24.1 C
Sidlaghatta
Monday, September 9, 2024

ಹಾಸ್ಟೆಲ್ ಮಕ್ಕಳಿಗೊಂದು ಪತ್ರ

- Advertisement -
- Advertisement -

ಮಗೂ,
ನಿನ್ನೆ ಮೊನ್ನೆಯಷ್ಟೇ ಅಂಬೆಗಾಲಿಕ್ಕುತ್ತಾ, ಏಳುತ್ತಾ ಬೀಳುತ್ತಾ ನಡೆದಾಡಿ, ತೊದಲು ನುಡಿಯಿಂದ ನಮ್ಮೆಲ್ಲರ ಕಣ್ಮನಗಳಿಗೆ ತಂಪೆರೆಯುತ್ತಿದ್ದ ನೀನು ಅದೆಷ್ಟು ಬೇಗ ನಮ್ಮೆತ್ತರಕ್ಕೆ ಬೆಳೆದು ನಿಂತಿದ್ದೀಯಾ. ತಂದೆ ತಾಯಿಯರ ಮನಸ್ಸಾದರೂ ಎಂತಹ ವಿಚಿತ್ರ ನೋಡಿ. ಮಗುವಿನ ಬಾಲಲೀಲೆಗಳನ್ನು ನೋಡುತ್ತಾ ಮೈಮರೆಯುವ ಅವರು, ಆ ಸಂತೋಷವನ್ನು ಅನುಭವಿಸಲು ಕಾಲ ನಿಂತು ಬಿಡಬಾರದೇ ಎಂದುಕೊಳ್ಳುತ್ತಾರೆ. ಜೊತೆಜೊತೆಗೆ ತಮ್ಮ ಮಗುವಿನ ಭವಿಷ್ಯವನ್ನು ರೂಪಿಸುವ ಮತ್ತು ಅದನ್ನು ತಮ್ಮ ಜೀವಿತಾವಧಿಯಲ್ಲೇ ಸವಿಯುವ ಕಾತರದಿಂದ ಸಮಯ ನಾಗಾಲೋಟದಲ್ಲಿ ಏಕೆ ಓಡುತ್ತಿಲ್ಲ ಎಂದೂ ಅವರು ಕೊರಗುತ್ತಾರೆ! ಆದರೆ ಕಾಲ ಇದಾವುದನ್ನೂ ಲೆಕ್ಕಿಸದೆ ತನ್ನದೇ ನಿಯಮಗಳಿಗನುಸಾರವಾಗಿ ಚಲಿಸುತ್ತದೆ.
ಇಂತಹ ಕಾಲದ ಒಂದು ನಿರ್ಣಾಯಕ ಘಟ್ಟದಲ್ಲಿ ನೀನಿದ್ದೀಯಾ ಮಗೂ. ನಿನ್ನ ವಿದ್ಯಾಭ್ಯಾಸದ ಅಗತ್ಯಗಳಿಗಾಗಿ ನೀನೀಗ ನಮ್ಮಿಂದ ದೂರ ಹೋಗಿ ಹಾಸ್ಟೆಲ್‍ನಲ್ಲಿ ವಸತಿ ಹೂಡಬೇಕಾಗಿದೆ. ಒಮ್ಮೆಲೆ ಇದು ನಿನ್ನ ಮೇಲೆ ಅನೇಕ ರೀತಿಯ ಒತ್ತಡಗಳನ್ನು ಹೇರುತ್ತದೆ. ನಿನ್ನ ವಿದ್ಯಾಭ್ಯಾಸ ನಿನ್ನ ಭವಿಷ್ಯದ ಜೀವನದ ಹಾದಿಯನ್ನು ನಿರ್ಧರಿಸುವ ತಿರುವಿನಲ್ಲಿದೆ. ಜೊತೆಗೆ ನಿನ್ನಲ್ಲಿ ಮೂಡುತ್ತಿರುವ ಹರೆಯ ನಿನ್ನನ್ನು ವಿವಿಧ ಕಾಮನೆ, ಸಾಹಸ, ಪ್ರಯೋಗಗಳಿಗೆ ಸೆಳೆಯುಲು ಹೊಂಚು ಹಾಕುತ್ತಿರುತ್ತದೆ. ಬರಿಯ ನಿನ್ನ ವೈಯುಕ್ತಿಕ ಬದುಕನ್ನಷ್ಟೇ ಅಲ್ಲ, ಇಡೀ ಜಗತ್ತನ್ನು ನೋಡುವ ನಿನ್ನ ದೃಷ್ಟಿಕೋನವೇ ಅಮೂಲಾಗ್ರವಾಗಿ ಬದಲಾಗುವ ಸಂಕ್ರಮಣ ಸಮಯವಿದು. ಇಂತಹ ಕಾಲದಲ್ಲಿ ಪೋಷಕರಿಂದ ದೂರವಿರುವ ಕೊರಗೂ ನಿನ್ನನ್ನು ಕಾಡಬಹುದು. ಅಥವಾ ಅಂತಹ ಸ್ವಾತಂತ್ರವನ್ನು ಸವಿಯುವ ಕಾತರದಲ್ಲೂ ನೀನಿರಬಹುದು! ಅದೇನೇ ಇದ್ದರೂ ನಮ್ಮ ಕಣ್ಣಳತೆಯಿಂದ ದೂರ ಹೋಗುತ್ತಿರುವ ನಿನಗೆ ನಮ್ಮ ಕೆಲವು ಅನಿಸಿಕೆಗಳನ್ನು ಹೇಳುವ ಸಮಯ ಒದಗಿ ಬಂದಿದೆ.
“ಇದೇನಪ್ಪಾ ಹೊಸದು ಇಷ್ಟು ದಿನ ಹೇಳದೇ ಇದ್ದದ್ದು” ಎಂದೋ ಅಥವಾ “ಈ ಅಪ್ಪ ಅಮ್ಮಂದು ಅದೇ ಹಳೇ ಗೋಳಿರಬೇಕು” ಎಂದೋ ಕಡೆಗಣಿಸಬೇಡ ಮಗೂ, ನಿನ್ನೆಲ್ಲಾ ಹರೆಯದ ತುಮುಲಗಳು ನಿನಗೆ ಮಾತ್ರ ವಿಶಿಷ್ಟವಾದದ್ದೆಂದು ನಿನಗನ್ನಿಸಿದರೂ, ನಾವೆಲ್ಲಾ ನಿನಗಿಂತ ಭಿನ್ನವಾದ ಕಾಲಘಟ್ಟದಲ್ಲಿ ಮತ್ತು ಬಹುಶಃ ಭಿನ್ನವಾದ ರೀತಿ ಅಥವಾ ತೀವ್ರತೆಗಳಲ್ಲಿ ಅವೆಲ್ಲವನ್ನೂ ಅನುಭವಿಸಿದ್ದೇವೆ. ಹಾಗಾಗಿ ನಿನ್ನ ಬಗೆಗಿನ ನಮ್ಮ ಕಾಳಜಿ ಮತ್ತು ನಮ್ಮ ಜೀವನಾನುಭವದ ಹಿನ್ನೆಲೆಯಲ್ಲಿ ನಮ್ಮ ಮಾತುಗಳಿಗೊಂದಿಷ್ಟು ಕಿವಿಯಗಲಿಸು. ನಂತರದ ನಿನ್ನೆಲ್ಲಾ ನಿರ್ಧಾರಗಳಿಗೆ, ಅವು ಕಾನೂನು ಬಾಹಿರ, ಅನೈತಿಕ ಅಥವಾ ಅನಾಗರಿಕವಾಗಿಲ್ಲದಿದ್ದಲ್ಲಿ, ನಮ್ಮ ಸಂಪೂರ್ಣ ಬೆಂಬೆಲವಿದೆಯೆಂದು ನಾನು ಆಶ್ವಾಸನೆ ಕೊಡುತ್ತೇನೆ.
