ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಬೆಳವಣಿಗೆಯ ಜೊತೆ ಆರೋಗ್ಯ ಬೆಳವಣಿಗೆ ಅಗತ್ಯವಾಗಿದ್ದು ಎಚ್ಐವಿ ಎಂಬುದು ಬಯಸಿದರೆ ಮಾತ್ರ ಬರುವ ಕಾಯಿಲೆಯಾಗಿದೆ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ಅನಿಲ್ಕುಮಾರ್ ತಿಳಿಸಿದರು.
ಪಟ್ಟಣದ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ತಾಲ್ಲೂಕು ವಕೀಲರ ಸಂಘದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗುಣಪಡಿಸಲಾಗದ ಮಾರಕ ರೋಗ ಏಡ್ಸ್ ಭಾರತದಲ್ಲಿ ಶರವೇಗದಲ್ಲಿ ಹರಡುತ್ತಿದೆ. ರೋಗ ಬಾರದಂತೆ ಎಚ್ಚರಿಕೆ ವಹಿಸುವುದೊಂದೇ ಇದಕ್ಕೆ ಮದ್ದಾಗಿದ್ದು, ಜನತೆಯಲ್ಲ ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ದೊಡ್ಡಮಟ್ಟದಲ್ಲಾಗಬೇಕು. ಅಜ್ಞಾನ, ಅಜಾಗರೂಕತೆ, ಅರಿವಿನ ಕೊರತೆಯಿಂದಾಗಿ ದಿನದಿಂದ ದಿನಕ್ಕೆ ಏಡ್ಸ್ ರೋಗ ಹೆಮ್ಮರದಂತೆ ಹರಡುತ್ತಿದೆ. ಯುವಜನತೆ ಹೆಚ್ಚಾಗಿ ರೋಗಕ್ಕೆ ತುತ್ತಾಗುತ್ತಿದ್ದು, ಇವರಿಗೆ ಜಾಗೃತಿ ಮೂಡಿಸುವ ಕೆಲಸ ಕೇವಲ ಆರೋಗ್ಯ ಇಲಾಖೆಯದೆಂದು ಸುಮ್ಮನಿರದೇ ಎಲ್ಲರೂ ಈ ಕಾರ್ಯದಲ್ಲಿ ಕೈ ಜೋಡಿಸಬೇಕು ಎಂದರು.
ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎಂ.ಪಾಪಿರೆಡ್ಡಿ ಮಾತನಾಡಿ, ಏಡ್ಸ್ ಎಂಬ ಮಹಾಮಾರಿಗೆ ಇಂದು ಯುವ ಜನತೆ ಹೆಚ್ಚಾಗಿ ಬಲಿಯಾಗುತ್ತಿದ್ದಾರೆ. ಅದರಲ್ಲೂ ಹಳ್ಳಿಗಳಲ್ಲಿ ಎಚ್ಐವಿ ಪೀಡಿತರ ಸಂಖ್ಯೆ ಹೆಚ್ಚಾಗಿ ಕಂಡು ಬರುತ್ತಿದೆ. ಈ ಬೆಳವಣಿಗೆ ದೇಶದ ಭವಿಷ್ಯಕ್ಕೆ ಮಾರಕವಾಗಿದ್ದು ಯುವಜನತೆಗೆ ಏಡ್ಸ್ ಬಗ್ಗೆ ಅರಿವು ಹಾಗೂ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಹೇಳಿದರು.
ಡಾ.ಕಿರಣ್ ಕುಮಾರ್ ಏಡ್ಸ್ ರೋಗದ ಕುರಿತಂತೆ ಉಪನ್ಯಾಸ ನೀಡಿದರು. ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳೊಂದಿಗೆ ವಕೀಲರು, ಉಪನ್ಯಾಸಕರು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಏಡ್ಸ್ ಜಾಗೃತಿ ಜಾಥಾ ನಡೆಸಿದರು.
ಪ್ರಾಂಶುಪಾಲ ಆನಂದ್, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎಂ.ಪಾಪಿರೆಡ್ಡಿ, ಸರ್ಕಾರಿ ವಕೀಲ ಶ್ರೀನಿವಾಸ್, ಡಾ.ಕಿರಣ್ ಕುಮಾರ್, ವಕೀಲರಾದ ಬೈರಾರೆಡ್ಡಿ, ಸುಬ್ರಮಣ್ಯಪ್ಪ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -