Sidlaghatta, Chikkaballapur : ತಾಲ್ಲೂಕಿನಾದ್ಯಂತ ಶ್ರೀ ಹನುಮ ಜಯಂತಿ ಮಹೋತ್ಸವವನ್ನು ವಿಜೃಂಭಣೆ ಹಾಗೂ ಭಕ್ತಿ ಭಾವದಿಂದಲೂ ನೆರವೇರಿಸಲಾಯಿತು. ಶ್ರೀ ಹನುಮನ ದೇವಾಲಯಗಳಲ್ಲಿ ಪೂಜೆ ಹೋಮ, ಸಾಮೂಹಿಕ ಅನ್ನ ಸಂತರ್ಪಣೆಯಂತ ಧಾರ್ಮಿಕ ಕೈಂಕರ್ಯಗಳು ನಡೆದವು.
ಅಪ್ಪೇಗೌಡನಹಳ್ಳಿ ಗೇಟ್ ನ ಬಯಲಾಂಜನೇಯಸ್ವಾಮಿ ದೇವಾಲಯ, ಚೌಡಸಂದ್ರದ ಶ್ರೀಪ್ರಸನ್ನಾಂಜನೇಯಸ್ವಾಮಿ ದೇವಾಲಯ, ವೀರಾಪುರದ ಗವಿಗುಟ್ಟದ ಮೇಲಿನ ಆಂಜನೇಯಸ್ವಾಮಿ ದೇವಾಲಯ, ನಗರದ ಕೋಟೆಯ ಶ್ರೀ ಆಂಜನೇಯಸ್ವಾಮಿ, ಮಯೂರ ವೃತ್ತದ ಆಂಜನೇಯಸ್ವಾಮಿ ದೇವಾಲಯಗಳಲ್ಲಿ ವಿಶೇಷ ಪೂಜೆ , ಹೋಮಗಳು ನಡೆದವು.
ಇದಲ್ಲದೆ ತಾಲ್ಲೂಕಿನಾಧ್ಯಂತ ಹನುಮನ ಎಲ್ಲ ದೇವಾಲಯಗಳಲ್ಲಿ ಹನುಮ ಜಯಂತಿಯ ಮಹೋತ್ಸವ ನಡೆಸಿ ಮಹಾ ಮಂಗಳಾರತಿ ಮಾಡಿ ತೀರ್ಥ ಪ್ರಸಾದ ವಿನಿಯೋಗಿಸಲಾಯಿತು. ಸಂಜೆ ಶ್ರೀ ಹನುಮನ ಕೀರ್ತನೆ, ಭಜನೆ ಕೂಡ ನಡೆಯಿತು.
ಸಾಕಷ್ಟು ದೇವಾಲಯಗಳಲ್ಲಿ ದೇವರ ಭಕ್ತಿ ಗೀತೆಗಳ ಗಾಯನ ಭಕ್ತರ ಗಮನ ಸೆಳೆಯಿತು. ಬಹುತೇಕ ಶಾಲಾ ಆಡಳಿತ ಮಂಡಳಿಗಳು ಮಕ್ಕಳನ್ನು ಸಮೀಪದ ದೇವಾಲಯಗಳಿಗೆ ಕರೆದೊಯ್ದು ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಟ್ಟಿದ್ದು ಕಂಡು ಬಂತು. ನಡು ರಾತ್ರಿವರೆಗೂ ಸಾಕಷ್ಟು ದೇವಾಲಯಗಳಲ್ಲಿ ಹನುಮನ ನಾಮದ ಜಪ ಮಾಡಲಾಯಿತು.
ಅಪ್ಪೆಗೌಡನಹಳ್ಳಿ ಗೇಟ್ ಬಳಿಯ ಸುಪ್ರಸಿದ್ದ ಶ್ರೀ ಬೈಲಾಂಜನೇಯಸ್ವಾಮಿ ದೇವಾಲಯದಲ್ಲಿ ಭಕ್ತಿತ್ಪೂರ್ವಕವಾಗಿ ಹನುಮಜಯಂತಿ ಆಚರಿಸಲಾಯಿತು. ದೇವರಿಗೆ ಬೆಳ್ಳಿಯ ವಜ್ರಾಂಗಿ ಹಾಗೂ ಪಂಚಲೋಹದ ಪ್ರಭಾವಳಿ ಅಲಂಕಾರ, ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. ರಾಮತಾರಕ ಹೋಮ, ನಾರಸಿಂಹ ಹೋಮ, ಗಾಯತ್ರಿ ಹೋಮ ನಡೆಯಿತು. ಮಾನಸ ಸಂಗೀತ ವೃಂದ ದವರಿಂದ ಸುಗಮ ಸಂಗೀತ ಆಯೋಜಿಸಲಾಗಿತ್ತು.
