27.1 C
Sidlaghatta
Monday, July 14, 2025

ಅಮ್ಮನಕೆರೆಯ ಒತ್ತುವರಿ ತೆರವು ಕಾರ್ಯಾಚರಣೆ

- Advertisement -
- Advertisement -

ನಗರದ ಹೊರವಲಯದ ಅಮ್ಮನಕೆರೆಯ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಶುಕ್ರವಾರ ವೀಕ್ಷಣೆ ಮಾಡಿ, ಅಧಿಕಾರಿಗಳಿಂದ ಮಾಹಿತಿ ಪಡೆದು ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಮಾತನಾಡಿದರು.
ಶಿಡ್ಲಘಟ್ಟದ ಹೊರವಲಯದಲ್ಲಿರುವ ಅಮ್ಮನಕೆರೆ ಅಚ್ಚುಕಟ್ಟು ಪ್ರದೇಶವು ಹನುಮಂತಪುರ, ನೆಲ್ಲೀಮರದಹಳ್ಳಿ, ಲಕ್ಕಹಳ್ಳಿ, ಪ್ಯಾಲಹಳ್ಳಿ, ಎಲ್.ಮುತ್ತುಗದಹಳ್ಳಿ, ಹರಳಹಳ್ಳಿ, ವರದನಾಯಕನಹಳ್ಳಿ. ಹಂಡಿಗನಾಳ ಗ್ರಾಮಗಳಿಗೆ ಹೊಂದಿಕೊಂಡಿದೆ. ಒಟ್ಟು ೯೭೭ ಎಕರೆ ವಿಸ್ತೀರ್ಣವಿರುವ ಕೆರೆಯಲ್ಲಿ ೩೧೩.೩೭ ಎಕರೆಯಷ್ಟು ಒತ್ತುವರಿಯಾಗಿದೆ. ಕೆರೆಯನ್ನು ಕೆರೆಯಾಗಿ ಉಳಿಸಲು ಒತ್ತುವರಿ ತೆರವು ಕಾರ್ಯ ನಡೆದಿದೆ ಎಂದು ಅವರು ತಿಳಿಸಿದರು.
ಹಲವಾರು ವರ್ಷಗಳಿಂದ ಮಳೆಯಿಲ್ಲದೆ, ನೀರು ಸಂಗ್ರಹಣೆಯಾಗದೆ ಬಹಳಷ್ಟು ಒತ್ತುವರಿಯಾಗಿದೆ. ಈಗ ಬೇಸಿಗೆಯಲ್ಲಿ ಬಹು ಮುಖ್ಯವಾದ ಒತ್ತುವರಿ ತೆರವು ಕಾರ್ಯವನ್ನು ತಹಶೀಲ್ದಾರ್ ನೇತೃತ್ವದಲ್ಲಿ ಅಧಿಕಾರಿಗಳು ನಡೆಸಿದ್ದಾರೆ ಎಂದರು.
ಕೆರೆಯನ್ನು ಉಳಿಸಿಕೊಳ್ಳುವುದರಿಂದ ನಗರ ಹಾಗೂ ಸುತ್ತಮುತ್ತಲಿನ ಹಳ್ಳಿಗಳಿಗೆ ಸಾಕಷ್ಟು ಉಪಯೋಗವಾಗಲಿದೆ. ನೀರಿನ ಸಮಸ್ಯೆ ಜಿಲ್ಲೆಯ ಜನರನ್ನು ಬಾಧಿಸುತ್ತಿದೆ. ಎಚ್.ಎನ್ ವ್ಯಾಲಿ ನೀರು ಬಂದಾಗ ಹಿಡಿದಿಡಲು ಕೆರೆಗಳು ಯೋಗ್ಯವಾಗಿರಬೇಕು. ಕೆರೆಯಲ್ಲಿ ತೆಗೆಯುತ್ತಿರುವ ಮಣ್ಣನ್ನು ರೈತರು ಬೇಕಾದರೆ ತೆಗೆದುಕೊಂಡು ಹೋಗಬಹುದು ಎಂದು ಹೇಳಿದರು.
ಕುಂಟೆ ಪತ್ತೆ
ಶಿಡ್ಲಘಟ್ಟ ನಗರದಲ್ಲಿ ಕಲ್ಯಾಣಿಯೊಂದನ್ನು ಶುಚಿಗೊಳಿಸಲಾಗಿದೆ. ನಗರ ವ್ಯಾಪ್ತಿಯಲ್ಲಿ ಕುಂಟೆಯೊಂದನ್ನು ಪತ್ತೆ ಹಚ್ಚಿದ್ದು ಅನಧಿಕೃತ ಹೆಸರುಗಳು ಪಹಣಿಯಲ್ಲಿ ಬಂದಿರುವುದು ತಿಳಿದುಬಂದಿದೆ. ಅದನ್ನು ಸರ್ಕಾರದ ವಶಕ್ಕೆ ಪಡೆಯಲಿದ್ದೇವೆ. ಸಾರ್ವಜನಿಕ ಉದ್ದೇಶಕ್ಕಾಗಿ ಇರುವ ಸ್ಥಳಗಳನ್ನು ರಕ್ಷಿಸುವ ಕೆಲಸ ಮಾಡಲಾಗುವುದು ಎಂದರು.
ನೀರಿಗಾಗಿ ಅನುದಾನ
ಟ್ಯಾಂಕರ್ ಮೂಲಕ ಜಿಲ್ಲೆಯ ಬಹಳಷ್ಟು ಕಡೆ ನೀರು ಸರಬರಾಜು ಮಾಡುತ್ತಿದ್ದೇವೆ. ಟ್ಯಾಂಕರ್ ನೀರಿಗಾಗಿಯೇ ನಮ್ಮ ಜಿಲ್ಲೆಗೆ ವಿಶೇಷವಾಗಿ ೬ ಕೋಟಿ ರೂ ಅನುದಾನ ಬಂದಿದೆ. ಜಿಲ್ಲಾ ಪಂಚಾಯಿತಿಗೆ ಕೊಳವೆ ಬಾವಿ ಕೊರೆಸಲು ಹಾಗೂ ಮೋಟರ್ ವೈರ್ ಇತ್ಯಾದಿಗಾಗಿ ೯ ಕೋಟಿ ರೂ ಹಣ ಬಂದಿದೆ. ಎನ್.ಆರ್.ಡಿ.ಡಬ್ಲೂ.ಬಿ ಯೋಜನೆಯಲ್ಲಿ ಕುಡಿಯುವ ನೀರಿಗಾಗಿ ೭ ಕೋಟಿ ರೂ ಅನುದಾನ ಬಂದಿದೆ. ಈ ಅನುದಾನಗಳೆಲ್ಲ ಸಮರ್ಪಕವಾಗಿ ಖರ್ಚು ಆಗುತ್ತಿವೆ. ಸಮಸ್ಯೆಯೆಂದರೆ ಶೇ ೬೦ ರಷ್ಟು ಕೊಳವೆಬಾವಿಗಳಲ್ಲಿ ನೀರು ಸಿಗುತ್ತಿಲ್ಲ. ಕೆರೆ ಕುಂಟೆಗಳನ್ನು ಉಳಿಸಿಕೊಂಡು ನೀರು ಹಿಡಿದಿಡಲು ಯೋಗ್ಯವಾಗುವಂತೆ ರೂಪಿಸಿದಲ್ಲಿ ಅಂತರ್ಜಲ ಅಭಿವೃದ್ಧಿಯಾಗಿ ಮುಂದಿನ ದಿನಗಳಲ್ಲಿ ಅನುಕೂಲವಾಗಲಿದೆ ಎಂದು ನುಡಿದರು.
