31.9 C
Sidlaghatta
Thursday, March 28, 2024

ತರಗತಿಯೊಳಗಿನ ಭಾಷೆ

- Advertisement -
- Advertisement -

ಭಾಷೆ ಶೂನ್ಯದಲ್ಲಿ ಉದ್ಭವವಾಗುವಂತಹದ್ದಲ್ಲ ಶೂನ್ಯದಲ್ಲಿ ವ್ಯವಹರಿಸುವಂತದ್ದಲ್ಲ. ಶೂನ್ಯ ಸಾಧನೆಯು ಅದರ ಉದ್ದೇಶವಲ್ಲ, ಗುರಿಯಲ್ಲ ನಮ್ಮೊಳಗೊಳಗೇ ಅಂದುಕೊಳ್ಳುವುದಕ್ಕೆ ಯಾರ ಹಂಗೂ ಇಲ್ಲ, ಅದಕ್ಕೆ ಬೇರೆ ಪ್ರಕ್ರಿಯೆಗಳೂ ಇರುವುದಿಲ್ಲ, ಹಾಗಂತ ಹೆರವರೊಂದಿಗೆ ವ್ಯವಹರಿಸುವ ಸಂದರ್ಭದಲ್ಲೆಲ್ಲ ಪರಸ್ಪರ ಪ್ರತಿಕ್ರಿಯೆ – ಪ್ರತಿಸ್ಪಂದನಗಳಿರುವುದು ನಿಜ.
ಭಾಷೆಯಿರದ ಪ್ರಪಂಚದ ಕಲ್ಪನೆಯೇ ಅಸಾಧ್ಯ. ಪ್ರಪಂಚದ ಪ್ರತಿಯೊಂದರ ಗುರುತಿಸುವಿಕೆಯೂ ಪ್ರಾರಂಭವಾಗುವುದೇ ಭಾಷೆಯ ಮೂಲಕ ಪ್ರತಿಯಂದು ಭಾವಾಭಿವ್ಯಕ್ತಿಗೂ, ಚಿಂತನೆಯ ಸಂವಹನಕ್ಕೂ ಅನಿವಾರ್ಯವಿದು. ಪ್ರತಿಯೊಂದು ಜ್ಞಾನದ ಶಾಖೆಗೂ ಅದರದ್ದೇ ಆದ ನಿರ್ದಿಷ್ಟ ಭಾಷಾ ಲೋಕವಿದೆ. ಹಾಗೇ ವೃತ್ತಿಗೆ ಭಾಷಾ ಬಳಕೆಯಲ್ಲಿ ಭಿನ್ನತೆಯೂ ಇದೆ. ಭಾಷಾ ಬಳಕೆಯ ಕ್ರಮ ಕೂಡ ಪ್ರದೇಶದಿಂದ ಪ್ರದೇಶಕ್ಕೆ ಬೇರೆ ಬೇರೆಯಾಗಿರುತ್ತದೆ ಸ್ಥಳ, ವ್ಯಕ್ತಿ, ಸಂದರ್ಭಕ್ಕನುಗುಣವಾಗಿ ಕೂಡ ಭಾಷಾ ಬಳಕೆಯಲ್ಲಿ ವ್ಯತ್ಯಯವುಂಟಾಗುವುದನ್ನು ಗಮನಿಸಬಹುದು. ಅಂದರೆ ಭಾಷೆ ಒಟ್ಟಾರೆಯಾಗಿ ತನ್ನ ಅರ್ಥವನ್ನು ಬಿಚ್ಚಿಡುವುದು ಸಂದರ್ಭಕ್ಕೆ ಅನುಗುಣವಾಗಿಯೇ ವಿನಃ ನಿಘಂಟಿಗನುವಾಗಿಯಲ್ಲ.
ಪ್ರತಿವ್ಯಕ್ತಿಯೂ ಭಾಷೆಯನ್ನು ಬಳಸುತ್ತಾನೆ. ಆದರೆ ಬಳಸುವ ಕ್ರಮ ಬೇರೆ ಬೇರೆ ಜಾಗಯಲ್ಲಿ ಬೇರೆ ಬೇರೆ ತೆರನಾಗಿರುತ್ತದೆ. ಮನೆಯ ಒಳಗಡೆಯ ಸಂಭಾಷಣಾ ಕ್ರಮಕ್ಕೂ, ಹೊರಗಡೆಯ ಸಂಭಾಷಣಾ ಕ್ರಮಕ್ಕೂ ಸಾಕಷ್ಟು ಅಂತರವಿರುವುದನ್ನು ನಾವು ಗಮನಿಸಬಹುದು. ಅಷ್ಟೇ ಅಲ್ಲ ಅಡುಗೆಮನೆಯೊಳಗಿನ ಮಾತಿನ ಧಾಟಿಗೂ, ಜಗುಲಿಯಲ್ಲಿನ ಮಾತಿನ ಧಾಟಿಗೂ ವ್ಯತ್ಯಾಸವಿರುತ್ತದೆ. ನಾವು ನಾವೇ ಇದ್ದಾಗ ಒಂದು ಬಗೆಯಾದರೆ ಹೊರಗಿನವರು ಯಾರಾದರೂ ಬಂದು ಕುಳಿತಿದ್ದರೆ ಅದು ಇನ್ನೊಂದು ಬಗೆಯಾಗಿ ಮಾರ್ಪಡುತ್ತದೆ.
ಆಡುನುಡಿಯಿಂದ, ಗ್ರಂಥಸ್ಥದತ್ತ ತಿರುಗಿ ಬಿಡುತ್ತದೆ. ಪ್ರಜ್ಞಾ, ಪೂರ್ವಕವಾಗಲ್ಲ. ಅವೆಲ್ಲ ಸಹಜವಾಗಿಯೇ ಜರುಗುವ ಕ್ರಿಯೆ, ಇಲ್ಲಿ ಮನೆಯೊಳಗಣ ಮಾತಿಗೂ, ಹೊರ ಪ್ರಪಂಚದ ಸಮಾಜದೊಂದಿಗಿನ ಮಾತಿಗೂ ಅಂತರವಿದೆ. ನಾವು ಆ ಕ್ಷಣದಲ್ಲಿ ಏನಾಗಿದ್ದೇವೆ ಎಂಬುದರ ಮೇಲೆ ನಮ್ಮ ಮಾತು ನಿರ್ಧರಿತವಾಗುತ್ತದೆ. ಪ್ರಾಯಾಣಿಕರಾಗಿದ್ದರೆ ಒಂದು ರೀತಿ ಕಛೇರಿ ಸಿಬ್ಬಂದಿಯಾಗಿದ್ದರೆ ಇನ್ನೊಂದು ರೀತಿ ಕಛೇರಿಯ ಅಧಿಕಾರಿಯಾಗಿದ್ದಲ್ಲಿ ಒಂದು ರೀತಿ ಸಾಮಾನ್ಯ ನೌಕರನಾಗಿದ್ದಲ್ಲಿ ಇನ್ನೊಂದು ರೀತಿ ಹೇಗೆಂದರೆ ರಾಜನಾದವನು ನಮ್ಮ ಭೋಜನದ ವ್ಯವಸ್ಥೆ ಆಗಿದೆಯೇ? ಎಂದು ಪ್ರಶ್ನಿಸಿದರೆ ಸಾಮಾನ್ಯ ವ್ಯಕ್ತಿ ಅಡುಗೆ ಆಯ್ತಾ? ಅಥವಾ ಊಟಕ್ಕೆ ಆಯ್ತಾ? ಎಂದು ಕೇಳುತ್ತಾನೆ ಹೀಗೆ ಸಂದರ್ಭ ಮತ್ತು ವ್ಯಕ್ತಿಗಳ ಸ್ಥಾನ, ಮಾನಕ್ಕೆ ಹೊಂದಿಕೊಂಡಂತೆ ಭಾಷೆಯ ಬಳಕೆಯ ಕ್ರಮದಲ್ಲಿ ಏರುಪೇರಾಗುವದನ್ನು, ನಾವೇ ಗಮನಿಸಬಹುದು ರಂಗ ಪ್ರಯೋಗಗಳ ಮುಲಕವೂ ಸ್ಪಷ್ಟವಾಗಿ ಅರಿಯಲು ಅಧ್ಯಯನ ಮಾಡಲು ಸಾಧ್ಯ.