Sidlaghatta, Chikkaballapur : ವಿದ್ಯಾರ್ಥಿಗಳು ಜಾಗತಿಕ ವಿಚಾರಗಳ ಜೊತೆಗೆ ಸ್ಥಳೀಯ ಕಲೆ, ಸಂಸ್ಕೃತಿ, ನೆಲ–ಜಲ ಮತ್ತು ಕನ್ನಡ ಸಾಹಿತ್ಯದ ಬಗ್ಗೆ ತಿಳಿವಳಿಕೆ ಹೊಂದುವುದು ಅತ್ಯಂತ ಅಗತ್ಯ ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ನಾರಾಯಣಸ್ವಾಮಿ ಹೇಳಿದರು.
70ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ಶಿಕ್ಷಣ ಇಲಾಖೆ ಆಶ್ರಯದಲ್ಲಿ ನಗರದ ಸರಸ್ವತಿ ಕಾನ್ವೆಂಟ್ ಶಾಲೆಯಲ್ಲಿ ಶನಿವಾರ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ನಾಡು–ನುಡಿ ಲಿಖಿತ ರಸಪ್ರಶ್ನೆ ಸ್ಪರ್ಧೆ ಆಯೋಜಿಸಲಾಯಿತು. ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ಅಭಿನಂದನಾ ಪತ್ರ ವಿತರಿಸಿ ಮಾತನಾಡಿದ ನಾರಾಯಣಸ್ವಾಮಿ ಅವರು, “ಈ ರೀತಿಯ ಸ್ಪರ್ಧೆಗಳು ಮಕ್ಕಳಲ್ಲಿ ನಮ್ಮ ನಾಡು, ನುಡಿ, ಸಂಸ್ಕೃತಿ, ಇತಿಹಾಸ ಹಾಗೂ ಪರಂಪರೆ ಬಗ್ಗೆ ಆಳವಾದ ಜ್ಞಾನವನ್ನು ಬೆಳೆಸುತ್ತವೆ. ಪಾಠ್ಯಪುಸ್ತಕದ ಹೊರತಾಗಿ ವಿದ್ಯಾರ್ಥಿಗಳು ತಮ್ಮ ಮೂಲಗಳನ್ನು ಅರಿಯುವಲ್ಲಿ ಈ ಸ್ಪರ್ಧೆಗಳು ಮಹತ್ವದ ಪಾತ್ರ ವಹಿಸುತ್ತವೆ,” ಎಂದು ಹೇಳಿದರು. ವಿದ್ಯಾರ್ಥಿಗಳು ಕೇವಲ ಸಾಮಾನ್ಯ ಜ್ಞಾನವಷ್ಟೇ ಅಲ್ಲದೆ, ತಮ್ಮ ಸಾಂಸ್ಕೃತಿಕ ಗುರುತಿನ ಬಗ್ಗೆ ತಿಳಿದುಕೊಳ್ಳುವುದು ಅತ್ಯಂತ ಅಗತ್ಯ ಎಂದು ಅವರು ಹೇರಳವಾಗಿ ಹೇಳಿದ್ದಾರೆ.
ನಗರದ ಶ್ರೀ ಸರಸ್ವತಿ ಕಾನ್ವೆಂಟ್, ದಿಬ್ಬೂರಹಳ್ಳಿಯ ಎಸ್.ಎಂ.ವಿ ಕಾನ್ವೆಂಟ್ ಮತ್ತು ಜಂಗಮಕೋಟೆ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಲಿಖಿತ ರಸಪ್ರಶ್ನೆಯಲ್ಲಿ ತಾಲ್ಲೂಕಿನ ವಿವಿಧ ಶಾಲೆಗಳಿಂದ 110 ವಿದ್ಯಾರ್ಥಿಗಳು ಸ್ಪರ್ಧಿಸಿದರು. ವಿದ್ಯಾರ್ಥಿಗಳಿಂದ ಉತ್ತಮ ಸ್ಪಂಧನೆ ದೊರೆತಿದ್ದು, ಎಲ್ಲಾ ಸ್ಪರ್ಧಾರ್ಥಿಗಳಿಗೆ ಅಭಿನಂದನಾ ಪತ್ರಗಳನ್ನು ವಿತರಿಸಲಾಯಿತು.
ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಹಕಾರ ನೀಡಿದ ಕನ್ನಡ ಸಾಹಿತ್ಯ ಪರಿಷತ್‌ನ ಪದಾಧಿಕಾರಿಗಳು, ಶಾಲಾ ಮುಖ್ಯಸ್ಥರು, ಶಿಕ್ಷಕರು ಮತ್ತು ಶಿಕ್ಷಣ ಇಲಾಖೆಯ ಸಿಬ್ಬಂದಿಗೆ ನಾರಾಯಣಸ್ವಾಮಿ ಧನ್ಯವಾದ ಸಲ್ಲಿಸಿದರು.
