರಂತವೆಂದರೆ ಜನರ ಓಟುಗಳು ನೀರು ಗಾಳಿಯ ಸ್ವಚ್ಛತೆಯ ಮೇಲೆ ಆಧಾರಿತವಾಗಿಲ್ಲ ಎಂದ ಮೇಲೆ ರಾಜಕಾರಿಣಿಗಳೇಕೆ ಅದರ ಬಗೆಗೆ ಏಕೆ ಯೋಚಿಸುತ್ತಾರೆ?
ಎಲ್ಲಾ ರೀತಿಯ ಸ್ವಚ್ಛತೆಗಿಂತ ನಮಗೆ ಬಹಳ ತುರ್ತಾಗಿ ಅಗತ್ಯವಿರುವುದು ಬಸವಣ್ಣ ಹೇಳುವ ಅಂತರಂಗ ಶುದ್ಧಿ ಅಥವಾ ಗಾಂಧೀಜಿ ಹೇಳುವ ಆತ್ಮಶುದ್ಧಿ. ಕಾಂಗ್ರೆಸ್ ಅಧಿವೇಶನದಲ್ಲಿ ಕಕ್ಕಸ್ಸುಗಳನ್ನು ಶುಚಿಯಾಗಿಡುವ ಕಾಯಕದ ಮೂಲಕ ತಮ್ಮ ಆತ್ಮಶುದ್ಧಿಯ ಪ್ರಕ್ರಿಯೆಯನ್ನು ಗಾಂಧೀಜಿ ಸಾಂಕೇತಿಕವಾಗಿ ಆರಂಭಿಸಿದ್ದರು. ನಮ್ಮ ರಾಜಕಾರಣಿಗಳಿಂದ ಇಂತಹ ಆತ್ಮಶುದ್ಧಿಯನ್ನು ನಿರೀಕ್ಷಿಸುವ ಮೊದಲು ನಮ್ಮಲ್ಲಿ ಪ್ರತಿಯೊಬ್ಬರೂ ಆತ್ಮವಿಮರ್ಶೆ ಮಾಡಿಕೊಳ್ಳಬೇಕಾಗಿದೆ. ಹಾಗಾಗಿ ಸ್ವಚ್ಛ ಭಾರತದ ಅಭಿಯಾನವನ್ನು ನಮ್ಮ ಅಂತರಂಗಳಿಂದ ಪ್ರಾರಂಭಿಸದಿದ್ದರೆ ಉಳಿಯುವುದೆಲ್ಲವೂ ಸರ್ಕಾರೀ ಪ್ರಹಸನ ಮಾತ್ರ.
ನಡಹಳ್ಳಿ ವಸಂತ್
ಉತ್ಪಾದನೆ – ಉಪಯೋಗ ಯಾ ಉದ್ಯೋಗ?
ಸಾಮಾನ್ಯ ಪರಿಭಾಷೆಯಲ್ಲಿ ಹೇಳುವುದಾದರೆ ‘ಉತ್ಪಾದನೆ’ ಎಂದರೆ ತಯಾರಿಕೆ ಅಥವಾ ಏನನ್ನಾದರೂ ಬೆಳೆಯುವುದು. ಆದರೆ ಅರ್ಥಶಾಸ್ತ್ರದ ಪರಿಭಾಷೆಯಲ್ಲಿ ಉತ್ಪಾದನೆ ಕೇವಲ ತಯಾರಿಕೆ ಅಷ್ಟೇ ಅಲ್ಲ ಅದು ಬಳಕೆಗೆ ಯೋಗ್ಯವಾಗಿರಬೇಕು. ವಸ್ತುವು ಉಪಯೋಗಕ್ಕೆ ಯೋಗ್ಯವಾಗಿ – ಬಳಕೆ ಹೆಚ್ಚಾದರೆ ಅಂಥ ಉತ್ಪಾದನೆ ಬೆಳೆಯುಳ್ಳದ್ದು. ಜೊತೆಗೆ ಇದು ಕೇವಲ ವಸ್ತುವಿನ ಗುಣಮಟ್ಟಕ್ಕೆ ಮಾತ್ರ ಸೀಮಿತವಾಗಿರದೆ ಸೇವೆಗೂ ಯೋಗ್ಯವಾಗಿರುವಂಥದ್ದಾಗಿರಬೇಕು. “An activity of increasing the utility of goods and services is considered as “Production”.
ಹೀಗೆ ಯಾವುದೇ ಒಂದು ವಸ್ತುವಿನ ಉತ್ಪಾದನೆಯನ್ನು ಮಾಡುವುದು ಅದು ನಮ್ಮ ಬಳಕೆಗೆ ಉಪಯೋಗಕ್ಕೆ ಅನುವಾಗಲೆಂದೇ ವಿನಃ ಕೇವಲ ಉತ್ಪಾದನೆಯ ಚಟಕ್ಕೆ ಖಂಡಿತವಾಗಿಯೂ ಅಲ್ಲ. ನಾಗರೀಕತೆ ಬೆಳೆದಂತೆ ಮನುಷ್ಯ ತನ್ನ ಅಗತ್ಯಗಳಿಗೆ ಅನುಕೂಲವಾಗುವಂತೆ – ತಕ್ಕಂತೆ ಅನೇಕಾನೇಕ ವಸ್ತುಗಳನ್ನು ಬೇರೆ ಬೇರೆ ತರಹದ ಬೆಳೆಯನ್ನು ಉತ್ಪಾದಿಸಲು ಪ್ರಾರಂಭಿಸಿದ್ದು ಇತಿಹಾಸ. ಅದರ ಮುಂದುವರಿಕೆಯ ಭಾಗವಾಗಿ ‘ಉತ್ಪಾದನೆ’ ಯ ನೈಪುಣ್ಯವನ್ನು ಕಲಿಸಿ – ಬೆಳೆಸುವ ಪದ್ಧತಿ ಪ್ರಾರಂಭವಾಯಿತು. ಅಗತ್ಯಕ್ಕೆ ಮತ್ತು ಬೇಡಿಕೆಗೆ ತಕ್ಕಂತೆ ‘ಉತ್ಪಾದನೆ’ ಜರುಗುವುದು ಅನಿವಾರ್ಯವಾಯಿತು. ಕೆಲಸದ ಒತ್ತಡ ಅಧಿಕವಾದಂತೆ ಕೆಲಸಗಾರರಿಗೆ ಬೇಡಿಕೆಯೂ ಅಧಿಕವಾಗುತ್ತದೆ. ಕೆಲಸದ ಒತ್ತಡ ಕಡಿಮೆಯಾದಂತೆ ಕೆಲಸಗಾರರಿಗೆ ಇರುವ ಬೇಡಿಕೆ ಕೂಡ ತಗ್ಗುತ್ತದೆ. ಅತಿಯಾದ ಯಂತ್ರಗಳ ಬಳಕೆಯಿಂದಾಗಿ ದುಡಿಯುವ ಕೈಗಳು ನಿಧಾನವಾಗಿ ಕೆಲಸ ಕಳೆದುಕೊಳ್ಳುವುದು ಸಹಜವೇ. ಯಂತ್ರಗಳನ್ನಷ್ಟು ಬಳಸುವ ಕೌಶಲ್ಯ ಕಲಿತ ಕೆಲವೇ ಕೆಲವು ಮಂದಿ ಬಹಳಷ್ಟು ಜನಗಳಿಗೆ ಬದಲಾಗಿ ಸಾಕಾಗುವಂತಹ ಸ್ಥಿತಿ ನಿರ್ಮಾಣವಾಗುತ್ತ ಸಾಗುತ್ತಿದ್ದುದರ ಅಪಾಯವನ್ನು ಅರಿತ ಮಹಾತ್ಮ ಗಾಂಧಿಯವರು ‘ಗೃಹ ಕೈಗಾರಿಕೆ, ಗುಡಿ ಕೈಗಾರಿಕೆ’ಗೆ ಒತ್ತುಕೊಟ್ಟಿದ್ದೇ ಈ ಕಾರಣಕ್ಕಾಗಿ. ಮನುಷ್ಯನಿಗೆ ಕೆಲಸದ ಅವಶ್ಯಕತೆಯಿದೆ. ಪ್ರತಿಯೊಂದು ಕೈಗೂ ಕೆಲಸ ದಕ್ಕದ ಹೊರತೂ ‘ಅಭಿವೃದ್ಧಿ’ ಅಸಾಧ್ಯ ಸಂಬಳದ ಆದಾಯದ ಪ್ರಶ್ನೆಗಿಂತ ಮುಖ್ಯವಾದದ್ದು ‘ಉದ್ಯೋಗ’ದಲ್ಲಿ ತೊಡಗಿರುವುದು ಹಾಗಲ್ಲದೆ ಹೋದಲ್ಲಿ ‘Idle mind is the workshop of the devil’ ಎಂಬ ಮಾತು ಕೃತಿಯಾಗುತ್ತ ಸಾಗುವ ಅಪಾಯವಂತೂ ಇದ್ದೇ ಇದೆ.
