ಉಚಿತ ಆರೋಗ್ಯ ತಪಾಸಣಾ ಶಿಬಿರ

0
874

ಇತ್ತೀಚೆಗೆ ವೈದ್ಯಕೀಯ ಚಿಕಿತ್ಸೆ ಅತ್ಯಂತ ದುಬಾರಿಯಾಗಿದ್ದು ಗ್ರಾಮೀಣ ಜನರಿಗೆ ಉಪಯುಕ್ತವಾಗಲಿ ಮತ್ತು ಅವರ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲೆಂದು ತಜ್ಞ ವೈದ್ಯರ ಸಹಕಾರದೊಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಿರುವುದಾಗಿ ಎಸ್.ಎನ್.ಕ್ರಿಯಾ ಟ್ರಸ್ಟ್ ಅಧ್ಯಕ್ಷ ಆಂಜಿನಪ್ಪ (ಪುಟ್ಟು) ತಿಳಿಸಿದರು.
ತಾಲ್ಲೂಕಿನ ಚೀಮಂಗಲ ಗ್ರಾಮದ ಕುವೆಂಪು ಶತಮಾನೋತ್ಸವ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಶನಿವಾರ ಎಸ್.ಎನ್ ಕ್ರಿಯಾ ಟ್ರಸ್ಟ್ ವತಿಯಿಂದ ಹೊಸಕೋಟೆಯ ಎಂ.ವಿ.ಜೆ ಆಸ್ವತ್ರೆಯವರ ಸಹಯೋಗದಲ್ಲಿ ನಡೆಸಿದ ಉಚಿತ ಬೃಹತ್ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ಜನರು ಉತ್ತಮ ಚಿಕಿತ್ಸೆಗಾಗಿ ಬಹುದೂರ ಹೋಗಬೇಕು. ಅದರಲ್ಲೂ ವಯಸ್ಕರಿಗೆ ಹಲವಾರು ಸಮಸ್ಯೆಗಳಿರುತ್ತವೆ. ಹಾಗಾಗಿ ಎಂ.ವಿ.ಜೆ ಆಸ್ವತ್ರೆಯ ಆಡಳಿತ ಮಂಡಳಿಯೊಂದಿಗೆ ಈಗಾಗಲೇ ಮಾತನಾಡಿ ಆರೋಗ್ಯ ಕಾರ್ಡ್ ಕೊಡಿಸಲಾಗಿದೆ. ಈ ಕಾರ್ಡ್ ಬಡವರಿಗೆ ನೀಡುತ್ತಿದ್ದು, ಹೊಸಕೋಟೆಯ ಎಂ.ವಿ.ಜೆ ಆಸ್ವತ್ರೆಯಲ್ಲಿ ರಿಯಾಯಿತಿ ದರದಲ್ಲಿ ಮುಂದಿನ ದಿನಗಳಲ್ಲಿ ಚಿಕಿತ್ಸೆಯನ್ನು ಪಡೆಯಬಹುದಾಗಿದೆ ಎಂದು ಹೇಳಿದರು.