Sidlaghatta, chikkaballapur : ಶಿಡ್ಲಘಟ್ಟ ತಾಲ್ಲೂಕಿನ ಹನುಮಂತಪುರ ಗೇಟ್ ಬಳಿ ಇರುವ ಬಿಜಿಎಸ್ ವಿದ್ಯಾಸಂಸ್ಥೆಯಲ್ಲಿ ಶನಿವಾರ ಮಕ್ಕಳ ಸಂತೆ ಆಯೋಜಿಸಲಾಗಿದ್ದು, ಮಕ್ಕಳಲ್ಲಿ ವ್ಯಾಪಾರೀ ಮನೋಭಾವ, ಪರಸ್ಪರ ಸಂವಹನ ಮತ್ತು ಮೌಲ್ಯಾಧಾರಿತ ಜೀವನ ಕೌಶಲ್ಯಗಳನ್ನು ಬೆಳೆಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಮಹತ್ವದ್ದಾಗಿದೆ ಎಂದು ಪ್ರಾಂಶುಪಾಲ ಆರ್. ಮಹದೇವ್ ಹೇಳಿದರು.
ಮಕ್ಕಳ ಸಂತೆ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಿಗೆ ಕೇವಲ ಪಠ್ಯ ಜ್ಞಾನ ನೀಡುವುದರಿಂದ ಸಾಲದು; ಬದಲಿಗೆ ಬದುಕಿನ ನೈಜ ಪರಿಸರದಲ್ಲಿ ಕಲಿಯುವ ಅನೇಕ ಕೌಶಲ್ಯಗಳು ಅಗತ್ಯ. ಮನೆಯ ಆರ್ಥಿಕ ಪರಿಸ್ಥಿತಿ, ಪೋಷಕರ ಪರಿಶ್ರಮ, ಹಣದ ಮೌಲ್ಯ ಮತ್ತು ವಸ್ತುಗಳ ಖರೀದಿ-ಮಾರಾಟದಲ್ಲಿನ ಲೆಕ್ಕಾಚಾರಗಳನ್ನು ಅರ್ಥಮಾಡಿಕೊಳ್ಳಲು ಮಕ್ಕಳ ಸಂತೆ ಉತ್ತಮ ವೇದಿಕೆಯಾಗುತ್ತದೆ ಎಂದು ಹೇಳಿದರು.
ಪೋಷಕರಿಗೂ ಈ ಪ್ರಯತ್ನದಲ್ಲಿ ಪಾತ್ರವಿದೆ ಎಂದು ಅವರು ತಿಳಿಸಿ, “ಮಕ್ಕಳ ಮಳಿಗೆಗಳಿಂದ ವಸ್ತುಗಳನ್ನು ಖರೀದಿಸುವ ಮೂಲಕ ಮಕ್ಕಳ ಉತ್ಸಾಹವನ್ನು ಹೆಚ್ಚಿಸಿ ಪ್ರೋತ್ಸಾಹಿಸಬೇಕು,” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ರವಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಎನ್. ಸುಬ್ಬಾರೆಡ್ಡಿ, ಮುಖಂಡ ಲಕ್ಷ್ಮಣ್ ಸೇರಿದಂತೆ ಪೋಷಕರು ಮತ್ತು ಶಾಲಾ ಸಿಬ್ಬಂದಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಮಕ್ಕಳ ಸಂತೆಯಲ್ಲಿ ನೂರಕ್ಕೂ ಹೆಚ್ಚು ಮಳಿಗೆಗಳು ಅಲಂಕರಿಸಲ್ಪಟ್ಟಿದ್ದು, ತರಕಾರಿ, ಹೂವು, ಹಣ್ಣು, ಚುರುಮುರು, ಪಾನಿಪೂರಿ, ಮಸಾಲೆಪೂರಿ ಸೇರಿದಂತೆ ಹಲವು ವಸ್ತುಗಳನ್ನು ಮಕ್ಕಳೇ ಮಾರಾಟಕ್ಕೆ ಇಟ್ಟರು.
ಕೆಲವರು ಪಂಚೆ-ಶರ್ಟ್ ಧರಿಸಿ ತರಕಾರಿ ಮಾರಾಟ ಮಾಡುತ್ತಿದ್ದರೆ, ಇನ್ನು ಕೆಲವರು ಪ್ಯಾಂಟ್-ಟಿ ಶರ್ಟ್ ಧರಿಸಿ ಆಹಾರ ವಸ್ತುಗಳ ಮಳಿಗೆಗಳನ್ನು ನಿರ್ವಹಿಸಿದರು. ಹೆಣ್ಣು ಮಕ್ಕಳು ವಿವಿಧ ಹೂವುಗಳು ಮತ್ತು ಅಲಂಕಾರಿಕ ವಸ್ತುಗಳನ್ನು ಮಳಿಗೆಗಳಲ್ಲಿ ಇಟ್ಟು ಪೈಪೋಟಿ ನಡೆಸಿದರು.
ಸಂತೆ ನೋಡಲು ಬಂದ ಪೋಷಕರು ಮಕ್ಕಳ ವಾಣಿಜ್ಯ ಕೌಶಲ್ಯವನ್ನು ಗಮನಿಸಿ, ಮಕ್ಕಳು ಹೇಳಿದ ದರ ನೀಡುವ ಮೂಲಕ ವಸ್ತುಗಳನ್ನು ಖರೀದಿಸಿ ಅವರನ್ನು ಪ್ರೋತ್ಸಾಹಿಸಿದರು.
Sidlaghatta, Chikkaballapur : ಶಿಡ್ಲಘಟ್ಟ ತಾಲ್ಲೂಕಿನ ಬೂದಾಳ ಗ್ರಾಮದ ರೈತ ರಾಮಾಂಜಿನಪ್ಪ ಅವರು ಗುಣಿ ಪದ್ಧತಿಯನ್ನು ಅಳವಡಿಸಿಕೊಂಡು ರಾಗಿ ಬೆಳೆದಲ್ಲಿ ವಿಶಿಷ್ಟ ಸಾಧನೆ ಮಾಡಿದ್ದಾರೆ. ಕಡಿಮೆ ನೀರು, ಕಡಿಮೆ ಬಂಡವಾಳ ಮತ್ತು ವಿಜ್ಞಾನಾಧಾರಿತ ಕೃಷಿ ಪದ್ಧತಿಯ ಬಳಕೆ ಮೂಲಕ ಉತ್ತಮ ಗುಣಮಟ್ಟದ ರಾಗಿ ಹಾಗೂ ಹೆಚ್ಚಿನ ಇಳುವರಿಯನ್ನು ಪಡೆಯಬಹುದೆಂಬುದನ್ನು ತಮ್ಮ ಹೊಲದಲ್ಲೇ ಸಾಬೀತು ಮಾಡಿದ್ದಾರೆ.
ಸಾಂಪ್ರದಾಯಿಕವಾಗಿ ಒಂದು ಎಕರೆ ಭೂಮಿಗೆ 1 ಕೆಜಿ ರಾಗಿಯನ್ನು ನೇರವಾಗಿ ಬಿತ್ತನೆ ಮಾಡುವ ಪದ್ಧತಿ ಇದ್ದರೂ, ಗುಣಿ ಪದ್ಧತಿಯಲ್ಲಿ MR-6 ತಳಿಯ ಕೇವಲ 40 ಗ್ರಾಂ ರಾಗಿಯನ್ನು ನೀರಿನಲ್ಲಿ ನೆನೆಸಿಕೊಂಡು ನರ್ಸರಿ ವಿಧಾನದಲ್ಲಿ ಗಿಡ ಬೆಳೆಯಲಾಗುತ್ತದೆ. 20 ದಿನಗಳ ನಂತರ ಪೈರನ್ನು ಹೊಲಕ್ಕೆ ನಾಟಿ ಮಾಡಲಾಗುತ್ತದೆ. ಒಂದು ಎಕರೆಗೆ 10,890 ಪೈರುಗಳ ಅಗತ್ಯವಿದ್ದು, 1.5×1.5 ಅಡಿ ಅಂತರದಲ್ಲಿ ಅರೆ ಅಡಿ ಆಳದ ಗುಣಿಗಳನ್ನು ತೆಗೆದು ಕೊಟ್ಟಿಗೆ ಗೊಬ್ಬರ, ಎರೆಹುಳು ಗೊಬ್ಬರ, ಝಿಂಕ್, ಬೋರಾನ್ ಸೇರಿದಂತೆ ಸೂಕ್ಷ್ಮಾಣು ಗೊಬ್ಬರವನ್ನು ಅಗತ್ಯಕ್ಕೆ ತಕ್ಕಂತೆ ಬಳಕೆ ಮಾಡಲಾಗುತ್ತದೆ. ಹನಿ ನೀರಾವರಿ ಪೈಪುಗಳನ್ನು ಅಳವಡಿಸುವುದರಿಂದ ನೀರಿನ ಬಳಕೆ ಕಡಿಮೆ ಆಗುತ್ತದೆ.
