ನಗರದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಶುಕ್ರವಾರ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಪ್ರವಾಸೋದ್ಯಮ ಇಲಾಖೆ ವತಿಯಿಂದ ಆಯೋಜಿಸಿರುವ ತಾಲ್ಲೂಕಿನ 8 ನೇ ತರಗತಿಯ ಒಟ್ಟು 129 ಪ್ರೌಢಶಾಲೆ ವಿದ್ಯಾರ್ಥಿಗಳ ಕರ್ನಾಟಕ ದರ್ಶನ ಪ್ರವಾಸಕ್ಕೆ ಚಾಲನೆ ನೀಡಿ ಶಾಸಕ ವಿ.ಮುನಿಯಪ್ಪ ಮಾತನಾಡಿದರು.
ದೇಶ ಸುತ್ತು ಕೋಶ ಓದು ಎನ್ನುವುದು ನಮ್ಮ ನಾಡಿನ ಹಿರಿಯರು ರೂಪಿಸಿದ ನಾಣ್ಣುಡಿ. ಈ ಮಾತು ನಮ್ಮ ದೇಶದ ಭವ್ಯ ಪರಂಪರೆಯನ್ನು ಸೂಚಿಸುತ್ತದೆ. ದೇಶ ಸುತ್ತುವುದು ಎಂದರೆ ಪ್ರವಾಸ ಮಾಡುವುದು. ಆ ಮೂಲಕ ಜ್ಞಾನ ಸಂಪಾದಿಸುವುದಾಗಿದೆ ಎಂದು ಅವರು ತಿಳಿಸಿದರು.
ಪ್ರೌಢಶಾಲೆ ವಿದ್ಯಾರ್ಥಿಗಳು ಪ್ರವಾಸವನ್ನು ಒಂದು ಅಧ್ಯಯನವನ್ನಾಗಿ ಪರಿಗಣಿಸಿ ತಾವು ನೋಡುವ ಐತಿಹಾಸಿಕ ಹಾಗೂ ಪ್ರೇಕ್ಷಣೀಯ ಸ್ಥಳಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ತಮ್ಮ ವಿದ್ಯಾರ್ಥಿ ಜೀವನವನ್ನು ಇನ್ನಷ್ಟು ಸಾರ್ಥಕ ಪಡಿಸಿಕೊಳ್ಳಬೇಕು. ಸರ್ಕಾರಿ ಶಾಲೆಯಲ್ಲಿ ಓದುವಂತಹ ವಿದ್ಯಾರ್ಥಿಗಳಿಗೆ ಕರ್ನಾಟಕದ ಐತಿಹಾಸಿಕ ಹಾಗೂ ಪ್ರೇಕ್ಷಣೀಯ ಸ್ಥಳಗಳನ್ನು ನೋಡುವ ಅವಕಾಶವನ್ನು ಸರ್ಕಾರದ ಪ್ರವಾಸೋದ್ಯಮ ಇಲಾಖೆ ಕಲ್ಪಿಸಿದ್ದು ವಿದ್ಯಾರ್ಥಿಗಳು ಪ್ರವಾಸದ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಶ್ರೀನಿವಾಸ್ ಮಾತನಾಡಿ, ಚಿತ್ರದುರ್ಗ, ಚಂದವಳ್ಳಿಯ ತೋಟ, ಶಿವಮೊಗ್ಗ, ಜೋಗ್ ಫಾಲ್ಸ್, ಗೋಕರ್ಣ, ಬೀಚ್, ಕೊಲ್ಲೂರು, ಶೃಂಗೇರಿ, ಬೇಲೂರು, ಹಳೇಬೀಡು, ಶ್ರವಣಬೆಳಗೊಳ, ಆದಿಚುಂಚನಗಿರಿ, ಯಡೆಯೂರು ಸೇರಿದಂತೆ ವಿವಿಧ ಪ್ರೇಕ್ಷಣೀಯ ಸ್ಥಳಗಳಿಗೆ ತಾಲ್ಲೂಕಿನಿಂದ ಕರ್ನಾಟಕ ದರ್ಶನ ಪ್ರವಾಸಕ್ಕೆ ಈ ಬಾರಿ 129 ಮಂದಿ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಇದನ್ನು ಕಲಿಕೆಯ ಒಂದು ಭಾಗವಾಗಿ ಪರಿಗಣಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಮಾರ್ಗದರ್ಶಿ ಶಿಕ್ಷಕರಾದ ರುದ್ರೇಶಮೂರ್ತಿ, ಸಾದಿಕ್ ಪಾಷ, ಪ್ರಭಾಕರ್, ನಾಗಭೂಷಣ್, ಸುಶೀಲಮ್ಮ, ಸುಜಾತಮ್ಮ, ಪ್ರವಾಸೋದ್ಯಮ ನಿಗಮದ ವ್ಯವಸ್ಥಾಪಕ ಮಹೇಶ್ವರಪ್ಪ, ಸಿ.ಎಂ.ಮುನಿರಾಜು, ಗಜೇಂದ್ರ, ಮಂಜುನಾಥ್, ಪ್ರಕಾಶ್, ಎಲ್.ವಿ.ವೆಂಕಟರೆಡ್ಡಿ ಹಾಜರಿದ್ದರು.
- Advertisement -
- Advertisement -
- Advertisement -