ಉತ್ಪಾದನೆಗೂ ಉಪಯೋಗಕ್ಕೂ ಆಂತರಿಕ ಸಂಬಂಧವಂತೂ ಇದ್ದೇ ಇದೆ. ಉತ್ಪಾದನೆ – ಉಪಯೋಗಕ್ಕೆ – ಉದ್ಯೋಗಕ್ಕೆ ಒದಗುವಂತಿದ್ದರೆ ಮಾತ್ರ ಅದಕ್ಕೊಂದು ‘ಅರ್ಥ’ವಿರುತ್ತದೆ. ಹಾಗಲ್ಲದೇ ಒಟ್ಟಾರೆ ಉತ್ಪಾದನೆಯಷ್ಟೇ ಹೆಚ್ಚಾದರೆ ಬಳಕೆಯಾಗದೆ ವ್ಯರ್ಥವಾಗುವ ಸಾಧ್ಯತೆಯಿದೆ. ರಾಶ್ಯುತ್ಪನ್ನಗಳಿಂದಾಗಿ ಅನೇಕಬಾರಿ ಅವುಗಳಿಗೆ ಗ್ರಾಹಕರೇ ಇರದಿದ್ದಾಗ ಉತ್ಪಾದನಾ ವೆಚ್ಚ ಕೂಡ ಹುಟ್ಟದೆ ಅದು ತನ್ನಿಂದ ತಾನೇ ಮೂಲೆ ಸೇರಬೇಕಾಗುತ್ತದೆ. ವಸ್ತುಗಳ ವಿಚಾರದಲ್ಲಿ ಹೇಗೋ ಹಾಗೆಯೇ ವ್ಯಕ್ತಿಗಳ ವಿಚಾರದಲ್ಲೂ ಮೇಲಿನ ಮಾತುಗಳು ಅನ್ವಯವಾಗುತ್ತವೆ. ಅಗತ್ಯಕ್ಕಿಂತ ಅಧಿಕವಾದ ಉತ್ಪಾದನೆಯಾದಲ್ಲಿ ಅದೆಷ್ಟೇ ಗುಣಮಟ್ಟದಿಂದ ಕೂಡಿದ್ದರೂ (1) ಅದನ್ನು ಹಾಗೇ ಶೇಖರಿಸಿಟ್ಟುಕೊಳ್ಳಬೇಕು, ಮತ್ತೆಂದಾದರೂ ಅಗತ್ಯತೆ ಎದುರಾದಾಗ ಬಳಸಿಕೊಳ್ಳಬೇಕು. (2) ಹುಟ್ಟಿದಷ್ಟಕ್ಕೆ ಯಾ ಬಿಟ್ಟಿಯಾಗಿ ಬೇರೆಯವರಿಗಿತ್ತು ಕೈ ತೊಳೆದುಕೊಳ್ಳಬೇಕು. ವಸ್ತುಗಳಿಗಾದರೆ ಇವೆಲ್ಲ ಸರಿಯೇ ಆದರೆ ತಯಾರಿಸಿದ್ದು ವಸ್ತುವಾಗದೇ ವ್ಯಕ್ತಿಯೇ ಆಗಿದ್ದ ಪಕ್ಷದಲ್ಲಿ?
ಈ ದೃಷ್ಟಿಯಿಂದಲೇ ನಾವಿಂದು ನಮ್ಮ ಶಿಕ್ಷಣ ಪದ್ಧತಿಯನ್ನು ಗಮನಿಸುವ ತುರ್ತು ಹಿಂದೆಂದಿಗಿಂತ ಇಂದು ಅಧಿಕವಾಗಿದೆ ಎನ್ನಿಸುತ್ತದೆ. ಹಿಂದೆ ಜನರಿಗೆ ಬೇರೆ ಬೇರೆ ಕಸುಬುಗಳು ಕೌಟುಂಬಿಕ ಬಳುವಳಿಯಂತೆ ಬರುತ್ತಿದ್ದವು. ಹಾಗೇ ಓದು-ಬರಹ ಕೂಡಾ. ಆದರೆ ಈ ದೇಶಕ್ಕೆ ಬ್ರಿಟಿಷರು ಕಾಲಿಟ್ಟ ಅನಂತರ ಅವರು ಈ ದೇಶದವರ ಅಗತ್ಯಕ್ಕಿಂತಲೂ ಅಧಿಕವಾಗಿ ಅವರ ಅಗತ್ಯವನ್ನರಿತು ಇಲ್ಲಿ ಶೈಕ್ಷಣಿಕ ಪದ್ಧತಿಯನ್ನು ಜಾರಿಗೆ ತಂದದ್ದು ಈಗ ಇತಿಹಾಸ. ಅವರ ಕಛೇರಿ – ಆಡಳಿತವನ್ನಷ್ಟು ಸಮರ್ಥವಾಗಿ ನಡೆಸಿಕೊಂಡು ಹೋಗಲು ಬೇಕಾದ ‘ಗುಮಾಸ್ತ’ರನ್ನು ತಯಾರಿಸಿಕೊಳ್ಳಬೇಕಾದ ಅಗತ್ಯತೆ ಅವರಿಗಿತ್ತು. ಹಾಗಾಗಿ ಒಂದಿಷ್ಟು ಓದಲು ಬರೆಯಲು ಲೆಕ್ಕ ಮಾಡಲು ಲೆಕ್ಕ ಇಡಲು ಕಲಿತುಕೊಳ್ಳುವುದಕ್ಕೆ ಒತ್ತು ನೀಡಿದ ಶಿಕ್ಷಣ ಪ್ರಾರಂಭಿಸಿದರು. ನಾವು ಅವರ ಶಿಕ್ಷಣ ಪದ್ಧತಿಯನ್ನು ‘ಗುಮಾಸ್ತರನ್ನು ಉತ್ಪಾದಿಸುವ ಕಾರ್ಖಾನೆ’ ಎಂದು ಹೀಗಳೆಯುತ್ತಲೇ, ಅದನ್ನೇ ಮುಂದುವರಿಸುವ ಜಾಣತನವನ್ನು ತೋರುತ್ತಿರುವುದು ಪರಿಸ್ಥಿತಿಯ ವಿಪರ್ಯಾಸವೇ ವಿನಃ ಅಗತ್ಯವಂತೂ ಖಂಡಿತವಲ್ಲ.
