ಹನ್ನೆರಡನೇ ಶತಮಾನದಲ್ಲಿ ವಚನ ಸಾಹಿತ್ಯದ ಮೂಲಕ ಸಾಮಾಜಿಕ ಮೌಢ್ಯತೆಯನ್ನು ಹೊಡೆದು ಹಾಕುವಲ್ಲಿ ಶ್ರಮಿಸಿದ ನಿಜಶರಣ ಅಂಬಿಗರ ಚೌಡಯ್ಯ ನವರ ಸಾಧನೆ ಅವಿಸ್ಮರಣೀಯ ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ಬುಧವಾರ ಆಯೋಜಿಸಿದ್ದ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶರಣರ ಮಹತ್ವಗಳನ್ನು ತತ್ವಗಳನ್ನು ಮತ್ತು ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆದಾಗ ಮಾತ್ರ ಶರಣರ ಜಯಂತ್ಯುತ್ಸವ ಆಚರಿಸುವುದು ಸಾರ್ಥಕ ವಾಗುತ್ತದೆ. ನೇರ ನಡೆ ನುಡಿಗೆ ಹೆಸರಾದ ಚೌಡಯ್ಯನವರು ನಿಜ ಶರಣ ಎಂದೇ ಖ್ಯಾತಿಯನ್ನು ಗಳಿಸಿದ್ದರು ಎಂದರು.
ನಗರದ ಅಕ್ಷರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಬಿ.ವಿ.ಪ್ರಕಾಶ್ ಮುಖ್ಯ ಭಾಷಣಕಾರರಾಗಿ ಮಾತನಾಡಿ, ನಿಜಶರಣ ಅಂಬಿಗರ ಚೌಡಯ್ಯನವರು ತಮ್ಮ ಕಠೋರವಾದ ವಚನಗಳ ಮೂಲಕ ಸಮಾಜ ಪರಿವರ್ತನೆಗೆ ಶ್ರಮಿಸಿದ ಮಹಾನ್ ಶರಣರಾಗಿದ್ದಾರೆ. ಅವರ ತತ್ವ, ಆದರ್ಶಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಪಾಲಿಸಿದಾಗ ಒಳ್ಳೆಯ ಸುಸಂಸ್ಕೃತ ಸಮಾಜ ನಿರ್ಮಣ ಸಾಧ್ಯ ಎಂದರು.
ಈ ಸಂದರ್ಭದಲ್ಲಿ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಹಿರಿಯರಿಗೆ ಸನ್ಮಾನ ಮಾಡಲಾಯಿತು.
ಗ್ರೇಡ್ ೨ ತಹಸೀಲ್ದಾರ್ ಮುನಿಕೃಷ್ಣಪ್ಪ, ತಾಲ್ಲೂಕು ಪಂಚಾಯಿತಿ ಇಓ ಎಂ.ವೆಂಕಟೇಶ್, ಉಪಾಧ್ಯಕ್ಷ ಎಚ್.ನರಸಿಂಹಯ್ಯ, ಪೌರಾಯುಕ್ತ ಜಿ.ಎನ್.ಚಲಪತಿ, ನಗರಸಭಾ ಪ್ರಬಾರ ಅಧ್ಯಕ್ಷೆ ಪ್ರಭಾವತಿ ಸುರೇಶ್, ಸಮುದಾಯದ ಮುಖಂಡರಾದ ನ್ಯಾತಪ್ಪ, ಲಕ್ಷೀನಾರಾಯಣ, ಕೃಷ್ಣ, ಡಿ.ಎನ್.ಶಿವಣ್ಣ ಕಾರ್ಯಕ್ರಮದಲ್ಲಿ ಇದ್ದರು.
- Advertisement -
- Advertisement -
- Advertisement -