ವಸ್ತುಸ್ಥಿತಿ ಹೀಗಿರುವ ಸಂದರ್ಭದಲ್ಲಿ ಶಿಕ್ಷಕನೊಬ್ಬನ ತರಗತಿಯೊಳಗಿನ ಭಾಷೆ ಕೂಡ ಹೇಗಿದ್ದರೆ ಸೂಕ್ತವೆಂದು ತಿಳಿದುಕೊಳ್ಳುವುದು, ಆ ಕುರಿತು ಲಕ್ಷವಹಿಸುವುದು ಇಂದಿನ ಅಗತ್ಯ. ಯಾಕೆಂದರೆ ತರಗತಿಯೊಳಗಿನ ಮಾತುಗಳೇ ಬಹಳ ಬೆಲೆಯುಳ್ಳದ್ದು ಪ್ರಭಾವ ಬೀರುವಂತದ್ದು ಯಾಕೆಂದರೆ ಅಲ್ಲಿ ಒಂದೆಡೆ ಶಿಕ್ಷಕ ಇನ್ನೊಂದೆಡೆ ವಿದ್ಯಾರ್ಥಿ ಪರಸ್ಪರ ಮುಖಾಮುಖಿಯಾಗಿ ಮಾತುಗಳ ಮುಖಾಂತರ ತಿಳುವಳಿಕೆಯನ್ನು ಯಾ ಜ್ಞಾನವನ್ನು ನೀಡುವುದು ಅಥವಾ ವಿನಿಮಯ ಮಾಡಿಕೊಳ್ಳುವುದು ಜರುಗುತ್ತಿರುತ್ತದೆ. ಇದು ಒಮ್ಮುಖದ ಕ್ರಿಯೆಯಲ್ಲಿ ಒಮ್ಮುಖದ ಕ್ರಿಯೆಯಾದಲ್ಲಿ, ಒಬ್ಬನೇ ಹೇಳುತ್ತಿರುವುದು, ಉಳಿದವರು ಸುಮ್ಮನೆ ಒಪ್ಪಿಕೊಳ್ಳುತ್ತಿರುವುದು ಆದಲ್ಲಿ, ಹೇಳುವವನ ಮಾತುಗಳು ಪ್ರಶ್ನಾತೀತ ಎಂದು ಪರಿಗಣಿಸುವುದಾದರೆ ಆತ ಧಾರ್ಮಿಕ ಗುರು, Preacher ಅದೇ ಪರಸ್ಪರ ಮಾತುಗಾಳಾದರೆ, ಪ್ರಶ್ನಾಪೇಕ್ಷಿತವಾದಲ್ಲಿ ಅದಕ್ಕೆ ಅವಕಾಶವಿತ್ತೇ ವ್ಯವಹರಿಸುವ ವ್ಯಕ್ತಿಯಾದಲ್ಲಿ ಆತ ಶಿಕ್ಷಕ teacher ಹೀಗೆ ವಿದ್ಯಾರ್ಥಿಗಳಿಂದ ಪ್ರಶ್ನೆಗಳನ್ನು ಅಪೇಕ್ಷಿಸುವ, ಉತ್ತರಿಸುವ ಸಂಗತಿಗಳೆಲ್ಲ ಜರುಗುವ ಸಂದರ್ಭದಲ್ಲಿ ಬಳಸುವ ಭಾಷೆ ಸರಳ, ಶುದ್ದ ವ್ಯಾಕರಣ ಬದ್ಧ, ಪಠ್ಯದ ಶಿಸ್ತಿಗೆ ಒಳಪಟ್ಟಿದ್ದಾಗಿರಬೇಕು ಹಾಗಲ್ಲದಿದ್ದಲ್ಲಿ ತರಗತಿಯ ಘನತೆ ಕ್ಷಣಾರ್ಧದಲ್ಲಿ ಛಿದ್ರಗೊಳ್ಳಬಹುದು.