ಕೆಲವೊಂದಿಷ್ಟು ವೃತ್ತಿ ಶಿಕ್ಷಣ ಪದ್ಧತಿಗಳನ್ನು ಹೊರತುಪಡಿಸಿದರೆ ಬಹುತೇಕ ಪದ್ಧತಿ ಅಂತೆಯೇ ಇದೆ. ಇಂದಿಗೂ ಬಹುಸಂಖ್ಯಾತ ವಿದ್ಯಾರ್ಥಿಗಳ ಕಲಿಕೆ ಆ ಬ್ರಿಟೀಷ್ ಮಾದರಿಯಲ್ಲೇ ಉಳಿದುಕೊಂಡಿದ್ದು ‘ಗುಮಾಸ್ತರ’ ಕೆಲಸಕ್ಕೆ ಸೂಕ್ತವೆನ್ನಿಸುವ ಶಿಕ್ಷಣವನ್ನೇ ಪಡೆಯುತ್ತಿದ್ದಾರೆ. ಅದರೊಟ್ಟಿಗೆ ಹೆಚ್ಚುವರಿಯಾಗಿ ಶಿಕ್ಷಣ – ಬ್ಯಾಂಕಿಂಗ್ ಇತ್ಯಾದಿ ಕಡೆ ‘ವೈಟ್ ಕಾಲರ್’ ನೌಕರಿಗಳಿಗೆ ಯೋಗ್ಯವಾಗುವಂತೆ ರೂಪುಗೊಳ್ಳುತ್ತಿದ್ದಾರೆ. ಅದಕ್ಕಾಗಿ ಸರಕಾರ ಇಂದು ದೇಶದಾದ್ಯಂತ ಅಸಂಖ್ಯಾತ ಶಾಲೆ, ಕಾಲೇಜು, ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಿದ್ದು, ಇತ್ತೀಚೆಗೆ ಹೋಬಳಿ ಮಟ್ಟದಲ್ಲಿ ಕೂಡ ಪ್ರಥಮ ದರ್ಜೆ ಕಾಲೇಜುಗಳು ಮತ್ತು ಅವುಗಳಲ್ಲೇ ಸ್ನಾತಕೋತ್ತರ ಶಿಕ್ಷಣ ಪಡೆಯಲೂ ಸೂಕ್ತ (?) ವ್ಯವಸ್ಥೆ ಮಾಡಿರುವುದು ಸಾಮಾನ್ಯ ಸಂಗತಿಯೇನಲ್ಲ. ಇದೆಲ್ಲವೂ ಸರಿ, ಸರ್ವರಿಗೂ ಶಿಕ್ಷಣ ದೊರಕಬೇಕಾದದ್ದು ನ್ಯಾಯವಾದದ್ದೇ; ಆದರೆ ಹೀಗೆ ಶಿಕ್ಷಣ ನೀಡಿದ್ದರಿಂದ ಆದ ಉಪಯೋಗವನ್ನು ಗಣನೆಗೆ ತೆಗೆದುಕೊಳ್ಳಬೇಕಿದೆ. ಎಲ್ಲರೂ ಪದವಿ, ಸ್ನಾತಕೋತ್ತರ ಪದವಿ ಪಡೆದಿರುತ್ತಾರೆ ಖರೆ, ಆದರೆ ಅವರಿಗೆ ಅವರು ಪಡೆದ ಶಿಕ್ಷಣಕ್ಕೆ ತಕ್ಕಂತೆ ಉದ್ಯೋಗ? ಶಿಕ್ಷಣ ನೀಡುವುದಷ್ಟೇ ನಮ್ಮ ಗುರಿ – ನೌಕರಿ ಪಡೆಯುವುದು ಅವರವರ ಸಾಮಥ್ರ್ಯಕ್ಕೆ ಬಿಟ್ಟದ್ದು ಎಂಬ ಜಾರಿಕೆಯ ಮಾತನ್ನಾಡಬಹುದು. ಆದರೆ ಗಮನಿಸಬೇಕಾದ ಅಂಶವೆಂದರೆ ಸಾಮಥ್ರ್ಯವಿರದೆ ಅವರುಗಳೆಲ್ಲ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ಹೊರಗೆ ಬಂದಿರುವುದಿಲ್ಲ. ಸಾಮಥ್ರ್ಯವಿದೆ ಎಂಬುದರಲ್ಲಿ ಅಂಥ ಅನುಮಾನಗಳಿರಲು ಸಾಧ್ಯವಿಲ್ಲ. ದಿನನಿತ್ಯವೂ ಶಿಕ್ಷಣದಲ್ಲಿ ಗುಣಮಟ್ಟದ ಹೆಚ್ಚಳದ ಭಜನೆ ಕಾರ್ಯಕ್ರಮ ಮತ್ತು ಅದಕ್ಕಾಗಿ ಅನೇಕಾನೇಕ ಕೋಟಿ ರೂಪಾಯಿಗಳನ್ನು ವ್ಯಯಿಸಲಾಗುತ್ತಿದೆ. ಹೀಗಿದ್ದಾಗ ಸಹಜವಾಗಿಯೇ ಅಂಥಲ್ಲಿ ತಯಾರಾಗಿ ಹೊರಬಂದ ಉತ್ಪನ್ನಗಳ ಗುಣಮಟ್ಟ ಚೆನ್ನಾಗಿಯೇ ಇರುತ್ತದೆಂದು ಭಾವಿಸಬಹುದು. ಆದರೆ ಅವರಿಗೆಲ್ಲ ಉದ್ಯೋಗ ಎಲ್ಲ? ಎಲ್ಲರಿಗೂ ಅವರವರು ಪಡೆದ ಶಿಕ್ಷಣಕ್ಕನುಗುಣವಾಗಿ ಉದ್ಯೋಗವನ್ನು ಸೃಷ್ಟಿಸಲು ಸಾಧ್ಯವಿದೆಯೇ? ಉತ್ಪಾದನೆಗೆ ಮಾಡುವ ವೆಚ್ಚದ ರೀತಿಯಲ್ಲೇ ಉದ್ಯೋಗ ಸೃಷ್ಟಿಗೂ ನಾವು ವೆಚ್ಚಮಾಡುತ್ತಿದ್ದೇವೆಯೇ? ಯೋಚಿಸುವ ಅಗತ್ಯವಂತೂ ಇದ್ದೇ ಇದೆ. ಉತ್ಪಾದನೆ ಮತ್ತು ಉಪಯೋಗ- ಉದ್ಯೋಗದತ್ತ ಹೊಂದಾಣಿಕೆ ಏರ್ಪಡದಿದ್ದಲ್ಲಿ ಉತ್ಪಾದನೆಗೆ ಬೆಲೆ ಬರುವುದಿಲ್ಲ. ಉದ್ಯೋಗದ ಖಾತ್ರಿ ಇಲ್ಲ, ಅದು ಉಪಯೋಗಕ್ಕೆ ಬರುವುದು ನಿಕ್ಕಿ ಇಲ್ಲ ಎಂದಾದಲ್ಲಿ ಉತ್ಪಾದನೆಯಲ್ಲಿ ಭಾಗಿಯಾಗುವುದರಲ್ಲೂ ಶ್ರದ್ಧೆ ಉಳಿಯುವುದಿಲ್ಲ. ಇಂಥ ಪದವಿ ಪಡೆದರೆ ಅಥವಾ ಇದರಲ್ಲಿ ಇಷ್ಟು ಅಂಕಗಳನ್ನು ಪಡೆದು ಹೊರ ಬಂದರೆ ಇಂಥ ಉದ್ಯೋಗ ಖಾತ್ರಿ ಎಂದಾದರೆ ಕಷ್ಟಪಟ್ಟು, ಶ್ರದ್ಧೆಯಿಂದ ವಿದ್ಯಾಭ್ಯಾಸ ಪ್ರಕ್ರಿಯೆಯಲ್ಲಿ ಭಾಗವಹಿಸಲು ಸಾಧ್ಯ. ಮರವೊಂದನ್ನು ಏರಿದರೆ ‘ಫಲ’ ಸಿಗುವುದು ಗ್ಯಾರಂಟಿಯಿದ್ದ ಪಕ್ಷದಲ್ಲಿ ವ್ಯಕ್ತಿ ಮರವನ್ನೇರಲು ಖಂಡಿತ ಪ್ರಯತ್ನ ಪಡುತ್ತಾನೆ. ಅಷ್ಟೇ ಅಲ್ಲ ಅದೆಷ್ಟೇ ಕಷ್ಟವಾದರೂ ಸಾಧಿಸುವ ಛಲದಿಂದ ಮುನ್ನುಗ್ಗುತ್ತಾನೆ. ನಾನು ಈ ದಾರಿಯಲ್ಲಿ ಉಪಕ್ರಮಿಸಿದರೆ ನನಗೆ ಇಂಥದು ದಕ್ಕುತ್ತದೆ ಎಂದಾದರೆ ಆ ದಾರಿ ಎಷ್ಟೇ ಕಷ್ಟವಾದರೂ ಉಪಕ್ರಮಿಸಲು ಉದ್ಯುಕ್ತನಾಗುತ್ತಾನೆ. ಹಾಗಲ್ಲದೇ ಹೋದಲ್ಲಿ ತನ್ನಿಂದ ತಾನೇ ಆಲಸಿಯಾಗುತ್ತಾನೆ. ಒಟ್ಟಾರೆ ಒಂದು ಪದವಿ, ಒಂದು ಸರ್ಟಿಫಿಕೇಟು ಸಿಕ್ಕರೆ ಸಾಕು, ಹೇಗೋ ನಡೆಯುತ್ತದೆಂಬ ಭಾವನೆಗೆ ಒಳಗಾದರೆ ಒಳಗಿನ ಶಕ್ತಿ ಅಗತ್ಯಕ್ಕೆ ತಕ್ಕಂತೆ ಕೂಡ ಬಳಕೆಗೆ ಬಾರದೆ ವ್ಯರ್ಥವಾಗಿ ನಾಶವಾಗಬಹುದೆಂಬ ಗುಮಾನಿ ಸದ್ಯದ್ದು.
ಹಾಗಾಗಿ ಇಂದು ಪುನಃ ನಮ್ಮ ಉತ್ಪಾದನೆಯ ಕುರಿತು ತೀವ್ರವಾಗಿ ಚಿಂತಿಸಿ ಕರ್ತವ್ಯಕ್ಕೆ ಒತ್ತುಕೊಡುವುದು ಮೇಲು. ಇಂದು ನಮಗೆ ದಿನನಿತ್ಯ ಅಗತ್ಯವಾದ ಅನೇಕ ರೀತಿಯ ಕೆಲಸಗಳಿಗೆ ಕಾರ್ಮಿಕರೇ ಸಿಗುತ್ತಿಲ್ಲ ಎಂಬ ಮಾತುಗಳು ಚಾಲ್ತಿಯಲ್ಲಿವೆ. ಅಂದರೆ, ಅಗತ್ಯವಾದ ವೃತ್ತಿಗಳಿಗೆ ವ್ಯಕ್ತಿಗಳ ಕೌಶಲ್ಯ ಪಡೆದವರ ಕೊರತೆ ಒಂದೆಡೆಯಿದ್ದರೆ ಇನ್ನೊಂದೆಡೆ ಅನಗತ್ಯವಾಗಿ ‘ವೈಟ್‍ಕಾಲರ್’ ನೌಕರಿಗಾಗಷ್ಟೇ ಕಾಯುವ ಕೌಶಲ್ಯವನ್ನು ಪಡೆದುಕೊಂಡು ಅಲೆಯುತ್ತಿರುವ ಅನೇಕರು. ಅವರು ತಮಗೆ ಬೇಕಾದ ನೌಕರಿ ದೊರಕುತ್ತಿಲ್ಲ ಎಂದು ಗೊಣಗುತ್ತ ಅತೃಪ್ತ ಆತ್ಮಗಳಂತೆ ಅಲೆಯುತ್ತಿರುವ ದೃಶ್ಯ ಸಾಮಾನ್ಯ. ಅಂದರೆ ನಮ್ಮಲ್ಲಿ ‘ಕೆಲಸ’ವಿಲ್ಲ ಎಂದಲ್ಲ. ಬೇಕಾದ ಕೆಲಸವಿಲ್ಲ ಎಂಬುದಷ್ಟೆ. ಬೇಕಾದ ಕೆಲಸ ಬೇಕಾದಷ್ಟು ಲಭ್ಯವಿದ್ದಾಗ ಮಾತ್ರ ಲಭ್ಯ!. ಕೆಲಸಕ್ಕೆ ಅಗತ್ಯವಿದ್ದಷ್ಟು ಮತ್ತು ಆ ಕೆಲಸಕ್ಕೆ ಅಗತ್ಯವಾದ ಶಿಕ್ಷಣ ದೊರಕಿದರೆ ಈ ಪ್ರಶ್ನೆ ಉದ್ಭವಿಸದು. ಹಾಗಾಗಿ ನಾವು ಶಿಕ್ಷಣಕ್ಕೆ ಖರ್ಚು ಮಾಡುವ ಹಣ (ಅದು ಈ ದೇಶದ ಪ್ರಾಮಾಣಿಕ ತೆರಿಗೆದಾರರ ಹಣ)ದ ಪ್ರಯೋಜನಕ್ಕೆ ಬರುವುದು ಯಾವಾಗಲೆಂದರೆ ತಯಾರಿಸಿದ ಉತ್ಪನ್ನ ಮಾರುಕಟ್ಟೆಯಲ್ಲಿ ನ್ಯಾಯಯುತವಾಗಿ ಬಿಕರಿಯಾದಾಗ ಮಾತ್ರ. ಅಂದರೆ ಬಳಕೆಗೆ ಒದಗಿ ಬಂದಾಗ ಮಾತ್ರ. ಹಾಗಾಗಿ ಇಂದಿನ ಅಗತ್ಯ ‘ಉದ್ಯೋಗ ಸೃಷ್ಟಿ’ ಮತ್ತು ಉದ್ಯೋಗಕ್ಕನುಗುಣವಾದ ಶಿಕ್ಷಣ ನೀಡಿಕೆ. ಹಾಗಲ್ಲದೆ ಒಟ್ಟಾರೆ ರಾಶ್ಯುತ್ಪನ್ನಗಳ ತಯಾರಿಕೆ ಶಿಕ್ಷಣದ ನೀತಿಯಾದಲ್ಲಿ ಭವಿಷ್ಯದಲ್ಲಿ ಅದರ ಪರಿಣಾಮವನ್ನು ಈ ದೇಶವೇ ಎದುರಿಸಬೇಕು ಎಂಬ ಎಚ್ಚರಿಕೆ ಅಗತ್ಯ. ಕೇವಲ ಶಾಲೆ – ಕಾಲೇಜುಗಳನ್ನಷ್ಟೇ ಪ್ರಾರಂಭಿಸುತ್ತ, ಅವಕ್ಕೆ ಹಣವನ್ನು ಧಂಡಿಯಾಗಿ ಪೂರೈಸಿದರೆ ಪ್ರಯೋಜನವನ್ನು ಗಮನಿಸಬೇಕು. ಅನಿವಾರ್ಯತೆಗೆ ಖರ್ಚು ಮಾಡುವುದು ಬೇರೆ – ಖರ್ಚು ಮಾಡಲಿಕ್ಕೆ ಇದೆ ಎಂದು ಅನಿವಾರ್ಯವಾಗಿ ಖರ್ಚು ಮಾಡುವುದೇ ಬೇರೆ! ಕೆಲವು ಕಡೆಗಳಲ್ಲಿ ಹಣವಿದೆಯೆಂದು ಖರ್ಚು ತೋರಿಸುವ ಅನಿವಾರ್ಯತೆಯೆಂದು ಬೇಕಾದದ್ದು – ಬೇಡವಾದದ್ದನ್ನೆಲ್ಲ ಖರೀದಿಸಿ, ಕೂಡಿ ಹಾಕಿ, ಹಾಗೇ ಲಡ್ಡು ಹಿಡಿದು ಹೋಗುವಂತೆ ಮಾಡುವುದು ಸೂಕ್ತವಾದ ಆರ್ಥಿಕ ಬಳಕೆಯಾಗದು. ಅಷ್ಟೇ ಅಲ್ಲ ಅದು ನೀತಿಯೂ ಆಗದು. ಯಾವತ್ತೂ ಯಾವುದೇ ಬಗೆಯಾದ ಉತ್ಪಾದನೆಯಾದರೂ ಅದು ಉಪಯೋಗಕ್ಕೊದಗಬೇಕು. ಅದಕ್ಕೊಂದು ಶಕ್ತವಾದ ಮಾರುಕಟ್ಟೆ ಲಭ್ಯವಿರಬೇಕೆಂಬ ಪ್ರಾಥಮಿಕ ಜ್ಞಾನ ಸಾಮಾನ್ಯ ವಿವೇಕವೂ ಹೌದು.
