Home Blog Page 548

ದಲಿತರಿಗೆ ರಕ್ಷಣೆ ನೀಡುವಂತೆ ಸಿ.ಪಿ.ಐ.ಎಂ ಪಕ್ಷದ ವತಿಯಿಂದ ಮನವಿ

0

ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸಿ ದಲಿತರಿಗೆ ಮೂಲಭೂತ ಸೌಕರ್ಯಗಳು ಹಾಗೂ ರಕ್ಷಣೆ ನೀಡುವಂತೆ ಸಿ.ಪಿ.ಐ.ಎಂ ಪಕ್ಷದ ವತಿಯಿಂದ ಗುರುವಾರ ತಹಶೀಲ್ದಾರ್‌ ಜಿ.ಎ.ನಾರಾಯಣಸ್ವಾಮಿ ಅವರಿಗೆ ಮನವಿಯನ್ನು ಸಲ್ಲಿಸಲಾಯಿತು.
ರಾಜ್ಯದಲ್ಲಿ ಇತ್ತೀಚೆಗೆ ದಲಿತರ ಮೇಲೆ ದೌರ್ಜನ್ಯ ಏರುತ್ತಿವೆ. ದೇವಸ್ಥಾನ ಪ್ರವೇಶ ನಿರಾಕರಣೆ ಮುಂತಾದ ಸಾಮಾಜಿಕ ತಾರತಮ್ಯಗಳು ನಡೆಯುತ್ತಿರುವುದು ದುರದೃಷ್ಟಕರ. ಕೊಪ್ಪಳ ಜಿಲ್ಲೆಯ ಮರತುಂಬಿ ಗ್ರಾಮದಲ್ಲಿ ದಲಿತರಿಗೆ ಕ್ಷೌರ ನಿರಾಕರಣೆ ವಿರೋಧಿಸಿದ ದಲಿತರರಿಗೆ ನ್ಯಾಯ ಕೊಡುವ ಬದಲು ಜಾತಿವಾದಿಗಳು ದಲಿತರ ಕಾಲೋನಿಗಳಿಗೆ ಧಾಳಿ ಮಾಡಿ ಗುಡಿಸಲುಗಳಿಗೆ ಬೆಂಕಿ ಹಚ್ಚಿ 22 ಜನರನ್ನು ಗಾಯಗೊಳಿಸಿರುವುದು ಖಂಡನೀಯ. ದಲಿತರ ಹೋರಾಟಕ್ಕೆ ಸರ್ಕಾರ ತಕ್ಷಣ ಸ್ಪಂದಿಸಬೇಕು. ರಾಜ್ಯದಲ್ಲಿ ನಡೆದಿರುವ ಅತ್ಯಾಚಾರ ಪ್ರಕರಣಗಳಲ್ಲಿ ಶೇಕಡಾ 45 ರಷ್ಟು ದಲಿತ ಮಹಿಳೆಯರು ಬಲಿಯಾಗಿರುವುದು ಶೋಚನೀಯ. ದೇವಸ್ಥಾನ ಪ್ರವೇಶ ನಿರಾಕರಣೆ, ದಲಿತ ಮಹಿಳೆ ಮಾಡಿದ ಅಡುಗೆ ನಿಷೇಧ, ದಲಿತ ಅಂಗನವಾಡಿ ಕಾರ್ಯಕರ್ತೆ ಇರುವ ಕೇಂದ್ರಕ್ಕೆ ಮಕ್ಕಳನ್ನು ಕಳಿಸದಿರುವುದು, ದಲಿತರಿಗೆ ಬಾಡಿಗೆ ಮನೆ ನೀಡದಿರುವಂಥ ಅನಿಷ್ಠ ಪದ್ಧತಿಗಳು ಈ ತಾಂತ್ರಿಕ ಯುಗದಲ್ಲೂ ಮುಂದುವರೆಸುತ್ತಿರುವುದು ದುರದೃಷ್ಟಕರ. ದಲಿತರಿಗೆ ಮೂಲಭೂತ ಸೌಕರ್ಯಗಳು ಹಾಗೂ ರಕ್ಷಣೆ ನೀಡುವಂತೆ ತಹಶಿಲ್ದಾರರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ತಹಶೀಲ್ದಾರ್‌ ಜಿ.ಎ.ನಾರಾಯಣಸ್ವಾಮಿ ಮನವಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಕಳುಹಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಿ.ಪಿ.ಐ.ಎಂ ಪಕ್ಷದ ಕುಂದಲಗುರ್ಕಿ ಮುನೀಂದ್ರ, ಕೆ.ಎಂ.ನಟರಾಜ್‌, ಗುರುಮೂರ್ತಿ, ಚಂದ್ರು, ಅಪ್ಪು, ಮಹೇಶ್‌, ಹರೀಶ್‌, ಮುನಿರಾಜು, ಹರಿಕೃಷ್ಣ, ನರಸಿಂಹಪ್ಪ, ಸುರೇಶ್‌, ಮಂಜುನಾಥ್‌, ಬಾಲರಾಜ್‌ ಮತ್ತಿತರರು ಹಾಜರಿದ್ದರು.

ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಮುತ್ತೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕ ಎ.ಶ್ರೀನಿವಾಸ್

0

ತಾಲ್ಲೂಕಿನ ಮುತ್ತೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕ ಎ.ಶ್ರೀನಿವಾಸ್‌ ಅವರಿಗೆ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದೆ.
ವಿಜ್ಞಾನ ಶಿಕ್ಷಕರಾದ ಎ.ಶ್ರೀನಿವಾಸ್‌ ಸಮುದಾಯವನ್ನು ತಮ್ಮ ಶಾಲೆಯತ್ತ ಆಕರ್ಷಿಸಿ ಮಕ್ಕಳ ಪ್ರಗತಿಗೆ ಪೂರಕವಾಗಿ ಕಲಿಕೆಗಾಗಿ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಸೌರವಿದ್ಯುತ್ ದೀಪಗಳನ್ನು ಸೆಲ್ಕೋ ಸೋಲಾರ್ ಸಂಸ್ಥೆಯಿಂದ ದೊರೆಕಿಸಿಕೊಟ್ಟಿದ್ದಾರೆ. ಶಾಲೆಗೆ ಮಳೆನೀರು ಕೊಯ್ಲು ವ್ಯವಸ್ಥೆಯನ್ನು ದಾನಿಗಳಿಂದ ಮಾಡಿಸಿ, ಶಾಲೆಯ ಶಿಕ್ಷಕರನ್ನು ಒಗ್ಗೂಡಿಸಿಕೊಂಡು ಸಂಜೀವಿನಿವನ, ಗೋಬರ್ ಗ್ಯಾಸ್ ಅಸ್ತ್ರಒಲೆ ಮಾಡಿಸಿದ್ದಾರೆ. ಮ್ಯಾಗ್ಸೆಸ್ ಪ್ರಶಸ್ತಿಗೆ ವಿಜೇತರಾದ ಡಾ. ಹರೀಶ್ ಹಂದೆರವರಿಂದ ಅನುದಾನ ಪಡೆದು ೫ ವರ್ಷದ ವಿಜ್ಞಾನದ ಪ್ರಾಯೋಗಿಕ ಚಟುವಟಿಕೆಗಳು ಎನ್ನುವ ವಿನೂತನವಾದ ಕಾರ್ಯಕ್ರಮವನ್ನು ನಮ್ಮ ಶಾಲೆಯಲ್ಲಿ ಹಮ್ಮಿಕೊಂಡಿರುತ್ತಾರೆ
‘ಶಾಲೆಯಲ್ಲಿ ವಿಜ್ಞಾನ ಶಿಕ್ಷಕನಾಗಿ ಕೇವಲ ಬೋಧನೆಗೆ ಮಾತ್ರ ಸೀಮಿತನಾಗಬಾರದೆಂದು ಹಲವು ಚಟುವಟಿಕೆಗಳನ್ನು ಹಮ್ಮಿಕೊಂಡೆ. ನನ್ನ ಚಟುವಟಿಕೆಗೆ ‘ನಮ್ಮ ಮುತ್ತೂರು’ ಸಂಸ್ಥೆಯ ಉಷಾಶೆಟ್ಟಿ, ಗ್ರಾಮಸ್ಥರು ಮತ್ತು ಸಹಶಿಕ್ಷಕರು ಸಹಕಾರ ನೀಡಿದ್ದಾರೆ’ ಎನ್ನುತ್ತಾರೆ ಶಿಕ್ಷಕ ಎ.ಶ್ರೀನಿವಾಸ್‌.

ತಾಲ್ಲೂಕಿನ ಸ್ವಾತಂತ್ರ್ಯ ಹೋರಾಟಗಾರ ಚೌಡಸಂದ್ರದ ನಾರಾಯಣಪ್ಪ ವಿಧಿವಶ

0

ತಾಲ್ಲೂಕಿನ ಚೌಡಸಂದ್ರದ ಸ್ವಾತಂತ್ರ್ಯ ಹೋರಾಟಗಾರ ನಾರಾಯಣಪ್ಪ(95) ಮಂಗಳವಾರ ರಾತ್ರಿ ನಿಧನರಾಗಿದ್ದಾರೆ.
ಮೃತರು ಇಬ್ಬರು ಗಂಡು ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಹುಟ್ಟೂರು ಚೌಡಸಂದ್ರದಲ್ಲಿ ಬುಧವಾರ ಮೃತರ ಅಂತ್ಯ ಸಂಸ್ಕಾರ ನಡೆಯಿತು. ಚೌಡಸಂದ್ರ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ನಾರಾಯಣಪ್ಪ ಅವರು ಸೇವೆ ಸಲ್ಲಿಸಿದ್ದರು.
ತಾಲ್ಲೂಕು ಆಡಳಿತದ ಪರವಾಗಿ ಕಂದಾಯ ಇಲಾಖೆಯ ಅಧಿಕಾರಿಗಳು ಮೃತರಿಗೆ ಮಾಲಾರ್ಪಣೆ ಮಾಡಿ ಗೌರವ ಸಮರ್ಪಿಸಿದರು. ಮಾಜಿ ಸಚಿವ ವಿ.ಮುನಿಯಪ್ಪ, ಜಿಲ್ಲಾ ಪಂಚಾಯತಿ ಸದಸ್ಯ ಸತೀಶ್‌, ಮೇಲೂರು ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಕೆ.ಮಂಜುನಾಥ್‌ ಸೇರಿದಂತೆ ಹಲವು ಗಣ್ಯರು ಅಂತಿಮ ದರ್ಶನ ಪಡೆದರು.
ಅಪಾರ ಬಂಧು ಬಳಗ, ಅಭಿಮಾನಿಗಳ ಸಾಕ್ಷಿಯಲ್ಲಿ ಅಂತಿಮ ಸಂಸ್ಕಾರದ ವಿದಿವಿಧಾನಗಳನ್ನು ಪೂರೈಸಲಾಯಿತು.
ನಾರಾಯಣಪ್ಪರವರ ಸ್ವಾತಂತ್ರ ಹೋರಾಟದ ನೆನಪುಗಳನ್ನು ಇಲ್ಲಿ ಓದಬಹುದು
http://www.sidlaghatta.com/?p=1483

ಸ್ವಾತಂತ್ರ್ಯ ಹೋರಾಟಗಾರ ನಾರಾಯಣಪ್ಪ

0

ತಾಲ್ಲೂಕಿನ ಚೌಡಸಂದ್ರದ ಸ್ವಾತಂತ್ರ್ಯ ಹೋರಾಟಗಾರ ನಾರಾಯಣಪ್ಪರವರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ತಮ್ಮ ಸೇವೆ ಸಲ್ಲಿಸಿದ ಮಹನೀಯರು. ಚೌಡಸಂದ್ರ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿಯೂ ನಾರಾಯಣಪ್ಪ ಅವರು ಸೇವೆ ಸಲ್ಲಿಸಿದ್ದರು. ಅವರು ಹಂಚಿಕೊಂಡ ಸ್ವಾತಂತ್ರ್ಯ ಹೋರಾಟದ ನೆನಪುಗಳು:
‘ಎಲ್ಲರೂ ನೋಡುತ್ತಿರುವಾಗಲೇ ಇದ್ದಕ್ಕಿದ್ದಂತೆ ಕಂಬದಹಳ್ಳಿಯ ಮುನಿಶಾಮಪ್ಪ ಅವರು ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಅವರ ಹ್ಯಾಟ್ ತೆಗೆದು ಗಾಂಧಿ ಟೋಪಿಯನ್ನು ಇಟ್ಟುಬಿಟ್ಟರು. ತಕ್ಷಣವೇ ‘ಲಾಠೀ ಚಾರ್ಜ್’ ಎಂಬ ಕೂಗು ಕೇಳಿತು. ಬೆತ್ತಗಳು ಮಾತಾಡಿದವು. ಸತ್ಯಾಗ್ರಹ ಮಾಡುತ್ತಿದ್ದವರನ್ನು ಪೊಲೀಸರು ಚೆನ್ನಾಗಿ ಬಡಿದರು’ ಎಂದು ತಮ್ಮ ಸ್ವಾತಂತ್ರ್ಯದ ಹೋರಾಟದ ನೆನಪುಗಳನ್ನು ತೆರೆದಿಟ್ಟಿದ್ದರು ಚೌಡಸಂದ್ರದ ನಾರಾಯಣಪ್ಪ.
‘ರೈಲ್ವೆ ಹಳಿಗಳ ಬಳಿ ಇದ್ದ ಕಲ್ಲುಗಳನ್ನು ಕೆಲವರು ಪೊಲೀಸರೆಡೆಗೆ ತೂರತೊಡಗಿದರು. ‘ಫೈರ್’ ಅಂದರು ಪೊಲೀಸರು. ಒಮ್ಮೆಗೇ ಢಮಾರ್ ಢಮಾರ್ ಎಂಬ ದೊಡ್ಡದಾದ ಸದ್ದು. ಸಬ್‌ಇನ್ಸ್‌ಪೆಕ್ಟರ್ ಸಿಡಿಸಿದ ಗುಂಡಿಗೆ ಇಬ್ಬರು ಸತ್ತರು. ನಮ್ಮನ್ನೆಲ್ಲಾ ಹಿಡಿದು ಜೈಲಿಗೆ ಹಾಕಿದರು. ಆನಂತರ ತಿಳಿಯಿತು ಪೊಲೀಸ್ ಪೇದೆಗಳು ಆಕಾಶಕ್ಕೆ ಗುಂಡು ಹಾರಿಸಿದ್ದರಂತೆ. ಅವರಿಗೂ ಸ್ವಾತಂತ್ರ್ಯದ ಹಂಬಲವಂತೆ. ಇಲ್ಲದಿದ್ದರೆ ಈ ಕಥೆ ಹೇಳಲು ನಾನು ಇರುತ್ತಿರಲಿಲ್ಲ ಮತ್ತು ಆ ದಿನ ನೂರಾರು ಹೆಣಗಳು ಉರುಳುತ್ತಿದ್ದವು.
ಹದಿನೈದು ದಿನಗಳ ಕಾಲ ಶಿಡ್ಲಘಟ್ಟ ಜೈಲಿನಲ್ಲಿ ಮತ್ತು ಒಂದು ತಿಂಗಳು ಮೂರು ದಿನ ಚಿಕ್ಕಬಳ್ಳಾಪುರದ ಜೈಲಿನಲ್ಲಿ ನಮ್ಮನ್ನು ಇಟ್ಟಿದ್ದರು. ಆಗ ಬಂತು ಸ್ವಾತಂತ್ರ್ಯ. ಮಧ್ಯರಾತ್ರಿಯ ಸ್ವಾತಂತ್ರ್ಯ. ೨೮೦ ಜನ ಇದ್ದೆವು. ನಮ್ಮ ಊರುಗಳಿಗೆ ವಾಪಸ್ ಕಳಿಸಿದರು. ನಮ್ಮ ಹೋರಾಟ ಸಾರ್ಥಕವಾದ ಭಾವದಿಂದ ಊರಿಗೆ ಮರಳಿದೆವು. ಹೋರಾಟ ಪ್ರಾರಂಭಿಸಿದಾಗ ನಮಗೆ ಇಷ್ಟು ಬೇಗ ಸ್ವಾತಂತ್ರ್ಯ ಸಿಗುವುದೆಂಬ ಕಲ್ಪನೆಯಿರಲಿಲ್ಲ. ಆದರೆ ನಮ್ಮ ಹೋರಾಟಕ್ಕೆ ಸಿಕ್ಕ ಫಲ ತೃಪ್ತಿ ತಂದಿತು.
ರಾಜೀವ್ ಗಾಂಧಿ ಪ್ರಧಾನಿಯಾದಾಗ ನಮ್ಮ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರನ್ನು ದೆಹಲಿಗೆ ಕರೆಸಿ ಗೌರವಿಸಿದ್ದರು. ಮೇಲೂರು ಸುಬ್ಬಣ್ಣ, ಮಳ್ಳೂರು ಮುನಿನಾಗಪ್ಪ, ಭಕ್ತರಹಳ್ಳಿ ಬಚ್ಚೇಗೌಡ, ಬಚ್ಚಹಳ್ಳಿ ಚಂಗಲರಾವ್, ಚೌಡಸಂದ್ರ ರಾಮಪ್ಪ, ಮೇಲೂರು ಸಂಜೀವಪ್ಪ, ಹುಜಗೂರು ಹನುಮಂತರಾಯಪ್ಪ, ಮಳ್ಳೂರು ಮುನಿಯಪ್ಪ, ಅಪ್ಪೇಗೌಡನಹಳ್ಳಿ ಪಿಳ್ಳಪ್ಪ ಮುಂತಾದವರು ದೆಹಲಿಗೆ ಹೋಗಿದ್ದೆವು. ಅವರಲ್ಲಿ ಬಹುತೇಕ ಮಂದಿ ಈಗಿಲ್ಲ’ ಎಂದು ತಮ್ಮ ಗತಕಾಲದ ನೆನಪುಗಳನ್ನು ಹಂಚಿಕೊಂಡಿದ್ದರು.

ನಗರೇಶ್ವರ ಕಲ್ಯಾಣ ಮಂಟಪದಲ್ಲಿ ಗಣಪತಿಗೆ ‘ಗಂಧ ಪುಷ್ಪ’ ಕಾರ್ಯಕ್ರಮ

0

ಶಿಡ್ಲಘಟ್ಟದ ನಗರೇಶ್ವರ ಕಲ್ಯಾಣ ಮಂಟಪದಲ್ಲಿ 38ನೇ ವರ್ಷದ ವಿನಾಯಕ ಚೌತಿಯ ಪ್ರಯುಕ್ತ ಇರಿಸಿರುವ ದರ್ಬಾರ್‌ ಗಣಪತಿಗೆ ಮಂಗಳವಾರ ಅಯೋಧ್ಯಾನಗರ ಶಿವಾಚಾರ್ಯ ವೈಶ್ಯ ನಗರ್ತ ಯುವಕ ಮಂಡಳಿ ಹಾಗೂ ಮಹಿಳಾ ಮಂಡಳಿಯವರಿಂದ ಪ್ರಥಮ ಬಾರಿಗೆ ‘ಗಂಧ ಪುಷ್ಪ’ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ತ್ರಿವರ್ಣ ಬಣ್ಣದ ಹೂವಿನ ಅಲಂಕಾರ ವಿಶೇಷ ಆಕರ್ಷಣೆಯಾಗಿತ್ತು.

ದೇಶದಪೇಟೆ ವಿನಾಯಕ ಗೆಳೆಯರ ಬಳಗದ ವತಿಯಿಂದ ಗಣೇಶನಿಗೆ ಪುಷ್ಪಾಯಾಗಾರ್ಚನೆ ಕಾರ್ಯಕ್ರಮ

0

ಶಿಡ್ಲಘಟ್ಟದ ದೇಶದಪೇಟೆಯಲ್ಲಿ ವಿನಾಯಕ ಗೆಳೆಯರ ಬಳಗದ ವತಿಯಿಂದ ಹತ್ತನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಮಂಗಳವಾರ ವಿಶೇಷ ಪುಷ್ಪಾಯಾಗಾರ್ಚನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

0

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಬುಧವಾರ ಕೋಲಾರದ ಆರ್.ಎಲ್.ಜಾಲಪ್ಪ ಆಸ್ಪತ್ರೆಯ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು.
ಕಾರ್ಡಿಯಾಲಜಿ, ನ್ಯೂರಾಲಜಿ, ಹೃದಯ ತಪಾಸಣಾ ಯಂತ್ರಗಳು, ಹೃದಯ ರೋಗ ತಜ್ಞರು, ಸಕ್ಕರೆ ಖಾಯಿಲೆ ತಜ್ಞರು, ಮಕ್ಕಳ ತಜ್ಞರು, ಕಿವಿ ಮೂಗು ಗಂಟಲು ತಜ್ಞರು, ಸ್ತ್ರೀರೋಗ ತಜ್ಞರು, ಚರ್ಮ ರೋಗ ತಜ್ಞರು, ನರರೋಗ ತಜ್ಞರು, ದಂತ ವೈದ್ಯರು ಮುಂತಾದವರು ಆಗಮಿಸಿದ್ದರಿಂದ ಸುಮಾರು 800 ಕ್ಕೂ ಹೆಚ್ಚು ಮಂದಿ ಚಿಕಿತ್ಸೆಯನ್ನು ಪಡೆದರು. ಈ ಸಂದರ್ಭದಲ್ಲಿ ಉಚಿತವಾಗಿ ರೋಗಿಗಳಿಗೆ ಔಷಧಿಗಳನ್ನು ವಿತರಿಸಿದರು. ಆಗಮಿಸಿದ್ದ ರೋಗಿಗಳಿಗೆ ಊಟದ ವ್ಯವಸ್ಥೆಯನ್ನೂ ಮಾಡಲಾಗಿತ್ತು.
‘ನಿಯಮಿತವಾಗಿ ತೋರಿಸಿಕೊಂಡು ಚಿಕಿತ್ಸೆ ಪಡೆಯಬೇಕಾದ ಖಾಯಿಲೆಗಳಾದ ಕ್ಯಾನ್ಸರ್‌, ಮಾನಸಿಕ ರೋಗ ಮುಂತಾದವುಗಳಿಗೆ ಬೆಂಗಳೂರಿನಂಥ ನಗರಗಳಿಗೆ ಹೋಗಲಾಗದೇ ಹಲವಾರು ಮಂದಿ ಹಾಗೇ ಇದ್ದುಬಿಟ್ಟಿರುತ್ತಾರೆ. ಇನ್ನು ಕೆಲವು ರೋಗಗಳಾದ ಸಕ್ಕರೆ ಖಾಯಿಲೆ, ಬಿ.ಪಿ ಮುಂತಾದವುಗಳು ಇರುವುದೇ ತಿಳಿದಿರುವುದಿಲ್ಲ. ಬೃಹತ್‌ ಆರೋಗ್ಯ ತಪಾಸಣಾ ಶಿಬಿರವೆಂದರೆ ರೋಗಿಯ ಬಳಿ ಆಸ್ಪತ್ರೆಯನ್ನೇ ತರುವುದಾಗಿದೆ. ಇಲ್ಲಿ ಎಲ್ಲಾ ರೀತಿಯ ತಜ್ಞ ವೈದ್ಯರು ಮತ್ತು ಎಲ್ಲಾ ಉಪಕರಣಗಳನ್ನು ತಂದಿರುವುದರಿಂದ ತಾಲ್ಲೂಕಿನ ಜನರಿಗೆ ಉಪಯುಕ್ತವಾಗಲಿದೆ’ ಎಂದು ದೇವರಾಜ ಅರಸು ವೈದ್ಯಕೀಯ ಮಹಾವಿದ್ಯಾಲಯದ ಡಾ.ಬಿ.ಜಿ.ರಂಗನಾಥ್‌ ತಿಳಿಸಿದರು.
ಶಾಸಕ ಎಂ.ರಾಜಣ್ಣ, ಕೋಚಿಮುಲ್‌ ನಿರ್ದೇಶಕ ಬಂಕ್‌ ಮುನಿಯಪ್ಪ, ಡಾ.ಈಶ್ವರಯ್ಯ, ತಜ್ಞ ವೈದ್ಯರಾದ ಡಾ.ಮುನಿನಾರಾಯಣ, ಡಾ.ಹರೀಶ್‌, ಡಾ.ಸುಮಂತ್‌, ಡಾ.ಪ್ರಮೋದ್‌, ಡಾ.ಮುನಿಕೃಷ್ಣ, ಎನ್‌.ಅಕ್ಷಯ್‌ಕುಮಾರ್‌ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಶಿಡ್ಲಘಟ್ಟದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಬುಧವಾರ ಕೋಲಾರದ ಆರ್.ಎಲ್.ಜಾಲಪ್ಪ ಆಸ್ಪತ್ರೆಯ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು.
ಶಿಡ್ಲಘಟ್ಟದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಬುಧವಾರ ಕೋಲಾರದ ಆರ್.ಎಲ್.ಜಾಲಪ್ಪ ಆಸ್ಪತ್ರೆಯ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು.

ಗ್ರಾಮವನ್ನು ಪ್ರವೇಶಿಸದ ಹಾಲಿನ ಟ್ಯಾಂಕರ್‌

0

ತಾಲ್ಲೂಕಿನ ಕೊತ್ತನೂರು ಗ್ರಾಮಕ್ಕೆ ಅಂಡರ್‌ಪಾಸ್‌ ಮುಲಕ ಪ್ರವೇಶಿಸುವಾಗ ರೈಲ್ವೆ ಇಲಾಖೆಯಿಂದ ನಿರ್ಮಾಣ ಮಾಡಲಾಗಿರುವ ಕಬ್ಬಿಣದ ಗರ್ಡರ್‌ ಒಂದು ಬದಿಯಲ್ಲಿ ಮುರಿದು, ವಾಲಿಕೊಂಡ ಕಾರಣದಿಂದ ಹಾಲು ಸಾಗಿಸುವ ಟ್ಯಾಂಕರ್‌ ಗ್ರಾಮಕ್ಕೆ ಬರದಂತಾಗಿದೆ.
ಕೊತ್ತನೂರು ಗ್ರಾಮದ ಹಾಲು ಶಿಥಲೀಕರಣ ಕೇಂದ್ರಕ್ಕೆ ಕದಿರಿನಾಯಕನಹಳ್ಳಿ, ಪಿಂಡಿಪಾಪನಹಳ್ಳಿ, ಹಾಗೂ ಕೊತ್ತನೂರು ಗ್ರಾಮಗಳ ಹಾಲು ಉತ್ಪಾದಕರು ಪ್ರತಿದಿನ ಹಾಲನ್ನು ತಂದು ಕೊಡುತ್ತಾರೆ. ಪ್ರತಿದಿನ 3,600 ಲೀಟರ್‌ ಹಾಲು ಸಂಗ್ರಹವಾಗುವ ಈ ಕೇಂದ್ರದಿಂದ ಹಾಲನ್ನು ಟ್ಯಾಂಕರ್‌ ಮೂಲಕ ಕೋಲಾರಕ್ಕೆ ಹಾಲನ್ನು ಸಾಗಿಸಲಾಗುತ್ತದೆ.
ಶಿಡ್ಲಘಟ್ಟ ಚಿಂತಾಮಣಿ ರಸ್ತೆಯಿಂದ ಕೊತ್ತನೂರು ಗ್ರಾಮಕ್ಕೆ ಇರುವ ಸಂಪರ್ಕ ರಸ್ತೆಯ ನಡುವೆ ರೈಲ್ವೆ ಹಳಿಯಿರುವುದರಿಂದ ಇಲ್ಲಿ ಅಂಡರ್‌ಪಾಸ್‌ ನಿರ್ಮಿಸಲಾಗಿದೆ. ಅಂಡರ್‌ಪಾಸ್‌ ಅಳತೆಗಿಂತ ಎತ್ತರದ ವಾಹನಗಳು ಹೋಗದಂತೆ ಮೊದಲೇ ತಡೆಯಲು ಅಂಡರ್‌ಪಾಸ್‌ನ ಎರಡೂ ಬದಿಯಲ್ಲಿ ಕಬ್ಬಿಣದ ಗರ್ಡರ್‌ಗಳನ್ನು ನಿರ್ಮಿಸಿದ್ದಾರೆ. ಅದರಲ್ಲಿ ಒಂದು ಬದಿಯಲ್ಲಿ ಒಂದು ಕಬ್ಬಿಣದ ರಾಡ್‌ ಕಳಚಿರುವುದರಿಂದ ಒಂದು ಭಾಗ ವಾಲಿದೆ. ಇದರಿಂದಾಗಿ ಪ್ರತಿ ದಿನ ಗ್ರಾಮಕ್ಕೆ ಬರಬೇಕಾದ ಹಾಲು ಸಾಗಿಸುವ ಟ್ಯಾಂಕರ್‌ ಬರದಂತಾಗಿದೆ.
ಗ್ರಾಮಕ್ಕೆ ಬಸ್ ಸೌಲಭ್ಯವಿಲ್ಲದಿರುವುದರಿಂದ ಅಪರೂಪಕ್ಕೆ ಮದುವೆ ಮುಂತಾದ ಕಾರ್ಯಕ್ರಮಗಳಿಗೆಂದು ಬರಬೇಕಾದ ಬಸ್‌ ಕೂಡ ಈಗ ಪ್ರವೇಶಿಸದಂತಾಗಿದೆ. ಹಾಲು ಸಾಗಿಸುವ ಟ್ಯಾಂಕರ್‌ ಪಿಂಡಿಪಾಪನಹಳ್ಳಿ ಬಳಿ ರೈಲ್ವೆ ಹಳಿ ಪಕ್ಕದಲ್ಲಿ ಹಾದು ಜಮೀನೊಂದರ ಮೂಲಕ ಪ್ರತಿ ದಿನ ಕೊತ್ತನೂರಿಗೆ ಈಗ ಬರುತ್ತಿದ್ದು, ಬೆಳೆ ಇಡಲು ಹೊರಟಿರುವ ಜಮೀನಿನವರ ಪ್ರತಿರೋಧವನ್ನೂ ಎದುರಿಸುತ್ತಿದೆ.
‘ರೈಲ್ವೆ ಅಧಿಕಾರಿಗಳು ತಾವು ನಿರ್ಮಿಸಿರುವ ಅಂಡರ್‌ಪಾಸ್‌ ಮುಂತಾದವುಗಳ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡಬೇಕು. ನಮ್ಮ ಗ್ರಾಮಕ್ಕೆ ಪ್ರತಿದಿನ ಹಾಲು ಸಾಗಿಸುವ ಟ್ಯಾಂಕರ್‌ ಬರಲೇ ಬೇಕು. ಈ ಗರ್ಡರ್‌ ಸರಿಯಾಗಿ ನಿರ್ಮಿಸದ ಕಾರಣ ಮುರಿದು ಬಿದ್ದಿದ್ದು, ನಮಗೆಲ್ಲಾ ತೊಂದರೆಯಾಗಿದೆ. ಈಗೇನೋ ಮಳೆ ಸರಿಯಾಗಿ ಆಗದಿರುವುದರಿಂದ ಪಿಂಡಿಪಾಪನಹಳ್ಳಿಯವರ ಜಮೀನಿನಲ್ಲಿ ಟ್ಯಾಂಕರ್‌ ಬರುತ್ತಿದೆ. ಅವರು ಈಗ ಬೆಳೆ ಇಡಲು ಹೊರಟಿದ್ದಾರೆ. ಇದಕ್ಕೆ ಪರಿಹಾರವಾಗಿ ರೈಲ್ವೆ ಇಲಾಖೆಯವರು ಶೀಘ್ರವಾಗಿ ಗರ್ಡರ್‌ ಸರಿಪಡಿಸಿ ನಮಗಾಗಿರುವ ತೊಂದರೆಯನ್ನು ನಿವಾರಿಸಬೇಕು’ ಎಂದು ಕೊತ್ತನೂರು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಆನೂರು ಹುಣಸೇನಹಳ್ಳಿ ಗ್ರಾಮದಲ್ಲಿ ಏಳನೇ ಸುತ್ತಿನ ಕಾಲುಬಾಯಿ ಜ್ವರ ಲಸಿಕಾ ಕಾರ್ಯಕ್ರಮ

0

ಗ್ರಾಮೀಣ ಭಾಗದ ಆರ್ಥಿಕ ಪುನಶ್ಚೇತನಕ್ಕೆ ಕಾರಣವಾದ ಜಾನುವಾರಗಳಿಗೆ ಯಾವುದೇ ತರಹದ ಕಾಯಿಲೆ ಕಂಡುಬಂದಲ್ಲಿ ಕೂಡಲೇ ಪಶುಪಾಲನಾ ಇಲಾಖೆಯ ವೈದ್ಯರಿಗೆ ವರದಿ ಮಾಡಿ ರೋಗ ನಿರೋಧಕ ಲಸಿಕೆ ಹಾಕಿಸುವಂತೆ ಶಾಸಕ ಎಂ.ರಾಜಣ್ಣ ರೈತರಲ್ಲಿ ಮನವಿ ಮಾಡಿದರು.
ತಾಲ್ಲೂಕಿನ ಆನೂರು ಹುಣಸೇನಹಳ್ಳಿ ಗ್ರಾಮದಲ್ಲಿ ಸೋಮವಾರ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಹಾಗೂ ಕೋಲಾರ- ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಏಳನೇ ಸುತ್ತಿನ ಕಾಲುಬಾಯಿ ಜ್ವರ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕಾಲುಬಾಯಿ ಜ್ವರವು ಮತ್ತೊಂದು ರೋಗಗ್ರಸ್ಥ ರಾಸುವಿನ ನೇರ ಸಂಪರ್ಕದಿಂದ ಅಥವ ಗಾಳಿಯಿಂದ ಸಾಂಕ್ರಾಮಿಕವಾಗಿ ಹರಡುತ್ತದೆ. ಈ ರೋಗದ ಲಕ್ಷಣಗಳಾದ ಅತಿಯಾದ ಜ್ವರ, ಬಾಯಿಯಲ್ಲಿ ನೀರ ಗುಳ್ಳೆ ಜೊಲ್ಲು ಸುರಿಸುವುದು, ಕಾಲು ಕುಂಟುವುದು ಸೇರಿದಂತೆ ಇನ್ನಿತರ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ಪಶುವೈದ್ಯರಿಗೆ ಮಾಹಿತಿ ನೀಡಿ ರಾಸುವಿಗೆ ಲಸಿಕೆ ಹಾಕಿಸುವುದರೊಂದಿಗೆ ತಪಾಸಣೆಗೊಳಪಡಿಸಬೇಕು ಎಂದರು.
ಬಯಲುಸೀಮೆ ಪ್ರದೇಶವಾದ ಕೋಲಾರ ಚಿಕ್ಕಬಳ್ಳಾಫುರ ಜಿಲ್ಲೆಗಳಲ್ಲಿ ಸಕಾಲಕ್ಕೆ ಮಳೆಗಳಾಗದೇ ಅಂತರ್ಜಲ ಪಾತಾಳಕ್ಕೆ ಇಳಿದಿದ್ದು ೧೨೦೦ ಅಡಿ ಕೊರೆದರೂ ನೀರು ಸಿಗುತ್ತಿಲ್ಲವಾದರೂ ಇಲ್ಲಿನ ಜನರ ಜೀವನಾಡಿಯಾಗಿರುವ ರೇಷ್ಮೆ ಹಾಗೂ ಹೈನುಗಾರಿಕೆಯಲ್ಲಿ ಈ ಭಾಗದ ಜನ ಖ್ಯಾತಿ ಹೊಂದಿದ್ದಾರೆ. ಈ ಭಾಗದ ಜನರು ಹಾಲು ಉತ್ಪಾದನೆಯಲ್ಲಿಯೇ ಜೀವನ ನಡೆಸುತ್ತಿದ್ದು ಅಂತಹ ಹಾಲು ನೀಡುವ ಮೂಕ ರಾಸುಗಳ ಆರೋಗ್ಯದ ಕಡೆಗೂ ರೈತರು ಹೆಚ್ಚಿನ ಗಮನವಹಿಸಬೇಕು ಎಂದರು.
ಕೋಲಾರ- ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ನಿರ್ದೇಶಕ ಬಂಕ್ ಮುನಿಯಪ್ಪ ಮಾತನಾಡಿ ಕಳೆದ ವರ್ಷ ಕಾಲುಬಾಯಿ ಜ್ವರದಿಂದ ತಾಲ್ಲೂಕಿನ ಸುಮಾರು ೨೭೦ ರಾಸುಗಳು ಮೃತಪಟ್ಟಿದ್ದು ಅತಿ ಚಿಕ್ಕ ಗ್ರಾಮಗಳಲ್ಲೊಂದಾದ ಆನೂರು ಹುಣಸೇನಹಳ್ಳಿ ಗ್ರಾಮದಲ್ಲಿಯೂ ಹಲವು ರಾಸುಗಳು ಮೃತಪಟ್ಟಿದ್ದವು. ಇಂತಹ ಪುಟ್ಟ ಗ್ರಾಮದ ಶೇಕಡಾ ೯೦ ರಷ್ಟು ಜನ ಹಾಲಿನ ಉತ್ಪಾದನೆಯಲ್ಲಿಯೇ ಜೀವನ ನಡೆಸುತ್ತಿದ್ದು ಪ್ರತಿನಿತ್ಯ ೮೫೦ ರಿಂದ ೯೦೦ ಲೀ ಹಾಲಿನ ಉತ್ಪಾದನೆ ಮಾಡುತ್ತಿದೆ. ರಾಸುಗಳಿಗೆ ಯಾವುದಾದರೂ ಕಾಯಿಲೆ ಬಂದು ಮೃತಪಟ್ಟರೆ ಇಲ್ಲಿನ ಜನರ ಜೀವನ ನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತದೆಯಾದ್ದರಿಂದ ರಾಸುಗಳಿಗೆ ಸಕಾಲದಲ್ಲಿ ರೋಗ ನಿಯಂತ್ರಕ ಲಸಿಕೆ ಹಾಕಿಸುವುದರೊಂದಿಗೆ ರೋಗ ಹರಡದಂತೆ ನಿಯಂತ್ರಿಸಲು ರೈತ ಸಮುದಾಯ ತಮ್ಮ ಮನೆಯಲ್ಲಿನ ದನ, ಕರುಗಳಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸುವುದು ಮತ್ತು ಪ್ರತಿಯೊಂದು ರಾಸುವಿಗೂ ವಿಮೆ ಮಾಡಿಸುವಂತೆ ಮನವಿ ಮಾಡಿದರು.
ಕಾಲುಬಾಯಿ ಜ್ವರ ಲಸಿಕಾ ಕಾರ್ಯಕ್ರಮದಡಿ ತಾಲ್ಲೂಕಿನಾಧ್ಯಂತ ೧೫ ದಿನಗಳ ಕಾಲ ರಾಸುಗಳಿಗೆ ಉಚಿತ ಲಸಿಕೆ ನೀಡಲು ೨೦ ವೈದ್ಯರ ತಂಡ ಕರ್ತವ್ಯ ನಿರ್ವಹಿಸುತ್ತಿದ್ದು ತಾಲ್ಲೂಕಿನ ಎಲ್ಲಾ ೫೨ ಸಾವಿರ ರಾಸುಗಳಿಗೂ ಕಾಲುಬಾಯಿ ಜ್ವರ ಲಸಿಕೆ ಹಾಕಲು ರೈತರು ಸಹಕರಿಸಬೇಕು ಎಂದು ಪಶುವೈದ್ಯ ಆಸ್ಪತ್ರೆಯ ಸಹಾಯಕ ನಿರ್ದೇಶಕ ಡಾ.ಮುನಿನಾರಾಯಣರೆಡ್ಡಿ ಹೇಳಿದರು.
ಕೋಚಿಮುಲ್ ಹಾಲು ಒಕ್ಕೂಟದ ಉಪವ್ಯವಸ್ಥಾಪಕ ಡಾ.ಈಶ್ವರಯ್ಯ ಮಾತನಾಡಿ ಕಾಯಿಲೆ ಬರುವ ಮುಂಚೆಯೇ ರಾಸುಗಳಿಗೆ ಲಸಿಕೆ ಹಾಕಿಸಬೇಕೆಂದರು. ಹೀಗೆ ಲಸಿಕೆ ಹಾಕಿಸುವುದರಿಂದ ರಾಸುವೂ ಆರೋಗ್ಯವಾಗಿರುವುದರೊಂದಿಗೆ ಹಾಲಿನ ಗುಣಮಟ್ಟವೂ ಉತ್ತಮವಾಗಿರುತ್ತದೆ. ಶಿಡ್ಲಘಟ್ಟ ತಾಲ್ಲೂಕಿನ ಹಾಲಿನ ಗುಣಮಟ್ಟ ಜಿಲ್ಲೆಯಲ್ಲಿಯೇ ಎರಡನೇ ಸ್ಥಾನದಲ್ಲಿದೆ ಹಾಗಾಗಿ ಹಾಲಿನ ಗುಣಮಟ್ಟ ಇನ್ನಷ್ಟು ಕಾಪಾಡಿಕೊಳ್ಳುವುದರೊಂದಿಗೆ ಜಿಲ್ಲೆಗೆ ಪ್ರಥಮ ಸ್ಥಾನಕ್ಕೆ ಬರಬೇಕು. ಆದ್ದರಿಂದ ತಾಲೂಕಿನ ಎಲ್ಲ ರೈತರು ತಮ್ಮ ತಮ್ಮ ರಾಸುಗಳಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸಿ ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಬಿ.ಕೆ.ಶಿವರಾಂ, ತಾಲ್ಲೂಕು ಪಂಚಾಯಿತಿ ಇಓ ಗಣಪತಿಸಾಕ್ರೆ, ಪಶುವೈದ್ಯ ಆಸ್ಪತ್ರೆಯ ಸಹಾಯಕ ನಿರ್ದೇಶಕ ಡಾ.ಮುನಿನಾರಾಯಣರೆಡ್ಡಿ, ಕೋಚಿಮುಲ್ ಹಾಲು ಒಕ್ಕೂಟದ ಉಪವ್ಯವಸ್ಥಾಪಕ ಡಾ.ಈಶ್ವರಯ್ಯ, ಗೋಪಾಲ್ ರಾವ್ ಮತ್ತಿತರರು ಹಾಜರಿದ್ದರು.

ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಮತ್ತು ಸಹಕಾರ ಬ್ಯಾಂಕ್‌ ಮುಂದೆ ರೈತರ ಪ್ರತಿಭಟನೆ

0

ರೈತರು ಸಕಾಲದಲ್ಲಿ ಸಾಲವನ್ನು ಮರುಪಾವತಿಸಿದ್ದರೂ ಪಾವತಿಸಿಲ್ಲವೆಂದು ಹೇಳಿ ಮರುಸಾಲ ನೀಡುತ್ತಿಲ್ಲವೆಂದು ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಮತ್ತು ಸಹಕಾರ ಬ್ಯಾಂಕ್‌ ಮುಂದೆ ಸೋಮವಾರ ರೈತರು ಪ್ರತಿಭಟಿಸಿದರು.
ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಮತ್ತು ಸಹಕಾರ ಬ್ಯಾಂಕ್‌ ನಲ್ಲಿ 2012 ರಲ್ಲಿ ಪಡೆದಿದ್ದ ಸಾಲವನ್ನು ರೈತರು ಸಕಾಲದಲ್ಲಿ ಪಾವತಿಸಿದ್ದಾರೆ. ಅದಕ್ಕೆ ದಾಖಲೆಯಾಗಿ ರಸೀದಿಗಳು ಸಹ ಇವೆ. ಬ್ಯಾಂಕಿನಲ್ಲಿ ಸರಿಯಾಗಿ ದಾಖಲಾತಿಗಳನ್ನಿಟ್ಟುಕೊಳ್ಳದೆ, ರೆಮಿಟೆನ್ಸ್‌ ಮಾಡಿಕೊಳ್ಳದೆ ಹಣ ಕಟ್ಟಿಲ್ಲವೆನ್ನುತ್ತಿದ್ದಾರೆ. ಬ್ಯಾಂಕಿನಲ್ಲಿ ನಡೆದ ಅವ್ಯವಹಾರಕ್ಕೆ ರೈತರನ್ನು ಹೊಣೆ ಮಾಡುತ್ತಿದ್ದಾರೆ. ಸಹಕಾರ ಬ್ಯಾಂಕ್‌ ನವರ ಬೇಜವಾಬ್ದಾರಿತನದಿಂದ ಸರ್ಕಾರದಿಂದ ಬರಬೇಕಾಗಿದ್ದ 25 ಸಾವಿರ ರೂಗಳ ಸಹಾಯಧನ ರೈತರಿಗೆ ಸಿಗದಂತಾಗಿದೆ. ಸರ್ಕಾರ ಮನ್ನಾ ಮಾಡಿರುವ ಹಣವನ್ನೂ ಕಟ್ಟುವಂತೆ ರೈತರಿಗೆ ಬ್ಯಾಂಕ್‌ನವರು ನೋಟಿಸ್‌ ನೀಡಿದ್ದಾರೆ. ಬರಗಾಲದ ಈಗಿನ ಪರಿಸ್ಥಿತಿಯಲ್ಲಿ ರೈತರಿಗೆ ಸಾಲ ಕೂಡ ನೀಡದಿರುವುದು ದುರದೃಷ್ಟಕರ. ಸಾಲ ವಾಪಸ್‌ ಮಾಡಿರುವ ರೈತರಿಗೆ ಕ್ಲಿಯರೆನ್ಸ್‌ ಸರ್ಟಿಫಿಕೇಟ್‌ ಕೊಡಬೇಕು. ಸಕಾಲದಲ್ಲಿ ಸಾಲ ಮರುಪಾವತಿಸಿರುವ ರೈತರಿಗೂ ಮರು ಸಾಲ ನೀಡಬೇಕು ಎಂಬ ಬೇಡಿಕೆಯೊಂದಿಗೆ ಪ್ರತಿಭಟಿಸಿರುವುದಾಗಿ ರೈತ ಸಂಘದ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ತಿಳಿಸಿದ್ದಾರೆ.
ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಮತ್ತು ಸಹಕಾರ ಬ್ಯಾಂಕ್‌ ಅಧ್ಯಕ್ಷ ರಾಮಚಂದ್ರ ಮಾತನಾಡಿ, ‘ಸಹಕಾರ ಬ್ಯಾಂಕ್‌ಗೆ ಕಟ್ಟಿರುವ ಹಣದ ಲೆಕ್ಕವಿದೆ. ಯಾವುದೇ ಅವ್ಯವಹಾರ ನಡೆದಿಲ್ಲ. ಐವತ್ತು ಸಾವಿರ ಹಣ ಸಾಲ ಪಡೆದ ರೈತರು 25 ಸಾವಿರ ರೂಗಳನ್ನು ಕಟ್ಟಿದ್ದಾರೆ. ಕಳೆದ ವರ್ಷ ಸರ್ಕಾರ ಸಾಲ ಮನ್ನಾ ಮಾಡಿದ ಸಂದರ್ಭದಲ್ಲಿ ಅವರು ಹಣ ಕಟ್ಟಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ನಮ್ಮ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಚರ್ಚಿಸಿ ಪರಿಶೀಲಿಸಲಾಗುವುದು. ಬಾಕಿ ಹಣವನ್ನು ಕಟ್ಟಬೇಕೆಂದು ಈಗಾಗಲೇ ರೈತರಿಗೆ ನೋಟಿಸ್‌ ನೀಡಿದ್ದೇವೆ. ಈಗಿನ ಸರ್ಕಾರ ಬಡ್ಡಿ ರಹಿತ ಸಾಲವನ್ನು ನೀಡುವುದರಿಂದ, ನೀವು ಬಾಕಿ ಹಣವನ್ನು ಕಟ್ಟಿ ಅದರಿಂದ ನಾವು ಜಿಲ್ಲಾ ಸಹಕಾರ ಬ್ಯಾಂಕಿನಿಂದ ಹಣವನ್ನು ತರಲು ಸಾಧ್ಯವೆಂದು ಹೇಳಿದ್ದೇವೆ. ಸಹಕಾರಿ ಬ್ಯಾಂಕ್‌ ಉಳಿಸಿ ಬೆಳೆಸುವ ಕರ್ತವ್ಯ ರೈತರು ಸೇರಿದಂತೆ ನಮ್ಮೆಲ್ಲರದ್ದೂ ಇದೆ. ರೈತರ ಮನವೊಲಿಸುತ್ತೇವೆ’ ಎಂದು ಹೇಳಿದರು.
ರೈತಸಂಘ ಹಾಗೂ ಹಸಿರುಸೇನೆಯ ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್‌, ಮಳಮಾಚನಹಳ್ಳಿ ದೇವರಾಜ್‌, ಚನ್ನರಾಯಪ್ಪ, ಮುನಿನಂಜಪ್ಪ, ಕೃಷ್ಣಪ್ಪ, ಅಬ್ಲೂಡು ಆರ್‌.ದೇವರಾಜ್‌ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ತಾಲ್ಲೂಕಿನಾದ್ಯಂತ ಶ್ರದ್ಧಾ ಭಕ್ತಿಯಿಂದ ಗಣೇಶನ ಹಬ್ಬ ಆಚರಣೆ

0

ತಾಲ್ಲೂಕಿನಾದ್ಯಂತ ಗಣೇಶನ ಹಬ್ಬವನ್ನು ವಿಶೇಷ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಮನೆಗಳಲ್ಲಿ ಗಣೇಶ ಮೂರ್ತಿಯನ್ನಿಟ್ಟು ಪೂಜಿಸುವುದಲ್ಲದೆ, ಪ್ರತಿಯೊಂದು ಹಳ್ಳಿಯಲ್ಲಿ, ವಿವಿಧ ಬೀದಿಗಳಲ್ಲಿ, ದೇವಾಲಯಗಳಲ್ಲಿ, ಸಂಘಟನೆಗಳ ಮೂಲಕ, ಸಾರ್ವಜನಿಕವಾಗಿ ಗಣೇಶ ಮೂರ್ತಿಗಳನ್ನಿಟ್ಟು ಪೂಜೆಯನ್ನು ಸಲ್ಲಿಸಲಾಯಿತು. ಕೆಲವೆಡೆ ಪರಿಸರ ಪ್ರೀತಿಯನ್ನು ಮೆರೆದು ಬಣ್ಣಗಳಿಲ್ಲದ ಪರಿಸರ ಗಣಪನನ್ನು ಪ್ರತಿಷ್ಠಾಪಿಸಿದ್ದರೆ, ಕೆಲವರು ಐದು ಅಡಿಗೂ ಎತ್ತರದ ಗಣಪನನ್ನು ಪ್ರತಿಷ್ಠಾಪಿಸಿದ್ದರು. ನಂದಿವಾಹನ ಗಣಪತಿ, ಕೊಳಲು ಊದುವ ಗಣಪತಿ, ಕೈಲಾಸದಲ್ಲಿರುವ ಗಣಪತಿ ಹೀಗೆ ನಾನಾ ರೀತಿಯ ಗಣಪನ ಮೂರ್ತಿಗಳನ್ನು ವಿಶೇಷವಾಗಿ ಮಾಡಿಸಿಕೊಂಡಿದ್ದರು.
ತಾಲ್ಲೂಕಿನ ಅಪ್ಪೇಗೌಡನಹಳ್ಳಿಯಲ್ಲಿ ಪರಿಸರ ಪ್ರೀತಿಯನ್ನು ಮೆರೆದಿರುವ ಗ್ರಾಮಸ್ಥರು ರಾಸಾಯನಿಕ ಬಣ್ಣಗಳನ್ನು ಬಳಸದಿರುವ ಮಣ್ಣಿನ ಗಣಪನನ್ನು ಪೂಜಿಸಿದ್ದರೆ, ವೀರಾಪುರ ಗ್ರಾಮದ ವರಸಿದ್ಧಿ ಗಣೇಶನಿಗೆ ಬೆಣ್ಣೆಯ ಅಲಂಕಾರ ಮತ್ತು ಕರ್ಜೀಕಾಯಿ ಹಾರವನ್ನು ಹಾಕಿ ಪೂಜಿಸಲಾಯಿತು. ಕೆ.ಮುತ್ತುಗದಹಳ್ಳಿಯಲ್ಲಿ ಆರು ಅಡಿ ಎತ್ತರದ ಗಣೇಶನನ್ನು, ಪಟ್ಟಣದ ದೊಂತಿ ಛತ್ರದಲ್ಲಿ ಕೊಳಲೂದುವ ಗಣೇಶ, ನಗರೇಶ್ವರ ಕಲ್ಯಾಣ ಮಂಟಪದಲ್ಲಿ ಸಿಂಹಾಸನಾರೂಢ ಗಣೇಶ, ಗೌಡರಬೀದಿಯ ಕೈಲಾಸ ಗಣಪತಿ, ಮಳ್ಳೂರು ಸಾಯಿಬಾಬಾ ದೇವಾಲಯದ ಅಲಂಕೃತ ಗಣಪತಿ, ದೇಶದಪೇಟೆಯ ಗೌರಿಗಣಪತಿ, ಕೆಕೆ ಪೇಟೆಯ ಶೇಷಶಯನ ಗಣಪತಿ, ಉಲ್ಲೂರುಪೇಟೆ ವೀರಾಂಜನೇಯಸ್ವಾಮಿ ದೇವಾಲಯದ ದೊಡ್ಡಗಣಪ, ದೇಶದಪೇಟೆಯ ಆಂಜನೇಯಸ್ವರೂಪಿಯಾಗಿ ರಾಮ ಲಕ್ಷ್ಮಣರನ್ನು ಹೊತ್ತ ಗಣಪ, ಅಗ್ರಹಾರಬೀದಿಯ ಪೇಟ ಕಟ್ಟಿರುವ ಗಣೇಶ ಹೀಗೆ ನಾನಾ ಗಣಪತಿಗಳು ತಾಲ್ಲೂಕಿನಾದ್ಯಂತ ಅವತರಿಸಿದ್ದಾರೆ.
ಎಲ್ಲೆಡೆ ವಿಶೇಷ ಪೂಜೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ವಿದ್ಯುತ್‌ ದೀಪಗಳ ಅಲಂಕಾರಗಳು, ಪ್ರಸಾದ ವಿತರಣೆಗಳು ನಡೆಯುತ್ತಿವೆ. ಬಹಳಷ್ಟು ಕಡೆ ಯುವಕರು, ಮಕ್ಕಳು ಹಣ ಸಂಗ್ರಹಿಸಿ ಕೂಡಿಟ್ಟು ತಂದು ಸ್ಥಾಪಿಸಿರುವ ಗಣೇಶನೊಂದಿಗೆ ತಮ್ಮ ಪ್ರತಿಭೆಯನ್ನೂ ಅನಾವರಣಗೊಳಿಸುತ್ತಿದ್ದಾರೆ.

ದಿಬ್ಬೂರಹಳ್ಳಿ ಜನಸ್ಪಂದನಾ ಕಾರ್ಯಕ್ರಮದಲ್ಲಿ ಆದೇಶಪತ್ರಗಳ ವಿತರಣೆ

0

ಸರ್ಕಾರದಿಂದ ಬರುವಂತಹ ಯಾವುದೇ ಯೋಜನೆಗಳನ್ನು ಪಡೆಯಲು ಸಾರ್ವಜನಿಕರು ಮಧ್ಯವರ್ತಿಗಳ ಮೊರೆಹೋಗಬಾರದು ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ತಾಲ್ಲೂಕಿನ ದಿಬ್ಬೂರಹಳ್ಳಿ ಗ್ರಾಮದಲ್ಲಿ ಶನಿವಾರ ತಾಲ್ಲೂಕು ಆಡಳಿತ ವತಿಯಿಂದ ಆಯೋಜನೆ ಮಾಡಲಾಗಿದ್ದ ಜನಸ್ಪಂದನಾ ಕಾರ್ಯಕ್ರಮದಲ್ಲಿ ಸಂಧ್ಯಾಸುರಕ್ಷಾ, ವಿಧವಾ ವೇತನ, ವೃದ್ಧಾಪ್ಯವೇತನ, ಮನಸ್ವಿನಿ, ಅಂಗವಿಕಲರ ವೇತನ ಸೇರಿದಂತೆ 250 ಆದೇಶಪತ್ರಗಳನ್ನು ವಿತರಿಸಿ ಅವರು ಮಾತನಾಡಿದರು.
ಜನಸ್ಪಂದನಾ ಕಾರ್ಯಕ್ರಮಗಳ ಮುಖಾಂತರ ಎಲ್ಲಾ ಸೌಲಭ್ಯಗಳು ಫಲಾನುಭವಿಗಳಿಗೆ ಲಭಿಸಬೇಕು. ಪ್ರತಿಯೊಂದು ಇಲಾಖೆಯಿಂದ ಸಿಗುವಂತಹ ಸೌಲಭ್ಯಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ನೀಡುವಂತಹ ಮಾಹಿತಿಯನ್ನು ಸಂಗ್ರಹಿಸಿಕೊಂಡು ಸರ್ಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಹೇಳಿದರು.
ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ ಮಾತನಾಡಿ, ಸೆಪ್ಟೆಂಬರ್‌ ಒಂದರಿಂದ ಖಾತಾ ಮತ್ತು ಪೋಡಿ ಆಂದೋಲನ ತಾಲ್ಲೂಕು ಕಚೇರಿಯಲ್ಲಿ ಏರ್ಪಡಿಸಲಿದ್ದು, ಎಲ್ಲಾ ನಾಗರಿಕರು ಕಾರ್ಯಕ್ರಮವನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ಪಶು ವೈಧ್ಯಕೀಯ ಇಲಾಖೆಯ ಸಹಾಯಕ ನಿರ್ದೆಶಕ ಮುನಿನಾರಾಯಣರೆಡ್ಡಿ ಮಾತನಾಡಿ, ರೈತರು ಇಲಾಖೆಯ ಮುಖಾಂತರ ಲಭ್ಯವಿರುವ ಜಂತು ನಾಶಕಗಳನ್ನು ಮೂರು ತಿಂಗಳಿಗೊಮ್ಮೆ ಹಾಕಿಸಬೇಕು. ಕಾಲುಬಾಯಿಜ್ವರದ ಲಸಿಕೆಯು ಲಭ್ಯವಿದೆ ಎಂದು ಇಲಾಖೆಯಿಂದ ಲಭ್ಯವಿರುವ ಯೋಜನೆಗಳ ವಿವರವನ್ನು ನೀಡಿದರು. ರೇಷ್ಮೆ ವಿಸ್ತರಣಾಧಿಕಾರಿ ನಾರಾಯಣಸ್ವಾಮಿ, ಕೃಷಿ ಸಹಾಯಕ ನಿರ್ದೇಶಕ ರಾಘವೇಂದ್ರ ಹಾಗೂ ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ಕೀರ್ತಿ ತಮ್ಮ ಇಲಾಖೆಗಳಿಂದ ನೀಡಲಾಗುವ ಸವಲತ್ತುಗಳ ಬಗ್ಗೆ ಹೇಳಿದರು.
ದಿಬ್ಬೂರಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಧನಂಜಯರೆಡ್ಡಿ, ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ಶಿವಾರೆಡ್ಡಿ, ಮಾಜಿ ನಿರ್ದೇಶಕ ರಾಮಲಿಂಗಾರೆಡ್ಡಿ, ಶಿವಣ್ಣ, ಗ್ರಾಮ ಪಂಚಾಯತಿ ಸದಸ್ಯರಾದ ಮಂಜುನಾಥ್, ಗೊರ್ಲಪ್ಪ, ವಿಜಯಕುಮಾರ್‌, ವೇಣುಗೋಪಾಲ್‌, ಸರ್ಕಲ್‌ ಇನ್ಸ್‌ಪೆಕ್ಟರ್‌ ಶ್ರೀನಿವಾಸಮೂರ್ತಿ, ಉಪತಹಶೀಲ್ದಾರ್ ಲಕ್ಷ್ಮೀನಾರಾಯಣ, ರಾಜಸ್ವ ನಿರೀಕ್ಷಕ ಮುನಿನಾರಾಯಣಪ್ಪ, ರಾಮಚಂದ್ರ ಮುಂತಾದವರು ಹಾಜರಿದ್ದರು.

ಹಾಳು ಬಾವಿಯಲ್ಲಿ ಬಿದ್ದಿದ್ದ ಕಾಡುಮೊಲದ ರಕ್ಷಣೆ

0

ತಾಲ್ಲೂಕಿನ ಕೊತ್ತನೂರು ಗ್ರಾಮದಲ್ಲಿ ಚನ್ನರಾಯಪ್ಪ ಅವರ ತೋಟದಲ್ಲಿರುವ ಹಾಳು ಬಾವಿಯಲ್ಲಿ ಬಿದ್ದಿದ್ದ ಕಾಡುಮೊಲವನ್ನು ಸ್ನೇಕ್ ನಾಗರಾಜ್ ಶನಿವಾರ ರಕ್ಷಿಸಿದ್ದಾರೆ.
ನಾಯಿಗಳು ಅಟ್ಟಿಸಿಕೊಂಡು ಬಂದಾಗ ಕತ್ತಲ್ಲಿ ದಿಕ್ಕುತಪ್ಪಿ ಕಾಡುಮೊಲ ಸುಮಾರು 40 ರಿಂದ 50 ಅಡಿ ಆಳವಿರುವ ಹಾಳುಬಾವಿಯಲ್ಲಿ ಶುಕ್ರವಾರ ರಾತ್ರಿ ಬಿದ್ದಿದೆ. ನಾಯಿಗಳು ಬಾವಿಯ ಬಳಿ ಬೊಗಳುವುದನ್ನು ಕಂಡು ಅದೇ ಗ್ರಾಮದ ಕೇಶವ ಹೋಗಿ ನೋಡಿದ್ದಾರೆ. ಕತ್ತಲಲ್ಲಿ ಯಾವ ಪ್ರಾಣಿ ಎಂದು ತಿಳಿಯದೆ ಸ್ನೇಕ್‌ ನಾಗರಾಜ್‌ ಅವರಿಗೆ ತಿಳಿಸಿದ್ದಾರೆ.
ಬೆಳಿಗ್ಗೆ ಬಂದು ನೋಡಿದ ನಾಗರಾಜ್‌ ಬಾವಿಯಲ್ಲಿ ಬಿದ್ದಿರುವ ಕಾಡುಮೊಲವನ್ನು ಕಂಡು, ಹಗ್ಗ ಮತ್ತು ಚೀಲದೊಂದಿಗೆ ಬಾವಿಯಲ್ಲಿ ಇಳಿದು ಚಾಕಚಕ್ಯತೆಯಿಂದ ಮೊಲವನ್ನು ಚೀಲದಲ್ಲಿ ಹಾಕಿಕೊಂಡು ಮೇಲೆ ತಂದು ರಕ್ಷಿಸಿದ್ದಾರೆ.
‘ಕಾಡುಮೊಲ ಬಲು ಚುರುಕು ಪ್ರಾಣಿ. ಹಾಳು ಬಾವಿಯಲ್ಲಿ ಬಿದ್ದಿರುವ ಅದು ಆಹಾರವಿಲ್ಲದೆ ಸಾಯುತ್ತಿತ್ತು. ಅಥವಾ ಯಾರಾದರೂ ಕೊಂದು ತಿನ್ನುತ್ತಿದ್ದರು. ಅದಕ್ಕಾಗಿ ಬಾವಿಯಲ್ಲಿ ಇಳಿದು ಕಾಡುಮೊಲವನ್ನು ರಕ್ಷಿಸಿದೆ. ಅದರ ಕಿವಿಯಲ್ಲಿ ಪಿಡುಗ ಎಂದು ಕರೆಯುವ ರಕ್ತ ಹೀರುವ ಹುಳುಗಳು ಅದರ ರಕ್ತ ಹೀರುತ್ತಿದ್ದವು. ಆ ಹುಳುಗಳನ್ನು ಕಿತ್ತು ಬಿಸಾಡಿ ಅದನ್ನು ಸ್ವತಂತ್ರವಾಗಿ ಹೋಗಲು ಬಿಟ್ಟೆ’ ಎಂದು ಮೊಲವನ್ನು ರಕ್ಷಿಸಿದ ಸ್ನೇಕ್‌ ನಾಗರಾಜ್‌ ತಿಳಿಸಿದರು.

ಮಲ್ಲೇನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎಚ್‌.ಎನ್‌.ಪ್ರಕಾಶ್‌ ಆಯ್ಕೆ

0

ಶಿಡ್ಲಘಟ್ಟ ತಾಲ್ಲೂಕಿನ ಮಲ್ಲೇನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎಚ್‌.ಎನ್‌.ಪ್ರಕಾಶ್‌ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಮುಖಂಡರಾದ ಮೇಲೂರು ರವಿಕುಮಾರ್‌, ಎನ್‌.ಸಿ.ಶ್ರೀನಿವಾಸಗೌಡ, ತಾದೂರು ರಮೇಶ್‌, ಹೊಸಹಳ್ಳಿ ಮಂಜುನಾಥ್‌, ಚಂದ್ರೇಗೌಡ, ಕೃಷ್ಣಪ್ಪ ಹಾಜರಿದ್ದರು.

