ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಶುಕ್ರವಾರ ತಾಲ್ಲೂಕು ಕಸಾಪ ವತಿಯಿಂದ ಆಯೋಜಿಸಿದ್ದ ‘ಶಾಲೆಯಂಗಳದಲ್ಲಿ ನುಡಿಸಿರಿ’ ಕಾರ್ಯಕ್ರಮದಲ್ಲಿ ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಕೈವಾರ ಶ್ರೀನಿವಾಸ್ ಮಾತನಾಡಿದರು.
ಕೈವಾರ ತಾತಯ್ಯನವರು ಹೇಳಿದಂತೆ ನೀಚ ಜನರ ಸಹವಾಸ ಬಿಟ್ಟು, ಸಜ್ಜನರ ಸಹವಾಸ ಮಾಡಬೇಕು. ಕುವೆಂಪು ಅವರ ಶ್ರೀರಾಮಾಯಣ ದರ್ಶನಂ, ಸರ್ವಜ್ಞನ ತ್ರಿಪದಿಗಳು, ಡಿವಿಜಿಯವರ ಮಂಕುತಿಮ್ಮನ ಕಗ್ಗ, ಶ್ರೀಮದ್ಭಗವದ್ಗೀತೆ, ಬಸವಣ್ಣನವರ ವಚನಗಳು ಮೊದಲಾದ ಪುಸ್ತಕಗಳನ್ನು ಸಂಗ್ರಹಿಸಿ ನಿರಂತರ ಓದಬೇಕು. ಮಕ್ಕಳಿಗೆ ಅವುಗಳ ಸಾರವನ್ನು ತಿಳಿಸಿ ನಮ್ಮ ಸಾಹಿತ್ಯ ಪರಂಪರೆ ಬಗ್ಗೆ ಹೆಮ್ಮೆ ಮೂಡಿಸಬೇಕು ಎಂದು ಹೇಳಿದರು.
ಮಕ್ಕಳ ಮನಸ್ಸಿನಲ್ಲಿ ಕನ್ನಡಮ್ಮನನ್ನು ಪ್ರತಿಷ್ಠಾಪಿಸುವುದು, ಎಳೆಯ ವಯಸ್ಸಿನಿಂದಲೇ ಕನ್ನಡ ಪ್ರೇಮವನ್ನು ಮಕ್ಕಳಲ್ಲಿ ಹುಟ್ಟಿಸುವುದು, ಕನ್ನಡ ಸಾಹಿತ್ಯ ಓದು ಹಾಗೂ ಬರವಣಿಗೆಗೆ ಉತ್ತೇಜನ ಕೊಡುವುದು ಕಸಾಪದ ಪ್ರಮುಖ ಉದ್ದೇಶವಾಗಿದೆ ಎಂದು ಅವರು ತಿಳಿಸಿದರು.
ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಎ.ಎಂ.ತ್ಯಾಗರಾಜ್ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಸರ್ಕಾರಿ ಶಾಲೆ ಹಾಗೂ ಮಕ್ಕಳಿಗೆ ಬೆನ್ನೆಲುಬಾಗಿ ಕಸಾಪ ನಿಂತಿದೆ. ದೇಶ ಸುತ್ತು ಕೋಶ ಓದು ಎಂಬ ನಾಣ್ಣುಡಿಯಂತೆ ಮಸ್ತಕ ಬೆಳಗಲು ಪುಸ್ತಕ ಓದಬೇಕು. ಟಿವಿ ಮೊಬೈಲ್ ಪ್ರಭಾದಿಂದ ಇಂದು ಪುಸ್ತಕ ಓದುವವರ ಸಂಖ್ಯೆ ಕ್ಷೀಣಿಸುತ್ತಿದೆ. ನಮ್ಮ ಹಿರಿಯರು ಮುಂದಿನ ತಲೆಮಾರಿಗಾಗಿ ಅನೇಕ ಗ್ರಂಥಗಳನ್ನು ರಚಿಸಿ ಜ್ಞಾನಸಾಗರವನ್ನು ಸಂರಕ್ಷಿಸಿದ್ದಾರೆ. ಪುಸ್ತಕಗಳು ನಮ್ಮ ಸಂಸ್ಕೃತಿ ಮತ್ತು ಹಿಂದಿನವರ ಹಿರಿಮೆ ಗರಿಮೆಗಳ ಇತಿಹಾಸವನ್ನು ಸಾರುತ್ತವೆ. ಅವರುಗಳನ್ನು ಅರಿತು ಸದ್ಗುಣಗಳನ್ನು ಬೆಳೆಸಿಕೊಳ್ಳಬೇಕು, ನಾಡು ನುಡಿಯ ಬಗ್ಗೆ ಕಾಳಜಿ ಮೂಡಿಸಿಕೊಳ್ಳಬೇಕು. ಕಸಾಪ ವತಿಯಿಂದ ಪುಸ್ತಗಳನ್ನು ಕೊಡುಗೆಯಾಗಿ ಕೊಡುವುದನ್ನು ರೂಢಿಸಿಕೊಂಡಿದ್ದೇವೆ ಎಂದು ನುಡಿದರು.