ಮನೆಯಿಂದ ದೂರ ಹೋದ ಮೇಲೆ ಹಾಸ್ಟೆಲ್ ಮತ್ತು ಕಾಲೇಜಿನಲ್ಲಿ ನಿನ್ನ ಸುತ್ತೆಲ್ಲಾ ಹರೆಯದ ಹೊಳೆಯೇ ಹರಿಯುತ್ತಿರುತ್ತದೆ. ಇದು ನಿನ್ನಲ್ಲಿ ಚಿಗುರುತ್ತಿರುವ ಭಾವೀ ಜೀವನದ ಕನಸುಗಳಿಗೆ ಸೂಕ್ತ ವಾತಾವರಣ ಕೂಡ. ವಿಪರ್ಯಾಸವೆಂದರೆ, ನಿನ್ನ ಕನಸುಗಳಿಗೆ ಜೀವಜಲವಾಗಬೇಕಾದದ್ದು ನಿನ್ನನ್ನು ಕೊಚ್ಚಿಕೊಂಡು ಹೋಗಿ ದೂರದ ನಿರ್ಜನ ಪ್ರದೇಶದಲ್ಲಿ ಬೀಸಾಕಬಲ್ಲ ಪ್ರವಾಹವೂ ಆಗಬಲ್ಲದು. ಹಾಗಾಗಿ ಮೊದಲು ನಿನ್ನ ಜೀವನದ ದೂರಗಾಮೀ ಗುರಿಗಳನ್ನು ಸ್ಪಷ್ಟ ಪಡಿಸಿಕೊ. ಅದನ್ನು ವಾರ್ಷಿಕ, ಮಾಸಿಕ ಮತ್ತು ದೈನಿಕ ಗುರಿಗಳಾಗಿ ವಿಘಟನೆಗೊಳಿಸು. ನಂತರ ಸಕಲ ಸಿದ್ಧತೆಯೊಂದಿಗೆ ಜೀವನ ಸಮುದ್ರಕ್ಕೆ ಹಾರಿಬಿಡು.
ನಿನ್ನ ದೂರಾಗಾಮಿ ಗುರಿ ಮಾತ್ರ ನಾವಿಕನಿಗೆ ದಿಕ್ಸೂಚಿಯಾಗಿರುವ ಲೈಟ್ ಹೌಸ್‍ನಂತೆ ಯಾವಾಗಲೂ ನಿನ್ನ ಕಣ್ಣಳತೆಯಲ್ಲೇ ಇರಲಿ. ಆಗ ನಿನ್ನ ಹಾದಿಯಲ್ಲಿ ಬರುವ ಹರೆಯದ ಸಂಪೂರ್ಣ ಮಸ್ತಿಯನ್ನು ಅನುಭವಿಸು. ಲೈಟ್ ಹೌಸ್ ಕಣ್ಮರೆಯಾದೊಡನೆ ತಕ್ಷಣ ಎಚ್ಚೆತ್ತು ಅದನ್ನು ಅರಸಿದ ನಂತರ ಮಾತ್ರ ಮುಂದುವರೆ.
ಮಾನವನ ಲೈಂಗಿಕತೆಯ ಮೂಲಪಾಠಗಳನ್ನು ನಿನಗೀಗಾಲೇ ತಿಳಿಹೇಳಿದ್ದೇವೆ. ನಾನು ಇಲ್ಲಿಯವರೆಗೆ ಹೇಳಿರುವುದೆಲ್ಲಾ ಬರಿಯ ಥಿಯರಿ ಮಾತ್ರ! ಎಲ್ಲಾ ವಿಷಯಗಳಲ್ಲೂ ಥಿಯರಿಯಲ್ಲಿ ಕಲಿತಿದ್ದನ್ನು ಸದಾ ಕಾಲ ಉಳಿಯಬಲ್ಲಂತೆ ಮೆದುಳಿನಲ್ಲಿ ದಾಖಲಿಸಿಕೊಳ್ಳಲು ಪ್ರಾಕ್ಟಿಕಲ್‍ಗಳನ್ನು ಮಾಡಬೇಕು ಅಂತ ಕೂಡ ನಾನೇ ಹೇಳಿದ್ದೆ. ಹಾಗಾಗಿ ಸದ್ಯದ ನಿನ್ನ ಪರಿಸ್ಥಿತಿಗಳು ಇಂತಹ ಪ್ರಾಕ್ಟಿಕಲ್‍ಗಳಿಗೆ ಸರಿಯಾದ ಸಮಯ ಎಂದುಕೊಳ್ಳಬೇಡ! ನಿನ್ನ ಈಗಿನ ಗುರಿ ಅದಲ್ಲ ಎನ್ನುವುದನ್ನು ಮರೆಯದೆ ಭವಿಷ್ಯತ್ತಿಗೆ ನಿನ್ನ ಪ್ರಯೋಗಗಳನ್ನು ಮುಂದೂಡು! ಜೀವನದ ಮೊದಲ ಇಪ್ಪತ್ತೈದು ವರ್ಷಗಳನ್ನು ಉದ್ದೇಶರಹಿತವಾಗಿ ಕಳೆದರೆ ನಂತರದ ಬದುಕು ಮೂರಾಬಟ್ಟೆಯಾಗುವ ಸಾಧ್ಯತೆಗಳೇ ಹೆಚ್ಚು. ಇದಕ್ಕೆ ನಮ್ಮ ಸುತ್ತಲೂ ಸಾಕಷ್ಟು ಉದಾಹರಣೆಗಳಿವೆ.
ಲೈಂಗಿಕ ಸಾಹಸಗಳಿಂದ ತಪ್ಪಿಸಿಕೊಂಡರೂ, ಪ್ರೀತಿ ಪ್ರೇಮಗಳ ಬಲೆಗೆ ಬೀಳದೆ ಉಳಿಯುವುದು ಸುಲಭವಲ್ಲ. ನಮ್ಮ ಸಿನಿಮಾ, ಟೀವಿ ಧಾರಾವಾಹಿಗಳನ್ನು ಮಾದರಿಯಾಗಿಸಿಕೊಂಡು ಸಾಕಷ್ಟು ವಿದ್ಯಾರ್ಥಿಗಳು ಇದನ್ನು ಅನಿವಾರ್ಯವಾಗಿಸಿಕೊಂಡಿದ್ದಾರೆ. ನಾವೇನು ಈ ಲವ್ವು ಗಿವ್ವುಗಳನ್ನು ಢೋಂಗಿ ಎಂದು ಹೇಳುತ್ತಿಲ್ಲ. ಅದೂ ಅಲ್ಲದೆ ನಮಗೆ ಜಾತಿ ಧರ್ಮಗಳ ಬಂಧನವೂ ಇಲ್ಲವೆಂದು ನಿನಗೂ ಗೊತ್ತಿದೆ. ಹಾಗಿದ್ದರೂ ನಾವು ಸೂಚಿಸುತ್ತಿರುವುದು ಸದ್ಯದ ನಿನ್ನ ಗುರಿಗಳಿಗೆ ಈ ರೀತಿಯ ಭಾವನಾತ್ಮಕ ಎಳೆತಗಳು ಪೂರಕವಾಗಲಾರವು, ಬದಲಾಗಿ ಕಂಟಕಗಳೇ ಆಗಬಹುದು, ಎನ್ನುವುದು ಮಾತ್ರ. ಪ್ರೀತಿ ಪ್ರೇಮವೆಲ್ಲಾ ಗೊತ್ತಿಲ್ಲದೆ ಆಗಿಬಿಡುತ್ತದೆ ಎನ್ನುವ ಮಾತುಗಳಿಂದ ಕೂಡ ಮೋಸ ಹೋಗಬೇಡ. ಇವೆಲ್ಲಾ ಷೋಡಷ ಮನಸ್ಸುಗಳನ್ನು ಮರುಳು ಮಾಡಿ ಹಣ ಮಾಡುವ ಸಿನಿಮಾದವರ ಹುನ್ನಾರು ಮಾತ್ರ! ನಿನ್ನ ಜೀವನದ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಮಯ ಬಂದಾಗ ನಿನ್ನ ಭಾವನಾತ್ಮಕ ಅಗತ್ಯಗಳನ್ನು ಸರಿತೂಗಿಸಬಲ್ಲ ಸಂಗಾತಿಯನ್ನು ಹುಡುಕಿಕೊಳ್ಳಲು ನಿನಗೆ ಸಂಪೂರ್ಣ ಸ್ವಾತಂತ್ರವಿರುತ್ತದೆ.
ತಕ್ಷಣದ ಥ್ರಿಲ್‍ಗಳನ್ನು, ಅದೂ ಪದೇಪದೇ ಹೊಸ ಹೊಸ ರೀತಿಯ ರೋಮಾಂಚನಗಳನ್ನು ಅರಸುವುದು ಇಂದಿನ ಜೀವನಶೈಲಿಯೇ ಆಗಿಬಿಟ್ಟಿದೆ. ಇದರ ಬಗೆಗೆ ಎಚ್ಚರ ವಹಿಸದಿದ್ದರೆ ನಶೆಯ ವಸ್ತುಗಳತ್ತ ಸೆಳೆಯಲ್ಪಡುವ ಸಾಧ್ಯತೆಗಳು ಹೆಚ್ಚು. “ಒಮ್ಮೆ ಮಾತ್ರ” ಎನ್ನುವ ಯಾವುದೇ ಆಮಿಷಗಳಿಗೆ, “ಏ ಗಂಡಸಲ್ವೇನೋ, ಇದಕ್ಕೆಲ್ಲಾ ಹೆದರ್ತಾರಾ; ನಿನ್ಹತ್ರ ಏನೂ ಮಾಡೋಕೆ ಆಗಲ್ಲ, ಗಾಂಧೀ ನೀನು” ಎನ್ನುವ ಯಾವುದೇ ಸವಾಲುಗಳಿಗೆ ಮರುಳಾಗಬೇಡ. ನಶೆಯ ವಸ್ತುಗಳು ಉಸುಬಿನ ನೆಲವಿದ್ದಂತೆ, ನಿನಗೆ ಗೊತ್ತಿಲ್ಲದಂತೇ ನಿನ್ನನ್ನು ತನ್ನಲ್ಲಿ ಸಿಲುಕಿಸಿ ಸರ್ವನಾಶದತ್ತ ಕೊಂಡೊಯ್ಯುತ್ತದೆ.
ಸದ್ಯಕ್ಕೆ ನಮ್ಮ ಕಾಳಜಿಗಳು ಇಷ್ಟೇ ಮಗೂ, ನಿನ್ನ ದೂರಗಾಮೀ ಗುರಿಗಳತ್ತ ಮಾತ್ರ ಗಮನವಿಟ್ಟುಕೊ; ತಾತ್ಕಾಲಿಕ ಸೋಲುಗಳಿಂದ ಕಳೆಗುಂದಬೇಡ; ಸಣ್ಣ ಪುಟ್ಟ ಗೆಲುವುಗಳನ್ನು ಆನಂದಿಸು, ಆದರೆ ಅವುಗಳಿಂದ ಮೈಮರೆಯಬೇಡ; ಉತ್ತಮ ದೈಹಿಕ ಆರೋಗ್ಯವನ್ನಿಟ್ಟುಕೊ; ಮಾನಸಿಕ ಸಮತೋಲನವನ್ನು ಕಾಪಾಡಿಕೊ. ಯಾವುದೇ ಆತುರದ ನಿರ್ಧಾರಗಳನ್ನು ಕೈಕೊಳ್ಳಬೇಡ. ನಿನ್ನ ಮೇಲಿನ ನಮ್ಮ ಪ್ರೀತಿ ಷರತ್ತುರಹಿತವಾಗಿರುತ್ತದೆ; ನಿನ್ನ ಮನಃಪೂರ್ವಕ ಪ್ರಯತ್ನಗಳ ಯಾವುದೇ ಫಲಿತಾಂಶವೂ ನಮಗೆ ಸಂಪೂರ್ಣ ಒಪ್ಪಿಗೆ; ನಿನ್ನ ಕಷ್ಟ ಸುಖಗಳಲ್ಲೆಲ್ಲಾ ನಾವು ಸಂಪೂರ್ಣ ಪಾಲುದಾರರು ಎನ್ನುವ ಭರವಸೆಯನ್ನು ಮಾತ್ರ ನಾವು ಕೊಡಬಲ್ಲೆವು.
ಪ್ರೀತಿಯೊಂದಿಗೆ,
ನಿನ್ನ ಅಪ್ಪ ಅಮ್ಮ
ನಡಹಳ್ಳಿ ವಸಂತ್

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!