40 ದಿನಗಳ ನಂತರ ಪೈರನ್ನು ಬಗ್ಗಿಸುವ (tillering) ವಿಧಾನದಿಂದ ಒಂದು ಪೈರು 50 ರಿಂದ 60 ತೆನೆ ಹೊಡೆಯುವ ಸಾಮರ್ಥ್ಯ ಹೊಂದುತ್ತದೆ. ಸಾಮಾನ್ಯವಾಗಿ 10–15 ಕ್ವಿಂಟಾಲ್ ಇಳುವರಿ ಸಿಗುವ ರಾಗಿ ಬೆಳೆ, ಗುಣಿ ಪದ್ಧತಿ ಬಳಸಿ 30–35 ಕ್ವಿಂಟಾಲ್ ಬೆಳೆ ನೀಡುತ್ತದೆ. ಬೂದಾಳದ ರಾಮಾಂಜಿನಪ್ಪ ಅವರ ಹೊಲದಲ್ಲಿ ಈ ವರ್ಷ ಬೆಳೆಯುತ್ತಿರುವ ರಾಗಿ 40 ಕ್ವಿಂಟಾಲ್ ಗೂ ಅಧಿಕ ಇಳುವರಿ ನೀಡುವ ನಿರೀಕ್ಷೆಯಿದೆ.
ಸಾಂಪ್ರದಾಯಿಕ ರೀತಿ ರಾಗಿ ಒಂದೇ ಬಾರಿಗೆ ಕಟಾವು ಮಾಡಲಾಗುತ್ತಿದ್ದರೆ, ಗುಣಿ ಪದ್ಧತಿಯಲ್ಲಿ ಬಲಿತ ತೆನೆಗಳನ್ನು ಹಂತ ಹಂತವಾಗಿ ಕಟಾವು ಮಾಡಬಹುದು. ಸಧ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ರಾಗಿ ಕಟಾವು ಯಂತ್ರದಿಂದ ಕೂಲಿ ವೆಚ್ಚ ಕೂಡ ಕಡಿಮೆಯಾಗುತ್ತದೆ. ಜೊತೆಗೆ 3–5 ಅಡಿ ಎತ್ತರಕ್ಕೆ ಬೆಳೆಯುವ ರಾಗಿಯ ಪೈರು ಜಾನುವಾರುಗಳಿಗೆ ಗುಣಮಟ್ಟದ ಮೇವು ಒದಗಿಸುತ್ತದೆ.
“ವರ್ಷದಿಂದ ವರ್ಷಕ್ಕೆ ಮಳೆಯ ಕೊರತೆ ಕಂಡುಬರುತ್ತಿರುವಾಗ, ಗುಣಿ ಪದ್ಧತಿ ರೈತರಿಗೆ ಆಶಾದಾಯಿ. ಹೆಚ್ಚಿನ ಇಳುವರಿ, ಹೆಚ್ಚಿನ ಮೇವು, ಕಳೆکنಟ್ರೋಲ್, ಮಳೆ ಕಡಿಮೆಯಾದರೂ ಒಳ್ಳೆಯ ಬೆಳೆ – ಇವು ಎಲ್ಲವೂ ಈ ಪದ್ಧತಿಯ ಫಲಗಳು. ಖರ್ಚು ಹೆಚ್ಚಾಗುವುದಿಲ್ಲ. ನನಗೆ ಈ ಬಾರಿ 40 ಕ್ವಿಂಟಾಲ್ ಗಿಂತ ಹೆಚ್ಚು ಇಳುವರಿ ಸಿಗುವ ನಿರೀಕ್ಷೆಯಿದೆ. ಸರ್ಕಾರ ನಿಗದಿ ಮಾಡಿದ 4,885 ರೂ. ಸಹಾಯಕ ಬೆಲೆಯೊಂದಿಗೆ ಈ ಪದ್ಧತಿ ರೈತರಿಗೆ ಅತ್ಯಂತ ಲಾಭದಾಯಕ. ಜೊತೆಗೆ ರೇಷ್ಮೆ, ತೊಗರಿ, ಅವರೆ, ಹೈನುಗಾರಿಕೆ ಹಾಗೂ ಕುರಿ–ಕೋಳಿ ಸಾಕಣೆ ಹೀಗೆ ಸಮಗ್ರ ಕೃಷಿ ಅಳವಡಿಸಿಕೊಂಡರೆ ರೈತರು ಆರ್ಥಿಕವಾಗಿ ಸದೃಢರಾಗಬಹುದು,” ಎಂದು ರೈತ ರಾಮಾಂಜಿನಪ್ಪ ಹೇಳಿದ್ದಾರೆ.
Sidlaghatta, chikkaballapur : ಶಿಡ್ಲಘಟ್ಟ ನಗರದ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಪಿಎಬಿ ಅನುಮೋದಿತ ಸಮನ್ವಯ ಶಿಕ್ಷಣ ಕಾರ್ಯಕ್ರಮ ಮಧ್ಯವರ್ತನೆಯ ಚಟುವಟಿಕೆಗಳಡಿಯಲ್ಲಿ ಶಾಲಾ ಶಿಕ್ಷಣ ಇಲಾಖೆ, ಅಲ್ಮಿಕೋ ಸಂಸ್ಥೆ, ವಿಶೇಷಚೇತನ ಮಕ್ಕಳ ಚಂದನವನ ಇಕೋಕ್ಲಬ್ ಗಳ ಆಶ್ರಯದಲ್ಲಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಪೂರ್ವಪ್ರಾಥಮಿಕದಿಂದ 10 ನೇ ತರಗತಿಯವರೆಗೆ ಕಲಿಯುತ್ತಿರುವ ವಿಶೇಷಚೇತನ ಮಕ್ಕಳಿಗಾಗಿ ಉಚಿತ ವೈದ್ಯಕೀಯ ತಪಾಸಣೆ, ಮೌಲ್ಯಾಂಕನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಕ್ಷೇತ್ರಶಿಕ್ಷಣಾಧಿಕಾರಿ ಸಿ.ಎ.ನರೇಂದ್ರಕುಮಾರ್ ಮಾತನಾಡಿ, ತಾಲ್ಲೂಕಿನ ಎಲ್ಲಾ ಶಾಲೆಗಳಲ್ಲಿ ಕಲಿಯುತ್ತಿರುವ ವಿಶೇಷಚೇತನ ಮಕ್ಕಳಿಗಾಗಿ ಇಲಾಖೆಯು ಸಾಕಷ್ಟು ಸವಲತ್ತುಗಳನ್ನು ಒದಗಿಸುತ್ತಿದ್ದು ಆರೋಗ್ಯ ತಪಾಸಣೆಯ ಮೂಲಕ ಕೊರತೆಗಳನ್ನು ಗುರ್ತಿಸಿ ಅಗತ್ಯ ಸೌಲಭ್ಯಗಳನ್ನು, ಪರಿಕರಗಳನ್ನು ಒದಗಿಸಲಾಗುತ್ತಿದೆ. ಸಾಮಾನ್ಯ ಶಿಕ್ಷಣದಡಿಯಲ್ಲಿಯೇ ವಿಶೇಷಚೇತನ ಮಕ್ಕಳನ್ನು ತೊಡಗಿಸಿಕೊಂಡು ಉತ್ತಮ ಶಿಕ್ಷಣ ಕೊಡಿಸಲಾಗುತ್ತಿದೆ. ಹೋಬಳಿವಾರು ಕೇಂದ್ರಗಳನ್ನು ಸ್ಥಾಪಿಸಿ ತಾಲ್ಲೂಕಿನಲ್ಲಿ ವಿಶೇಷಚೇತನ ಮಕ್ಕಳಿಗೆ ಫಿಸಿಯೋತೆರಪಿ, ಸ್ಪೀಚ್ ತೆರಪಿಯಂತಹ ಕಾರ್ಯಾಗಾರಗಳ ಮೂಲಕ ಮುಖ್ಯವಾಹಿನಿಗೆ ತರಲು ಪ್ರಯತ್ನಿಸಲಾಗುತ್ತಿದೆ ಎಂದರು.
ಕ್ಷೇತ್ರಸಮನ್ವಯಾಧಿಕಾರಿ ಕೆ.ಎಚ್.ಪ್ರಸನ್ನಕುಮಾರ್ ಮಾತನಾಡಿ, ವಿಶೇಷಚೇತನಮಕ್ಕಳಿಗೆ ಅನುಕಂಪ ತೋರುವುದಕ್ಕಿಂತ ಅವಕಾಶಗಳನ್ನು ಒದಗಿಸಿ ಅವರೂ ಸಾಮಾನ್ಯರಂತೆ ಬದುಕಲು ಪ್ರೇರಣೆ, ಪ್ರೋತ್ಸಾಹ ನೀಡಬೇಕಿದೆ ಎಂದರು.
ಬಿ.ಆರ್.ಸಿಯ ಸಂಪನ್ಮೂಲವ್ಯಕ್ತಿ ಬಿ.ಎಂ.ಜಗದೀಶ್ ಕುಮಾರ್ ಮಾತನಾಡಿ, ತಾಲ್ಲೂಕಿನಲ್ಲಿರುವ ಎಲ್ಲಾ ರೀತಿಯ ವಿಶೇಷಚೇತನರನ್ನು ಗುರ್ತಿಸಿ ಇಲಾಖೆಯಿಂದ ಬರುವ ಭತ್ಯೆ, ಸವಲತ್ತುಗಳನ್ನು ನೇರವಾಗಿ ಒದಗಿಸಲಾಗುತ್ತಿದೆ. ಅದರ ಜೊತೆಗೆ ವಿವಿಧ ಸಂಘಸಂಸ್ಥೆಗಳ ಮೂಲಕ ಅಂತಹ ಮಕ್ಕಳ ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯಕ್ಕೆ ಪೂರಕವಾಗಿ ಸಮಾಲೋಚನೆ, ಕಾರ್ಯಾಗಾರ, ಶಿಬಿರ, ಕ್ರೀಡೆ, ಉಪಕರಣಗಳನ್ನು ಒದಗಿಸಲು ಯಶಸ್ವಿ ಪ್ರಯತ್ನ ನಡೆದಿದೆ ಎಂದರು.
ತಾಲ್ಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಕಾರ್ಯದರ್ಶಿ ಎಚ್.ಎಸ್.ರುದ್ರೇಶಮೂರ್ತಿ ಮಾತನಾಡಿ, ತಾಲ್ಲೂಕಿನ ವಿಶೇಷಚೇತನ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿ ಯೋಗ, ಇಂಗ್ಲೀಷ್ ಸ್ಪೀಕಿಂಗ್ ಆನ್‌ಲೈನ್ ತರಗತಿಗಳನ್ನು ನಡೆಸುತ್ತಿದ್ದು, ಪ್ರಾಥಮಿಕದಿಂದ ಹಿಡಿದು ಉನ್ನತಶಿಕ್ಷಣದವರೆಗೆ ಎಲ್ಲಾ ರೀತಿಯ ಅಗತ್ಯ ಸೌಲಭ್ಯಗಳನ್ನು ವಿವಿಧ ಸಂಘಸಂಸ್ಥೆಗಳ ನೆರವಿನೊಂದಿಗೆ ಒದಗಿಸಿ ಯಶಸ್ವಿಯಾಗಿದ್ದು, ಮಕ್ಕಳ ಪೋಷಕರಲ್ಲಿ ಮಾನಸಿಕ ಸ್ಥೈರ್ಯತುಂಬಲು ಆಗಿಂದಾಗ್ಗೆ ಸಮಾಲೋಚನಾಶಿಬಿರಗಳನ್ನು ನಡೆಸುತ್ತಿರುವುದು ಪ್ರಶಂಸನೀಯವಾದುದು ಎಂದರು.
ಲೋಕೋಮೋಟಾರ್ ನ್ಯೂನತೆ, ಸೆರೆಬ್ರಲ್ ಪಾಲ್ಸಿ, ಪೂರ್ಣದೃಷ್ಟಿ ದೋಷ, ಭೌದ್ಧಿಕ ಅಸಮರ್ಥತೆ, ಶ್ರವಣದೋಷ, ಶ್ರವಣ ಮತ್ತು ಅಂಧತ್ವದೊಂದಿಗೆ ಬಹು ಅಂಗಾಂಗ ದೋಷವುಳ್ಳ ಸುಮಾರು 200 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಉಚಿತ ತಪಾಸಣೆ ಮಾಡಿ ಅಗತ್ಯ ಸವಲತ್ತುಗಳನ್ನು ವಿತರಿಸಲಾಯಿತು.
