ತಾಲ್ಲೂಕಿನ ಆನೂರು ಗ್ರಾಮಕ್ಕೆ ಕುಡಿಯುವ ನೀರನ್ನು ಒದಗಿಸುವ ಪಂಚಾಯತಿಯ ಕೊಳವೆಬಾವಿ ಕಾರ್ಯನಿರ್ವಹಿಸಲು ಸಮರ್ಪಕವಾಗಿ ವಿದ್ಯುತ್ ನೀಡುವಂತೆ ಒತ್ತಾಯಿಸಿ ರೈತ ಸಂಘದ ಸದಸ್ಯರು ಹಾಗೂ ಆನೂರು ಗ್ರಾಮಸ್ಥರು ಬೆಸ್ಕಾಂ ಮುಂದೆ ಗುರುವಾರ ಪ್ರತಿಭಟಿಸಿದರು.
ಆನೂರು ಗ್ರಾಮದಲ್ಲಿ ಪಂಚಾಯತಿಯ ಕೊಳವೆ ಬಾವಿಯಿಂದ ಶುದ್ಧ ನೀರಿನ ಘಟಕಕ್ಕೆ ಸಂಪರ್ಕವನ್ನು ಕಲ್ಪಿಸಲಾಗಿದೆ. ಶುದ್ಧೀಕರಣವಾದ ನೀರನ್ನು ಗ್ರಾಮಸ್ಥರು ಕುಡಿಯಲು ತೆಗೆದುಕೊಂಡು ಹೋಗುತ್ತಾರೆ. ಆದರೆ, ಸಮರ್ಪಕವಾಗಿ ವಿದ್ಯುತ್ ನೀಡದ ಕಾರಣ ಅತ್ತ ಕೊಳವೆ ಬಾವಿಯಿಂದ ನೀರನ್ನು ಮೇಲೆತ್ತಲೂ ಆಗದೆ, ಇತ್ತ ಸಂಗ್ರಹವಾದ ನೀರನ್ನು ಶುದ್ಧೀಕರಿಸಲೂ ಆಗದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಶುದ್ಧೀಕರಣ ಘಟಕವಿದ್ದರೂ ಶುದ್ಧ ನೀರನ್ನು ಕುಡಿಯಲು ಆಗದಂತಾಗಿದೆ. ಆದ್ದರಿಂದ ಗ್ರಾಮಕ್ಕೆ ಸಮರ್ಪಕವಾಗಿ ವಿದ್ಯುತ್ ನೀಡಬೇಕೆಂದು ಒತ್ತಾಯಿಸಿದರು.
ಪ್ರತಿಭಟನಾಕಾರರು ಮನವಿ ಪತ್ರವನ್ನು ಬೆಸ್ಕಾಂ ಎ.ಇ.ಇ ಪರಮೇಶ್ ಅವರಿಗೆ ನೀಡಿದರು.
ರೈತ ಸಂಘ ಹಾಗೂ ಹಸಿರು ಸೇನೆಯ ತಾಲ್ಲೂಕು ಅಧ್ಯಕ್ಷ ಎಸ್.ಎಂ.ರವಿಪ್ರಕಾಶ್, ಪ್ರಧಾನ ಕಾರ್ಯದರ್ಶಿ ಬಾಲಮುರಳಿಕೃಷ್ಣ, ಭಕ್ತರಹಳ್ಳಿ ಪ್ರತೀಶ್, ವಿಜಯಕುಮಾರ್, ಶಶಿಕುಮಾರ್, ಮುನಿರಾಜು, ನಾಗರಾಜ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
- Advertisement -
- Advertisement -
- Advertisement -
- Advertisement -