ತಾಲ್ಲೂಕು ಬ್ರಾಹ್ಮಣ ಮಹಾಸಭಾ ಮತ್ತು ಶಂಕರ ಸೇವಾ ಟ್ರಸ್ಟ್ ವತಿಯಿಂದ ಶಂಕರ ಜಯಂತಿ ಮಹೋತ್ಸವ ಮತ್ತು ಸಾಮೂಹಿಕ ಧರ್ಮೋಪನಯನಗಳನ್ನು ಭಾನುವಾರ ಅಗ್ರಹಾರ ಬೀದಿಯಲ್ಲಿರುವ ಏಕಾಂಬರೇಶ್ವರಸ್ವಾಮಿ ದೇವಾಲಯ ಮತ್ತು ಶಂಕರಮಠದಲ್ಲಿ ಶ್ರದ್ಧಾಭಕ್ತಿಯಿಂದ ಆಚರಿಸಿದರು.
ಕಳೆದ ನಾಲ್ಕು ದಿನಗಳಿಂದ ವಿವಿಧ ಪೂಜಾ ಕಾರ್ಯಕ್ರಮಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ದೇವಾಲಯದಲ್ಲಿ ಆಯೋಜಿಸಲಾಗಿತ್ತು. ಗಾಯತ್ರಿ ಮಹಿಳಾ ಮಂಡಳಿಯವರಿಂದ ದೇವತಾ ಸ್ತೋತ್ರಗಳು, ಡಾ.ಡಿ.ಟಿ.ಸತ್ಯನಾರಾಯಣರಾವ್ ಹಾಗೂ ಸ್ಥಳೀಯ ಕಲಾವಿದರ ವೃಂದದವರಿಂದ ದೇವರ ನಾಮಗಳ ಗಾಯನ, ವಿಪ್ರ ಮಹಿಳೆಯರಿಂದ ಲಲಿತಾ ಸಹಸ್ರನಾಮ ಕುಂಕುಮಾರ್ಚನೆ, ವಕೀಲ ಟಿ.ಎಸ್.ವಿಜಯಶಂಕರ್ ಅವರಿಂದ ‘ಶಂಕರ ವಿಜಯ’ ಉಪನ್ಯಾಸವನ್ನು ನಡೆಸಲಾಯಿತು.
ಭಾನುವಾರ ದಿ.ಬಿ.ಆರ್.ಪ್ರಕಾಶ್‌ರವರ ವೇದಿಕೆಯಲ್ಲಿ ಹತ್ತು ಮಂದಿ ವಟುಗಳಿಗೆ ಸಾಮೂಹಿಕ ಉಪನಯನಗಳನ್ನು ಮತ್ತು ಬ್ರಹ್ಮೋಪದೇಶವನ್ನು ನೀಡಲಾಯಿತು. ದೇವಾಲಯದಲ್ಲಿ ಪಾನಕ ಪೂಜೆ, ಋತ್ವಿಕ್ ಸಮಾರಾಧನೆ ಮತ್ತು ಬ್ರಾಹ್ಮಣರಿಗೆ ಸಂತರ್ಪಣೆಯನ್ನು ನಡೆಸಲಾಯಿತು. ವಟುಗಳನ್ನು ಸತ್ಕರಿಸಲಾಯಿತು.
‘ಕಳೆದ ಮೂವತ್ತೆರಡು ವರ್ಷಗಳಿಂದ ವಟುಗಳಿಗೆ ಧರ್ಮೋಪನಯನಗಳನ್ನು ತಾಲ್ಲೂಕು ಬ್ರಾಹ್ಮಣ ಮಹಾಸಭಾ ನಡೆಸುಕೊಂಡು ಬರುತ್ತಿದ್ದು, ಉಪನಯನ ದೀಕ್ಷೆ ನೀಡಿ, ಧರ್ಮದ ಏಳಿಗೆಗೆ ಮತ್ತು ಸಾಮಾಜಿಕ ಪ್ರಗತಿಗೆ ವಟುಗಳಿಗೆ ಮಾರ್ಗದರ್ಶನ ನೀಡುತ್ತಿದ್ದೇವೆ. ಶಂಕರರ ಜನ್ಮದಿನವನ್ನು ವಿಶ್ವದಾರ್ಶನಿಕರ ದಿನವನ್ನಾಗಿ ಆಚರಿಸಲಾಗುತ್ತಿದೆ’ ಎಂದು ಬ್ರಾಹ್ಮಣ ಮಹಾಸಭಾ ತಾಲ್ಲೂಕು ಅಧ್ಯಕ್ಷ ಎ.ಎಸ್.ರವಿ ತಿಳಿಸಿದರು.
ಶಾಸಕ ಎಂ.ರಾಜಣ್ಣ, ಬ್ರಾಹ್ಮಣ ಮಹಾಸಭಾ ಜಿಲ್ಲಾಧ್ಯಕ್ಷ ವಾಸುದೇವರಾವ್, ತಾಲ್ಲೂಕು ಅಧ್ಯಕ್ಷ ಎ.ಎಸ್.ರವಿ, ವಿ.ಕೃಷ್ಣ, ಬಿ.ಆರ್.ಅನಂತಕೃಷ್ಣ, ಬಿ.ಕೃಷ್ಣಮೂರ್ತಿ, ಶ್ರೀನಿವಾಸಮೂರ್ತಿ, ಶ್ರೀನಾಥ್, ಎಸ್.ವಿ.ನಾಗರಾಜರಾವ್, ಮಂಜುನಾಥ್, ಬಿ.ಆರ್.ನಟರಾಜ್, ಭಾಸ್ಕರ್, ಎಸ್.ಆರ್.ಸಕಲೇಶ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -