ಚಾರಿತ್ರಿಕ ಹಿನ್ನೆಲೆಯುಳ್ಳ ವೀರಗಲ್ಲುಗಳು

ಪುರಾತನವಾದ, ಚಾರಿತ್ರಿಕ ಹಿನ್ನೆಲೆಯುಳ್ಳ ವೀರಗಲ್ಲುಗಳನ್ನು ಕೆಲವೆಡೆ ಮಾತ್ರ ವೀರರಗುಡಿ ಎಂದು ಕರೆದು ಪೂಜಿಸಿದರೆ, ಬಹುತೇಕ ಕಡೆಗಳಲ್ಲಿ ಇವುಗಳನ್ನು ನಿರ್ಲಕ್ಷಿಸಿರುವುದು ಕಂಡುಬರುತ್ತದೆ. ಆದರೆ ತಾಲ್ಲೂಕಿನ ಚೀಮಂಗಲ ಗ್ರಾಮದಲ್ಲಿ ಸುತ್ತಮುತ್ತ ಸಿಕ್ಕ ಎಲ್ಲ ವೀರಗಲ್ಲುಗಳನ್ನು ಅಂದವಾಗಿ ಕಾಂಪೋಂಡ್ಗೆ ಅಳವಡಿಸಿ ಸಂರಕ್ಷಿಸಿದ್ದಾರೆ.
ಚೀಮಂಗಲ ಗ್ರಾಮದ ಚೌಡೇಶ್ವರಮ್ಮ ದೇವಾಲಯದ ಕಾಂಪೋಂಡ್ ಬಳಿ ಎಂಟು ವೀರಗಲ್ಲುಗಳನ್ನು ಸಂರಕ್ಷಿಸಲಾಗಿದೆ. ಕುದುರೆಯ ಮೇಲೆ ಕತ್ತಿ ಹಿಡಿದಿರುವ ವೀರನಿಗೆ ಚಾಮರ ಹಿಡಿದಿರುವ ಸೇವಕ, ಕಳಶ ಹೊತ್ತ ಮಹಿಳೆಯರು, ಕತ್ತಿ ಗುರಾಣಿ ಹಿಡಿದ ವೀರ, ಬಿಲ್ಲುಬಾಣ ಹಿಡಿದ ವೀರ, ಹಸುಗಳನ್ನು ಸಂರಕ್ಷಿಸಲು ಪ್ರಾಣತೆತ್ತ ವೀರ… ಹೀಗೆ ನಾನಾ ಚಿತ್ರಗಳನ್ನು ಕಲ್ಲಿನಲ್ಲಿ ಕೆತ್ತಲಾಗಿದೆ.
’ಗ್ರಾಮದಲ್ಲಿ ಮೊದಲು ವೀರಗುಡಿ ಎಂಬುದಿತ್ತು ಅಲ್ಲಿ ಕೆಲವು ಕಲ್ಲುಗಳಿದ್ದವು. ಅದೆಲ್ಲ ಕುಸಿದು ಹಾಳಾಗಿತ್ತು. ಚೌಡೇಶ್ವರಮ್ಮ ದೇವಾಲಯವನ್ನು ಜೀರ್ಣೋದ್ದಾರ ಮಾಡುವ ಸಂದರ್ಭದಲ್ಲಿ ಅವನ್ನು ಮತ್ತು ಗ್ರಾಮದ ಸುತ್ತಮುತ್ತ ಅಲ್ಲಲ್ಲಿ ಬಿದ್ದಿದ್ದ ಇಂಥಹ ಕಲ್ಲುಗಳನ್ನು ತಂದು ಕಾಂಪೋಂಡ್ಗೆ ಅಳವಡಿಸಿದೆವು. ನಮ್ಮ ಗ್ರಾಮಕ್ಕೆ ಸಂಬಂಧಿಸಿದ ವೀರರ ನೆನಪಿಗಾಗಿ ನಿರ್ಮಿಸಿರುವ ಸ್ಮಾರಕಗಳಿವು ಎಂದು ಹಿರಿಯರು ಹೇಳುತ್ತಾರೆ. ಅಂಥಹ ವೀರರ ಚಿತ್ರಗಳನ್ನು ಜೋಪಾನವಾಗಿರಿಸುವುದು ನಮ್ಮ ಕರ್ತವ್ಯ’ ಎನ್ನುತ್ತಾರೆ ಗ್ರಾಮದ ಆಂಜಿನಪ್ಪ.
’ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಈ ರೀತಿಯ ವೀರಗಲ್ಲುಗಳು ಮತ್ತು ಶಾಸನಗಳು ಅನಾಥವಾಗಿವೆ. ಗ್ರಾಮಗಳ ದೇವಾಲಯಗಳನ್ನು ದುರಸ್ಥಿ ಅಥವಾ ಜೀಣೋದ್ಧಾರ ಮಾಡುವಾಗ ಚೀಮಂಗಲದ ಚೌಡೇಶ್ವರಿ ದೇವಾಲಯದಂತೆ ವೀರಗಲ್ಲುಗಳನ್ನು ಜೋಡಿಸಿಟ್ಟರೆ, ದೇವಾಲಯದ ಅಂದವೂ ಹೆಚ್ಚುತ್ತದೆ ಮತ್ತು ವೀರಗಲ್ಲುಗಳ ಸಂರಕ್ಷಣೆಯೂ ಆಗುತ್ತದೆ’ ಎಂದು ಗ್ರಾಮದ ಶಿಕ್ಷಕರು ತಿಳಿಸಿದರು.
– ಡಿ ಜಿ ಮಲ್ಲಿಕಾರ್ಜುನ

Tags: ,

Leave a Reply

Your email address will not be published. Required fields are marked *

error: Content is protected !!