ರವೀಂದ್ರ ಭಟ್ ಕುಳಿಬೀಡು.
ಪಿ.ಎಲ್.ಡಿ ಬ್ಯಾಂಕ್ಗೆ ಕಟ್ಟಡ ಕಟ್ಟಲು ಹತ್ತು ಲಕ್ಷ ರೂ
ಪಟ್ಟಣದ ಪಿ.ಎಲ್.ಡಿ ಬ್ಯಾಂಕಿಗೆ ಹೆಚ್ಚುವರಿ ಕಟ್ಟಡ ಕಟ್ಟಲು ಹತ್ತು ಲಕ್ಷ ರೂಗಳನ್ನು ತಮ್ಮ ಅನುದಾನದಲ್ಲಿ ನೀಡುವುದಾಗಿ ಸಹಕಾರ ಹಾಗೂ ಸಕ್ಕರೆ ಖಾತೆ ಸಚಿವ ಎಚ್.ಎಸ್.ಮಹದೇವಪ್ರಸಾದ್ ಘೋಷಿಸಿದರು.
ಪಟ್ಟಣದ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ (ಪಿ.ಎಲ್.ಡಿ) ಬ್ಯಾಂಕ್ ಆವರಣದಲ್ಲಿ ಭಾನುವಾರ ಬ್ಯಾಂಕಿನ ಸಂಸ್ಥಾಪಕ ದಿ.ಪಿ.ಎಸ್.ಕೃಷ್ಣಮೂರ್ತಿರಾವ್ ಅವರ ಭಾವಚಿತ್ರ ಅನಾವರಣ, ಬ್ಯಾಂಕಿನ ನವೀಕೃತ ಕಟ್ಟಡ ಹಾಗೂ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ರೈತರಿಂದ ರೈತರಿಗಾಗಿ ಇರುವ ಪಿ.ಎಲ್.ಡಿ ಬ್ಯಾಂಕ್ ಅಭಿವೃದ್ಧಿ ಹೊಂದಲು ಸಾಲವನ್ನು ನಿಗದಿತ ಸಮಯದಲ್ಲಿ ಮರುಪಾವತಿ ಮಾಡಬೇಕು. ಬೆಳೆ ಸರಿಯಾಗಿ ಆಗದೆ, ಬೆಳೆಗೆ ಸೂಕ್ತ ಬೆಲೆ ಸಿಗದೆ, ಪ್ರಕೃತಿ ವಿಕೋಪಗಳಿಗೆ ಗುರಿಯಾಗಿ ಹಲವಾರು ಮಂದಿ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ರಾಜ್ಯದ 25 ಸಾವಿರ ಮಂದಿ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ವರ್ಗದ ರೈತರ 35 ಸಾವಿರ ಕೋಟಿ ರೂಗಳ ಸಾಲದ ಅಸಲನ್ನು ಸರ್ಕಾರಿ ನೀಡಿ ಬ್ಯಾಂಕುಗಳಿಗೆ ಚೈತನ್ಯ ನೀಡುವ ಪ್ರಯತ್ನ ಮಾಡಿದ್ದೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಶ್ವತ ನೀರಾವರಿಗೆ ಒತ್ತಾಯಿಸಿ ಮನವಿ ಪತ್ರವನ್ನು ನೀಡಿದ ರೈತ ಸಂಘದ ಮುಖಂಡರನ್ನುದ್ದೇಶಿ ಮಾತನಾಡಿ, ಮನವಿ ಪತ್ರವನ್ನು ಮುಖ್ಯಮಂತ್ರಿಗಳಿಗೆ ನೀಡಿ ಈ ಭಾಗದ ಜನರ ಕಷ್ಟವನ್ನು ತಿಳಿಸಿ ನೀರಿನ ಅಗತ್ಯತೆಯನ್ನು ವಿವರಿಸುತ್ತೇನೆ. ಈ ಭಾಗದ ಜನಪ್ರತಿನಿಧಿಗಳು ರೈತರು, ಮುಖಂಡರು ಒಗ್ಗೂಡಿ ಶಾಶ್ವತ ನೀರಾವರಿ ಯೋಜನೆಗಾಗಿ ಒಗ್ಗಟ್ಟಿನಿಂದ ಶ್ರಮಿಸಬೇಕೆಂದು ತಿಳಿಸಿದರು.
ಶಾಸಕ ಎಂ.ರಾಜಣ್ಣ ಮಾತನಾಡಿ, ಕೇವಲ ಶೇಕಡಾ 3 ರಷ್ಟು ಬಡ್ಡಿ ದರದಲ್ಲಿ ಪಿ.ಎಲ್.ಡಿ ಬ್ಯಾಂಕ್ ರೈತರಿಗೆ ಸಾಲ ನೀಡುತ್ತಿದ್ದು, ಸರಿಯಾಗಿ ಮರುಪಾವತಿ ಮಾಡಿ ಬ್ಯಾಂಕ್ ಅಭಿವೃದ್ಧಿಗೆ ಕಾರಣರಾಗಬೇಕು ಎಂದು ಹೇಳಿದರು.
ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ತಾಲ್ಲೂಕು ಶಿಬಿರ ಕಚೇರಿಯ ವತಿಯಿಂದ ಜನಶ್ರೀ ವಿಮಾ ಯೋಜನೆಯ ವಿದ್ಯಾರ್ಥಿ ವೇತನ ಹಾಗೂ ಮರಣ ಹೊಂದಿದ ಮಿಶ್ರತಳಿ ರಾಸುಗಳ ಫಲಾನುಭವಿಗಳಿಗೆ ವಿಮಾ ಪರಿಹಾರದ ಚೆಕ್ಕುಗಳ ವಿತರಣೆಯನ್ನು ನಡೆಸಲಾಯಿತು.
ಸಂಸದ ಕೆ.ಎಚ್.ಮುನಿಯಪ್ಪ, ರಾಜ್ಯ ಸಹಕಾರ ಸಂಘಗಳ ಹಾಗೂ ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಎ.ಆರ್.ಶಿವರಾಮ್, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ರಾಮಚಂದ್ರ, ಜಿಲ್ಲಾ ನಿರ್ದೇಶಕ ನಾರಾಯಣಸ್ವಾಮಿ, ಸಹಕಾರ ಸಂಘಗಳ ಉಪ ನಿಬಂಧಕಿ ಬಿ.ಜಿ.ಮಂಜುಳ, ಪ್ರಭಾರ ಜಿಲ್ಲಾ ವ್ಯವಸ್ಥಾಪಕ ಎಸ್.ನಾಗರಾಜು, ಕೋಚಿಮುಲ್ ಅಧ್ಯಕ್ಷ ಜೆ.ಕಾಂತರಾಜ್, ವ್ಯವಸ್ಥಾಪಕ ಮುನಿಯಪ್ಪ, ಸಿ.ಎಂ.ಗೋಪಾಲ್, ಅಶ್ವತ್ಥನಾರಾಯಣರೆಡ್ಡಿ, ಡಿ.ಸಂಗಪ್ಪ, ಮುನಿಯಪ್ಪ, ಆರ್.ಬಿ.ಜಯದೇವ್, ಸಿ.ಅಶ್ವತ್ಥನಾರಾಯಣ, ರಾಮಲಕ್ಷ್ಮಮ್ಮ, ಎಂ.ಪಿ.ರವಿ, ಎಸ್.ಕೆ.ಮಯೂರ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ತೊಗರಿ ಬೆಳೆ ಕ್ಷೇತ್ರೋತ್ಸವ
ತಾಲ್ಲೂಕಿನ ಮುತ್ತೂರು ಗ್ರಾಮದ ಎಂ.ಎಸ್.ಮಹೇಶ್ ಅವರ ಹೊಲದಲ್ಲಿ ಈಚೆಗೆ ಮಳೆಯಾಶ್ರಿತ ತೊಗರಿ ಬೆಳೆ ಕ್ಷೇತ್ರೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು.