ಕನ್ನಡದ ಸಂಧರ್ಭವನ್ನೇ ಗಮನಿಸುವುದಾದರೆ, ಕರ್ನಾಟಕದ ಬೇರೆ ಬೇರೆ ಪ್ರದೇಶಗಳಲ್ಲಿ ಬಳಸುವ ಕನ್ನಡದ ಕ್ರಮ ಬೇರೆ ಬೇರೆಯಾಗಿದ್ದಾಗ್ಯೂ, ತರಗತಿಯೊಳಗೆ ಸಾಮಾನ್ಯವಾಗಿ ಏಕಪ್ರಕಾರವಾದ ಗ್ರಂಥಸ್ಥವಾದ ಭಾಷಾ ಬಳಕೆಯಿರುವುದು ಅನಿವಾರ್ಯ. ಯಾಕೆಂದರೆ ಎಲ್ಲಾ ಭಾಗದ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳಲ್ಲೂ ಏಕರೂಪದ ಶಿಸ್ತುಬದ್ಧ ಭಾಷಾ ಬಳಕೆಯನ್ನು ಮೌಲ್ಯಮಾಪಕರು ನಿರೀಕ್ಷಿಸುತ್ತಾರೆ. ಅಲ್ಲಿ ತಮ್ಮ ತಮ್ಮ ಜಾಗೆಯದೆಂದು, ಭಾಷಾ ಬಳಕೆ ನಡೆದರೆ ಹೊರಗಿನವರಿಂದ ಶ್ಯೂನ್ಯಸಂಪಾದನೆ ಸಾಧ್ಯವಾಗಿಬಿಡಬಹುದು.
ಇಂಗ್ಲೀಷ್‍ನಲ್ಲಿದ್ದಂತೆ ಕನ್ನಡದಲ್ಲಿ Received pronounciation ಪದ್ದತಿ ಇಲ್ಲ ನಿಜ. ಆದರೆ ಆಕಾಶವಾಣಿಯ ವಾರ್ತೆ ಮತ್ತು ಪ್ರದೇಶ ಸಮಾಚಾರದ ಓದು ಕಾಲಕಾಲಕ್ಕೆ ಸಾಣೆ ಹಿಡಿಯಲ್ಪಡುತ್ತದೆ ಒಂದು ನಿರ್ದಿಷ್ಠ, ಸ್ಪಷ್ಟ ಭಾಷಾ ಪ್ರಯೋಗವನ್ನು ನೀಡಲು ಸಾಧ್ಯ ತರಗತಿಯೊಳಗೆ ಭಾಷೆ ಹಾಗೆ ಸ್ಪಷ್ಟವಾಗಿರಬೇಕಾದದ್ದು ಅಪೇಕ್ಷಣಿಯ. ಯಾವುದೇ ವಿಷಯದ ಮೇಲಾಗಲಿ, ಮಾತನಾಡುವ ಸಂದರ್ಭದಲ್ಲಿ ಒಂದು ಹಂತದ ಭಾಷಾಪ್ರೌಢಿಮೆ ಅಗತ್ಯ ಇಂಥ ಭಾಷಾ ಪ್ರೌಢಿಮೆ ತರಗತಿಯಿಂದ ತರಗತಿಗೆ ಏರುತ್ತಾ ಸಾಗಬೇಕು. ಜ್ಞಾನದ ಮಟ್ಟ ಅಧಿಕವಾಗುತ್ತಾ ಸಾಗಿದಂತೆ, ಭಾಷಾ ಬಳಕೆಯ ಗುಣಮಟ್ಟವೂ ಸುಧಾರಿಸುತ್ತಾ ಸಾಗಬೇಕು. ಶಿಕ್ಷಕನ ಜ್ಞ್ಞಾನದ ಮೊದಲ ಅಳತೆಗೋಲೇ ಆತನ ಭಾಷಾ ಬಳಕೆಯಿಂದ ಪ್ರಾರಂಭವಾಗುತ್ತದೆ. ಹಾಗಾಗಿ ಇಲ್ಲಿನ ಭಾಷಾ ಬಳಕೆಯಲ್ಲಿ ಗೊಂದಲಕ್ಕೆ, ಅಸ್ಪಷ್ಟತೆಗೆ ಅವಕಾಶವಿಲ್ಲ. ದತ್ತ ಕಾಲಾವಕಾಶದ ಸದ್ಬಳಕೆಯಾಗಬೇಕಾದದ್ದು ಅವಶ್ಯಕ, ಅದಕ್ಕೆ ಸಾಕಷ್ಟು ಸಿದ್ಧತೆ, ಬದ್ಧತೆ ಬೇಕು. ಹಾಗಲ್ಲದಿದ್ದ ಪಕ್ಷದಲ್ಲಿ ಆಂ, ಊಂ, ಅಂತಲೋ ಠ ಅದ್ನೋಡಿ, ಇತ್ಕೋಳಿ, ಇತ್ಯಾದಿ ಪದಗಳ, ಧ್ವನಿಗಳ ಮೂಲಕವೇ ಹೊತ್ತನ್ನು ಹಾಳುಮಾಡುವುದಾಗುತ್ತದೆ. ಒಂದೇ ಶಬ್ದ, ಶಬ್ದ ಗುಚ್ಚವನ್ನು ನೂರೆಂಟು ಬಾರಿ ಒಂದೇ ತರಗತಿಯಲ್ಲಿ ಬಳಸುವುದು ಕೂಡ ಯೋಗ್ಯ ಕ್ರಮವಲ್ಲ, class, classic, classicism ಏರ್ಪಡಬೇಕು. ಇದು ಸಾಧ್ಯವಾಗುವುದು ಕಲಿಸುವ ವಸ್ತು, ಕಲಿಸುವ ವ್ಯಕ್ತಿಗೆ ಸಂಪೂರ್ಣವಾಗಿ ಜೀರ್ಣವಾದಾಗ ಮಾತ್ರ. ವಿಷಯವನ್ನು ಜೀರ್ಣಿಸಿಕೊಂಡವನು ಅದನ್ನು ಸರಳವಾಗಿ, ಸ್ಪಷ್ಟವಾಗಿ, ಅರ್ಥವಾಗುವಂತೆ ಹೇಳಲು ಸಾಧ್ಯ. ತನಗೆ ಅರ್ಥವಾಗದ್ದನ್ನು, ಬೇರೆಯವರಿಗೆ ಅರ್ಥಮಾಡಿಸುತ್ತೇನೆನ್ನುವುದು ಅಹಂಕಾರದ ಮಾತು, ಹಾಗಾಗಿ ತರಗತಿಯೊಳಗಣ ಭಾಷೆ ಪರಿಪಕ್ವವಾಗಿ ಹೊರಗಡೆ ಬರುವುದು ಒಂದು ಜ್ಞಾನದ ಜೀರ್ಣ ಕ್ರಿಯೆಯಿಂದ, ಇನ್ನೊಂದು, ಭಾಷಾ ಮಸೆತದಿಂದ. ವಿಷಯದ ಸರಳತೆ ಮತ್ತು ಸಂಕೀರ್ಣತೆ ರೂಪಗೊಳ್ಳುವುದು ನಿಜವೇ ಆದರೂ, ಅಲ್ಲಿ ಅಸ್ಪಷ್ಟತೆಗೆ ಅವಕಾಶದ ಎಚ್ಚರ ಅಗತ್ಯ.
ಭಾಷಾ ಶುದ್ಧಿಯ ಜೊತೆಗೆ ಉಚ್ಛಾರದ ಶುದ್ಧಿಯ ಕಡೆಗೂ ಗಮನವಿರಬೇಕಾಗುತ್ತದೆ. ವಿದಾರ್ಥಿಗಳು ಪ್ರತಿಯೊಂದನ್ನು ಗಮನಿಸುತ್ತಾರೆ. ತರಗತಿಯ ಪ್ರತಿಯೊಂದು ಅಂಶವೂ, ತರಗತಿಯ ಹೊರಗಡೆ ಕೂಡ ಚರ್ಚೆಗೆ ಒಳಪಡುತ್ತಿರುತ್ತದೆ. ಅಪಭ್ರಂಶ ಭಾಷಾ ಬಳಕೆ ಅವರಿಗೆ ಕಿರಿ, ಕಿರಿಯ ಜೊತೆಗೆ ತರಗತಿಯೇ ಬೇಡವೆಂಬಂತಾಗಬಹುದು. ಹಾಗಾಗಿ ‘ಧ್ವನಿ’ಯನ್ನು ಹದಗೊಳಿಸಿಕೊಂಡು, ಅಗತ್ಯ ಏರಿಳಿತಗಳೊಂದಿಗೆ ಪಾಠಮಾಡಬೇಕಲ್ಲದೆ, ಏಕತಾನತೆಯಿಂದ ಕೂಡಿದ್ದ ಪಕ್ಷದಲ್ಲಿ ಕೇಳುಗರಲ್ಲಿ ಆಸಕ್ತಿಗೆ ಬದಲಾಗಿ, ನಿದ್ದೆ ಒತ್ತರಿಸಿ ಬರುವ ಸಾಧ್ಯತೆಯೇ ಹೆಚ್ಚು.
ಮಕ್ಕಳ ಮನಸ್ಸು ತುಂಬ ಸೂಕ್ಷ್ಮವಾಗಿರುತ್ತದೆ. ಆದ್ದರಿಂದ ಶಿಕ್ಷಕರ ಭಾಷಾ ಬಳಕೆ ಎಚ್ಚರಿಕೆಯಿಂದ ಕೂಡಿದ್ದಿರಬೇಕಾಗುತ್ತದೆ ಯಾವುದೇ ಸಂದರ್ಭದಲ್ಲೂ ತಾಳ್ಮೆಗೆಡದೆ ಇರುವುದು ಒಳ್ಳೆಯದು. ಬೇಡದ ಮಾತು, ತುಟಿಮೀರಿ ಬಂದದ್ದೇ ಆದ ಪಕ್ಷದಲ್ಲಿ ಅದರ ಪರಿಣಾಮ ಏನಾಗುತ್ತದೆ ಎಂದು ಹೇಳಲಾಗುವುದಿಲ್ಲ. ಸೂಕ್ಷ್ಮ ಮನಸ್ಸುಗಳು ಕಮರಬಹುದು, ತರಗತಿಯಲ್ಲಿ ಒಂದು ಏಟು ನೀಡಿದರೂ ಅದು ಅಷ್ಟು ಅಪರಾಧವಾಗಿರಲಿಕ್ಕಿಲ್ಲ. ಬೆನ್ನಿನ ಮೇಲಿನ ಪೆಟ್ಟು, ದೈಹಿಕ, ಅದನ್ನು ಅವರು ಮರೆಯುವುದು ಸಾದ್ಯ. ಮನಸ್ಸಿನ ಮೇಲೆ ಪೆಟ್ಟಾದರೆ ಕಷ್ಟ ಅದರಲ್ಲೂ ಸಹ, ಶಿಕ್ಷಣ ವ್ಯವಸ್ಥೆ ಇದ್ದ ಕಡೆ ಮತ್ತು ಕೇವಲ ವಿದ್ಯಾರ್ಥಿನಿಯರಷ್ಟೇ ಇದ್ದ ಕಡೆ ಆದಷ್ಟು ತೂಕದ ಮಾತು ಮತ್ತು ವರ್ತನೆ ಬಹಳ ಮುಖ್ಯ. ಶಿಕ್ಷಣ ವ್ಯವಸ್ಥೆಯೊಳಗೆ, ವಿದ್ಯಾರ್ಥಿಗಳ ಅಧ್ಯಯನಕ್ಕೆ ನಿಗದಿ ಪಡಿಸುವ ಪಠ್ಯ ಸಾಮಾನ್ಯವಾಗಿ ಮೇಲ್ಮಟ್ಟದ್ದೇ ಆಗಿರುತ್ತದೆ. ಪಠ್ಯರಚನಾ ಮಂಡಳಿ ಆ ಕುರಿತು ನಿಗಾವಹಿಸುತ್ತದೆ. (ಅಪವಾದಗಳು ಬೇರೆ) ಪ್ರಪಂಚದ ಉತ್ತಮ, ಮೇಲ್ದರ್ಜೆಯ ಪುಸ್ತಕಗಳನ್ನೇ ಅಧ್ಯಯನಕ್ಕೆ ಆಯ್ಕೆ ಮಾಡಿರುತ್ತದೆ. ಹಾಗೆ ಆಯ್ಕೆಗೆ ಯೋಗ್ಯವಾದವುಗಳನ್ನೇ ನಾವು classic ಎಂದು ಹೇಳಬಹುದು. ಹಾಗೆ ಇಟ್ಟ ಪಠ್ಯಗಳ ಘನತೆಗೆ ಮುಕ್ಕು ಬಾರದ ರೀತಿಯಲ್ಲಿ ಭಾಷಾ ಬಳಕೆ ಇರಬೇಕು. ಮನೆಯ ಮಾತು ಬೇರೆ, ತರಗತಿಯಲ್ಲಿನ ಮಾತು ಬೇರೆ. ಈ ಎಚ್ಚರ ತರಗತಿಯೊಳಗೆ ಇರದಿದ್ದಲ್ಲಿ, ಅಲ್ಲಿ ಮನೆಯ ಆಡು ನುಡಿಯನ್ನು ಅಥವಾ ಗ್ರಾಮ್ಯ ನುಡಿಗಟ್ಟನ್ನೇ ಅನಗತ್ಯವಾಗಿ ಬಳಸಿದಾಗ, ಅದಕ್ಕೆ ಒಗ್ಗಿಕೊಂಡಿರುವ ಕೆಲವರಿಗೆ ತತ್ಕಾಲದಲ್ಲಿ ಖುಷಿ ನೀಡಿದರೂ, ಉಳಿದವರಿಗೆ ಕಿರಿ, ಕಿರಿ ಆದೀತು. ಅವರು ಆ ಶಿಕ್ಷಕರನ್ನು ನೋಡುವ ದೃಷ್ಟಿಕೋನವೇ ಬದಲಾಗಲಿಕ್ಕೂ ಸಾಕು. ಹಾಗಾಗಿ ತರಗತಿಯೊಳಗಿನ ಭಾಷೇ ಪ್ರಭುದ್ಧವಾಗಿ, ಆದರೆ ಸರಳವಾಗಿ, ಶಾಸನ ಬದ್ಧವಾಗಿ [parliamentary language] ಆದರೆ ಕ್ಲಿಷ್ಟವಾಗಿರದೆ, ಶಿಕ್ಷಕನ ಪಂಗಡ, ಒಳಪಂಗಡಗಳ ಆಡು ನುಡಿಗಳನ್ನು ಮೀರಿ, ಜಾತ್ಯಾತೀತವಾದ ಸರ್ವರಿಗೂ ಸಲ್ಲಬಹುದಾದ ಹದವಾದ ಭಾಷೇಯ ಪ್ರಯೋಗ ಹೆಚ್ಚು ಪ್ರಯೋಜನಾಕಾರಿಯಾದೀತು.
ರವೀಂದ್ರ ಭಟ್ ಕುಳಿಬೀಡು

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!