ಗ್ರಾಮದ ಶ್ರೇಯಸ್ಸಿಗೆ ನೆಟ್ಟಿನಿಲ್ಲಿಸಿರುವ ಯಂತ್ರದ ಕಲ್ಲುಗಳು

ಮಕ್ಕಳು ರಚ್ಚೆ ಹಿಡಿದಾಗ, ಹುಶಾರು ತಪ್ಪಿದಾಗ ಮಂತ್ರ ಹಾಕಿಸುವುದು, ತಾಯತ ಕಟ್ಟಿಸುವ ಪದ್ಧತಿ ಗ್ರಾಮೀಣ ಭಾಗದಲ್ಲಿ ಈಗಲೂ ಇದೆ. ಬೆಳ್ಳಿ, ಪಂಚಲೋಹ ಅಥವಾ ತಾಮ್ರದ ಹಾಳೆಯ ಮೇಲೆ ಬೀಜಾಕ್ಷರ, ಮಂತ್ರ ಇತ್ಯಾದಿಗಳನ್ನು ಬರೆದು ತಾಯತದಲ್ಲಿಟ್ಟು ಕಟ್ಟುವುದರಿಂದ ದುಷ್ಟ ಶಕ್ತಿಗಳಿಂದ, ವ್ಯಾಧಿಗಳಿಂದ ವಿಮುಕ್ತಿ ಸಿಗುವುದೆಂಬ ನಂಬುಗೆಯದು. ಇದೇ ರೀತಿ ಇಡೀ ಗ್ರಾಮಕ್ಕೇ ಪೀಡಾ ಪರಿಹಾರಕ್ಕೆಂದು ಬಹಳ ಹಿಂದೆ ಕಲ್ಲುಗಳನ್ನು ನಿರ್ಮಿಸುತ್ತಿದ್ದರು. ಇವನ್ನು ಯಂತ್ರದ ಕಲ್ಲುಗಳೆಂದು ಕರೆಯುತ್ತಾರೆ.
ಗ್ರಾಮದ ಶ್ರೇಯಸ್ಸಿಗಾಗಿ ನಿರ್ಮಿಸುತ್ತಿದ್ದ ಇಂತಹ ಪುರಾತನ ಕಲ್ಲುಗಳು ತಾಲ್ಲೂಕಿನ ಕೆಲವೆಡೆಯಿದ್ದು ನಮ್ಮಲ್ಲೂ ಈ ರೀತಿಯ ಪದ್ಧತಿ ಆಚರಣೆಯಲ್ಲಿದ್ದುದಕ್ಕೆ ನಿದರ್ಶನವಾಗಿದೆ. ಇಂತಹ ಕಲ್ಲುಗಳನ್ನು ಅದರ ಬಗ್ಗೆ ತಿಳಿಯದೇ ಪೂಜನೀಯ ವಸ್ತುವೆಂದು ಭಾವಿಸಿ ಕೆಲವೆಡೆ ಪೂಜಿಸುತ್ತಿದ್ದರೆ, ಇನ್ನು ಕೆಲವು ಸಂಪೂರ್ಣ ನಿರ್ಲಕ್ಷ್ಯಕ್ಕೊಳಗಾಗಿವೆ.
ತಾಲ್ಲೂಕಿನ ಹೊಸಪೇಟೆ ಗ್ರಾಮದ ಸರ್‍ವೇಶ್ವರ ದೇವಾಲಯದ ಬಳಿಯೊಂದು ಯಂತ್ರದಕಲ್ಲಿದ್ದು ಅದನ್ನು ದೇವಾಲಯಕ್ಕೆ ಬರುವ ಭಕ್ತಾದಿಗಳು ಪೂಜಿಸುವರು. ತಾಲ್ಲೂಕಿನ ಹನುಮಂತಪುರ ಗ್ರಾಮದ ಬಸವಣ್ಣನ ದೇಗುಲದ ಬಳಿ ಮೂರು ಯಂತ್ರದ ಕಲ್ಲುಗಳಿವೆ. ಆದರೆ ಹಳೆಯ ಗ್ರಾಮ ತಗ್ಗಿನಲ್ಲಿದ್ದುದರಿಂದ ಏರಿನೆಡೆಗೆ ಗ್ರಾಮವು ಅಭಿವೃದ್ಧಿ ಕಂಡುಕೊಳ್ಳುತ್ತಾ ಈ ಕಲ್ಲುಗಳು ತಗ್ಗಿನಲ್ಲೇ ಉಳಿದಿವೆ.
ಸಾಮಾನ್ಯವಾಗಿ ಈ ಬಗೆಯ ಶಾಸನಗಳನ್ನು ಹಳ್ಳಿಗಳ ಮುಂದೆ ಗಮನಿಸಬಹುದು. ಪೀಡಾ ಪರಿಹಾರಕ್ಕಾಗಿ ಯಂತ್ರವನ್ನು ಬರೆದು ನಿಲ್ಲಿಸಿರುತ್ತಾರೆ. ಇವುಗಳನ್ನು ಹಳ್ಳಿಯ ಜನ ಇಂದಿಗೂ ಹಲವೆಡೆ ಪೂಜಿಸುತ್ತಾರೆ. ಈ ರೀತಿ ಪೂಜಿಸುವುದರಿಂದ ತಮ್ಮ ದನಕರುಗಳಿಗೆ ಅಥವಾ ತಮಗೆ ಒದಗಿರುವ ಪೀಡೆಯು ಪರಿಹಾರವಾಗುತ್ತದೆಂದು ಅವರ ನಂಬಿಕೆ.
ಕೆಲವು ಯಂತ್ರಗಳಲ್ಲಿ ಕೇವಲ ಬೀಜಾಕ್ಷರಗಳಿದ್ದರೆ ಕೆಲವು ಪೀಡಾ ಪರಿಹಾರಕ್ಕೆ ಹಾಕಿಸಿರುವ ಕಟ್ಟುಯಂತ್ರ ಅಥವಾ ದಿಗ್ಬಂಧನ ಯಂತ್ರವಾಗಿರುತ್ತವೆ.
ಹೆಚ್ಚಾಗಿ ತಾಮ್ರಪಟಗಳ ಮೇಲೆ ಈ ರೀತಿಯ ಯಂತ್ರ ಮಂತ್ರಗಳನ್ನು ಬರೆದಿರುವುದೇ ಹೆಚ್ಚು. ಈಗಲೂ ಚಿಕ್ಕದಾದ ತಾಮ್ರದ ಹಾಳೆಯಲ್ಲಿ ಬರೆದು ತಾಯತದಲ್ಲಿಟ್ಟು ಕಟ್ಟುವುದು, ಕೊಂಚ ದೊಡ್ಡದಾದರೆ ಅದಕ್ಕೆ ಚೌಕಟ್ಟನ್ನು ಹಾಕಿಸಿ ಅಂಗಡಿ ಮನೆಗಳಲ್ಲಿ ನೇತುಹಾಕುವುದು ಬಳಕೆಯಲ್ಲಿದೆ.
ಈ ಪುರಾತನ ಯಂತ್ರದ ಕಲ್ಲುಗಳಿಂದ ಯಂತ್ರ ಮಂತ್ರ ಚಿಕಿತ್ಸಾ ವಿಧಾನಗಳು ಕರ್ನಾಟಕದಲ್ಲಿ ಅದರಲ್ಲೂ ನಮ್ಮ ತಾಲ್ಲೂಕಿನಲ್ಲಿ ಪ್ರಚಲಿತವಿತ್ತು ಎಂದು ತಿಳಿದುಬರುತ್ತದೆ. ಈ ರೀತಿಯ ಚಿಕಿತ್ಸಾ ಕ್ರಮದ ಒಂದು ಅನುಸರಣೆಯೇ ಈ ಬಗೆಯ ಶಾಸನಗಳಿಗೆ ಪ್ರೇರಣೆಯನ್ನು ನೀಡಿ ಕಾಲಾಂತರದಲ್ಲಿ ಅಜ್ಞಾನದಿಂದ ಜನರಿಗೆ ಯಾವುದು ಯಂತ್ರ ಯಾವುದು ಅಲ್ಲ ಎಂಬುದು ತಿಳಿಯದಂತಾಗಿದೆ. ಈ ಯಂತ್ರ ಚಿಕಿತ್ಸಾ ಕ್ರಮದ ಬಗ್ಗೆ, ಅದರ ಯಶಸ್ಸಿನ ಬಗ್ಗೆ ವೈಜ್ಞಾನಿಕ ಯುಗದಲ್ಲಿರುವ ನಮ್ಮ ಧೋರಣೆ ಬದಲಾಗಿರಬಹುದು. ಆದರೆ ಯಂತ್ರ ಮಂತ್ರಗಳ ಮೂಲಕವೂ ನಮ್ಮ ಜನ ತಮ್ಮ ಶ್ರೇಯಸ್ಸಿಗಾಗಿ ಪ್ರಯತ್ನಿಸಿದರು ಎಂಬುದು ಈ ಶಾಸನಗಳಿಂದ ತಿಳಿದುಬರುತ್ತದೆ.

Leave a Reply

Your email address will not be published. Required fields are marked *

error: Content is protected !!