ಆತ್ಮಯೋಜನೆಯಲ್ಲಿ ನಡೆದ ಕ್ಷೇತ್ರೋತ್ಸವದಲ್ಲಿ ಸಹಾಯಕ ಕೃಷಿ ನಿರ್ದೇಶಕ ಬಿ.ಸಿ.ದೇವೇಗೌಡ ಮಾತನಾಡಿ, ತೊಗರಿ ಬೆಳೆಯ ಮುಖ್ಯ ಬೇಸಾಯ ಕ್ರಮಗಳಾದ ಭೂಮಿ ಸಿದ್ಧತೆ, ತಳಿಗಳು ಮತ್ತು ಕಾಲಾವಧಿ, ಬಿತ್ತನೆಕಾಲ, ಬಿತ್ತನೆಬೀಜ ಹಾಗೂ ಇತರೆ ಪರಿಕರಗಳ ಅವಶ್ಯಕತೆ ಕುರಿತಂತೆ, ಇಲಾಖೆಯಿಂದ ರೈತರಿಗೆ ರಿಯಾಯಿತಿ ದರದಲ್ಲಿ ಸಿಗುವ ಸೌಲಭ್ಯಗಳು ಕುರಿತಂತೆ ಮಾಹಿತಿ ತಿಳಿಸಿದರು.
ಕೃಷಿ ಅಧಿಕಾರಿ ಗೋಪಾಲರಾವ್, ಬೀಜೋಪಚಾರ, ಸಮಗ್ರ ಪೋಷಕಾಂಶಗಳು ಮತ್ತು ಪೀಡೆನಾಶಕಗಳ ನಿರ್ವಹಣೆಯಿಂದ ಅಧಿಕ ಇಳುವರಿ ಪಡೆಯುವ ಬಗ್ಗೆ ತಿಳಿಸಿಕೊಟ್ಟರು.
ತಾಲ್ಲೂಕು ತಾಂತ್ರಿಕ ವ್ಯವಸ್ಥಾಪಕ ಎನ್.ಅಶ್ವತ್ಥನಾರಾಯಣ, ಆತ್ಮಯೋಜನೆಯಿಂದ ರೈತರಿಗೆ ಸಿಗುವ ವಿಸ್ತರಣಾ ಕಾರ್ಯಕ್ರಮಗಳು ಮತ್ತು ಪರಿಕರಗಳ ಬಗ್ಗೆ ಮಾಹಿತಿ ನೀಡಿದರು.
ಗ್ರಾಮ ಪಂಚಾಯತಿ ಸದಸ್ಯ ಎ.ಎಂ.ವೆಂಕಟರಾಜೇಗೌಡ, ಕೃಷಿಕ ಸಮಾಜದ ಸದಸ್ಯ ಎಂ.ಟಿ.ಕೆಂಪೇಗೌಡ, ರೈತರಾದ ಎಂ.ಬಿ.ವೇಣುಗೋಪಾಲ್, ಮುರಳಿ, ಗಂಗಾಧರ್, ಮಹೇಶ್, ಆತ್ಮ ಸಿಬ್ಬಂದಿಗಳಾದ ಶಿಲ್ಪ, ಕಾವ್ಯ, ಸುಶ್ಮಿತ, ಅನುವುಗಾರರಾದ ಗಜೇಂದ್ರ, ರಾಮಾಂಜಿ, ಚನ್ನರಾಯಪ್ಪ, ಲೋಕೇಶ್, ರಾಮಾಂಜಿನಪ್ಪ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ರಸಮೇವು ತಯಾರಿಕಾ ಪ್ರಾತ್ಯಕ್ಷಿಕೆ
ತಾಲ್ಲೂಕಿನ ಮಳ್ಳೂರು ಗ್ರಾಮದಲ್ಲಿ ಈಚೆಗೆ ರಸಮೇವು ತಯಾರಿಕಾ ಪ್ರಾತ್ಯಕ್ಷಿಕೆಯನ್ನು ನಡೆಸಿಕೊಟ್ಟು, ಬರಗಾಲದಲ್ಲಿ ರಾಸುಗಳಿಗೆ ಮೇವನ್ನು ಹೇಗೆ ಸರಿದೂಗಿಸಿಕೊಳ್ಳಬಹುದೆಂದು ಕೋಚಿಮುಲ್ನ ಪಶು ಆಹಾರ ಮತ್ತು ಮೇವು ವಿಭಾಗದ ಅಧಿಕಾರಿಗಳು ತಿಳಿಸಿಕೊಟ್ಟರು.
ಪಶು ಆಹಾರ, ಹಿಂಡಿ, ಬೂಸಾಗಳ ಬೆಲೆ ಹೆಚ್ಚಾಗುತ್ತಿದ್ದು, ಪಶು ಆಹಾರ ತಯಾರಿಕೆಗೆ ಬೇಕಾದ ಖಚ್ಚಾ ಪದಾರ್ಥಗಳು ಹೆಚ್ಚಿನ ಪ್ರಮಾಣದಲ್ಲಿ ಸಿಗದಿರುವ ಕಾರಣ ಹೈನುಗಾರಿಕೆಯನ್ನು ನಂಬಿದವರು ಕಷ್ಟಪಡುವಂತಾಗಿದೆ. ಹಸಿರು ಮೇವನ್ನು ರಸಮೇವಾಗಿ ಪರಿವರ್ತಿಸಿ ಬರಗಾಲದಲ್ಲಿ ಬಳಸಿಕೊಳ್ಳುವ ಮೂಲಕ ನಷ್ಟವನ್ನು ಕಡಿಮೆ ಮಾಡಿಕೊಳ್ಳಬಹುದಾಗಿದೆ.
ಹಸಿರು ಮೇವನ್ನು ಸಂರಕ್ಷಿಸಿ, ಗುಣಾಂಶಗಳನ್ನು ಕೆಡದಂತೆ ಕಾಪಾಡಿ, ಹಸಿರು ಮೇವಿನ ಪೌಷ್ಠಿಕತೆಯನ್ನು ಹೆಚ್ಚಿಸಿ ಬೇಸಿಗೆಯ ಬರಗಾಲದಲ್ಲಿ ಹೈನುರಾಸುಗಳಿಗೆ ನೀಡುವುದನ್ನು ರೂಢಿಸಿಕೊಳ್ಳಬೇಕಿದೆ ಎಂದು ಪ್ರಾತ್ಯಕ್ಷಿಕೆಗಳ ಮೂಲಕ ಅಧಿಕಾರಿಗಳು ತೋರಿಸಿಕೊಟ್ಟರು.
ರಾಷ್ಟ್ರೀಯ ಹೈನುಯೋಜನೆಯ ಮೇವು ಅಭಿವೃದ್ಧಿ ಉಪಯೋಜನೆಯಲ್ಲಿ ಶೇಕಡಾ ನೂರರಷ್ಟು ಅನುದಾನ ಸಿಗುತ್ತಿದ್ದು ಸದ್ಭಳಕೆ ಮಾಡಿಕೊಳ್ಳಬೇಕೆಂದು ಈ ಸಂದರ್ಭದಲ್ಲಿ ಜಿಲ್ಲಾ ಹಾಲು ಒಕ್ಕೂಟದ ವ್ಯವಸ್ಥಾಪಕ ಡಾ.ಎ.ಬಿ.ಲೋಕೇಶ್ ತಿಳಿಸಿದರು.
ಒಂದು ರಸಮೇವು ಘಟಕಕ್ಕೆ 25 ಸಾವಿರ ರೂಗಳು ವೆಚ್ಚವಾಗುತ್ತದೆ. ಜಿಲ್ಲೆಯಲ್ಲಿ 49 ಘಟಕಗಳನ್ನು ಸ್ಥಾಪಿಸಲಿದ್ದು, ತಾಲ್ಲೂಕಿನಲ್ಲಿ 9 ಘಟಕಗಳು ಸ್ಥಾಪನೆಯಾಗುತ್ತಿವೆ. ಬರಗಾಲಕ್ಕೆ ಮುಂದಾಲೋಚನೆಯಾಗಿ ಈ ಪರಿಹಾರವನ್ನು ರೂಪಿಸಿಕೊಳ್ಳುವುದು ಸೂಕ್ತ ಎಂದು ಅವರು ಅಭಿಪ್ರಾಯಪಟ್ಟರು.
ಕೋಲಾರ ಹಾಲು ಒಕ್ಕೂಟದ ಸಹಾಯಕ ವ್ಯವಸ್ಥಾಪಕಿ ಆರ್.ವಿಜಯಲಕ್ಷ್ಮಿ, ಪ್ರಗತಿಪರ ರೈತ ಮಳ್ಳೂರು ಹರೀಶ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಪುಟಾಣಿ ಸಾಹಿತಿಗಳ 'ಶಾಮಂತಿ' ಪುಸ್ತಕ ಬಿಡುಗಡೆ
ಪುಟಾಣಿ ಮಕ್ಕಳಿಗಾಗಿ ಚಂದದೊಂದು ಹೊಸ ಪುಸ್ತಕ ಬಂದಿದೆ. ಪುಸ್ತಕ ಬರೆದಿರೋರು ಪ್ರಸಿದ್ಧ ವ್ಯಕ್ತಿಗಳ್ಯಾರೂ ಅಲ್ಲ. ಮುಗ್ಧ ಮನಸ್ಸಿನ ಚಿನ್ನಾರಿಗಳು. ಅವರು ತಾಲ್ಲೂಕಿನ ಕನ್ನಮಂಗಲದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು.
ಅಂದಹಾಗೆ ಆ ಶಾಲೆಯಿಂದ ಹೊರಬರುತ್ತಿರುವ ನಾಲ್ಕನೇ ಪುಸ್ತಕ ಇದು. ಹೆಸರು `ಶಾಮಂತಿ- 4′. ಇದರಲ್ಲಿ ಆ ಮಕ್ಕಳು ಬರೆದಿರೋ 52 ಬರಹಗಳಿವೆ. ಪುಸ್ತಕದ ಕುರಿತು ದೊಡ್ಡವರು ಬರೆದಿರುವ ಅಭಿಪ್ರಾಯಗಳನ್ನೂ ಸಂಗ್ರಹಿಸಲಾಗಿದೆ. ಮಕ್ಕಳಿಂದ ಬರೆಸಿ ಅದನ್ನು ಚಿಣ್ಣರಿಗೆ ಇಷ್ಟವಾಗುವಂತೆ ಹೊರ ತಂದಿರುವುದು ಸಂಪಾದಕ ಎಸ್. ಕಲಾಧರ. ಮುಖಪುಟ, ಒಳಪುಟಗಳ ವಿನ್ಯಾಸವನ್ನು ಅವರೇ ಮಾಡಿದ್ದಾರೆ. ಇವರ ಕೆಲಸವನ್ನು ಪ್ರೋತ್ಸಾಹಿಸಿರೋದು ಸಹಶಿಕ್ಷಕರು ಮತ್ತು ಕನ್ನಮಂಗಲದ ಸ್ನೇಹ ಕಲಾಸಂಘ.
ದೊಡ್ಡವರು ಬರೆವ ಮಕ್ಕಳ ಪುಸ್ತಕಕ್ಕಿಂತ ಇದು ವಿಭಿನ್ನ. ಈ ಎಳೆಯರ ಜಗತ್ತು ಅತ್ಯಂತ ತಾಜಾ. ದಿನವೂ ನೋಡುವ ಮನೆ, ಶಾಲೆ, ಮೈದಾನ, ತೋಟ, ಪ್ರಾಣಿ ಪಕ್ಷಿ ಮುಂತಾದವೆಲ್ಲಾ ಇಲ್ಲಿ ಬಣ್ಣ ತಳೆದಿವೆ. ಬರೆಯೋದು ಅಂದ್ರೆ ಬರೀ ಲೇಖನ ಅಲ್ಲ. ಅಲ್ಲಿ ಕತೆ, ಪದ್ಯ ಅಷ್ಟೇ ಏಕೆ, ನಾಟಕ ಕೂಡ ಇವೆ. ಕೆಲವು ಮಕ್ಕಳು ಒಳ್ಳೊಳ್ಳೆ ಚಿತ್ರ ಬರೆದಿದ್ದಾರೆ. ಅವರ ವಯಸ್ಸು ಅಬ್ಬಬ್ಬಾ ಅಂದ್ರೆ 9ರಿಂದ 13 ವರ್ಷ ಇರಬಹುದು ಅಷ್ಟೇ.
ಶಾಮಂತಿಯ ಮಕ್ಕಳ ಓದಿನ ಹರವು ಕೂಡ ವಿಸ್ತಾರವಾಗಿದೆಯೆಂದು ಮಕ್ಕಳ ಬರಹಗಳ ಮೂಲಕ ಗೊತ್ತಾಗುತ್ತದೆ. ಅದರಲ್ಲಿ ಕುವೆಂಪುರವರ ‘ಗಗನಗುರು’, ಲಂಕೇಶರ ‘ಅವ್ವ’, ಸಿದ್ದಲಿಂಗಯ್ಯನವರ ‘ನನ್ನ ಕವನ‘, ಬೋಳುವಾರು ಅವರ ‘ಪಾಪು ಗಾಂಧಿ ಗಾಂಧಿ ಬಾಪುವಾದ ಕತೆ’ ಯಂತಹ ಕವಿತೆ, ಕೃತಿಗಳ ಕುರಿತಾಗಿ ಸವಿಸ್ತಾರವಾಗಿ ತಾವು ಗ್ರಹಿಸಿದ್ದನ್ನು ಮಕ್ಕಳು ದಾಖಲಿಸಿದ್ದಾರೆ.
ಈ ಪುಸ್ತಕವನ್ನು ಶುಕ್ರವಾರ ಕನ್ನಮಂಗಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ನಡೆದ ಅಂತರಶಾಲಾ ನಾಟಕೋತ್ಸವ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಿದ ಶಾಸನತಜ್ಞ ಡಾ. ಆರ್.ಶೇಷಶಾಸ್ತ್ರಿ, ‘ಡಿವಿಜಿ, ಮಾಸ್ತಿ ಅವರ ಬರಹಗಳನ್ನು ನಾನೆಷ್ಟು ಗೌರವಿಸುತ್ತೇನೆಯೋ, ಶಾಮಂತಿಯ ಲೇಖನಗಳನ್ನು ಕೂಡ ಅಷ್ಟೇ ಗೌರವಿಸುತ್ತೇನೆ. ಈ ಬರಹಗಳನ್ನು ಬರೆದಿರುವ ಮಕ್ಕಳು ಉತ್ತಮ ಸಾಹಿತಿಗಳಾಗದಿದ್ದರೂ ಒಳ್ಳೆಯ ಮನುಷ್ಯರಂತೂ ಖಂಡಿತ ಆಗುತ್ತಾರೆ. ಎಷ್ಟೋ ಜನಕ್ಕೆ ತಮ್ಮ ಭಾವನೆಗಳನ್ನು ಅಭಿವ್ಯಕ್ತಿಸಲು ಬರದು. ಆದರೆ ಈ ಮಕ್ಕಳು ತಮ್ಮ ಸುಖ, ದುಃಖ, ನೋವು ನಲಿವುಗಳನ್ನು ಹೇಳಿಕೊಳ್ಳಬಲ್ಲರು, ಬರೆಯಬಲ್ಲರು. ಈ ಸಂಸ್ಕಾರವನ್ನು ಒದಗಿಸಿರುವ ಇವರ ಶಿಕ್ಷಕರು ಮತ್ತು ಈ ಮಕ್ಕಳ ಭಾವನೆಗಳನ್ನು ಪುಸ್ತಕ ರೂಪದಲ್ಲಿ ತರುವ ಇಲ್ಲಿನ ಸ್ನೇಹ ಯುವಕ ಸಂಘದವರು ಮಾದರಿಯಾಗಿದ್ದಾರೆ. ಮಕ್ಕಳಿಗೆ ಅಭಿವ್ಯಕ್ತಿ, ಕೃತಜ್ಞತೆ ಮತ್ತು ಜಾನಪದ ಕತೆಗಳನ್ನು ತಮ್ಮದಾಗಿಸಿಕೊಳ್ಳುವುದನ್ನು ಕಲಿಸಿರುವ ಕನ್ನಮಂಗಲದ ಶಿಕ್ಷರು ಹಾಗೂ ಅವರ ಐಕ್ಯಮತ್ಯ ಅಭಿನಂದನೀಯ’ ಎಂದು ಹೇಳಿದರು.
ಶಾಮಂತಿಯಲ್ಲಿ ಮಕ್ಕಳು ಪ್ರಾಣಿ, ಪಕ್ಷಿ, ಗಿಡ, ಮರ, ಕೀಟಗಳ ಬಗ್ಗೆ ಬರೆದಿದ್ದಾರೆ. ಅಡುಗೆ, ಕೃಷಿ, ಕಣ, ದೇವಸ್ಥಾನ, ಹಬ್ಬ, ನಂಬಿಕೆಗಳು, ಪೂಜೆ, ನೋಡಿದ ಸಿನೆಮಾ, ಓದಿದ ಪುಸ್ತಕ, ಸರ್ಕಸ್ಸು, ನೋವು ನಲಿವು ದುಗುಡ ತಲ್ಲಣಗಳ ಬಗ್ಗೆಯೂ ಬರೆದಿದ್ದಾರೆ. ತಮ್ಮ ಶಾಲೆಯ ಅಂಗನವಾಡಿ ಸಹಾಯಕಿಯೊಳಗೆ ಪರಕಾಯ ಪ್ರವೇಶ ಮಾಡಿ ಆಕೆಯ ಮನಸ್ಸನ್ನು ಚಿತ್ರಿಸಿದ್ದಾರೆ. ತಾವು ನೋಡಿದ್ದು, ಆಡಿದ್ದು, ಅನುಭವಿಸಿದ್ದು, ತಿಂದಿದ್ದು, ಕುಡಿದಿದ್ದು, ಕುಣಿದಿದ್ದು, ಕೇಳಿದ್ದು ಎಲ್ಲವನ್ನೂ ಮುಚ್ಚುಮರೆಯಿಲ್ಲದೆಯೇ ಸರಾಗವಾಗಿ ಯಾವುದೇ ಹಿಂಜರಿಕೆಯಿಲ್ಲದೆ ಬರೆದಿದ್ದಾರೆ. ಓದುಗರ ಮನಸ್ಸನ್ನು ಆವರಿಸಿಕೊಳ್ಳುವ ಆಟದ ಅಂಗಳವನ್ನಾಗಿಸಿದ್ದಾರೆ.
ಶಾಮಂತಿ 4 ಕ್ಕೆ ಮುನ್ನುಡಿ ಬರೆದಿರುವ ಮುದ್ದು ತೀರ್ಥಹಳ್ಳಿ, ‘ಎಲ್ಲ ಶಾಲೆಗಳಲ್ಲೂ ಇಂಥಹ ಶಿಕ್ಷಕರಿದ್ದಲ್ಲಿ ಪ್ರತಿಯೊಂದು ಶಾಲೆಯಲ್ಲೂ ಶಾಮಂತಿ, ಅಬ್ಬಲಿಗೆ, ಮಲ್ಲಿಗೆ, ಜಾಜಿ, ಸುರಗಿ ಹೂವುಗಳೇನು ಹೂತೋಟವೇ ಮೈದಾಳಿ ಅರಳುತ್ತದೆ ಎನ್ನುವ ಗಟ್ಟಿಯಾದ ನಂಬಿಕೆ ನನಗಿದೆ. ಮಕ್ಕಳ ಭಾವನೆಗಳಿಗೆ ಬಾಯಿ ಮೂಡಿಸದಿದ್ದರೆ ಅವರೊಳಗನ್ನು ಅರಿಯುವುದಾದರೂ ಹೇಗೆ. ಇಂಥಹ ಬರಹಗಳನ್ನು ಮಕ್ಕಳು ಅಭಿವ್ಯಕ್ತಿಸಬೇಕಾದರೆ ಅದಕ್ಕೆ ಬೇಕಾಗುವ ಮುಕ್ತ ವಾತಾವರಣ ಸರ್ಕಾರಿ ಶಾಲೆಗಳಲ್ಲಿ ಮಾತ್ರ ಸಾಧ್ಯ. ಅದರಲ್ಲೂ ಸಂವೇದನಾಶೀಲ ಶಿಕ್ಷಕರಿದ್ದಲ್ಲಿ ಮಾತ್ರ ಅದು ಸಾಧ್ಯವಾಗಬಲ್ಲದು. ನಿಜವಾಗಿ ಕಲಿಕೆಯ ಮೌಲ್ಯಮಾಪನ ನಡೆಯಬೇಕಾಗಿರುವುದು ಪರೀಕ್ಷೆಗಳ ಅಂಕಗಳ ಮೂಲಕವಲ್ಲ, ಅದು ಶಾಮಂತಿಯಲ್ಲಿರುವಂತಹ ಬರಹಗಳಿಂದ’ ಎನ್ನುತ್ತಾರೆ.
ಇದೇ ಶಾಲೆಯಿಂದ ಮುಂದೊಂದು ದಿನ ಕಲಾವಿದೆಯರು, ಕತೆಗಾರರು, ಕವಿಗಳು, ನಟರು, ನಾಟಕಕಾರರು ಹುಟ್ಟಿದರೆ ಅವರೆಲ್ಲಾ ಖಂಡಿತಾ `ಶಾಮಂತಿ’ಯನ್ನೂ, ಅಲ್ಲಿನ ಮೇಷ್ಟ್ರುಗಳನ್ನೂ ನೆನೆಯದೇ ಇರುವುದಿಲ್ಲ.
ಮಕ್ಕಳಿರುವ ಮನೆಗಳಲ್ಲಿ ಇಂಥದ್ದೊಂದು ಪುಸ್ತಕ ಇರಲಿ. ಪುಸ್ತಕಕ್ಕಾಗಿ ಈ ನಂಬರ್ಗೆ ಫೋನ್ ಮಾಡಬಹುದು: 9900695142 ಅಥವಾ kaladhars152@gmail.com ಗೆ ಮೇಲ್ ಮಾಡಬಹುದು.
– ಡಿ.ಜಿ.ಮಲ್ಲಿಕಾರ್ಜುನ.
ಅಪರಾಧ ತಡೆ ಮಾಸಾಚರಣೆ
ಶಿಡ್ಲಘಟ್ಟದಲ್ಲಿ ಶುಕ್ರವಾರ ಪುರಠಾಣೆ ಪೊಲೀಸರು ಸಬ್ಇನ್ಸ್ಪೆಕ್ಟರ್ ಪುರುಷೋತ್ತಮ್ ನೇತೃತ್ವದಲ್ಲಿ ಅಪರಾಧ ತಡೆ ಮಾಸಾಚರಣೆಯ ಪ್ರಯುಕ್ತ ಆಟೋಚಾಲಕರಿಗೆ ಜಾಗೃತಿ ಮೂಡಿಸಿ ಆಟೋ ರ್ಯಾಲಿ ನಡೆಸಿದರು.