ಗ್ರಾಮ ಪಂಚಾಯತಿ ಗ್ರಂಥಪಾಲಕರು ತೆಗೆದುಕೊಂಡು ಹೋಗದೆ ಗೆದ್ದಲು ಪಾಲಾಗುತ್ತಿರುವ ಪುಸ್ತಕಗಳು

0

ಲಕ್ಷಾಂತರ ರೂಪಾಯಿಗಳ ಬೆಲೆ ಬಾಳುವ ಸಾವಿರಾರು ಪುಸ್ತಕಗಳು ಪಟ್ಟಣದ ಸಾರ್ವಜನಿಕ ಗ್ರಂಥಾಲಯದಲ್ಲಿ ಗೆದ್ದಲು ಹಿಡಿಯುತ್ತಿವೆ.
ತಾಲ್ಲೂಕಿನಾದ್ಯಂತ ಗ್ರಾಮ ಪಂಚಾಯತಿಗಳ ಗ್ರಂಥಾಲಯಗಳಿಗೆ ವಿತರಿಸಲೆಂದು ಸುಮಾರು 45 ಸಾವಿರ ಪುಸ್ತಕಗಳು ಪಟ್ಟಣದ ಸಾರ್ವಜನಿಕ ಗ್ರಂಥಾಲಯಕ್ಕೆ ಬಂದು ಹತ್ತು ತಿಂಗಳುಗಳಾದರೂ ಸಂಬಂಧಪಟ್ಟ ಗ್ರಾಮ ಪಂಚಾಯತಿ ಗ್ರಂಥಪಾಲಕರು ತೆಗೆದುಕೊಂಡು ಹೋಗದ ಕಾರಣ ಪುಸ್ತಕಗಳು ಗೆದ್ದಲುಹುಳುಗಳ ಪಾಲಾಗುತ್ತಿವೆ. ಗ್ರಂಥಾಲಯದ ಮೂಲೆಯಲ್ಲಿ ರಾಶಿರಾಶಿಯಾಗಿ ಸುರಿಯಲಾಗಿರುವ ಪುಸ್ತಕಗಳು, ಸೂಕ್ತ ನಿರ್ವಹಣೆಯಿಲ್ಲದೆ ಕೊಳೆಯುತ್ತಿವೆ.
‘ನಾನು ಬಂದು ಕೇವಲ ಐದು ತಿಂಗಳಾಗಿವೆ. ಅದಕ್ಕೂ ಐದು ತಿಂಗಳ ಮೊದಲೇ ಪುಸ್ತಕಗಳು ಬಂದಿವೆ. ಈಗಾಗಲೇ ಎಲ್ಲಾ ಗ್ರಾಮ ಪಂಚಾಯತಿ ಗ್ರಂಥಪಾಲಕರಿಗೆ ಪುಸ್ತಕ ತೆಗೆದುಕೊಂಡು ಹೋಗಬೇಕೆಂದು ತಿಳಿಸಿದ್ದರೂ ಯಾರೂ ಬಂದಿಲ್ಲ. ಕೇವಲ ಮಳಮಾಚನಹಳ್ಳಿ, ಪಲಿಚೇರ್ಲು ಮತ್ತು ವೈ.ಹುಣಸೇನಹಳ್ಳಿ ಗ್ರಾಮ ಪಂಚಾಯತಿ ಗ್ರಂಥಪಾಲಕರು ಮಾತ್ರ ಪುಸ್ತಕಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಇಲ್ಲಿ ಸ್ಥಳಾವಕಾಶವಿಲ್ಲ. ಜಿಲ್ಲಾ ಗ್ರಂಥಾಲಯ ಅಧಿಕಾರಿಗಳು ಮತ್ತು ಪುಸ್ತಕ ವಿತರಣಾ ವಿಭಾಗದ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕಿದೆ’ ಎನ್ನುತ್ತಾರೆ ಪಟ್ಟಣದ ಸಾರ್ವಜನಿಕ ಗ್ರಂಥಾಲಯದ ಮೇಲ್ವಿಚಾರಕಿ ಶಶಿಕಲಾ.
‘ಪಟ್ಟಣದ ಸಾರ್ವಜನಿಕ ಗ್ರಂಥಾಲಯ ಸೂಕ್ತ ನಿರ್ವಹಣೆಯಿಲ್ಲದೆ ಜನರನ್ನು ತಲುಪಬೇಕಾದ ಪುಸ್ತಕಗಳು ಗೆದ್ದಲ ಪಾಲಾಗುತ್ತಿವೆ. ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಸರ್ಕಾರದಿಂದ ಲಕ್ಷಾಂತರ ರೂಪಾಯಿಗಳ ಬೆಲೆಬಾಳುವ ಪುಸ್ತಕಗಳು ನೀಡುತ್ತಿದ್ದರೂ ಸಹ, ಗ್ರಾಮ ಪಂಚಾಯತಿಯ ಗ್ರಂಥಪಾಲಕರ ಬೇಜವಾಬ್ದಾರಿತನದಿಂದ ಇದನ್ನು ಸದುಪಯೋಗ ಪಡಿಸಿಕೊಳ್ಳದೆ ಪುಸ್ತಕಗಳು ಹಾಳಾಗುತ್ತಿವೆ. ಇದು ಪಂಚಾಯತಿಗಳ ಗ್ರಂಥಾಲಯಗಳ ಕಾರ್ಯ ವೈಖರಿಯನ್ನು ತೋರಿಸಿಕೊಡುತ್ತದೆ’ ಎಂದು ಡಿ.ವೈ.ಎಫ್‌.ಐ ರಾಜ್ಯ ಸಮಿತಿ ಸದಸ್ಯ ಕುಂದಲಗುರ್ಕಿ ಮುನೀಂದ್ರ ದೂರಿದರು.

ಮೂರು ರೈತಕೂಟಗಳ ಉದ್ಘಾಟನೆ

0

ಕುಟುಂಬದ ಪ್ರತಿಯೊಬ್ಬ ಸದಸ್ಯರೂ ಉಳಿತಾಯ ಖಾತೆಗಳನ್ನು ಹೊಂದಿರಬೇಕು. ಇದರಿಂದ ಸರ್ಕಾರದ ವಿವಿಧ ಸೌಲಭ್ಯಗಳು ಸಿಗುತ್ತವೆ ಎಂದು ಕೆನರಾಬ್ಯಾಂಕ್‌ ಉಪಮಹಾಪ್ರಬಂಧಕ ಎಂ.ಎಂ.ಚಿನಿವಾರ್‌ ತಿಳಿಸಿದರು.
ಪಟ್ಟಣದ ಚಿಂತಾಮಣಿ ರಸ್ತೆಯಲ್ಲಿರುವ ಕೆಂಪೇಗೌಡ ಸಭಾಂಗಣದಲ್ಲಿ ಬುಧವಾರ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ ಹಾಗೂ ಕೆನರಾ ಬ್ಯಾಂಕ್‌ ಸಂಯುಕ್ತಾಶ್ರಯದಲ್ಲಿ ರೈತಕೂಟಗಳ ಪ್ರಾರಂಭೋತ್ಸವ ಹಾಗೂ ರೈತರಿಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪಡೆದ ಸಾಲವನ್ನು ಸಕಾಲದಲ್ಲಿ ಮರುಪಾವತಿಸಿ ಬ್ಯಾಂಕ್‌ನಿಂದ ಸಿಗುವ ಸೌಲಭ್ಯಗಳ ಸದುಪಯೋಗಪಡಿಸಿಕೊಳ್ಳಬೇಕೆಂದು ಹೇಳಿದರು.
ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ ಮಹಾಪ್ರಬಂಧಕರಾದ ಜಿ.ಆರ್‌.ಚಿಂತಲಾ ಮಾತನಾಡಿ ಮಹಿಳಾ ರೈತಕೂಟಗಳಿಗೆ ಸುಮಾರು 50 ರಿಂದ 60 ಸಾವಿರ ರೂಗಳ ಆಹಾರವನ್ನು ಸಂಸ್ಕರಿಸುವ ಉಪಕರಣವನ್ನು ಉಚಿತವಾಗಿ ನೀಡಲಾಗುತ್ತದೆ. ಹೆಚ್ಚಿನ ತಿಳುವಳಿಕೆಗಾಗಿ ಹೊರರಾಜ್ಯಗಳಿಗೆ ಭೇಟಿ ನೀಡಲೂ ಸಹ ಪ್ರತಿ ರೈತಕೂಟಕ್ಕೆ 60 ಸಾವಿರ ರೂಗಳನ್ನು ನೀಡಲಾಗುವುದೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಇಬ್ಬರು ಅಂಗವಿಕಲರಿಗೆ ವೀಲ್‌ ಚೇರುಗಳನ್ನು, ಆರು ಮಂದಿ ಅಂಧರಿಗೆ ಊರುಗೋಲುಗಳನ್ನು, ಹಿರಿಯ ನಾಗರಿಕರಾದ ವಾಸುದೇವರಾವ್‌, ಸೊಣ್ಣೇನಹಳ್ಳಿ ರಾಮಚಂದ್ರಾಚಾರ್‌, ಬೆಳ್ಳೂಟಿ ಮಾರೇಗೌಡ, ಮಳ್ಳೂರು ರಾಮರೆಡ್ಡಿ ಮತ್ತಿತರರಿಗೆ ಗೌರವಿಸಲಾಯಿತು. ವೇಳೆಗೆ ಸರಿಯಾಗಿ ಸಾಲ ತೀರಿಸಿರುವವರಿಗೆ ಉತ್ತೇಜನ ನೀಡಲು ಬಹುಮಾನಗಳನ್ನು ವಿತರಿಸಲಾಯಿತು. ಸ್ವಸಹಾಯ ಗುಂಪುಗಳಿಗೆ 60 ಲಕ್ಷ ರೂಗಳು ಸಾಲ ವಿತರಿಸಲಾಯಿತು. ಬೋದಗೂರು ಸಿರಿ ಸಮೃದ್ಧಿ ರೈತಕೂಟ, ಆನೂರು ವಿವೇಕಾನಂದ ರೈತ ಕೂಟ, ಗಂಗನಹಳ್ಳಿ ಆಂಜನೇಯಸ್ವಾಮಿ ರೈತಕೂಟವನ್ನು ಉದ್ಘಾಟಿಸಲಾಯಿತು.
ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಅಪರ ನಿರ್ದೇಶಕ ಡಾ.ಬಿ.ಮುನಿವೆಂಕಟಪ್ಪ ಕುರಿ ಮತ್ತು ಮೇಕೆ ಸಾಕಾಣಿಕೆ ಬಗ್ಗೆ ವೈಜ್ಞಾನಿಕ ತಿಳುವಳಿಕೆ ನೀಡಿದರು.
ನಬಾರ್ಡ್‌ ಉಪಮಹಾಪ್ರಬಂಧಕ ಟಿ.ರಮೇಶ್‌, ಜಿಲ್ಲಾ ಅಭಿವೃದ್ಧಿ ಪ್ರಬಂಧಕ ಸುಪರ್ಣಾ ಟಂಡನ್‌, ರೇಷ್ಮೆ ಇಲಾಖೆ ಉಪನಿರ್ದೇಶಕ ಬಿ.ಆರ್‌.ನಾಗಭೂಷಣ್‌, ತಹಶೀಲ್ದಾರ್‌ ಜಿ.ಎ.ನಾರಾಯಣಸ್ವಾಮಿ, ಸಹಾಯಕ ನಿರ್ದೇಶಕರಾದ ರಾಘವೇಂದ್ರ, ಚಂದ್ರಪ್ಪ, ಆನಂದ್‌, ರೈತಕೂಟಗಳ ಒಕ್ಕೂಟದ ಅಧ್ಯಕ್ಷ ಎಚ್‌.ಜಿ.ಗೋಪಾಲಗೌಡ, ಶಿವಕುಮಾರಗೌಡ, ಕೆನರಾಬ್ಯಾಂಕ್‌ ವ್ಯವಸ್ಥಾಪಕ ಗಿರೀಶ್‌ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಜಂಗಮಕೋಟೆಯ ಸರ್ಕಾರಿ ಶಾಲೆಯಲ್ಲಿ ಪ್ರತಿಭಾ ಕಾರಂಜಿ ಕಾರ್ಯಕ್ರಮ

0

ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆಯ ಸರ್ಕಾರಿ ಶಾಲೆಯಲ್ಲಿ ಬುಧವಾರ ನಡೆಸಲಾದ ಜಂಗಮಕೋಟೆ ಸಿ.ಆರ್.ಸಿ. ಮಟ್ಟದ ಹಿರಿಯ ಮತ್ತು ಕಿರಿಯ ಪ್ರಾಥಮಿಕ ಶಾಲೆಗಳ ಪ್ರತಿಭಾ ಕಾರಂಜಿಯಲ್ಲಿ ಮಕ್ಕಳು ನೃತ್ಯ ಪ್ರದರ್ಶಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಪೈಕಾ ವತಿಯಿಂದ ನಡೆದ ತಾಲ್ಲೂಕು ಮಟ್ಟದ ಕಬಡ್ಡಿ, ಖೋ-ಖೋ ವಿಭಾಗದ ವಿಜೇತರು

0

ಶಿಡ್ಲಘಟ್ಟ ತಾಲ್ಲೂಕಿನ ತುಮ್ಮನಹಳ್ಳಿಯ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಪೈಕಾ ವತಿಯಿಂದ ನಡೆದ ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ಕಬಡ್ಡಿ ಬಾಲಕಿಯರ ವಿಭಾಗ ಪ್ರಥಮ, ಖೋ-ಖೋ ಬಾಲಕರ ವಿಭಾಗ ಪ್ರಥಮ, ಖೋ-ಖೋ ಬಾಲಕಿಯರ ವಿಭಾಗ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಹಾಗೂ ಪೈಕಾ ಕ್ರೀಡಾಕೂಟದಲ್ಲಿ ಮೇಲಾಟದಲ್ಲಿ ವಿಜೇತರಾಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಗೌರಿ-ಗಣೇಶ ಚತುರ್ಥಿಗೆ ಪರಿಸರ ಸ್ನೇಹಿ ಗಣಪ

0

ಗೌರಿ-ಗಣೇಶ ಚತುರ್ಥಿ ಸಮೀಪಿಸುತ್ತಿದೆ. ಪ್ರತಿಬಾರಿಯಂತೆ ಪರಿಸರ ಸ್ನೇಹಿ ಬಣ್ಣರಹಿತ ಗಣೇಶ ವಿಗ್ರಹ ಪ್ರತಿಷ್ಠಾನೆ ಮಾತು ಅಲ್ಲಲ್ಲಿ ಕೇಳಿ ಬರುತ್ತದೆ. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಕರಪತ್ರ ವಿತರಿಸಿ ಕೈತೊಳೆದುಕೊಳ್ಳುತ್ತಿದೆ. ಇಷ್ಟಾಗಿಯೂ ಬಣ್ಣಕ್ಕೆ ಮಾರು ಹೋಗುವ ಬೆನ್ನಲ್ಲೇ ಪರಿಸರ ಕಾಳಜಿಯ ಮಾತು ಕೇಳಿಬರುತ್ತದೆ. `ಪರಿಸರಕ್ಕೆ ಬಣ್ಣ ಮಾರಕ’ ಎನ್ನುವ ವಿಚಾರ ಮಾತ್ರ ಗಣೇಶ ಚತುರ್ಥಿಯ ಆಸು-ಪಾಸಿನಲ್ಲೇ ಸುಳಿದು ಮರೆಯಾಗುತ್ತದೆ.
ಆದರೆ ಇದಕ್ಕೆ ಅಪವಾದದಂತೆ ತಾಲ್ಲೂಕಿನ ಕೊತ್ತನೂರು ಗ್ರಾಮದಲ್ಲಿ ಪರಿಸರ ಸ್ನೇಹಿ ಗಣಪ ಸಿದ್ಧಗೊಳ್ಳುತ್ತಿದ್ದಾನೆ. ವಿಶೇಷವೆಂದರೆ ತನ್ನ ಸ್ನೇಹಿತರ ಸಹಾಯ ಪಡೆದು ಕಿರಣ್‌ ಎಂಬ ಯುವಕ ಗ್ರಾಮದ ಗಣಪನನ್ನು ತಾನೇ ಸಿದ್ಧಪಡಿಸುತ್ತಿದ್ದಾನೆ. ತನ್ನ ಮಾವ ಶಿಲ್ಪಿ ನಾಗರಾಜ್‌ ಹಾಗೂ ಕೊಲ್ಕತ್ತದಲ್ಲಿ ತರಬೇತಿಯನ್ನು ಪಡೆದಿರುವ ಈತ ತನ್ನೂರಿನಲ್ಲಿ ತಾನೇ ತಯಾರಿಸಿರುವ ಗಣಪನ ಮೂರ್ತಿಯನ್ನಿಟ್ಟು ಹಬ್ಬ ಆಚರಿಸುವ ಆಸೆಯನ್ನಿಟ್ಟುಕೊಂಡು ತಯಾರಿಕೆಯಲ್ಲಿ ತೊಡಗಿದ್ದಾನೆ.
`ಸಂಪೂರ್ಣ ಕೈಯಿಂದ ತಯಾರಿಸಿರುವುದು ಹಾಗೂ ಕೇವಲ ಮಣ್ಣನ್ನು ಬಳಸಿರುವುದು ನಮ್ಮ ಗಣೇಶನ ವೈಶಿಷ್ಟ್ಯ. ನೆಲ್ಲುಲ್ಲಿ, ನೆಲ್ಲು ಹೊಟ್ಟು, ದಾರ, ಕಡ್ಡಿ, ಹುತ್ತದಮಣ್ಣನ್ನು ಬಳಸಿದ್ದೇನೆ. ಯಂತ್ರಗಳ ಮೂಲಕ ಮಣ್ಣನ್ನು ಬೇಯಿಸಿಲ್ಲ, ಬದಲಾಗಿ ಸ್ಪಷ್ಟರೂಪ ಕೊಟ್ಟು ಬಿಸಿಲಿನಲ್ಲಿಟ್ಟು ಒಣಗಿಸಿದ್ದೇನೆ. ಗಣಪನಿಗೆ ನಾವು ರಾಸಾಯನಿಕ ಬಣ್ಣಗಳನ್ನು ಬಳಸುವುದಿಲ್ಲ. ಮಣ್ಣಿನಿಂದ ತಯಾರಾದ ಗಣಪ ಬೇಗ ನೀರಿನಲ್ಲಿ ಕರಗುತ್ತಾನೆ. ಜನರು ತಾವು ಕೊಳ್ಳುವ ಉದ್ದ ಸೊಂಡಿಲ ಮುದ್ದು ಗಣಪ ಪರಿಸರಸ್ನೇಹಿಯಾಗಿರಲಿ, ಹಬ್ಬವನ್ನು ಅದ್ದೂರಿಯಿಂದ ಆಚರಿಸುವ ಮುನ್ನ ಅದರಿಂದ ನಿಸರ್ಗದ ಮೇಲಾಗುವ ಹಾನಿಗಳತ್ತ ಸ್ವಲ್ಪ ಚಿಂತಿಸುವಂತಾಗಲಿ. ಎಲ್ಲರೂ ಒಂದಾದರೆ ಅನೇಕ ಕೆರೆಗಳ ನೀರು ಕಲುಷಿತವಾಗುವುದನ್ನು ತಡೆಯಬಹುದು’ ಎನ್ನುತ್ತಾರೆ ಕಿರಣ್‌.
`ಪ್ರತಿಯೊಂದು ಒಂದಡಿ ಕೃತಕ ಬಣ್ಣಗಳ ಗಣಪನ ಮೇಲ್ಮೈ ಮೇಲೆ ೧೦ರಿಂದ ೨೦ ಗ್ರಾಂ ಸೀಸ ಇರುತ್ತದೆ. ಕೆರೆಯಲ್ಲಿ ಇಂಥ ಹತ್ತಿಪ್ಪತ್ತು ಸಾವಿರ ಗಣಪಗಳನ್ನು ಮುಳುಗಿಸಿದರೆ ನೀರಿಗೆ ಸೇರುವ ಸೀಸ ಪ್ರಮಾಣವನ್ನು ಯೋಚಿಸಬೇಕು. ನಿಧಾನವಿಷ ಸೀಸವು ಬಣ್ಣಗಳ ಮೂಲಕ ಜನರ ದೇಹವನ್ನು ಪ್ರವೇಶಿಸುತ್ತದೆ. ಇಂಥ ಬಣ್ಣಗಳ ಗಣಪನನ್ನು ಬಕೆಟಿನಲ್ಲಿ ಮುಳುಗಿಸಿದ ಮೇಲೆ ಬಕೆಟಿನ ನೀರನ್ನು ತುಳಸಿ ಗಿಡಕ್ಕೆ ಹಾಕಿದರೆ ಅದೂ ವಿಷವಾಗುತ್ತದೆ’ ಎಂದು ಅವರು ತಿಳಿಸಿದರು.
‘ಕುಡಿಯಲು ನೀರಿಲ್ಲದ ಇಂದಿನ ಬರದ ಪರಿಸ್ಥಿತಿಯಲ್ಲಂತೂ, ಇರುವ ಕೆರೆ, ಕಟ್ಟೆ, ಹೊಳೆ, ತೊರೆಗಳು ಸಂಪ್ರದಾಯದ ಹೆಸರಿನಲ್ಲಿ ಕಲುಷಿತವಾದಲ್ಲಿ ಇದಕ್ಕೆ ಯಾರು ಹೊಣೆ? ವ್ಯಾಪಾರ ಚಿಂತನೆ ಆಧರಿಸಿ ಕುಶಲಕರ್ಮಿಗಳು ಬಣ್ಣಾಕರ್ಷಣೆ ನೀಡಿ ಲಾಭ ಪಡೆಯುತ್ತಾರೆ. ಬಣ್ಣ ಲೇಪಿತ ಗಣೇಶಮೂರ್ತಿಗಳು ಅನಿವಾರ್‍ಯವಾಗಿ ಮಾರುಕಟ್ಟೆಗೆ ಬಂದಿಳಿಯುತ್ತವೆ. ಮಣ್ಣಿನಿಂದಷ್ಟೇ ಮೈದಳೆದ ಬಣ್ಣರಹಿತ ಮಡಿಗಣಪನಿಗೆ ಸಾಂಪ್ರದಾಯಕವಾಗಿಯೂ ಮನ್ನಣೆ ನೀಡಲಾಗುತ್ತದೆ. ಬಣ್ಣದಲ್ಲಿನ ರಾಸಾಯನಿಕ ಪದಾರ್ಥಗಳು ನೀರಿಗೆ ವಿಲೀನವಾಗುವುದು ತಪ್ಪುವುದರಿಂದಾಗಿ, ಪರಿಸರಸ್ನೇಹಿಯಾಗಿ ಮನಗೆಲ್ಲುತ್ತದೆ’ ಎಂದು ಕೊತ್ತನೂರು ಗ್ರಾಮದ ಸ್ನೇಕ್‌ ನಾಗರಾಜ್‌ ತಿಳಿಸಿದರು.

ಅಪ್ಪೇಗೌಡನಹಳ್ಳಿ ಗೇಟ್‌ ಬಳಿಯಿರುವ ಬಯಲಾಂಜನೇಯಸ್ವಾಮಿ ದೇವಾಲಯದಲ್ಲಿ ಪೂಜೆ ಹಾಗೂ ಭಜನೆ

0

ಶಿಡ್ಲಘಟ್ಟ ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಗೇಟ್‌ ಬಳಿಯಿರುವ ಬಯಲಾಂಜನೇಯಸ್ವಾಮಿ ದೇವಾಲಯದಲ್ಲಿ ಸೋಮವಾರ ದೇವರಿಗೆ ವಿಶೇಷ ಹೂವಿನ ಅಲಂಕಾರ, ಪೂಜೆ ಹಾಗೂ ಭಜನೆಯನ್ನು ಏರ್ಪಡಿಸಲಾಗಿತ್ತು.