ಹಲವಾರು ಮಂದಿ ತಜ್ಞ ವೈದ್ಯರು ಆಗಮಿಸಿದ್ದಾರೆ. ಮಧುಮೇಹ, ರಕ್ತದೊತ್ತಡ, ಕಣ್ಣು, ಮೂಳೆ, ಮಕ್ಕಳ ತಜ್ಞರು ಹಾಗೂ ಸ್ತ್ರೀ ರೋಗ ತಜ್ಞರು ಬಂದಿರುವರು. ಔಷಧಿಗಳನ್ನು ಉಚಿತವಾಗಿ ನೀಡುತ್ತಿದ್ದೇವೆ. ಯಶಸ್ವಿನಿ ಮತ್ತು ಆರ್‍ಎಸ್ಬಿವೈ ಕಾರ್ಡ್ ಹೊಂದಿರುವವರಿಗೆ ಉಚಿತವಾಗಿ ಶಸ್ತ್ರಚಿಕಿತ್ಸೆಯನ್ನು ಹೊಸಕೋಟೆಯ ಎಂ.ವಿ.ಜೆ ಆಸ್ಪತ್ರೆಯಲ್ಲಿ ನಡೆಸಲಾಗುತ್ತದೆ. ಯಶಸ್ವಿನಿ ಮತ್ತು ಆರ್‍ಎಸ್ಬಿವೈ ಕಾರ್ಡ್ ಹೊಂದಿಲ್ಲದ ಬಡವರಿಗೆ ಎಸ್.ಎನ್.ಕ್ರಿಯಾ ಟ್ರಸ್ಟ್ ವತಿಯಿಂದ ಶಸ್ತ್ರಚಿಕಿತ್ಸೆಗೆ ನೆರವು ನೀಡಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಶ್ರವಣ ದೋಷವುಳ್ಳರಿಗೆ ಟ್ರಸ್ಟ್ ವತಿಯಿಂದ ಶ್ರವಣ ಸಾಧನಗಳು ಮತ್ತು ಕಣ್ಣಿನ ಸಮಸ್ಯೆ ಇರುವವರಿಗೆ ಕನ್ನಡಕಗಳನ್ನು ಉಚಿತವಾಗಿ ವಿತರಿಸಲಾಯಿತು.
ಈ ಶಿಬಿರದಲ್ಲಿ ಹೊಸಕೋಟೆಯ ಎಂ.ವಿ.ಜೆ ಆಸ್ವತ್ರೆಯ ನುರಿತ ತಜ್ಞರಿಂದ ಸ್ತ್ರೀಯರ ಸಮಸ್ಯೆಗಳು, ಮೂಳೆ ಸಾಂದ್ರತೆ ಮತ್ತು ಕೀಲುರೋಗ ತಪಾಸಣೆ, ನೇತ್ರ ತಪಾಸಣೆ, ಕಿವಿ ಮೂಗು ಮತ್ತು ಗಂಟಲು ತಪಾಸಣೆ, ರಕ್ತದೊತ್ತಡ ಮತ್ತು ಮಧುಮೇಹ ಪರೀಕ್ಷೆ ಮತ್ತು ಇನ್ನೂ ಹಲವಾರು ಕಾಯಿಲೆಗಳಿಗೆ ಸಂಬಂಧಿಸಿದಂತೆ ಉಚಿತ ತಪಾಸಣೆ ಮಾಡಲಾಯಿತು. ಸುತ್ತಮುತ್ತಲಿನ ಗ್ರಾಮಗಳಿಂದ ನೂರಾರು ಮಂದಿ ಶಿಬಿರದಲ್ಲಿ ಚಿಕಿತ್ಸೆ ಪಡೆದರು.
ಎಂ.ವಿ.ಜೆ ಆಸ್ವತ್ರೆಯ ವ್ಯವಸ್ಥಾಪಕ ಡಾ. ಪ್ರಮೋದ್, ಶಾಲೆಯ ಮುಖ್ಯ ಶಿಕ್ಷಕ ಸಿ.ಎಂ.ಮುನಿರಾಜು, ಶಿಕ್ಷಕ ಮಂಜುನಾಥ, ಪಿಡಿಓ ಹರೀಶ್‍ಗೌಡ, ಮುನಿವೆಂಕಟಪ್ಪ, ಮಂಜುನಾಥ್, ಅನಿಲ್, ಬೈರೇಗೌಡ, ಆಂಜಿನಪ್ಪ, ಆನೂರು ದೇವರಾಜ್, ವಿಶ್ವನಾಥ, ಅಂಬರೀಶ್, ಏನಿಗದೆಲೆ ಅಶ್ವತ್ಥರೆಡ್ಡಿ, ಊಲಿಬೆಲೆ ಗೋವಿಂದಪ್ಪ, ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!