ಗಣಿತದ ಪರೀಕ್ಷೆಯಲ್ಲಿ ವಿಜೇತರಾದ ಒಂಭತ್ತು ಮಕ್ಕಳಿಗೆ ಕಸಾಪ ವತಿಯಿಂದ ಪ್ರಮಾಣಪತ್ರ ಹಾಗೂ ಪುಸ್ತಕಗಳನ್ನು ಬಹುಮಾನವಾಗಿ ನೀಡಲಾಯಿತು. ಅಪ್ಪೇಗೌಡನಹಳ್ಳಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಎಚ್.ಎ.ಎಲ್ ಉದ್ಯೋಗಿ ವೆಂಕಟೇಶ್ ಟೀಶರ್ಟ್‌ಗಳನ್ನು ನೀಡಿದರು. ಅಪ್ಪೇಗೌಡನಹಳ್ಳಿ ಪ್ರಭಾಕರ್ ಮಕ್ಕಳಿಗೆಲ್ಲರಿಗೂ ನಿಘಂಟನ್ನು ಕೊಡುಗೆಯಾಗಿ ಕೊಟ್ಟರು. ನಿವೃತ್ತ ಶಿಕ್ಷಕ ಶಾಮಸುಂದರ್ ಕವನ ವಾಚಿಸಿದರು.
ಕಸಾಪ ತಾಲ್ಲೂಕು ಘಟಕದ ಕಾರ್ಯದರ್ಶಿಗಳಾದ ಎಸ್.ಸತೀಶ್, ಚಾಂದ್‌ಪಾಷ, ಮಹಿಳಾ ಪ್ರತಿನಿಧಿ ದಾಕ್ಷಾಯಿಣಿ, ನಗರ ಘಟಕದ ಅಧ್ಯಕ್ಷ ಸಿ.ಎನ್.ಮುನಿರಾಜು, ಕಸಬಾ ಹೋಬಳಿ ಅಧ್ಯಕ್ಷ ರಮೇಶ್, ಎಸ್.ವಿ.ನಾಗರಾಜರಾವ್, ಶಂಕರ್, ನರಸಿಂಹಮೂರ್ತಿ, ಹಂಡಿಗನಾಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಮುನಿಯಪ್ಪ, ಸದಸ್ಯರಾದ ಜಯರಾಮ್, ಮಾಹದೇವಯ್ಯ, ಉಮಾ, ಬೈರೇಗೌಡ, ದ್ಯಾವಪ್ಪ, ಮೂರ್ತಿ, ಸಿ.ಡಿ.ಪಿ.ಒ ಲಕ್ಷ್ಮೀದೇವಮ್ಮ, ಸಿ.ಆರ್.ಪಿ ಪ್ರಕಾಶ್, ಮುನಿರಾಜು, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಶ್ರೀನಿವಾಸ್, ಎಸ್‌ಡಿಎಂಸಿ ಅಧ್ಯಕ್ಷೆ ಪುಷ್ಪ, ಕರವಸೂಲಿಗಾರ ಶ್ರೀನಿವಾಸ್, ಮೋಹನ್, ಮುಖ್ಯಶಿಕ್ಷಕಿ ಎಂ.ವಿ.ವೆಂಕಟರತ್ನಮ್ಮ, ಶಿಕ್ಷಕ ಅಶೋಕ್, ಶ್ರೀರಾಮ, ಹರೀಶ್, ಮುನಿರಾಜು ಹಾಜರಿದ್ದರು.
- Advertisement -
- Advertisement -
- Advertisement -
- Advertisement -