ಗೋಶಾಲೆ ನಿರ್ಮಾಣ ಯೋಜನೆ
ಮೇವು ವಿತರಿಸುವ ಯೋಜನೆಯಿಲ್ಲ. ಪಶು ಇಲಾಖೆಯವರ ಮಾಹಿತಿಯ ಪ್ರಕಾರ ಸುಮಾರು ಆರು ವಾರಗಳಿಗಾಗುವಷ್ಟು ಮೇವು ಜಿಲ್ಲೆಯಲ್ಲಿದೆ. ಆದರೆ, ಗೋಶಾಲೆ ನಿರ್ಮಿಸುವ ಯೋಜನೆಯಿದೆ. ತಹಶಿಲ್ದಾರುಗಳಿಂದ ವರದಿಯನ್ನು ಪಡೆದು ಎಲ್ಲಿ ಅಗತ್ಯವಿದೆಯೋ ಅಲ್ಲಿ ಗೋಶಾಲೆ ತೆರೆದು, ಅಲ್ಲಿಗೆ ತರುವ ಜಾನುವಾರುಗಳಿಗೆ ಉಚಿತ ಚಿಕಿತ್ಸೆ, ಮೇವು ಹಾಗೂ ಲಸಿಕೆ ಹಾಕಿಸಲಾಗುತ್ತದೆ.
ಕಸಾಯಿಖಾನೆಗೆ ಸ್ಥಳ
ನಗರಸಭೆಗಳಲ್ಲಿ ಕಸಾಯಿಖಾನೆಗೆ ಸ್ಥಳವನ್ನು ಮೀಸಲಿಡುವ ಅಗತ್ಯವಿದೆ. ಎಲ್ಲೆಂದರಲ್ಲಿ ಮಾಂಸ ಕತ್ತರಿಸುವುದು ಮಾರಾಟ ಮಾಡುವುದನ್ನು ತಪ್ಪಿಸಿ ಯಾರಿಗೂ ತೊಂದರೆಯಾಗದಂತೆ ಒಂದೇ ಸ್ಥಳ ಮಾಡುವ ಬಗ್ಗೆ ತಹಶೀಲ್ದಾರೊಂದಿಗೆ ಚರ್ಚಿಸಲಾಗುವುದು ಎಂದು ಹೇಳಿದರು.
ಕೆರೆಯಲ್ಲಿ ಗುಂಡಿಗಳನ್ನು ಮುಚ್ಚಲು ಮನವಿ
“ರೈಲ್ವೆಯವರು ಕೆರೆಯ ಕೆಲವು ಸ್ಥಳಗಳಲ್ಲಿ ಮಣ್ಣನ್ನು ತೆಗೆದಿದ್ದು ಆಳವಾಗಿ ಗುಂಡಿಗಳಾಗಿವೆ. ಈಗ ಹೇಗಿದ್ದರೂ ಕೆರೆಯಲ್ಲಿ ಮಣ್ಣು ತೆಗೆಯಲಾಗುತ್ತಿದೆ. ಆಳವಾದ ಗುಣಿಗಳನ್ನು ಕೆರೆಯ ಆಳಕ್ಕೆ ತಕ್ಕಷ್ಟು ಉಳಿಸಿಕೊಂಡು ಮುಚ್ಚಿಬಿಡಿ. ಮುಂದೆ ಎಚ್.ಎನ್.ವ್ಯಾಲಿ ನೀರು ಬಂದಾಗ ಜನ ಜಾನುವಾರುಗಳಿಗೆ ಪ್ರಾಣಾಪಾಯ ತಪ್ಪುತ್ತದೆ” ಎಂದು ಈ ಸಂದರ್ಭದಲ್ಲಿ ಹಂಡಿಗನಾಳ ಗ್ರಾಮ ಪಂಚಾಯಿತಿ ಸದಸ್ಯ ಜಯರಾಮ್ ಜಿಲ್ಲಾಧಿಕಾರಿಯನ್ನು ಮನವಿ ಮಾಡಿದರು.
ಗ್ರೇಡ್ ೨ ತಹಶೀಲ್ದಾರ್ ಹನುಮಂತರಾವ್, ಎ.ಡಿ.ಎಲ್.ಆರ್ ಗಂಗಾಧರಪ್ಪ, ಮೋಜಣಿ ಮೇಲ್ವಿಚಾರಕ ವಸಂತಕುಮಾರ್, ಎಚ್.ಎನ್.ವ್ಯಾಲಿ ಎಂಜಿನಿಯರ್ ಪ್ರದೀಪ್, ಗ್ರಾಮ ಲೆಕ್ಕಿಗರಾದ ನಾಗರಾಜು, ನಾಗೇಂದ್ರ ಹಾಜರಿದ್ದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!