21.1 C
Sidlaghatta
Saturday, October 1, 2022

ಅಂಚೆಚೀಟಿಗಳೊಂದಿಗೆ ಸೈಕಲ್‌ ಜಾಥಾ

- Advertisement -
- Advertisement -

ತಾಲ್ಲೂಕಿನ ಮೇಲೂರು ಗ್ರಾಮದ ಗ್ರಾಮಾಂತರ ಅಂಚೆ ಚೀಟಿ ಸಂಗ್ರಹಕಾರರ ಸಂಘದ ವತಿಯಿಂದ ಅಂಚೆ ಚೀಟಿ ಸಂಗ್ರಹಕಾರ ಎಂ.ಆರ್‌.ಪ್ರಭಾಕರ್‌ ಎರಡು ದಿನಗಳ ಕಾಲ ಸೈಕಲ್‌ ಜಾಥಾ ಕೈಗೊಂಡು ಹಲವು ಸರ್ಕಾರಿ ಶಾಲೆಗಳಲ್ಲಿ ಅಂಚೆ ಚೀಟಿ ಪ್ರದರ್ಶನವನ್ನು ನಡೆಸಿದ್ದಾರೆ.
ಹೊಸಕೋಟೆ ತಾಲ್ಲೂಕಿನ ಉಪ್ಪಾರಹಳ್ಳಿ, ಚೌಳುತೋಟ, ಸೋಂಪುರ, ಕೈವಾರ, ಶಿಡ್ಲಘಟ್ಟ, ಮೇಲೂರು ಹಾಗೂ ವಿಜಯಪುರದ ಬಳಿಯ ಮಾಚನಹಳ್ಳಿಗಳಲ್ಲಿನ ಸರ್ಕಾರಿ ಶಾಲೆಗಳಲ್ಲಿ ಸುಮಾರು 60 ವಿಷಯಗಳಿಗೆ ಸಂಬಂಧಿಸಿದಂತೆ ಅಂಚೆಚೀಟಿಗಳನ್ನು ಪ್ರದರ್ಶಿಸಿದ್ದಾರೆ.
ತಮ್ಮ ಸೈಕಲ್‌ಗೆ ಅಂಚೆ ಚೀಟಿಗಳ ಸಂಗ್ರಹವಿರುವ ಎರಡು ಬ್ಯಾಗ್‌ಗಳನ್ನು ನೇತುಹಾಕಿಕೊಂಡು, ಸೈಕಲ್‌ ಬಾರ್‌ ಕೆಳಗೆ ವಿವಿಧ ಅಂಚೆಚೀಟಿಗಳೊಂದಿಗೆ ವಿಶ್ವಶಾಂತಿ ಸಂದೇಶ ವಾಹಕವನ್ನು ಪ್ರದರ್ಶಸುತ್ತಾ 64 ವರ್ಷವಾದರೂ ಯುವಕನಂತೆ ಸೈಕಲಾ ಜಾಥಾ ನಡೆಸಿದ್ದಾರೆ. ಪರಿಸರ ಉಳಿಸಿ ಎಂದು ಭಾಷಣ ಮಾಡುವವರ ನಡುವೆ ಎಲೆಮರೆ ಕಾಯಿಯಂತೆ ಯಾವುದೇ ಮಾಲಿನ್ಯ ಹೊಗೆ ಉಗುಳದ ಸೈಕಲ್‌ ತುಳಿಯುತ್ತಾ ಪರಿಸರ ಜಾಗೃತಿಯನ್ನು ನಡೆಸಿದ್ದಾರೆ.
ಭಾರತದರ್ಶನ, ಸಂಸ್ಕೃತಿ, ತಂತ್ರಜ್ಞಾನ, ಕೃಷಿ, ಹಕ್ಕಿಗಳು, ಕೀಟಗಳು, ಚಿಟ್ಟೆಗಳು, ಸರ್‌.ಎಂ.