ಬಿ.ಆರ್.ಪಿ ಕೆ.ಮಂಜುನಾಥ್, ರಾಧಾ, ಚಂದ್ರಕಲಾ, ವೇಣುಮಾಧವಿ, ತಾಲ್ಲೂಕು ವೈದ್ಯಾಧಿಕಾರಿ ಡಾ.ವೆಂಕಟೇಶ್ ಮೂರ್ತಿ, ಶಿರಸ್ತೇದಾರ್ ಮಂಜುನಾಥ್, ನಗರಸಭಾ ಪರಿಸರ ಎಂಜಿನಿಯರ್ ಮೋಹನ್‌ಕುಮಾರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸರಸ್ವತಮ್ಮ, ಸುಂದರಾಚಾರಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ವಿದ್ಯಾ ವಸ್ತ್ರದ, ಆಪ್ತ ಸಮಾಲೋಚಕರಾದ ಡಾ.ಸುವರ್ಣ, ಡಾ.ರಾಜೇಶ್ವರಿ, ಡಾ.ಪೂರ್ಣಿಮಾ, ಡಾ.ಕೆ.ಲಕ್ಷ್ಮಣಗೌಡ, ಆಡಿಯಾಲಜಿಸ್ಟ್ ಡಾ.ಅಭಿಲಾಷ್, ಡಾ. ಮೋಹನ್‌ಕುಮಾರ್, ಡಿ.ಡಿ.ಆರ್.ಸಿ ನೋಡಲ್ ಅಧಿಕಾರಿ ಡಾ.ಗಣೇಶ್, ಡಿ.ಡಿ.ಆರ್.ಸಿಯ ಡಾ.ರಾಜೇಶ್ವರಿ, ಮನೋರೋಗ ತಜ್ಞರಾದ ಡಾ.ಹೇಮಂತ್, ಅನಿಲ್, ಅಲಮಿಕೋ ಸಂಸ್ಥೆಯ ಪ್ರತೀಕ್ಷ, ಡಾ.ಭಾವನಾ, ಎಂ.ಆರ್.ಡಬ್ಲ್ಯೂ ರಾಮಚಂದ್ರ ಹಾಜರಿದ್ದರು
Sidlaghatta, chikkaballapur : ನಾವು ನಮ್ಮ ಮನೆ, ವ್ಯವಹಾರ, ಕೆಲಸ ಕಾರ್ಯಗಳ ಸ್ಥಳದಲ್ಲೇ ಕನ್ನಡವನ್ನು ಮಾತನಾಡುವ, ಕನ್ನಡದಲ್ಲೇ ಬರೆಯುವ ಮತ್ತು ವ್ಯವಹರಿಸುವ ಕೆಲಸ ಮಾಡಬೇಕು. ನಮ್ಮ ಮಾತೃ ಭಾಷೆ ಕನ್ನಡದ ಮೇಲೆ ಅಭಿಮಾನ ಇರದಿದ್ದಲ್ಲಿ ಮುಂದೊಂದು ದಿನ ನಮ್ಮ ನೆಲದಲ್ಲೇ ನಾವು ಪರಕೀಯರಾಗಬೇಕಾಗುತ್ತದೆ ಎಂದು ಒಕ್ಕಲಿಗರ ಸಂಘದ ನಿರ್ದೇಶಕ ಬಿ.ವಿ.ರಾಜಶೇಖರ್‌ಗೌಡ ತಿಳಿಸಿದರು.
ತಾಲ್ಲೂಕಿನ ಎಚ್.ಕ್ರಾಸ್(ಕುಂಭಿಗಾನಹಳ್ಳಿ)ಯಲ್ಲಿ ಹಮ್ಮಿಕೊಂಡಿದ್ದ 70ನೇ ವರ್ಷದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ಮಾಡಿ ಅವರು ಮಾತನಾಡಿದರು.
ನಾವು ಕನ್ನಡ ಮಾತನಾಡೋಣ, ಬರೆಯೋಣ, ವ್ಯವಹರಿಸೋಣ. ಹಾಗೆಯೆ ನಮ್ಮಲ್ಲಿ ಇರುವ ಅನ್ಯ ಭಾಷಿಕರಿಗೂ ಕನ್ನಡ ಕಲಿಸುವ ವಾತಾವರಣ ನಿರ್ಮಿಸೋಣ ಎಂದರು.
ಆದರೆ ನಮ್ಮಲ್ಲಿ ಇತರೆ ಭಾಷೆಯವರು ಮಾತನಾಡುವುದಕ್ಕೂ ಮುನ್ನವೇ ನಾವೇ ಅವರ ಭಾಷೆಯಲ್ಲಿ ಮಾತನಾಡುವ ಪ್ರಯತ್ನ ಮಾಡುವುದರಿಂದ ಅನ್ಯ ಭಾಷಿಕರು ಕನ್ನಡ ಕಲಿಯುವಂತ ಪ್ರಯತ್ನವೇ ಮಾಡಲು ಹೋಗುವುದಿಲ್ಲ. ಇದು ನಮ್ಮ ದೌರ್ಭಾಗ್ಯ ಎಂದರು.
ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಕೈ ಮುಗಿದು ಪುಷ್ಪ ನಮನ ಸಲ್ಲಿಸಲಾಯಿತು. ಕನ್ನಡ ಧ್ವಜಾರೋಹಣ ನೆರವೇರಿಸಲಾಯಿತು. ಎಲ್ಲರಿಗೂ ಸಿಹಿ ಹಂಚಿ ಅನ್ನ ಸಂತರ್ಪಣೆ ನೆರವೇರಿಸಲಾಯಿತು. ಗಾರುಡಿ ಗೊಂಬೆ, ಕೀಲು ಕುದುರೆ, ಕರಡಿ ವೇಷಗಳೊಂದಿಗೆ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.