ವಿಶ್ವೇಶ್ವರಯ್ಯ, ಸ್ವಾತಂತ್ರ್ಯ ಹೋರಾಟಗಾರರು, ಕ್ರೀಡೆಗಳು, ಜಲಚರಗಳು, ವಿಮಾನ, ಸೌರವಿದ್ಯುತ್‌ ಹೀಗೆ ವೈವಿದ್ಯಮಯ ವಿಷಯಗಳಿಗೆ ಸಂಬಂಧಿಸಿದಂತೆ ಅಂಚೆ ಚೀಟಿಗಳ ಮೂಲಕ ಭಾರತದರ್ಶನ, ಸನಾತನಧರ್ಮ, ಸಂಸ್ಕೃತಿ, ಪರಂಪರೆ, ವಿಶ್ವಶಾಂತಿ, ಸ್ನೇಹಸೌಹಾರ್ಧ ಹಾಗೂ ಪರಿಸರ ಸಂದೇಶಗಳನ್ನು ಮಕ್ಕಳಿಗೆ ವಿವರಿಸುತ್ತಾರೆ.
ಹೊಸಕೋಟೆ ತಾಲ್ಲೂಕಿನ ವಿವಿಧ ಸರ್ಕಾರಿ ಶಾಲೆಗಳಲ್ಲಿ ಪ್ರದರ್ಶನ ನೀಡಿ ಕೈವಾರದ ಮೂಲಕ ಶಿಡ್ಲಘಟ್ಟ ತಲುಪಿದ ಅಂಚೆ ಚೀಟಿ ಸಂಗ್ರಹಕಾರ ಎಂ.ಆರ್‌.ಪ್ರಭಾಕರ್‌ ’ಪ್ರಜಾವಾಣಿ’ಯೊಂದಿಗೆ ಮಾತನಾಡಿದರು.
‘ಸೈಕಲ್‌ ಪರಿಸರ ಸಂರಕ್ಷಕ ವಾಹನ. ಆದ್ದರಿಂದ ಸೈಕಲ್‌ ಜಾಥಾ ಆಗಾಗ ನಡೆಸುತ್ತೇನೆ. ಅಂಚೆ ಚೀಟಿಗಳನ್ನು ಸರ್ಕಾರಿ ಶಾಲೆಗಳಲ್ಲಿ ಪ್ರದರ್ಶಸಿ ಗ್ರಾಮಾಂತರ ಮಕ್ಕಳಿಗೆ ಈ ಹವ್ಯಾಸವನ್ನು ಪರಿಚಯಿಸುತ್ತೇನೆ. ಹವ್ಯಾಸದೊಂದಿಗೆ ಅಂಚೆ ಚೀಟಿಯ ಮೂಲಕ ಹಲವಾರು ಸಂದೇಶ ಹಾಗೂ ಹೊಸ ವಿಷಯಗಳನ್ನು ತಿಳಿಸುತ್ತಾ ಸಾಗುತ್ತೇನೆ. ಮಕ್ಕಳ ಮನಸ್ಸು ಸೂಕ್ಷ್ಮವಾದದ್ದು. ಹೊಸ ಸಂಗತಿಗಳನ್ನು ಬೇಗ ಜೀರ್ಣಿಸಿಕೊಳ್ಳುತ್ತಾರೆ. ಆದರೆ ಅವರಿಗೆ ಯಾವ ವಿಷಯವನ್ನು ಕಲಿಸುತ್ತೇವೆಂಬುದು ದೊಡ್ಡವರ ವಿವೇಚನೆಗೆ ಸೇರಿದ್ದು. ನಾನು ಹೋದೆಡೆಯೆಲ್ಲಾ ಜನರು ಪ್ರೀತಿಯಿಂದ ಬರಮಾಡಿಕೊಂಡಿದ್ದಾರೆ. ಮಕ್ಕಳು ಕುತೂಹಲಗೊಂಡು ಹಲವು ಪ್ರಶ್ನೆಗಳನ್ನು ಕೇಳುತ್ತಾರೆ. ಯಾವುದೇ ಖರ್ಚಿಲ್ಲದೆ, ಆದಾಯದ ಅಗತ್ಯವಿಲ್ಲದೇ ನನ್ನಲ್ಲಿನ ಅಂಚೆಚೀಟಿಗಳ ಸಂಗ್ರಹದ ಮೂಲಕ ನಮ್ಮ ಸಂಸ್ಕೃತಿ, ಪರಿಸರ ಮತ್ತು ವಿಶ್ವಶಾಂತಿಯ ಪರಿಚಾರಕನಾಗಿದ್ದೇನೆ’ ಎಂದು ಹೇಳಿದರು.

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here